User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಮುಖಪುಟ ಲೇಖನ
 

ದುರಂತ ಅಧ್ಯಾಯ : ಪ್ರಬಂಧಕ್ ಸಮಿತಿ ಪಾತ್ರ

ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಪಂಜಾಬ್ ಉಗ್ರರು ಹಾಗೂ ಸಂಘಟನೆಗಳ ಕುರಿತಂತೆ ಈವರೆಗೂ ತೃಪ್ತಿಕರ ವಿಚಾರಣೆ ನಡೆದಿಲ್ಲ ಎನ್ನುತ್ತಾರೆ ಜಗ್ತಾರ್ ಸಿಂಗ್

ಆಪರೇಷನ್ ಬ್ಲೂ ಸ್ಟಾರ್! ಸ್ವತಂತ್ರ ಭಾರತದಲ್ಲಿ ಇಂತಹ ಕಾರ್ಯಾಚರಣೆ ನಡೆದಿದ್ದು ಅದೇ ಮೊದಲು. ಸಿಖ್ ಜನಾಂಗದ ನೆನಪಿನ ಬುತ್ತಿಯಿಂದ ಎಂದೂ ಅಳಿಸಲು ಸಾಧ್ಯವಿಲ್ಲದೆ ಇರುವಂತಹ ದುರಂತ ಅಧ್ಯಾಯವಿದು. ಹಾಗಿದ್ದರೂ ನೋವಿನ ಶಮನಕ್ಕೆ ಅದರದೇ ಆದ ಹಾದಿಗಳೂ ಇವೆ. ಆಪರೇಷನ್ ಬ್ಲೂ ಸ್ಟಾರ್‌ನ ಪ್ರತೀಕಾರವಾಗಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಕೊಲೆ ಮಾಡಿದ ಬಳಿಕ ಸಿಖ್ ಸಮುದಾಯದ ಧಮನಿಗಳಲ್ಲಿ ಕುದಿಯುತ್ತಿದ್ದ ರೋಷದ ರಕ್ತವೇನೋ ತಣ್ಣಗಾಯಿತು. ಇಂದಿರಾ ಗಾಂಧಿ ಮತ್ತು ಸಂತ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಈ ದುರಂತ ಅಧ್ಯಾಯದ ಎರಡು ಪ್ರಮುಖ ಪಾತ್ರಗಳೆನ್ನಬಹುದು. ಇಬ್ಬರೂ ಈ ಗಡಿ ದೇಶದಲ್ಲಿ ಆ ಕಾಲದಲ್ಲಿ ಚಿಗುರಿದ್ದ ಕ್ರೂರ ರಾಜಕೀಯದ ಬಲಿಪಶುಗಳೇ ಆಗಿದ್ದರು.

ದೇಶದ ಒಳಿತಿಗಾಗಿ ವೀರ ನಿರ್ಧಾರ ಕೈಗೊಂಡು ಸ್ವರ್ಣ ಮಂದಿರದೊಳಗೆ ಕಾರ್ಯಾಚರಣೆ ನಡೆಸಿ ಉಗ್ರರನ್ನು ಹಿಮ್ಮೆಟ್ಟಿಸಿದ ಸಾಧನೆಯಿಂದಾಗಿ ಕಾಂಗ್ರೆಸ್ ಪಕ್ಷ ಡಿಸೆಂಬರ್ 1984ರ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯಭೇರಿ ಭಾರಿಸಿದ್ದೂ ಅಷ್ಟೇ ನಿಜ. ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆ ನಡೆದು 25 ವರ್ಷಗಳು ಸರಿದಿವೆ. ಹಾಗಿದ್ದರೂ ಗಡಿಯಾಚೆಗಿನ ಭಯೋತ್ಪಾದನಾ ದಾಳಿಗಳು ಇಂದಿಗೂ ದೇಶವನ್ನು ಕಾಡುತ್ತಲೇ ಇವೆ. ಆದರೆ ಪ್ರಜಾಸತ್ತಾತ್ಮಕ ಜವಾಬ್ದಾರಿಗಳು ಈ ಬಾರಿಯ ಚುನಾವಣೆಯಲ್ಲಿ ಈ 'ಚುನಾವಣಾ ವಿಚಾರ'ವನ್ನು ಬದಿಗೆ ಸರಿಸಿದ್ದಲ್ಲದೆ, ಪ್ರಜಾಪ್ರಭುತ್ವವೇ ಭಯೋತ್ಪಾದನೆಗೆ ಪ್ರಮುಖ ರೋಗನಿರೋಧಕ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ.

ಈ ನಿಟ್ಟಿನಲ್ಲಿ ಸಿಖ್ ಸಮುದಾಯದ ಪ್ರಧಾನ ಆಡಳಿತ ಮಂಡಳಿ 'ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ'ಯ ಪಾತ್ರವೇನು ಎಂಬ ಬಗ್ಗೆ ಹಲವಾರು ಚರ್ಚೆಗಳು ನಡೆಯುತ್ತಲೇ ಇವೆ. ಪಂಜಾಬ್, ಹರಿಯಾಣ, ಹಿಮಾಚಲ್ ಪ್ರದೇಶ್ ಮತ್ತು ಚಂಡೀಗಢದ ಕೇಂದ್ರಾಡಳಿತ ಪ್ರದೇಶ ವ್ಯಾಪ್ತಿಯಲ್ಲಿ ಸಿಖ್ ಸಮುದಾಯವನ್ನು ಪ್ರತಿನಿಧಿಸುತ್ತಿದ್ದ ಚುನಾಯಿತ ಸಂಘಟನೆಯಾಗಿರುವ 'ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ'ಯ ನೇತೃತ್ವವನ್ನು ಆಗ ಜಿತೇಂದರ್ ಗುರುಚರಣ್ ಸಿಂಗ್ ತೊಹ್ರಾ ವಹಿಸಿದ್ದರು. ನಿರ್ಣಾಯಕ ಘಟ್ಟದಲ್ಲಿ ಸಿಖ್ ಸಮುದಾಯದ ರಾಜಕೀಯ ಹಿತಾಸಕ್ತಿಗಳ ಗತಿ ಬದಲಿಸಿದ ಶ್ರೇಯಸ್ಸು ಇವರಿಗೇ ಸಲ್ಲಬೇಕು. ಪ್ರಸ್ತುತ ದೇಶ ಮತ್ತೊಂದು ರೀತಿಯ ಭಯೋತ್ಪಾದನೆಯ ಕಬಂಧಬಾಹುಗಳಲ್ಲಿ ಸಿಲುಕಿಕೊಂಡಿದೆ. ಈ ಘಟ್ಟದಲ್ಲಿ ನಾವು ಹಿಂತಿರುಗಿ ನೋಡಿದರೆ? 25 ವರ್ಷಗಳ ನಂತರವೂ ನಮ್ಮ ಮುಂದಿರುವುದು ಅದೇ ಹಳೇ ದಾರಿ. ಭಯೋತ್ಪಾದನೆ ನಿಗ್ರಹಿಸಲು ಅಂಥ ತೀವ್ರತಮ ನಿರ್ಧಾರದ ಅಗತ್ಯವಿದೆಯೆ ಎಂದು ಚಿಂತಿಸುವ ಕಾಲ ಬಂದಿದೆ. ಇತಿಹಾಸದಿಂದ ನಾವು ಪಾಠ ಕಲಿಯಬೇಕಾಗಿತ್ತು.

ಸಂತ ಭಿಂದ್ರನ್‌ವಾಲೆ ನೇತೃತ್ವದಲ್ಲಿ ಸಮುದಾಯದ ಯುವ ಜನರಿಗೆ ಉಗ್ರಗಾಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತಿರುವ ಆರೋಪ 'ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ' ಮೇಲಿತ್ತು. ಆಡಳಿತ ವಿರೋಧಿ ಧ್ವನಿ ಎತ್ತಿ ಗುಪ್ತ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡವರಿಗೆ ಸಿಖ್ ಸಮುದಾಯದ ಪವಿತ್ರ ದೇಗುಲದಲ್ಲಿ ಆಶ್ರಯ ನೀಡಿರುವ ಅನೇಕ ಉದಾಹರಣೆಗಳಿವೆ. ಆದರೆ ಆ ಕಾಲವೇ ಬೇರೆ. ಶೈಶವಾವಸ್ಥೆಯ ಧರ್ಮವೊಂದು ಆಗಿನ ಮೊಘಲ್ ಆಡಳಿತದ ವಿರುದ್ಧ ಹೋರಾಡಿದ ಕಥೆ ಅದು.

ಈಗ ಸಂತ ಭಿಂದ್ರನ್‌ವಾಲೆ ಬೆಂಬಲಿಗರು ಮತ್ತು ಸ್ವರ್ಣ ಮಂದಿರದ ಆವರಣದಲ್ಲಿ ತಮ್ಮ ಕಾರ್ಯ ಚಟುವಟಿಕೆಗಳನ್ನು ಆರಂಭಿಸಿದ್ದ 'ಅಖಂಡ ಕೀರ್ತನ್ ಜಥ' ಸದಸ್ಯರ ಮುಂದಿದ್ದದ್ದು ಸಿಖ್ ಪಂಥ ರಕ್ಷಣೆಯ ಧ್ಯೇಯ! ಹಾಗಿದ್ದರೂ ದೀರ್ಘಕಾಲದವರೆಗೂ ಪೊಲೀಸರು ಬಂಧಿಸಬಹುದಾದಂತಹ ದೊಡ್ಡ ಮೊಕದ್ದಮೆಗಳು ಯಾವುವೂ ಸಂತ ಭಿಂದ್ರನ್‌ವಾಲೆ ಮೇಲಿರಲಿಲ್ಲ. ಒಂದು ಬಾರಿ ಲಾಲ್ ಜಗತ್ ನಾರಾಯಣ್ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತಾದರೂ, ನಂತರ ಬಿಡುಗಡೆ ಮಾಡಲಾಗಿತ್ತು. ದೆಹಲಿಯಲ್ಲಿ ನಿರಾಂಕರಿ ಮುಖ್ಯಸ್ಥ ಗುರುಬಚನ್ ಸಿಂಗ್ ಅವರ ಹತ್ಯೆಯ ನಂತರ ಭಿಂದ್ರನ್‌ವಾಲೆ ಸ್ವರ್ಣ ಮಂದಿರ ಆವರಣದಲ್ಲಿ ಆಶ್ರಯ ಪಡೆದಿದ್ದರು. ಪಂಜಾಬ್‌ನಲ್ಲಿ ಅಕಾಲಿ ದಳ- ಜನತಾ ಪಾರ್ಟಿ ಮೈತ್ರಿಕೂಟ ಆಡಳಿತದ ಸಂದರ್ಭದಲ್ಲಿ 1978ರ ಅಮೃತ್‌ಸರದ ಸಿಖ್- ನಿರಂಕರಿ ಸಂಘರ್ಷವೇ ದೇಶದ ಈ ಭಾಗದಲ್ಲಿ ದಶಕಗಳ ಕಾಲ ಉಗ್ರಗಾಮಿ ಚಟುವಟಿಕೆಗೆ ಪ್ರೇರಣೆ ನೀಡಿದ್ದು. ಈ ಸಂಘರ್ಷದ ಪರಿಣಾಮವಾಗಿ ಎರಡೂ ಸಮುದಾಯಗಳಲ್ಲಿ ಲೆಕ್ಕವಿಲ್ಲದಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಸ್ವರ್ಣ ಮಂದಿರ ಆವರಣದೊಳಗಿನ ಕಾರ್ಯ ಚಟುವಟಿಕೆಗಳ ಮೇಲೆ ಕಾನೂನಿನ ಹದ್ದಿನ ಕಣ್ಣು ಸದಾ ಇತ್ತು. ಸ್ವರ್ಣ ಮಂದಿರದ ಛಾಯೆಯಡಿ ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡುಗಳ ಸಂಗ್ರಹವಾಗುತ್ತಿರುವುದು ಗುಪ್ತಚರ ಸಂಸ್ಥೆಗಳು ಮತ್ತು ಕಾನೂನು ಪರಿಪಾಲಕರ ಕಣ್ಣಿಗೆ ಬೀಳದಂತೆ ತಪ್ಪಿಸಿಕೊಳ್ಳುವುದು ಸಾಧ್ಯವೇ ಇರಲಿಲ್ಲ. ಸ್ವರ್ಣ ಮಂದಿರ ಉದ್ದೇಶಪೂರ್ವಕವಾಗಿ ಇಂತಹ ಅಕ್ರಮ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುತ್ತಿದೆಯಲ್ಲದೆ, ಪ್ರೋತ್ಸಾಹವನ್ನೂ ನೀಡುತ್ತಿದೆ ಎನ್ನುವ ಸಂಶಯ ಬಲವಾಗತೊಡಗಿತ್ತು. ಈ ಎಲ್ಲಾ ಬೆಳವಣಿಗೆಗಳ ನಡುವೆ 'ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ' ಮೂಕ ಪ್ರೇಕ್ಷಕನಾಗಿ ನಿಂತಿತ್ತು. ಆದರೂ ಸಿಖ್ ಉಗ್ರಗಾಮಿ ಚಟುವಟಿಕೆಗಳು ಎಂದಿಗೂ ಅಕಾಲಿ ಹೋರಾಟದ ಭಾಗವಾಗಿರಲಿಲ್ಲ. 1982ರಲ್ಲಿ 'ಶಿರೋಮಣಿ ಅಕಾಲಿ ದಳ' ಆರಂಭಿಸಿದ್ದ 'ಅಕಾಲ್ ತಖ್ತ್ ಚಳವಳಿ'ಯೂ ಸ್ವರ್ಣ ಮಂದಿರದ ಆವರಣದಲ್ಲೇ ರೂಪುಗೊಂಡಿತ್ತು. ಇದನ್ನು ದಮನಗೊಳಿಸಲು ಅಧಿಕಾರಿಗಳು ಮತ್ತೊಮ್ಮೆ ಸ್ವರ್ಣ ಮಂದಿರದೊಳಗೆ 'ಆಪರೇಷನ್ ಬ್ಲಾಕ್ ಥಂಡರ್' ಕಾರ್ಯಾಚರಣೆ ನಡೆಸಬೇಕಾಗಿ ಬಂದಿತ್ತು. ಆದರೆ ಇದಕ್ಕೆ ಸಮುದಾಯದಿಂದ ತೀವ್ರ ವಿರೋಧ- ಪ್ರತಿಕ್ರಿಯೆಗಳೇನೂ ಬಂದಿರಲಿಲ್ಲ. ಇಷ್ಟೆಲ್ಲಾ ಆದರೂ ಪಂಜಾಬ್‌ನ ಉಗ್ರರು, ಭಾಗವಹಿಸಿದ್ದ ಸಂಸ್ಥೆಗಳು ಮತ್ತು ಸಂಘಟನೆಗಳ ಕುರಿತಂತೆ ತೃಪ್ತಿಕರ ತನಿಖೆ ಅಥವಾ ವಿಚಾರಣೆಗಳು ಈವರೆಗೆ ನಡೆದಿಲ್ಲ.

ಟಿಎಸ್‌ಐ

ಸರ್ಕಾರ್ ಸೇವಾದಿಂದ ಕರ್ ಸೇವಾವರೆಗೆ...

ಬರ್ಲಿನ್ ಗೋಡೆಯ ಅವಶೇಷಗಳನ್ನು ಕಂಡು ಜಾಗತಿಕವಾಗಿ ಎಷ್ಟು ಸಂಭ್ರಮ ವ್ಯಕ್ತವಾಗಿತ್ತೋ, ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆಯಲ್ಲಿ ಪವಿತ್ರ ಅಕಾಲ್ ತಖ್ತ್‌ನ್ನು ಛಿದ್ರಗೊಳಿಸಿದಾಗ ಅದಕ್ಕೆ ನೂರುಪಟ್ಟು ವೇದನೆಯಾಗಿತ್ತು. ಪವಿತ್ರ ತಖ್ತ್‌ನ ಅವಶೇಷಗಳನ್ನು ಸಂಗ್ರಹಿಸಿದ ನೆನಪುಗಳು ಇಂದಿಗೂ ಸಿಖ್ ಸಮುದಾಯದಲ್ಲಿ ಆರದ ಗಾಯವಾಗಿ ಉಳಿದಿದೆ.

ಆರನೇ ಗುರು ಹರ್‌ಗೋಬಿಂದ್ ರಾಯ್ ಅವರು ಪವಿತ್ರ ಹರ್‌ಮಂದಿರ್ ಸಾಹಿಬ್ ಎದುರು ಕಟ್ಟಿದ ಅಕಾಲ್ ತಖ್ತ್ ಸಿಖ್ ಸಮುದಾಯದ ಅತಿ ಪವಿತ್ರ ಧಾರ್ಮಿಕ ಪೀಠ. ಅಕಾಲ್ ತಖ್ತ್ ಎಂದರೆ ದೇವರ ಪೀಠ ಎಂದೇ ಅರ್ಥ. ಈ ಕಟ್ಟಡದ ಗುಮ್ಮಟಕ್ಕೆ ಚಿನ್ನದ ಎಲೆಗಳನ್ನು ಕೊಡುಗೆಯಾಗಿ ನೀಡಿದ್ದು ಮಹರಾಜ ರಣಜಿತ್ ಸಿಂಗ್‌ನ ಸೇನಾಪತಿಯಾಗಿದ್ದ ಹರಿಸಿಂಗ್ ನಾಲ್ವ. ಖಂಡೇ-ದಾ-ಪಹುಲ್ (ಖಡ್ಗದಿಂದ ಮೊದಲ ಹೆಜ್ಜೆ) ರೂಪಿಸಿದ್ದು ಗುರು ಗೋವಿಂದ್ ಸಿಂಗ್. ಇಂದಿಗೂ ಅಕಾಲ್ ತಖ್ತ್‌ನಲ್ಲಿ ಈ ಆಚರಣೆ ಚಾಲನೆಯಲ್ಲಿದೆ.

18ನೇ ಶತಮಾನದಲ್ಲಿ ಅಹಮದ್ ಶಾ ಅಬ್ದಾಲಿ ಅನೇಕ ಬಾರಿ ಅಕಾಲ್ ತಖ್ತ್ ಮೇಲೆ ದಾಳಿ ನಡೆಸಿದ್ದ. ಆದರೆ 1984ರ ಜೂನ್ 4ರಂದು ನಡೆದ ದಾಳಿ ಮಾತ್ರ ಸಿಖ್ ಹೃದಯದಲ್ಲಿ ಆರದ ಗಾಯವಾಗಿದೆ. ಈ ಪವಿತ್ರ ದೇಗುಲ ಭಿಂದ್ರನ್‌ವಾಲೆಯ ಮುಖ್ಯ ಕಚೇರಿಯಾಗಿತ್ತು.

ಸತತ ಸೇನಾ ದಾಳಿಯ ನಡುವೆಯೂ ಗೋಪುರದ ತುತ್ತತುದಿಯಲ್ಲಿ ತನ್ನ ಸಹಚರರೊಡನೆ ಭಿಂದ್ರನ್‌ವಾಲೆ ಸುರಕ್ಷಿತ ಭಾವನೆಯಲ್ಲಿದ್ದ. "ಅಧಿಕಾರಿಗಳು ದೇಗುಲದೊಳಗೆ ಕಾಲಿಟ್ಟಲ್ಲಿ ಇಂದಿರಾ ಸರ್ಕಾರವೇ ಅಲುಗಾಡಬೇಕು ಅಂತಹ ಪಾಠ ಕಲಿಸಲಿದ್ದೇವೆ" ಎಂದು ಭಿಂದ್ರನ್‌ವಾಲೆ ಪತ್ರಕರ್ತರ ಬಳಿ ಹೇಳಿದ್ದ. "ಅಕಾಲ್ ತಖ್ತ್ ಶಸ್ತ್ರಾಸ್ತ್ರಗಳ ಆಗರ" ಎಂದು ಮೇಜರ್ ಜನರಲ್ ಕೆ.ಎಸ್. ಬ್ರಾರ್ ನಂತರ ಹೇಳಿದ್ದರು.

ದಾಳಿಗೊಳಗಾದ ಪೀಠವನ್ನು ಸಿಖ್ಖರು ಅದೇ ಸ್ಥಿತಿಯಲ್ಲಿ ಕಾಯ್ದುಕೊಳ್ಳುವರೆಂಬ ಭೀತಿಯಲ್ಲಿ ಸರ್ಕಾರ ನಿಹಾಂಗ್ಸ್‌ನ ಬುದ್ಧ ದಲ್ ಮುಖ್ಯಸ್ಥ ಬಾಬಾ ಸಂತಾ ಸಿಂಗ್ ಅವರಿಂದ ಕರಸೇವೆ ಮಾಡಿಸಿ ಪೀಠದ ಪುನರ್ ನಿರ್ಮಾಣಕ್ಕೆ ಕೈ ಹಾಕಿತು. ಆಗಿನ್ನೂ ಸ್ವರ್ಣ ಮಂದಿರದ ಆವರಣ ಸೇನೆಯ ನಿಯಂತ್ರಣದಲ್ಲೇ ಇತ್ತು.

ಅಕಾಲ್ ತಖ್ತ್ ಮರುನಿರ್ಮಾಣವಾದ ಬಳಿಕ ಅಂದರೆ 1984ರ ಸೆಪ್ಟೆಂಬರ್ 29ರಲ್ಲಿ ಈ ಆವರಣವನ್ನು ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಗೆ ಒಪ್ಪಿಸಲಾಯಿತು. ತಮ್ಮ ಪವಿತ್ರ ತಖ್ತ್‌ನ್ನು ಸರ್ಕಾರ ಪುನರ್ ನಿರ್ಮಿಸುತ್ತಿರುವ ಅವಮಾನವನ್ನೂ ಸಿಖ್ ಸಮುದಾಯ ನುಂಗಿಕೊಂಡಿತ್ತು. ಈ ಸಂಪೂರ್ಣ ಕಾರ್ಯಕ್ಕೆ ಸರ್ಕಾರ್ ಸೇವಾ ಎಂದು ಹೆಸರಿಸಲಾಗಿತ್ತು. ವಾಸ್ತವದಲ್ಲಿ ನಿಹಾಂಗ್ಸ್ ಸಮ್ಮುಖದಲ್ಲಿ ಸ್ಕಿಪ್ಪರ್ ಬಿಲ್ಡರ್‍ಸ್ ಸಂಸ್ಥೆ ಈ ತಖ್ತ್‌ನ್ನು ಪುನರ್ ನಿರ್ಮಿಸಿತ್ತು. ಒಂದೂವರೆ ತಿಂಗಳೊಳಗೆ ಈ ಕಾರ್ಯ ಮುಗಿದಿತ್ತು.

ಆದರೆ ಸಿಖ್ ಸಮುದಾಯ ಬುದ್ಧ ದಲ್ ಅಥವಾ ಸಂತಾ ಸಿಂಗ್ ನೇತೃತ್ವದಲ್ಲಿ ನಿರ್ಮಾಣವಾದ ಈ ಕಟ್ಟಡವನ್ನು ಸ್ವೀಕರಿಸಲಿಲ್ಲ. 1986ರ ಜನವರಿ 26ರಂದು ಸರ್ಕಾರ್ ಸೇವಾ ರಚಿಸಿದ ಕಟ್ಟಡ ಮುರಿದು ಹೊಸದಾಗಿ 'ಕರ್ ಸೇವಾ' ಆರಂಭಿಸಲಾಯಿತು. ಹಲವು ವರ್ಷಗಳ ಬಳಿಕ ತಖ್ತ್ ಮತ್ತೆ ನಿರ್ಮಾಣವಾಯಿತು.

1997ರ ಏಪ್ರಿಲ್ 13ರಲ್ಲಿ ಭಾಯಿ ರಣಜಿತ್ ಸಿಂಗ್ ಅವರು ಪವಿತ್ರ ದೇಗುಲದ ಜಾತೇದರ್ ಆಗಿದ್ದಾಗ ಅಕಾಲ್ ತಖ್ತ್‌ನಲ್ಲಿ ಮತ್ತೆ 'ಮರ್ಯಾದಾ' ಪುನರುಜ್ಜೀವನಗೊಂಡಿತು.

ಟಿಎಸ್‌ಐ

ನಿರುಪಮಾ ದತ್

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location

ಮುಖಪುಟ ಲೇಖನದಲ್ಲಿ ಇನ್ನೇನಿದೆ

25 ವರ್ಷ ಕಳೆದ ಮೇಲೆ ಆಪರೇಷನ್ ಬ್ಲೂಸ್ಟಾರ್

25 ವರ್ಷ ಕಳೆದ ಮೇಲೆ ಆಪರೇಷನ್ ಬ್ಲೂಸ್ಟಾರ್

ಬದಲಾವಣೆ ಗಾಳಿಗೆ ಬಾಗಿದ ಪಂಜಾಬ್

1984ರ ಕರಾಳ ಇತಿಹಾಸದತ್ತ ಕಣ್ಣೋಟ

ಭಗತ್‌ಸಿಂಗ್‌ಗಿಂತ ಜನಪ್ರಿಯ ಭಿಂದ್ರನ್‌ವಾಲೆ

‘ಸಿಖ್ ಸಿಪಾಯಿ ದಂಗೆ’ಯ ಮರೆಯಲಾಗದ ನೆನಪುಗಳು

ದುರ್ಗಂಧದ ನಡುವೆ ಕಳೆದ ಆ ದಿನ

ಆಪರೇಷನ್ ಬ್ಲೂ ಸ್ಟಾರ್ ಅವಿವೇಕದ ಕ್ರಮ

ಖಾಲಿಸ್ತಾನ್ ಕನಸಿಗೆ ಕೊನೆಯಿಲ್ಲ?

ಪ್ರಬಂಧಕ್ ಸಮಿತಿ ಪಾತ್ರ

‘ಸಿಖ್ಖರ ವ್ಯಾಟಿಕನ್’ ಮೇಲಿನ ದಾಳಿ ಮಹಾಪರಾಧ

ಆಧುನಿಕ ಪಂಜಾಬ್‌ನ ಹತ್ತು ಮುಖಗಳು

ಕೊನೆಗೂ ಆ ಫೋಟೋ ತೆಗೆದೇ ಬಿಟ್ಟೆ...

‘ಪಾಕ್ ಸೇನೆಗೆ ಸಿಖ್ಖರೂ ಸೇರಬಹುದು’

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .