User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 
ಹೆಜ್ಜೆಗಳು
 

ಜನ್ಮ ಜನ್ಮದ ಅನುಬಂಧ...

 
Prashantho Banerjee
ಪ್ರಶಾಂತೊ ಬ್ಯಾನರ್ಜಿ
ನುಡಿಚಿತ್ರ ಸಂಪಾದಕ
ದ ಸಂಡೆ ಇಂಡಿಯನ್

"ಆ ದಪ್ಪನೆಯ ಕಪ್ಪು ಪಾದಗಳು... ಅದನ್ನು ನಾನು ಈ ಹಿಂದೆ ನೋಡಿದ್ದೇ ಇಲ್ಲ, ಆದರೆ ಸುತ್ತಲಿನ ಬಿಳಿ ಮರಳನ್ನು ಕೆದಕುತ್ತಿದ್ದ ಆ ಪಾದಗಳು ನನ್ನವೇ ಎಂಬುದರಲ್ಲೂ ನನಗೆ ಅನುಮಾನವಿರಲಿಲ್ಲ. ವಿಚಿತ್ರವೆಂದರೆ ಬರಿಗಾಲಲ್ಲೇ ಇದ್ದರೂ ನಾನು ನೀಲಿ ಸೂಟ್, ಬಿಳಿ ಶರ್ಟ್ ಹಾಗೂ ಕಪ್ಪು ಟೈ ಹಾಕಿದ್ದೆ... ನಿನಗೇ ಗೊತ್ತು ನಾನು ಆ ಥರ ಎಂದೂ ಡ್ರೆಸ್ ಮಾಡಿಕೊಳ್ಳುವುದಿಲ್ಲ. ಆದರೆ... ಆ ದಪ್ಪ ಪಾದದ ವ್ಯಕ್ತಿ ನಾನೇ ಆಗಿದ್ದೆ... ಆ ಮುಖವೂ ನನ್ನದಾಗಿರಲಿಲ್ಲ... ಮುಖದ ಮೇಲೆ ದೊಡ್ಡ ಮೂಗು, ಅದಕ್ಕೆ ತಕ್ಕುದಾದ ದಪ್ಪ ತುಟಿ, ಹೇಳಬೇಕೆಂದರೆ ಒಂದು ಪಕ್ಕಾ ನೀಗ್ರೋ ಲುಕ್! ನನಗಿಂತಲೂ ಹೆಚ್ಚು ವಯಸ್ಸಾಗಿರಬಹುದು... 40ರ ಆಜುಬಾಜು.. ಆದರೂ ಅದು ನಾನು ಎಂಬುದರಲ್ಲಿ ನನಗೆ ಯಾವುದೇ ತಕರಾರು ಇರಲಿಲ್ಲ. ಬಿಳಿ ಮರಳು ಹಾಸಿನ ಆ ಕಡಲ ಕಿನಾರೆಯ ಉದ್ದಕ್ಕೂ ಕೈಯಲ್ಲೊಂದು ಬ್ರೀಫ್‌ಕೇಸ್ ಹಿಡಿದು ಓಡುತ್ತಿದ್ದೆ. ಹೃದಯ ಪಟ-ಪಟ ಬಡಿದುಕೊಳ್ಳುತ್ತಿತ್ತು, ಶ್ವಾಸಕೋಶಗಳು ಇನ್ನೇನು ಸ್ಫೋಟಗೊಳ್ಳುತ್ತವೋ ಎನಿಸುತ್ತಿತ್ತು. ಆದರೂ ಓಡುತ್ತಲೇ ಇದ್ದೆ. ಮರಳ ಹಾಸು ಮುಗಿದು ಈಗ ಹಚ್ಚ ಹಸುರಿನ ಹುಲ್ಲುಹಾಸಿಗೆ ಬಂದಿದ್ದೆ. ದಿಗಂತದೆಡೆ ಬಂಗಾರದ ಎರಕ ಹೊಯ್ದಂಥ ಒಂದು ಸಾಲು ಗುಡಿಸಲುಗಳಿದ್ದವು. ಅಲ್ಲಿ ಜನರೂ ಇದ್ದರು. ನನಗೆ ಅವರು ಪರಿಚಿತರಿರಬೇಕು. ಅವರೆಲ್ಲಾ ಹುಲ್ಲಿನಿಂದ ಮಾಡಿದ ಸ್ಕರ್ಟ್ ರೀತಿಯ ಉಡುಪು ಧರಿಸಿದ್ದಾರೆ. ಅವರ್‍ಯಾಕೋ ಕಿರುಚಾಡುತ್ತಿದ್ದರು. ಅವರು ನನ್ನ ಗುರುತು ಹಿಡಿದರೇ? ಗೊತ್ತಿಲ್ಲ. ಈ 'ಹುಲ್ಲು ಉಡುಪಿನ ಜನ' ತಮ್ಮ ಪಾದಗಳನ್ನು ನೆಲಕ್ಕೆ ಬಡಿಯಲು ಶುರು ಮಾಡಿದರು. ಲಯಬದ್ಧವಾದ ಆ ಬಡಿತ ನಗಾರಿಯ ಮೇಲೆ ಬಡಿಗೋಲಿನಿಂದ ಬಾರಿಸುವ ಶಬ್ದವನ್ನು ನೆನಪಿಸುತಿತ್ತು. ನಾನು ಓಟ ನಿಲ್ಲಿಸಿದೆ. ಆದರೆ ಆ ಗುಂಪು ನಿಲ್ಲಲಿಲ್ಲ. ಮೊನಚಾದ ಈಟಿಗಳೊಂದಿಗೆ ಅವರು ನನ್ನ ಕಡೆಗೆ ಓಡಿ ಬರುತ್ತಿದ್ದರು. ನಾನು ಸ್ತಬ್ಧನಾದೆ. ಶೂ...ಪ್! ಒಂದು ಈಟಿ ನನ್ನಿಂದ ಕೆಲವೇ ಅಂತರದಲ್ಲಿ ಬಂದು ಬಿತ್ತು. ಕೈಯೆತ್ತಿ ಏನನ್ನೋ ಹೇಳಲು ಬಾಯಿ ತೆರೆದೆ. ಹೇಳ ಬಯಸಿದ ಶಬ್ದಗಳ ಬದಲಿಗೆ ಒಂದರ ಹಿಂದೆ ಮತ್ತೊಂದರಂತೆ ಕೆಮ್ಮು ಬಂದವು. ರಕ್ತ ಕಕ್ಕಿದೆ. ತಲೆ ತಗ್ಗಿಸಿದೆ, ಎದೆಯ ಮೇಲೊಂದು ಈಟಿ ತರಚಿದ್ದು ಆಗಲೇ ಕಂಡಿದ್ದು. ಒಂದಿಷ್ಟೂ ನೋವಿರಲಿಲ್ಲ, ಹೆಚ್ಚು ರಕ್ತಪಾತವೂ ಆಗಲಿಲ್ಲ. ಆದರೆ ನಾನು ಕೆಳಕ್ಕುರುಳಿದೆ. ನನಗೇ ನಂಬಿಕೆ ಬರಲಿಲ್ಲ, ಆದರೆ ನಾನು ಸಾಯುತ್ತಿದ್ದೇನೆ ಎಂಬುದು ಖಚಿತವಾಗಿತ್ತು..."

ಸಾಹಿಲ್ (ಹೆಸರು ಬದಲಾಯಿಸಿದೆ) ನನ್ನ ಸಹೋದ್ಯೋಗಿ. ನಾವು ಲೇಖನವೊಂದಕ್ಕಾಗಿ ಹಿಂದಿನ ಜನ್ಮದ ನೆನಪುಗಳ ಬಗ್ಗೆ ಒಂದಿಷ್ಟು ಅಧ್ಯಯನ ಮಾಡುತ್ತಿದ್ದೆವು. ಹಿಂದಿನ ಜನ್ಮಗಳ ನೆನಪು ತರಿಸುತ್ತೇವೆ ಎನ್ನುವ ಹಲವು ಸೈಕೋಥೆರಪಿಸ್ಟ್‌ಗಳನ್ನು ಸಾಹಿಲ್ ಭೇಟಿ ಆಗಿದ್ದ. ಆದರೆ ಯಾವಾಗಲೂ ಸಂಶಯದ ಮುಖ ಭಾವವನ್ನೇ ಹೊತ್ತಿರುವ ಸಾಹಿಲ್‌ನ್ನು ಕಂಡ ಆ ಸೈಕೋಥೆರಪಿಸ್ಟ್, ಬಹುಶಃ ತನ್ನ ವಿವರಣೆಗಳು ಸಾಹಿಲ್‌ಗೆ ಒಪ್ಪಿಗೆಯಾಗಿಲ್ಲ ಎಂದುಕೊಂಡಿರಬಹುದು. ಆತ ಸಾಹಿಲ್‌ಗೆ ಒಂದು ಉಚಿತ ಪ್ರಯೋಗದ ಆಹ್ವಾನವಿತ್ತ. ಆ ಆಹ್ವಾನವನ್ನು ಒಪ್ಪಿದ ಸಾಹಿಲ್ ದೆಹಲಿಯ ಸ್ಟುಡಿಯೋ ಒಂದರಲ್ಲಿ ತನ್ನ ಭಾವೀ ಪತ್ನಿ ರಿದಿ ಜೊತೆಗೆ ಹಿಂದಿನ ಜನ್ಮದ ಯಾತ್ರೆಗೆ ಸಿದ್ಧನಾಗಿ ಬಂದ. ಹಾಯಾಗಿ ಕಾಲು ಚಾಚಿ ಒರಗಲು ಪೀಠೋಪಕರಣಗಳಿಂದ ಸಜ್ಜಾದ ಕೋಣೆಗೆ ಅವರಿಬ್ಬರನ್ನೂ ಕರೆದೊಯ್ದರು. ತಮ್ಮ ಪಾದರಕ್ಷೆಗಳನ್ನು ಕಳಚಿ, ಒರಗು ಕುರ್ಚಿಗಳಲ್ಲಿ ಕೂರುವಂತೆ ಹೇಳಲಾಯಿತು. ಸೈಕೊಥೆರಪಿಸ್ಟ್ ಬೆಳಕನ್ನು ಮಂದಗೊಳಿಸಿದರು. ಹಿನ್ನೆಲೆಯಲ್ಲಿ ಕೊಳಲು ವಾದನದ ಹಿತವಾದ ಸಂಗೀತ. ಸಾಹಿಲ್ ಹಾಗೂ ರಿದಿ ಆ ಸಂಗೀತದೊಳಗೆ ಮುಳುಗಿ ಹೋದರು. ಸೈಕೊಥೆರಪಿಸ್ಟ್ ಕೆಲವು ಶಾಬ್ದಿಕ ಸೂಚನೆಗಳನ್ನು ಕೊಟ್ಟರು. ಸುರಂಗವೊಂದರ ಕೊನೆಯಲ್ಲಿ ಇರುವ ಪ್ರಕಾಶಮಾನವಾದ ಬೆಳಕಿನ ಕಡೆಗೆ ಪ್ರಯಾಣಿಸುತ್ತಿರುವ ಅನುಭವವಾಯಿತಂತೆ. ಅವರು ಆ ಬೆಳಕನ್ನು ತಲುಪಿದ ಕೂಡಲೆ ಥೆರಾಪಿಸ್ಟ್ ಆ ಪ್ರದೇಶದ ಸುತ್ತಲೂ ಕಣ್ಣಾಡಿಸುವಂತೆ ಸೂಚನೆ ಕೊಟ್ಟರು. ಸಾಹಿಲ್ ಮರಳಿನ ದಂಡೆಯ ಮೇಲೆ ನಿಂತಿದ್ದು ಹಾಗೆಯೇ. "ಈಟಿ ಚುಚ್ಚಿ ಸಾಯುತ್ತಿರುವುದನ್ನು ಸಾಹಿಲ್‌ನ ಮುಖ ಭಾವವೇ ವಿವರಿಸುತ್ತಿತ್ತು ಅಲ್ಲವೇ?" ಎಂದಳು ರಿದಿ. "ಅದಿರಲಿ, ನೀನು ಏನು ನೋಡಿದೆ?" ರಿದಿಗೆ ಪ್ರಶ್ನೆ ಎಸೆದೆ. "ನಾನು ನೋಡಿದ್ದನ್ನು ನಂಬಬೇಕೋ ಅಥವಾ ಎಲ್ಲಾ ಮಾಮೂಲು ಕನಸುಗಳಂತೆ ಅದನ್ನೂ ಮರೆಯಬೇಕೋ ಗೊತ್ತಿಲ್ಲ. ಗೌನ್ ಧರಿಸಿದ ನಾನು ಒಂದು ಸಭಾಂಗಣದ ಮಧ್ಯದಲ್ಲಿದ್ದೆ. ಪ್ರೇಕ್ಷಕರೆಲ್ಲಾ ಚಪ್ಪಾಳೆ ತಟ್ಟುತ್ತಿದ್ದರು. ಆದರೆ ಅವರೆಲ್ಲಾ ನನಗೇ ಚಪ್ಪಾಳೆ ತಟ್ಟುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ, ನನ್ನ ಜೊತೆ ಬೇರೆ ಇತರರೂ ಇದ್ದರು. ನಾನು ಖುಷಿಯಲ್ಲೇ ಇದ್ದೆ, ಆದರೂ ಏನೋ ಹಿಂಸೆ, ಕಿರಿಕಿರಿ" ಮಧ್ಯಕ್ಕೆ ಮೂಗು ತೂರಿಸಿದ ಸಾಹಿಲ್ "ಜನ್ಮ ಬದಲಾದರೂ ಕೆಲವರ ಬುದ್ಧಿ ಮಾತ್ರ...." ಎಂದು ಛೇಡಿಸಿದ. ಸಾಹಿಲ್‌ನತ್ತ ಈಟಿಗಿಂತಲೂ ಮೊನಚಾದ ನೋಟ ಬೀರಿದ ರಿದಿ ಮತ್ತೆ ಮುಂದುವರಿಸಿದಳು. "ಏನು ಹೇಳುತ್ತಿದ್ದೆ ನಾನು... ಹಾಂ, ಸಭಾಂಗಣದಿಂದ ನಾನು ಕೂಡಲೇ ಹೊರಬಂದೆ, ನನಗಾಗಿ ಕಾಯುತ್ತಿದ್ದ ಕಾರನ್ನು ಓಡಿಸುತ್ತ ಹೋದೆ. ಬಂಗಲೆಯೊಂದರ ಮುಂದಿನ ಮೆಟ್ಟಿಲುಗಳ ಸಾಲಿನ ಮುಂದೆ ಕಾರು ನಿಂತಿತು. ಅದರ ಹಾಲ್‌ನೊಳಕ್ಕೆ ಪ್ರವೇಶಿಸಿದೆ ಅದೊಂದು ಕಚೇರಿಯಾಗಿತ್ತು... ನನ್ನ ಕಚೇರಿ... ಉತ್ತಮ ಪೀಠೋಪಕರಣಗಳಿಂದ ಸಜ್ಜಾದ ಕೋಣೆ. ಕಿಟಕಿಯ ಮೇಲಿನ ಪರದೆಯನ್ನು ಸರಿಸಿ ಕೈಕಟ್ಟಿ ಅದರ ಮುಂದೆ ನಿಂತೆ. ನಾನು ಬೇಸರದಲ್ಲಿದ್ದೆ ಅನಿಸುತ್ತದೆ. ಆ ಕ್ಷಣದಲ್ಲಿ ಮಹಿಳೆಯೊಬ್ಬಳು ನನ್ನ ಕೋಣೆಗೆ ಬಂದಳು. ಅವಳ್ಯಾಕೋ ನನ್ನಲ್ಲಿ ಕ್ಷಮೆ ಕೇಳುತ್ತಿದ್ದಳು. ಆದರೆ ನಾನು ಅವಳಿಗೆ ಕ್ಷಮೆ ನೀಡುವ ಸ್ಥಿತಿಯಲ್ಲಿರಲಿಲ್ಲ. ಅವಳು ಪಟ್ಟು ಬಿಡದೆ ನಿಂತಾಗ ನನ್ನ ಕೋಪ ಇಮ್ಮಡಿಸಿತು. ನಾನು ಮತ್ತಷ್ಟು ಕಿರುಚಾಡಿ ಅವಳನ್ನು ದಾಟಿ ಕೋಣೆಯಿಂದ ಹೊರಕ್ಕೆ ಹೋಗುತ್ತಿದ್ದೆ, ನಿಂತಿದ್ದ ಆ ಮಹಿಳೆಯ ಮುಖ ಮತ್ತಷ್ಟು ಪರಿಚಿತ ಅನಿಸಿತು... ಛೇ ಅವಳು ನನ್ನ ಈ ಜನ್ಮದ ಅಕ್ಕ... ಮೈ ಕೊಡವಿ ಕಣ್ಣು ಬಿಟ್ಟೆ". ರಿದಿ ಅದನ್ನು ಬರೀ ಒಂದು ಕನಸು ಎನ್ನುತ್ತಾ ತಳ್ಳಿ ಹಾಕಬಹುದು. ಆದರೆ ನಿಜ ಜೀವನದ ಸಂಬಂಧಗಳಿಗೆ ಭಿನ್ನವಾಗಿರುವ ಕನಸು ಬೀಳುತ್ತದೆಯೇ? ಎಂದು ಪ್ರಶ್ನೆ ನನ್ನನ್ನು ಕಾಡಿತು. ಅಂದರೆ ನಿಜ ಜೀವನದಲ್ಲಿ ನನ್ನನ್ನು ಇಷ್ಟಪಡದ ವ್ಯಕ್ತಿಗಳು ಕನಸಿನಲ್ಲಿ ನನ್ನನ್ನು ಹೊಗಳಿದ್ದುಂಟು. ಆದರೆ ನನ್ನ ತಂದೆ ತಾಯಿ ನನ್ನ ಕನಸಿನಲ್ಲೂ ತಂದೆ ತಾಯಿಯೇ ಆಗಿರುತ್ತಾರೆ, ಗೆಳೆಯರೂ ಹಾಗೆಯೇ, ನನ್ನ ನಾಯಿ ಕೂಡಾ ನನ್ನ ಕನಸಿನಲ್ಲಿ ನಾಯಿಯೇ ಆಗಿರುತ್ತದೆ. ಆದರೆ ನಾನು ಕೇಳಿದ ಪ್ರಕಾರ ಹಿಂದಿನ ಜನ್ಮದ ವಿಷಯದಲ್ಲಿ ಈ ರೀತಿ ಅಲ್ಲ. ಅಲ್ಲಿ ಸಂಬಂಧಗಳು ಬೇರೆ ಬೇರೆ ಜನ್ಮದಲ್ಲಿ ಬದಲಾಗುತ್ತಲೇ ಇರುತ್ತವೆ. ತಂದೆ ನಮ್ಮ ಮಗಳಾಗಬಹುದು, ಸಹೋದರ ಹೆಂಡತಿಯಾಗಬಹುದು ಹಾಗೆ ವಿಚಿತ್ರವಾಗಿ ಬದಲಾಗುತ್ತಿರುತ್ತದೆ. ಅಂದರೆ ನಮ್ಮ ಕರ್ಮಗಳ ಫಲಕ್ಕನುಗುಣವಾಗಿ ಸಂಬಂಧಗಳೂ ಬದಲಾಗುತ್ತಿರುತ್ತವೆ. ಅಬೆ ಎಂಬ ಮಹಿಳೆ ಈ ಬಗ್ಗೆ ಕೊಂಚ ಮಾಹಿತಿ ನೀಡಿದ್ದರು. ಅವರ ಬಿಡುಗಡೆಯಾಗಲಿರುವ 'ಪೆಗಾಸಸ್' ಎಂಬ ಪುಸ್ತಕದಲ್ಲಿ ಬರೆದಿರುವ ಒಂದು ಹುಡುಗಿಯ ಒಂದು ಉದಾಹರಣೆಯನ್ನು ಅವರು ಹೇಳಿದರು. ಆ ಹುಡುಗಿಯ ಸಮಸ್ಯೆ ತನ್ನ ತಾಯಿ. ಆಕೆಗೆ ಜನ್ಮ ನೀಡಿದ ಸ್ವಂತ ತಾಯಿಯೇ ಆಗಿದ್ದರೂ ಹುಡುಗಿಗೆ ಅವಳು ನೀಡುತ್ತಿದ್ದ ಕಷ್ಟ ಪಂಚತಂತ್ರ ಕಥೆಗಳ ಮಲತಾಯಿಯನ್ನೂ ಮೀರಿಸುತ್ತಿದ್ದವಂತೆ. ಈ ಸಮಸ್ಯೆ ಬಿಡಿಸಲಾಗದೆ ಆ ಹುಡುಗಿ ಅಬೆಯ ಬಳಿ ಬರುತ್ತಾಳೆ. ಅಬೆ ತನ್ನ 'ಆಟೋ ರೈಟಿಂಗ್' (ವ್ಯಕ್ತಿಯೊಬ್ಬನ ಅಪ್ರಜ್ಞಾಪೂರ್ವಕ ಬರವಣಿಗೆ. ಬರೆಯುವ ವ್ಯಕ್ತಿ ಇಲ್ಲಿ ಕೇವಲ ಸಲಕರಣೆಯಷ್ಟೇ ಆಗಿರುತ್ತಾನೆ) ಶಕ್ತಿಯ ಮೂಲಕ ಈ ಸಮಸ್ಯೆಯ ಮೂಲವನ್ನು ಹುಡುಕುವಲ್ಲಿ ಯಶಸ್ವಿಯಾಗುತ್ತಾರೆ. ಈ ಹುಡುಗಿಯ ತಾಯಿ ಕಳೆದ ಜನ್ಮದಲ್ಲಿ ಆಕೆಯ ಪತಿಯ ಎರಡನೇ ಪತ್ನಿಯಾಗಿದ್ದಳು ಹಾಗೂ ಈ ಹುಡುಗಿ ಆಕೆಯನ್ನು ದ್ವೇಷಿಸುತ್ತಿದ್ದಳು, ಕೊಡಬಾರದ ಕಷ್ಟಗಳನ್ನೆಲ್ಲಾ ಕೊಡುತ್ತಿದ್ದಳು ಎನ್ನುವುದು ಆ ಆಟೊ ರೈಟಿಂಗ್ ಮೂಲಕ ತಿಳಿದು ಬಂದವಂತೆ. ಕಳೆದ ಜನ್ಮದ ಪತಿ, ಈ ಜನ್ಮದಲ್ಲಿ ಆಕೆಯ ತಂದೆಯಾಗಿದ್ದ ಹಾಗೂ ಎರಡನೇ ಪತ್ನಿ ತಾಯಿಯಾಗಿದ್ದಳು. ಒಟ್ಟಾರೆ ತಮ್ಮ ಕರ್ಮ ಫಲ ತೀರಿಸಲು ಅವರೆಲ್ಲರೂ ಜೊತೆಯಾಗೇ ಇದ್ದರು. ಪುನರ್ಜನ್ಮದ ಬಗ್ಗೆ ಸಾಕ್ಷಿ ಕಲೆ ಹಾಕುತ್ತಿದ್ದೆ. ಹಾಗೆ ನನ್ನ ಹಳೆಯ ವಿದ್ಯಾರ್ಥಿನಿ ರೇವತಿಯ ಭೇಟಿಯಾಯಿತು. ರೇವತಿಯ ಸೋದರನಿಗೆ ಚಿಕ್ಕಂದಿನಲ್ಲಿ ವಿಚಿತ್ರ ಅನುಭವವಾಗಿತ್ತಂತೆ. ರೇವತಿಯ ಮನೆ ಇದ್ದದ್ದು ಕಾನ್ಪುರದ ಲಜಪತ್ ನಗರದಲ್ಲಿ. ಆತನಿಗೆ ಆಗಿನ್ನೂ ಮೂರು ವರ್ಷ. ತಾಯಿಯೊಂದಿಗೆ ಸೈಕಲ್ ರಿಕ್ಷಾ ಏರಿ ಸೇತುವೆ ಒಂದನ್ನು ದಾಟಿ ನಗರದ ಇನ್ನೊಂದು ಭಾಗಕ್ಕೆ ಹೋಗುತ್ತಿದ್ದನಂತೆ. ಆ ಸೇತುವೆಯ ಬಲ ಬದಿ ಕಿದ್ವಾಯಿ ನಗರ ಎಂಬ ವಿಶಾಲವಾದ ವಸತಿ ಪ್ರದೇಶ. ರಿಕ್ಷಾ ಆ ಪ್ರದೇಶವನ್ನು ದಾಟುತ್ತಿದ್ದಂತೇ, ಈ ಹುಡುಗ ರಿಕ್ಷಾದಿಂದ ಕೆಳಕ್ಕೆ ಇಳಿಯಲು ನೋಡುತ್ತಾ "ನನ್ನನ್ನು ಬಿಡಿ ನನ್ನ ಮನೆ ಅಲ್ಲಿದೆ, ನನ್ನ ತಂದೆ-ತಾಯಿ ಕೂಡಾ ಅಲ್ಲೇ ಇದ್ದಾರೆ. ನಾನು ಕಾರು ಓಡಿಸುತ್ತಿದ್ದೆ, ಬಿಳಿ ಮಾರುತಿ ಕಾರು. ನನ್ನ ಕಾರಿಗೆ ಅಪಘಾತವಾಗಿತ್ತು. ಮಮ್ಮಿ ನನಗಾಗಿ ಕಾಯುತ್ತಿದ್ದಾಳೆ.. ನನ್ನನ್ನು ಹೋಗಲು ಬಿಡು..." ಎನ್ನುತ್ತಾ ಅಳಲು ಶುರು ಮಾಡಿದನಂತೆ. ಭಯಬಿದ್ದ ತಾಯಿ, ರಿಕ್ಷಾವನ್ನು ತಿರುಗಿಸಿ ಬೇಗನೇ ತಮ್ಮ ಮನೆ ಸೇರಿದರು. ಮನೆಗೆ ಬಂದು ಆ ಆಘಾತದಿಂದ ಹೊರ ಬಂದ ಬಳಿಕ ತಾಯಿ ಆತನಲ್ಲಿ ಹಾಗೇಕೆ ವರ್ತಿಸಿದೆ ಎಂದು ಕೇಳಿದರಂತೆ. ಆಗ ಆ ಮೂರು ವರ್ಷದ ಮಗು "ನಾನು ಹುಟ್ಟಿದ್ದು ಕಿದ್ವಾಯಿ ನಗರದ ಒಂದು ಮನೆಯಲ್ಲಿ" ಎನ್ನುತ್ತಾ ಪಿನ್ ಕೋಡ್ ಸಮೇತವಾಗಿ ಆ ಮನೆಯ ವಿಳಾಸ ಹೇಳಿದನಂತೆ. ಹಾಗೆಯೇ ಆಗ ಶಾಲೆಯೆಂದರೇನು ಎಂದೇ ತಿಳಿದಿರದ ಆ ಮಗು ಹಿಂದಿನ ಜನ್ಮದಲ್ಲಿ ತಾನು ಕಲಿತ ಶಾಲೆಯ ವಿಳಾಸವನ್ನೂ ಹೇಳಿತ್ತಂತೆ! ಆದರೆ ಈ ಹುಡುಗ ಹಿಂದಿನಿಂದಲೂ ಸಿಕ್ಕಿದ ಬೀಗದ ಕೈಗಳನ್ನೆಲ್ಲಾ ಕೈಯಲ್ಲಿಡಿದು ನಡೆಯುತ್ತಿದ್ದನಂತೆ, ತಟ್ಟೆಯಾಕಾರದ ಏನೇ ಸಿಕ್ಕರೂ ಸ್ಟಿಯರಿಂಗ್ ರೀತಿ ಬಳಸಿ ತನ್ನ ಕಾಲ್ಪನಿಕ ಕಾರನ್ನು ಓಡಿಸುತ್ತಿದ್ದನಂತೆ! ಇದರಿಂದೆಲ್ಲಾ ಆಘಾತಕ್ಕೊಳಗಾದ ರೇವತಿಯ ಮನೆಯವರು, ಇನ್ನು ಮುಂದೆ ಎಂದೂ ಆ ವಿಷಯವನ್ನು ಪ್ರಸ್ತಾಪಿಸುವುದಿಲ್ಲ. ಹಾಗೆಯೇ ಕಿದ್ವಾಯಿ ಕಡೆ ತಲೆಯಿಟ್ಟು ಮಲಗವುದೂ ಇಲ್ಲ ಎಂದು ನಿರ್ಧರಿಸಿದರು. ಎರಡು ವರ್ಷಗಳ ಬಳಿಕ ಕುಟುಂಬ ಸಮೇತರಾಗಿ ಅವರೆಲ್ಲಾ ಹಾಪುರ್‌ಗೆ ಹೋದರಂತೆ. ಅಲ್ಲಿನ ತನ್ನ ಕಿರಿಯ ಚಿಕ್ಕಮ್ಮನ ಗೆಳತಿಯೊಬ್ಬಳನ್ನು ಕಂಡ ಕೂಡಲೇ ಈತ, "ಹೇ ನೀನು ನನ್ನ ಜೊತೆ ಕಲಿಯುತ್ತಿದ್ದೆ. ನಿಂಗೆ ನೆನಪಿಲ್ಲವೇ ದಿನವೂ ನಾನು ನಿನಗೆ ಹೂ ತಂದು ಕೊಡುತ್ತಿದ್ದೆ" ಎನ್ನುತ್ತಾ ಆಕೆಯ ಬಳಿಗೆ ಹೋದನಂತೆ. "ಇಲ್ಲ ಮಗು, ಈಕೆ ಇರುವುದು ಹಾಪುರ್‌ನಲ್ಲಿ, ಹಾಗಿರುವಾಗ ನಿನ್ನ ತರಗತಿಯಲ್ಲಿರಲು ಹೇಗೆ ಸಾಧ್ಯ?" ಎಂದು ಮಗುವಿನ ತಾಯಿ ಸಮಜಾಯಿಷಿ ಕೊಡುತ್ತಿದ್ದರೆ ಅ ಯುವತಿ "ಆಂಟೀ ನಾನು 10ನೇ ತರಗತಿವರೆಗೆ ಕಲಿತ್ತಿದ್ದು ಕಿದ್ವಾಯಿಯಲ್ಲೇ" ಎಂದಳಂತೆ! ಇಂದು ಆ ಹುಡುಗನಿಗೆ 30 ವರ್ಷ. ಆತನಿಗೆ ಈ ಘಟನೆಗಳೆಲ್ಲಾ ನೆನಪೇ ಇಲ್ಲ. ನಾನು ಈ ಬಗ್ಗೆ ಕೇಳಿದಾಗ ಆತ "ಛೇ ನನ್ನ ಮನೆಯವರು ನನ್ನ ಹಿಂದಿನ ಜನ್ಮದ ಮನೆಗೆ ಕರೆದೊಯ್ಯಬೇಕಿತ್ತು; ಎರಡೂ ಕಡೆಯ ಆಸ್ತಿಗೆ ನಾನು ವಾರಸುದಾರನಾಗುತ್ತಿದ್ದೆ! ನಿಜ ಹೇಳಬೇಕೆಂದರೆ ಈಗ ನಾನು ಬಹಳ ಸಂತೋಷದಿಂದ ಇದ್ದೇನೆ, ಜೀವನವನ್ನು ಗೊಂದಲದ ಗೂಡಾಗಿಸಲು ನನಗೆ ಇಷ್ಟವಿಲ್ಲ. ಹಿಂದಿನ ಜನ್ಮವನ್ನು ಕೆದಕಲು ನನಗೆ ಇಷ್ಟವಿಲ್ಲ" ಎಂದರು. ಇಂಥವನ್ನೆಲ್ಲಾ ಕೇಳಿದ ಬಳಿಕ, ಕೆಲವು ಉದಾಹರಣೆಗಳನ್ನು ಕಣ್ಣಾರೆ ಕಂಡ ಬಳಿಕ, ಪುನರ್ಜನ್ಮ, ಬದುಕು, ಸಾವು ಇವುಗಳ ಬಗ್ಗೆ ಗೊತ್ತಿರುವುದಕ್ಕಿಂತಲೂ ಗೊತ್ತಿಲ್ಲದೇ ಇರುವುದೇ ಅಧಿಕ ಎನಿಸತೊಡಗಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿಗಳನ್ನು ಕಲೆ ಹಾಕುತ್ತಲೇ ಇರುತ್ತೇನೆ... ಖಂಡಿತವಾಗಿಯೂ ನಿಮಗೆ ತಿಳಿಸುತ್ತೇನೆ.

ಐಐಪಿಎಂ
ಥಿಂಕ್ ಟ್ಯಾಂಕ್

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .