|
ಸಿಖ್ಖರ ಕುರಿತ ಪಾಕ್ ಸರ್ಕಾರದ ಧೋರಣೆ
ಪಾಕಿಸ್ತಾನ ಸರ್ಕಾರ ಬಹುಸಂಖ್ಯಾತ ಮುಸ್ಲಿಂ
ಸಮುದಾಯಕ್ಕೆ ನೀಡಿರುವ ಎಲ್ಲಾ ಸವಲತ್ತುಗಳನ್ನೂ ಇನ್ನಿತರ ಅಲ್ಪಸಂಖ್ಯಾತ
ಸಮುದಾಯಗಳಿಗೂ ನೀಡಿದೆ. ಹಿಂದೂ, ಸಿಖ್ ಹಾಗೂ ಕ್ರಿಶ್ಚಿಯನ್ ಸಮುದಾಯಗಳಿಗೆ
ಎಲ್ಲಾ ಬಗೆಯ ಹಕ್ಕುಗಳನ್ನೂ ನೀಡಲಾಗಿದೆ. ಅಲ್ಪಸಂಖ್ಯಾತರ ಮೇಲೆ
ದೌರ್ಜನ್ಯವೆಸಗಿದ ಸಂದರ್ಭಗಳು ವಿರಳ. ನಾನು ಈ 'ಸಿಖ್ ನೌಜವಾನ್ ಸಭಾ'
ಸ್ಥಾಪಿಸಿದ್ದು ಯಾವುದೇ ಹಕ್ಕು ಪ್ರತಿಪಾದಿಸುವುದಕ್ಕೆ ಅಲ್ಲ; ಸಮಾಜದ
ಏಳಿಗೆಯಲ್ಲಿ ಯುವಜನತೆಯನ್ನು ತೊಡಗಿಸಿಕೊಳ್ಳುವ ಉದ್ದೇಶದಿಂದ.
ಅಫ್ಘಾನಿಸ್ತಾನದಲ್ಲಿರುವ ಸಿಖ್ ಸಮಾಜದ
ಸ್ಥಿತಿ-ಗತಿ ಹೇಗಿದೆ?
ಅಫ್ಘಾನಿಸ್ತಾನದಲ್ಲಿ ಹಿಂದೂ ಹಾಗೂ ಸಿಖ್
ಸಮುದಾಯಕ್ಕೆ ಸೇರಿದ ಸುಮಾರು 2,400 ಮಂದಿ ವಾಸಿಸುತ್ತಿದ್ದಾರೆ. ಈಗ
ಅಲ್ಲಿಂದ ಕೇವಲ ಹಿಂದೂಗಳು ಅಥವಾ ಸಿಖ್ ಸಮುದಾಯದವರು ಮಾತ್ರ ವಲಸೆ
ಹೋಗುತ್ತಿಲ್ಲ. ಅಲ್ಲಿನ ಸುಮಾರು ಶೇ. 90ರಷ್ಟು ಮುಸಲ್ಮಾನರು ಕೂಡ ತಮ್ಮ
ಮನೆ-ಮಠ ತೊರೆದು ಹೋಗುತ್ತಿದ್ದಾರೆ. ಈಗಂತೂ ಅಫ್ಘಾನಿಸ್ತಾನ ಎಲ್ಲರಿಗೂ
ಅಸುರಕ್ಷಿತವೆನಿಸಿಬಿಟ್ಟಿದೆ. ಸತತವಾಗಿ ಬಾಂಬು ಸಿಡಿಯುವ ಪ್ರದೇಶದಲ್ಲಿ
ವಾಸಿಸಲು, ಅದರಲ್ಲೂ ಕುಟುಂಬದೊಡನೆ ವಾಸಿಸಲು, ಯಾರು ತಾನೇ ಇಚ್ಛಿಸುತ್ತಾರೆ?
ಆದ್ದರಿಂದ ಸಿಖ್ಖರ ಜೊತೆಗೆ ಅಲ್ಲಿ ವಾಸಿಸುತ್ತಿದ್ದ ಮುಸ್ಲಿಮರೂ ಆ
ಪ್ರದೇಶದಿಂದ ಕಾಲುಕೀಳುತ್ತಿದ್ದಾರೆ.
ಖಾಲಿಸ್ತಾನ ಬೇಡಿಕೆ ಕುರಿತು
ಸ್ವತಃ ಸಿಖ್ ಸುಮುದಾಯಕ್ಕೆ ಸೇರಿದ ಹಾಗೂ
ಪಾಕಿಸ್ತಾನ್ ಸಿಖ್ ಸಮಾಜದ ಏಳ್ಗೆಗಾಗಿ ಹೋರಾಡುತ್ತಿರುವ ನನಗಂತೂ ಈವರೆಗೆ
ಸಿಖ್ ಸಮುದಾಯದ ಯಾರೊಬ್ಬರೂ ಪ್ರತ್ಯೇಕ ರಾಷ್ಟ್ರಕ್ಕಾಗಿ ಧ್ವನಿ ಎತ್ತಿದ್ದು
ಕಂಡಿಲ್ಲ. ಒಂದು ವೇಳೆ ಖಾಲಿಸ್ತಾನ ತಮ್ಮ ಜನ್ಮಸಿದ್ಧ ಹಕ್ಕು ಎಂಬ
ಭಾವನೆಯನ್ನು ಸಿಖ್ ಸಮುದಾಯ ವ್ಯಕ್ತಪಡಿಸಿದ್ದೇ ಆದರೆ ಆ ಬೇಡಿಕೆಯನ್ನು
ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಏಕೆಂದರೆ, ಈ ಪ್ರತ್ಯೇಕ ರಾಷ್ಟ್ರದ
ಬೇಡಿಕೆಯನ್ನು ವ್ಯಕ್ತಪಡಿಸುತ್ತಿರುವುದು ಕೇವಲ ಬೆರಳೆಣಿಕೆಯಷ್ಟು ಜನರಲ್ಲ,
ಬದಲಿಗೆ ಪ್ರಪಂಚದಾದ್ಯಂತ ವಾಸಿಸುತ್ತಿರುವ ಸಿಖ್ ಸಮುದಾಯದ ಆಶಯ ಆದು.
ಪ್ರತ್ಯೇಕ ರಾಷ್ಟ್ರ ಬಯಸುವುದು ಸರಿಯೋ, ತಪ್ಪೋ ಎಂಬುದನ್ನು ವಿವೇಚಿಸುವ
ಅಧಿಕಾರ ನನಗಿಲ್ಲ. ಆದರೆ ಈ ಸಂಗತಿಯನ್ನು ಮರೆಮಾಚಿ, ತಮ್ಮ ರಾಜಕೀಯ ಬೇಳೆ
ಬೇಯಿಸಿಕೊಳ್ಳುವುದನ್ನು ಬಿಟ್ಟು ಅದರ ಗಂಭೀರತೆಯನ್ನು ಅರಿತು ಅದಕ್ಕೆ ಸೂಕ್ತ
ಕ್ರಮ ಕೈಗೊಳ್ಳುವ ಹೊಣೆಗಾರಿಕೆ ನಮ್ಮ ರಾಜಕೀಯ ಪಕ್ಷಗಳ ಮೇಲಿದೆ ಎಂಬುದಷ್ಟೇ
ನನಗೀಗ ಹೇಳಲು ಸಾಧ್ಯ. ಅಮೆರಿಕ, ಲಂಡನ್, ಮಲೇಷ್ಯಾ ದೇಶಗಳಲ್ಲಿ
ವಾಸಿಸುತ್ತಿರುವ ನಮ್ಮ ಸಿಖ್ ಬಾಂಧವರ ಜೊತೆ ಸಾಕಷ್ಟು ಬಾರಿ ಚರ್ಚಿಸಿದ್ದೇನೆ.
ಅವರಾರಿಗೂ ಪ್ರತ್ಯೇಕ ರಾಷ್ಟ್ರದ ಆಕಾಂಕ್ಷೆ ಇಲ್ಲ. 9/11ರ ಭಯೋತ್ಪಾದಕ
ದಾಳಿಯ ನಂತರವಂತೂ 'ಪಗಡಿ' (ಟರ್ಬನ್) ಧರಿಸಿಕೊಳ್ಳುತ್ತಾರೆ ಎಂಬ ಒಂದೇ
ಕಾರಣಕ್ಕೆ ಸಿಖ್ ಸಮುದಾಯದವರ ಮೇಲೆ ಆಕ್ರಮಣಗಳಾಗುತ್ತಿರುವ ವರದಿಗಳನ್ನು
ಪತ್ರಿಕೆಗಳಲ್ಲಿ ಓದುತ್ತಲೇ ಇರುತ್ತೇವೆ. ನಮ್ಮ ಪ್ರತಿಭಟನೆಯನ್ನು ದಾಖಲಿಸುವ
ಭರಾಟೆಯಲ್ಲಿ ಒಂದು ಸಮಾಜದಲ್ಲಿ ಕೆಟ್ಟವರಷ್ಟೇ ಅಲ್ಲದೆ ಒಳ್ಳೆಯವರೂ
ಇರುತ್ತಾರೆ ಎಂಬ ಅಂಶವನ್ನು ಮರೆಯಬಾರದು. ಬೆರಳೆಣಿಕೆಯಷ್ಟಿರುವ ಕೆಟ್ಟ
ವ್ಯಕ್ತಿಗಳಿಂದಾಗಿ ಇಡೀ ಅಮೆರಿಕವೇ ಸಿಖ್ಖರ ಮೇಲೆ ದೌರ್ಜನ್ಯವೆಸಗುತ್ತಿದೆ
ಎಂದು ಆಪಾದಿಸುವುದು ಸರಿಯಲ್ಲ. ಪ್ರತಿಯೊಬ್ಬರಿಗೂ ಅವರವರ ಭದ್ರತೆ ಮುಖ್ಯ.
ಭಯೋತ್ಪಾದನೆಯಲ್ಲಿ, ಹಿಂಸಾಚಾರದಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಯಾವ ಧರ್ಮವೂ
ಇಲ್ಲ, ಅವರು ಯಾವ ಸಮುದಾಯಕ್ಕೂ ಸೇರಿದವರಲ್ಲ ಎಂಬುದಂತೂ ಸತ್ಯ. ಅವರು
ನಡೆಸುವ ಎಲ್ಲಾ ದುಷ್ಕೃತ್ಯಗಳ ಹಿಂದೆಯೂ ಸ್ವಾರ್ಥ ಅಡಗಿರುತ್ತದೆ ಎಂಬುದನ್ನು
ಮರೆಯುವಂತಿಲ್ಲ.
ಸಿಖ್ ಸಮಾಜದ ಸ್ಥಿತಿ-ಗತಿ
ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಜನರಲ್
ಪರ್ವೇಜ್ ಮುಷರಫ್ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವುದಕ್ಕೋಸ್ಕರ ಹೊಸ
ಕಾನೂನು ಜಾರಿಗೆ ತಂದಿದ್ದರು . ಈ ಕಾನೂನಿನ ದೆಸೆಯಿಂದಾಗಿ ಸಿಖ್
ಸಮುದಾಯದವರೂ ಇನ್ನು ಮುಂದೆ ಪಾಕಿಸ್ತಾನ ಸೇನೆಗೆ ಸೇರಬಹುದು. ಅಲ್ಪಸಂಖ್ಯಾತರ
ಹಕ್ಕುಗಳು ಅಬಾಧಿತವಾಗಿವೆ ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನ.
ಪ್ರತಿಯೊಂದು ಸರ್ಕಾರಿ ಇಲಾಖೆಗಳಲ್ಲೂ ಅಲ್ಪಸಂಖ್ಯಾತರಿಗೆ ಶೇ. 5ರಷ್ಟು
ಮೀಸಲಾತಿ ಒದಗಿಸಲಾಗಿದೆ. ನಮ್ಮ ಜನಪ್ರತಿನಿಧಿಗಳ ಉದಾಸೀನ ಮನೋಭಾವದಿಂದಾಗಿ ಈ
ಮೀಸಲಾತಿ ಸೌಲಭ್ಯ ತುಂಬಾ ತಡವಾಗಿ ದೊರೆಯಿತು. ಈವರೆಗೆ ಅಲ್ಪಸಂಖ್ಯಾತ
ಸಮುದಾಯದ ಹಕ್ಕುಗಳ ಕುರಿತು ವಿಧಾನಸಭೆಯಲ್ಲಿ ಧ್ವನಿ ಎತ್ತುವವರೇ ಇರಲಿಲ್ಲ.
ಈಗ ಪಾಕ್ ಜನರಲ್ಲಿ ರಾಜಕೀಯ ಅರಿವು ಹೆಚ್ಚುತ್ತಿದ್ದು ಹಿಂದೂಗಳು ಹಾಗೂ
ಸಿಖ್ಖರು ಗಣನೀಯ ಪ್ರಮಾಣದಲ್ಲಿ ಸಂಸತ್ ಪ್ರವೇಶಿಸುತ್ತಿದ್ದಾರೆ. ಆದ್ದರಿಂದ
ಇನ್ನು ಮುಂದೆ ಅಲ್ಪಸಂಖ್ಯಾತರು ತಮ್ಮ ಯಾವ ಹಕ್ಕಿನಿಂದಲೂ
ವಂಚಿತರಾಗುವುದಿಲ್ಲ ಎಂಬ ಭರವಸೆ ನನಗಿದೆ. ನಮಗೆ ಶಾಂತಿ-ಸಹಬಾಳ್ವೆಯಲ್ಲಿ
ಅಚಲ ನಂಬಿಕೆ. ಇದೇ ಪ್ರಪಂಚದಾದ್ಯಂತ ನೆಲೆಸಿರುವ ಸಿಖ್ಖರ ಮೂಲಮಂತ್ರ ಕೂಡ.
ಟಿಎಸ್ಐ
ನಿರೂಪಣೆ: ಸ್ಪೃಹಾ ಶ್ರೀವಾಸ್ತವ |