User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಮುಖಪುಟ ಲೇಖನ
 

ವಸ್ತುಸ್ಥಿತಿ : ಆಪರೇಷನ್ ಬ್ಲೂ ಸ್ಟಾರ್ ಅವಿವೇಕದ ಕ್ರಮ

ಆತಂಕಕಾರಿ ಸನ್ನಿವೇಶ ಸೃಷ್ಟಿಸಿ ಅದನ್ನು ಯಶಸ್ವಿಯಾಗಿ ನಿರ್ವಹಿಸಿದಂತೆ ಮಾಡಿ ಚುನಾವಣೆ ಗೆಲ್ಲುವುದೇ ಕಾರ್ಯಾಚರಣೆಯ ಉದ್ದೇಶವಾಗಿತ್ತು ಎನ್ನುತ್ತಾರೆ ಕೆ.ಪಿ.ಎಸ್. ಗಿಲ್

ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆಯಾದಾಗ ನಾನು ಜಮ್ಮುವಿನಲ್ಲಿ ಗಡಿ ಭದ್ರತಾ ಪಡೆಯ ಐಜಿ ಆಗಿದ್ದೆ. ಕಾರ್ಯಾಚರಣೆಗೆ ಮುನ್ನ ನಾನು ಸ್ವರ್ಣಮಂದಿರಕ್ಕೆ ಭೇಟಿ ನೀಡಿದ್ದೆ. ಅಲ್ಲಿ ಸೇನಾ ನಿಯೋಜನೆಯನ್ನೂ ಗಮನಿಸಿದ್ದೆ. ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆಯೇ ದೊಡ್ಡ ಅವಿವೇಕದ ಕೆಲಸ. ಆ ಕಾರ್ಯಾಚರಣೆ ವಿರುದ್ಧ ಬಿಬಿಸಿ ಟೀಕಾಪ್ರಹಾರ ನಡೆಸಿತ್ತು. ಎರಡನೇ ಮಹಾಯುದ್ಧ ಕಾಲದ ಶಸ್ತ್ರಾಸ್ತ್ರ ಹೊಂದಿದ ಕೆಲವು ಧಾರ್ಮಿಕ ಮತಾಂಧರು ದೇಶದ ಮೂಲೆಯೊಂದರಲ್ಲಿ ಕುಳಿತು ಇಡೀ ರಾಷ್ಟ್ರದ ಏಕತೆಗೆ ಸವಾಲು ಹಾಕುತ್ತಿದ್ದಾರೆ ಎಂದು ಕಳವಳಪಡುವುದೇ ಅವಿವೇಕದ್ದು. ಆದರೆ ಉದ್ದೇಶಪೂರ್ವಕವಾಗಿಯೇ ಈ ಕುರಿತ ಭಾವೋದ್ರೇಕವನ್ನು ವ್ಯಾಪಕವಾಗಿ ಬಿಂಬಿಸಲಾಗಿತ್ತು.

ನನ್ನ ಪ್ರಕಾರ ಈ ಸಂಪೂರ್ಣ ಕಾರ್ಯಾಚರಣೆಯೇ ಒಂದು ಚುನಾವಣಾ ಗಿಮಿಕ್. ಮುಂಬರುವ ಚುನಾವಣೆಯನ್ನು ಗೆಲ್ಲಲು ರಚಿಸಿದ ಕಾರ್ಯತಂತ್ರ. ಆತಂಕಕಾರಿ ಸನ್ನಿವೇಶವನ್ನು ಸೃಷ್ಟಿಸಿ, ಅದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದ ಯಶಸ್ಸಿನ ಆಧಾರದಲ್ಲಿ ಚುನಾವಣೆ ಗೆಲ್ಲುವ ಯೋಜನೆ ಅದು.

ಕಾಲಾಂತರದಲ್ಲಿ ಸಿಖ್ ಸಮುದಾಯ ಆ ಗಾಯದ ನೋವನ್ನು ಮರೆತಿದೆಯೆ? ಹೌದು, ಖಂಡಿತ. ಸ್ವರ್ಣ ಮಂದಿರ ಆಕ್ರಮಣಕ್ಕೆ ಒಳಗಾಗಿದ್ದು ಇದೇ ಮೊದಲಲ್ಲ. ಮುಸ್ಲಿಂ ಆಕ್ರಮಣಕಾರರು ಪದೇ ಪದೇ ದಾಳಿ ನಡೆಸಿದ್ದಾರೆ. ಆದರೆ ಸಿಖ್ಖರು ಐತಿಹಾಸಿಕ ಬದಲಾವಣೆ ಉಂಟಾಗಲು ಕಾದು ಕುಳಿತುಕೊಳ್ಳಲಿಲ್ಲ. ಯಾರು ಆ ಕೆಲಸವನ್ನು ಮಾಡಿದ್ದರೋ ಅವರ ಮೇಲೆ ಪ್ರತೀಕಾರ ತೀರಿಸಿ ತಮ್ಮ ಪವಿತ್ರ ದೇಗುಲವನ್ನು ಪುನರ್ ನಿರ್ಮಿಸಿದರು.

ಇದೇ ಕಾರಣಕ್ಕೆ ನಾನು ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಧ್ವಂಸ ಕುರಿತು ಅಷ್ಟೊಂದು ಕಟುವಾಗಿ ಪ್ರತಿಕ್ರಿಯಿಸಿದ್ದು. ಒಂದು ಚಳವಳಿ ಆರಂಭಿಸಲು ನೀವು 600 ವರ್ಷಗಳಷ್ಟು ದೀರ್ಘಕಾಲ ತೆಗೆದುಕೊಂಡಿದ್ದೇಕೆ? ಅಷ್ಟು ವರ್ಷಗಳ ಕಾಲ ಏನು ಮಾಡುತ್ತಿದ್ದಿರಿ? ಹಿಂದೂಗಳಿಗೆ ಅದು ಅಷ್ಟೊಂದು ಮುಖ್ಯವಾಗಿದ್ದಲ್ಲಿ ಅಷ್ಟು ವರ್ಷ ನೀವೇನು ಮಾಡುತ್ತಿದ್ದಿರಿ?

ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆಯಲ್ಲಿ ಸರ್ಕಾರ ಮಾಡಿದ್ದೇನು? ಸರ್ಕಾರದ ಮುಂದೆ ಎರಡು-ಮೂರು ಆಯ್ಕೆಗಳಿದ್ದವು. ಸುಮ್ಮನೆ ಕುಳಿತು ಕಾದು ನೋಡುವ ತಂತ್ರ ಅನುಸರಿಸಬಹುದಾಗಿತ್ತು; ಇಲ್ಲವೇ ಮಾತುಕತೆ ಪ್ರಕ್ರಿಯೆಗೆ ಮುಂದಾಗಿ ಮಾತುಕತೆಯನ್ನೇ ದೀರ್ಘಾವಧಿಗೆ ಮುಂದುವರಿಸಬಹುದಾಗಿತ್ತು. ಅವರು ತಾನೆ ಎಷ್ಟು ಕಾಲ ಕಾಯುತ್ತಿದ್ದರು?

ಭೂಗತ ಸಂಘಟನೆಗಳದೇ ಕಾರುಬಾರಿದ್ದ ಕಾಲವೊಂದಿತ್ತು. ಪ್ರತಿಯೊಬ್ಬರೂ ತಮ್ಮದೇ ಆದ ಭೂಗತ ಸಂಘಟನೆಗಳನ್ನು ರಚಿಸುತ್ತಿದ್ದರು. ಅಂತಹ ಸಂಘಟನೆಗಳೂ ಸಾಕಷ್ಟಿದ್ದವು. ಈ ಭೂಗತ ತಂಡದ ಸದಸ್ಯರು ಪಾಕಿಸ್ತಾನಕ್ಕೆ ಗಡೀಪಾರಾಗಿ ಇನ್ನು ಮುಂದೆ ತಮ್ಮದೇ ಆಡಳಿತ ಎಂದು ಘೋಷಿಸುತ್ತಾರೆ. ಹೀಗೆ ದೇಶದ ಹೊರಗೆ ಓಡಿಹೋಗಿ ಸ್ವತಂತ್ರ ರಾಷ್ಟ್ರದ ಬಗ್ಗೆ ಅರಚಿದಲ್ಲಿ ನಮಗೇನು ನಷ್ಟ? ಹೇಗೂ ಅವರೆಲ್ಲ ಸುಮ್ಮನೇ ಇದ್ದರಲ್ಲ?

ಆಪರೇಷನ್ ಬ್ಲೂ ಸ್ಟಾರ್‌ಗೆ ಇಳಿಯುವ ಮುನ್ನ ಲಭ್ಯವಿದ್ದ ಎಲ್ಲಾ ಆಯ್ಕೆಗಳನ್ನು ಪರಿಶೀಲಿಸಬೇಕಾಗಿತ್ತು. ಸೈನಿಕ ಕಾರ್ಯಾಚರಣೆ ಕೊನೆಯ ಆಯ್ಕೆಯಾಗಬೇಕಿತ್ತು. ಆ ಸಂದರ್ಭದಲ್ಲಿನ ರಾಜಕೀಯ ದೃಷ್ಟಿಕೋನಗಳ ಬಗ್ಗೆ ನಾನು ಏನೂ ಹೇಳುವುದಿಲ್ಲ. ಆದರೆ ಆಗಿನ ಕಾನೂನು-ಸುವ್ಯವಸ್ಥೆ ಹಾಗೂ ಆಡಳಿತದ ದೃಷ್ಟಿಯಿಂದ ಗಮನಿಸಿದಲ್ಲಿ ಸೈನಿಕ ಕಾರ್ಯಾಚರಣೆ ಕಟ್ಟಕಡೆಯ ಆಯ್ಕೆಯಾಗಬೇಕಿತ್ತು. ಓಟದ ಮಧ್ಯೆ ಸೊಕ್ಕಿನ ಕುದುರೆಗಳನ್ನು ಬದಲಾಯಿಸುವುದು ಸಾಧ್ಯವಿಲ್ಲ. ಆಗ ಅವುಗಳನ್ನು ಗಮನಿಸುತ್ತಿರಬೇಕಷ್ಟೇ. ತಂತ್ರದಿಂದ ಬಲೆಬೀಸಿ ಕಾದು ಅವನ್ನು ಮಣಿಸಬೇಕು. ಏಕೆಂದರೆ ಇಂತಹ ಘಟನೆಗಳಾವುವೂ ನಡೆಯದಿರಲಿ ಎಂದು ಬಯಸುವ ಸಾವಿರಾರು ಮಂದಿ ಆಗಲೂ ಇದ್ದರು.

ಭಿಂದ್ರನ್‌ವಾಲೆ ನಿಧಾನವಾಗಿ ಕುಸಿಯುತ್ತಿದ್ದ. ಆತನಿಗೆ ಸ್ವರ್ಣ ಮಂದಿರದಲ್ಲಿ ಅವಿತುಕೊಳ್ಳಲು ಸಾಧ್ಯವಾಗಿದ್ದೇನೋ ನಿಜ. ಆದರೆ ಅದರಿಂದ ಆತ ಸಾಧಿಸಿದ್ದೇನು? ದೇವಾಲಯದ ಮೂಲೆಯಲ್ಲಿ ಅಡ್ಡಾಡುತ್ತಿದ್ದ. ಸಭೆ ಕರೆಯುತ್ತಿದ್ದ. ಸಭೆಯಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಕರೆ ಕಳುಹಿಸುತ್ತಿದ್ದ. ಅದರಿಂದ ಏನಾಯಿತು? ಯಾವ ಆಪತ್ತು ಸೃಷ್ಟಿಯಾಗುತ್ತಿತ್ತು?

ಆದರೆ ಈ ವಿಚಾರದಲ್ಲಿ ಸಮೂಹ ಸನ್ನಿಯೊಂದನ್ನು ಸೃಷ್ಟಿಸಲಾಯಿತು. ನಾನು ಪದೇ ಪದೇ ಈ ಸ್ಥಿತಿಯನ್ನು ವಿವರಿಸುತ್ತಲೇ ಬಂದಿದ್ದೇನೆ. ಹೆಚ್ಚು ಪ್ರಾಮುಖ್ಯತೆ ನೀಡುವ ಅಗತ್ಯವಿಲ್ಲದ ವಿಚಾರದಲ್ಲಿ ನಾವೇ ಒಂದು ಭಾವೋದ್ರೇಕದ ವಾತಾವರಣ ಸೃಷ್ಟಿಸಿಬಿಡುತ್ತೇವೆ.

1962ರಲ್ಲಿ ಚೀನಾ ಆಕ್ರಮಣ ಸಂದರ್ಭವೂ ಆಡಳಿತ ಮಾಡಿದ್ದು ಇದನ್ನೇ. ಪಂಡಿತ್ ನೆಹರೂ ಅವರು ಕೊಲಂಬೊದಲ್ಲಿ ಪತ್ರಕರ್ತರ ಜೊತೆ ಮಾತನಾಡುತ್ತಾ, ಚೀನೀಯರನ್ನು ಹೊರದಬ್ಬುವಂತೆ ಸೈನಿಕರಿಗೆ ಆದೇಶಿಸಿದ್ದೇನೆ ಎನ್ನುತ್ತಾರೆ. ಆ ಸಮಯದಲ್ಲಿ ನಾನು ನೌಗಾಂಗ್‌ನಲ್ಲಿದ್ದೆ. ತೇಜ್‌ಪುರದಿಂದ ಆ ಪ್ರಾಂತ ಹೆಚ್ಚೇನೂ ದೂರವಿಲ್ಲ. ಸೇನೆಯ ಸರಕುಗಳು ಸೇರಿದಂತೆ ವಸತಿ ಕಳೆದುಕೊಂಡ ಬಹುಮಂದಿಯನ್ನು ಬರಮಾಡಿಕೊಳ್ಳಬೇಕಿತ್ತು. 1962ರ ಕಾರ್ಯಾಚರಣೆಗೆ ಸೇನೆ ಸನ್ನದ್ಧವಾಗಿರಲಿಲ್ಲ. ಅಂತಹ ಸಂದರ್ಭದಲ್ಲಿ ಪ್ರಧಾನಿ ಕೊಲಂಬೊದಲ್ಲಿ ಕುಳಿತು 'ಚೀನೀಯರನ್ನು ಹೊರದಬ್ಬಿ' ಎಂದು ಆದೇಶಿಸುತ್ತಾರೆ. ಸ್ವಲ್ಪ ತಾಳ್ಮೆಯಿಂದಿದ್ದು, ಕಾದು ನೋಡಬಹುದಲ್ಲವೇ?

ಸ್ವರ್ಣ ಮಂದಿರ ಕುರಿತಾಗಿಯೂ ಇಂತಹುದೇ ಭಾವೋದ್ರೇಕ ಸೃಷ್ಟಿಸಲಾಯಿತು. "ಅಮೃತಸರ ಮತ್ತು ಮಾಸ್ಕೋ ನಡುವೆ ಸುರಂಗಮಾರ್ಗವೇನಾದರೂ ಇದೆಯೆ" ಎಂದು ಸ್ತ್ರೀಯರು ಮಾತನಾಡಿಕೊಳ್ಳುವಷ್ಟರ ಮಟ್ಟಿಗೆ ಭಾವೋದ್ರೇಕ ಸೃಷ್ಟಿಸಲಾಗಿತ್ತು. ರಷ್ಯನ್ನರು ಮತ್ತು ಖಾಲಿಸ್ತಾನ್‌ಗೆ ಎತ್ತಣಿಂದೆತ್ತ ಸಂಬಂಧ? ನಿಜ ಹೇಳಬೇಕೆಂದರೆ ಕಾರ್ಯಾಚರಣೆ ಯಶಸ್ವಿಯಾಗಿ ನೆರವೇರಿಸುವ ಸಮರ್ಥರನ್ನು ಸರ್ಕಾರ ಆಗ ಹೊಂದಿರಲಿಲ್ಲ. ಅದಕ್ಕೇ ನಾನು ಹೇಳುವುದು, ಸರ್ಕಾರ ಅಂತಹ ಜನರನ್ನು ಸೃಷ್ಟಿಸುತ್ತದೆ ಅಥವಾ ಅಂಥ ಸಂಪ್ರದಾಯವನ್ನು ಹಾಕಿಕೊಡುತ್ತದೆ. ಈ ಹಿಂದೆಯೂ ಇಂತಹುದೇ ಒಂದು ಉದಾಹರಣೆ ಇತ್ತು. ದೇಶ ಸ್ವತಂತ್ರವಾದ ಮೇಲೆ ಹೈದರಾಬಾದ್ ನಿಜಾಮ್ ವಿರುದ್ಧ ಸೇನೆಯನ್ನು ಛೂ ಬಿಡಲಾಗಿತ್ತು. ನಂತರ ಅದಕ್ಕೆ ಪೊಲೀಸ್ ಕಾರ್ಯಾಚರಣೆಯ ಹೆಸರಿಡಲಾಯಿತು. ಸರ್ಕಾರ ಸೈನಿಕರಿಗೆ ತರಬೇತು ಕೊಡುತ್ತದೆ; ಅವರಿಗೆ ಖಾಕಿ ಸಮವಸ್ತ್ರ ಕೊಡಲಾಗುತ್ತದೆ ಮತ್ತು ಅವರನ್ನು ಸಮರಾಂಗಣಕ್ಕೆ ಬಿಡಲಾಗುತ್ತದೆ.

ಪಾಕಿಸ್ತಾನ-ಭಾರತ ನಡುವಿನ ಕದನಕ್ಕೆ ಪಂಜಾಬ್ ವೇದಿಕೆಯಾಗಿತ್ತು. ಹಾಗಿದ್ದಾಗ ಬಂಡುಕೋರರು ಅಲ್ಲೇಕೆ ಸೃಷ್ಟಿಯಾಗುತ್ತಾರೆ? ಆ ಸಮಯದಲ್ಲಿ ತೆರೆಮರೆಯ ಹಿಂದೆ ರೂಪುರೇಷೆ ಸಿದ್ಧಪಡಿಸಿದ ತಂತ್ರಜ್ಞರಾರು, ಸಲಹೆ ನೀಡಿದವರಾರು? ಇದು ಇಂದಿರಾ ಗಾಂಧಿ ಒಬ್ಬರ ನಿರ್ಧಾರವಾಗಿರಲು ಸಾಧ್ಯವಿಲ್ಲ. ಹಾಗಾದರೆ, ಅಂಥದೇ ಮಾರ್ಗ ಬಳಸುವಂತೆ ಇಂದಿರಾ ಗಾಂಧಿ ಅವರಿಗೆ ಸಲಹೆ ನೀಡಿದ ವ್ಯಕ್ತಿಗಳಿರಲೇಬೇಕು. ಅವರೆಲ್ಲಾ ಎಲ್ಲಿ? ಆಪರೇಷನ್ ಬ್ಲಾಕ್ ಥಂಡರ್ ಕಾರ್ಯಾಚರಣೆಯ ಗೆಲುವನ್ನು ತಮ್ಮದೆಂದು ಬಿಂಬಿಸಿಕೊಳ್ಳುವ ಮಂದಿ ಆಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆ ಕುರಿತು ಏಕೆ ಮೌನ ತಾಳುತ್ತಾರೆ?

ಸಲಹೆಗಾರರು ಎಂದು ಯಾರನ್ನು ಕರೆಯುತ್ತೇವೋ ಅವರ್‍ಯಾರಿಗೂ ಯುದ್ಧಭೂಮಿಯ ವಾಸ್ತವದ ಅರಿವಿರುವುದಿಲ್ಲ. ಅವರ ಸಾಮರ್ಥ್ಯವೇನಿದ್ದರೂ ಆಡಳಿತಾತ್ಮಕ ವ್ಯವಹಾರಗಳಲ್ಲಿ ಮಾತ್ರ. ಇಷ್ಟಾದರೂ ತೆರೆಮರೆಯಲ್ಲಿ ದಕ್ಷತೆಯಿಂದ ಕೆಲಸ ನಿರ್ವಹಿಸುವ ಅಧಿಕಾರಿಗಳು ಬೆರಳೆಣಿಕೆಯಷ್ಟಾದರೂ ಕಾಣಸಿಗುತ್ತಾರೆ. ಅಂದಿನ ಗೃಹ ಕಾರ್ಯದರ್ಶಿ ಸೋಮಯ್ಯ ಅತ್ಯುತ್ತಮ ಅಧಿಕಾರಿಯಾಗಿದ್ದರು. ಸಂಪುಟ ಕಾರ್ಯದರ್ಶಿಯಾಗಿದ್ದ ದೇಶ್‌ಮುಖ್ ಸಲ್ಲಿಸಿದ ಸೇವೆ ಅಷ್ಟೇ ಉನ್ನತಮಟ್ಟದ್ದು. ನಂತರ ಅವರು ಪ್ರಧಾನಮಂತ್ರಿ ಕಚೇರಿಯಲ್ಲೂ ಕಾರ್ಯ ನಿರ್ವಹಿಸಿದರು.

ಬ್ಲೂ ಸ್ಟಾರ್ ಕಾರ್ಯಾಚರಣೆಯ ನಂತರವೂ ಸಿಖ್ ಅಂಗರಕ್ಷಕರನ್ನು ಹೊಂದುವ ನಿರ್ಧಾರ ಇಂದಿರಾ ಗಾಂಧಿ ಅವರದ್ದೇ ಆಗಿತ್ತು. ಇಂದಿರಾ ಗಾಂಧಿ ಅವರ ಸುರಕ್ಷತೆಯ ಜವಾಬ್ದಾರಿ ಹೊತ್ತಿದ್ದ ನನ್ನ ಸ್ನೇಹಿತ ಮೂರ್ತಿ ಅವರು ಸಿಖ್ ಅಂಗರಕ್ಷಕರನ್ನು ನೇಮಿಸಿಕೊಳ್ಳಬಾರದೆಂದು ಆದೇಶ ಹೊರಡಿಸಿದ್ದರು. ಆ ಕುರಿತ ಆದೇಶ ಈಗಲೂ ದಾಖಲೆಗಳಲ್ಲಿದೆ. ಆದರೆ ಇಂದಿರಾ ಗಾಂಧಿ ಆ ಆದೇಶವನ್ನು ಧಿಕ್ಕರಿಸಿ ಆ ಸಿಖ್ ಅಂಗರಕ್ಷಕರನ್ನು ನೇಮಿಸಿಕೊಂಡಿದ್ದರು.

ಅದೇ ರೀತಿ ರಾಜೀವ್ ಗಾಂಧಿ ಕೂಡ ತಮ್ಮ ಅಂಗರಕ್ಷಕರನ್ನು ನಿರ್ಲಕ್ಷಿಸಿದ ಪರಿಣಾಮ ಶ್ರೀಪೆರಂಬದೂರಿನಲ್ಲಿ ದುರಂತ ಕಂಡರು. ಈ ನಿಟ್ಟಿನಲ್ಲಿ ಪ್ರಮುಖ ವ್ಯಕ್ತಿಗಳ ಭದ್ರತೆಗೆ ಸಂಬಂಧಿಸಿದಂತೆ ಯಾರಾದರೂ ಕಠಿಣ ನಿಲುವು ತಳೆಯುವ ಅಗತ್ಯವಿದೆ. ನನ್ನ ಸ್ನೇಹಿತ ಮೂರ್ತಿ, 'ಇಲ್ಲ ಮೇಡಂ, ನನ್ನಿಂದ ಅದು ಸಾಧ್ಯವಿಲ್ಲ್ಲ' ಎಂದು ನಿಷ್ಠುರವಾಗಿ ಹೇಳಬಹುದಾಗಿತ್ತು.

ನಾವೀಗ ತುಂಬ ವಿಲಕ್ಷಣ ಸಂದಿಗ್ಧತೆಯ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದೇವೆ. ದೇಶ ಸೇವಕರ ಸೋಗಿನಲ್ಲಿರುವ ವ್ಯಕ್ತಿಗಳು ಸಚಿವ ಸ್ಥಾನಕ್ಕೆ ಚೌಕಾಶಿ ಮಾಡುತ್ತಿರುವುದನ್ನು ಅಸಹಾಯಕರಾಗಿ ನೋಡುತ್ತಿದ್ದೇವೆ. ಬ್ಲೂ ಸ್ಟಾರ್ ಕಾರ್ಯಾಚರಣೆಯ ಸಂದರ್ಭದಲ್ಲಿ ಸೌಜನ್ಯಕ್ಕೂ ಸರ್ಕಾರ ನನ್ನನ್ನು ಸಂಪರ್ಕಿಸುವ ಗೋಜಿಗೆ ಹೋಗಲಿಲ್ಲ. ಆ ಸಂದರ್ಭದಲ್ಲಿ ನಾನು ಜಮ್ಮುವಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. ಸೇನೆಯಲ್ಲಿ ಚಿಕ್ಕ ಬಂಡಾಯ ಏರ್ಪಟ್ಟಿತ್ತಾದ್ದರಿಂದ ನನ್ನನ್ನು ಅಲ್ಲಿಗೆ ನಿಯುಕ್ತಿಗೊಳಿಸಲಾಗಿತ್ತು. ಆಗ ಗಡಿ ಭದ್ರತಾ ಪಡೆ ಅವಿಚ್ಛಿನ್ನವಾಗಿಯೇ ಉಳಿದಿದ್ದರೂ ಸೇನೆಯಲ್ಲಿದ್ದ ಕೆಲವು ತುಕಡಿ ಪಾಕಿಸ್ತಾನಕ್ಕೆ ಪಥಸಂಚಲನ ನಡೆಸಲು ಹೊರಟಿತ್ತು. ಕಾರಣ ನನಗೆ ತಿಳಿದಿರಲಿಲ್ಲ.

ಒಂದೊಮ್ಮೆ ಬ್ಲೂ ಸ್ಟಾರ್ ಕಾರ್ಯಾಚರಣೆಯ ಮುಂದಾಳತ್ವ ನಾನು ವಹಿಸಿದ್ದರೆ ಆಗ ಸ್ವರ್ಣ ಮಂದಿರದೊಳಗೆ ನುಗ್ಗುವುದು ನನ್ನ ಕಟ್ಟಕಡೆಯ ಆಯ್ಕೆಯಾಗಿರುತ್ತಿತ್ತು. ಒಂದು ಕಾರ್ಯಾಚರಣೆಯ ಚುಕ್ಕಾಣಿ ಹಿಡಿದವನಾಗಿ ಸ್ವರ್ಣ ಮಂದಿರದೊಳಗೆ ನುಗ್ಗುವುದು ಹಾಗೂ ಅಷ್ಟು ಪ್ರಮಾಣದಲ್ಲಿ ಹಿಂಸಾಚಾರಕ್ಕೆ ಎಡೆ ಮಾಡಿಕೊಡುವುದು ನನ್ನ ಪಾಲಿಗೆ ಕೊನೆಯ ಆಯ್ಕೆಯಾಗಿರುತ್ತಿತ್ತು. ಕಾರ್ಯಾಚರಣೆ ಮುಂದುವರಿಯುತ್ತಲೇ ಮುಂದಿನ ಹೆಜ್ಜೆಗಳನ್ನು ನಿರ್ಧರಿಸಲಾಗುತ್ತಿತ್ತು. ನಮ್ಮೆದುರಿಗಿರುವ ಪ್ರತಿಯೊಂದು ಅವಕಾಶಗಳನ್ನೂ ಕೂಲಂಕಷವಾಗಿ ಪರಾಮರ್ಶಿಸಿದ ನಂತರವೇ ಮುಂದಿನ ಹೆಜ್ಜೆ ಇಡಲಾಗುತ್ತಿತ್ತು. ಆಗ ಸಮಸ್ಯೆಗಳು ತಾವಾಗಿಯೇ ಬಗೆಹರಿಯುತ್ತಿದ್ದವು.

ಚಿಕ್ಕ ಪುಟ್ಟ ಗುಂಡಿನ ದಾಳಿ ಅಥವಾ ಸಂಧಾನ ಹೀಗೆ ಅಹಿಂಸಾತ್ಮಕ ಮಾರ್ಗಗಳನ್ನು ಬಳಸುವುದೇ ಮೊದಲನೆಯ ಆಯ್ಕೆಯಾಗಬೇಕು. ಸೇನೆಯನ್ನು ಬಳಸಿಕೊಳ್ಳುವ ಅಗತ್ಯವೇ ಇಲ್ಲ. ಕೇಂದ್ರ ಮೀಸಲು ಪೊಲೀಸ್ ಪಡೆಯನ್ನು ಬಳಸಿಕೊಳ್ಳಬಹುದಾಗಿತ್ತು. ಕಾರ್ಯಾಚರಣೆಯ ಸಂದರ್ಭದಲ್ಲಿ ಮೀಸಲು ಪಡೆಯನ್ನು ಏಕೆ ನಿರ್ಲಕ್ಷಿಸಲಾಯಿತು ಎಂದು ನನಗೆ ಇನ್ನೂ ತಿಳಿದಿಲ್ಲ.

ಆಪರೇಷನ್ ಬ್ಲಾಕ್ ಥಂಡರ್ ಕಾರ್ಯಾಚರಣೆಯೊಂದಿಗೆ ಇದನ್ನು ಹೋಲಿಸಿ ನೋಡಬಹುದು. ಬ್ಲಾಕ್ ಥಂಡರ್ ಕಾರ್ಯಾಚರಣೆಗೆ ಮುನ್ನ ಮೊದಲ ಸಭೆ ನಡೆದಿದ್ದು ರಾಜೀವ್ ಗಾಂಧಿ ಅವರ ಕೋಣೆಯಲ್ಲಿ. ಅವರ ಕೋಣೆಯ ಮೇಜಿನ ಮೇಲೆ ಸ್ವರ್ಣ ಮಂದಿರಕ್ಕೆ ಸಂಬಂಧಿಸಿದ ಒಂದು ನಕಾಶೆ ಇತ್ತಷ್ಟೇ. ರಾಜೀವ್, ಚಿದಂಬರಂ ಅಲ್ಲಿದ್ದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ನಾರಾಯಣನ್ ಕೂಡಾ ಅಲ್ಲಿದ್ದರು. ಪಂಜಾಬ್ ರಾಜ್ಯಪಾಲರಾಗಿದ್ದ ಸಿದ್ದಾರ್ಥ ಶಂಕರ ರೇ ಹಾಗೂ ಪ್ರಧಾನ ಕಾರ್ಯದರ್ಶಿ ಕೂಡ ಅಲ್ಲಿ ಉಪಸ್ಥಿತರಿದ್ದರು.

ಮುಂದೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಚರ್ಚೆ ಪ್ರಾರಂಭವಾಯಿತು. 'ನಾನೊಂದು ಸಲಹೆ ನೀಡಬಹುದೇ?' ಎಂದು ಕೇಳಿದೆ. ರಾಜೀವ್ ಗಾಂಧಿ 'ಹೇಳಿ' ಎಂದರು. ಆಗ ಈ ಸಲಹೆ ಮುಂದಿಟ್ಟೆ: ನಕಾಶೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದರಲ್ಲಿ 3 ಆಯತಾಕಾರದ ಭಾಗಗಳನ್ನು ಕಾಣಬಹುದು. ಅದರಲ್ಲಿ ಒಂದು ಮಹಲು. ದೇವಾಲಯದ ಆಡಳಿತ ಮಂಡಳಿಯ ವಿರೋಧದ ನಡುವೆಯೇ ಪೊಲೀಸರು ಅಲ್ಲಿ ಪ್ರವೇಶಿಸಿದ್ದಾರೆ. ಎರಡನೆಯದು ಲ್ಯಾಂಗರ್ ಕಟ್ಟಡ. ಅಲ್ಲಿ ಪೊಲೀಸರು ತಲುಪಿದ್ದಾರೆ ಮತ್ತು ತೀವ್ರ ಹಣಾಹಣಿ ನಡೆಯುತ್ತಿದೆ. ಮೂರನೆಯದು ಸ್ವರ್ಣ ಮಂದಿರ. ಅದು ಪವಿತ್ರವಾದ ಗರ್ಭಗುಡಿಯಾದ್ದರಿಂದ ಅಲ್ಲಿಗೆ ಕಾಲಿಟ್ಟಲ್ಲಿ ಸಮಸ್ಯೆ ಎದುರಿಸಬೇಕಾಗಿ ಬರಬಹುದು. ಭಯೋತ್ಪಾದಕರ ಆಯಕಟ್ಟಿನ ಸ್ಥಾನ ನಮಗೆ ತಿಳಿದಾಗಿದೆ. ಹಾಗಾಗಿ ಹಠಾತ್ ದಾಳಿ ನಡೆಸುವುದು, ಕಾರ್ಯಾಚರಣೆ ನಡೆಸುವುದು ಮತ್ತು ವಾಪಸಾಗುವುದು ನಮ್ಮ ಯೋಜನೆ. ಭಯೋತ್ಪಾದಕರ ವಿರೋಧ ತೀವ್ರವಾಗಿದ್ದು, ನಿರಂತರ ಪ್ರತಿರೋಧ ವ್ಯಕ್ತವಾದಲ್ಲಿ ಯಾರಿಗಾದರೂ ಗುಂಡು ತಗಲಿತೆಂದರೆ 'ಸರಿ ತಗುಲಲಿ' ಎಂದು ಸುಮ್ಮನಿರುವುದು. ಏಕೆಂದರೆ ಅಂತಹ ಕಾರ್ಯಾಚರಣೆಯಲ್ಲಿ ಕೆಲವರಿಗೆ ಗುಂಡಿನ ಗಾಯವಾಗುವುದನ್ನು ತಪ್ಪಿಸುವುದು ಸಾಧ್ಯವಿಲ್ಲ.

ರಾಜೀವ್ ಇದಕ್ಕೆ ಸಮ್ಮತಿ ಸೂಚಿಸಿದರು. ಆ ಕಾರ್ಯಾಚರಣೆಗೆ ಏನೆಂದು ಕರೆಯುವುದು ಎಂದು ರಾಜೀವ್ ಕೇಳಿದರು. ಕಾರ್ಯಾಚರಣೆಗೆ ಆಗ ಇನ್ನೂ ಬ್ಲಾಕ್ ಥಂಡರ್ ಎಂಬ ಹೆಸರು ಬಂದಿರಲಿಲ್ಲ. ರಾಜೀವ್ ಸ್ವತಃ ಅದನ್ನು 'ಗಿಲ್ ಪ್ಲಾನ್' ಎಂದು ಕರೆದರು. ನಂತರ ಆ ಕಾರ್ಯಾಚರಣೆಯನ್ನು ಗಿಲ್ ಪ್ಲಾನ್ ಹೆಸರಿನಲ್ಲೇ ನಿಯೋಜಿಸಲಾಯಿತು. ನಂತರ ನಮ್ಮ ಯೋಜನೆಯಂತೆಯೇ ಕಾರ್ಯನಿರ್ವಹಿಸಿದೆವು. ಮುಂದಿನದ್ದೆಲ್ಲಾ ಈಗ ಇತಿಹಾಸ.

(ನಿರೂಪಣೆ: ರಂಜಿತ್ ಭೂಷಣ್)

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location

ಮುಖಪುಟ ಲೇಖನದಲ್ಲಿ ಇನ್ನೇನಿದೆ

25 ವರ್ಷ ಕಳೆದ ಮೇಲೆ ಆಪರೇಷನ್ ಬ್ಲೂಸ್ಟಾರ್

25 ವರ್ಷ ಕಳೆದ ಮೇಲೆ ಆಪರೇಷನ್ ಬ್ಲೂಸ್ಟಾರ್

ಬದಲಾವಣೆ ಗಾಳಿಗೆ ಬಾಗಿದ ಪಂಜಾಬ್

1984ರ ಕರಾಳ ಇತಿಹಾಸದತ್ತ ಕಣ್ಣೋಟ

ಭಗತ್‌ಸಿಂಗ್‌ಗಿಂತ ಜನಪ್ರಿಯ ಭಿಂದ್ರನ್‌ವಾಲೆ

‘ಸಿಖ್ ಸಿಪಾಯಿ ದಂಗೆ’ಯ ಮರೆಯಲಾಗದ ನೆನಪುಗಳು

ದುರ್ಗಂಧದ ನಡುವೆ ಕಳೆದ ಆ ದಿನ

ಆಪರೇಷನ್ ಬ್ಲೂ ಸ್ಟಾರ್ ಅವಿವೇಕದ ಕ್ರಮ

ಖಾಲಿಸ್ತಾನ್ ಕನಸಿಗೆ ಕೊನೆಯಿಲ್ಲ?

ಪ್ರಬಂಧಕ್ ಸಮಿತಿ ಪಾತ್ರ

‘ಸಿಖ್ಖರ ವ್ಯಾಟಿಕನ್’ ಮೇಲಿನ ದಾಳಿ ಮಹಾಪರಾಧ

ಆಧುನಿಕ ಪಂಜಾಬ್‌ನ ಹತ್ತು ಮುಖಗಳು

ಕೊನೆಗೂ ಆ ಫೋಟೋ ತೆಗೆದೇ ಬಿಟ್ಟೆ...

‘ಪಾಕ್ ಸೇನೆಗೆ ಸಿಖ್ಖರೂ ಸೇರಬಹುದು’

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .