|
| ಅರಿಂದಮ್ ಚೌಧುರಿ, |
ಪ್ರಧಾನ ಸಂಪಾದಕರು,
ದ ಸಂಡೆ ಇಂಡಿಯನ್
|
ಎಲ್‌ಟಿಟಿಇ ನಾಮಾವಶೇಷಗೊಂಡಿದೆ! ಪ್ರಭಾಕರನ್
ಹತ್ಯೆಯಾಗಿದ್ದಾನೆ. ಶ್ರೀಲಂಕಾ ಪಾಲಿಗೆ ಬೇರೆ ಯಾವ ಆಯ್ಕೆಯೂ ಇರಲಿಲ್ಲ
ಬಿಡಿ. ಆ ದೇಶದ ಸುಭದ್ರ ಭವಿಷ್ಯದ ದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆಯೇ.
ಆದರೆ ಈ ಚರ್ಚೆ ನಾವಂದುಕೊಂಡಷ್ಟು ಸರಳವಾಗಿಲ್ಲ. ಮಾಜಿ ಪ್ರಧಾನಮಂತ್ರಿ
ಜವಾಹರ್‌ಲಾಲ್ ನೆಹರೂ ಕಾಲದಿಂದಲೂ ಎಲ್ಲಾ ಭಾರತೀಯ ಸರ್ಕಾರಗಳೂ ನೆರೆಯ
ದೇಶಗಳ ಜೊತೆಗಿನ ಬಾಂಧವ್ಯ ವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಬೇಕಾಗಿತ್ತು.
ಆದರೆ ಯಾವ ಸರ್ಕಾರಗಳೂ ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸದೆ
ಇದ್ದುದು ವಿಪರ್ಯಾಸ. ಅದಕ್ಕೆ ಬದಲಾಗಿ ಯಾವುದೇ ದೃಢತೆ ತೋರದೆ ನಕಾರಾತ್ಮಕ
ಧೋರಣೆಯನ್ನೇ ಹೆಚ್ಚಾಗಿ ಪ್ರದರ್ಶಿಸಿವೆ. ನಮ್ಮ ನೆರೆಯ ದೇಶಗಳ ಜೊತೆಗಿನ
ಬಾಂಧವ್ಯಕ್ಕೆ ಸಂಬಂಧಿಸಿದಂತೆ ಸ್ವಾತಂತ್ರ್ಯಾ ನಂತರದ ನಮ್ಮ ಪಾತ್ರ
ಅತ್ಯಂತ ಶೋಚನೀಯದ್ದು ಎನ್ನುವುದಕ್ಕೆ ಇತಿಹಾಸವೇ ಸಾಕ್ಷಿ. ಇಂಥ
ಧೋರಣೆಯಿಂದಲೇ ಆಕ್ರಮಣಕಾರೀ ಪ್ರವೃತ್ತಿಯ ಚೀನಾವನ್ನು ನಮ್ಮ ಮೇಲೆ ಸವಾರಿ
ಮಾಡಲು ನಾವೇ ಅವಕಾಶ ಒದಗಿಸಿದೆವು. ಟಿಬೆಟ್‌ನ್ನು ಚೀನಾಗೆ
ಬಿಟ್ಟುಕೊಟ್ಟೆವು. ಪಾರಂಪರಿಕವಾಗಿ ಟಿಬೆಟ್ ಭಾರತದೊಂದಿಗೇ ಹೆಚ್ಚಾಗಿ
ಗುರುತಿಸಿಕೊಂಡಿದ್ದರೂ ಟಿಬೆಟ್‌ನ್ನು ನಿರಾಯಾಸವಾಗಿ ಚೀನಾಕ್ಕೆ ಒಪ್ಪಿಸಿ
ಅವರು ಅಕ್ಷರಶಃ ನಮ್ಮ ಗಡಿಗೆ ಹೊಂದಿಕೊಂಡ ನೆರೆಯ ದೇಶವೆನಿಸಲು ಅವಕಾಶ
ಕಲ್ಪಿಸಿಕೊಟ್ಟೆವು. ನಂತರವೂ ನಿರಂತರವಾಗಿ ಹೆಜ್ಜೆ ಹೆಜ್ಜೆಗೂ ಅವಿವೇಕ
ಪ್ರದರ್ಶಿಸುತ್ತಲೇ ಹೋಗಿದ್ದೇವೆ.
ಭೂತಾನ್‌ನಂತಹ ಪುಟ್ಟ ರಾಷ್ಟ್ರದೊಡನೆ
ಬಾಂಧವ್ಯ ಬೆಸೆಯುವುದರಲ್ಲೂ ನಾವು ಹೀನಾಯವಾಗಿ ಸೋತಿದ್ದೇವೆ. ಹೀಗಾಗಿಯೇ ಆ
ದೇಶ ಉಲ್ಫಾ ಉಗ್ರರನ್ನು ಪೋಷಿಸುತ್ತಾ ನಮ್ಮ ಕಡೆ ಛೂ ಬಿಡುತ್ತಿದೆ.
ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕೆ ಭಾರತ ಹೃತ್ಪೂರ್ವಕ ನೆರವನ್ನು ನೀಡಿತ್ತು.
ಹಾಗಿದ್ದಾಗ್ಯೂ ಆ ದೇಶದ ಜೊತೆಗೆ ಸೌಹಾರ್ದ ಸಂಬಂಧ ಬೆಳೆಸುವಲ್ಲಿ ಭಾರತ
ವಿಫಲವಾಗಿದೆ. ಇನ್ನು ಪಾಕಿಸ್ತಾನದ ಕುರಿತು ಮಾತನಾಡುವುದಂತೂ
ನಿಷ್ಪ್ರಯೋಜಕ ಬಿಡಿ.
ಶ್ರೀಲಂಕಾ ಜೊತೆಗಿನ ಬಾಂಧವ್ಯದಲ್ಲೂ ಇದೇ
ನಕಾರಾತ್ಮಕ ಧೋರಣೆಯೇ ವ್ಯಕ್ತವಾಗಿದೆ. ಈ ಪುಟ್ಟ ದ್ವೀಪ ರಾಷ್ಟ್ರ ಭಾರತದ
ತಮಿಳುನಾಡು ರಾಜ್ಯಕ್ಕೆ ಬಹಳ ಸಮೀಪದಲ್ಲಿದೆ. ಹೀಗಾಗಿ ಗಣನೀಯ ಪ್ರಮಾಣದ
ತಮಿಳರು ಶ್ರೀಲಂಕಾದಲ್ಲಿ ನೆಲೆಸಿರುವುದು ತೀರಾ ಸಹಜ. ಆದರೆ, ಸ್ಥಳೀಯ
ಸಿಂಹಳೀಯರು ಆರಂಭದಿಂದಲೂ ತಮಿಳರಿಗೆ ನೀಡಬೇಕಾದ ಮೂಲಭೂತ ಹಕ್ಕುಗಳನ್ನು
ನಿರಾಕರಿಸುತ್ತಲೇ ಬಂದಿದ್ದರಿಂದ ಅಲ್ಲಿನ ತಮಿಳರ ಜೀವನ ಚಿಂತಾಜನಕ.
ಅತ್ಯಂತ ಅಸಹನೀಯ ಸನ್ನಿವೇಶದಲ್ಲಿ ಬದುಕು ಸಾಗಿಸುವ ಅನಿವಾರ್ಯತೆ ಲಂಕಾ
ತಮಿಳರದು. ಬಹುಹಿಂದಿನಿಂದಲೂ ಲಂಕಾ ಸರ್ಕಾರ ಅಲ್ಲಿನ ತಮಿಳರನ್ನು
'ಅನಗತ್ಯ' ಎಂಬಂತೆಯೇ ನೋಡಿದೆ. 1956ರ ಸಿಂಹಳ ಭಾಷಾ ಕಾಯ್ದೆಯ ಅನುಸಾರ
ತಮಿಳರ ಮಾತೃಭಾಷೆ ಬಳಕೆಗೆ ನಿಷೇಧ ಹೇರಿದ್ದು, 1958 ಮತ್ತು 1977ರಲ್ಲಿನ
ತಮಿಳು ವಿರೋಧಿ ಗಲಭೆ, 1981ರಲ್ಲಿ ಜಾಫ್ನಾದ ಪ್ರತಿಷ್ಠಿತ ಸಾರ್ವಜನಿಕ
ಗ್ರಂಥಾಲಯವನ್ನು ನೆಲಸಮಗೊಳಿಸಿದ್ದು, 1983ರ ಅತಿ ಭೀಕರ ತಮಿಳು ವಿರೋಧಿ
ಗಲಭೆ (ಈ ಗಲಭೆಯಲ್ಲಿ ಸಾವಿರಾರು ತಮಿಳರ ಹತ್ಯೆಯಾಯಿತು. ಒಂದು ಲಕ್ಷಕ್ಕೂ
ಹೆಚ್ಚು ಮಂದಿ ತಮಿಳರು ಪ್ರಾಣ ಉಳಿಸಿಕೊಳ್ಳಲು ಶ್ರೀಲಂಕಾ ತೊರೆಯಬೇಕಾಯಿತು)
ಇವೆಲ್ಲಾ ಶ್ರೀಲಂಕಾ ಶೋಷಣೆಗೆ ಕೆಲವು ಉದಾಹರಣೆಗಳಷ್ಟೇ. ವಿಶ್ವಸಂಸ್ಥೆಯ
ವರದಿಯ ಪ್ರಕಾರ ಅಪಾರ ಸಂಖ್ಯೆಯ ನಾಗರಿಕರ ಕಣ್ಮರೆ, ಅತ್ಯಾಚಾರ, ಹಿಂಸೆ,
ವಿಚಾರಣಾಧೀನ ವ್ಯಕ್ತಿಗಳ ಮರಣ ಮುಂತಾದವುಗಳ ಪ್ರಕರಣಗಳು ಎಲ್ಲೆ ಮೀರಿದ್ದರೂ
ಅವುಗಳ ತನಿಖೆಯಲ್ಲಿ ನಿರ್ಲಕ್ಷ್ಯ ತೋರುವ ವಿಚಾರದಲ್ಲಿ ಶ್ರೀಲಂಕಾ
ವಿಶ್ವದಲ್ಲೇ 2ನೇ ಸ್ಥಾನದಲ್ಲಿದೆ.
ಇನ್ನು ಎಲ್‌ಟಿಟಿಇ ವಿಚಾರ. ಜಗತ್ತಿನ
ಕಣ್ಣಿಗೆ ಅದೊಂದು ಭಯೋತ್ಪಾದಕ ಸಂಘಟನೆಯಾಗಿರಬಹುದು. ಆದರೆ ಶ್ರೀಲಂಕಾ
ಸರ್ಕಾರ ತಮಿಳರ ವಿರುದ್ಧ ತೋರಿಸಿದ ಅನಾದರ, ತಾರತಮ್ಯ ಮತ್ತು ನಿರಂತರ
ಶೋಷಣೆಯ ಪರಿಣಾಮವಾಗಿ ಹುಟ್ಟಿಕೊಂಡ ಸಂಘಟನೆ ಅದು ಎನ್ನುವುದನ್ನು ನಾವು
ಮರೆಯುವಂತಿಲ್ಲ. ಶ್ರೀಲಂಕಾದ ತಮಿಳರಿಗೆ ಗೌರವಯುತ ಬದುಕು ಕೊಡುವುದು ಎಲ್‌ಟಿಟಿಇ
ಮುಖ್ಯ ಉದ್ದೇಶವಾಗಿತ್ತು. ದುರದೃಷ್ಟವಶಾತ್ ಆ ಕನಸು ನನಸಾಗಲೇ ಇಲ್ಲ.
ಬದಲಾಗಿ ಎಲ್‌ಟಿಟಿಇ ಮತ್ತು ಶ್ರೀಲಂಕಾ ನಡುವೆ ನೇರ ಸಂಘರ್ಷ ಆರಂಭವಾಯಿತು.
ಪರಿಣಾಮವಾಗಿ ಎಲ್‌ಟಿಟಿಇ ಲೋಕದ ಕಣ್ಣಿಗೆ ಭಯೋತ್ಪಾದಕ ಸಂಘಟನೆಯಾಯಿತು.
ಸಂಘಟನೆ ಪ್ರಬಲವಾಗುತ್ತಾ ಹೋದಂತೆ ಎಲ್‌ಟಿಟಿಇ ಕೂಡ ತನ್ನ ಮೂಲ
ಉದ್ದೇಶವನ್ನು ಮರೆತು ಭಯೋತ್ಪಾದಕ ಎನ್ನುವ ಹಣೆಪಟ್ಟಿ
ಸುತ್ತಿಕೊಳ್ಳಬಹುದಾದಂತಹ ಕಾರ್ಯಗಳಲ್ಲೇ ತನ್ನನ್ನು ತೊಡಗಿಸಿಕೊಂಡಿತು.
ಶ್ರೀಲಂಕಾ ಸರ್ಕಾರ ತನ್ನ ನೆಲದಲ್ಲಿ
ಕೈಗೊಂಡ ಎಲ್‌ಟಿಟಿಇ ವಿರೋಧಿ ಕಾರ್ಯಾಚರಣೆ ಮುಗ್ಧ ತಮಿಳರ ಬದುಕನ್ನು
ಅಕ್ಷರಶಃ ನರಕಸದೃಶವಾಗಿಸಿತು. ಅಮಾಯಕ ಜನರ ಮೇಲೆ ಬಾಂಬ್ ದಾಳಿ ಮಾಡುವ
ಮೂಲಕ ಶ್ರೀಲಂಕಾ ಸೇನೆ ಹಿಂದೆಂದೂ ಕಾಣದಷ್ಟು ಮಾನವ ಹಕ್ಕು ಉಲ್ಲಂಘನೆ
ಪ್ರಕರಣಗಳಿಗೆ ಮುನ್ನುಡಿ ಬರೆಯಿತು. ತನ್ನ ಮಗ್ಗುಲಲ್ಲೇ ಇಷ್ಟೆಲ್ಲಾ
ನಡೆಯುತ್ತಿದ್ದರೂ ಭಾರತ ಯಾವುದೇ ಪ್ರತಿಕ್ರಿಯೆ ಇಲ್ಲದೆ ತನ್ನ ಪಾಡಿಗೆ
ತಾನಿತ್ತು. ಅಕ್ಕ ಪಕ್ಕದ ರಾಷ್ಟ್ರಗಳಲ್ಲಿ ನಡೆಯುವ ಸಂಗತಿಗಳಿಗೆ
ಭಾರತದಷ್ಟು ಬಹುಶಃ ಜಗತ್ತಿನ ಯಾವ ರಾಷ್ಟ್ರವೂ
ಸಂವೇದನಾರಹಿತವಾಗಿರಲಿಕ್ಕಿಲ್ಲ. ಭಾರತದ ಈ ವಿಲಕ್ಷಣ ಮನಸ್ಥಿತಿಯ ಮೂಲ
ಹುಡುಕಿಕೊಂಡು ಹೊರಟರೆ ಅದು ನೆಹರು ಕಾಲಕ್ಕೇ ಕೊಂಡೊಯ್ಯುತ್ತದೆ. ನೆಹರು
ಸ್ವಲ್ಪ ನಿಷ್ಠುರವಾದ ನಿಲುವು ಪ್ರದರ್ಶಿಸಿದ್ದರೆ ಅಂದೇ ಶ್ರೀಲಂಕಾದ
ತಮಿಳರಿಗೆ ನ್ಯಾಯಯುತ ಮೂಲಭೂತ ಹಕ್ಕುಗಳನ್ನು, ಘನತೆಯ ಬದುಕನ್ನು
ಕೊಡಿಸುವುದು ಅಷ್ಟೇನೂ ಕಷ್ಟದ ಸಂಗತಿಯಾಗಿರಲಿಲ್ಲ. ಏಕೆಂದರೆ,
ಪಾಕಿಸ್ತಾನದಂತಲ್ಲದೆ ಶ್ರೀಲಂಕಾ ಒಂದು ಪ್ರಜಾಪ್ರಭುತ್ವ
ರಾಷ್ಟ್ರವಾಗಿದೆಯಲ್ಲವೇ? ಈಗ ಎಂಥ ಸನ್ನಿವೇಶ ಸೃಷ್ಟಿಯಾಗಿದೆ ಎಂದರೆ,
ನಮ್ಮ ನೆರೆಯ ರಾಷ್ಟ್ರ ಚೀನಾ ಚಾಣಾಕ್ಷತನದಿಂದ ಪಾಕಿಸ್ತಾನದಿಂದ ಶ್ರೀಲಂಕಾ,
ಬಾಂಗ್ಲಾದೇಶ, ನೇಪಾಳದವರೆಗೆ ದಕ್ಷಿಣ ಏಷ್ಯಾದ ಎಲ್ಲಾ ರಾಷ್ಟ್ರಗಳಲ್ಲೂ
ತನ್ನ ಪ್ರಭಾವ ಬೀರುವ ಮೂಲಕ ಭಾರತದ ಕುತ್ತಿಗೆಗೆ ಕುಣಿಕೆ ಬಿಗಿಯುತ್ತಿದೆ.
ಹಾಗೆ ನೋಡಿದರೆ, ನೆರೆರಾಷ್ಟ್ರಗಳಲ್ಲಿನ ಭಾರತ ವಿರೋಧಿ ಶಕ್ತಿಗಳನ್ನು
ಪೋಷಿಸುತ್ತಿರುವುದೇ ಚೀನಾ.
ಭಾರತದ ಎದುರು ಇರುವ, ಶಕ್ತಿಶಾಲಿ ಹಾಗೂ
ನಿಚ್ಚಳ ಶತ್ರ್ರುವೆಂದರೆ ಅದು ಚೀನಾವೇ. ಅದು ಲೆಕ್ಕ-ಪತ್ರದಲ್ಲಿ ತೋರಿಸುವ
ಪ್ರಮಾಣ ಗಮನಿಸಿದರೇ ಭಾರತದ ಮಿಲಿಟರಿ ಶಕ್ತಿಗಿಂತ ಎರಡು ಪಟ್ಟು ಹೆಚ್ಚಿನ
ಪ್ರಮಾಣದ ಮಿಲಿಟರಿ ಶಕ್ತಿ ಹೊಂದಿದೆ. ಆದರೆ, ಸರ್ವಾಧಿಕಾರಿ ಆಡಳಿತ
ಹೊಂದಿರುವ ಚೀನಾ ತಾನು ಘೋಷಿಸಿದ ಪ್ರಮಾಣಕ್ಕಿಂತ ಕನಿಷ್ಠ ಐದು ಪಟ್ಟು
ಹೆಚ್ಚಿನ ಮಿಲಿಟರಿ ಶಕ್ತಿಯನ್ನು ಸಂಪಾದಿಸಿಕೊಂಡಿದ್ದರೆ ಅದರಲ್ಲಿ ಅಚ್ಚರಿ
ಪಡುವ ಅಂಶಗಳೇನೂ ಇಲ್ಲ. ಇವೆಲ್ಲಾ ಭಾರತದ ಪಾಲಿಗೆ ಆತಂಕಕಾರಿ ಸಂಗತಿಗಳು.
ಈಗ ಶ್ರೀಲಂಕಾದ ತಮಿಳರ ಸಂಕಷ್ಟಗಳ ಕುರಿತು
ಮಾತನಾಡುವುದಾದರೆ, ಪ್ರಪಂಚದಾದ್ಯಂತ ವಾಸಿಸುತ್ತಿರುವ ತನ್ನ ಜನರ ಸುರಕ್ಷತೆ
ಮತ್ತು ಹಕ್ಕುಗಳ ಬಗ್ಗೆ ತಾನು ಹೊಂದಿರುವ ಬದ್ಧತೆಯನ್ನು ಜಗತ್ತಿಗೆ
ಮನವರಿಕೆ ಮಾಡಿಕೊಡುವ ಸುವರ್ಣಾವಕಾಶ ಭಾರತದ ಮುಂದಿದೆ. ಜಗತ್ತಿನ
ಕಣ್ಣೆದುರಲ್ಲಿಯೇ ತಮಿಳರ ಮೇಲೆ ನಡೆದ ಈ ಅಮಾನವೀಯ ಅತ್ಯಾಚಾರ ಹಾಗೂ ಮಾನವ
ಹಕ್ಕುಗಳ ಉಲ್ಲಂಘನೆ ನೆರೆಯ ರಾಷ್ಟ್ರವಾದ ಭಾರತದ ಸಾಮರ್ಥ್ಯ ಹಾಗೂ ಅದರ
ಅಸ್ತಿತ್ವಕ್ಕೆ ಒಡ್ಡಿದ ಸವಾಲು ಎಂದರೆ ತಪ್ಪಾಗಲಾರದು. ತನಗೂ ಅವಶ್ಯ
ಬಿದ್ದರೆ ನಿಷ್ಠುರ ಕ್ರಮ ಕೈಗೊಳ್ಳುವ ಸಾಮರ್ಥ್ಯವಿದೆ ಎಂಬ ದಿಟ್ಟತನ
ಪ್ರದರ್ಶಿಸುವ ಸಮಯ ಭಾರತಕ್ಕೆ ಬಂದೊದಗಿದೆ. ಅದು ಈಗ ತಾನೇ ಅಧಿಕಾರದ
ಚುಕ್ಕಾಣಿ ಹಿಡಿದಿರುವ ಹೊಸ ಸರ್ಕಾರದ ವಿದೇಶಾಂಗ ನೀತಿಗಳಲ್ಲೂ
ಪ್ರತಿಫಲಿಸಿದರೆ ದೇಶದ ಹಿತದೃಷ್ಟಿಯಿಂದ ಒಳ್ಳೆಯದು. |