User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ದೂರದೂರಿಂದ
 

ಶಾಂತಿಯಿಂದಲೇ ಸುಭಿಕ್ಷೆ

ಟೈಗರ್‌ಗಳ ಗರ್ಜನೆ ಅಡಗಿದೆ . ಎಲ್‌ಟಿಟಿಇ ತಟಸ್ಥವಾಗಿದೆ . ಹಾಗಿದ್ದಲ್ಲಿ ಶ್ರೀಲಂಕಾದ ಮುಂದಿನ ನಡೆ ಏನಾಗಿರುತ್ತದೆ ? ಜನಸ್ಪಂದನವೊಂದೇ ಉಳಿದ ದಾರಿ ಎನ್ನುತ್ತಾರೆ ಎನ್ . ಅಶೋಕನ್ ಮತ್ತು ಸೌರಭ್ ಕುಮಾರ್ ಶಾಹಿ

ಸೇನಾ ಮಾರಣಹೋಮದಿಂದ ಸಂಘರ್ಷವನ್ನು ಹತ್ತಿಕ್ಕಲು ಸಾಧ್ಯವಿಲ್ಲ.

ಕೊನೆಗೂ ತಮಿಳು ಟೈಗರ್‌ಗಳ ಗರ್ಜನೆಯನ್ನು ಅವರದೇ ನೆಲದಲ್ಲಿ ಅಡಗಿಸುವಲ್ಲಿ ಶ್ರೀಲಂಕಾದ ಭದ್ರತಾ ಪಡೆಗಳು ಯಶಸ್ವಿಯಾಗಿವೆ. ಮುಲ್ಲಿವೈಕಲ್ ಪ್ರಾಂತದಲ್ಲಿ ಎಲ್‌ಟಿಟಿಇ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಸೇರಿದಂತೆ ಸುಮಾರು 350 ಎಲ್‌ಟಿಟಿಇ ಸೈನಿಕರ ದೇಹಗಳು ಪತ್ತೆಯಾಗಿರುವ ಕುರಿತು ಕೊಲಂಬೋ ಮೇ 18ರ ಬೆಳಿಗ್ಗೆ ಘೋಷಿಸುವುದರೊಂದಿಗೆ ಮೂರು ದಶಕಗಳ ಈಳಂ ಹೋರಾಟಕ್ಕೆ ಅಂತಿಮ ಪರದೆ ಬಿದ್ದಿದೆ. ಈ ಮೂರು ದಶಕಗಳ ಹೋರಾಟದಲ್ಲಿ ಸುಮಾರು 25,000 ಮಂದಿ ಪ್ರಾಣ ಕಳೆದುಕೊಂಡಿರುವುದು ಮಾತ್ರ ಮನುಕುಲದ ಬಹುದೊಡ್ಡ ದುರಂತ.

ಈ ಅಂತಿಮ ಹೋರಾಟದಲ್ಲಿ ಎಲ್‌ಟಿಟಿಇ ದಿಗ್ಗಜರೆಲ್ಲ ಬಲಿಯಾಗಿದ್ದಾರೆ. ಸಮರ್ಥ ಸೇನಾನಿ ರಾಜಕೀಯ ವಿಭಾಗದ ಮುಖ್ಯಸ್ಥ ನಟೇಶನ್, ಎಲ್‌ಟಿಟಿಇ ಶಾಂತಿ ಆಡಳಿತಾಧಿಕಾರಿ ಪುಲಿದೇವನ್, ಎಲ್‌ಟಿಟಿಇ ವಾಯುಪಡೆಯ ನೇತೃತ್ವ ವಹಿಸಿದ್ದ ಪ್ರಭಾಕರನ್ ಹಿರಿಯ ಮಗ ಚಾರ್ಲ್ಸ್ ಆಂಟನಿ, ಟೈಗರ್ ಪೊಲೀಸ್ ಮುಖ್ಯಸ್ಥ ಇಳಂಗೋವನ್, ನೌಕಾಪಡೆಯ ಮುಖ್ಯಸ್ಥ ಸೂಸೈ, ಬೇಹುಗಾರಿಕೆ ವಿಭಾಗದ ಮುಖ್ಯಸ್ಥ ಪೊಟ್ಟು ಅಮ್ಮನ್ ಮೊದಲಾದವರು ಶ್ರೀಲಂಕಾ ಸೇನೆಯ ಬಿಗಿಮುಷ್ಠಿಯಲ್ಲಿದ್ದ ಪ್ರಾಂತದಿಂದ ಅಂಬ್ಯುಲೆನ್ಸ್‌ನಲ್ಲಿ ತಲೆತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಪ್ರಾಣ ಕಳೆದುಕೊಂಡಿದ್ದಾರೆ. ಶ್ರೀಲಂಕಾ ಸರ್ಕಾರದ ಪ್ರಕಾರ ಪ್ರಭಾಕರನ್ ಸುಮಾರು 200 ಟೈಗರ್ ಪಡೆಯ ಸೈನಿಕರ ಜೊತೆ ಸಣ್ಣ ಆಟದ ಮೈದಾನದಲ್ಲಿ ಸಿಕ್ಕಿಹಾಕಿಕೊಂಡಿದ್ದ. ಶ್ರೀಲಂಕಾ ಸೇನೆ ನಾಲ್ಕೂ ಕಡೆಯಿಂದ ಸುತ್ತುವರಿದಿದ್ದ ಕಾರಣ ಆತನಿಗೆ ತಪ್ಪಿಸಿಕೊಳ್ಳಲು ದಾರಿಯೇ ಇರಲಿಲ್ಲ.

ಜೋರ್ಡನ್‌ನ ಅಂತರ್‌ರಾಷ್ಟ್ರೀಯ ಶೃಂಗಸಮ್ಮೇಳನದಿಂದ ಮರಳಿದ ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಷೆ ಅವರಿಗೆ ಮೇ 16ರಂದು ಸಮರವೀರನ ಸ್ವಾಗತ ದೊರೆತಿತ್ತು. ವಿಮಾನದಿಂದ ನೆಲಕ್ಕಿಳಿದ ಕೂಡಲೇ ಅವರು ಮೊದಲಿಗೆ ಭೂಮಿತಾಯಿಗೆ ಮುತ್ತಿಕ್ಕಿದರು. ನಂತರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ಎಲ್‌ಟಿಟಿಇ ಉಗ್ರರಿಂದ ದೇಶವನ್ನು ಸ್ವತಂತ್ರಗೊಳಿಸುವ ಅಂತಿಮ ಕಾರ್ಯಾಚರಣೆಯಲ್ಲಿ ವಿಜಯಿಯಾಗಿರುವುದನ್ನು ಘೋಷಿಸಿದರು. ಮೇ 18ರಂದು ಭಾರತದ ವಿದೇಶಾಂಗ ವ್ಯವಹಾರ ಸಚಿವ ಪ್ರಣಬ್ ಮುಖರ್ಜಿ ಅವರಿಗೆ ಕರೆ ಮಾಡಿದ ರಾಜಪಕ್ಷೆ ಅವರು ಪ್ರಭಾಕರನ್ ಹಾಗೂ ಆತನ ಎಲ್‌ಟಿಟಿಇ ಸಂಘಟನೆಯ ಸಹಚರರೆಲ್ಲರೂ ಹತರಾಗಿರುವ ಸುದ್ದಿಯನ್ನು ದೃಢಪಡಿಸಿದರು.

ಎಲ್‌ಟಿಟಿಇ ತಟಸ್ಥವಾಗಿರುವುದು ಮತ್ತು ಭಾರತದಲ್ಲಿ ಹೊಸ ಲೋಕಸಭೆ ಅಧಿಕಾರ ವಹಿಸಿಕೊಳ್ಳುತ್ತಿರುವಂತಹ ಎರಡು ಮಹತ್ವದ ಘಟನೆಗಳು ಏಕಕಾಲದಲ್ಲಿ ಸಂಭವಿಸಿರುವುದು ಖಂಡಿತಾ ಆಕಸ್ಮಿಕವಲ್ಲ ಎನ್ನುವುದು ಅಳಿದುಳಿದ ಎಲ್‌ಟಿಟಿಇ ಟೈಗರ್‌ಗಳ ಅಭಿಪ್ರಾಯ. ಎಲ್‌ಟಿಟಿಇ ಆತ್ಮಾಹುತಿ ದಳದವರಿಂದ ಜೂನ್ 1991ರಲ್ಲಿ ಕೊಲೆಯಾದ ರಾಜೀವ್ ಗಾಂಧಿ ಅವರ ವಾರ್ಷಿಕ ಪುಣ್ಯತಿಥಿಗೆ ಇನ್ನೇನು ಮೂರೇ ದಿನ ಬಾಕಿಯಿದ್ದಾಗ ಎಲ್‌ಟಿಟಿಇ ಮುಖ್ಯಸ್ಥನ ಮರಣದ ಸುದ್ದಿ ಪ್ರಕಟವಾಗಿದೆ. ನಾಲ್ಕೂ ಕಡೆಯಿಂದ ಶ್ರೀಲಂಕಾ ಸೈನಿಕರು ಸುತ್ತುವರಿದ ನಂತರ ಹೊರಹೋಗಲು ದಾರಿಯೇ ಇಲ್ಲದೆ ಟೈಗರ್ ಸೈನಿಕರು ಸೈನೈಡ್ ಗುಳಿಗೆಗಳನ್ನು ನುಂಗಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡು ಹೋರಾಟಕ್ಕೆ ಚರಮಗೀತೆ ಬರೆದರು.

ಈ ನಡುವೆ ಟೈಗರ್‌ಗಳ ಜೊತೆಯಲ್ಲೇ ಜೀವನ ನಡೆಸುತ್ತಿದ್ದ ಶಸ್ತ್ರಾಸ್ತ್ರ ಹಿಡಿಯದ ಸಾವಿರಾರು ನಾಗರಿಕರದು ಮಾತ್ರ ತ್ರಿಶಂಕು ಸ್ಥಿತಿಯಾಗಿದೆ. ಅವರ ಮೇಲೆ ಶ್ರೀಲಂಕಾ ಸೇನೆ ವ್ಯಾಪಕ ದೌರ್ಜನ್ಯ ನಡೆಸುತ್ತಿದೆ ಎಂದು ತಮಿಳು ಪರ ಮೂಲಗಳು ಆರೋಪಿಸುತ್ತಿವೆ. ಆದರೆ ಪ್ರಭಾಕರನ್ ಸಾವು ಆತನ ದಂತಕತೆಯನ್ನು ಜೀವಂತವಾಗಿಡುವ ಸಾಧ್ಯತೆಗಳಿವೆ. ಈಗ ಶ್ರೀಲಂಕಾ ಸೇನೆಯ ವಶದಲ್ಲಿರುವ ದೇಹ ಪ್ರಭಾಕರನ್ ಅವರದೇ ಎನ್ನುವ ಕುರಿತೂ ತಮಿಳು ಮೂಲಗಳು ಸಂಶಯ ವ್ಯಕ್ತಪಡಿಸಿವೆ. ಈಗಾಗಲೇ ಛಿದ್ರವಾಗಿರುವ ದೇಹವನ್ನು ಪ್ರಭಾಕರನ್ ಅವರದೆಂದು ಘೋಷಿಸಲಾಗಿರುವ ಬಗ್ಗೆ ಅನುಮಾನಗಳಿದ್ದು, ಡಿಎನ್‌ಎ ಪರೀಕ್ಷೆಯ ಬೇಡಿಕೆಗಳು ಕೇಳಿ ಬಂದಿವೆ.

"ಸರ್ಕಾರದ ಮುಖ್ಯಸ್ಥರು ಏನು ಹೇಳುತ್ತಾರೋ ಅದೇ ವಾಸ್ತವಕ್ಕೆ ಹತ್ತಿರವಾದ ಸತ್ಯ. ಶ್ರೀಲಂಕಾದ ಅಧ್ಯಕ್ಷರೇ ಪ್ರಜೆಗಳಿಗೆ ವಾಸ್ತವವೇನೆಂದು ಹೇಳಬೇಕು. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರಿಗೆ ಕರೆ ಮಾಡಿರುವ ಅವರು ಪ್ರಭಾಕರನ್ ಮರಣವನ್ನು ದೃಢಪಡಿಸಿದ್ದಾರೆ. ಅವರ ಹೇಳಿಕೆಯ ಮೇಲೆ ನನಗೆ ನಂಬಿಕೆ ಇದೆ" ಎನ್ನುತ್ತಾರೆ ಟಿಎಸ್‌ಐ ಜೊತೆ ಮಾತನಾಡಿದ 1980ರಲ್ಲಿ ಶ್ರೀಲಂಕಾದಲ್ಲಿ ಭಾರತೀಯ ಶಾಂತಿ ಪಡೆಯ ಸೇನಾ ಗುಪ್ತಚರ (ಐಆರ್‌ಕೆಎಫ್) ಮುಖ್ಯಸ್ಥನಾಗಿದ್ದ ಕರ್ನಲ್ ಹರಿಹರನ್.

ಪ್ರಭಾಕರನ್ ಮರಣವನ್ನು ದೃಢಪಡಿಸುವ ಸ್ವತಂತ್ರ ಮೂಲಗಳು ಇಲ್ಲ ಎನ್ನುವುದು ನಿಜವೇ. ಅದೇನೇ ಇರಲಿ, ಶ್ರೀಲಂಕಾದ ತಮಿಳರು ಮತ್ತು ಪಾಕ್ ಜಲಸಂಧಿಯ ಸುತ್ತಮುತ್ತಲ ಬೆಂಬಲಿಗರಿಗೆ ಪ್ರಭಾಕರನ್ ಇಂದಿಗೂ ಅದಮ್ಯ ವರ್ಚಸ್ಸಿನ ನಾಯಕರೇ. ಕೊನೆಯುಸಿರೆಳೆಯುವವರೆಗೂ ತಮಿಳು ಸಮುದಾಯವನ್ನು ಪ್ರತಿನಿಧಿಸಿದ 'ತಂಬಿ (ತಮ್ಮ) ಪ್ರಭಾಕರನ್' ಒಬ್ಬ ಮಹಾನ್ ನಾಯಕ. ಈಗ ಪ್ರಭಾಕರನ್ ಹಾಗೂ ಎಲ್‌ಟಿಟಿಇ ಎರಡೂ ನಾಮಾವಶೇಷವಾಗಿರುವ ಹಿನ್ನೆಲೆಯಲ್ಲಿ ತಮಿಳರನ್ನು ಮುಖ್ಯವಾಹಿನಿಗೆ ಸೇರಿಸಿಕೊಳ್ಳುವ ನಿಟ್ಟಿನಲ್ಲಿ ಶ್ರೀಲಂಕಾ ಸರ್ಕಾರ ರೂಪುರೇಷೆಗಳನ್ನೇನಾದರೂ ಸಿದ್ಧಪಡಿಸುತ್ತಿದೆಯೆ? ಆ ಮೂಲಕ ಈಗಿನ ಶಾಂತಿಯನ್ನು ಶಾಶ್ವತಗೊಳಿಸುವರೆ? ಕಾಲವೇ ಉತ್ತರಿಸಬೇಕು.

ದೀರ್ಘಕಾಲದ ಮಾತುಕತೆ ವಿಫಲವಾದ ನಂತರ ರಾಜಪಕ್ಷೆ ಒಂದು ಬಾರಿಯೂ ಟೈಗರ್‌ಗಳ ಸಾಮ್ರಾಜ್ಯವಾಗಿದ್ದ ಪ್ರಾಂತಕ್ಕೆ ಭೇಟಿ ನೀಡುವ ಪ್ರಯತ್ನ ಮಾಡಿರಲಿಲ್ಲ. ಇಂತಹ ತೀವ್ರತಮ ರೋಷಗಳಿಂದ ತಮಿಳು ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತ ಸಿಂಹಳೀಯ ಮುಖ್ಯವಾಹಿನಿಯ ನಡುವೆ ಕೊಂಡಿ ಬೆಸೆಯುವುದು ಸಾಧ್ಯವಿಲ್ಲ ಎನ್ನುವುದು ಸಾಮಾನ್ಯ ಗ್ರಹಿಕೆ.

ಅಲ್ಲದೆ ಚೆಚೆನ್ಯಾ ಹೋರಾಟದ ಆರಂಭದಲ್ಲಿ ರಷ್ಯನ್ ಸೈನಿಕರು ನಡೆದುಕೊಂಡಂತೆಯೇ ಈಗಿನ ಶ್ರೀಲಂಕಾ ಸೇನೆಯೂ ವರ್ತಿಸಿತ್ತು. ಶಾಂತಿ ಸಂಧಾನದ ಸಾಧ್ಯತೆಗಳನ್ನೆಲ್ಲ ಮೂಲೆಗೆ ತೂರಿ ಕ್ರೂರ ಹಾದಿಯನ್ನೇ ಬಳಸಿಕೊಂಡರು. ಅವರು ನಡೆಸಿದ ಭೀಕರ ಸೇನಾ ಹೋರಾಟಕ್ಕೆ ಎಲ್ಲೆಡೆಯಿಂದ ಟೀಕೆಗಳು ಕೇಳಿ ಬಂದಿದ್ದವು. "ಯುದ್ಧ ಒಂದು ರೀತಿಯಲ್ಲಿ ಮಾರ್ಫಿನ್ ಇದ್ದ ಹಾಗೆ. ನೋವಿನಿಂದ ನರಳುತ್ತಿರುವ ರೋಗಿಗೆ ಈ ಮಾದಕ ಔಷಧದ ರುಚಿ ಸ್ವಲ್ಪ ತೋರಿಸಿದರೆ ಸಾಕು ಆತ ಅಳುವುದನ್ನು ನಿಲ್ಲಿಸುತ್ತಾನೆ. ಆದರೆ ರೋಗ ಮಾತ್ರ ಶಮನವಾಗಿರುವುದಿಲ್ಲ" ಎನ್ನುತ್ತಾರೆ ಶ್ರೀಲಂಕಾ ಸಂಘರ್ಷದ ತಜ್ಞ ಹಾಗೂ ನ್ಯೂ ಬ್ರನ್ಸ್‌ವಿಕ್ ವಿಶ್ವವಿದ್ಯಾನಿಲಯದ ನಿವೃತ್ತ ರಾಜ್ಯಶಾಸ್ತ್ರ ಪ್ರೊಫೆಸರ್ ಅಲ್ಫ್ರೆಡ್ ಜಯರತ್ನಂ ವಿಲ್ಸನ್.

ಶ್ರೀಲಂಕಾ ಸರ್ಕಾರದ ಮುಂದೆ ಈಗ ಬಹುದೊಡ್ಡ ಜವಾಬ್ದಾರಿ ಇದೆ. ಜಾಗತಿಕವಾಗಿ ಯುದ್ಧಪೀಡಿತ ಪ್ರಾಂತಗಳ ಸ್ಥಿತಿಗತಿಯನ್ನು ವಿಶ್ಲೇಷಿಸಿದ ಬಳಿಕ ಲಂಕಾ ತನ್ನ ಮುಂದಿನ ನಡೆಯನ್ನು ನಿರ್ಧರಿಸಬೇಕಿದೆ. ಇತ್ತೀಚಿನ ದಿನಗಳಲ್ಲಿ ಹಲವು ದೇಶಗಳು ಐರಿಷ್ ಹಾಗೂ ಚೆಚೆನ್ಯಾ ಮಾದರಿಗಳೆರಡನ್ನೂ ಬೆಂಬಲಿಸಿದ್ದಾರೆ. ಆದರೆ ಶ್ರೀಲಂಕಾ ವಿಚಾರದಲ್ಲಿ ಸಕಾರಾತ್ಮಕ ಬೆಳವಣಿಗೆ ಎಂದರೆ ತಮಿಳು ಟೈಗರ್‌ಗಳ ನಾಶವಾಗಿರುವ ಹಿನ್ನೆಲೆಯಲ್ಲಿ ಚುನಾವಣೆಗಳಲ್ಲಿ ಸ್ಪರ್ಧಿಸುವ ಶ್ರೀಲಂಕಾದ ತಮಿಳು ಪಕ್ಷಗಳು ತಮಿಳರು ಬಹುಸಂಖ್ಯಾತರಾಗಿರುವ ಪ್ರಾಂತ್ಯದಲ್ಲಿ ಮುಕ್ತವಾಗಿ ಪ್ರಚಾರಾಭಿಯಾನ ಕೈಗೊಳ್ಳಬಹುದು ಮತ್ತು ಪ್ರತನಿಧಿಸಬಹುದು. ಪ್ರಭಾಕರನ್ ದ್ವೇಷದ ಬೆಂಕಿಯುಗುಳುತ್ತಿದ್ದ ಸಂದರ್ಭದಲ್ಲಿ ಇದು ಸಾಧ್ಯವಿರಲಿಲ್ಲ. ಜೊತೆಯಲ್ಲಿ ಬಹುಜನರ ಅಭಿಪ್ರಾಯಕ್ಕೆ ಮಹತ್ವಕೊಡುವ ಅಗತ್ಯವಿದೆ. ಈಗಾಗಲೇ ಅಳವಡಿಸಿಕೊಂಡು ಯಶಸ್ವಿಯಾಗಿರುವ ಹಾದಿಯನ್ನು ಹಿಡಿಯುವುದೇ ಉತ್ತಮ. ಈ ನಿಟ್ಟಿನಲ್ಲಿ ಕೇಂದ್ರೀಯ ಮತ್ತು ಪ್ರಾಂತೀಯ ಆಯಾಮದ ಸಂಗಮವಾಗಿರುವ ಐರ್‍ಲೆಂಡ್‌ನ ಸಿನ್ ಫೈನ್ ಪಕ್ಷವನ್ನೇ ಉದಾಹರಿಸಬಹುದು. ಉತ್ತರ ಐರ್‍ಲೆಂಡ್‌ನಲ್ಲಿ 'ಅಲ್‌ಸ್ಟರ್ ಯೂನಿಯನಿಸ್ಟ್ ಗುಡ್ ಫ್ರೈಡೇ' ಒಪ್ಪಂದದಿಂದಾಗಿ ದಶಕಗಳ ಕಾಲದ 'ಐರಿಷ್ ರಿಪಬ್ಲಿಕನ್ ಆರ್ಮಿ (ಐಆರ್‌ಎ)' ಪ್ರಚೋದಿತ ಹಿಂಸೆ ಕೊನೆಯಾಗಿತ್ತು. ಇದಕ್ಕೆ ಅಗತ್ಯವಾಗಿದ್ದು ವ್ಯಾಪಕ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ. "ರಾಜಪಕ್ಷೆಯವರ ಚಿಂತನೆ ಉತ್ತಮವಾಗೇ ಇರಬಹುದು. ಆದರೆ, ಸಂಪ್ರದಾಯವಾದಿ ಸಿಂಹಳೀಯ ಕ್ರಾಂತಿಕಾರರ ಪ್ರಭಾವದಿಂದ ತಪ್ಪಿಸಿಕೊಳ್ಳಲು ಅವರಿಂದ ಸಾಧ್ಯವೆ?" ಎನ್ನುವ ಪ್ರಶ್ನೆಗೆ ತುರ್ತು ಉತ್ತರ ಬೇಕಾಗಿದೆ ಎನ್ನುವುದು ವಿಲ್ಸನ್ ವಾದ.

ಇಂತಹ ಸಂಪ್ರದಾಯವಾದಿಗಳು ರಾಜಪಕ್ಷೆ ಪಕ್ಷದಲ್ಲೂ ಇರುವುದು ಎಲ್ಲರಿಗೂ ತಿಳಿದ ಸತ್ಯ. ಹಾಗಿದ್ದಾಗ ತಮಿಳರ ಪರವಾಗಿರುವ ಕಾನೂನನ್ನು ಜಾರಿಗೆ ತರಲು ಅವರು ಸಮ್ಮತಿಸುವರೆ?

ಆ ಕಾರಣದಿಂದಲೇ ಚೆಚೆನ್ಯಾ ಮಾದರಿ ಎಂದಿಗೂ ಕೆಲಸ ಮಾಡುವುದಿಲ್ಲ. ತಮ್ಮ ಬೆಂಬಲಿಗರೇ ಚುನಾವಣೆಯಲ್ಲಿ ಆರಿಸಿ ಬರುವಂತೆ ಮಾಡುವುದು ಸಾಧ್ಯವಾದಲ್ಲಿ ಮಾತ್ರ ರಾಜಪಕ್ಷೆ, ಶ್ರೀಲಂಕಾ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಸೀಮಿತ ಸ್ವಾಯತ್ತತೆಯ ಮಾದರಿಯನ್ನು ಯಶಸ್ವಿಯಾಗಿ ಅಳವಡಿಸಬಹುದು. ಸ್ವ ಆಡಳಿತದಿಂದ ಸಿಂಹಳೀಯರು ಮತ್ತು ತಮಿಳರ ನಡುವಿನ ಕಂದಕವನ್ನು ಕಡಿಮೆ ಮಾಡಬಹುದೇ ವಿನಾ ಇತ್ತೀಚೆಗೆ ಜಗತ್ತು ವೀಕ್ಷಿಸಿದ ವ್ಯಾಪಕ ಹತ್ಯಾಕಾಂಡದಿಂದಲ್ಲ.

"ತಮಿಳು ಸಮುದಾಯದ ಪ್ರಗತಿಯ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಬೇಕು. ಹಾಗಿದ್ದಲ್ಲಿ ಮಾತ್ರ ರಾಷ್ಟ್ರನಿರ್ಮಾಣದಲ್ಲಿ ಅವರನ್ನೂ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಸೀಮಿತ ಸ್ವಾಯತ್ತತೆಯಿಂದ ಅದ್ಭುತ ಬದಲಾವಣೆ ಸಾಧ್ಯ. ಆದರೆ ನಾನು ಈ ಬಗ್ಗೆ ತೀವ್ರ ನಿರೀಕ್ಷೆಗಳನ್ನೇನೂ ಹೊಂದಿಲ್ಲ" ಎನ್ನುತ್ತಾರೆ 'ಇನ್‌ಸ್ಟಿಟ್ಯೂಟ್ ಆನ್ ಇಂಟ್ರಾಸ್ಟೇಟ್ ಕಾನ್‌ಫ್ಲಿಕ್ಟ್ ಆಂಡ್ ಕಾನ್‌ಫ್ಲಿಕ್ಟ್ ರೆಸೊಲ್ಯುಷನ್'ನ ಹಾರ್ವಡ್ ಪ್ರೋಗ್ರಾಮ್‌ನ ರಾಬರ್ಟ್ ರೋಟ್‌ಬರ್ಗ್.

ಅಂತಿಮವಾಗಿ ಮೇಲಿನ ಎರಡು ಆಯ್ಕೆಗಳನ್ನು ಅನುಷ್ಠಾನಕ್ಕೆ ತರುವಲ್ಲಿಯೂ ರಾಜಪಕ್ಷೆ ವಿಫಲವಾದಲ್ಲಿ ಉತ್ತೇಜನ ಮತ್ತು ಸ್ಪಂದನದ ಹಳೇ ಸಿದ್ಧಾಂತಕ್ಕೇ ಒತ್ತುಕೊಡಬಹುದು. ಇದಕ್ಕೆ ಅತ್ಯುತ್ತಮ ಉದಾಹರಣೆ ಸ್ಪೇನ್ ಹಾಗೂ ಪೆರು. ಸ್ವತಂತ್ರ ಬಾಸ್ಕ್ಯು ತಾಯ್ನೆಲದ ಕಲ್ಪನೆಯ ಮೂಲಕ ಇಟಿಎಯನ್ನು ನಿಯಂತ್ರಿಸಿದ ಐತಿಹಾಸಿಕ ಸಾಧನೆ ಸ್ಪೇನ್ ಬೆನ್ನಿಗಿದೆ. ಸ್ಪೇನ್‌ನಲ್ಲಿ ಅತೀ ಹಿಂದುಳಿದ ಪ್ರಾಂತವೆಂದರೆ ಬಾಸ್ಕ್ಯೂ ಪ್ರಾಂತ. ಸಹಜವಾಗಿ ಇದು ಯುವಜನರ ಅತೃಪ್ತಿಗೆ ಕಾರಣವಾಗಿತ್ತು.

ಹಾಗಿದ್ದರೂ ಇಟಿಎಯನ್ನು ಹತ್ತಿಕ್ಕಲು ಕಾರ್ಯಾಚರಣೆಗಳಿಗಾಗಿ ಬಿಲಿಯನ್‌ಗಟ್ಟಲೆ ಹಣ ಸುರಿಯುವ ಬದಲಾಗಿ ಸ್ಪೇನ್ ಸರ್ಕಾರ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗಾಗಿ ವ್ಯಾಪಕ ಹೂಡಿಕೆಗಳನ್ನು ಮಾಡಿತು. ಹಾಗಾಗಿ ಆ ಅತೃಪ್ತಿ ಹೇಳ ಹೆಸರಿಲ್ಲದಂತೆ ಮಾಯವಾಗಿದೆ. ಪೆರು ದೇಶದಲ್ಲಿ ಅಟ್ಟಹಾಸಗೈಯುತ್ತಿದ್ದ ಉಗ್ರರ ಕಥೆಯೂ ಹೀಗೇ ಕೊನೆಯಾಗಿತ್ತು. ಅಲ್ಲಿಯೂ ಜನಸ್ಪಂದನ ಪಡೆಯುವಲ್ಲಿ ಸೇನೆ ಎರಡನೇ ಆಯ್ಕೆಯಾಗಿತ್ತು. ಶ್ರೀಲಂಕಾದಲ್ಲೂ ಇದರ ಪುನರಾವರ್ತನೆ ಏಕಾಗಬಾರದು?

"ಮಾತುಕತೆಗೆ ಸಂಬಂಧಪಟ್ಟಂತೆ ಎಲ್ಲವೂ ವೇಗವಾಗಿ ಮುಗಿಯಬೇಕು ಎನ್ನುವುದು ನನ್ನ ನಿರೀಕ್ಷೆ. ಈ ದ್ವೀಪರಾಷ್ಟ್ರದ ರಾಜಕೀಯ ಎಲ್‌ಟಿಟಿಇ ಸುತ್ತವೇ ತಿರುಗುತ್ತದೆ. ದಶಕಗಳಿಂದ ಇದನ್ನೇ ಕಾಣುತ್ತಿದ್ದೇವೆ. ಆದರೆ ಉಗ್ರರ ಒಂದು ಅಧ್ಯಾಯ ಕೊನೆಯಾಗಿರುವ ಹಿನ್ನೆಲೆಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ಇತರ ಸುದ್ದಿಗಳೂ ಪ್ರಾಮುಖ್ಯತೆ ಪಡೆಯುತ್ತವೆ. ಭಾವೈಕ್ಯತೆ, ಜಾತಿ, ಕಾರ್ಮಿಕ ಹಕ್ಕುಗಳು ಮತ್ತು ಪ್ರಜಾತಾಂತ್ರಿಕ ವಿಚಾರಗಳೂ ರಾಜಕೀಯದಲ್ಲಿ ಮಹತ್ವ ಪಡೆಯಲಾರಂಭಿಸುತ್ತವೆ" ಎನ್ನುತ್ತಾರೆ ಶ್ರೀಲಂಕಾದ 'ಡೆಮಾಕ್ರಸಿ ಫೋರಂ'ನ ವಕ್ತಾರ ಅಹಿಲನ್ ಕಾದಿರ್‌ಗಮರ್.

ಹಾಗಿದ್ದಲ್ಲಿ ರಾಜಪಕ್ಷೆ ಅವರ ತಕ್ಷಣದ ಕರೆ ಏನು? ಆ ಬಗ್ಗೆ ಎಲ್ಲರಲ್ಲೂ ಸಹಮತ ಇದ್ದೇ ಇರಲಿದೆ! ಜನರಿಗೆ ಸ್ವತಃ ಪ್ರಭಾಕರನ್ ಅವರು ಆದರ್ಶಪ್ರಾಯವಾಗದೆ ಇರುವಂತೆ ಗಮನ ಹರಿಸುವುದು!

ಟಿಎಸ್‌ಐ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .