ಎರಡು
ಸರ್ಕಾರಗಳ ನಡುವಿನ ತಿಕ್ಕಾಟದಲ್ಲಿ ಬಡವಾಗುವ ರಾಜ್ಯದ ಸರದಿ ದಶಕಗಳಿಂದಲೂ
ಮುಂದುವರಿಯುತ್ತಲೇ ಇದೆ. ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶ ಕೂಡ ಆ
ಸಂಪ್ರದಾಯವನ್ನು ಮುಂದುವರಿಸಿದೆ. ಇಡೀ ದೇಶದ ಜನತೆ ಸುಭದ್ರ ಸರ್ಕಾರದ
ಹಂಬಲದಲ್ಲಿ ಮತದಾನ ಮಾಡಿ ಕಾಂಗ್ರೆಸ್ ನೇತೃತ್ವದ ಯುಪಿಎಯನ್ನು ಅಧಿಕಾರಕ್ಕೆ
ತಂದಿದ್ದರೆ, ಚುನಾವಣೆ ವಿಷಯದಲ್ಲಿ ಯಾವಾಗಲೂ ಅತಿಬುದ್ಧಿವಂತಿಕೆ
ಪ್ರದರ್ಶಿಸುವ ರಾಜ್ಯದ ಮತದಾರ ಮಾತ್ರ ಮತ್ತೊಮ್ಮೆ ಹಳ್ಳಕ್ಕೆ ಬಿದ್ದಿದ್ದಾನೆ.
ರಾಜ್ಯದಲ್ಲಿ ಬಿಜೆಪಿ ಅಧಿಕ ಸ್ಥಾನ ಪಡೆದು, ಕಾಂಗ್ರೆಸ್ ಹೀನಾಯ ಹಿನ್ನಡೆ
ಅನುಭವಿಸಿದ್ದು ರಾಜ್ಯದ ಮಟ್ಟಿಗೆ ಕೋಮುವಾದಿ ಗಾಳಿ ಇನ್ನೂ ಜೋರಾಗಿಯೇ
ಬೀಸುತ್ತಿದೆ, ಜಾತ್ಯತೀತ ಮನೋಧರ್ಮ ಮೂಲೆಗುಂಪಾಗುತ್ತಿದೆ ಎಂದು ಸಂಘಪರಿವಾರದ
ಮಂದಿ ಬೀಗಬಹುದು, ಕಾಂಗ್ರೆಸ್ಸಿಗರು ಮರುಗಬಹುದು. ಆದರೆ, ಈ ಫಲಿತಾಂಶ ನೀಡುವ
ಮೂಲಕ ತನ್ನ ಕಾಲ ಮೇಲೆ ತಾನೇ ಕಲ್ಲು ಎತ್ತಿಹಾಕಿಕೊಂಡು ಬೀಗಲೂ ಆಗದೆ, ಮರುಗಲೂ
ಆಗದ ಸ್ಥಿತಿ ಮತದಾರನದ್ದು.
ಅಷ್ಟಕ್ಕೂ ರಾಜ್ಯದ ಬಿಜೆಪಿ ಸಾಧನೆಯ ಹಿಂದೆ
ಕೋಮುವಾದಿ ಪ್ರವಾಹ ಕೆಲಸ ಮಾಡಿರುವುದು ಕರಾವಳಿ ಮತ್ತು ಮಲೆನಾಡಿನ ಮೂರ್‍ನಾಲ್ಕು
ಕ್ಷೇತ್ರಗಳಲ್ಲಿ ಮಾತ್ರ. ಉಳಿದೆಡೆ ಪ್ರಬಲ ಜಾತಿಯೊಂದರ ಧ್ರುವೀಕರಣ ಎಂಬುದು
ಗುಟ್ಟೇನಲ್ಲ. ಅದರ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ
ಕಾರ್ಯತಂತ್ರವಿದ್ದು, ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್‌ಗೆ ಪ್ರಾಂತೀಯ ಪಕ್ಷದ
ಸ್ವರೂಪ ನೀಡುವ ಮೂಲಕ ವೈ.ಎಸ್. ರಾಜಶೇಖರ ರೆಡ್ಡಿ ಸತತ ಜಯ ದಾಖಲಿಸಿದ್ದರೆ,
ಇತ್ತ ಕರ್ನಾಟಕದಲ್ಲಿ ಬಿಜೆಪಿಯನ್ನು ಒಂದು ಜಾತಿಯ ಪ್ರಬಲ ಪಕ್ಷವನ್ನಾಗಿ
ಮಾಡುವ ಮೂಲಕ ಪ್ರಾಂತೀಯ ಸ್ವರೂಪ ನೀಡಿ ಯಡಿಯೂರಪ್ಪ ಕಳೆದ ಒಂದು ವರ್ಷದಿಂದ
ಮೂರು ಚುನಾವಣೆಗಳಲ್ಲಿ ನಿರಂತರ ಗೆಲವು ದಾಖಲಿಸಿದ್ದಾರೆ. ಅವರ ಆ
ಕಾರ್ಯತಂತ್ರಕ್ಕೆ ರಾಜ್ಯದ ಆಡಳಿತ ಯಂತ್ರ, ಹಣಬಲ, ಸಂಘಟನೆಗಳೆಲ್ಲಾ ಪೂರಕವಾಗಿ
ಒದಗಿಬಂದಿರಬಹುದು ಅಷ್ಟೆ.
ಆದರೆ, ಕಾಂಗ್ರೆಸ್ ವಿಷಯದಲ್ಲಿ ಈ ಎಲ್ಲವೂ
ವ್ಯತಿರಿಕ್ತವಾಗಿಯೇ ಇದ್ದವು. ಪರಸ್ಪರರ ಕಾಲೆಳೆಯಲು ಆ ಪಕ್ಷದ ನಾಯಕರು
ತೋರಿದ ಪೈಪೋಟಿಯನ್ನು ಮತದಾರರ ಮನವೊಲಿಸುವ ಪ್ರಬಲ ಪ್ರಚಾರ ವಿಷಯ,
ತಂತ್ರಗಾರಿಕೆ, ಅಭ್ಯರ್ಥಿಗಳ ಆಯ್ಕೆಗಳಲ್ಲಿ ತೋರಲಿಲ್ಲ. ರಾಷ್ಟ್ರೀಯ ನಾಯಕರು
ಕೂಡ ರಾಜ್ಯದ ಕಡೆ ಅಷ್ಟಾಗಿ ಗಮನಹರಿಸಲೂ ಇಲ್ಲ. ಅದಕ್ಕೆ ಹೈಕಮಾಂಡ್ ಕೂಡ
ರಾಜ್ಯ ನಾಯಕರಿಗೆ 'ನೀವು ಹೆಚ್ಚಿನ ಸ್ಥಾನ ಗೆಲ್ಲುವುದಿರಲಿ, ಮೊದಲು ಇರುವ
ಸ್ಥಾನಗಳನ್ನು ಉಳಿಸಿಕೊಂಡು ಬನ್ನಿ' ಎಂದು ಚುನಾವಣಾಪೂರ್ವದಲ್ಲೇ ತಾಕೀತು
ಮಾಡಿತ್ತು ಎಂಬುದೇ ಸಾಕ್ಷಿ. ಅಷ್ಟಾಗಿಯೂ ಆ ಪಕ್ಷ ಗೆದ್ದಿರುವ 6 ಸ್ಥಾನಗಳು
ಕೂಡ ಪಕ್ಷದ ಅಥವಾ ರಾಷ್ಟ್ರೀಯ ನಾಯಕತ್ವದ ಕಾರಣಕ್ಕಾಗಿ ಹಾಕಿದ ಮತದಿಂದ
ಬಂದದ್ದಲ್ಲ. ಬೀದರ್, ಗುಲ್ಬರ್ಗಾದಲ್ಲಿ ಧರ್ಮಸಿಂಗ್, ಖರ್ಗೆಯವರ ವೈಯಕ್ತಿಕ
ವರ್ಚಸ್ಸು ಕೆಲಸ ಮಾಡಿದ್ದರೆ, ಮೈಸೂರು, ಚಾಮರಾಜನಗರದಲ್ಲಿ ಕೂಡ
ಸಿದ್ದರಾಮಯ್ಯನವರ ವೈಯಕ್ತಿಕ ವರ್ಚಸ್ಸು ಕೆಲಸ ಮಾಡಿತು. ಕೋಲಾರದಲ್ಲಿ
ಮುನಿಯಪ್ಪ ಹಾಗೂ ದೊಡ್ಡಬಳ್ಳಾಪುರದಲ್ಲಿ ಮೊಯಿಲಿ ಗೆದ್ದದ್ದು ಕೂಡ ವೈಯಕ್ತಿಕ
ವರ್ಚಸ್ಸು, ತಂತ್ರಗಾರಿಕೆ ಮೂಲಕವೇ. ಹಾಗಾಗಿ ರಾಜ್ಯದಲ್ಲಿ ಕಾಂಗ್ರೆಸ್
ಸಂಪೂರ್ಣ ನೆಲಕಚ್ಚಿದೆ ಎಂಬುದನ್ನು ಮತದಾರ ಸತತ ಮೂರನೇ ಬಾರಿಗೂ ಸಾಬೀತು
ಮಾಡಿದ್ದಾನೆ.
ಇನ್ನು ಜೆಡಿ(ಎಸ್) ವರ್ಚಸ್ಸು ಕೂಡ ಕುಟುಂಬದ
ಪರಿಧಿಯಿಂದ ಹೊರಬಂದಂತೆ ಕಾಣುತ್ತಿಲ್ಲ. ಈಗಿನ ಮೂರು ಸ್ಥಾನಗಳೊಂದಿಗೆ ಇನ್ನೂ
ಎರಡು- ಮೂರು ಕಡೆ ಗೆಲ್ಲುವ ಅವಕಾಶ ಆ ಪಕ್ಷಕ್ಕಂಟಿರುವ ಕುಟುಂಬ ರಾಜಕಾರಣದ
ಅಪವಾದದ ಕಾರಣದಿಂದಲೇ ಕೈತಪ್ಪಿದೆ. ಹಾಗಾಗಿ, ಬಿಜೆಪಿ ಅತಿದೊಡ್ಡ ಪಕ್ಷವಾಗಿ
ಹೊರಹೊಮ್ಮಿದೆ. ಆದರೆ, ಅದರಿಂದ ಲಾಭವಾಗಿದ್ದು ಯಡಿಯೂರಪ್ಪನವರಿಗೆ ಬಿಟ್ಟರೆ
ಉಳಿದವರಾರಿಗೂ ಅಲ್ಲ. ಸ್ವತಃ ಮತ ಹಾಕಿದ ಮತದಾರನಿಗೂ ಲಾಭಕ್ಕಿಂತ ನಷ್ಟವೇ
ಹೆಚ್ಚು.
ಆದರೆ, ಈ ನಡುವೆಯೂ ರಾಜ್ಯದ ಎರಡು ಪ್ರಬಲ
ಸಮುದಾಯಗಳು ಒಂದೇ ರಾಜಕೀಯ ಪಕ್ಷದಡಿ ಧ್ರುವೀಕರಣಗೊಳ್ಳುವ ಮೂಲಕ ಹಾಗೂ ಇತರ
ಸಮುದಾಯಗಳಲ್ಲಿ ಸೃಷ್ಟಿಯಾಗುತ್ತಿರುವ ಅಭದ್ರತೆ ಮತ್ತು ಅಸಮಾಧಾನವನ್ನು
ಸರಿಯಾದ ದಿಕ್ಕಿನಲ್ಲಿ ಬಳಸಿಕೊಳ್ಳುವ ಮೂಲಕ ಹೊಸ ರಾಜಕೀಯ ಶಕ್ತಿಯನ್ನು
ಹುಟ್ಟುಹಾಕುವ ಅವಕಾಶವೊಂದು ತೆರೆದುಕೊಂಡಿದೆ. ಆದರೆ, ಅಂತಹ ನಾಯಕತ್ವ ಅಥವಾ
ರಾಜಕೀಯ ವೇದಿಕೆಯನ್ನು ಮಾತ್ರ ಸದ್ಯದ ಭವಿಷ್ಯದಲ್ಲಿ ನಿರೀಕ್ಷಿಸುವಂತಿಲ್ಲ.
ಅಹಿಂದ ಚಳವಳಿಯ ಮೂಲಕ ಸಿದ್ದರಾಮಯ್ಯ ಗಳಿಸಿದ ಜನಪ್ರಿಯತೆಯನ್ನು ಕಂಡು
ಬೆಚ್ಚಿದ ಕಾಂಗ್ರೆಸ್ ಭವಿಷ್ಯದಲ್ಲಿ ಅಹಿಂದ ಪ್ರಬಲ ರಾಜಕೀಯ ಶಕ್ತಿಯಾಗಿ
ರೂಪುಗೊಂಡರೆ ತನ್ನ ವೋಟ್ ಬ್ಯಾಂಕ್ ಸಂಪೂರ್ಣ ಕಳಚಿಹೋಗುವ ಮುನ್ಸೂಚನೆ ಅರಿತು
ಸಿದ್ದರಾಮಯ್ಯ ಅವರನ್ನು ತನ್ನ ಆಣತಿಯಂತೆ ಪಳಗಿಸುವಲ್ಲಿ ಯಶಸ್ವಿಯಾಯಿತು.
ಹಾಗಾಗಿ, ಈಗ ಸಿದ್ದರಾಮಯ್ಯ ಕೂಡ ಅಹಿಂದ ನಾಯಕರಾಗಿ ಉಳಿದಿಲ್ಲ. ಪರಿಣಾಮ;
ರಾಜ್ಯ ರಾಜಕಾರಣದ ಮಟ್ಟಿಗೆ ಈಗ ರಾಜಕೀಯ ಎಂಬುದು ಪ್ರಬಲ ಕೋಮುವೊಂದರ ದನಿಯಾಗಿ
ಸಂಪೂರ್ಣ ಮೇಲುಗೈ ಪಡೆದಿದ್ದು, ಬಹುಮುಖಿ ರಾಜಕೀಯ ದನಿಗಳಿಗೆ ಒಂದು ರಾಜಕೀಯ
ಅವಕಾಶ ಎಂಬುದೇ ಕಾಣೆಯಾಗುತ್ತಿರುವಂತಿದೆ.
ಇಂತಹ ಸ್ಥಿತಿಯಲ್ಲಿ ರಾಜ್ಯದ ರಾಜಕೀಯ,
ಸಾಮಾಜಿಕ ಅವಕಾಶ ಹಾಗೂ ಎಲ್ಲರನ್ನೂ ಒಳಗೊಳ್ಳುವ ಸಮಗ್ರ ಪ್ರಗತಿಯ
ದೃಷ್ಟಿಯಿಂದ ರಾಜ್ಯಕ್ಕೆ ಪರ್ಯಾಯ ರಾಜಕೀಯ ಶಕ್ತಿ ಹಾಗೂ ಅವಕಾಶದ ಜರೂರತ್ತು
ಹೆಚ್ಚಿದೆ. ಆದರೆ, ಪರಿಸ್ಥಿತಿಯ ವಿಪರ್ಯಾಸವೆಂದರೆ ಅಂತಹ ಸಾಧ್ಯತೆ ಕೂಡ ಈಗ
ಮತ್ತದೇ ಕಾಂಗ್ರೆಸ್ ಸುತ್ತಲೇ ಸುತ್ತುತ್ತಿದೆ. ಹಾಗಾಗಿ, ಇದೀಗ ಬಹುಮುಖಿ
ರಾಜಕೀಯ ದನಿಯಾಗಿ ರೂಪುಗೊಳ್ಳಬೇಕಾದ ಅನಿವಾರ್ಯತೆ ಸದ್ಯಕ್ಕೆ ಕಾಂಗ್ರೆಸ್
ಮುಂದಿದೆ.
ಆ
ಹಿನ್ನೆಲೆಯಲ್ಲಿ ಈ ಬಾರಿ ಕೇಂದ್ರ ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನು
ಪಡೆದಿರುವ ರಾಜ್ಯದ ಸಚಿವರುಗಳಿಗೆ ತಮ್ಮ- ತಮ್ಮ ಖಾತೆಗಳ ಹೊಣೆಗಾರಿಕೆಯೊಂದಿಗೆ
ರಾಜ್ಯದಲ್ಲಿ ಒಂದು ಸರ್ವ ಜನ ಸಮುದಾಯಗಳನ್ನೂ ಒಳಗೊಳ್ಳಬಲ್ಲ ರಾಜಕೀಯ ಮತ್ತು
ಸಾಮಾಜಿಕ ಅವಕಾಶವನ್ನು ಸೃಷ್ಟಿಸುವ ದೊಡ್ಡ ರಾಜಕೀಯ ಬದ್ಧತೆ ಕೂಡ ಎದುರಾಗಿದೆ.
ಚಳವಳಿ, ಸಿದ್ಧಾಂತಗಳ ನೆರಳಲ್ಲೇ ಬೆಳೆದುಬಂದಿರುವ ಎಸ್.ಎಂ. ಕೃಷ್ಣ,
ಮೊಯಿಲಿಯಂತಹವರಿಗೆ ಈ ಬದ್ಧತೆಯ ಮಹತ್ವ ಮತ್ತು ರಾಜಕೀಯ ಪರಿಣಾಮಗಳ ಅರಿವಿರದೇ
ಇರಲಿಕ್ಕಿಲ್ಲ. ಆದರೆ, ಆ ಬದ್ಧತೆಯನ್ನು ಅವರು ಎಷ್ಟರಮಟ್ಟಿಗೆ
ಉಳಿಸಿಕೊಳ್ಳುತ್ತಾರೆ ಎಂಬುದರ ಮೇಲೆ ರಾಜ್ಯದಲ್ಲಿ ಬಹುಮುಖಿ ರಾಜಕೀಯ
ಧ್ವನಿಗಳ ಭವಿಷ್ಯ ನಿರ್ಧಾರವಾಗಲಿದೆ ಎಂಬುದು ದಿಟ.
ಆ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್
ಆಂಧ್ರದತ್ತ ಒಮ್ಮೆ ಗಮನಹರಿಸುವುದು ಒಳಿತು. ರಾಜಶೇಖರ ರೆಡ್ಡಿಯವರ ಪ್ರಯೋಗದ
ಮಾದರಿಯಲ್ಲಿ ರಾಜ್ಯ ಕಾಂಗ್ರೆಸ್‌ಗೆ ಸ್ಥಳೀಯ ವಿಷಯ, ಪ್ರಾಂತೀಯತೆ ಸ್ಪರ್ಶ
ನೀಡಬೇಕಿದೆ. ಹಾಗಂದ ಮಾತ್ರಕ್ಕೆ ಅದು ಕೇವಲ ಪಕ್ಷ ಸಂಘಟನೆ, ರಾಜಕೀಯ ಆಯ್ಕೆಯ
ಮಟ್ಟಕ್ಕೆ ನಿಲ್ಲದೆ ರಾಜ್ಯದ ಸ್ಥಳೀಯ ಅಭಿವೃದ್ಧಿ ವಿಷಯ, ಸಮಸ್ಯೆಗಳನ್ನು
ಮುಂದಿಟ್ಟುಕೊಂಡೇ ಮುನ್ನಡೆಯಬೇಕಿದೆ. ಹಾಗೆ ಸ್ಥಳೀಯ ವಿಷಯಗಳನ್ನು ಪಕ್ಷ
ಸಂಘಟನೆಯ ಮಾರ್ಗವಾಗಿ ಪರಿಗಣಿಸಿದರೆ, ಕಾಂಗ್ರೆಸ್ ನಾಯಕರಿಗೆ ರಾಜ್ಯದ ನೆಲ,
ಜಲ, ಗಡಿ, ಭಾಷೆಯ ವಿಷಯಗಳು ನೆರವಿಗೆ ಬರಲಿವೆ. ಆದರೆ, ಆ ವಿಷಯಗಳಲ್ಲಿ
ಈಗಾಗಲೇ ತಮ್ಮ ಪಕ್ಷದ ಕಡೆಯಿಂದ ಆಗಿರುವ ತಪ್ಪುಗಳನ್ನು, ತಾರತಮ್ಯಗಳನ್ನು
ಮುಕ್ತವಾಗಿ ಒಪ್ಪಿಕೊಂಡು ಮುಂದುವರಿದಲ್ಲಿ ಮಾತ್ರ ಅದು ನಿರೀಕ್ಷಿತ ಗುರಿ
ಮುಟ್ಟಬಹುದೇ ವಿನಾ ಹುಸಿ ರಾಜಕೀಯ ಮೇಲಾಟದ ಮೂಲಕವಲ್ಲ. ಈ ಎಚ್ಚರಿಕೆ ಕೂಡ
ಇರಬೇಕಾಗುತ್ತದೆ.
ಒಟ್ಟಾರೆ ಅಭಿವೃದ್ಧಿಯ ದೃಷ್ಟಿಯಿಂದ ನೋಡಿದರೆ,
ರಾಜ್ಯಕ್ಕೆ ಕಳೆದ ಒಂದೂವರೆ ದಶಕದಿಂದ ನಿರಂತರ ಅನ್ಯಾಯವಾಗುತ್ತಲೇ ಬಂದಿದೆ.
ಮೂಲಸೌಕರ್ಯಗಳಾದ ರಸ್ತೆ, ರೈಲು ಸಂಪರ್ಕ, ಬಂದರು ಸಂಪರ್ಕ, ನೀರಾವರಿ
ಯೋಜನೆಗಳಿಂದ ಹಿಡಿದು ಕೇಂದ್ರ ಸರ್ಕಾರದ ವಿವಿಧ ಜನೋಪಯೋಗಿ ಯೋಜನೆಗಳವರೆಗೆ
ಎಲ್ಲಾ ವಿಷಯದಲ್ಲೂ ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಕೊನೆಗೆ ಕೇರಳಕ್ಕೆ
ಹೋಲಿಸಿದರೂ ರಾಜ್ಯಕ್ಕೆ ಸಮಾನ ನ್ಯಾಯ ಸಿಕ್ಕಿಲ್ಲ ಎಂಬುದನ್ನು ಯಾರೂ
ತಳ್ಳಿಹಾಕಲಾಗದು.
ಕಳೆದ ವರ್ಷ ರಾಜ್ಯದಲ್ಲಿ ಬಿಜೆಪಿ ನೇತೃತ್ವದ
ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ಯೋಜನೆಗಳನ್ನು ಘೋಷಿಸಲಾಗಿದೆ,
ಸರ್ಕಾರಿ ಹಣ ಬಿಡುಗಡೆಯಾಗುತ್ತಿದೆ. ಆದರೆ, ಆ ಯೋಜನೆಗಳು ಬಹುತೇಕ ಸಮಾಜದ
ಪ್ರಬಲ ವರ್ಗಗಳನ್ನು ಮಾತ್ರ ಗುರಿಯಾಗಿಸಿಕೊಂಡಿರುವುದರಿಂದ ಬಹುಸಂಖ್ಯಾತ
ದುರ್ಬಲ ಸಮುದಾಯ ಆ ಅಭಿವೃದ್ಧಿಯಿಂದ ಹೊರಗುಳಿಯುವಂತಾಗಿದೆ. ಹಾಗೆ
ಹೊರಗುಳಿದವರನ್ನು ಒಳಗೊಳ್ಳುವ ಸಮಗ್ರ ಅಭಿವೃದ್ಧಿ ಮಾದರಿಗಳನ್ನು ನೀಡುವ
ಮೂಲಕ ಬಿಜೆಪಿ ನೇತೃತ್ವದ ಸರ್ಕಾರದ ವರ್ಗ ಸೀಮಿತ ಅಭಿವೃದ್ಧಿ ಮಾದರಿಗೆ
ಪರ್ಯಾಯವನ್ನು ಕಟ್ಟಿಕೊಡಬೇಕಿದೆ.
ರಾಜ್ಯದ ಬೆಳಗಾವಿ ಮತ್ತು ಕಾಸರಗೋಡಿನ ಗಡಿ
ವಿವಾದ, ಕಾವೇರಿ ಜಲ ವಿವಾದ, ಹೊಗೇನಕಲ್, ನೆನಗುದಿಗೆ ಬಿದ್ದಿರುವ ರೈಲ್ವೆ
ಯೋಜನೆಗಳ ವಿಷಯದಲ್ಲಿ ಕರ್ನಾಟಕದ ದನಿಯಾಗಿ ಕಾರ್ಯನಿರ್ವಹಿಸುವುದಷ್ಟೇ ಅಲ್ಲ,
ರಾಜ್ಯ ಕಾಂಗ್ರೆಸ್ ಆ ವಿಷಯದಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ
ವ್ಯವಸ್ಥೆಯಾಗಿ ಕಾರ್ಯನಿರ್ವಹಿಸಬೇಕಿದೆ.
ಕೃಷಿ ಬಿಕ್ಕಟ್ಟಿನ ವಿಷಯದಲ್ಲಂತೂ ರಾಜ್ಯ
ದೇಶದ ಮುಂಚೂಣಿಯಲ್ಲಿದೆ. ಕಳೆದ ಒಂದು ದಶಕದಲ್ಲಿ ದೇಶದಲ್ಲೇ ಅತಿ ಹೆಚ್ಚು
ರೈತ ಆತ್ಮಹತ್ಯೆಗಳನ್ನು ಕಂಡ ರಾಜ್ಯದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲೇ
ಸುಮಾರು ಐದು ನೂರಕ್ಕೂ ಅಧಿಕ ರೈತರು ಸಾಲದ ಬಾಧೆಯಿಂದ ಮತ್ತು ಬೆಳೆ
ವೈಫಲ್ಯದಿಂದ ಜೀವ ತೆತ್ತಿದ್ದಾರೆ. ಅದೂ, ರೈತ ಆತ್ಮಹತ್ಯೆಯನ್ನು ತಡೆಯುವ
ಉದ್ದೇಶದ ವಿದರ್ಭ ಪ್ಯಾಕೇಜ್, ಶೇ.6-3ರ ಕೃಷಿ ಸಾಲ, ಸಾಲ ಮನ್ನಾ ಮುಂತಾದ
ಸಾವಿರಾರು ಕೋಟಿ ರೂಪಾಯಿ ಸಾರ್ವಜನಿಕ ತೆರಿಗೆ ಹಣ ನೀರಿನಂತೆ ಹರಿದುಹೋದ
ಬಳಿಕವೂ!
ಎರಡು ಸರ್ಕಾರಗಳ ಹೊಣೆಗೇಡಿತನ ಮತ್ತು ರಾಜಕೀಯ
ಮೇಲಾಟದ ಕಾರಣಕ್ಕಾಗಿ ಅನ್ನದಾತ ಕೆಜಿ ರಸಗೊಬ್ಬರಕ್ಕೂ ಬೀದಿಗಳಿದು ಪ್ರತಿಭಟನೆ
ನಡೆಸಿ ಗೋಲಿಬಾರ್‌ಗೆ ಬಲಿಯಾಗಬೇಕಾದ ಸ್ಥಿತಿ ಇದೆಯೆಂದರೆ ಕೃಷಿ
ಕ್ಷೇತ್ರದೆಡೆಗೆ ಆಳುವ ಸರ್ಕಾರಗಳ ಧೋರಣೆ ಎಂತಹದ್ದು ಎಂಬುದನ್ನು ವಿವರಿಸಿ
ಹೇಳಬೇಕಿಲ್ಲ.

ಇಂತಹ ಸ್ಥಿತಿಯಲ್ಲಿ ಮಳೆಯಾಶ್ರಿತ ಭೂಮಿಯೇ
ಹೆಚ್ಚಿರುವ ರೈತರ ಸಂಕಷ್ಟ ದೂರಮಾಡಲು ನೆರೆ ರಾಜ್ಯಗಳ ಅಡ್ಡಗಾಲನ್ನು
ನಿವಾರಿಸಿ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕಿದೆ. ಸಮರ್ಪಕ
ನೀರಾವರಿ ಸದ್ಬಳಕೆಗೆ ಬೆಳೆನೀತಿ, ಬೆಳೆ ಪದ್ಧತಿಗಳು ಬೇಕಿದೆ. ಸಾಲ ಮನ್ನಾ
ಮತ್ತು ಕಡಿಮೆ ಬಡ್ಡಿಯ ಸಾಲ ಯೋಜನೆಗಳು ಪಕ್ಷಗಳ ಕಾರ್ಯಕರ್ತರು, ಪ್ರಭಾವಿ
ವರ್ಗಗಳ ಪಾಲಾಗದೆ ನಿಜವಾಗಿಯೂ ಸಂಕಷ್ಟದಲ್ಲಿರುವ ಅರ್ಹರಿಗೆ ತಲುಪುವಂತೆ
ನೋಡಿಕೊಳ್ಳಬೇಕಿದೆ.
ರಾಜ್ಯದ ಪರಿಸರ (ಭೌಗೋಳಿಕ ಮತ್ತು ರಾಜಕೀಯ) -ವನ್ನು
ಸಂಪೂರ್ಣ ಬುಡಮೇಲು ಮಾಡುತ್ತಿರುವ ಅದಿರು ಗಣಿಗಾರಿಕೆಗೆ ರಾಷ್ಟ್ರೀಯ ಗಣಿ
ನೀತಿಯ ಮೂಲಕ ಕಡಿವಾಣ ಹಾಕಬೇಕಿದೆ. ಆ ಮೂಲಕ ಪ್ರಜಾಪ್ರಭುತ್ವವನ್ನು ಹೈಜಾಕ್
ಮಾಡುವ ಪಟ್ಟಭದ್ರರ ಪ್ರಯತ್ನಗಳಿಗೆ ಪ್ರತ್ಯುತ್ತರ ನೀಡಬೇಕಿದೆ. ಅದಕ್ಕೆ
ಕಾಂಗ್ರೆಸ್ ನಾಯಕರಿಗೆ ತತಕ್ಷಣದ ಲಾಭ- ನಷ್ಟವನ್ನು ಮೀರಿದ ದೂರಾಲೋಚನೆ ಬೇಕು.
ಕೇಂದ್ರ ಸರ್ಕಾರದ ಕಳೆದ ಅವಧಿಯ
ಮಹತ್ವಾಕಾಂಕ್ಷಿ ಯೋಜನೆಗಳಾದ ಗ್ರಾಮೀಣ ಉದ್ಯೋಗ ಖಾತ್ರಿ, ವಿದರ್ಭ, ನರ್ಮ್,
ರಾಷ್ಟ್ರೀಯ ತೋಟಗಾರಿಕಾ ಮಿಷನ್, ಒಣಭೂಮಿ ಅಭಿವೃದ್ಧಿ ಕಾರ್ಯಕ್ರಮ ಮುಂತಾದ
ಯೋಜನೆಗಳು ರಾಜ್ಯದ ಜನಸಾಮಾನ್ಯರ ಬದುಕಿನಲ್ಲಿ ಬದಲಾವಣೆ ತಂದಿದ್ದಕ್ಕಿಂತ
ಅಧಿಕಾರಾಶಾಹಿ ಮತ್ತು ಜನಪ್ರತಿನಿಧಿಗಳ ಬದುಕಿನಲ್ಲೇ ಹೆಚ್ಚು ಬದಲಾವಣೆ
ತಂದಿವೆ ಎಂಬುದು ಗುಟ್ಟೇನಲ್ಲ. ಆ ದೃಷ್ಟಿಯಿಂದ ಮಹತ್ವದ ಯೋಜನೆಗಳ ಅನುಷ್ಠಾನ,
ಮೇಲ್ವಿಚಾರಣೆಗೆ ಸ್ವತಂತ್ರ ಉಸ್ತುವಾರಿ ವ್ಯವಸ್ಥೆ ಬರಬೇಕಿದೆ. ಇಲ್ಲವಾದಲ್ಲಿ
ಕಳೆದ ಕೆಲವು ವರ್ಷಗಳಿಂದ ರಾಜಕೀಯ ವ್ಯವಸ್ಥೆ ಸಾರ್ವಜನಿಕ ಹಣವನ್ನು ಲೂಟಿ
ಹೊಡೆಯಲು ಕಂಡುಕೊಂಡಿರುವ ವಿನೂತನ ಮಾರ್ಗಗಳಲ್ಲಿ ಹಣ ಹರಿಯುತ್ತದೆಯೇ ಹೊರತು
ಜನರ ಬದುಕಿನಲ್ಲಿ ಅಲ್ಲ ಎಂಬುದನ್ನು ನಮ್ಮ ಹೊಸ ಸಚಿವರು
ಅರ್ಥಮಾಡಿಕೊಳ್ಳುತ್ತಾರೆಯೇ?
ಇನ್ನುಳಿದಂತೆ ರಾಜ್ಯ ಎದುರಿಸುತ್ತಿರುವ
ವಿದ್ಯುತ್ ಬಿಕ್ಕಟ್ಟು, ರಸ್ತೆ ಸಂಪರ್ಕ ವ್ಯವಸ್ಥೆಯ ದುರವಸ್ಥೆ, ಜಾಗತಿಕ
ಆರ್ಥಿಕ ಹಿಂಜರಿತದಿಂದಾಗಿ ರಾಜ್ಯಕ್ಕಾಗಿರುವ ಆದಾಯ ನಷ್ಟ ಹಾಗೂ ಅದು ಮುಂದಿನ
ಬಜೆಟ್ ಮೇಲೆ ಬೀರಬಹುದಾದ ಪರಿಣಾಮ, ಕುಂಠಿತಗೊಂಡಿರುವ ಜಿಲ್ಲಾ ವಿಮಾನ
ನಿಲ್ದಾಣ ಯೋಜನೆಗಳು ಮುಂತಾದ ವಿಷಯಗಳಲ್ಲಿ ರಾಜ್ಯ ಸರ್ಕಾರ ಕೂಡ
ಕೇಂದ್ರದೊಂದಿಗೆ ಸೂಕ್ತವಾಗಿ ಸಮಾಲೋಚಿಸಬೇಕಿದೆ. ರಾಜ್ಯದ ಮುಖ್ಯಮಂತ್ರಿಗಳು
ವಿರೋಧ ಪಕ್ಷದ ಮುಖಂಡರ ಮನಸ್ಥಿತಿಯಿಂದ ಸಂಪೂರ್ಣ ಹೊರಬಂದು ಒಂದು ರಾಜ್ಯದ
ಮುಖ್ಯಮಂತ್ರಿಯಾಗಿ ತಮ್ಮ ಮುತ್ಸದ್ಧಿತನ ಪ್ರದರ್ಶಿಸಬೇಕಿದೆ. ಮತ್ತೊಬ್ಬರ
ಮೇಲೆ ಗೂಬೆ ಕೂರಿಸುವ, ಹಗ್ಗಜಗ್ಗಾಟದ ರಾಜಕೀಯದಿಂದ ತಮ್ಮ- ತಮ್ಮ ಪಕ್ಷಕ್ಕೆ
ಲಾಭವಾಗಬಹುದೇ ವಿನಃ ರಾಜ್ಯದ ಜನತೆಗೆ ಅಲ್ಲ. ಬದಲಾಗಿ ಅದು ರಾಜ್ಯದ ಬಗೆಗೆ
ದೆಹಲಿ ಮಟ್ಟದಲ್ಲಿ ಬೇರೆಯದೇ ಆದ ಚಿತ್ರಣ ನೀಡುತ್ತದೆ ಎಂಬ ಅರಿವನ್ನು
ಆಡಳಿತರೂಢ- ಪ್ರತಿಪಕ್ಷಗಳೆರಡೂ ಮೂಡಿಸಿಕೊಳ್ಳಬೇಕಿದೆ.
ಒಟ್ಟಾರೆ, ಬಹಳ ವರ್ಷಗಳ ಬಳಿಕ ಕರ್ನಾಟಕದ
ಪ್ರತಿನಿಧಿಗಳಾಗಿ ಕೇಂದ್ರ ಸರ್ಕಾರದಲ್ಲಿ ಮಹತ್ವದ ಸಚಿವಾಲಯಗಳ ಹೊಣೆ
ಹೊತ್ತಿರುವ ಕಾಂಗ್ರೆಸ್ ನಾಯಕರು, ರಾಜ್ಯಕ್ಕೆ
ಸಂಬಂಧಪಟ್ಟಂತೆ ತಮ್ಮ ಪಕ್ಷ ಸಂಘಟನೆಯೊಂದಿಗೆ
ರಾಜ್ಯದ ಬಹುಮುಖಿ ರಾಜಕೀಯ ದನಿಗೆ ಅವಕಾಶ ಕಲ್ಪಿಸಬೇಕಿದೆ. ಅದಕ್ಕೆ ರಾಜಕೀಯ
ಅಥವಾ ಸಾಮಾಜಿಕ ಚಳವಳಿ- ಹೋರಾಟದ ಮೂಲಕವಲ್ಲ, ರಾಜ್ಯದ ಸಮಗ್ರ ಏಳಿಗೆಯತ್ತ
ಮುಖಮಾಡಿದ ಅಭಿವೃದ್ಧಿ ಕಾರ್ಯಗಳ ಮೂಲಕವೇ ದಾರಿ ಸವೆಸಬೇಕು ಎಂಬುದು ಈಗಿನ
ಪರಿಸ್ಥಿತಿಯ ದೊಡ್ಡ ಸವಾಲು.