|
ಪ್ರಿಯ ಅಂಬೇಡ್ಕರ್,
22 ಸೆಪ್ಟೆಂಬರ್ 1932
ನೀವು ಮನೋಜ್ಞವಾಗಿ ನಿಮ್ಮ ನಿಲುವನ್ನು
ವ್ಯಕ್ತಪಡಿಸಿದ್ದೀರಿ. ಆದರೂ ನನ್ನದೊಂದು ಪ್ರಶ್ನೆ. ದಲಿತರನ್ನೇ ಒಳಗೊಂಡ
ಪ್ರಾಮಾಣಿಕ ರಾಜಕೀಯ ಪಕ್ಷ ಜನ್ಮತಳೆದರೆ ಅದರ ಬೆಳವಣಿಗೆಗೆ ಸೂಕ್ತ ವಾತಾವರಣ
ಕಲ್ಪಿಸಬೇಕು ಎನ್ನುತ್ತೀರಿ. ಹಾಗಾಗಿ ಅವರು ಪ್ರಾಥಮಿಕ ಚುನಾವಣೆ ಇಲ್ಲದ
ಸಾರ್ವತ್ರಿಕ ಚುನಾವಣೆಯನ್ನು ಒಪ್ಪಲು ನಿರಾಕರಿಸುವುದು ತರ್ಕ ಬದ್ಧವೇ. ಆದರೆ
ನೀವು ಈವರೆಗೆ ಇಂಥ ಪ್ರತ್ಯೇಕ ಚುನಾವಣೆಯ ಪ್ರಸ್ತಾಪ ಇಡಲಿಲ್ಲವೇಕೆ ಎಂದು
ನನಗರ್ಥವಾಗುತ್ತಿಲ್ಲ. ಈ ಬಗ್ಗೆ ಅಧ್ಯಯನ ನಡೆಸಿದ ಮೇಲೆ
ನನಗನ್ನಿಸಿದ್ದೇನೆಂದರೆ, ಪ್ರಾಥಮಿಕ ಚುನಾವಣೆ ಒಪ್ಪಿಕೊಂಡ ಮಾತ್ರಕ್ಕೆ ನನ್ನ
ವಾಗ್ದಾನಕ್ಕೆ ಚ್ಯುತಿ ಬರುವುದಿಲ್ಲ. ಹಾಗಾಗಿ ಪ್ರಾಥಮಿಕ ಚುನಾವಣೆ ಕುರಿತ
ಸಂವಿಧಾನದ ವಿಧಿಯನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಅದರ ಅಂಶಗಳನ್ನು
ಕೂಲಂಕಷವಾಗಿ ಪರಿಶೀಲಿಸುವೆ.
ಪ್ರತ್ಯೇಕ ಪ್ರಾಥಮಿಕ ಚುನಾವಣೆಯ ಸಂಗತಿ ನನ್ನ
ವಾಗ್ದಾನಕ್ಕೆ ಚ್ಯುತಿ ತರುವುದಿಲ್ಲ ಎಂದಷ್ಟೇ ನಾನು ಈಗ ಹೇಳಬಯಸುವೆ. ಆದರೆ
ಪೀಠದಲ್ಲಿ ಮೂವರು ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡುವ ನಿಮ್ಮ ಆಗ್ರಹ ಹಲವು
ಅನುಮಾನಗಳನ್ನು ಮೂಡಿಸಿದೆ. ಆಗ ನಾನು ಪೀಠದಲ್ಲಿರಲು ಸಾಧ್ಯವಾಗದು. ನೀವು
ನನ್ನನ್ನು ಬೈದಲ್ಲಿ ನಿಮ್ಮ ಬೈಗುಳಕ್ಕೆ ನಾನು ಅರ್ಹ ಎಂದೇ ನನ್ನ ಭಾವನೆ.
ನೀವು ನನ್ನ ಮುಖದ ಮೇಲೆ ಉಗಿದರೂ ನಿಮ್ಮನ್ನು ದ್ವೇಷಿಸಲಾರೆ. ಈ ಮಾತಿಗೆ
ಪರಮಾತ್ಮನೇ ಸಾಕ್ಷಿ. ನನಗೆ ಗೊತ್ತು, ನಿಮ್ಮ ಮನ ಸಂಪೂರ್ಣ ವಿಷಮಯವಾಗಿದೆ.
ನೀವು ಅಚ್ಚರಿ ಪಡುವ ಸಂಗತಿಯೊಂದನ್ನು ಹೇಳುವೆ, ಕೇಳಿ. ನೀವು ಜನ್ಮತಃ
ಅಸ್ಪೃಶ್ಯ. ಆದರೆ ನಾನು ಮನಃಪೂರ್ವಕ ಅಸ್ಪೃಶ್ಯತೆ ಅಳವಡಿಸಿಕೊಂಡವನು. ದಲಿತರ
ಕುರಿತು ಜನ್ಮತಃ ಅಸ್ಪೃಶ್ಯರಾದ ನಿಮಗಿಂತ ಹೆಚ್ಚಿನ ಕಾಳಜಿ ನನಗಿದೆ.
ಈಗ ನನ್ನ ಕಣ್ಣ ಮುಂದಿರುವುದು ಅಸಹಾಯಕ
ದಕ್ಷಿಣ ಭಾರತೀಯ ಬಹಿಷ್ಕೃತರು. ಈ ಯೋಜನೆ ಅವರಿಗೆಷ್ಟು ಲಾಭವಾಗಲಿದೆ ಎಂದು
ಪರಿಶೀಲಿಸುತ್ತಿದ್ದೇನೆ. ನಾನೇಕೆ ಈ ಬಗ್ಗೆ ಚಿಂತಿಸಬೇಕೆಂದು ನೀವು ಕೇಳಬಹುದು.
ನೀವೆಲ್ಲ ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮವನ್ನು ಅಪ್ಪಿಕೊಳ್ಳಬಹುದು. ನಾನು
ಸತ್ತ ಮೇಲೆ ನಿಮ್ಮಿಷ್ಟ ಬಂದಂತೆ ಇರಿ.
ದಲಿತರೆಲ್ಲ ಒಂದಾದಲ್ಲಿ ಸನಾತನಿಗಳ ಭದ್ರ
ಕೋಟೆಯನ್ನೇ ಚೂರಾಗಿಸಬಲ್ಲೆ. ದಲಿತವರ್ಗ ಒಗ್ಗಟ್ಟಿನಿಂದ ಸನಾತನಿಗಳ ವಿರುದ್ಧ
ಬಂಡಾಯವೇಳಬೇಕೆನ್ನುವುದು ನನ್ನಾಸೆ. ನಾನು ಜೀವನವಿಡೀ
ಪ್ರಜಾತಂತ್ರವಾದಿಯಾಗಿರುವೆ. ಮನೆಗೆಲಸದವರನ್ನು ಅಸ್ಪೃಶ್ಯರಂತೆ
ನಡೆಸಿಕೊಂಡಿದ್ದಕ್ಕೆ ನಾನು ಅಮ್ಮನೊಂದಿಗೇ ಜಗಳವಾಡಿದ್ದೆ. ಅಂದು ಒಬ್ಬ
ಅಸ್ಪೃಶ್ಯ ಭಾಂಗಿಯಲ್ಲಿ ದೇವರನ್ನು ಕಂಡಿದ್ದೆ. 'ನನ್ನ ಪ್ರಾಣಕ್ಕಿಂತ ದಲಿತರ
ಉದ್ಧಾರವೇ ಮಿಗಿಲು' ಎನ್ನುವ ನಿಮ್ಮ ಮಾತು ಸತ್ಯವೇ ಇರಬಹುದು. ಅದಕ್ಕೆ
ಪ್ರಾಮಾಣಿಕರಾಗಿರುವ ಬದ್ಧತೆ ನಿಮಗಿರಲಿ. ನನ್ನ ಪ್ರಾಣದ ಬಗ್ಗೆ ಚಿಂತಿಸಬೇಡಿ,
ಹರಿಜನರಿಗೆ ಮಾತ್ರ ದ್ರೋಹ ಬಗೆಯಬೇಡಿ.
ಸಮಾವೇಶಕ್ಕೆ ನನ್ನ ಸಂದೇಶ ತಲುಪಿಸಲು ಮಗನಿಗೆ
ತಿಳಿಸಿದ್ದೇನೆ. ನನ್ನ ಪ್ರಾಣ ರಕ್ಷಣೆಗಾಗಿ ಹರಿಜನರ ಕೈ ಬಿಡಬೇಡಿ ಎಂದು
ಸಂದೇಶದಲ್ಲಿ ತಿಳಿಸಿದ್ದೇನೆ. ನಾನು ಸತ್ತರೆ ನನ್ನ ಮಗ ನನ್ನ ದಾರಿಯಲ್ಲಿ
ನಡೆಯುತ್ತಾನೆ. ಅವನೊಬ್ಬ ಅಲ್ಲ, ಸಾವಿರಾರು ಜನ ಈ ಉದ್ದೇಶಕ್ಕೆ ಪ್ರಾಣ ಕೊಡಲು
ಹಿಂಜರಿಯುವುದಿಲ್ಲ. ನನಗೆ ಅವನಂಥ ಸಾವಿರಾರು ಮಕ್ಕಳಿದ್ದಾರೆ. ಹಿಂದೂ ಧರ್ಮದ
ಘನತೆ ಕಾಪಾಡದವ ನನ್ನ ಮಗನಲ್ಲವೇ ಅಲ್ಲ. ಅಸ್ಪೃಶ್ಯತೆಯನ್ನು ಬುಡಸಮೇತ ಕೀಳದೆ
ಹಿಂದೂ ಧರ್ಮ ಉಳಿಯದು. ಪ್ರತಿಯೊಂದು ಕ್ಷೇತ್ರದಲ್ಲೂ ದಲಿತರು ತಲೆ ಎತ್ತಿ
ಬಾಳಿದಾಗ ಮಾತ್ರ ಅದು ಸಾಧ್ಯ. ನಾನು ಭಾರತಕ್ಕೆ ಹಿಂದಿರುಗಿದಾಗ ನೀಡಿದ
ರಾಜಕೀಯ ಭಾಷಣದಲ್ಲಿ ಒಬ್ಬ ಅಸ್ಪೃಶ್ಯ ಭಾಂಗಿಯನ್ನು ಕಾಂಗ್ರೆಸ್ನ ಅಧ್ಯಕ್ಷ
ಸ್ಥಾನದಲ್ಲಿ ನೋಡಬೇಕೆಂಬ ಆಕಾಂಕ್ಷೆ ವ್ಯಕ್ತಪಡಿಸಿದ್ದೆ. ಆದ್ದರಿಂದ
ದಯವಿಟ್ಟು ಈ ಕುರಿತು ಚೌಕಾಶಿ ಬೇಡ. ನನಗೆ ಅಸಹ್ಯ ಹುಟ್ಟಿಸುವ ಸಂಗತಿಯನ್ನು
ನನ್ನ ಬಳಿ ತರಬೇಡಿ. ಸಾವಿನ ಹಾದಿ ಕಾದು ಕುಳಿತ ಈ ವ್ಯಕ್ತಿಯ ಮನಸ್ಸಿಗೆ ಮುದ
ನೀಡುವಂಥ ಆಹ್ಲಾದಕರ ಕೊಡುಗೆ ತನ್ನಿ. ನಾನು ಈವರೆಗೆ ನೀಡಿದ ಸಹಕಾರಕ್ಕೆ
ಕಿಂಚಿತ್ತಾದರೂ ಬೆಲೆ ಇದೆ ಎಂಬುದು ನಿಮ್ಮ ಮನಸ್ಸಿಗೆ ಬಂದರೆ ಮಾತ್ರ ನೀವು ಈ
ಕೆಲಸಕ್ಕೆ ಮುಂದಾಗುತ್ತೀರಿ.
ನಿಮ್ಮವನು
ಎಂ.ಕೆ. ಗಾಂಧಿ |