|

ಅಭಿನಯದತ್ತ
ಹೊರಳಿದ್ದೇಕೆ?
ನನಗೆ ಸಿನಿಮಾ ಅಂದ್ರೆ ತುಂಬಾ ಪ್ರೀತಿ.
ಕಾಲೇಜು- ಕಲಿಕೆ ಎಲ್ಲ ಒಂದು ಕಡೆಯಿಂದ ನಡೆಯುತ್ತಲೇ ಇತ್ತು. ಆದರೆ
ಮತ್ತೊಂದೆಡೆಯಿಂದ ನನ್ನಲ್ಲಿ ಸಿನಿಮಾ ಕನಸು ಹೆಬ್ಬಯಕೆಯಾಗಿ ಬೆಳೆಯುತ್ತಿತ್ತು.
ಆದರೆ ನಾನೊಂದು ದಿನ ತಾರಾಪಟ್ಟ ಪಡೆದುಕೊಳ್ಳುವೆ ಎಂದು ನನಗೆ ಅನ್ನಿಸಿರಲೇ
ಇಲ್ಲ. ಮಧ್ಯಮವರ್ಗದ ಕುಟುಂಬವೊಂದರಲ್ಲಿ ಬೆಳೆದ ಹುಡುಗರು ಹೇಗೆ
ಬಾಲ್ಯ-ಯೌವನವನ್ನು ಕಳೆಯುತ್ತಾರೋ ಅದೇ ಮಾದರಿಯಲ್ಲಿ ನಾನೂ ಜೀವನ ಕಳೆದಿದ್ದೆ.
ಸಂಪಂಗಿರಾಮನಗರದಲ್ಲಿ ನನ್ನ ಜೀವನ ಸಾಗಿತ್ತು. ಈ ನೀರಸ ಜೀವನಕ್ಕೆ ಸಿಕ್ಕ
ಆಕಸ್ಮಿಕ ತಿರುವೊಂದು ನನ್ನನ್ನು ಚಿತ್ರರಂಗಕ್ಕೆ ಎಳೆ ತಂದಿತು. 'ಪ್ರಾಣ'
ಚಿತ್ರದಲ್ಲಿ ನಿರ್ದೇಶಕ ಪ್ರಕಾಶ್ ಅವರು ನನಗೆ ನಾಯಕನಾಗುವ ಅವಕಾಶ ಕೊಟ್ಟದ್ದೇ
ನನ್ನ ಮೊದಲ ನಟನಾ ಸಾಹಸ ಎನ್ನಬಹುದು. ನಂತರ ರತ್ನಜ ಅವರ 'ನೆನಪಿರಲಿ'
ಚಿತ್ರದ ಅವಕಾಶ ಸಿಕ್ಕಿತು. ಅದು ಹಿಟ್ ಆದ ಕಾರಣ ಜನರು 'ಪ್ರೇಮ್'ನನ್ನು
ಗುರುತಿಸಿದರು.
ನಿಮ್ಮ 'ನೆನಪಿರಲಿ'
ಬಂದು ವರ್ಷಗಳಾದರೂ ಈಗಲೂ
ನೀವು ಅದೇ ಇಮೇಜ್ ಉಳಿಸಿಕೊಂಡಿದ್ದೀರಿ. ಅದು ಹೇಗೆ ಸಾಧ್ಯವಾಯಿತು?
ಯಾವುದೇ ತಯಾರಿ ಇಲ್ಲದೆ ಚಿತ್ರರಂಗಕ್ಕೆ ಬಂದು
ಇಲ್ಲಿ ನೆಲೆ ಕಂಡುಕೊಳ್ಳುವುದು ಖಂಡಿತಾ ಸುಲಭವಲ್ಲ. ಹೊಸದಾಗಿ ಬರುವವರಿಗೆ
ಚಿತ್ರರಂಗದ ಒಳ- ಹೊರಗು ತಿಳಿದಿದ್ದರೆ ಚೆನ್ನ. ನಟನಾ ತರಬೇತಿ ಇದ್ದರೆ
ಉತ್ತಮ. ಜನಮೆಚ್ಚುಗೆ ಪಡೆಯುವುದು ಸರಳವಲ್ಲ. ಪಡೆದರೂ ಅದನ್ನು
ಉಳಿಸಿಕೊಳ್ಳಬೇಕು. ಎಲ್ಲರೂ ಅಂದುಕೊಳ್ಳುವಂತೆ ಚಿತ್ರರಂಗ ಖಂಡಿತಾ ಶೋಕಿಯಲ್ಲ.
ಈ ವೃತ್ತಿಯ ಜೊತೆ ತಳುಕು ಹಾಕಿಕೊಂಡಿರುವ ಗ್ಲಾಮರ್‌ನಿಂದಾಗಿ ಗಂಭೀರತೆ
ಮರೆಯಾಗುವುದು ಸಹಜವೇ. ಆದರೆ ಇದೂ ಒಂದು ಮಾಧ್ಯಮ. ಮನೋರಂಜನೆಯೇ
ಮುಖ್ಯವಾಗಿದ್ದರೂ, ಜನರನ್ನು ತಲುಪುವ ಹಾಗೂ ಅವರ ಮೇಲೆ ಪರಿಣಾಮ ಬೀರಬಲ್ಲ
ಪ್ರಭಾವೀ ಮಾಧ್ಯಮವಿದು. ಹಾಗಾಗಿ ಉತ್ತಮ ಸಂದೇಶವಿರುವ ಒಳ್ಳೆಯ ಚಿತ್ರಗಳು
ಅಥವಾ ಕಥಾವಸ್ತುವನ್ನು ಆರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು.
ಹೊಸದಾಗಿ ಬಂದವರು ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡಬೇಕಿದೆ.
ಚಿತ್ರರಂಗಕ್ಕೆ
ಎಂಟ್ರಿ
ಕೊಟ್ಟಾಗಿನ ಅನುಭವ?
ನನ್ನ ವೃತ್ತಿಜೀವನದ ಎರಡನೇ ಸಿನಿಮಾ 'ನೆನಪಿರಲಿ'ಯಲ್ಲೇ
ಯಶಸ್ಸಿನ ಖುಷಿ ಅನುಭವಿಸುವ ಅದೃಷ್ಟ ನನಗೆ ಸಿಕ್ಕಿತ್ತು. ಚಿತ್ರರಂಗಕ್ಕೆ
ಕಾಲಿಡುವಾಗ ಯಾವುದೇ ಭ್ರಮೆಗಳನ್ನು ಇಟ್ಟುಕೊಂಡಿರಬಾರದು. ರಾತ್ರೋರಾತ್ರಿ
ತಾರೆ ಆಗಿಬಿಡುತ್ತೇನೆ ಅನ್ನೋ ಭ್ರಮೆ ಇಟ್ಟುಕೊಂಡು ಬರಬಾರದು. ಕನಸುಗಳಿರಬೇಕು
ಮತ್ತು ಅದನ್ನು ನನಸು ಮಾಡಲು ಶ್ರಮಿಸಬೇಕು. ಆ ನಿಟ್ಟಿನಲ್ಲಿ ನಾನು
ಅದೃಷ್ಟವಂತ ಎನ್ನಬಹುದು. 'ನೆನಪಿರಲಿ' ಯಶಸ್ಸಿನಿಂದಾಗಿ ನನಗೆ ಅವಕಾಶಗಳು
ಬಂದವು. ಒಪ್ಪಿಕೊಂಡ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಿದೆ. ಹೀಗಾಗಿ
ಇಂದಿನ ಈ ಸ್ಥಿತಿಯಲ್ಲಿ ಇದ್ದೇನೆ.
ಆದರೆ ನಂತರ
ನೀವು
ಬಹಳಷ್ಟು ಸೋಲು ಕಂಡಿದ್ದೀರಿ. 'ಪಲ್ಲಕ್ಕಿ', 'ಸವಿ ಸವಿ ನೆನಪು', 'ಹೊಂಗನಸು'
ಚಿತ್ರಗಳ ಸೋಲು ನಿಮ್ಮನ್ನು ಕಾಡಿಲ್ಲವೆ?
ಆ ಚಿತ್ರಗಳು ಸೋತಿವೆ ಎಂದು ನಾನು
ಒಪ್ಪಿಕೊಳ್ಳುವುದಿಲ್ಲ. 'ಪ್ರೇಮ್' ನಟಿಸಿದ ಚಿತ್ರಗಳು ಕಮರ್ಶಿಯಲ್ ಆಗಿ
ಯಶಸ್ಸು ಪಡೆಯದೆ ಇರಬಹುದು. ಆದರೆ 'ಪ್ರೇಮ್'ನ ನಟನೆ ಸೋತಿದೆ ಎಂದು ಯಾರೂ
ಹೇಳಿಲ್ಲ.
ಹಾಗಿದ್ದರೆ, ಆ
ಚಿತ್ರಗಳಲ್ಲಿ
ಯಾವ ದೋಷಗಳೂ ಇಲ್ಲವೆ?
ಇಲ್ಲ. ನನ್ನ ಮಟ್ಟಿಗೆ ಇಂದಿಗೂ ಆ ಚಿತ್ರಗಳು
ಪರಿಪೂರ್ಣವೇ. ಆದರೆ ಜನರು ಅದನ್ನು ಸ್ವೀಕರಿಸಿಲ್ಲ. ಕೆಲವೊಮ್ಮೆ ಎಲ್ಲಾ
ಚೆನ್ನಾಗಿದ್ದರೂ ಜನ ಸಿನಿಮಾವನ್ನು ಮೆಚ್ಚಿಕೊಳ್ಳುವುದಿಲ್ಲ. ಸಿನಿಮಾದ ಸೋಲು
ಅಥವಾ ಗೆಲುವಿಗೆ ಮುಖ್ಯವಾಗಿ ಅದೃಷ್ಟ ಬೇಕು. ನಾವು ಏನೇ ಪಲ್ಟಿ ಹೊಡೆದರೂ,
ಕೊನೆಗೆ ಅದೃಷ್ಟವಿದ್ದರೆ ಮಾತ್ರವೇ ಗೆಲುವು ದಕ್ಕುತ್ತದೆ. ನಮ್ಮ ಕೆಲಸವನ್ನು
ಶ್ರದ್ಧೆಯಿಂದ ಮಾಡಬೇಕು ಅಷ್ಟೆ.
ನೀವು
ನಟಿಸಿದ ಮತ್ತು ನಟಿಸುತ್ತಿರುವ
ಚಿತ್ರಗಳೆಲ್ಲ
ಪ್ರಣಯ ಪ್ರಧಾನ ಚಿತ್ರಗಳೇ? ಏಕತಾನತೆ ಕಾಡಿಲ್ಲವೆ? ಜನರೂ ಬೇಸತ್ತಿರಬಹುದು...
ಈಗ ಯಾವ ಚಿತ್ರದಲ್ಲಿ 'ಪ್ರೇಮ' ಇಲ್ಲ ಹೇಳಿ.
ಕ್ಲಾಸ್ ಅಥವಾ ಮಾಸ್ ಎಲ್ಲ ಸಿನಿಮಾಗಳಲ್ಲೂ 'ಪ್ರೇಮ' ಇದ್ದೇ ಇರುತ್ತದೆ.
ನನ್ನ ಚಿತ್ರಗಳಲ್ಲಿ ಅತಿಯಾದ ಹೊಡೆದಾಟ ಇಲ್ಲದೆ ಇರಬಹುದು. ಆದರೆ ನನಗೆ
ಏಕತಾನತೆ ಎಂದು ಅನಿಸಿಲ್ಲ. ವಿಭಿನ್ನ ಗೆಟಪ್, ಪಾತ್ರ, ಸನ್ನಿವೇಶಗಳಿರುತ್ತವೆ.
ಆಕ್ಷನ್ ಪ್ರಧಾನ ಚಿತ್ರಗಳಲ್ಲಿ ನಟಿಸುವ ಆಸೆ ನನಗೂ ಇದೆ. ಆದರೆ ಉತ್ತಮ
ಚಿತ್ರಕಥೆ ಇರಬೇಕು. ಇಮೇಜ್ ಬದಲಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಸಾಹಸ
ಚಿತ್ರಗಳಲ್ಲಿ ನಟಿಸುವ ಆಸೆ ನನಗಿಲ್ಲ. ಬದಲಾಗಿ ಒಳ್ಳೆಯ ಕಥೆ ಸಿಕ್ಕರೆ
ಖಂಡಿತಾ ನಟಿಸುತ್ತೇನೆ. ನನಗೆ ಪೌರಾಣಿಕ ಚಿತ್ರಗಳಲ್ಲಿ ನಟಿಸಬೇಕು ಎನ್ನುವ
ಆಸಕ್ತಿಯೂ ಇದೆ. ಆದರೆ ಕಥೆ ಚೆನ್ನಾಗಿದ್ದರೆ ಮಾತ್ರ ಅತ್ತ ಗಮನ ನೀಡುತ್ತೇನೆ.
ಕಳೆದೊಂದು ವರ್ಷ ನೀವು
ಸುದ್ದಿಯಲ್ಲೇ
ಇರಲಿಲ್ಲ...
ಕಳೆದ ವರ್ಷ ನನ್ನ ಚಿತ್ರಗಳು
ಬಿಡುಗಡೆಯಾಗಿಲ್ಲ. ಆದರೆ ನಾನು ಹಲವು ಚಿತ್ರಗಳನ್ನು ಒಪ್ಪಿಕೊಂಡು
ನಟಿಸಿದ್ದೇನೆ. ಅವು ಈ ವರ್ಷ ಬಿಡುಗಡೆಯಾಗುತ್ತಿವೆ. ಈಗ 'ಗೌತಮ್'
ಬಿಡುಗಡೆಯಾಗಿದೆ. ಒಂದೆರಡು ತಿಂಗಳ ನಂತರ 'ಜೊತೆಗಾರ', ನಂತರ 'ಜನ್ಮ
ಜನ್ಮದಲ್ಲೂ' ಬಿಡುಗಡೆಯಾಗುತ್ತಿವೆ. ಹಾಗೇ ಇನ್ನೆರಡು ಚಿತ್ರಗಳಲ್ಲಿ ನಟಿಸುವ
ಬಗ್ಗೆ ಮಾತುಕತೆ ನಡೆಸುತ್ತಿದ್ದೇನೆ. ಇನ್ನೇನು ಕೆಲ ದಿನಗಳಲ್ಲಿ ಹೊಸ
ಚಿತ್ರದ ಕೆಲಸ ಆರಂಭಿಸುವೆ.
'ಗೌತಮ್' ಚಿತ್ರಕ್ಕೆ ಸಿಕ್ಕ
ಪ್ರತಿಕ್ರಿಯೆಗಳು,
ವಿಮರ್ಶೆಗಳು ನಿಮಗೆ ತೃಪ್ತಿ ನೀಡಿವೆಯೆ? ಕೊನೆಗೂ ರಿಮೇಕ್ ಚಿತ್ರದಲ್ಲಿ
ನಟಿಸಿಯೇ ಬಿಟ್ಟಿದ್ದೀರಿ?!
ಉತ್ತಮ ಪ್ರತಿಕ್ರಿಯೆಗಳೇ ಸಿಕ್ಕಿವೆ.
ಮಾಧ್ಯಮಗಳೂ ಒಳ್ಳೆಯ ವಿಮರ್ಶೆ ನೀಡಿವೆ. ಮಾಧ್ಯಮಗಳ ವಿಮರ್ಶೆ ಚಿತ್ರದ
ಯಶಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಶೇ. ೬೦ರಷ್ಟು ಮಂದಿ ಅದನ್ನು
ನೋಡಿಕೊಂಡೇ ಸಿನಿಮಾಗೆ ಹೋಗುತ್ತಾರೆ. ನಾನೂ ಚಿತ್ರರಂಗಕ್ಕೆ ಬರುವ ಮುನ್ನ
ಪತ್ರಿಕೆಯ ವಿಮರ್ಶೆ ಆಧರಿಸಿಯೇ ಸಿನಿಮಾ ನೋಡುತ್ತಿದ್ದೆ. ಕನ್ನಡದ ಬಹುತೇಕ
ಪತ್ರಿಕೆಗಳು ನಮ್ಮ ಭಾಷೆಯ ಚಿತ್ರೋದ್ಯಮ ಬೆಳೆಯಬೇಕು ಎನ್ನುವ ಅಭಿಮಾನದಿಂದ
ಉತ್ತಮ ವಿಮರ್ಶೆಗಳನ್ನೇ ನೀಡುತ್ತಾ ಬಂದಿವೆ. ಕೆಲವು ಪತ್ರಿಕೆಗಳು ವ್ಯಂಗ್ಯ
ಮಾಡುವುದೂ ಇದೆ. ಅವುಗಳನ್ನೆಲ್ಲಾ ಸಹಿಸಲೇಬೇಕು. ನಾನು ರಿಮೇಕ್ ಚಿತ್ರಗಳಲ್ಲಿ
ನಟಿಸುವುದಿಲ್ಲ ಅನ್ನೋ ನಿರ್ಧಾರ ಮಾಡಿದ್ದೇನೋ ನಿಜ. ಆದರೆ ಹೊಟ್ಟೆಪಾಡು ಕೂಡ
ಮುಖ್ಯ ಅಲ್ಲವೆ? ಹಿಂದಿನ ಕೆಲವು ಚಿತ್ರಗಳು ಸೋತ ಬಳಿಕ ರಿಮೇಕ್ ಚಿತ್ರಗಳ
ಅವಕಾಶಗಳೇ ಸಿಕ್ಕಿದ್ದವು. ಅಂತಿಮವಾಗಿ ನನ್ನ ನಿರ್ಧಾರ ಬದಲಿಸಲೇಬೇಕಾಯಿತು.
ಅಂದರೆ ಕನ್ನಡದಲ್ಲಿ ಸೃಜನಶೀಲ
ಬರಹಗಾರರು
ಇಲ್ಲ ಎಂದೇ? ಅಥವಾ ಅಂತಹ ಬರಹಗಾರರನ್ನು ಆರಿಸುವ ಸೃಜನಶೀಲ ನಿರ್ಮಾಪಕರು
ಇಲ್ಲವೆ?
ಸೃಜನಶೀಲ ಬರಹಗಾರರು ಇಲ್ಲ ಎಂದೇನಲ್ಲ. ರಿಮೇಕ್
ಅಥವಾ ಸ್ವಮೇಕ್ ಮಾಡುವ ಬಗ್ಗೆ ಅಂತಿಮ ನಿರ್ಧಾರ ನಿರ್ಮಾಪಕರೇ
ತೆಗೆದುಕೊಳ್ಳುತ್ತಾರೆ. ಒಂದು ಭಾಷೆಯಲ್ಲಿ ಯಶಸ್ಸು ಕಂಡಿರುವ ಕಥೆ ನಮ್ಮಲ್ಲೂ
ಮೆಚ್ಚುಗೆ ಪಡೆಯುವ ಸಾಧ್ಯತೆಗಳು ಹೆಚ್ಚು. ತಾವು ಹಾಕಿದ ದುಡ್ಡು ವಾಪಾಸು
ಬರಬೇಕು ಎಂದು ನಿರ್ಮಾಪಕರು ಬಯಸುವುದು ಸಹಜವೇ. ನಾವು ಕಲಾವಿದರೇ, ಒಂದು
ಸಿನಿಮಾವನ್ನು ಒಪ್ಪಿಕೊಳ್ಳುವ ಮೊದಲು ಸಾವಿರ ಬಾರಿ ಪರಿಶೀಲಿಸುತ್ತೇವೆ.
ಕುರುಡರಂತೆ ಒಪ್ಪಿಕೊಳ್ಳುವುದಿಲ್ಲ. ಹಾಗಿರುವಾಗ ಕೋಟಿಗಟ್ಟಲೆ ಹಣ ಸುರಿಯುವ
ನಿರ್ಮಾಪಕರು ರಿಸ್ಕ್ ತೆಗೆದುಕೊಳ್ಳಬೇಕು ಎಂದು ನಿರೀಕ್ಷಿಸುವುದೂ
ತಪ್ಪಾಗುತ್ತದೆ.
ಸ್ವಮೇಕ್
ಚಿತ್ರಗಳಿಗೆ ಮಾರುಕಟ್ಟೆ
ಇಲ್ಲ ಎನ್ನುತ್ತೀರೇನು?
ಸ್ವಮೇಕ್ ಅಂತ ಅಲ್ಲ. ಎಲ್ಲಾ ಚಿತ್ರಗಳೂ
ಮಾರುಕಟ್ಟೆ ಸಮಸ್ಯೆ ಎದುರಿಸುತ್ತಿವೆ. ಇದು ಕನ್ನಡ ಚಿತ್ರರಂಗಕ್ಕೆ ಮಾತ್ರ
ಸೀಮಿತವಲ್ಲ. ಬೇರೆ ಭಾಷೆಯ ಚಿತ್ರಗಳಲ್ಲೂ ಮಾರುಕಟ್ಟೆ ಸಮಸ್ಯೆ ಇದ್ದೇ ಇದೆ.
ಟಿವಿ, ಡಿವಿಡಿ, ಪೈರಸಿ, ಸೀಮಿತ ಥಿಯೇಟರ್‌ಗಳು, ದುಬಾರಿ ಮಲ್ಟಿಪ್ಲೆಕ್ಸ್‌ಗಳು
ಹೀಗೆ ಒಂದೇ ಎರಡೇ... ಸಾಕಷ್ಟು ಸಮಸ್ಯೆಗಳಿವೆ. ಇತರ ಚಿತ್ರರಂಗಗಳು
ಮಾರುಕಟ್ಟೆ ಬೆಳೆಸಿಕೊಳ್ಳಲು ಶ್ರಮಿಸುತ್ತಿವೆ. ಬೆಂಗಳೂರು ಎಲ್ಲಾ ಭಾಷೆಯ
ಚಿತ್ರಗಳಿಗೂ ಉತ್ತಮ ಮಾರುಕಟ್ಟೆ. ನಮ್ಮ ಚಿತ್ರಗಳು ಇತರ ಭಾಷಾ ಚಿತ್ರಗಳ ಜೊತೆ
ಸ್ಪರ್ಧಿಸಬೇಕಿದೆ. ಹಾಗೆ ನೋಡಿದರೆ ಇತರ ಚಿತ್ರರಂಗಗಳ ಹೀರೋಗಳದು
ಅವರೊಳಗೊಳಗಿನ ಸ್ಪರ್ಧೆಯಾದರೆ ನಾವು ಕನ್ನಡ ನಟರು ಆಮೀರ್ ಖಾನ್- ಶಾರುಖ್
ಖಾನ್ ಚಿತ್ರಗಳ ಜೊತೆ ಸ್ಪರ್ಧಿಸಬೇಕಿದೆ. ಇಂತಹ ಸಮಯದಲ್ಲೂ ಕನ್ನಡ ಚಿತ್ರ
ಅಸ್ತಿತ್ವ ಉಳಿಸಿಕೊಂಡಿರುವುದಕ್ಕೆ ನಾವು ಹೆಮ್ಮೆ ಪಡಬೇಕಿದೆ. ಕನ್ನಡ
ಚಿತ್ರರಂಗಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಬೆಳೆಯಲಾಗದಿದ್ದರೂ, ಕನಿಷ್ಠ
ಪಕ್ಷ ದೇಶದ ಇತರ ರಾಜ್ಯಗಳಿಗೆ ಅದನ್ನು ವಿಸ್ತರಿಸಲು ಪ್ರಯತ್ನಿಸಬೇಕು.
ಬಾಲಿವುಡ್ ತಾರೆಯರು ತಮ್ಮ ಚಿತ್ರಗಳ
ಪ್ರಚಾರಕ್ಕೆ
ದೇಶವಿಡೀ ಪ್ರವಾಸ ಮಾಡುತ್ತಾರೆ. ಆದರೆ ನಮ್ಮಲ್ಲಿ ಮಾಧ್ಯಮಗಳ ಪ್ರಚಾರ ಹೊರತು
ಪಡಿಸಿ, ಇನ್ಯಾವ ವಿಶೇಷ ಪ್ರಚಾರ ಕಾಣುವುದಿಲ್ಲ...
ಹೌದು, ಕಮರ್ಶಿಯಲ್ ಆಗಿ ಯಶಸ್ಸು ಕಾಣಬೇಕೆಂದರೆ
ಇಂತಹ ಪ್ರಯತ್ನಗಳು ಆಗಬೇಕು. ಆದರೆ ಇದಕ್ಕೆ ಸಂಬಂಧಿಸಿದ
ಖರ್ಚು-ವೆಚ್ಚಗಳನ್ನೆಲ್ಲ ನಿಭಾಯಿಸುವ ಸಾಮರ್ಥ್ಯವೂ ನಿರ್ಮಾಪಕರಿಗೆ ಇರಬೇಕು.
೬೦,೦೦೦ ರೂ. ಖರ್ಚು ಮಾಡಿದರೆ ಜಾಗತಿಕ ಮಾರುಕಟ್ಟೆಗೆ ಕನ್ನಡ ಸಿನಿಮಾಗಳ ಸಿಡಿ
ಬಿಡುಗಡೆ ಮಾಡಬಹುದು. ಹಾಗೆಯೇ ಕನ್ನಡಿಗರಲ್ಲಿ ನಮ್ಮ ಭಾಷಾ ಸಿನಿಮಾಗಳನ್ನು
ನೋಡುವ ಆಸಕ್ತಿ ಬೆಳೆಸಬಹುದು. ಇತರ ರಾಜ್ಯಗಳಲ್ಲಿ ಕನಿಷ್ಠ ಒಂದು ಬೆಳಗಿನ ಶೋ
ಆಯೋಜಿಸಿದರೂ ಸಾಕು. ಈಗಲೇ ಇಂತಹ ಪ್ರಯತ್ನಗಳನ್ನು ಮಾಡಿದಲ್ಲಿ ಕನಿಷ್ಠ ಐದು
ವರ್ಷಗಳ ನಂತರವಾದರೂ ಸಕಾರಾತ್ಮಕ ಬೆಳವಣಿಗೆ ಕಾಣಬಹುದು.
ಚಿತ್ರರಂಗದಲ್ಲಿ ಭದ್ರವಾಗಿ
ನೆಲೆಯೂರಲು
ಹೊಸ ಯೋಜನೆಗಳೇನಾದರೂ?
ನಾನು ಈಗಾಗಲೇ ಭದ್ರವಾಗಿ ನೆಲೆಯೂರಿದ್ದೇನೆ
ಎಂದುಕೊಂಡಿದ್ದೆ! (ನಗು) ಅಂತಹ ವಿಶೇಷ ಯೋಜನೆಗಳೇನೂ ಇಲ್ಲ. ಜೀವನದಲ್ಲಿ ಏನು
ಎದುರಾದರೂ ಸ್ವೀಕರಿಸುತ್ತೇನೆ.
ನಿಮ್ಮ ಫ್ಯಾನ್ ಕ್ಲಬ್
ಚಟುವಟಿಕೆ
ಹೇಗಿದೆ?
ಬೊಂಬಾಟಾಗಿದೆ. ಆದರೆ ದೊಡ್ಡ- ದೊಡ್ಡ
ಯೋಜನೆಗಳನ್ನು ಹಾಕಿಕೊಳ್ಳುವ ಶಕ್ತಿ ಅದಕ್ಕೆ ಇನ್ನೂ ಬಂದಿಲ್ಲ.
ನಟನೆ
ಬಿಟ್ಟು...
ಕಲಾವಿದನಾಗಿ ಸಾಕಷ್ಟು ಗಳಿಸಿದ್ದೇನೆ. ಸುಖ,
ಶಾಂತಿ, ನೆಮ್ಮದಿ, ಹೆಸರು, ಹಣ ಎಲ್ಲವೂ ಸಿಕ್ಕಿದೆ. ಶಕ್ತಿ ಇದ್ದರೆ
ಮುಂದೊಂದು ದಿನ ನಿರ್ಮಾಪಕನಾಗಿ ಉತ್ತಮ ಚಿತ್ರಗಳನ್ನು ನಿರ್ಮಿಸುವೆ.
ಜೀವನ ಸಾರ್ಥಕ
ಅನಿಸಿದ್ದು?
ತಾಳಿ ಕಟ್ಟಿದಾಗ...
ನಿಮಗೆ ತುಂಬಾ
ಇಷ್ಟವಾದ
ಇತ್ತೀಚಿನ ಚಿತ್ರ?
ಸ್ಲಮ್‌ಡಾಗ್ ಮಿಲೇನಿಯರ್.
ಇಷ್ಟವಾದ ಕನ್ನಡ
ಚಿತ್ರ?
ಪ್ರೇಮ್ ಅಭಿನಯದ ಗೌತಮ್!!
'ಥ್ರಿಲ್' ಅನಿಸಿದ
ಕ್ಷಣ?
ಮೊದಲ ಚಿತ್ರ 'ಪ್ರಾಣ'ದಲ್ಲಿ ನಟಿಸುವ ಅವಕಾಶ
ಸಿಕ್ಕಿದ ಕ್ಷಣ.
ಟಿಎಸ್‌ಐ
|