|
ಆಪರೇಷನ್ ಬ್ಲೂ ಸ್ಟಾರ್ ಕುರಿತು ನಿಮ್ಮ
ಅಭಿಪ್ರಾಯ?
ಆ ಘಟನೆಯನ್ನು ಆಪರೇಷನ್ ಬ್ಲೂ ಸ್ಟಾರ್
ಎನ್ನುವ ಬದಲಾಗಿ 'ದರ್ಬಾರ್ ಸಾಹಿಬ್' ಮೇಲಿನ ದಾಳಿ ಎಂದೇ ಹೇಳ ಬಯಸುತ್ತೇವೆ.
ಅದು ಗುರು ಗ್ರಂಥ್ ಸಾಹಿಬ್ ಮಾತ್ರವಲ್ಲದೆ ಸಿಖ್ ಅನನ್ಯತೆ ಮತ್ತು ಸಿಖ್
ರಾಷ್ಟ್ರದ ಮೇಲೆ ನಡೆದ ದಾಳಿ. ಆ ದಾಳಿಯನ್ನು ನಾವು ಎಂದಿಗೂ ಮರೆಯಲಾರೆವು.
ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಡಲು ಆ ಘಟನೆಯನ್ನೇ ನಾವು ಪ್ರೇರಣೆಯಾಗಿ
ತೆಗೆದುಕೊಳ್ಳುತ್ತೇವೆ. ಅಕಾಲ್ ತಖ್ತ್ ಮತ್ತು ದರ್ಬಾರ್ ಸಾಹಿಬ್ ಮೇಲೆ
ಹಿಂದೆಯೂ ದಾಳಿಗಳಾಗಿದ್ದವು. ಸಿಖ್ಖರು ಎಂದೂ ಅವುಗಳನ್ನು ಮರೆತಿಲ್ಲ, ಅದಕ್ಕೆ
ಪ್ರತೀಕಾರ ತೀರಿಸಿದ್ದೇವೆ.
ಆದರೆ 'ಆಪರೇಷನ್ ಬ್ಲೂ ಸ್ಟಾರ್' ಸ್ವರ್ಣ
ಮಂದಿರದಲ್ಲಿ ಅವಿತಿದ್ದ ಭಯೋತ್ಪಾದಕರ ವಿರುದ್ಧ ಸೇನೆ ನಡೆಸಿದ
ಕಾರ್ಯಾಚರಣೆಯಲ್ಲವೇ?
ಜರ್ನೈಲ್ ಸಿಂಗ್ ಭಿಂದ್ರನ್ವಾಲೆ
ಭಯೋತ್ಪಾದಕನಾಗಿರಲಿಲ್ಲ, ಆತ ಒಬ್ಬ ಶ್ರೇಷ್ಠ ಸಿಖ್ ಆಗಿದ್ದ. ಗುರು ಗ್ರಂಥ್
ಸಾಹಿಬ್ಗೆ ಹೊಸ ಪರಿಕಲ್ಪನೆ ಕೊಟ್ಟವ ಆತ. ಭಿಂದ್ರನ್ವಾಲೆಯನ್ನು ಸರ್ಕಾರ
ಭಯೋತ್ಪಾದಕನೆಂದು ಕರೆದಿರಬಹುದು. ಆದರೆ ಸಾಮಾನ್ಯ ಸಿಖ್ಖರ ಪ್ರಕಾರ ಆತ ಸಿಖ್
ವೈಭವವನ್ನು ಪುನಶ್ಚೇತನಗೊಳಿಸಲು ಬಂದ ಧಾರ್ಮಿಕ ಸೈನಿಕ. ಸಿಖ್ ಸಮುದಾಯಕ್ಕೆ
ಆತ ಒಬ್ಬ ಮಹಾನ್ ಜನನಾಯಕ.
ಪ್ರತ್ಯೇಕ ಸಿಖ್ ರಾಷ್ಟ್ರ ಪರಿಕಲ್ಪನೆಗೆ ಈಗ
ಜನ ಬೆಂಬಲವಿಲ್ಲ. ಹಾಗಿದ್ದರೆ ಇದು ಮೃತ ಚಳವಳಿ ಎಂದೆನಿಸುತ್ತಿಲ್ಲವೆ?
ಇಲ್ಲ. ಈ ಚಳವಳಿ ಕೊನೆಗೊಂಡಿಲ್ಲ. ಇದು
ಹಿನ್ನೆಲೆಗೆ ಸರಿದಿದೆ ಅಷ್ಟೇ. ಇಂದಿಗೂ ಪ್ರತಿಯೊಬ್ಬ ಸಿಖ್ ಕೂಡಾ 'ಖಾಲ್ಸಾ
ಆಡಳಿತ ಬರಲಿ' ಎಂದೇ ಪ್ರಾರ್ಥಿಸುತ್ತಾರೆ. ಈ ಚಳವಳಿಯನ್ನು
ಅರಿಯಬೇಕೆಂದಿದ್ದಲ್ಲಿ ಯುವಕರನ್ನು ಮಾತನಾಡಿಸಿ. ವಿದ್ಯಾರ್ಥಿಗಳ ಮೊಬೈಲ್
ಸ್ಕ್ರೀನ್್ಗಳಲ್ಲಿ ಭಿಂದ್ರನ್ವಾಲೆಯ ಚಿತ್ರಗಳಿರುತ್ತವೆ, ರಿಂಗ್ಟೋನ್ಗಳಲ್ಲಿ
ಆತನ ಹಾಡುಗಳಿರುತ್ತವೆ. ಭಿಂದ್ರನ್ವಾಲೆ ಚಿತ್ರಗಳಿಗೆ ಭಗತ್ ಸಿಂಗ್
ಚಿತ್ರಗಳಿಗೂ ಮೀರಿದ ಬೇಡಿಕೆ ಇದೆ.
ನಿಮ್ಮ ವಿಚಾರಗಳೇನೇ ಇದ್ದರೂ ಸಿಖ್ ಆಡಳಿತ
ಭಾರತ ವಿರೋಧಿ ಚಟುವಟಿಕೆಯಲ್ಲವೆ?
ಇದು ಹಿಂದೂಗಳು ಅಥವಾ ಒಂದು ರಾಷ್ಟ್ರದ
ವಿರುದ್ಧದ ಬೇಡಿಕೆಯಲ್ಲ. ಇದನ್ನು ತಪ್ಪಾಗಿ ಬಿಂಬಿಸಲಾಗಿದೆ. ಖಾಲ್ಸಾ ಆಡಳಿತ
ಪ್ರತಿಯೊಬ್ಬ ಸಿಖ್ ಕನಸು. ಖಾಲ್ಸಾ ನಿಯಮ ಅಂದರೆ ಸಿಖ್ ಧರ್ಮಾನುಸಾರದ ಜೀವನ.
ಆದರೆ ನಮ್ಮ ಹಕ್ಕುಗಳನ್ನು ನಮಗೆ ನೀಡುವ ಬದಲಾಗಿ ಸರ್ಕಾರ ತೇಜೋವಧೆಗೆ
ಮುಂದಾಗಿದೆ. ಭೂಗತವಾಗಿದ್ದಾಗ ನಾನು ತಂಗಿದ್ದ ಮನೆಗಳ ಕುಟುಂಬವನ್ನೆಲ್ಲ
ಪೊಲೀಸರು ಕ್ರೂರವಾಗಿ ಕೊಲೆಗೈದಿದ್ದಾರೆ.
ನಿಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಮತ್ತೆ
ಶಸ್ತ್ರ ಹಿಡಿಯುವಿರೆ?
ಕಾಲಕ್ಕೆ ತಕ್ಕಂತೆ ಹೋರಾಟದ ಹಾದಿ
ಬದಲಾಗುತ್ತದೆ. ಈಗ ನಾವು ಪ್ರಜಾಸತ್ತಾತ್ಮಕ ಹಾದಿಯಲ್ಲಿ ನಮ್ಮ ಹಕ್ಕನ್ನು
ಕೇಳುತ್ತಿದ್ದೇವೆ. ಆದರೆ 1984ರ ಸ್ಥಿತಿ ಮರುಕಳಿಸಿದಲ್ಲಿ ಈ ಹಾದಿ
ಬದಲಾಗಬಹುದು.
ಭಾರತ ಸರ್ಕಾರ ನಿಮ್ಮ ಬೇಡಿಕೆ ಒಪ್ಪುತ್ತದೆ
ಎಂದೆನಿಸುತ್ತಿದೆಯೆ?
ಸಿಖ್ ರಾಷ್ಟ್ರ ನಿರ್ಮಾಣ ಕಷ್ಟ ನಿಜ. ಆದರೆ
ನಾವು ಅದನ್ನು ಸಾಧಿಸಿಯೇ ತೀರುತ್ತೇವೆ.
ನಿಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಶಸ್ತ್ರ
ಹಿಡಿಯುವುದು ಸರಿಯೆ?
ಶೋಷಣೆ ಮಾಡಲು ಶಸ್ತ್ರ ಹಿಡಿಯಬಾರದು. ಆದರೆ
ಅನ್ಯಾಯದ ವಿರುದ್ಧ ಶಸ್ತ್ರ ಹಿಡಿಯಬೇಕೆಂದು ನಮ್ಮ ಧರ್ಮವೇ ಬೋಧಿಸಿದೆ.
ಶಸ್ತ್ರದ ಸಂಕೇತವಾಗಿ ಗುರು ಗ್ರಂಥ್ ಸಾಹಿಬ್ ಮುಂದೆ ಕೃಪಾನ್ ಇಡಲಾಗಿದೆ.
ರಾಜ್ ಕರೇ ಯಾ ಲಡ್ ಮರೇ (ಆಳ್ವಿಕೆ ನಡೆಸು ಇಲ್ಲವೇ ಹೋರಾಡಿ ಮಡಿ) ಎನ್ನುವ
ಪರಂಪರೆ ನಮ್ಮದು.
ಭಿಂದ್ರನ್ವಾಲೆ ಸ್ವರ್ಣ ಮಂದಿರವನ್ನು ತಮ್ಮ
ಅಡಗುದಾಣವನ್ನಾಗಿ ಮಾಡಿಕೊಂಡಿದ್ದರು.
ಇತಿಹಾಸವನ್ನು ಗಮನಿಸಿ.ಮೊಘಲರ ವಿರುದ್ಧದ
ಯುದ್ಧದಲ್ಲಿ ಸಿಖ್ಖರು ಧರ್ಮಗುರುಗಳ ವಸತಿಗೃಹಗಳು ಅಥವಾ ಗುರುದ್ವಾರಗಳಲ್ಲಿ
ಅವಿತಿದ್ದರು. ಭಿಂದ್ರನ್ವಾಲೆ ಕೂಡಾ ಹಾಗೆಯೇ. ಅಲ್ಲದೆ ಆತನ ಮೇಲೆ ಎರಡು
ತಿಂಗಳ ಅವಧಿಯಲ್ಲಿ ಆರು ದಾಳಿಗಳು ನಡೆದ ಬಳಿಕವಷ್ಟೇ ಆತ ಸ್ವರ್ಣ
ಮಂದಿರದಲ್ಲಿ ನೆಲೆಸಲಾರಂಭಿಸಿದ್ದು. ಪೊಲೀಸರಿಂದ ಕೊಲೆಯಾಗುವ ಭೀತಿಯಿಂದ ಹಾಗೆ
ಮಾಡಿದರು.
ಟಿಎಸ್ಐ |