User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಮುಖಪುಟ ಲೇಖನ
 

ಪ್ರತ್ಯೇಕತಾವಾದ : ಖಾಲಿಸ್ತಾನ್ ಕನಸಿಗೆ ಕೊನೆಯಿಲ್ಲ?

ಅನಿವಾಸಿ ಭಾರತೀಯ ಸಿಖ್ ಸಮುದಾಯದಲ್ಲಿ 'ಖಾಲಿಸ್ತಾನ್' ರಾಷ್ಟ್ರ ನಿರ್ಮಾಣದ ಕನಸು ಇನ್ನೂ ಜೀವಂತವಿದೆ. ಈ ಕನಸಿನ ರಾಜಕೀಯ ಲಾಭ ಪಡೆದುಕೊಳ್ಳುವ ಪ್ರಯತ್ನವೂ ನಡೆಯುತ್ತಿದೆ ಎನ್ನುತ್ತಾರೆ ವಿಶಾಲ್ ರಂಬಾನಿ

 

'ಸ್ವಾಯತ್ತ ಖಾಲಿಸ್ತಾನ್ ರಾಷ್ಟ್ರ'ದ ಕಲ್ಪನೆ ಸಾಮಾನ್ಯ ಭಾರತೀಯ ಸಿಖ್‌ರಲ್ಲಿ ಈಗಾಗಲೇ ಕೊನೆಯುಸಿರೆಳೆದಿದೆ; ಅಲ್ಲದೆ ಅದು ಎಂದೂ ಚುನಾವಣಾ ವಿಷಯವಾಗಿರಲಿಲ್ಲ. ಆದರೆ ಸಿಖ್ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಕೆನಡಾ, ಯುರೋಪ್ ಹಾಗೂ ಅಮೆರಿಕದಲ್ಲಿ ಇಂದಿಗೂ 'ಖಾಲಿಸ್ತಾನ್' ರಾಷ್ಟ್ರದ ಕನಸು ಚಿಗುರೊಡೆಯುತ್ತಲೇ ಇದೆ. ಆ ರಾಷ್ಟ್ರಗಳಲ್ಲಿ ವಾಸ್ತವ್ಯ ಹೂಡಿರುವ ಸಿಖ್ ಸಮುದಾಯದ ಮಂದಿ ಖಾಲಿಸ್ತಾನ್ ರಾಷ್ಟ್ರದ ನಿರ್ಮಾಣ ಖಂಡಿತಾ ಸಾಧ್ಯ ಎಂಬ ಭರವಸೆಯಲ್ಲಿದ್ದಾರೆ. ಹಾಗಾಗಿ ಮೂರೂ ರಾಷ್ಟ್ರಗಳಲ್ಲಿ ಖಾಲಿಸ್ತಾನ್ ಚಳವಳಿ ಇನ್ನೂ ಜೀವಂತವಾಗಿದ್ದು ಕಾಲ ಕಾಲಕ್ಕೆ ನಡೆಯುವ ಜಾಥಾ, ಸಮಾವೇಶಗಳಲ್ಲಿ ಈ ಕುರಿತ ಘೋಷಣೆಗಳು ಕೇಳಿ ಬರುತ್ತಿವೆ. ಅಂತರ್ಜಾಲದಲ್ಲೂ ಸಾಕಷ್ಟು 'ಉಗ್ರ' ಸಂದೇಶಗಳು ಹರಿದಾಡುತ್ತಿರುವುದನ್ನು ಗಮನಿಸಬಹುದು.

ಖಾಲಿಸ್ತಾನ್ ಪ್ರತ್ಯೇಕತಾವಾದ ಚಳವಳಿಯನ್ನು ಸರ್ಕಾರ ಅಂತ್ಯಗೊಳಿಸಿದ್ದರೂ ಪ್ರತ್ಯೇಕತಾವಾದಿ ನಾಯಕರು ಅದರ ಶವವನ್ನು ಮುಂದಿಟ್ಟುಕೊಂಡು ವಿದೇಶದಿಂದ ಬರುವ ಮಿಲಿಯನ್‌ಗಟ್ಟಲೆ ಹಣ ಬಾಚಿಕೊಳ್ಳುತ್ತಲೇ ಇದ್ದಾರೆ. ಅದರಲ್ಲೂ 'ಆಪರೇಷನ್ ಬ್ಲೂ ಸ್ಟಾರ್' ಕಾರ್ಯಾಚರಣೆ ನಡೆದು 25 ವರ್ಷ ಸಂದ ಪ್ರಸಕ್ತ ಸಂದರ್ಭದಲ್ಲಿ ಈ ಜಾಲ ಇನ್ನಷ್ಟು ಕ್ರಿಯಾಶೀಲವಾದಂತಿದೆ.

ಸಿಖ್ ಬಹುಸಂಖ್ಯಾತರಿರುವ ಇಂಗ್ಲೆಂಡ್ ಹಾಗೂ ಕೆನಡಾದಲ್ಲಿ ಆಗಾಗ ಖಾಲಿಸ್ತಾನ ಚಳವಳಿ ಪರ ಸಭೆ, ಪ್ರತಿಭಟನೆ ಹಾಗೂ ಜಾಥಾಗಳು ನಡೆಯುತ್ತಲೇ ಇವೆ. 1986ರಲ್ಲಿ ಪಂಜಾಬ್‌ನಲ್ಲಿ ಪ್ರತ್ಯೇಕ ಸಿಖ್ ರಾಷ್ಟ್ರಕ್ಕಾಗಿ ನಿರ್ಣಯ ಕೈಗೊಳ್ಳಲಾಯಿತು. ಆ ನೆನಪಿನಲ್ಲಿ ಇಂಗ್ಲೆಂಡ್‌ನಲ್ಲಿ ಇತ್ತೀಚೆಗಷ್ಟೇ ಒಂದು ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಪ್ರಸಕ್ತ ವ್ಯವಸ್ಥೆಯೊಂದಿಗೆ ಯಾವುದೇ ತಕರಾರು ಇಲ್ಲದ ಆಧುನಿಕ ಮನೋಭಾವದ ಸಿಖ್ ಯುವಕರೂ ಪ್ರತ್ಯೇಕವಾದದ ಅಮಲು ಹತ್ತಿಸಿಕೊಳ್ಳುವಂತೆ ಪ್ರಚೋದಿಸುವ ಕೆಲಸ ತುಂಬಾ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಹಾಗಾಗಿ ಪ್ರತ್ಯೇಕತಾವಾದದ ಕೂಗು ಈ ಯುವಕರಲ್ಲಿ ಹೆಚ್ಚಾಗುತ್ತಲೇ ಇದೆ ಎಂದರೆ ಅದರಲ್ಲಿ ಅಚ್ಚರಿಪಡಬೇಕಾದದ್ದೇನಿಲ್ಲ.

ಇಂಗ್ಲೆಂಡ್ ಸಮಾವೇಶವನ್ನು ವ್ಯವಸ್ಥಿತವಾಗಿ ಹಮ್ಮಿಕೊಳ್ಳಲಾಗಿತ್ತು. ದೂರವಾಣಿಯ ಮೂಲಕ ಅನಿವಾಸಿ ಸಿಖ್ ಸಮುದಾಯವನ್ನು ಒಗ್ಗೂಡಿಸಿದ ಈ ಸಂದರ್ಭದಲ್ಲಿ ತಮ್ಮ ಉದ್ದೇಶ ಸಾಧನೆಯ ಕುರಿತ ಬದ್ಧತೆ ವ್ಯಕ್ತಪಡಿಸಲಾಯಿತು. ಸಭೆಯಲ್ಲಿ ಸೇರಿದ್ದ ಸದಸ್ಯರು 'ಇಂಡೋ-ಸಿಖ್' ಸಂಘರ್ಷಕ್ಕೆ ಶೀಘ್ರ ಪರಿಹಾರ ಕಂಡುಕೊಳ್ಳುವ ಇರಾದೆ ವ್ಯಕ್ತಪಡಿಸಿದರೆನ್ನಲಾಗಿದೆ. ಖಾಲಿಸ್ತಾನ ಪ್ರತಿಯೊಬ್ಬ ಸಿಖ್‌ನ ಹೃದಯ ಬಡಿತ ಎಂಬ ಘೋಷಣೆ ಅಲ್ಲಿ ಕೇಳಿ ಬಂದಿದೆ. ಈ ಸಮಾವೇಶದಲ್ಲಿ ನಾಗಾ, ಕಾಶ್ಮೀರಿ, ಅಸ್ಸಾಮಿಸ್ ನಾಯಕರೂ ಭಾಗವಹಿಸಿದ್ದು ಮಾತ್ರ ಕಳವಳದ ಸಂಗತಿ. ಈ ಎಲ್ಲಾ ನಾಯಕರೂ ಮಾತೃ ಭಾಷೆಗಳ ಆಧಾರದಲ್ಲಿ ಸ್ವತಂತ್ರ ರಾಷ್ಟ್ರ ಸ್ಥಾಪಿಸುವ ಧ್ಯೇಯಕ್ಕೆ ಬೆಂಬಲ ಸೂಚಿಸಿದ್ದಾರೆ. ಇಂಥ ಸಮಾವೇಶಗಳು ಇಂಗ್ಲೆಂಡ್, ಕೆನಡಾದ ಹಲವು ಭಾಗಗಳಲ್ಲಿ ನಡೆದ ಬಗ್ಗೆ ನಿದರ್ಶನಗಳೂ ಇವೆ.

ಕೆನಡಾ ಹಾಗೂ ಇಂಗ್ಲೆಂಡ್‌ನ ಬಹುಸಂಖ್ಯಾತ ಸಿಖ್ ಸಮುದಾಯವನ್ನು ಪ್ರಚೋದಿಸಿ ರಾಜಕೀಯ ಲಾಭ ಪಡೆದುಕೊಳ್ಳಲು ವೋಟ್ ಬ್ಯಾಂಕ್ ಮೇಲೆ ಕಣ್ಣಿಟ್ಟಿರುವ ರಾಜಕಾರಣಿಗಳಿಗೂ ಕಡಿಮೆ ಇಲ್ಲ. ಇಂಥ ರಾಜಕಾರಣಿಗಳ ಪಾಲಿಗೆ ಇದು ಹಣ ಹಾಗೂ ರಾಜಕೀಯ ಲಾಭದ ಸೂಕ್ತ ಹಾಗೂ ಪರಿಣಾಮಕಾರಿ ಮಾರ್ಗ. "ವಿದೇಶಗಳಲ್ಲಿ ನೆಲೆಸಿರುವ ಖಾಲಿಸ್ತಾನ್ ಪರ ಹೋರಾಟಗಾರರ ಚಲನವಲನಗಳ ಮೇಲೆ ಸರ್ಕಾರ ಕಣ್ಣಿಟ್ಟಿರುವುದೇನೋ ನಿಜ. ಆದರೆ ಜನಸಾಮಾನ್ಯರು ಈಗಾಗಲೇ ಈ ಚಳವಳಿಯನ್ನು ತಿರಸ್ಕರಿಸಿರುವುದರಿಂದ ಪ್ರತ್ಯೇಕತಾವಾದ ಪಂಜಾಬ್‌ನಲ್ಲಿ ಮತ್ತೊಮ್ಮೆ ನೆಲೆ ಕಂಡುಕೊಳ್ಳುವುದು ಅಸಂಭವ" ಎಂದು ಗುಪ್ತಚರ ಇಲಾಖೆಯ ಅಧಿಕಾರಿಯೊಬ್ಬರು ಅಭಿಪ್ರಾಯ ಪಡುತ್ತಾರೆ.

ಪ್ರತಿ ಬಾರಿ 'ಬೈಸಾಖಿ' ಹಬ್ಬದ ಸಂದರ್ಭದಲ್ಲಿ ಪಾಕಿಸ್ತಾನದಿಂದ ಸಿಖ್ ಪ್ರತ್ಯೇಕತಾವಾದದ ಘೋಷಣೆಗಳು ತೇಲಿಬರುತ್ತಿರುವುದು ಯಾರಿಗೂ ತಿಳಿಯದ್ದೇನಲ್ಲ. ಭಾರತದ ಸಿಖ್ ಯಾತ್ರಾರ್ಥಿಗಳು ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ ಅಲ್ಲಿ ಖಾಲಿಸ್ತಾನ್ ಪರ ಕರಪತ್ರಗಳನ್ನು ದೊಡ್ಡ ಪ್ರಮಾಣದಲ್ಲಿ ಬಹಿರಂಗವಾಗಿಯೇ ಹಂಚಲಾಗುತ್ತದೆ. ಆ ಮೂಲಕ ಸಾಮಾನ್ಯ ಸಿಖ್ ಯಾತ್ರಿಕರ ಮನಸ್ಸನ್ನು ಖಾಲಿಸ್ತಾನ್ ಪರ ತಿರುಗಿಸುವ ಪ್ರಯತ್ನ ಎಗ್ಗಿಲ್ಲದೆ ನಡೆಯುತ್ತದೆ ಎಂಬುದನ್ನು ತಳ್ಳಿಹಾಕುವಂತಿಲ್ಲ.

ವಿಪರ್ಯಾಸವೆಂದರೆ, ಭಾರತದ ಪೊಲೀಸರ 'ಮೋಸ್ಟ್ ವಾಂಟೆಡ್' ಪಟ್ಟಿಯಲ್ಲಿರುವ ಸುಮಾರು 20 ಅಪರಾಧಿಗಳಲ್ಲಿ ಖಾಲಿಸ್ತಾನ್ ಪ್ರತ್ಯೇಕತಾವಾದಿ ನಾಯಕರಾದ ವಾದವಾ ಸಿಂಗ್ ಬಬ್ಬರ್ ಮತ್ತು ಪರಮ್‌ಜಿತ್ ಸಿಂಗ್ ಪಂಜ್ವಾರ ಈಗ ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದಾರೆ.

ಇತ್ತೀಚೆಗಷ್ಟೇ ಮಾದಕ ವಸ್ತು ಸಾಗಿಸುತ್ತಿದ್ದ ಮಾಜಿ ಉಗ್ರರು ಪಂಜಾಬ್ ಪೊಲೀಸರ ಬಲೆಗೆ ಬಿದ್ದಿದ್ದರು. ಸಶಸ್ತ್ರ ಹೋರಾಟಕ್ಕೆ ಯುವಕರನ್ನು ಸೆಳೆಯುವ ಸಲುವಾಗಿ ಹಣ ಹೊಂದಿಸಲು ಆ ಉಗ್ರರು ಮಾದಕ ವಸ್ತು ಸಾಗಾಣಿಕೆಗೆ ಮೊರೆ ಹೋಗಿದ್ದರು ಎಂಬ ಸಂಗತಿ ನಂತರ ಬೆಳಕಿಗೆ ಬಂತು.

ಅದೃಷ್ಟವಶಾತ್, ಭಾರತದ ಮಟ್ಟಿಗೆ ಖಾಲಿಸ್ತಾನ ಚಳವಳಿ ಅಂತ್ಯಗೊಂಡು ದಶಕಗಳೇ ಸಂದಿವೆ. ಅಲ್ಲಿನ ಜನತೆ ಚುನಾವಣೆಯಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿರುವುದು ಅವರು ಸಶಸ್ತ್ರ ಹೋರಾಟವನ್ನು ತ್ಯಜಿಸಿರುವುದಕ್ಕೆ ಪುರಾವೆ ಒದಗಿಸುತ್ತದೆ. ಈ ಬಾರಿಯ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿದ್ದ, ಪ್ರತ್ಯೇಕ ಖಾಲಿಸ್ತಾನದ ಬೆಂಬಲಿಗರಾದ ಅತಿಂದರ್‌ಪಾಲ್ ಸಿಂಗ್, ವಾಸನ್ ಸಿಂಗ್ ಜಾಫರ್‌ವಾಲ್ ಹಾಗೂ ಸಿಮ್ರಾನ್‌ಜಿತ್ ಸಿಂಗ್ ಮಾನ್ ಮೊದಲಾದವರಿಗೆ ಮತದಾರ ಪ್ರಭು ಮಣ್ಣು ಮುಕ್ಕಿಸಿದ್ದರೂ ಬಿಸಿರಕ್ತದ, ಮುಗ್ಧಮನಸ್ಸಿನ ಯುವಕರನ್ನು ಹಾದಿ ತಪ್ಪಿಸುವಷ್ಟು ಪ್ರಭಾವವನ್ನು ಅವರಿನ್ನೂ ಉಳಿಸಿಕೊಂಡಿರುವುದು ಸುಳ್ಳಲ್ಲ.

"ನಮ್ಮ ಸ್ವಾತಂತ್ರ್ಯ ಹೋರಾಟ ಸಾವನ್ನಪ್ಪಿದೆ ಎಂದು ಹೇಳಿದ್ದು ಯಾರು? ಆ ಉದ್ದೇಶ ಇನ್ನೂ ಜೀವಂತವಾಗಿದೆ. ಜನರು ಸಶಸ್ತ್ರ ಹೋರಾಟವನ್ನು ಬೆಂಬಲಿಸಿಲ್ಲ, ನಿಜ. ಆದರೆ ಶಾಂತಿಯುತ ಹಾಗೂ ಪ್ರಜಾಸತ್ತಾತ್ಮಕ ಹೋರಾಟದ ಮೂಲಕ ಪ್ರತ್ಯೇಕ ರಾಷ್ಟ್ರದ ಕನಸನ್ನು ನನಸು ಮಾಡಿಕೊಳ್ಳುವ ಸಾಧ್ಯತೆಗಳು ಇನ್ನೂ ಜೀವಂತವಾಗಿವೆ. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳನ್ನು ನಾವು ಮಾಡುತ್ತಲೇ ಇದ್ದೇವೆ. ಒಂದಲ್ಲಾ ಒಂದು ದಿನ ನಮ್ಮ ಬಹುದಿನದ ಕನಸು ಖಂಡಿತಾ ಸಾಕಾರಗೊಳ್ಳಲಿದೆ" ಎಂದು ಭರವಸೆಯಿಂದ ತಮ್ಮ ವಾದ ಮಂಡಿಸುತ್ತಾರೆ ದಲ್ ಖಾಲ್ಸಾದ ಪ್ರಧಾನ ಕಾರ್ಯದರ್ಶಿ ಕನ್ವರ್‌ಪಾಲ್ ಸಿಂಗ್ ಬಿಟ್ಟು. 2005ರಲ್ಲಿ ಖಾಲಿಸ್ತಾನ ಧ್ವಜ ಹಾರಿಸಿದ ಆರೋಪ ಕನ್ವರ್‌ಪಾಲ್ ಸೇರಿದಂತೆ ಸುಮಾರು 53 ಜನರ ಮೇಲಿದೆ.

ಅಂತರ್ಜಾಲದ ಮೂಲಕ ಖಾಲಿಸ್ತಾನ ಪ್ರತ್ಯೇಕತಾವಾದದ ಕರಪತ್ರಗಳು ಭಾರತದೊಳಗೆ ಕಳೆದ ಕೆಲವು ವರ್ಷಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನುಸುಳುತ್ತಿವೆ. ಪ್ರತ್ಯೇಕತಾವಾದದ ಸಾಹಿತ್ಯವನ್ನೊಳಗೊಂಡ ಪುಸ್ತಕಗಳು ರಸ್ತೆ ಬದಿಯ ಪುಸ್ತಕದಂಗಡಿಗಳಲ್ಲಿ ಕೂಡ ಲಭ್ಯ. ಈ ಎಲ್ಲದರ ಸಂದೇಶ ಒಂದೇ- 'ಖಾಲಿಸ್ತಾನ' ಎಂಬ ಸಿಖ್‌ರ ಕನಸಿಗೆ ಅಂತ್ಯವೆಂಬುದಿಲ್ಲ. ಆದರೆ, ಅದನ್ನು ನನಸಾಗಿಸುವ ನಿಟ್ಟಿನಲ್ಲಿ ಆಯ್ದುಕೊಳ್ಳುವ ಮಾರ್ಗಗಳಲ್ಲಿ ಮಾತ್ರ ಬದಲಾವಣೆ ಕಂಡುಬರುತ್ತಿದೆ.

ಟಿಎಸ್‌ಐ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location

ಮುಖಪುಟ ಲೇಖನದಲ್ಲಿ ಇನ್ನೇನಿದೆ

25 ವರ್ಷ ಕಳೆದ ಮೇಲೆ ಆಪರೇಷನ್ ಬ್ಲೂಸ್ಟಾರ್

25 ವರ್ಷ ಕಳೆದ ಮೇಲೆ ಆಪರೇಷನ್ ಬ್ಲೂಸ್ಟಾರ್

ಬದಲಾವಣೆ ಗಾಳಿಗೆ ಬಾಗಿದ ಪಂಜಾಬ್

1984ರ ಕರಾಳ ಇತಿಹಾಸದತ್ತ ಕಣ್ಣೋಟ

ಭಗತ್‌ಸಿಂಗ್‌ಗಿಂತ ಜನಪ್ರಿಯ ಭಿಂದ್ರನ್‌ವಾಲೆ

‘ಸಿಖ್ ಸಿಪಾಯಿ ದಂಗೆ’ಯ ಮರೆಯಲಾಗದ ನೆನಪುಗಳು

ದುರ್ಗಂಧದ ನಡುವೆ ಕಳೆದ ಆ ದಿನ

ಆಪರೇಷನ್ ಬ್ಲೂ ಸ್ಟಾರ್ ಅವಿವೇಕದ ಕ್ರಮ

ಖಾಲಿಸ್ತಾನ್ ಕನಸಿಗೆ ಕೊನೆಯಿಲ್ಲ?

ಪ್ರಬಂಧಕ್ ಸಮಿತಿ ಪಾತ್ರ

‘ಸಿಖ್ಖರ ವ್ಯಾಟಿಕನ್’ ಮೇಲಿನ ದಾಳಿ ಮಹಾಪರಾಧ

ಆಧುನಿಕ ಪಂಜಾಬ್‌ನ ಹತ್ತು ಮುಖಗಳು

ಕೊನೆಗೂ ಆ ಫೋಟೋ ತೆಗೆದೇ ಬಿಟ್ಟೆ...

‘ಪಾಕ್ ಸೇನೆಗೆ ಸಿಖ್ಖರೂ ಸೇರಬಹುದು’

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .