|
ರಾತ್ರಿ
8 ಗಂಟೆಗೆ ಸರಿಯಾಗಿ 36 ಗಂಟೆಗಳ ನಿಷೇಧಾಜ್ಞೆ ಹೇರಿಕೆ ಕುರಿತ ಪಂಜಾಬ್ ಮತ್ತು
ಚಂಡೀಗಢ ಸರ್ಕಾರಗಳ ಘೋಷಣೆ ಪತ್ರಿಕಾ ಕಚೇರಿ ತಲುಪಿತ್ತು. ಅಂದಿನ
ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಆ ಹೇಳಿಕೆಯನ್ನು ಲಘುವಾಗಿ
ಪರಿಗಣಿಸುವಂತಿರಲಿಲ್ಲ. ನಿಷೇಧಾಜ್ಞೆ ಸಮಯದಲ್ಲಿ ಪಂಜಾಬ್ ಮತ್ತು
ಚಂಡೀಗಢದಾದ್ಯಂತ ಎಲ್ಲಾ ಕಾರ್ಯ ಚಟುವಟಿಕೆಗಳೂ ಸ್ಥಗಿತಗೊಳ್ಳಲಿವೆ ಎನ್ನುವುದು
ಆ ಆದೇಶದಿಂದ ಸ್ವಷ್ಟವಾಗಿತ್ತು. ಸುದ್ದಿ ಕೇಳಿದಾಕ್ಷಣ ಕಚೇರಿಗಳಲ್ಲಿ
ಕುಳಿತಿದ್ದವರೆಲ್ಲ ಅಗತ್ಯ ಪರಿಕರಗಳನ್ನು ಕಲೆಹಾಕುವ ಧಾವಂತಕ್ಕಿಳಿದರು.
ಘೋಷಣೆಯ ಎರಡು ದಿನಗಳ ಹಿಂದೆಯಷ್ಟೇ ಅರೆಸೇನಾ ಪಡೆ ಹಾಗೂ ಸ್ವರ್ಣಮಂದಿರ
ಆವರಣದಲ್ಲಿ ಅಡಗಿದ್ದ ಉಗ್ರಗಾಮಿಗಳ ನಡುವೆ ತೀವ್ರ ಸ್ವರೂಪದ ಗುಂಡಿನ ಚಕಮಕಿ
ನಡೆದಿತ್ತು. ಅಂತೆಯೇ ತಿಂಗಳ ಮೂರನೇ ವಾರಾಂತ್ಯದಲ್ಲಿ ಪಂಜಾಬ್‌ನಲ್ಲಿ ಭಾರೀ
ಪ್ರಮಾಣದ ಸೇನಾ ಚಟುವಟಿಕೆಗಳು ಕಂಡುಬಂದಿದ್ದವು. ಸಂಪೂರ್ಣ ರಾಜ್ಯವನ್ನೇ
ಅಧಿಕೃತವಾಗಿ ಸೇನಾ ಸುಪರ್ದಿಗೆ ಒಪ್ಪಿಸಿದ್ದರಿಂದ ರಾಜ್ಯದಲ್ಲಿ ಸೇನಾ
ಕಾರ್ಯಾಚರಣೆ ನಡೆಯುತ್ತಿದೆ ಎನ್ನುವುದು ಮಾಧ್ಯಮ ಪ್ರತಿನಿಧಿಗಳಿಗೆ
ಮನದಟ್ಟಾಗಿತ್ತು. ಆ ನಿರೀಕ್ಷೆಯಲ್ಲಿರುವಾಗಲೇ ನಿಷೇಧಾಜ್ಞೆ 72 ಗಂಟೆಗಳಿಗೆ
ವಿಸ್ತರಿಸಿರುವ ಸುದ್ದಿಯೂ ಬಂತು. ಹೌದು, ಆಪರೇಷನ್ ಬ್ಲೂ ಸ್ಟಾರ್
ಪ್ರಾರಂಭವಾಗಿತ್ತು. ಪಂಜಾಬ್ ಬಾಹ್ಯ ಪ್ರಪಂಚದ ಜೊತೆಗಿನ ಎಲ್ಲಾ
ಸಂಪರ್ಕಗಳನ್ನೂ ಕಡಿದುಕೊಂಡಿತ್ತು. ರಾಜ್ಯದಲ್ಲಿ ಏನು ನಡೆಯುತ್ತಿದೆ ಎನ್ನುವ
ಮಾಹಿತಿ ಯಾರ ಬಳಿಯೂ ಲಭ್ಯವಿರಲಿಲ್ಲ.
ಅಂತಿಮವಾಗಿ ಜೂನ್ 6ರ ಸಂಜೆಯ ವೇಳೆಗೆ ಅಧಿಕೃತ
ಮಾಹಿತಿ ನೀಡುವ ಸಲುವಾಗಿ ಮಾಧ್ಯಮ ಪ್ರತಿನಿಧಿಗಳನ್ನು ಪಂಜಾಬ್ ಭವನಕ್ಕೆ
ಕರೆದೊಯ್ಯಲಾಯಿತು. ಅಲ್ಲಿ ಪಶ್ಚಿಮ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್
ಕೆ. ಸುಂದರ್‌ಜಿ ಅವರು ಪ್ರಪ್ರಥಮ ಬಾರಿಗೆ 'ಆಪರೇಷನ್ ಬ್ಲೂ ಸ್ಟಾರ್'
ಕುರಿತಾದ ಮಾಹಿತಿ ಬಿಚ್ಚಿಟ್ಟರು. ಆದರೆ ಅದಾದ ಕೆಲವು ದಿನಗಳ ಬಳಿಕವಷ್ಟೇ
ಮಾಧ್ಯಮ ಪ್ರತಿನಿಧಿಗಳಿಗೆ ರಣಭೂಮಿಯಾಗಿ ಪರಿವರ್ತನೆಯಾಗಿದ್ದ ಕಾರ್ಯಾಚರಣೆಯ
ಸ್ಥಳ ಸ್ವರ್ಣಮಂದಿರ ವೀಕ್ಷಿಸಲು ಅನುವು ಮಾಡಿಕೊಡಲಾಯಿತು.
1984ರ ಜೂನ್ 15ರ ಮುಂಜಾವು ತಾಪಮಾನ
ಮಾಮೂಲಿಗಿಂತಲೂ ಹೆಚ್ಚಿಗಿತ್ತು. ಭಾರತೀಯ ವಾಯುಸೇನೆಯ ವಿಮಾನ
ಪತ್ರಕರ್ತರಿಗಾಗಿ ಕಾಯುತ್ತಿತ್ತು. ಅಲ್ಯುಮಿನಿಯಂ ಆಸನಗಳಿದ್ದ ಎರಡನೇ
ಮಹಾಯುದ್ಧ ಕಾಲದ ದ್ವಿಯಂತ್ರ ಡಕೋಟಾ ಯುದ್ಧವಿಮಾನ ಚಂಡೀಗಢ ವಿಮಾನ ನಿಲ್ದಾಣದ
ಒತ್ತಡದ ವಾತಾವರಣಕ್ಕೆ ಮತ್ತಷ್ಟು ಕಳವಳ ತುಂಬಿತ್ತು. ಅಲ್ಲಿಂದ ಒಂದು ಡಜನ್
ಪತ್ರಕರ್ತರನ್ನು ಹೊತ್ತು ಆಗಸಕ್ಕೆ ನೆಗೆದ ಆ ವಿಮಾನ ಯುದ್ಧವಲಯದೆಡೆಗೆ
ಹಾರಿತು. ದುರದೃಷ್ಟವಶಾತ್ ನಾವು ವೀಕ್ಷಿಸಲು ಹೊರಟಿದ್ದ ಆ ರಣಭೂಮಿ ಸಿಖ್
ಸಮುದಾಯದ ಅತ್ಯಂತ ಪವಿತ್ರ ಕ್ಷೇತ್ರವಾದ ಅಮೃತಸರದ ದರ್ಬಾರ್ ಸಾಹೀಬ್
ಸಂಕೀರ್ಣವಾಗಿತ್ತು.
ಪತ್ರಕರ್ತರನ್ನು ಹೊತ್ತ ವಿಮಾನ ಅಮೃತಸರದ ರಾಜಾ
ಸಾನ್ಸಿ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ಸೇನೆಯ ಶಸ್ತ್ರಸಜ್ಜಿತ
ವಾಹನಗಳ ಬಂದೂಕಿನ ಅಂಚುಗಳೆಲ್ಲ ವಿಮಾನದ ಕಡೆ ಹೊರಳಿ ಸ್ವಾಗತ ಕೋರಿದವು.
ಯಾವುದೋ ಶತ್ರು ಸೈನ್ಯದ ವಿಮಾನ ಭೂಮಿಗಿಳಿದಂತೆ ಶಸ್ತ್ರಸನ್ನದ್ಧ ಸೈನಿಕರು
ವಿಮಾನವನ್ನು ಸುತ್ತಿವರಿದರು. ಆದರೆ ಘಟನಾಸ್ಥಳಕ್ಕೆ ಹೋಗಲು ಮತ್ತೂ ಎರಡು
ಗಂಟೆಗಳ ಕಾಲ ಕಾಯಬೇಕಾಯಿತು. ತಾಪಮಾನ 45 ಡಿಗ್ರಿ ಸೆಲ್ಷಿಯಸ್‌ಗಿಂತಲೂ
ಹೆಚ್ಚಿದ್ದ ವಾತಾವರಣದಲ್ಲಿ ಪಂಜಾಬ್ ಸಾರಿಗೆ ಸಂಸ್ಥೆಯ ಬಸ್ಸಿಗಾಗಿ
ಕಾಯುತ್ತಿದ್ದ ಪತ್ರಕರ್ತರಿಗೆ ತೃಪ್ತಿಕರ ವ್ಯವಸ್ಥೆ ಕಲ್ಪಿಸಲು
ವಿಮಾನಾಧಿಕಾರಿಗಳು ಸಾಕಷ್ಟು ಬೆವರು ಸುರಿಸಿದ್ದರು. ಸುದೀರ್ಘ ಕಾಯುವಿಕೆಯ
ನಂತರ ಪಂಜಾಬ್ ರಸ್ತೆ ಸಾರಿಗೆ ಬಸ್ಸು ಸ್ಥಳಕ್ಕೆ ಬಂತು. ಒಟ್ಟಾರೆಯಾಗಿ
ಜಿಲ್ಲಾಡಳಿತ ಹಾಗೂ ವಾಯುಸೇನೆಯ ಅಧಿಕಾರಿಗಳ ನಡುವೆ ಸಂವಹನದ ಕೊರತೆಯಿದ್ದುದು
ಸ್ಪಷ್ಟವಾಗಿ ಗೋಚರವಾಗುತ್ತಿತ್ತು. ಈ ನಡುವೆ ಪತ್ರಕರ್ತರನ್ನೆಲ್ಲಾ
'ಆಪರೇಷನ್ ಕೋಣೆ'ಗೆ ಕರೆದೊಯ್ಯಲಾಯಿತು. ಯುದ್ಧಭೂಮಿಯಾಗಿ ಬದಲಾಗಿದ್ದ
ದರ್ಬಾರ್ ಸಾಹೀಬ್ ಸಂಕೀರ್ಣದ ದೊಡ್ಡದೊಂದು ನಕ್ಷೆಯನ್ನು ಗೋಡೆಗೆ
ನೇತುಹಾಕಲಾಗಿತ್ತು. ಕಾರ್ಯಾಚರಣೆಯ ಸ್ಥಳೀಯ ಕಮಾಂಡರ್ ಆಗಿ
ಕಾರ್ಯನಿರ್ವಹಿಸಿದ್ದ ಮೇಜರ್ ಜನರಲ್ ಕುಲ್‌ದೀಪ್ ಸಿಂಗ್ ಬ್ರಾರ್ ಅವರಿಂದ
ಕಾರ್ಯಾಚರಣೆಯ ಸಂಕ್ಷಿಪ್ತ ಮಾಹಿತಿ ಪಡೆದ ನಂತರ ಪತ್ರಕರ್ತರ ದಂಡು ಆ
ಸ್ಥಳದತ್ತ ಹೊರಟಿತು.
'ಗಂಟಾ ಘರ್' ಕಡೆಯ ಮುಖ್ಯದ್ವಾರದ ಮೂಲಕ
ಒಳಹೋಗಿ ನೋಡಿದಾಗ ತೀವ್ರ ಹಾನಿಗೊಳಗಾಗಿದ್ದ ದರ್ಬಾರ್ ಸಾಹೀಬ್ ಕಟ್ಟಡ ಎರಡನೇ
ಮಹಾಯುದ್ಧದ ನಂತರದ ಅವಶೇಷದಂತೆ ಜರ್ಜರಿತವಾಗಿತ್ತು. ಮುಖ್ಯದ್ವಾರದ
ಬಳಿಯಿದ್ದ ದೊಡ್ಡ ಗಡಿಯಾರ ಕೆಲಸ ಮಾಡುವುದನ್ನು ನಿಲ್ಲಿಸಿತ್ತು. ಜೂನ್ 4ರ
ಮುಂಜಾನೆ ಈ ಕಾರ್ಯಾಚರಣೆ ಆರಂಭವಾಗಿತ್ತು ಎನ್ನುವುದಕ್ಕೆ ನಿಂತು ಹೋಗಿದ್ದ ಆ
ಗಡಿಯಾರ ಸಾಕ್ಷಿಯಾಗಿತ್ತು. ಅಲ್ಲೆಲ್ಲಾ ಮಾನವ ಮಾಂಸದ ದುರ್ವಾಸನೆ
ವ್ಯಾಪಿಸಿತ್ತು. 'ಅಕಾಲ್ ತಖ್ತ್'ನ ಮುಂಭಾಗದಲ್ಲಿ ದೇಗುಲದ ಪವಿತ್ರ
ಗರ್ಭಗುಡಿಯೆಡೆಗೆ ಸಾಗುವ 'ದರ್ಶನಿ ದಿಯೋದಿ'ಯ ಐತಿಹಾಸಿಕ ದ್ವಾರದ ಮೇಲೆ
ಹಚ್ಚಲಾಗಿದ್ದ ದೊಡ್ಡ ದೊಡ್ಡ ಅಕ್ಷರಗಳಲ್ಲಿ ಮುದ್ರಿಸಿದ್ದ ನೊಟೀಸ್‌ನಲ್ಲಿ "ಸೇನಾ
ನಿಯಂತ್ರಿತ ಪ್ರದೇಶ" ಎಂದು ಬರೆಯಲಾಗಿತ್ತು. ಹೌದು, ಆ ಪ್ರದೇಶ ಹಾಗೆಯೇ
ಇತ್ತು.
ಸೇನಾ ಅಧಿಕಾರಿಗಳು ಕಾರ್ಯಾಚರಣೆಯ
ಸಂದರ್ಭದಲ್ಲಿ ಗರ್ಭಗುಡಿಗೆ ಹಾನಿಯಾಗುವುದನ್ನು ತಪ್ಪಿಸಲು ತಾವು ಪಟ್ಟ
ಶ್ರಮವನ್ನು ವಿವರಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದರು. ಆದರೆ ಯಾರೂ
ಸರಿಪಡಿಸಲಾಗದಂಥ ಗಾಯವನ್ನು ಅವರಾಗಲೇ ಮಾಡಿದ್ದರು. ಸಿಖ್ ಸಮುದಾಯದವರ
ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದ್ದದ್ದು ಮಾತ್ರ ಸ್ಪಷ್ಟ.
ಮದ್ದುಗುಂಡುಗಳನ್ನು ಹೊತ್ತೊಯ್ಯಲು ಸೈನಿಕರು ಬಳಸುವಂಥ ಚೀಲಗಳು ದರ್ಬಾರ್
ಸಾಹೀಬ್‌ನ ಮೊದಲನೇ ಮಹಡಿಯೆಡೆಗೆ ಸಾಗುವ ಎರಡು ಮೆಟ್ಟಿಲುಗಳ ಮೇಲೆ ರಾಶಿ
ಬಿದ್ದಿತ್ತು. ಮೊದಲನೇ ಮಹಡಿಗೆ ಹೋದರೆ, ಸಿಖ್ ಸಮುದಾಯದ ಪವಿತ್ರ ಗ್ರಂಥ
'ಗುರುಗ್ರಂಥ್ ಸಾಹಿಬ್'ನ ಹಸ್ತಪ್ರತಿಯನ್ನು ಸುತ್ತಿಡಲಾಗಿದ್ದ ಶ್ವೇತವಸ್ತ್ರ
ರಕ್ತದ ಕಲೆಗಳಿಂದ ಕೆಂಬಣ್ಣಕ್ಕೆ ತಿರುಗಿತ್ತು. ಆ ಹಸ್ತಪ್ರತಿಯನ್ನು ಸರಿಯಾಗಿ
ಜೋಡಿಸಿಡುತ್ತಿದ್ದ ಸಂದರ್ಭದಲ್ಲಿ ಮನಸ್ಸು ಕಳವಳದ ಮಡುವಾಗಿಬಿಟ್ಟಿತ್ತು
ಮತ್ತು ಆ ಕ್ಷಣ ನನ್ನ ಮನದಲ್ಲಿ ಅಚ್ಚಳಿಯದ ನೆನಪಾಗಿ ಉಳಿದುಬಿಟ್ಟಿದೆ.
ಗರ್ಭಗುಡಿಯಿಂದ ಹೊರಬರುವ ಸಂದರ್ಭದಲ್ಲಿ ಒಬ್ಬ
ಹಿರಿಯ ಅಧಿಕಾರಿ ಒಂದು ನಿರ್ದಿಷ್ಟ ಪ್ರದೇಶದತ್ತ ಬೆಟ್ಟು ಮಾಡಿ ತೋರಿಸಿದರು.
ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆಯನ್ನು ಗುಂಡಿಟ್ಟು ಕೊಂದಿದ್ದ
ಸ್ಥಳವಾಗಿತ್ತದು. ಜರ್ನೈಲ್ ಸಿಂಗ್ ಅವರನ್ನು ಖಾಲಿಸ್ತಾನ್ ಚಳವಳಿಯ ಪ್ರಮುಖ
ನೇತಾರನೆಂಬಂತೆ ಬಿಂಬಿಸಲಾಗಿದ್ದು, ಈ ಕಾರ್ಯಾಚರಣೆಯ ಪ್ರಮುಖ ಗುರಿ ಅವರೇ
ಆಗಿದ್ದರು. ಆದರೆ ಆಪರೇಷನ್ ಕೋಣೆಯಲ್ಲಿ ವಿವರಿಸಿದ್ದ ಮಾಹಿತಿಗೂ ಸ್ಥಳದಲ್ಲಿ
ನೀಡಿದ ವಿವರಣೆಗೂ ತಾಳೆಯೇ ಇರಲಿಲ್ಲ. ಅದನ್ನು ಅರಿತ ಕೂಡಲೇ ಆ ಅಧಿಕಾರಿ
ಹೇಳಿಕೆಯನ್ನು "ತಿದ್ದಿ"ಕೊಂಡರು.
ಸಂತ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ, ಆತನ
ಸಹವರ್ತಿ ನಿವೃತ್ತ ಮೇಜರ್ ಜನರಲ್ ಸಾಹೇಬ್ ಸಿಂಗ್ ಮತ್ತು ಭಾಯ್ ಅಮ್‌ರಿಕ್
ಸಿಂಗ್ ಈ ಮೂವರ ಮೃತದೇಹಗಳು 'ಅಕಾಲ್ ತಕ್ತ್'ನ ನೆಲ ಅಂತಸ್ತಿನಲ್ಲಿ
ಪತ್ತೆಯಾದವು ಎಂಬುದು ಅಧಿಕೃತ ಹೇಳಿಕೆಯಾಗಿತ್ತು. ಆದರೆ ಇದಕ್ಕೆ
ವ್ಯತಿರಿಕ್ತವಾಗಿ ಅವರು ನೆಲ ಅಂತಸ್ತಿನಿಂದ ಹೊರಬರುವಾಗ ಜಂಢಾ ಬುಂಗಾ ಬಳಿ
ಗುಂಡಿಟ್ಟು ಕೊಲ್ಲಲಾಗಿತ್ತು.
ಸಂತ ಭಿಂದ್ರನ್‌ವಾಲೆ, ಭಾಯ್ ಅಮ್‌ರಿಕ್ ಸಿಂಗ್
ಮತ್ತು ಮೇಜರ್ ಜನರಲ್ ಸಾಹೀಬ್ ಸಿಂಗ್ ಇವರ ಮೃತದೇಹಗಳನ್ನು ಇತರ 200 ಮಂದಿಯ
ಮೃತದೇಹಗಳೊಂದಿಗೆ ಕಿರಾತಪುರ್ ಸಾಹೀಬ್‌ನಲ್ಲಿ ಜೂನ್ 14ರಂದು ಸಂಸ್ಕಾರ
ಮಾಡಲಾಯಿತು. ಆ ಸಮಯದಲ್ಲಿ ನಿರ್ದಿಷ್ಟ ಕಾರಣಗಳಿಂದಾಗಿ ಸರ್ಕಾರ ಈ ಕುರಿತು
ಅಧಿಕೃತ ಮಾಹಿತಿ ನೀಡಿರಲಿಲ್ಲ. ರಾಶಿಗಟ್ಟಲೆ ಮೃತದೇಹಗಳನ್ನು ನಗರಪಾಲಿಕೆಯ
ಕಸದ ಲಾರಿಗಳಲ್ಲಿ ತುಂಬಿ ಸಂಸ್ಕಾರ ಮಾಡುವ ಸ್ಥಳಕ್ಕೆ ಸಾಗಿಸಲಾಗಿತ್ತು. ಆ
ಮೃತದೇಹಗಳನ್ನು ಗುರುತಿಸುವ ಪ್ರಯತ್ನಗಳನ್ನೂ ಮಾಡಿರಲಿಲ್ಲ.
ಆರನೇ ಗುರು, ಹರ್‌ಗೋಬಿಂದ್ ಅವರು ಕಟ್ಟಿಸಿದ
ಸಾರ್ವಭೌಮತ್ವ ಮತ್ತು ಸಿಖ್ ಹೋರಾಟದ ಸಂಕೇತ 'ಅಕಾಲ್ ತಖ್ತ್'. ದರ್ಬಾರ್
ಸಾಹೀಬ್‌ನ ಮುಂಭಾಗದಲ್ಲಿರುವ 'ಅಕಾಲ್ ತಖ್ತ್' ನಂತರದ ದಿನಗಳಲ್ಲಿ ಪ್ರಾರ್ಥನೆ
ಹಾಗೂ ರಾಜಕೀಯ ಚರ್ಚೆಯ ಸ್ಥಾನವಾಗಿ, ಸಿಖ್ ಧರ್ಮದ ಉನ್ನತ ಸಂಸ್ಥೆಯಾಗಿ
ಬೆಳೆಯಿತು. ಅಂತಹ 'ಅಕಾಲ್ ತಖ್ತ್' ಕಾರ್ಯಾಚರಣೆಯ ಪರಿಣಾಮ ಹೊಗೆಯಿಂದ
ಕನಲುತ್ತಿದ್ದು ಉರಿಯೇಳಲು ಸಿದ್ಧವಾಗಿದ್ದಂತಿತ್ತು. ಕಾರ್ಯಾಚರಣೆಯ
ಸಂದರ್ಭದಲ್ಲಿ ಭಿಂದ್ರನ್‌ವಾಲೆ ಮತ್ತು ಸಹಚರರು 'ಅಕಾಲ್ ತಖ್ತ್'ನ ನೆಲ
ಅಂತಸ್ತಲ್ಲಿ ಅಡಗಿಕೊಂಡಿದ್ದರಿಂದಾಗಿ ಸಂಪೂರ್ಣ ಕಟ್ಟಡ ಮದ್ದು ಗುಂಡುಗಳ
ದಾಳಿಯ ಕೇಂದ್ರವಾಗಿತ್ತು.
'ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ'ಯ
ಅಧ್ಯಕ್ಷ ಗುರುಚರಣ್ ಸಿಂಗ್ ತೊಹ್ರಾ ಅವರ ಆಪ್ತ ಕಾರ್ಯದರ್ಶಿ ಅಭಿನಾಶಿ ಸಿಂಗ್
ಹಾಗೂ 'ಅಕಾಲ್ ತಖ್ತ್'ನ ಜತೇಂದರ್ ಗಿಯಾನಿ ಕೃಪಾಲ್ ಸಿಂಗ್ ಇವರಿಬ್ಬರೂ
ಅವಶೇಷಗಳ ರಾಶಿಯಲ್ಲಿ ತಮ್ಮ ಕಣ್ಣಿಗೆ ಬೀಳುತ್ತಿದ್ದ ಪ್ರತಿಯೊಂದನ್ನೂ
ರಕ್ಷಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಅಕಾಲ್ ತಖ್ತ್‌ನ ಪರಿಸರ ಅದೆಷ್ಟು
ಅಸಹ್ಯ ದುರ್ವಾಸನೆಯಿಂದ ತುಂಬಿತ್ತೆಂದರೆ ಪ್ರಾಯಶಃ ಇನ್ನೂ ಹಲವು ಮೃತದೇಹಗಳು
ಅವಶೇಷಗಳಡಿಗೆ ಸಿಕ್ಕಿಹಾಕಿಕೊಂಡಿವೆಯೇನೋ ಎಂಬಂತೆ ಭಾಸವಾಗುತ್ತಿತ್ತು.
ಅಭಿನಾಶಿ ಸಿಂಗ್ ಅವರು ಆ ಸ್ಥಳಕ್ಕೆ ಭೇಟಿ ಕೊಟ್ಟ ಪತ್ರಕರ್ತರನ್ನು ಬಲವಂತದ
ಮುಗುಳ್ನಗೆಯೊಂದಿಗೆ ಸ್ವಾಗತಿಸಿದರು. ಅಲ್ಲಿನ ಭೀಕರ ಸ್ಥಿತಿ ಕಂಡು ಗಿಯಾನಿ
ಕೃಪಾಲ್ ಅವರ ಮುಖ ಬಿಳುಚಿಕೊಂಡಿತ್ತು.
'ಗಂಟಾ ಘರ್' ಪಾರ್ಶ್ವದಿಂದ ಹೊರಗೆ ಬಂದ ಮೇಲೆ
ಕೆಲವು ಪತ್ರಕರ್ತರು ಸೆರಾಯ್ (ಆ ಭಾಗದಲ್ಲಿರುವ ವಸತಿ ಪ್ರದೇಶ) ಕಡೆಗೆ
ಹೋಗುವ ಪ್ರಯತ್ನ ಮಾಡಿದರು. ಆದರೆ ಸೇನೆ ಆ ಭಾಗವನ್ನು ನಿಷೇಧಿತ ವಲಯವೆಂದು
ಘೋಷಿಸಿತ್ತು. ಅಲ್ಲಿಂದ ಪತ್ರಕರ್ತರ ನಿಯೋಗವನ್ನು ರಾಜಾ ಸಾನ್ಸಿಯೆಡೆಗೆ
ಕರೆದೊಯ್ಯಲಾಯಿತು. ಗುಂಡಿನ ದಾಳಿಗೆ ಸಿಲುಕಿ ಜರಡಿ ಹಿಡಿದಂತಾಗಿದ್ದ ನೀರಿನ
ಟ್ಯಾಂಕ್ ಹಾಗೂ ಆ ಪವಿತ್ರ ಸಂಕೀರ್ಣದಲ್ಲಿದ್ದ ಬುಂಗಾ ರಾಮ್‌ಗರಿಯಾ ಕೋಟೆಯ
ಎರಡು ವೀಕ್ಷಣಾ ಗೋಪುರಗಳು ಅಲ್ಲಿ ನಡೆದ ಭೀಕರ ಕಾಳಗದ ಕಥೆ ಹೇಳುತ್ತಿದ್ದವು.
ಪ್ರಮುಖ ಕೇಂದ್ರ 'ಅಕಾಲ್ ತಖ್ತ್' ಮೇಲೆ ದಾಳಿ ನಡೆಸಲು ಸೇನೆಯ ಯುದ್ಧ
ಟ್ಯಾಂಕರ್‌ಗಳನ್ನು ನೇರವಾಗಿ ಆ ಸಂಕೀರ್ಣದೊಳಗೆ ಕೊಂಡೊಯ್ಯಲಾಗಿತ್ತು ಎಂಬ
ವಿಚಾರ ನಂತರ ತಿಳಿದುಬಂತು. ಆ ಸಂಪೂರ್ಣ ಸಂಕೀರ್ಣ ಮೂರು ದಿನಗಳ ಯುದ್ಧಕ್ಕೆ
ಮೂಕಸಾಕ್ಷಿಯಾಗಿತ್ತು. ಪವಿತ್ರ ಗರ್ಭಗುಡಿ ಹೊರತುಪಡಿಸಿ ಎಲ್ಲಾ ಗೋಡೆಗಳ
ಅಂಗುಲ-ಅಂಗುಲಗಳಲ್ಲೂ ಗುಂಡಿನ ಗುರುತುಗಳಿದ್ದವು. ಸಿಖ್ಖರ ಪವಿತ್ರ ಸ್ಥಳ
'ಅಕಾಲ್ ತಖ್ತ್' ಒಂದು ಕರಾಳ ಯುದ್ಧದ ಅವಶೇಷವಾಗಿ ನಿಂತಿತ್ತು.
ಟಿಎಸ್‌ಐ
(ಹಿರಿಯ ಪತ್ರಕರ್ತ ಜಗ್ತಾರ್ ಸಿಂಗ್ ಸಿಖ್
ದಂಗೆಯ ದಿನಗಳಲ್ಲಿ ಪ್ರಮುಖ ಆಂಗ್ಲ ದಿನಪತ್ರಿಕೆಯೊಂದರ ಪಂಜಾಬ್
ಪ್ರತಿನಿಧಿಯಾಗಿದ್ದರು. ಅವರ ಮುಂಬರುವ ಪುಸ್ತಕದ ಅಧ್ಯಾಯಗಳಿಂದ ಈ ಅಂಕಣವನ್ನು
ಆರಿಸಲಾಗಿದೆ) |