User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಮುಖಪುಟ ಲೇಖನ
 

ನೆನಪಿನ ಪುಟಗಳಿಂದ:  'ಸಿಖ್ಖರ ವ್ಯಾಟಿಕನ್' ಮೇಲಿನ ದಾಳಿ ಮಹಾಪರಾಧ

ಸೇನೆಯನ್ನು ಸ್ವರ್ಣ ಮಂದಿರದೊಳಗೆ ನುಗ್ಗಿಸುವ ಮೊದಲು ಹಾಗೂ ಆಪರೇಷನ್ ಬ್ಲೂ ಸ್ಟಾರ್ ನಂತರ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ತಮ್ಮ ರಾಯಭಾರಿಯನ್ನು ಕುಲದೀಪ್ ನಯ್ಯರ್ ಮನೆಗೆ ಕಳುಹಿಸಿದ್ದರು. ಸ್ವತಃ ನಯ್ಯರ್ ಅವರೇ ಆ ದಿನಗಳನ್ನು ಇಲ್ಲಿ ನೆನಪು ಮಾಡಿಕೊಂಡಿದ್ದಾರೆ

ಮೇ ತಿಂಗಳ ಮಧ್ಯಭಾಗ. 1984ರ ಆ ಬೇಸಿಗೆಯ ಬಿಸಿಯ ನಡುವೆಯೇ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಎಚ್.ಕೆ.ಎಲ್. ಭಗತ್ ಆತುರಾತುರದಲ್ಲಿ ನನಗೆ ದೂರವಾಣಿ ಕರೆ ಮಾಡಿ, "ತಕ್ಷಣ ನಿಮ್ಮನ್ನು ಭೇಟಿಯಾಗಬೇಕು" ಎಂದು ಹೇಳಿದರು. ಕೇಂದ್ರ ಸರ್ಕಾರ ಮತ್ತು ಅಕಾಲಿಗಳ ನಡುವೆ ಸಂಧಾನಕ್ಕೆ ಪ್ರಯತ್ನ ಮಾಡುತ್ತಿದ್ದ ಪಂಜಾಬ್‌ನ ಒಂದು ಗುಂಪಿನ ಜೊತೆಗೆ ನಾನಿದ್ದೆ. ಕೆಲವೇ ನಿಮಿಷಗಳಲ್ಲಿ ಭಗತ್, ಸುಂದರ್‌ನಗರದಲ್ಲಿನ ನನ್ನ ಮನೆ ತಲುಪಿದರು.

"ಸ್ವತಃ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರೇ ನನ್ನನ್ನು ನಿಮ್ಮ ಬಳಿ ಕಳುಹಿಸಿದ್ದಾರೆ" ಎಂದು ಮಾತನ್ನಾರಂಭಿಸಿದ ಭಗತ್, ನೇರವಾಗಿ ವಿಷಯವನ್ನು ಪ್ರಸ್ತಾಪಿಸಿದರು. ಸ್ವರ್ಣ ಮಂದಿರದೊಳಗೆ ಸೇನೆ ನುಗ್ಗಿಸುವುದೋ ಅಥವಾ ಬೇಡವೋ? ಅಮೃತಸರದಲ್ಲಿನ ಸ್ವರ್ಣ ಮಂದಿರದೊಳಗೆ ಸೇನೆ ನುಗ್ಗಿಸಿದಲ್ಲಿ ಆಗುವ ಪರಿಣಾಮ? ಸ್ವಲ್ಪ ಹೊತ್ತು ಯೋಚಿಸಿದ ನಾನು, ಖಂಡಿತ ಆ ಕೆಲಸ ಮಾಡಬೇಡಿ ಎಂದೆ. ಕಾರಣ, ಸಿಖ್ಖರ ಪಾಲಿಗೆ ಸ್ವರ್ಣ ಮಂದಿರ, ವ್ಯಾಟಿಕನ್‌ನಂತೆ ಧಾರ್ಮಿಕವಾಗಿ ಅತ್ಯಂತ ಪವಿತ್ರ ಸ್ಥಳ. ಅಂತಹ ಸ್ಥಾನವನ್ನು ಅಪವಿತ್ರಗೊಳಿಸಿದರೆ, ಖಂಡಿತ ಸಿಖ್ ಸಮುದಾಯ ಆ ಘಟನೆಯನ್ನು ಮರೆಯುವುದೂ ಇಲ್ಲ, ಆ ಅಪರಾಧ ಎಸಗಿದವರನ್ನು ಕ್ಷಮಿಸುವುದೂ ಇಲ್ಲ ಎಂದೆ. ಅದಕ್ಕೆ ಪ್ರತಿಯಾಗಿ ಭಗತ್, ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಮತ್ತು ಅವರ ಉಗ್ರಗಾಮಿ ಪಡೆ ಪಂಜಾಬ್‌ನಲ್ಲಿನ ಹಿಂದೂಗಳನ್ನೆಲ್ಲ ಓಡಿಸಿ, ಪ್ರತ್ಯೇಕ ಖಾಲಿಸ್ತಾನ್ ಸ್ಥಾಪನೆಗೆ ಎಂತಹ ಯೋಜನೆ ಹಾಕಿಕೊಂಡಿದ್ದಾರೆ ಎಂಬ ವಿವರ ನೀಡಿದರು. ಆ ಪ್ರತ್ಯೇಕ ಖಾಲಿಸ್ತಾನವನ್ನು ನೆರೆಯ ಪಾಕಿಸ್ತಾನ ಬೆಂಬಲಿಸಲು ಸಿದ್ಧವಾಗಿದೆ ಎಂದು ಕೂಡ ಅವರು ಹೇಳಿದರು. ಸೇನೆ ಅಥವಾ ಯಾವುದೇ ಶಸ್ತ್ರಾಧಾರಿತ ದಾಳಿ ನಡೆಸದೇ ಭಿಂದ್ರನ್‌ವಾಲೆಯನ್ನು ಸ್ವರ್ಣ ಮಂದಿರ ಸಮುಚ್ಛಯದಿಂದ ಹೊರಗೆ ಹಾಕಲು ಆಗುವುದಿಲ್ಲವೇ? ಎಂಬ ನನ್ನ ಪ್ರಶ್ನೆಗೆ ಅವರು ಯಾವುದೇ ಉತ್ತರ ನೀಡಲಿಲ್ಲ. ನನ್ನ ಮನೆಯಿಂದ ಹೊರಹೋದ ಭಗತ್, ಆನಂತರ ನನ್ನನ್ನು ಸಂಪರ್ಕಿಸಲೇ ಇಲ್ಲ.

ಆ ದಿನಗಳಲ್ಲಿ ರಾಷ್ಟ್ರಪತಿ ಗ್ಯಾನಿ ಜೇಲ್ ಸಿಂಗ್ ಮತ್ತು ಪ್ರಧಾನ ಮಂತ್ರಿ ಇಂದಿರಾ ಗಾಂಧಿ ನಡುವಿನ ಸಂಬಂಧ ಸಂಪೂರ್ಣ ಹಳಸಿತ್ತು. ಜೇಲ್ ಸಿಂಗ್ ಮತ್ತು ನನ್ನ ನಡುವಿನ ಮೂಲೆಗುಂಪಾಗಿದ್ದ ಸಂಬಂಧದ ಪುನರ್ ಸ್ಥಾಪನೆಯಾಗಿದ್ದು ಆಗಲೇ. ಭಗತ್ ಅವರು ನನ್ನನ್ನು ಭೇಟಿ ಮಾಡಿ ಹೋದದ್ದನ್ನು ಜೇಲ್ ಸಿಂಗ್ ಅವರಿಗೆ ಹೇಳಿದೆ. ಯಾವುದೇ ಕಾರಣಕ್ಕೂ ಸ್ವರ್ಣ ಮಂದಿರದೊಳಕ್ಕೆ ಸೇನೆ ನುಗ್ಗಿಸುವುದಿಲ್ಲ ಎಂದು ಇಂದಿರಾ ಗಾಂಧಿ ನೀಡಿದ್ದ ಭರವಸೆಯನ್ನೇ ಜೇಲ್ ಸಿಂಗ್ ಪುನರುಚ್ಛರಿಸಿದರು. ಜೂನ್ 2ರ ರಾತ್ರಿ ಸೇನೆ ಸ್ವರ್ಣ ಮಂದಿರವನ್ನು ಸುತ್ತುವರಿಯಿತು. ಜೂನ್ 3ರಂದು ಗುರು ಅರ್ಜುನ್ ದೇವ್ ಹುತಾತ್ಮ ದಿನವಾದ ಕಾರಣ ಸ್ವರ್ಣ ಮಂದಿರ ಸಮುಚ್ಛಯದಲ್ಲಿ ಅಪಾರ ಭಕ್ತರು ನೆರೆದಿದ್ದರು. ಹೀಗಾಗಿ ಮೂರು ದಿನಗಳ ನಂತರ ರಾತ್ರಿ 9ರ ಸುಮಾರಿಗೆ ಆಪರೇಷನ್ ಬ್ಲೂ ಸ್ಟಾರ್ ಅಧಿಕೃತವಾಗಿ ಶುರುವಾಯಿತು.

ಸಂವೈಧಾನಿಕ ನೆಲೆಯಲ್ಲಿ ಎಲ್ಲ ಮೂರು ಪಡೆಗಳ ಮುಖ್ಯಸ್ಥ ಹಾಗೂ ಕಮಾಂಡರ್ ಇನ್ ಚೀಫ್ ರಾಷ್ಟ್ರಪತಿ. ಆದರೆ, ರಾಷ್ಟ್ರಪತಿ ಜೇಲ್ ಸಿಂಗ್ ಅವರಿಗೆ ಆಪರೇಷನ್ ಬ್ಲೂ ಸ್ಟಾರ್ ಆರಂಭವಾಗಿದೆ ಎಂದು ಅರಿವಾಗಿದ್ದೇ, ಸೇನೆ ಸ್ವರ್ಣ ಮಂದಿರ ಸಮುಚ್ಛಯ ಪ್ರವೇಶಿಸಿದ ಮೇಲೆ! ಅವರು ಕಣ್ಣೀರಿಟ್ಟರು. ಆದರೂ ರಾಷ್ಟ್ರದ ಏಕತೆಯ ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಶಿಸಿ ಮಾಡಿದ ಟೆಲಿವಿಷನ್ ಭಾಷಣದಲ್ಲಿ ಸರ್ಕಾರದ ಈ ಕ್ರಮವನ್ನು ಅವರು ಸಮರ್ಥಿಸಿಕೊಂಡರು. ಆ ಭಾಷಣ ಸಿಖ್ಖರನ್ನು ಕೆರಳಿಸಿತು. ಆದರೆ, ಕಣ್ಣೀರಿಡುತ್ತಲೇ ಅವರು ಮಾಡಿದ ಭಾಷಣ ದೇಶವನ್ನು ಬಹುದೊಡ್ಡ ಸಂವೈಧಾನಿಕ ಬಿಕ್ಕಟ್ಟಿನಿಂದ ರಕ್ಷಿಸಿತು. ಏಕೆಂದರೆ ಸಿಖ್ ಸಮುದಾಯ ರಾಜೀನಾಮೆ ನೀಡಿ ಹೊರಬರುವಂತೆ ಜೇಲ್ ಸಿಂಗ್ ಮೇಲೆ ಸಾಕಷ್ಟು ಒತ್ತಡ ಹೇರಿತ್ತು. ಜೇಲ್ ಸಿಂಗ್‌ಗೆ ದೇಶ ಮುಖ್ಯವಾಗಿತ್ತು.

ಜೂನ್ 6ರ ಬೆಳಗಿನ ಹೊತ್ತಿಗೆ ಸೇನಾ ಪಡೆ ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆ ಸಂಪೂರ್ಣಗೊಳಿಸಿತು. ಆದರೆ, ನೀರಿಕ್ಷೆ ಮೀರಿದ ಪ್ರತಿಭಟನೆ ಉಗ್ರರಿಂದ ವ್ಯಕ್ತವಾಯಿತು. ಸ್ವರ್ಣ ಮಂದಿರ ಸಮುಚ್ಛಯದಲ್ಲಿದ್ದ ಎಲ್ಲ ಕಟ್ಟಡಗಳನ್ನು ವಶಪಡಿಸಿಕೊಂಡು ಅವುಗಳಲ್ಲಿ ಅಡಗಿ ಕುಳಿತಿದ್ದ ಉಗ್ರರು ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ಸೇನೆಯನ್ನೇ ಕಂಗಾಲು ಮಾಡಿದರು. ಸಿಖ್ಖರ ಅತ್ಯಂತ ಶ್ರೇಷ್ಠ ಧಾರ್ಮಿಕ ಸ್ಥಾನವಾಗಿರುವ ಅಕಾಲ್ ತಖ್ತ್‌ನಲ್ಲಿ ಭಿಂದ್ರನ್‌ವಾಲೆ ಮತ್ತು ಸಹಚರರು ಅಡಗಿ ಕುಳಿತಿದ್ದರು. ಅಕಾಲ್ ತಖ್ತ್ ಭೇದಿಸಲು ಸೇನೆ ಟ್ಯಾಂಕ್ ಬಳಸಲು ಮುಂದಾಯಿತು. ಅದಕ್ಕಾಗಿ ಅಧಿಕೃತ ಅನುಮತಿ ನೀಡುವಂತೆ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯನ್ನು ಕೇಳಿಕೊಳ್ಳಲಾಯಿತು. ಅನುಮತಿ ಸಿಕ್ಕಿದ ನಂತರ ಟ್ಯಾಂಕ್‌ಗಳು ಸ್ವರ್ಣ ಮಂದಿರದ ಒಳನುಗ್ಗಿದವು. ಜೂನ್ 7ರಂದು ಭಿಂದ್ರನ್‌ವಾಲೆ ಸಾವಿನೊಂದಿಗೆ ಹೋರಾಟಕ್ಕೆ ತೆರೆ ಬಿತ್ತು.

ಜೂನ್ 8ರ ಬೆಳಿಗ್ಗೆ ಅಮೃತಸರಕ್ಕೆ ಹೋಗುವುದಾಗಿ ಗ್ಯಾನಿ ಜೇಲ್ ಸಿಂಗ್ ಪ್ರಧಾನ ಮಂತ್ರಿಗೆ ಸಂದೇಶ ರವಾನಿಸಿದರು. ನಿಮ್ಮ ಭೇಟಿಯನ್ನು ಮುಂದೂಡಿ ಎಂದು ಇಂದಿರಾ ಗಾಂಧಿ ಸಲಹೆ ನೀಡಿದರೂ ಜೇಲ್ ಸಿಂಗ್ ಒಪ್ಪಲಿಲ್ಲ. ಸರ್ಕಾರದ ಅಧಿಕೃತ ವಿಮಾನವನ್ನು ಅವರಿಗೆ ನೀಡಲಿಲ್ಲ. ಕೊನೆಗೆ ಜೇಲ್ ಸಿಂಗ್ ನಾಗರಿಕ ವಿಮಾನವೊಂದರಲ್ಲಿ ಅಮೃತಸರಕ್ಕೆ ಹೊರಟರು. ಅವರೊಂದಿಗೆ ಇಂದಿರಾ ಗಾಂಧಿ ಅವರ ವಿಶೇಷ ಆಪ್ತ ಸಹಾಯಕ ಆರ್.ಕೆ. ಧವನ್ ಅವರನ್ನು ಒತ್ತಾಯಪೂರ್ವಕವಾಗಿ ಕಳುಹಿಸಿಕೊಡಲಾಯಿತು. ಸ್ವರ್ಣ ಮಂದಿರದ ಮುಖ್ಯ ಪುರೋಹಿತರು ರಾಷ್ಟ್ರಪತಿಯವರಿಗೆ ಗರ್ಭಗುಡಿಯ ಗೋಡೆಯ ಮೇಲಿದ್ದ ಗುಂಡು ದಾಳಿಯ ಗುರುತುಗಳನ್ನು ತೋರಿಸಿದರು. ಸ್ವರ್ಣ ಮಂದಿರದ ಘನತೆ, ಗೌರವಗಳನ್ನು ಕಡೆಗಣಿಸಿ ಭಾರತೀಯ ಸೇನೆ ತನ್ನ ಶಕ್ತಿ ಪ್ರದರ್ಶಿಸಿದೆ ಎಂದು ಅವರು ಆರೋಪಿಸಿದರು.

ಪ್ರಾಯಶಃ ಜೂನ್ 12. ತುರ್ತು ಮಾತುಕತೆಗೆ ಬರುತ್ತಿದ್ದೇನೆ ಎಂದು ಆರ್.ಕೆ. ಧವನ್ ನನಗೆ ದೂರವಾಣಿಯಲ್ಲಿ ತಿಳಿಸಿದರು. ಬಂದ ಕೂಡಲೇ ಅವರು, "ಇಂದಿರಾ ಗಾಂಧಿಯವರೇ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ" ಎಂದರು. "ಅವರು ಕಳುಹಿಸದೇ ಹೋದಲ್ಲಿ ನೀವು ಇಲ್ಲಿಗೆ ಹೇಗೆ ಬರುತ್ತಿದ್ದಿರಿ?" ಎಂದು ನಾನು ಪ್ರಶ್ನಿಸಿದೆ. "ಈಗ ಸರ್ಕಾರ ಏನು ಮಾಡಬೇಕು ಅನ್ನುವುದನ್ನು ನೀವು ಹೇಳಬೇಕಂತೆ. ಇಂದಿರಾ ಗಾಂಧಿ ನಿಮ್ಮನ್ನು ಕೇಳಿಕೊಂಡು ಬಾ ಎಂದಿದ್ದಾರೆ" ಎಂದು ಧವನ್ ಕೇಳಿದರು. ತಾಳ್ಮೆಗೆಟ್ಟ ನಾನು, "ನೀವು ಖಾಲಿಸ್ತಾನ್ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದಿರಿ" ಎಂದೆ. "ತಕ್ಷಣ ಸೇನೆಯನ್ನು ಸ್ವರ್ಣ ಮಂದಿರ ಸಮುಚ್ಛಯದಿಂದ ಹಿಂದಕ್ಕೆ ಕರೆಸಿಕೊಳ್ಳಿ. ಕೂಡಲೇ ಭಕ್ತರಿಗೆ ಆ ದೇಗುಲ ಸಮುಚ್ಛಯ ಪ್ರವೇಶಿಸಲು ಅವಕಾಶ ಮಾಡಿಕೊಡಿ. ಸಾವಿರಾರು ಸಂಖ್ಯೆಯಲ್ಲಿ ಸ್ವರ್ಣ ಮಂದಿರಕ್ಕೆ ಆಗಮಿಸುವ ಸಿಖ್ಖರು ಖಂಡಿತ ಸರ್ಕಾರವನ್ನು ಜರೆಯುತ್ತಾರೆ. ವಾಸ್ತವಕ್ಕೆ ಮುಖ ಮಾಡಿ ನಿಲ್ಲುವ ಆ ಭಕ್ತರು ಕಣ್ಣೀರ ಕೋಡಿ ಹರಿಸುತ್ತಾರೆ. ಆ ಮೂಲಕ ಅವರ ಕೋಪ-ತಾಪ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು. ಭಾವನಾತ್ಮಕವಾಗಿ ಅವರು ಶುದ್ಧೀಕರಣಗೊಳ್ಳಬಹುದು" ಎಂಬ ಸಲಹೆ ನೀಡಿದೆ.

ಸ್ವರ್ಣ ಮಂದಿರ ಸಮುಚ್ಛಯದಿಂದ ಭಿಂದ್ರನ್‌ವಾಲೆಯನ್ನು ಹೊರ ಹಾಕಲು ಸರ್ಕಾರಕ್ಕೆ ಬೇರೆ ಹಲವಾರು ದಾರಿಗಳಿದ್ದವು ಎಂದು ನಾನು ಈಗಲೂ ಹೇಳುತ್ತೇನೆ. ಸಿಖ್ಖರ ವ್ಯಾಟಿಕನ್ ಮೇಲೆ ದಾಳಿ ನಡೆಸಿದ್ದು ಮಹಾನ್ ಅಪರಾಧ. ದುರಂತವೆಂದರೆ ಭಿಂದ್ರನ್‌ವಾಲೆ ಅಂತಹ ಪವಿತ್ರ ಸ್ವರ್ಣ ಮಂದಿರವನ್ನೇ ಆತನ ಕೋಟೆಯಾಗಿಸಿಕೊಂಡ. ಅಲ್ಲಿಯೇ ಒಂದು ಪರ್ಯಾಯ ಸರ್ಕಾರ ರಚಿಸಿ ಆಡಳಿತ ನಡೆಸುವ ಯತ್ನ ಮಾಡಿದ. ಆದರೂ, ದಾಳಿ ನಡೆಸದೇ ಹೋಗಿದ್ದಲ್ಲಿ ಖಾಲಿಸ್ತಾನ್ ರಚನೆಯಾಗಿಯೇ ಬಿಡುತ್ತಿತ್ತು ಎನ್ನುವುದನ್ನು ನಾನು ಈಗ ಕೂಡ ಒಪ್ಪುವುದಿಲ್ಲ.

ಜೊತೆಗೆ ಅಕಾಲಿಗಳ ತಪ್ಪುಗಳನ್ನು ಕೂಡ ನಾನು ಸಮರ್ಥಿಸಿಕೊಳ್ಳುವುದಿಲ್ಲ. ಸ್ವರ್ಣ ಮಂದಿರ ಹಾಗೂ ಇನ್ನಿತರ ಗುರುದ್ವಾರಗಳನ್ನು ಅಕ್ರಮವಾಗಿ ಬಳಸಿಕೊಂಡು ರಕ್ತದ ಹೊಳೆ ಹರಿಸಲು ಅವಕಾಶ ಮಾಡಿಕೊಟ್ಟಿದ್ದು ಕೂಡ ಮಹಾನ್ ದೊಡ್ಡ ತಪ್ಪು. ಈ ಸಂದರ್ಭದಲ್ಲಿ ಮಂದಗಾಮಿ ಅಕಾಲಿಗಳ ವೈಫಲ್ಯವನ್ನು ಕೂಡಾ ನಿರ್ಲಕ್ಷಿಸಲಾಗುವುದಿಲ್ಲ. ದಂಗೆಯ ಸಂದರ್ಭದ ಹತ್ಯಾಕಾಂಡವನ್ನು ತಡೆಯುವಲ್ಲಿ ಮತ್ತು ಸ್ವರ್ಣ ಮಂದಿರ ದುರುಪಯೋಗವಾಗುವುದನ್ನು ತಪ್ಪಿಸುವಲ್ಲಿ ಅವರು ವಿಫಲರಾದರು. ಅಷ್ಟೇ ಅಲ್ಲ, ಉಗ್ರರ ದುಷ್ಕೃತ್ಯವನ್ನು ಖಂಡಿಸುವಲ್ಲಿ ಹಾಗೂ ಭಿಂದ್ರನ್‌ವಾಲೆ ಮತ್ತವನ ಸಹಚರರು ಎಸಗಿದ ದುಷ್ಕೃತ್ಯಗಳನ್ನು ತನಿಖೆ ಮಾಡಲು ಒಂದು ಸಮಿತಿ ರಚಿಸುವಲ್ಲಿಯೂ ಅವರು ವಿಫಲರಾದರು. ಆದರೆ, ಅಕಾಲಿಗಳು ತಾವು ಮಾಡಿದ ತಪ್ಪಿನ ಫಲ ಉಣ್ಣಲೇಬೇಕಾಯಿತು.

ಅಮಾಯಕರ ಹತ್ಯಾಕಾಂಡಕ್ಕೆ ಒಟ್ಟಾರೆ ಸಿಖ್ ಸಮುದಾಯದ ಒಪ್ಪಿಗೆ ಇರಲಿಲ್ಲ. ಅದರಲ್ಲಿಯೂ ಪಂಜಾಬ್‌ನಿಂದ ಹೊರಗೆ ವಾಸಿಸುತ್ತಿದ್ದ ಆ ಸಮುದಾಯದ ಸದಸ್ಯರಿಗೆ ಅಂತಹ ಅನರ್ಥ ಹಿಂಸೆಯ ಮೇಲೆ ಯಾವುದೇ ವಿಶ್ವಾಸವಿರಲಿಲ್ಲ. ಆದರೆ, ಆ ಕೊಲೆಗಾರರ ವಿರುದ್ಧ ಒಂದಾಗಿ ತಿರುಗಿ ಬೀಳುವ ಧೈರ್ಯವನ್ನು ಸಿಖ್ ಸಮುದಾಯ ತೋರಿಸಲಿಲ್ಲ. ದೇವರು, ಧರ್ಮದ ಹೆಸರಿನಲ್ಲಿ ಕೊಲೆ ಮಾಡುವುದರ ವಿರುದ್ಧ ಕೆಲವೇ ಕೆಲವು ವ್ಯಕ್ತಿಗಳು ಅಥವಾ ಒಂದಿಷ್ಟು ಸಂಘ-ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿದವು. ಅದನ್ನು ಬಿಟ್ಟು ಭಿಂದ್ರನ್‌ವಾಲೆ ಪಡೆಯನ್ನು ಮಟ್ಟ ಹಾಕಲು ಯಾವುದೇ ಸಾಂಘಿಕ ಯತ್ನಗಳು ನಡೆಯಲಿಲ್ಲ. ಅಂತಹ ಪ್ರಯತ್ನ ನಡೆದಿದ್ದರೆ ಮಹಾನ್ ದುರಂತವೊಂದನ್ನು ತಡೆಯಬಹುದಿತ್ತು.

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location

ಮುಖಪುಟ ಲೇಖನದಲ್ಲಿ ಇನ್ನೇನಿದೆ

25 ವರ್ಷ ಕಳೆದ ಮೇಲೆ ಆಪರೇಷನ್ ಬ್ಲೂಸ್ಟಾರ್

25 ವರ್ಷ ಕಳೆದ ಮೇಲೆ ಆಪರೇಷನ್ ಬ್ಲೂಸ್ಟಾರ್

ಬದಲಾವಣೆ ಗಾಳಿಗೆ ಬಾಗಿದ ಪಂಜಾಬ್

1984ರ ಕರಾಳ ಇತಿಹಾಸದತ್ತ ಕಣ್ಣೋಟ

ಭಗತ್‌ಸಿಂಗ್‌ಗಿಂತ ಜನಪ್ರಿಯ ಭಿಂದ್ರನ್‌ವಾಲೆ

‘ಸಿಖ್ ಸಿಪಾಯಿ ದಂಗೆ’ಯ ಮರೆಯಲಾಗದ ನೆನಪುಗಳು

ದುರ್ಗಂಧದ ನಡುವೆ ಕಳೆದ ಆ ದಿನ

ಆಪರೇಷನ್ ಬ್ಲೂ ಸ್ಟಾರ್ ಅವಿವೇಕದ ಕ್ರಮ

ಖಾಲಿಸ್ತಾನ್ ಕನಸಿಗೆ ಕೊನೆಯಿಲ್ಲ?

ಪ್ರಬಂಧಕ್ ಸಮಿತಿ ಪಾತ್ರ

‘ಸಿಖ್ಖರ ವ್ಯಾಟಿಕನ್’ ಮೇಲಿನ ದಾಳಿ ಮಹಾಪರಾಧ

ಆಧುನಿಕ ಪಂಜಾಬ್‌ನ ಹತ್ತು ಮುಖಗಳು

ಕೊನೆಗೂ ಆ ಫೋಟೋ ತೆಗೆದೇ ಬಿಟ್ಟೆ...

‘ಪಾಕ್ ಸೇನೆಗೆ ಸಿಖ್ಖರೂ ಸೇರಬಹುದು’

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .