|

ಬದಲಾವಣೆ ಗಾಳಿಗೆ ಬಾಗಿದ ಪಂಜಾಬ್
ಒಂದೊಮ್ಮೆ ಉಗ್ರಗಾಮಿಗಳ ಸ್ವರ್ಗವಾಗಿದ್ದ ಪಂಜಾಬ್
ಇಂದು ಪ್ರಗತಿಯ ಪಥದಲ್ಲಿ ಮುನ್ನಡೆದಿದೆ ಎನ್ನುತ್ತಾರೆ ಸತೀಶ್ ಜೇಕಬ್
ದಶಕಗಳ
ಹಿಂದೆ ಭಯೋತ್ಪಾದನೆ ಎಂಬುದು ಇಲ್ಲಿನ ದಿನನಿತ್ಯದ ವಹಿವಾಟಾಗಿತ್ತು.
ಬೇರೆಲ್ಲಾ ಕಡೆಗಳಿಗಿಂತ ಗ್ರಾಮೀಣ ಭಾಗದಲ್ಲಿ ಪ್ರಖರಗೊಂಡಿದ್ದ ಭಯೋತ್ಪಾದನೆಯ
ಪೆಡಂಭೂತದ ಕಾಲಿಗೆ ಸಿಲುಕಿ ಛಿದ್ರಗೊಂಡ ಬದುಕುಗಳೆಷ್ಟೋ! ಈ ಭಯೋತ್ಪಾದನೆ
ಸಾವಿರಾರು ಜನರ ಬದುಕನ್ನೇ ಮೂರಾಬಟ್ಟೆಯಾಗಿಸಿತ್ತು. ಇಂದು ಮತ್ತೆ ಅದೇ
ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದೇನೆ. ಗ್ರ್ಯಾಂಡ್ ಟ್ರಂಕ್ ರಸ್ತೆಯನ್ನು
ಕೂಡಿ ಪವಿತ್ರ ನಗರ ಅಮೃತಸರದೆಡೆಗೆ ಸಾಗುವ ಈ ರಸ್ತೆಯಲ್ಲಿ
ಪ್ರಯಾಣಿಸುತ್ತಿದ್ದ ನಾನು ಹಾಗೂ ಸ್ನೇಹಿತ ಮಾರ್ಕ್ ಟುಲಿ ಅದೆಷ್ಟು
ಕಳವಳಗೊಂಡಿದ್ದೆವು ಎನ್ನುವುದು ನೆನಪಾಯಿತು. ಇದೇ ಅಂಬಾಲ ಹಾಗೂ ಅಮೃತಸರ
ನಡುವಿನ ಪ್ರಾಂತದಲ್ಲಿ ಉಗ್ರಗಾಮಿ ಚಟುವಟಿಕೆಗಳು ಅತ್ಯಂತ
ಕ್ರಿಯಾಶೀಲವಾಗಿದ್ದದ್ದು. ಈ ಹಿಂಸಾಚಾರದ ಭೀಕರತೆಯ ಮುಂದೆ ಅಲ್ಲಿನ
ಅರ್ಥವ್ಯವಸ್ಥೆ ತಳಕಂಡಿತ್ತು. ಬೆರಳೆಣಿಕೆಯಷ್ಟಿದ್ದ ಎತ್ತಿನ ಗಾಡಿ, ಟ್ರಕ್‌ಗಳನ್ನು
ಹೊರತು ಪಡಿಸಿದರೆ ಈ ರಸ್ತೆ ಭಾಗಶಃ ನಿರ್ಜನವಾಗಿತ್ತು. ಈ ಭಾಗದಲ್ಲಿ
ಬಸ್ಸುಗಳನ್ನು ತಡೆದು ಸಿಖ್‌ರಲ್ಲದ ಜನರನ್ನು ಬಸ್ಸಿನಿಂದ ಹೊರಗೆಳೆದು
ಅಮಾನುಷವಾಗಿ ಹತ್ಯೆಗೈಯುತ್ತಿದ್ದ ಪ್ರಕರಣಗಳು ಹೆಚ್ಚುತ್ತಿದ್ದರಿಂದ
ಜನಸಾಮಾನ್ಯರು ಈ ಪ್ರಾಂತದಲ್ಲಿ ಪ್ರಯಾಣಿಸಲೇ ಹಿಂಜರಿಯುತ್ತಿದ್ದರು.
ಸಿಖ್ ಉಗ್ರಗಾಮಿಗಳ ಹಿಡಿತವಿದ್ದ ಅಮೃತಸರದ
ಗ್ರಾಮೀಣ ಭಾಗದಲ್ಲಿ ಜನತೆ ಭಯದ, ಅನಿಶ್ಚಿತತೆಯ ಮಡುವಿನಲ್ಲೇ ಬದುಕು
ತಳ್ಳುವಂತಾಗಿತ್ತು. ರಾತ್ರಿ ಇರಲಿ, ಹಗಲು ಹೊತ್ತಿನಲ್ಲೇ ಜನ ಮನೆ ಬಿಟ್ಟು
ಹೊರ ಬರದ ಸ್ಥಿತಿ ನಿರ್ಮಾಣವಾಗಿತ್ತು. ಬೀದಿಯ ಪಕ್ಕದಲ್ಲಿರುವ ಟೀ ಅಂಗಡಿ
ತೆರೆಯುವುದಕ್ಕಾಗಲಿ ಅಥವಾ ಅಲ್ಲಿಗೆ ಹೋಗಿ ಟೀ ಕುಡಿದು ಬರುವುದಕ್ಕಾಗಲಿ ಜನ
ಹಿಂಜರಿಯುತ್ತಿದ್ದ ಕಾಲವಾಗಿತ್ತದು. ಸಿಖ್ ಉಗ್ರಗಾಮಿಗಳ ಅಟ್ಟಹಾಸದಿಂದಾಗಿ
ನಾಗರಿಕರು ಮನೆಯಿಂದ ಹೊರಗೆ ಕಾಲಿಟ್ಟರೆ ಮತ್ತೆ ಮನೆ ತಲುಪುವ ಬಗ್ಗೆ ಯಾವುದೇ
ಖಚಿತತೆ ಇಲ್ಲದೆ ಜೀವನ ತಳ್ಳುತ್ತಿದ್ದ ದಿನಗಳವು.
ಆದರೆ ಅದೇ ಪ್ರದೇಶಗಳಲ್ಲಿ ಇಂದು ಜನಜೀವನ
ಅತ್ಯಂತ ಸಹಜ ಸ್ಥಿತಿಗೆ ತಲುಪಿದೆ. ಅಲ್ಲಿನ ಪ್ರತಿಯೊಂದು ರಸ್ತೆಗಳೂ
ಜನನಿಬಿಡವಾಗಿವೆ. ಅಲ್ಲಿ ಸಂಚರಿಸುವಾಗ ಮೊದಲಿನಂತೆ ಪಂಜಾಬಿ 'ಭಾಂಗ್ರಾ' ಅಲೆ
ಅಲೆಯಾಗಿ ಕೇಳಿ ಬರುತ್ತಿದೆ. ಅದೂ ಅಲ್ಲದೆ ಲುಧಿಯಾನ ಹಾಗೂ ಅಮೃತಸರದ ನಡುವಿನ
ಗ್ರ್ಯಾಂಡ್ ಟ್ರಂಕ್ ರಸ್ತೆಯಂಚಿನಲ್ಲಿ ಬಹಳಷ್ಟು ಹೊಸ ಕಟ್ಟಡಗಳು
ತಲೆಯೆತ್ತಿವೆ. 'ಭಲ್ಲೇ ಭಲ್ಲೇ ಫಾರ್ಮ್' ಹೆಸರಿನ ರೆಸ್ಟೋರೆಂಟ್‌ಗಳು,
'ಲಾಸ್ ವೆಗಾಸ್' ಮನೋರಂಜನಾ ಪಾರ್ಕ್, ಡಿಸ್ನೀ ಥೀಮ್ ಪಾರ್ಕ್, ಹೆದ್ದಾರಿ
ಬದಿಯ ಹೊಟೇಲ್‌ಗಳು, ಬೃಹದಾಕಾರದ ಕಲ್ಯಾಣ ಮಂಟಪಗಳು ಹೀಗೆ ಮತ್ತೊಮ್ಮೆ ಪಂಜಾಬ್
ಜೀವಂತಿಕೆಯಿಂದ ನಳನಳಿಸುತ್ತಿದೆ.
ರಸ್ತೆಗಳೂ ಹೊಸ ಸ್ವರೂಪ ಪಡೆದು ಪಂಜಾಬ್‌ನ
ಪ್ರಗತಿಯನ್ನು ಸಾರಿ ಹೇಳುತ್ತಿವೆ. ಬ್ರಿಟಿಷ್ ಆಡಳಿತದ ಕಾಲದಲ್ಲಿ ಪೇಶಾವರ
ಹಾಗೂ ದೆಹಲಿಗೆ ಕೊಂಡಿಯಾಗಿದ್ದ ಗ್ರ್ಯಾಂಡ್ ಟ್ರಂಕ್ ರಸ್ತೆ ಇಂದು ಚತುಷ್ಪಥ
ರಸ್ತೆಯಾಗಿದೆ.
ದೆಹಲಿ-ಅಮೃತಸರದ ನಡುವೆ ಚಲಿಸುವ ಶತಾಬ್ಧಿ
ಎಕ್ಸಪ್ರೆಸ್ ರೈಲಿನಲ್ಲಿ ಕುಳಿತು ಕಿಟಕಿಯಲ್ಲಿ ಕಣ್ಣು ಹಾಯಿಸಿದರೆ ಕಳೆದ
ಎರಡು ದಶಕಗಳಲ್ಲಿ ಪಂಜಾಬ್ ಪಡೆದುಕೊಂಡ ಹೊಸ ಅಸ್ತಿತ್ವದ ಪರಿಚಯವಾಗದೇ ಇರದು.
ರೈಲಿನ ಎಕ್ಸಿಕ್ಯುಟಿವ್ ದರ್ಜೆಯಲ್ಲಿನ ಜನರು ಲ್ಯಾಪ್‌ಟಾಪ್ ಮೇಲೆ
ದೃಷ್ಟಿನೆಟ್ಟು ಧ್ಯಾನಸ್ಥ ಮುದ್ರೆ ಹೊತ್ತು ಕುಳಿತಿದ್ದರೆ ಅವರ ಮೊಬೈಲ್‌ಗಳು
ಮಾತ್ರ ಯಾವುದೇ ಮುಲಾಜಿಲ್ಲದೇ ಎಡೆಬಿಡದೇ ರಿಂಗಣಿಸುತ್ತಿರುತ್ತವೆ. ತಂಪು
ಪಾನೀಯ, ಕುರುಕಲು ತಿಂಡಿಗಳಿಂದ ತುಂಬಿದ ಟ್ರಾಲಿಗಳನ್ನು ತಳ್ಳುತ್ತಾ ಸಾಗುವ
ರೈಲ್ವೆ ಸಿಬ್ಬಂದಿ ಪ್ರಯಾಣಿಕ ಪ್ರಭುಗಳ ಸೇವೆಗಾಗಿ ಓಡಾಡುತ್ತಿರುತ್ತಾರೆ...
ಒಂದು ವಾಕ್ಯದಲ್ಲಿ ಹಿಡಿದಿಡಬೇಕೆಂದರೆ ಅಲ್ಲಿ ಸಂಪೂರ್ಣ ಸುಭಿಕ್ಷೆ ಹಾಗೂ
ಸಂತೃಪ್ತಿಯ ವಾತಾವರಣ ತುಂಬಿಕೊಂಡಿತ್ತು.
ಶತಾಬ್ಧಿ ಎಕ್ಸಪ್ರೆಸ್‌ನಲ್ಲಿ ಯುವ ಉದ್ಯಮಿಗಳೇ
ಹೆಚ್ಚಾಗಿ ಪ್ರಯಾಣಿಸುತ್ತಾರೆ. ಅವರಲ್ಲಿ ಹೆಚ್ಚಿನ ಉದ್ಯಮಿಗಳು ಕಟ್ಟಡ
ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು. ಇತ್ತೀಚಿನ ದಿನಗಳಲ್ಲಿ ಪಂಜಾಬ್‌ನಲ್ಲಿ
ಕಟ್ಟಡ ನಿರ್ಮಾಣ ಕ್ಷೇತ್ರ ಶರವೇಗದಿಂದ ಬೆಳೆಯುತ್ತಿದ್ದು ರಾಜ್ಯವೇ ನಿರ್ಮಾಣ
ಹಂತದಲ್ಲಿರುವ ಒಂದು ಕಟ್ಟಡವೇನೊ ಎಂಬಂತೆ ಭಾಸವಾಗುತ್ತದೆ. ಲುಧಿಯಾನವನ್ನೇ
ಉದಾಹರಣೆಯಾಗಿ ತೆಗೆದುಕೊಂಡರೆ, ಆ ನಗರದ ಒಂದು ಪಾರ್ಶ್ವ ಶಾಪಿಂಗ್ ಮಾಲ್ ಹಾಗೂ
ವಾಣಿಜ್ಯ ಮಳಿಗೆಗಳಿಂದ ತುಂಬಿ ಗುರುತು ಹಿಡಿಯಲು ಸಾಧ್ಯವಾಗದಷ್ಟು ಬದಲಾಗಿದೆ.
ಕೃಷಿಭೂಮಿಗಳು ವಸತಿ ಸಮುಚ್ಛಯಗಳು, ವಾಣಿಜ್ಯ ಮಳಿಗೆಗಳು ಹಾಗೂ ಕಚೇರಿಗಳಾಗಿ
ಮಾರ್ಪಾಡಾಗುತ್ತಿವೆ.
ಚಂಡೀಗಢ
ಹಾಗೂ ಲುಧಿಯಾನದಲ್ಲಿ ಹೊಸ ಟೌನ್‌ಶಿಪ್ ನಿರ್ಮಾಣವಾಗುತ್ತಿದ್ದು ಅಕ್ಕ ಪಕ್ಕದ
ಸ್ಯಾಟಲೈಟ್ ನಗರಗಳಲ್ಲೂ ಹೊಸ ಟೌನ್‌ಶಿಪ್‌ಗಳು ತಲೆಯೆತ್ತುತ್ತಿವೆ.
ಚಂಡೀಗಢಕ್ಕೆ ತೆರಳುವ ಮಾರ್ಗದ ಶತಾಬ್ಧಿ ರೈಲಿನಲ್ಲಿ ಪರಿಚಯವಾದ ಉದ್ಯಮಿ
ಸೌರಭ್ ವಿಗ್, "ಹೊಸ ಕೈಗಾರಿಕೆಗಳು ದೊಡ್ಡ ಪ್ರಮಾಣದಲ್ಲಿ ಪಂಜಾಬ್‌ಗೆ
ಕಾಲಿಕ್ಕುತ್ತಿವೆಯಾದ್ದರಿಂದ ಜನಸಂಖ್ಯೆಯೂ ಮಿತಿಮೀರಿ ಬೆಳೆಯುತ್ತಿದೆ.
ಹಾಗಾಗಿ ಕಚೇರಿ ಹಾಗೂ ವಾಸಯೋಗ್ಯ ಮನೆಗಳ ಬೇಡಿಕೆ ಹಿಂದೆಂದೂ ಕಾಣದಷ್ಟು ಏರಿದೆ.
ಹೊಸದಾಗಿ ಪ್ರಾರಂಭವಾಗುತ್ತಿರುವ ಕಾಲ್‌ಸೆಂಟರ್‌ಗಳನ್ನೇ ಒಮ್ಮೆ ನೋಡಿ. ತಮ್ಮ
ಕಚೇರಿ ಆರಂಭಿಸಲು ಹಾಗೂ ಅದರಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳ ವಾಸಕ್ಕೆ
ಎಷ್ಟು ಸ್ಥಳವಿದ್ದರೂ ಸಾಲದು" ಎನ್ನುತ್ತಾರೆ.
ಪಂಜಾಬ್‌ನಲ್ಲಿ ಜಮೀನುಗಳಿಗೆ ಈಗ ಚಿನ್ನದ ಬೆಲೆ.
ಕಳೆದ ದಶಕದಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ಜಮೀನಿನ ಬೆಲೆ ಈಗ ಮೂರು ಪಟ್ಟು
ಏರಿದೆ. ರಿಯಲ್ ಎಸ್ಟೇಟ್ ಉದ್ಯಮವೂ ಬಾನಿಗೇರುತ್ತಿದೆ. ರಾಷ್ಟ್ರದ ನಾನಾ
ಭಾಗದ ಉದ್ಯಮಿಗಳು ಇಲ್ಲಿನ ಜಮೀನುಗಳ ಮೇಲೆ ಕಣ್ಣು ಮುಚ್ಚಿ ಹಣ
ಹೂಡುತ್ತಿದ್ದಾರೆ. ಅದೆಂಥದೇ ಜಮೀನು ಇರಲಿ ಮುಂದೊಮ್ಮೆ ತಮಗೆ ಲಾಭ ತಂದು
ಕೊಡುವುದು ಖಚಿತ ಎಂಬ ಭರವಸೆ ಆ ಉದ್ಯಮಿಗಳದು. ಅನಿವಾಸಿ ಭಾರತೀಯರೂ
ಫಲವತ್ತಾಗಿ ಬೆಳೆಯುತ್ತಿರುವ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹಣ ಹೂಡಿ ತಮ್ಮ
ಅದೃಷ್ಟವನ್ನು ಒರೆಗೆ ಹಚ್ಚುತ್ತಿದ್ದಾರೆ. ಈ ಮೊದಲಿನಂತೆ ತಾವು ದುಡಿದ
ಹಣದಲ್ಲಿ ಫಾರ್ಮ್ ಹೌಸ್‌ಗಳನ್ನೋ ಅಥವಾ ಮನೆಗಳನ್ನೋ ಕೊಂಡುಕೊಂಡು
ಸುಮ್ಮನಿರುವ ಪ್ರವೃತ್ತಿಗೆ ವ್ಯತಿರಿಕ್ತವಾಗಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ
ಬಂಡವಾಳ ಹೂಡುವತ್ತ ಒಲವು ತೋರುತ್ತಿದ್ದಾರೆ.
ಹಣ ಹೂಡಿಕೆಗೆ ಸೂಕ್ತ ಸ್ಥಳವಾಗಿ
ಮಾರ್ಪಾಡಾಗಿರುವ ಪಂಜಾಬ್ ಹೊಸ ಉದ್ಯಮಗಳನ್ನು ಕೈ ಬೀಸಿ ಕರೆಯುತ್ತಿದೆ.
ಮಾಹಿತಿ ಹಾಗೂ ತಂತ್ರಜ್ಞಾನ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ
ಪಂಜಾಬ್ ಸರ್ಕಾರ ನೂರು ಪ್ರತಿಶತ ವಿದೇಶಿ ಹೂಡಿಕೆಗೆ ಅವಕಾಶ ಕಲ್ಪಿಸಿದೆ.
ಚಂಡೀಗಢ ನಗರವೊಂದರಲ್ಲೇ ಸುಮಾರು ಒಂದು ಡಜನ್ ಕಾಲ್‌ಸೆಂಟರ್‌ಗಳು ತಲೆ
ಎತ್ತಿವೆ. ಇದರಿಂದಾಗಿ ವಿದ್ಯಾರ್ಥಿಗಳು, ನಿವೃತ್ತರು ಹಾಗೂ ಗೃಹಿಣಿಯರು
ಬಿಡುವಿನ ವೇಳೆಯಲ್ಲಿ ಹೆಚ್ಚುವರಿ ಕೆಲಸ ಮಾಡಿ ಸಂಪಾದನೆಗೆ ಇಳಿಯಲು
ಸಾಧ್ಯವಾಗಿದೆ.
ಮೊಹಾಲಿಯಂಥ ಚಿಕ್ಕ ಪಟ್ಟಣ ಕೂಡ
ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಹಿಂದೆ ಬಿದ್ದಿಲ್ಲ. ಹಳೆಯ ಸಿನೆಮಾ
ಮಂದಿರಗಳು, ಸುಸಜ್ಜಿತ ಮಲ್ಟಿಫ್ಲೆಕ್ಸ್‌ಗಳಾಗಿ ರೂಪಾಂತರ ಹೊಂದುತ್ತಿದ್ದರೆ,
ಆಧುನಿಕ ಆಸ್ಪತ್ರೆಗಳು, ಹೊಟೇಲ್‌ಗಳು, ವಾಣಿಜ್ಯ ಮಳಿಗೆಗಳು ಹಾಗೂ ಕಾಲ್‌ಸೆಂಟರ್‌ಗಳು
ಮೊಹಾಲಿಯ ಸ್ವರೂಪವನ್ನೇ ಬದಲಾಯಿಸುತ್ತಿವೆ. ಬಂಡವಾಳ ಹೂಡಿಕೆಗೆ ತೊಡಕಾಗಿರುವ
ಎಲ್ಲಾ ಕಾನೂನು ಅಂಶಗಳನ್ನೂ ನಿವಾರಿಸಿ ಹೂಡಿಕೆಗೆ ದಾರಿ ಮಾಡಿಕೊಡುವ
ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಅತೀ ಚಿಕ್ಕ ಕಾಲಾವಧಿಯಲ್ಲಿ ಹೊಸ ಉದ್ಯಮ
ಪ್ರಾರಂಭಿಸಲು ಪೂರಕ ವಾತಾವರಣ ಕಲ್ಪಿಸುವ ಭಾರತದ ರಾಜ್ಯಗಳಲ್ಲಿ ಪಂಜಾಬ್
ಮುಂದಿದೆ ಎಂದು ವಿಶ್ವಬ್ಯಾಂಕ್ ಅಭಿಪ್ರಾಯ ಪಟ್ಟಿದೆ.
ಉಗ್ರವಾದ ವ್ಯಾಪಕವಾಗಿದ್ದ ದಿನಗಳಲ್ಲಿ
ಅಮೃತಸರ ನಗರವನ್ನು ತೊರೆದಿದ್ದ ಶ್ರೀಮಂತ ವರ್ಗ ಈಗ ಮತ್ತೆ ಪ್ರವರ್ಧಮಾನಕ್ಕೆ
ಬರುತ್ತಿದ್ದು, ಈಗ ಅಲ್ಲಿ ನೆಲೆ ಕಂಡುಕೊಂಡಿರುವ ಹೊಸ ಉದ್ಯಮಿಗಳೊಂದಿಗೆ
ತಮ್ಮ ಉದ್ಯಮಗಳನ್ನೂ ಪುನರ್ ಸ್ಥಾಪಿಸುವಲ್ಲಿ ಸಕ್ರಿಯವಾಗಿದೆ. ಈ ಎಲ್ಲಾ
ಕಾರಣಗಳಿಂದಾಗಿ, 1985ರಲ್ಲಿ ಈ ಪ್ರದೇಶದಲ್ಲಿ ಎಕರೆಗೆ ಒಂದು ಲಕ್ಷ
ಮೌಲ್ಯವಿದ್ದ ಜಮೀನುಗಳು ಈಗ 15 ಮಿಲಿಯನ್ ಬೆಲೆ ಬಾಳುತ್ತಿವೆ.
ಪ್ರಸಿದ್ಧ ವಸತಿ ಹಾಗೂ ವಾಣಿಜ್ಯ ಪ್ರದೇಶ,
ಮಾಲ್ ರಸ್ತೆಯಲ್ಲಿದ್ದ ನಾಲ್ಕು ಎಕರೆಗಳ ನಿವೇಶನವೊಂದು ಇತ್ತೀಚೆಗೆ ಸುಮಾರು
21 ಕೋಟಿಗೆ ಬಿಕರಿಯಾಯಿತು.
ಉಗ್ರಗಾಮಿ ಚಟುವಟಿಕೆಗಳು ವ್ಯಾಪಕವಾಗಿದ್ದ
ಸಂದರ್ಭದಲ್ಲಿ ನಾನು ಆಗಾಗ ಜಲಂಧರ್‌ಗೆ ಭೇಟಿ ನೀಡುತ್ತಿದ್ದೆ. ಹಾಗೆ ಅಲ್ಲಿಗೆ
ತೆರಳಿದಾಗ ತಪ್ಪದೇ ಸಿಹಿ ತಿಂಡಿಗಾಗಿ 'ಲವ್ಲೀ ಸ್ವೀಟ್ಸ್' ಎಂಬ ಸಿಹಿ
ಅಂಗಡಿಗೆ ಧಾವಿಸುತ್ತಿದ್ದೆ. ಆ ಅಂಗಡಿಯ ಮಾಲಿಕ ನರೇಶ್ ಮಿತ್ತಲ್ ಮಧ್ಯ
ವಯಸ್ಕ ಹಾಗೂ ಚಟುವಟಿಕೆಯುಳ್ಳ ವ್ಯಕ್ತಿ. ಹಾಸ್ಯ, ನಗು ಹಾಗೂ ಗಾಸಿಪ್‌ಗಳೆಂದರೆ
ಆ ವ್ಯಕ್ತಿಗೆ ಅಚ್ಚು ಮೆಚ್ಚು. ಇಂದು ನರೇಶ್ ಮಿತ್ತಲ್ ನಗರದ ಗಣ್ಯ ಹಾಗೂ
ಪ್ರಭಾವಶಾಲಿ ಉದ್ಯಮಿಗಳಲ್ಲಿ ಒಬ್ಬರು. 'ಲವ್ಲೀ ಸ್ವೀಟ್ಸ್' ಅಂಗಡಿಯ ಜೊತೆಗೆ
ನರೇಶ್ ಮಿತ್ತಲ್ ತಮ್ಮ ಸಹೋದರರಾದ ಸುನಿಲ್ ಹಾಗೂ ಅಶೋಕ ಮಿತ್ತಲ್ ಜೊತೆಗೂಡಿ
ಕಾರು ಹಾಗೂ ದ್ವಿಚಕ್ರ ವಾಹನ ಶೋರೂಂಗಳ ಒಡೆತನ ಹೊಂದಿದ್ದಾರೆ. ಮಾತ್ರವಲ್ಲ
ಅರ್ಧ ಡಜನ್‌ನಷ್ಟು ಶೈಕ್ಷಣಿಕ ಕೇಂದ್ರಗಳನ್ನೂ ಮಿತ್ತಲ್ ಸಹೋದರರು
ಹೊಂದಿದ್ದಾರೆ. ಅವರ ಪ್ರತಿಯೊಂದು ಸಂಸ್ಥೆಯ ಹೆಸರೂ 'ಲವ್ಲೀ' ಎಂದೇ
ಪ್ರಾರಂಭವಾಗುತ್ತದೆ. ಅವರ ಸಂಸ್ಥೆಗಳಲ್ಲಿ ಪಂಜಾಬ್ ವಿಶ್ವವಿದ್ಯಾನಿಲಯದ
ವ್ಯಾಪ್ತಿಗೆ ಒಳಪಡುವ 'ಲವ್ಲೀ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಅಂಡ್
ಟೆಕ್ನಾಲಜಿ' ರಾಜ್ಯದ ಮೊತ್ತ ಮೊದಲ ಖಾಸಗೀ ವಿಶ್ವವಿದ್ಯಾನಿಲಯ ಎಂಬ
ಹೆಗ್ಗಳಿಕೆ ಹೊಂದಿದೆ.
ರಾಜ್ಯದಲ್ಲಿ ಈಗ ಕಂಡುಬರುತ್ತಿರುವ ಪ್ರಗತಿ
ಹಾಗೂ ಸುಭಿಕ್ಷೆ ಪರ್ವ ಪಂಜಾಬ್ ಪಾಲಿಗೆ ಶಾಶ್ವತ ಎಂಬುದರ ಬಗ್ಗೆ ಮಿತ್ತಲ್
ಸಹೋದರರಲ್ಲಿ ಯಾವುದೇ ಅನುಮಾನವಿಲ್ಲ. ಇತ್ತೀಚಿಗಿನ ಸಮೀಕ್ಷೆ ಪ್ರಕಾರ ಪಂಜಾಬ್‌ನ
ಚಂಡೀಗಢ ರಾಷ್ಟ್ರದಲ್ಲಿಯೇ ಅತೀ ಹೆಚ್ಚು ಒಟ್ಟು ತಲಾ ಆದಾಯ ಹೊಂದಿದ
ರಾಜ್ಯವಾಗಿ ಹೊರ ಹೊಮ್ಮಿದೆ. ಒಟ್ಟು ತಲಾ ಆದಾಯದಲ್ಲಿ ಪಂಜಾಬ್ ಐದನೇ
ಸ್ಥಾನದಲ್ಲಿದೆ. ಮುಂಬೈ ಸೇರಿದಂತೆ ರಾಷ್ಟ್ರಗಳ ಯಾವುದೇ ನಗರದಲ್ಲಿ
ಇಲ್ಲದಷ್ಟು ಮರ್ಸಿಡಿಸ್ ಕಾರುಗಳು ಲುಧಿಯಾನ ರಸ್ತೆಗಳಲ್ಲಿ ಕಂಡು ಬರುತ್ತವೆ.
ರಾಜ್ಯದಲ್ಲಿ ಪ್ರಾರಂಭವಾಗಿರುವ ಔದ್ಯಮಿಕ
ಕ್ರಾಂತಿ ಇಲ್ಲಿಗೇ ನಿಲ್ಲುವಂತೆ ಕಾಣುತ್ತಿಲ್ಲ. ಟಾಟಾ, ರಿಲಯನ್ಸ್, ಭಾರ್ತಿ
ಸೇರಿದಂತೆ ರಾಷ್ಟ್ರದ ಬಹುದೊಡ್ಡ ಸಂಸ್ಥೆಗಳು ಪಂಜಾಬ್‌ನಲ್ಲಿ ಬಂಡವಾಳ ಹೂಡಲು
ಮುಂದೆ ಬಂದಿವೆ. ದೂರವಾಣಿ ಉದ್ಯಮದಲ್ಲಿ ಕ್ರಾಂತಿ ಮಾಡಿದ 'ಭಾರ್ತಿ'
ಸಂಸ್ಥೆಯ ಮುಖ್ಯಸ್ಥ ಸುನೀಲ್ ಮಿತ್ತಲ್ ಪಂಜಾಬ್‌ನಲ್ಲಿ ಬೆಳೆದ ಹಣ್ಣು,
ತರಕಾರಿಗಳು ಹಾಗೂ ಗಿಡಮೂಲಿಕೆಗಳಿಗೆ ದೇಶದಲ್ಲೆಡೆ ಸ್ಥಾಪಿಸಲಾಗಿರುವ ತಮ್ಮ
ಚಿಲ್ಲರೆ ವ್ಯಾಪಾರ ಮಳಿಗೆಗಳಲ್ಲಿ ಮಾರುಕಟ್ಟೆ ಒದಗಿಸುವ ಯೋಜನೆಗೆ ಚಾಲನೆ
ನೀಡಿದ್ದಾರೆ.
ಪಂಜಾಬ್‌ನಲ್ಲಿ ತಯಾರಿಸಲಾಗುವ ಉತ್ಪನ್ನಗಳನ್ನು
ರಫ್ತು ಮಾಡುವ ಇಂಗಿತ ಮಿತ್ತಲ್ ಅವರದ್ದು. ಈ ನಡುವೆ ದೇಶದೆಲ್ಲೆಡೆ ತನ್ನ
ರಿಟೈಲ್ ಉದ್ಯಮದ ಜಾಲ ವಿಸ್ತರಿಸಿಕೊಂಡಿರುವ ರಿಲಯನ್ಸ್ ಸಂಸ್ಥೆ ಕೂಡ ಪಂಜಾಬ್‌ನ
ಉತ್ಪನ್ನಗಳ ಮೇಲೆ ಕಣ್ಣಿಟ್ಟಿದ್ದು ಪಂಜಾಬ್ ಉದ್ಯಮ ಕ್ಷೇತ್ರದಲ್ಲಿ
ಮೂಡಿಸುತ್ತಿರುವ ಹೆಗ್ಗುರುತಿಗೆ ಸಾಕ್ಷಿ.
ಟಿಎಸ್‌ಐ
ನಿರೂಪಣೆ: ಓಂಕಾರೇಶ್ವರ ಪಾಂಡೆ |