|
ಕಲ್ ವಾರಿಸ್ ಶಾ ನು ವಂಡೀ ಸಿ
ಆಜ್ ಶಿವ್ ಕುಮಾರ್ ದಿ ವಾರಿ ಹೈ
ಓ ಝಕಮ್ ತುಹಾನು ಭುಲ್ ವಿ ಗಯೆ
ಜಿ ನವೀನ್ ದಿ ಹೋರೆ ತಯಾರಿ ಹೈ
- ಸುರ್ಜಿತ್ ಪಟಾರ್
(ನಿನ್ನೆ ವಾರಿಸ್ ಶಾ ಅವರನ್ನು ಇಬ್ಭಾಗಿಸಿದೆವು
ಇಂದು ಶಿವ್ ಕುಮಾರ್ ಬಟಲ್ವಿ ಸರದಿ
ಹೊಸದರ ಹುಡುಕಾಟದಲ್ಲಿರುವ ನಿನಗೆ
ಹಳೆಯ ಗಾಯಗಳೆಲ್ಲಾ ಮರೆತು ಹೋದವೇ?)
ಇಂಗ್ಲಿಷ್ ಲೇಖಕ ಜಾರ್ಜ್ ಆರ್ವೆಲ್
1949ರಲ್ಲೇ 'ನೈನ್‌ಟೀನ್ ಎಯ್ಟಿ ಫೋರ್ (1984)' ಎಂಬ ಕಾದಂಬರಿಯಲ್ಲಿ ಭೂಮಿಯ
ಮೇಲಿನ ನರಕವನ್ನು ಚಿತ್ರಿಸಿದ್ದ. 1984ರ ಬಗ್ಗೆ ಆರ್ವೆಲ್ ನೀಡಿದ
ಭವಿಷ್ಯವಾಣಿ ಜಗತ್ತಿನ ಇತರೆ ಪ್ರದೇಶಗಳಲ್ಲಿ ನಿಜವಾಗದೇ ಇರಬಹುದು. ಆದರೆ
ಪಂಜಾಬ್‌ನ ಪಾಲಿಗಂತೂ 1947ರ ವಿಭಜನೆ ಬಳಿಕದ ನರಕ ಸದೃಶ ಪರಿಸ್ಥಿತಿ
ಸೃಷ್ಟಿಯಾಗಿದ್ದು 1984ರಲ್ಲೇ. ದುಃಖ, ನಷ್ಟ, ಪಶ್ಚಾತ್ತಾಪಗಳನ್ನು ಹೊತ್ತು
ನಿಂತ ಈ ವರ್ಷ ಪಂಜಾಬಿಗಳ ಪಾಲಿಗೆ ಐತಿಹಾಸಿಕ ಮೈಲುಗಲ್ಲು. ಅದರ ಸುತ್ತ
ಒಂದೂವರೆ ದಶಕಗಳ ಕಾಲ ಖಾಲಿಸ್ಥಾನಕ್ಕಾಗಿ ನಡೆದ ಸಿಖ್ ಪ್ರತ್ಯೇಕತಾ ಚಳವಳಿಗಳು
ಪಂಜಾಬನ್ನು ಅಕ್ಷರಶಃ ಹಿಂಸೆಯ ಕೂಪವನ್ನಾಗಿಸಿದ್ದವು. ಸಿಖ್ ಪ್ರತ್ಯೇಕತಾ
ಚಳವಳಿಯ ಮುಖಂಡ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಚಿತ್ರಣಕ್ಕೆ ಬಂದಿದ್ದೂ
ಅದೇ ವರ್ಷ. ಸ್ವರ್ಣ ಮಂದಿರದ ಮೇಲಿನ ದುರದೃಷ್ಟಕರ ದಾಳಿ ನಡೆದಿದ್ದೂ ಅದೇ
ವರ್ಷ. ಸಿಖ್ ಸಮುದಾಯಕ್ಕೆ ಮಾತ್ರಲ್ಲ, ಧರ್ಮ ಭೇದವಿಲ್ಲದೆ ಎಲ್ಲರನ್ನೂ
ಆಕರ್ಷಿಸುತ್ತಿದ್ದ ಸ್ವರ್ಣ ಮಂದಿರ ಆಪರೇಷನ್ ಬ್ಲೂ ಸ್ಟಾರ್ ಸಂದರ್ಭದಲ್ಲಿ
ಸೇನೆ ಮತ್ತು ಪ್ರತ್ಯೇಕತಾವಾದಿಗಳಿಗೆ ರಣರಂಗವಾಯಿತು. ಖುಷ್ವಂತ್ ಸಿಂಗ್-
ಕುಲ್‌ದೀಪ್ ನಯ್ಯರ್ ಬರೆದ 1984ರ ಪಂಜಾಬ್ ದುರಂತ ಆರಂಭದ ಕುರಿತ
ಪುಸ್ತಕದಲ್ಲಿ, "ಭಿಂದ್ರನ್‌ವಾಲೆ ಕಾಂಗ್ರೆಸ್‌ನ ಸೃಷ್ಟಿಯೇ ಅಥವಾ ಅಕಾಲಿಗಳ
ಕೂಸೇ? ಎಂಬುದರ ಬಗ್ಗೆ ರಾಜಕೀಯ ವಿಶ್ಲೇಷಣೆಗಳು ನಿರಂತರವಾಗಿ
ಮುಂದುವರಿಯುತ್ತಲೇ ಇರುತ್ತವೆ. ಆದರೆ ಸಿಖ್-ಹಿಂದೂ ಏಕತೆಯನ್ನು
ನುಚ್ಚು-ನೂರಾಗಿಸಿದ ವ್ಯಕ್ತಿ ಭಿಂದ್ರನ್‌ವಾಲೆ ಎಂಬುದರಲ್ಲಿ ವಿಶ್ಲೇಷಕರಿಗೆ
ಯಾವುದೇ ಅನುಮಾನಗಳಿರುವುದಿಲ್ಲ. ಜೀವಿತಕಾಲದಲ್ಲಿ ಈಡೇರಿಸಲಾಗದ ತನ್ನ
ಗುರಿಯನ್ನು ಗ್ರಾಮೀಣ ಪಂಜಾಬ್‌ನಲ್ಲಿ ಈಗಲೂ ಗಸ್ತು ತಿರುಗುತ್ತಿರುವ
ಭಿಂದ್ರನ್‌ವಾಲೆಯ ಆತ್ಮ ಈಡೇರಿಸಬಹುದು" ಎನ್ನುತ್ತಾರೆ ಖುಷ್ವಂತ್ ಸಿಂಗ್.
ಗುರುದ್ವಾರದ ಮೇಲಿನ ಸೇನಾ ಆಕ್ರಮಣವನ್ನು ಖಂಡಿಸುತ್ತಾ, ತೀವ್ರ ವೇದನೆಯಲ್ಲಿ
ಖುಷ್ವಂತ್ ಸಿಂಗ್ ಬರೆದ ವಾಕ್ಯಗಳಿವು. ಸೇನಾ ದಾಳಿಯ ಪ್ರತಿಭಟನೆಯ ಅಂಗವಾಗಿ
ಖುಷ್ವಂತ್ ಸಿಂಗ್ ತಮಗೆ 1974ರಲ್ಲಿ ದೊರೆತ ಪದ್ಮ ಭೂಷಣ ಪ್ರಶಸ್ತಿಯನ್ನು
1984ರಲ್ಲಿ ಹಿಂತಿರುಗಿಸಿದ್ದರು. ಈ 'ಈಡೇರದ ಗುರಿ'ಯ ಬಗ್ಗೆ ಹೇಳಲು ಕಾಲಕ್ಕೆ
ಮಾತ್ರ ಸಾಧ್ಯ. ವಾಸ್ತವಕ್ಕಿಂತ ಹೆಚ್ಚಾಗಿ ಬಿಂಬಿಸಲಾದ ಮೃತ ಭಿಂದ್ರನ್‌ವಾಲೆಯ
ಪ್ರೇತಾತ್ಮ ಗ್ರಾಮೀಣ ಪಂಜಾಬ್‌ನ್ನು ಕಾಡುತ್ತಲೇ ಇರುತ್ತದೆ. ಅಲ್ಲಿನ
ಮೂಲಭೂತವಾದಿ ಸಿಖ್ ಸಂಘಟನೆಗಳು ಭಿಂದ್ರನ್‌ವಾಲೆಯ ವ್ಯಕ್ತಿತ್ವಕ್ಕಿಂತ
ಬೃಹತ್ತಾದ ಚಿತ್ರಣವನ್ನು ಕಟ್ಟಿ ಸಿಖ್ ಯುವಜನಾಂಗವನ್ನು ಹುಚ್ಚೆಬ್ಬಿಸುತ್ತಲೇ
ಇರುತ್ತವೆ.
'ಹುತಾತ್ಮ' ಎಂಬ ಪದಕ್ಕೆ ಸಿಖ್ ಮನಸ್ಸುಗಳಲ್ಲಿ
ವಿಶೇಷ ಅರ್ಥವಿದೆ. ಸಿಖ್ ಗುರುಗಳ ಹೋರಾಟ ಹಾಗೂ ಅವರಲ್ಲಿ ಅನೇಕರನ್ನು ಬಲಿ
ತೆಗದುಕೊಂಡ ಸಂದರ್ಭ ಮುಂತಾದವುಗಳ ಪರಂಪರೆ ಅದಕ್ಕೆ ಕಾರಣವಾಗಿರಬಹುದು.
ಜೀವಿತಾವಧಿಯಲ್ಲಿ ಅಭಿನವ 'ರಾಬಿನ್‌ಹುಡ್' ಎನಿಸಿಕೊಂಡಿದ್ದ ಭಿಂದ್ರನ್‌ವಾಲೆಯ
ಮೋಡಿಗೆ ಇಂದಿಗೂ ಕೆಲವರು ಮರುಳಾಗುತ್ತಾರೆ. ಭಿಂದ್ರನ್‌ವಾಲೆ ಸಾವಿನ 25
ವರ್ಷಗಳ ಬಳಿಕ ದೈವಪ್ರಭೆ ಹಾಗೂ ಯುವಕನ ಎದೆ ಬಡಿತವಿರುವ ಆತನ ಜನಪ್ರಿಯ
ಚಿತ್ರ ಅಂತರ್ಜಾಲದಲ್ಲೂ ಪ್ರಚಾರ ಪಡೆಯುತ್ತಿದೆ. ಮಾಧ್ಯಮಗಳ ಇತರೆ
ಉತ್ಪನ್ನಗಳಂತೆ ಇದರ ಗುರಿಯೂ 25ರ ಕೆಳಗಿನ ಯುವಜನಾಂಗ! ಆದರೆ ಆ ಮಂತ್ರ
ಫಲಕೊಟ್ಟೀತೇ? ಹುತಾತ್ಮತೆಯನ್ನು ಸಂಭ್ರಮಿಸುವ ಸಂಸ್ಕೃತಿಯಲ್ಲಿ ಮಾದರಿ
ನಾಯಕರಿಗೆ ಬರವಿಲ್ಲ ಬಿಡಿ. ಸಿಖ್ ಗುರುಗಳು ಹಾಗೂ ಅವರ ಅನುಯಾಯಿಗಳ ತ್ಯಾಗದ
ಕುರಿತು ಇತಿಹಾಸವೇ ಇದೆ. ಭಗತ್ ಸಿಂಗ್‌ಗೆ ದೊರೆತ ಆರಾಧ್ಯಮೂರ್ತಿಯ ಸ್ಥಾನ
ಸ್ವಾತಂತ್ರ್ಯಾನಂತರವೂ ವಿವಾದಾತೀತವಾಗಿ ಉಳಿದಿದೆ. ಆದರೆ ಭಗತ್ ಸಿಂಗ್
ವ್ಯಕ್ತಿತ್ವ ಪಂಜಾಬಿನ ಹಳ್ಳಿಗಳಲ್ಲಿ ಪ್ರತ್ಯೇಕತೆಯನ್ನು ವಿರೋಧಿಸುವ
ನಿಟ್ಟಿನಲ್ಲಿ ಬಳಕೆಯಾಯಿತು. ಪ್ರತ್ಯೇಕತಾವಾದವನ್ನು ಅಡಗಿಸಲು ಮತ್ತು
ಹತ್ಯಾಕಾಂಡಕ್ಕೆ ಕಾರಣಾವಾದ ಕಮ್ಯುನಿಸ್ಟ್ ಬಂಡಾಯವನ್ನು ಶಾಂತಗೊಳಿಸಲು ಆನಂದ್
ಪಟವರ್ಧನ್ ತಮ್ಮ ಭಗತ್ ಸಿಂಗ್ ಕುರಿತ ಚಿತ್ರ 'ಇನ್ ಮೆಮೊರಿ ಆಫ್
ಫ್ರೆಂಡ್ಸ್'ನ್ನು ಹಳ್ಳಿ ಹಳ್ಳಿಗೆ ಕೊಂಡೊಯ್ದರು. ಕೊನೆಗೂ ಈ ಪ್ರತ್ಯೇಕತೆಯ
ಮಹಾಮಾರಿಯನ್ನು ತಡೆಯಲು ಪೊಲೀಸ್ ಹಾಗೂ ಸೇನಾಪಡೆಗಳೇ ಬೇಕಾಯಿತು. "ಇಂದಿನ
ಯುವಜನಾಂಗಕ್ಕೆ ಭಗತ್ ಸಿಂಗ್ ಮಾದರಿ ಪ್ರಾಯೋಗಿಕವಲ್ಲ. ಅವರಿಗೆ ಯಾವುದಾದರೂ
ಸಮಕಾಲೀನ ವ್ಯಕ್ತಿಯ ವ್ಯಕ್ತಿತ್ವ ಆದರ್ಶವಾಗಬೇಕು. ಇನ್ನು ಭಿಂದ್ರನ್‌ವಾಲೆ
ಕೂಡಾ ಅನುಕರಣೀಯ ಎನ್ನಲು ಸಾಧ್ಯವಿಲ್ಲ. ಏಕೆಂದರೆ ಪಕ್ವತೆ ಇಲ್ಲದಿರುವುದಷ್ಟೇ
ಅಲ್ಲ, ವಿಭಜಿತ ಪಂಜಾಬ್‌ನಲ್ಲಿ ಉಳಿದಿದ್ದ ಅಲ್ಪಸ್ವಲ್ಪ ಒಗ್ಗಟ್ಟನ್ನೂ ಆತ
ವಿರೋಧಿಸಿದ್ದ" ಎನ್ನುತ್ತಾರೆ ಲಂಡನ್‌ನಲ್ಲಿರುವ ಪಂಜಾಬಿ ಕವಿ ಅಮರ್‌ಜಿತ್
ಚಂದನ್.
ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗಿದ್ದು
ಗಾಯಗೊಂಡಿದ್ದ ಸಿಖ್ಖರ ಆತ್ಮವಿಶ್ವಾಸವನ್ನು ಬಡಿದೆಬ್ಬಿಸಿದೆ ಎಂದು ಹಲವರು
ಅಭಿಪ್ರಾಯಪಡುತ್ತಾರೆ. ಪಾಟಿಯಾಲದಲ್ಲಿರುವ ಖ್ಯಾತ ಅರ್ಥಶಾಸ್ತ್ರಜ್ಞ ಸಚ್ಚಾ
ಸಿಂಗ್ ಗಿಲ್ ಪ್ರಕಾರ "ಮನಮೋಹನ್ ಸಿಂಗ್ ಅವರಲ್ಲಿ ಪಂಜಾಬಿಗಳು ಚಿಂತಕ,
ವಿಚಾರವಂತ ಹಾಗೂ ನಾಯಕನಂಥ ತಮ್ಮದೇ ಸುಪ್ತ ವ್ಯಕ್ತಿತ್ವವನ್ನು
ಕಾಣುತ್ತಿದ್ದಾರೆ. ಹಾಗೆ ರೈತ ಅಥವಾ ಚಾಲಕನಿಗಷ್ಟೇ ಸೀಮಿತವಾಗಿದ್ದ ಅವರ
ವ್ಯಕ್ತಿತ್ವ ಇದೀಗ ಚೌಕಟ್ಟು ಮೀರಿ ಹೊರಬರುವ ಪ್ರಯತ್ನ ಮಾಡುತ್ತಿದೆ". ಈ
ಬಾರಿ ಲೋಕಸಭಾ ಚುನಾವಣೆಯ ಫಲಿತಾಂಶ ಸಚ್ಚಾ ಸಿಂಗ್ ಮಾತನ್ನು
ಪುಷ್ಟೀಕರಿಸುತ್ತದೆ. ಇದು ಬಂಡುಕೋರರನ್ನು ಬಗ್ಗು ಬಡಿದ ಆ ಸಮಯವನ್ನು
ನೆನಪಿಸುತ್ತದೆ. ಕಾಕತಾಳೀಯವೋ ಎಂಬಂತೆ ಅದು ಉಪಗ್ರಹ ವಾಹಿನಿಗಳು ಹಾಗೂ ದೇಸೀ
ಜನರ ಮಧ್ಯೆ 'ಅಮೆರಿಕೀಕರಣ' ಪಂಜಾಬ್‌ಗೆ
ಕಾಲಿಟ್ಟ ಕಾಲವೂ ಹೌದು. ಭಾಷಾಶಾಸ್ತ್ರದ
ಪ್ರೊಫೆಸರ್ ಸುರ್ಜಿತ್ ಲೀ ಹೇಳಿದ ಮಾತುಗಳು ನೆನಪಾಗುತ್ತಿವೆ; "ಮೂಲಭೂತವಾದಿತ್ವ
ಮರುಕಳಿಸುತ್ತದೆ ಎಂಬ ಭಯವನ್ನು ನಾವೀಗ ತ್ಯಜಿಸಬಹುದು. ಏಕೆಂದರೆ ಇಲ್ಲಿನ
ಪ್ರತಿಯೊಬ್ಬ ಯುವಕನೂ ಈಗ ಮೈಕೆಲ್ ಜಾಕ್ಸನ್ ಆಗಬಯಸುತ್ತಿದ್ದಾನೆ" ಎಂದಿದ್ದರು
ಲೀ. ಪಂಜಾಬಿನ ಒಳಗೇ ಹಲವು ಪಂಜಾಬ್‌ಗಳಿವೆ ಎಂಬ ಮಾತನ್ನು
ಅಲ್ಲಗಳೆಯುವಂತಿಲ್ಲ. ಬಡವನ ಪಂಜಾಬ್ ಒಂದಾಗಿದ್ದರೆ, ಶ್ರೀಮಂತನ ಪಂಜಾಬ್‌ನ
ಚಿತ್ರಣವೇ ಭಿನ್ನ. ಹಾಗೆ ಶೋಷಿತನ ಪಂಜಾಬ್‌ಗೂ ವಿಶೇಷ ಸೌಲಭ್ಯಗಳನ್ನು
ಪಡೆಯುವ ವರ್ಗದ ಪಂಜಾಬಿಗೂ ಹೋಲಿಕೆಯೇ ಇಲ್ಲ. ಈ ವೈಚಿತ್ರ್ಯ ಹಾಗೂ
ಆತ್ಮಹತ್ಯೆಯ ಕಡೆಗೆ ಹೊರಳಿರುವ ಪಂಜಾಬಿಗಳ ಮನಸ್ಸು ಜೊತೆ ಸೇರಿದರಂತೂ
ಬಹುದೊಡ್ಡ ದುರಂತ ಕಟ್ಟಿಟ್ಟ ಬುತ್ತಿ. ಅದಕ್ಕೇ ವಿಯೆನ್ನಾ ಗುರುದ್ವಾರದಲ್ಲಿ
ನಡೆದ ದುರಂತ ಪಂಜಾಬ್‌ನಲ್ಲಿ ಗಲಭೆಯ ಕಿಡಿಹೊತ್ತಿಸುತ್ತದೆ. 75 ವರ್ಷಗಳ
ಇತಿಹಾಸವುಳ್ಳ ಸಾಹಿತ್ಯ ಪತ್ರಿಕೆಯೊಂದರ ಯುವ- ಪ್ರತಿಭಾವಂತ ಸಂಪಾದಕ ಸುಮೀತ್
ಸಿಂಗ್, ಪ್ರೀತ್ ನಗರ್ ಬಳಿಯಲ್ಲಿ ಗುಂಡೇಟಿಗೆ ಬಲಿಯಾಗಿದ್ದು ಪಂಜಾಬಿಗಳ
ಪ್ರೀತಿಯ ಮನಸ್ಸಿನಲ್ಲಿ ಬಿರುಗಾಳಿ ಹಬ್ಬಿಸಿತು. ಮೃತನನ್ನು
ಚಿತೆಗೇರಿಸುತ್ತಿದ್ದ ಸಂದರ್ಭದಲ್ಲಿ ಆತನ ಯುವ ಪತ್ನಿ, "ತಲೆಗೂದಲು
ಕತ್ತರಿಸಿಕೊಂಡಿದ್ದಕ್ಕೇ ಕೊಲೆಯಾಗುವುದಾದರೆ ಅವರು ಒಬ್ಬ ಜಾತ್ಯತೀತನಂತೆ
ಮೃತಪಟ್ಟಿದಾರೆ ಎಂದರ್ಥ. ಈ ಬಗ್ಗೆ ನನಗೆ ಬೇಸರವಿಲ್ಲ" ಎನ್ನುತ್ತಾ ಕಣ್ಣೀರು
ಹಾಕಿದ್ದರು.
ಪಂಜಾಬ್‌ಗೆ ಅದರದೇ ಆದ ತಿಳಿಗೇಡಿತನಗಳು,
ನ್ಯೂನತೆಗಳು ಇದ್ದರೂ ಕೆಚ್ಚೆದೆಯ ಮಾದರಿ ನಾಯಕರಿಗೆ ಅಲ್ಲಿ ಕೊರತೆ ಇಲ್ಲ.
ಮನೀಂದರ್ ಹಾಗೂ ಗೀತಾ ಎಂಬ ಇಬ್ಬರು ಹುಡುಗಿಯರ ಬಗ್ಗೆ ನಿಮಗೆ ಹೇಳಲೇಬೇಕು. ಆ
ಇಬ್ಬರೂ ಗೆಳತಿಯರಿಗೆ 19 ತುಂಬಿತ್ತು ಅಷ್ಟೇ. 1984ರ ಸಿಖ್ ವಿರೋಧಿ ದೊಂಬಿಗೆ
ಮನೀಂದರ್‌ನ ತಂದೆ-ತಾಯಿ ಇಬ್ಬರೂ ಬಲಿಯಾದರು. ಐವರು ಕಿರಿಯ ಸೋದರರ ಪಾಲನೆಯ
ಜವಾಬ್ದಾರಿ ಮನೀಂದರ್‌ಳ ಹೆಗಲ ಮೇಲೆ ಬಿತ್ತು. ಆದರೆ ಮನೀಂದರ್‌ಗೆ ಗೀತಾ
ಎಲ್ಲಾ ರೀತಿಯಲ್ಲೂ ನೆರವು ನೀಡಿದ್ದಳು. ಹಾಗೆಯೇ ಸಿಖ್ ಪ್ರತ್ಯೇಕತಾವಾದಿಗಳ
ಗುಂಡಿಗೆ ಗೀತಾಳ ತಂದೆ ಬಲಿಯಾದಾಗ ಗೆಳತಿಗೆ ಹೆಗಲಾದವಳು ಮನೀಂದರ್.
ಕತ್ತಿ ಮಸೆಯುವ ರಾಜಕೀಯ ಪಕ್ಷಗಳಿಗೂ ಅಳಿಸಿ
ಹಾಕಲು ಅಸಾಧ್ಯವಾಗುವ ಇಂಥ ಮುಖವೊಂದು ಪಂಜಾಬ್‌ಗೆ ಇತ್ತು; ಅದು ಈಗಲೂ ಇದೆ.
ಇನ್ನೂ ಹಲವು ಮಾದರಿ ನಾಯಕರು ಆ ಸಂದರ್ಭದಲ್ಲಿದ್ದರು. ಕಾಲದೊಂದಿಗೆ ಅವರ
ನೆನಪುಗಳೂ ಮಾಸಿಹೋಗುತ್ತಿವೆ. ಕಾಮ್ರೇಡ್ ಜೈಮಲ್ ಪಡ್ಡಾ, ಕವಿ ಪಾಶ್,
ಪ್ರೊಫೆಸರ್ ರವೀಂದರ್ ರವಿ, ಕ್ರಾಂತಿಕಾರಿ ಬಲ್ ದೇವ್ ಸಿಂಗ್ ಮಾನ್ ಮುಂತಾದ
ಹಲವರು ಪಂಜಾಬ್‌ನ ಇನ್ನೊಂದು ವಿಭಜನೆಗಿಂತ ಸಾವೇ ಲೇಸು ಎಂದು ಎದೆಯುಬ್ಬಿಸಿ
ಹೋರಾಟಕ್ಕೆ ಇಳಿದವರು. ಇದು ಬಹುಶಃ ಹೊಸ ಪಂಜಾಬಿನ ಯುವ ಜನಾಂಗದ
ಎದೆಬಡಿತವಾಗಬಹುದು. 1984ರ ಕರಾಳ ಇತಿಹಾಸ ಮರುಕಳಿಸದೇ ಇರಲಿ ಎಂಬುದಷ್ಟೇ
ಶಾಂತಿಪ್ರಿಯ ಪಂಜಾಬಿಗಳ ಪ್ರಾರ್ಥನೆ.
ತಡವಾಗಿ
ಬಂದ ಹುತಾತ್ಮಪಟ್ಟ
ಆಪರೇಷನ್ ಬ್ಲೂ ಸ್ಟಾರ್ ನಡೆದ ಒಂದು ದಶಕದ
ಬಳಿಕ ನಾನು ಭಿಂದ್ರನ್‌ವಾಲೆಯ ಪತ್ನಿಯ ಸಂದರ್ಶನ ಮಾಡಿದ್ದೆ. ಆಗಿನ್ನೂ
ಭಿಂದ್ರನ್‌ವಾಲೆಗೆ ಹುತಾತ್ಮಪಟ್ಟ ದೊರಕಿರಲಿಲ್ಲ. ಬಡತನದ ನಡುವೆಯೂ ಇಬ್ಬರು
ಮಕ್ಕಳ ಜವಾಬ್ದಾರಿ ಹೊತ್ತಿದ್ದ ಆ ಮಹಿಳೆ "ಬೀಬೀ, ಅವರು ಹುತಾತ್ಮರೇ ಅಲ್ಲವೇ
ಎಂಬುದನ್ನು ನಾನು ಹೇಳಲು ಸಾಧ್ಯವಿಲ್ಲ. ದಮ್‌ದಮಿ ತಕ್ಸಲ್‌ನ ಬಾಬಾ ತಕ್ಕರ್
ಮಾತ್ರ ಅದನ್ನು ನಿರ್ಧರಿಸಬಲ್ಲರು" ಎಂದಿದ್ದರು. ಆದರೆ ಮತ್ತೊಂದು ದೊಂಬಿಯ
ಸಾಧ್ಯತೆಯ ಬಗ್ಗೆ ಇದ್ದ ಭಯದಿಂದಾಗಿ ದಮ್‌ದಮಿ ತಕ್ಸಲ್ ಭಿಂದ್ರನ್‌ವಾಲೆಯ
ಸಾವನ್ನು ಒಪ್ಪಿಕೊಳ್ಳುವಲ್ಲೂ ನಿಧಾನಿಸಿತ್ತು. ಕೊನೆಗೂ 2007ರ ನವೆಂಬರ್
29ರಂದು ತಕ್ಸಲ್ ಅಧಿಕೃತವಾಗಿ ತಮ್ಮ ಮುಖಂಡನ ಸಾವನ್ನು ಒಪ್ಪಿಕೊಂಡಿತು.
ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ 1995ರಲ್ಲೇ ಭಿಂದ್ರನ್‌ವಾಲೆ
ಸಾವನ್ನು ಒಪ್ಪಿಕೊಂಡಿದ್ದರೂ 2007 ನವೆಂಬರ್ 29ರವರೆಗೆ ಸ್ವರ್ಣಮಂದಿರದ
ವಸ್ತುಸಂಗ್ರಹಾಲಯದಲ್ಲಿ ಭಿಂದ್ರನ್‌ವಾಲೆ ಭಾವಚಿತ್ರವನ್ನು ನೇತುಹಾಕಿರಲಿಲ್ಲ.
ಅಕಾಲಿದಳದ ಮಿತ್ರಪಕ್ಷಗಳಾಗಿದ್ದ ಕಾಂಗ್ರೆಸ್ ಹಾಗೂ ಬಿಜೆಪಿ
ವಿರೋಧಿಸಿದ್ದರಿಂದ ಇದನ್ನೂ ವಿವಾದಾಸ್ಪದ ಹೆಜ್ಜೆ ಎನ್ನಲಾಗುತ್ತಿತ್ತು.
ಪಿಪಿಸಿಸಿ ಅಧ್ಯಕ್ಷ ರಾಜಿಂದರ್ ಕೌರ್ ಭಟ್ಟಲ್ "ಇದು ಪ್ರತ್ಯೇಕತೆಯನ್ನು
ಪ್ರೋತ್ಸಾಹಿಸುತ್ತದೆ" ಎಂದು ಒಪ್ಪಿಕೊಳ್ಳುತ್ತಾರೆ.
ತನ್ನ ಕಿರಿಯ ಕ್ರಾಂತಿಕಾರಿಗಳಿಗೆ ಎಷ್ಟೋ
ವರ್ಷಗಳ ಹಿಂದೆಯೇ ಹುತಾತ್ಮ ಪಟ್ಟ ಸಿಕ್ಕಿದ್ದರೂ ಮುಖಂಡ ಭಿಂದ್ರನ್‌ವಾಲೆಗೆ
ಮಾತ್ರ ಹುತಾತ್ಮ ಪಟ್ಟ ಒಲಿಯಲು ಸರಿಸುಮಾರು 25 ವರ್ಷಗಳೇ ಕಾಯಬೇಕಾಯಿತು.
ಆದರೂ ಕ್ಯಾಲೆಂಡರ್‌ಗಳು ಹಾಗೂ ಭಿತ್ತಿಫಲಕಗಳ ಮೂಲಕ ಭಿಂದ್ರನ್‌ವಾಲೆ ಜನ
ಮಾನಸದಲ್ಲಿ ಶಾಶ್ವತ ನೆಲೆ ಕಂಡುಕೊಂಡು ಅದೆಷ್ಟೋ ವರ್ಷಗಳಾಗಿವೆ.
ಟಿಎಸ್ಐ |