User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ದೇಸಿ ದನಿ
 
 

ಕರ್ನಾಟಕ: ಮತಾಂಧತೆ

ನಗೆ ಮಾಂತ್ರಿಕನನ್ನೂ ಬಿಡದ ಧರ್ಮ ದ್ವೇಷ

ಚಾರ್ಲಿ ಚಾಪ್ಲಿನ್ ಪ್ರತಿಮೆ ನಿರ್ಮಾಣಕ್ಕೆ ಹಿಂದೂ ಕಾರ್ಯಕರ್ತರ ಪ್ರತಿರೋಧ

ಕೋಮು ದ್ವೇಷದ ಅಗ್ನಿಕುಂಡವಾಗಿರುವ ಕರಾವಳಿ ತೀರದಲ್ಲಿ ಮತ್ತೊಮ್ಮೆ ಹಾಸ್ಯಾಸ್ಪದ ಕಾರಣಕ್ಕಾಗಿ ವಿವಾದದ ಭುಗಿಲೆದ್ದಿದೆ. ಈಗ ಮತಾಂಧತೆಯ ಅನಾಗರಿಕ ದಾಳಿಗೆ ಒಳಗಾಗಿರುವುದು ನಿರ್ದೇಶಕ ಹೇಮಂತ್ ಹೆಗ್ಡೆ ಅವರ ಚಾರ್ಲಿ ಚಾಪ್ಲಿನ್!

'ಹೌಸ್‌ಫುಲ್' ಚಿತ್ರದ ಹಾಡಿನ ಸನ್ನಿವೇಶವೊಂದನ್ನು ಚಿತ್ರೀಕರಿಸಲು ರೂ. 30 ಲಕ್ಷ ವೆಚ್ಚದಲ್ಲಿ 67 ಅಡಿ ಎತ್ತರದ ಚಾರ್ಲಿ ಚಾಪ್ಲಿನ್ ಪ್ರತಿಮೆ ನಿರ್ಮಿಸುವ ಕನಸು ಕಂಡಿದ್ದರು ಚಿತ್ರ ನಿರ್ದೇಶಕ ಹೇಮಂತ್ ಹೆಗ್ಡೆ. ಅದಕ್ಕಾಗಿ ಉಡುಪಿ ತಾಲೂಕಿನ ಬೈಂದೂರಿನ ಒತ್ತೆನೆಣೆಯ ಸೂರ್ಯಾಸ್ತ ನೋಟದ ಗುಡ್ಡವನ್ನು ಆರಿಸಿದ್ದರು ಕೂಡ. ಆದರೆ ಈ ಸ್ಥಳ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುತ್ತದೆ ಎಂದುಕೊಂಡು ಗುಡ್ಡದ ಕೆಳಗೆ ಸೋಮೇಶ್ವರ ಕಡಲತೀರದ ಬಳಿ ಪ್ರತಿಮೆ ನಿರ್ಮಾಣದ ಕೆಲಸ ಆರಂಭಿಸಿದ್ದರು. ಆದರೆ ಬಿಜೆಪಿ ಕಾರ್ಯಕರ್ತ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಸುರೇಶ್ ಬಟವಾಡಿ ನೇತೃತ್ವದ ಹಿಂದೂ ಸಂಘಟನೆಯೊಂದರ ಕಾರ್ಯಕರ್ತರು ಆ ಕಾರ್ಯಕ್ಕೆ ಧಾರ್ಮಿಕ ಕಾರಣವೊಡ್ಡಿ ಅಡ್ಡಿಪಡಿಸಿದ್ದರು ಎಂದು ಖೇದ ವ್ಯಕ್ತಪಡಿಸುತ್ತಾರೆ ಹೇಮಂತ್ ಹೆಗ್ಡೆ.

"ನಾವು ಜಿಲ್ಲಾಡಳಿತ ಮತ್ತು ವಾರ್ತಾ ಇಲಾಖೆಯಿಂದ ಅನುಮತಿ ಪಡೆದು ಮಾರ್ಚ್ 13ರಂದು ಸೋಮೇಶ್ವರ ಕಡಲ ತೀರದಂಚಿನ ಸ್ಥಳದಲ್ಲಿ ಪ್ರತಿಮೆ ನಿರ್ಮಾಣ ಕೆಲಸ ಆರಂಭಿಸಿದ್ದೆವು. ತಳಪಾಯ ಮತ್ತು ವೆಲ್ಡಿಂಗ್ ಕಾರ್ಯ ನಡೆಯುತ್ತಿರುವಾಗ ಸುರೇಶ್ ಬಟವಾಡಿ ನೇತೃತ್ವದ ಹಿಂದೂ ಸಂಘಟನೆಯೊಂದರ ಕಾರ್ಯಕರ್ತರು ಬೆದರಿಸಿ ಕೆಲಸವನ್ನು ಸ್ಥಗಿತಗೊಳಿಸಿದರು. ಶಾಶ್ವತ ಪ್ರತಿಮೆ ನಿರ್ಮಿಸಿದಲ್ಲಿ ಅದನ್ನು ಪ್ರವಾಸೋದ್ಯಮ ಇಲಾಖೆಗೆ ಉಡುಗೊರೆಯಾಗಿ ನೀಡಬಹುದು ಮತ್ತು ನನಗೂ ಹೆಸರು ಬರುತ್ತದೆ ಎಂದು ಯೋಚನೆ ಮಾಡಿದ್ದೇ ನನ್ನ ಮೂರ್ಖತನ" ಎನ್ನುತ್ತಾ ಹೇಮಂತ್ ಹೆಗ್ಡೆ ಟಿಎಸ್‌ಐಗೆ ಚಾಪ್ಲಿನ್ ಪ್ರಕರಣವನ್ನು ವಿವರಿಸಿದರು.

'ಚಾರ್ಲಿ ಚಾಪ್ಲಿನ್ ಒಬ್ಬ ಕ್ರಿಶ್ಚಿಯನ್'(?) ಎಂಬ ಕಾರಣದಿಂದ ಹಿಂದೂ ಕಾರ್ಯಕರ್ತರು ಸೋಮೇಶ್ವರ ದೇವಾಲಯದ ಹಾದಿಯಲ್ಲಿ ಪ್ರತಿಮೆ ನಿರ್ಮಾಣಕ್ಕೆ ತಡೆ ಒಡ್ಡಿದ್ದಾರೆ. ಚಾಪ್ಲಿನ್ ಅವರಂತಹ ಮಹಾ ಮಾನವತಾವಾದಿಯೊಬ್ಬರನ್ನು ಒಂದು ಧರ್ಮದ ಚೌಕಟ್ಟಿನಲ್ಲಿ ಇಟ್ಟು ನೋಡುವುದೇ ದೊಡ್ಡ ದುರಂತ ಎನ್ನುತ್ತಾರೆ ಹೇಮಂತ್ ಹೆಗ್ಡೆ. ಆದರೆ, ಸುರೇಶ್ ಬಟವಾಡಿ ಅವರ ವಾದವೇ ಬೇರೆ. "ಗಿನ್ನಿಸ್ ದಾಖಲೆಯ ಹುಚ್ಚಿಗಾಗಿ ದೇವಸ್ಥಾನಕ್ಕೆ ಹೋಗುವ ಹಾದಿಯಲ್ಲಿ ವಿದೇಶಿ ವ್ಯಕ್ತಿಯ ಪ್ರತಿಮೆ ನಿರ್ಮಿಸುವುದಕ್ಕೆ ನಮ್ಮ ವಿರೋಧವಿದೆ. ಆತ ಕ್ರಿಶ್ಚಿಯನ್ ಎಂಬ ಕಾರಣಕ್ಕೆ ವಿರೋಧಿಸುತ್ತಿದ್ದೇವೆ ಎಂದು ನಾವು ಎಲ್ಲೂ ಹೇಳಿಕೊಂಡಿಲ್ಲ. ಮಾಧ್ಯಮಗಳು ಪದೇ- ಪದೇ ಅದೇ ಮಾತನ್ನು ಹೇಳಿದರೆ ನಾವು ಅದನ್ನು ಅಲ್ಲಗಳೆಯುವುದೂ ಇಲ್ಲ" ಎನ್ನುತ್ತಾರೆ ಟಿಎಸ್‌ಐ ಜೊತೆ ಮಾತನಾಡಿದ ಸುರೇಶ್ ಬಟವಾಡಿ.

ಹಿಂದೂ ಕಾರ್ಯಕರ್ತರು ಮಾತ್ರವಲ್ಲ, ಬೈಂದೂರು ಬಿಜೆಪಿ ಶಾಸಕ ಕೆ. ಲಕ್ಷ್ಮೀನಾರಾಯಣ ಅವರೂ ಹೆಗ್ಡೆ ಅವರ ಕಾರ್ಯವನ್ನು ವಿರೋಧಿಸಿದ್ದಾರೆ. ಆದರೆ "ಧಾರ್ಮಿಕ ಕಾರಣಗಳಿಂದ ಅಲ್ಲ! ಜನರ ಭಾವನೆಗಳಿಗೆ ಧಕ್ಕೆ ತರುವಂತಹ ಯಾವುದೇ ಕೆಲಸಕ್ಕೆ ತಾವು ಸಮ್ಮತಿ ನೀಡುವುದಿಲ್ಲ" ಎನ್ನುವುದು ಶಾಸಕರ ನಿಲುವು. ಅದಕ್ಕೆ ಪೂರಕವಾಗಿ, ಟಿಎಸ್‌ಐ ಜೊತೆ ಮಾತನಾಡಿದ ರಾಜ್ಯ ಬಿಜೆಪಿ ವಕ್ತಾರ ವಿ. ಧನಂಜಯ್ ಕುಮಾರ್ ಶಾಸಕರ ಅಭಿಪ್ರಾಯವನ್ನು ಬೆಂಬಲಿಸುತ್ತಾ "ಬಿಜೆಪಿ ಭಾರತೀಯ ಸಂಸ್ಕೃತಿ ಮತ್ತು ಇತಿಹಾಸವನ್ನು ಗೌರವಿಸುವ ಕಾರ್ಯಗಳಿಗೆ ಮಾತ್ರ ಬೆಂಬಲ ನೀಡುತ್ತದೆ. ಅದಲ್ಲದೆ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂತಹ ಚಟುವಟಿಕೆಗಳಿಗೆ ಆಸ್ಪದ ಕೊಡುವುದಿಲ್ಲ. ಹೇಮಂತ್ ಹೆಗ್ಡೆ ಅವರು ಬೇರೆ ಸ್ಥಳದಲ್ಲಿ ಪ್ರತಿಮೆ ನಿರ್ಮಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದಲ್ಲಿ ಉದ್ದೇಶ ಹಾಗೂ ಸಂಬಂಧ ಪಟ್ಟ ಕಾನೂನಿನ ತೊಡಕುಗಳನ್ನು ಪರಿಶೀಲಿಸಿ ನಾವು ನಿರ್ಧಾರ ಕೈಗೊಳ್ಳುತ್ತೇವೆ" ಎಂದು ಸರ್ಕಾರದ ಪರವಾಗಿ ಹೇಳಿದರು!

ಹಾಗಾಗಿ, ಪ್ರತಿಮೆ ನಿರ್ಮಾಣಕ್ಕೆ ಬದಲಿ ಜಾಗದ ಪರಿಶೀಲನೆಯಲ್ಲಿರುವ ಹೇಮಂತ್ ಅವರಿಗೆ ಸದ್ಯಕ್ಕೆ ಸರ್ಕಾರದ ಕಡೆಯಿಂದಲೂ ಪೂರಕ ಪ್ರತಿಕ್ರಿಯೆ ಸಿಗಲಾರದು ಎಂಬುದನ್ನು ಧನಂಜಯ ಕುಮಾರ್ ನೇರವಾಗಿ ಹೇಳಿದ್ದಾರೆ. ಈ ನಡುವೆ ಕರ್ನಾಟಕದ ಚಲನಚಿತ್ರ ಹಾಗೂ ನಾಟಕ ಕಲಾವಿದರು ಹೇಮಂತ್ ಹೆಗ್ಡೆ ಪರವಾಗಿ ಪ್ರತಿಭಟನೆಗೆ ಇಳಿಯಲು ಸಿದ್ಧರಾಗಿದ್ದಾರೆ. ಜೊತೆಯಲ್ಲಿ ಹೇಮಂತ್ ಹೆಗ್ಡೆ ಪರವಾಗಿ ಅಂತರ್ಜಾಲದಲ್ಲಿ ಅಭಿಯಾನವೂ ಆರಂಭವಾಗಿದೆ.

ಈ ಘಟನೆ ಇನ್ನೂ ಜೀವಂತವಿರುವಾಗಲೇ ಮಂಗಳೂರಿನಲ್ಲಿ ನಡೆದ ಹಿಂದೂ ಸಮಾಜೋತ್ಸವದಲ್ಲಿ ಲೋಕಸಭಾ ಚುನಾವಣೆಗೆ ಮುನ್ನ ಹಿಂದೂ ಮತಬ್ಯಾಂಕ್ ಕ್ರೋಡೀಕರಿಸುವ ಕಾರ್ಯವಾಗಬೇಕು ಎಂಬ ಘೋಷಣೆ ಮೊಳಗಿದೆ. ಹಾಗೇ ಸಮಾವೇಶದ ಬೆನ್ನಿಗೇ ಮಂಗಳೂರು ಮತ್ತು ಸುತ್ತಮುತ್ತಲ ಕಾಪು, ಪುತ್ತೂರು ಮುಂತಾದ ಕಡೆ ಕೋಮು ಗಲಭೆಗಳು ಆರಂಭವಾಗಿವೆ. ಪುತ್ತೂರಿನಲ್ಲಿ ಸಂಶೋಧನಾ ಕಾರ್ಯಕ್ಕೆ ಬಂದಿದ್ದ ವಿದ್ಯಾರ್ಥಿಗಳ ಗುಂಪಿನಲ್ಲಿ ಹುಡುಗ- ಹುಡುಗಿಯರು ಒಟ್ಟಿಗೇ ಇದ್ದರು ಎಂಬ ಕಾರಣಕ್ಕೆ ಅವರ ಮೇಲೆ ಹಿಂದೂ ಸಂಘಟನೆಯೊಂದು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಘರ್ಷಣೆ ನಡೆದು ಲಾಠಿ ಪ್ರಹಾರ ನಡೆದಿದೆ. ನಿಷೇಧಾಜ್ಞೆ ಕೂಡ ಹೇರಲಾಗಿತ್ತು.

ಒಟ್ಟಾರೆ, ಇಡೀ ಕರಾವಳಿಯಲ್ಲಿ ಮತಾಂಧತೆ ಪರಾಕಾಷ್ಠೆಗೆ ತಲುಪಿದ್ದು, ಅಲ್ಲಿ ವಿಶ್ವಮಾನ್ಯ ಕಲಾವಿದನಿಂದ ತರಗತಿಯೊಳಗಿನ ವಿದ್ಯಾರ್ಥಿಗಳವರೆಗೆ ಧರ್ಮವೇ ಮಾನದಂಡವಾಗಿ ಎಲ್ಲವನ್ನೂ ಒಡೆದು- ಬೇರ್ಪಡಿಸಿ ನೋಡುವುದೇ "ಸರಿ" ಎಂಬ ಸ್ಥಿತಿ ನಿರ್ಮಾಣವಾಗಿದೆ.

ಟಿಎಸ್‌ಐ

ಎನ್.ಕೆ. ಸುಪ್ರಭಾ

ಪಶ್ಚಿಮ ಬಂಗಾಳ: ರಾಜಕೀಯ

ಎಡಪಕ್ಷಗಳಲ್ಲೂ ಈಗ 'ಜೈ ಹೋ..'

ಕಮ್ಯುನಿಷ್ಟರೂ ಜನಪ್ರಿಯತೆಯ ಮೋಹಕ್ಕೆ ಬಿದ್ದಿರುವುದು ಅಚ್ಚರಿ ತಂದಿದೆ

ಮಾರ್ಕ್ಸ್‌ವಾದಿಗಳು ಪ್ರಾರಂಭದಿಂದಲೂ ಬದ್ಧತೆ ಹಾಗೂ ನಾಯಕತ್ವದೆಡೆಗಿನ ನಿಷ್ಠೆಗೆ ಹೆಸರುವಾಸಿ. ಆದರೆ, ಬಹುಶಃ ಪಕ್ಷದ ಎಲ್ಲಾ ನಿಯಮಾವಳಿಗಳು ಮುಂಚೂಣಿ ನಾಯಕರಿಗೆ ಅನ್ವಯಿಸುವುದಿಲ್ಲವೆಂದು ಕಾಣುತ್ತದೆ. ಇತ್ತೀಚೆಗಿನ 'ಸ್ಲಂ ಡಾಗ್ ಮಿಲಿಯನೇರ್' ಚಿತ್ರದ 'ಜೈ ಹೋ' ಗೀತೆಯನ್ನು ಬಳಸಿಕೊಂಡಿದ್ದಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳನ್ನು ಸಿಪಿಐ(ಎಂ) ಹಿಗ್ಗಾಮುಗ್ಗಾ ಜಾಡಿಸಿತ್ತು. ಆದರೆ ಅದೇ ಪಕ್ಷದ ಇಬ್ಬರು ಪ್ರಮುಖ ನಾಯಕರು ಕೊಳಗೇರಿಯ ಮತಗಳನ್ನು ಸೆಳೆಯಲು ಮತ್ತೆ ಅದೇ ಹಾಡಿಗೆ ಜೋತುಬಿದ್ದಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಆಪ್ತವಲಯದಲ್ಲಿರುವ, ಪಕ್ಷದ ಕೇಂದ್ರೀಯ ಸಮಿತಿಯ ಅಧ್ಯಕ್ಷ ಮಹಮದ್ ಸಲೀಂ ಹಾಗೂ ಸಂಸದೀಯ ಪಕ್ಷದ ಮಾಜಿ ಮುಖ್ಯ ಸಚೇತಕ ರೂಪಚಂದ್ ಪಾಲ್ ಅವರೇ ಆ ನಾಯಕದ್ವಯರು. ಪಕ್ಷ ಸಲೀಂ ಅವರ ನಡೆಯನ್ನು 'ಕಮ್ಯುನಿಷ್ಟ್ ವಿರೋಧಿ ಧೋರಣೆ' ಎಂದು ತೋರಿಕೆಗೆಂಬಂತೆ ಖಂಡಿಸಿದ್ದರೂ, ರೂಪ್‌ಚಂದ್ ಪಾಲ್ ಅವರ ಗೋಡೆ ಬರಹಗಳ ಬಗ್ಗೆ ಜಾಣ ಕುರುಡು ಪ್ರದರ್ಶಿಸಿದೆ. ಪಕ್ಷದ ಮೂಲಗಳ ಪ್ರಕಾರ ಈ ಘೋಷಣೆಯಿಂದ ಒಂದಷ್ಟು ಕೊಳಗೇರಿವಾಸಿಗಳ ಮತಗಳು ಬಂದರೂ ಬರಲಿ ಎಂಬ ಉದ್ದೇಶ ಆ ನಾಯಕರಿಗಿದ್ದಂತಿದೆ. ಇದಕ್ಕೆ ಪೂರಕವೆಂಬಂತೆ, ಸಲೀಂ ಸ್ಪರ್ಧಿಸುತ್ತಿರುವ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಮತದಾರರು ಕೊಳಗೇರಿ ನಿವಾಸಿಗಳು. ಜೊತೆಗೆ ಅವರಲ್ಲಿ ಬಹುಸಂಖ್ಯಾತರು ಉರ್ದು ಮಾತನಾಡುವ ಬಿಹಾರಿಗಳು ಹಾಗೂ ಮುಸಲ್ಮಾನರು. 'ಜೈ ಹೋ' ಹಾಡನ್ನು ತಮ್ಮ ಚುನಾವಣಾ ಘೋಷಣೆಯಾಗಿ ಬಳಸಿಕೊಂಡಿದೆ ಎಂಬ ಕಾರಣಕ್ಕೆ ಸಿಪಿಐ(ಎಂ)ನ ಮುಖವಾಣಿ 'ಪೀಪಲ್ಸ್ ಡೆಮಾಕ್ರಸಿ' ಪತ್ರಿಕೆ ಕಾಂಗ್ರೆಸ್ ಪಕ್ಷವನ್ನು ಉಗ್ರ ಮಾತುಗಳಲ್ಲಿ ಟೀಕಿಸಿತ್ತು.

ಆದರೆ, ಕೋಲ್ಕತ್ತಾದ ನಾಗರಿಕರಿಗೆ ಅಚ್ಚರಿ ಹುಟ್ಟಿಸುವಂತೆ ಸಲೀಂ ಭಾವಚಿತ್ರ ಜೊತೆಗೆ 'ಜೈ ಹೋ' ಘೋಷಣೆ ಹಾಗೂ ಪಕ್ಷದ ಚಿಹ್ನೆಯನ್ನು ಹೊಂದಿದ್ದ ಚುನಾವಣಾ ಬ್ಯಾನರ್‌ಗಳು ಕೊಲ್ಕತ್ತಾದ ತುಂಬಾ ರಾರಾಜಿಸತೊಡಗಿವೆ. ಅತ್ತ ಚುನಾವಣಾ ಉದ್ದೇಶಕ್ಕಾಗಿ 'ಜೈ ಹೋ' ಗೀತೆಯ ಹಕ್ಕು ಖರೀದಿಸಿದ್ದ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಬೆದರಿಕೆ ಹಾಕಿದೆ. ಪಕ್ಷದ ರಾಜ್ಯ ಕಾರ್ಯದರ್ಶಿ ಹಾಗೂ ಪಾಲಿಟ್ ಬ್ಯೂರೋ ಸದಸ್ಯ ಬಿಮನ್ ಬೋಸ್, "ಚುನಾವಣಾ ಫಲಕಗಳಲ್ಲಿ ಅಭ್ಯರ್ಥಿಗಳ ಭಾವಚಿತ್ರ ಹಾಗೂ ಚಿತ್ರ ಗೀತೆಗಳನ್ನು ಘೋಷಣೆಯಂತೆ ಬಳಸುವುದನ್ನು ಪಕ್ಷ ಒಪ್ಪುವುದಿಲ್ಲ" ಎನ್ನುವ ಮೂಲಕ ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ.

ಇಷ್ಟೆಲ್ಲಾ ವಿವಾದಗಳ ನಂತರವೂ ರೂಪ್‌ಚಂದ್ ಬೆಂಬಲಿಗರು 'ಜೈ ಹೋ' ಗೋಡೆ ಬರಹದಲ್ಲಿ ನಿರತರಾಗಿದ್ದಾರೆ. "ನಮ್ಮ ಕಾರ್ಯಕರ್ತರು ತಮಗೆ ತೋಚಿದಂತೆ ಮಾಡಿದ್ದಾರೆ. ವೈಯಕ್ತಿಕವಾಗಿ ನನಗೆ 'ಜೈ ಹೋ' ಘೋಷಣೆ ಕುರಿತು ಭಿನ್ನಾಭಿಪ್ರಾಯಗಳಿಲ್ಲ. ಆದರೆ ನಾನಾಗಿಯೇ ಅದ್ಯಾವುದನ್ನೂ ಮಾಡುವುದಿಲ್ಲ. ಪಕ್ಷ ಅದನ್ನು ಪುನರಾವರ್ತಿಸದಂತೆ ಸೂಚನೆ ನೀಡಿದೆ. ಇದೀಗ ನನ್ನ ಭಾವಚಿತ್ರವನ್ನೂ ಚುನಾವಣೆ ಸಂದರ್ಭದಲ್ಲಿ ಬಳಸದಂತೆ ಸೂಚಿಸಿದ್ದೇನೆ" ಎಂದು ಸಮಜಾಯಿಷಿ ನೀಡುತ್ತಾರೆ.

 

ಟಿಎಸ್‌ಐ

ಚಂದ್ರಶೇಖರ ಭಟ್ಟಾಚಾರ್ಜಿ

ಶ್ರೀನಗರ : ಸರೋವರ

ನ್ಯಾಯಾಲಯದ ಛಾಟಿ ಏಟು

ಎಸ್‌ಟಿಪಿ ಅಳವಡಿಸಿಕೊಳ್ಳದ ದೋಣಿಮನೆಗಳಿಗೆ ಎಚ್ಚರಿಕೆಯ ಕರೆಗಂಟೆ

ಇದು ಕಾಲದ ವಿರುದ್ಧದ ಸ್ಪರ್ಧೆ. ಶ್ರೀನಗರದ ಪ್ರಸಿದ್ಧ ದಾಲ್ ಸರೋವರದಲ್ಲಿರುವ ದೋಣಿಮನೆ (ಹೌಸ್‌ಬೋಟ್) ಮಾಲೀಕರಿಗೆ ಇದು ಬೇಸಿಗೆ ಪ್ರವಾಸೋದ್ಯಮವನ್ನು ಉಳಿಸಿಕೊಳ್ಳುವ ಜೊತೆಗೆ ತಮ್ಮ ಆದಾಯದ ಮೂಲಗಳು ಬತ್ತದಂತೆ ನೋಡಿಕೊಳ್ಳುವ ಸಮಯವಾದರೆ, ಸಣ್ಣ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ನಿರ್ಮಿಸಲು ತಾಂತ್ರಿಕ ಸಹಕಾರ ನೀಡುವ 'ಸರೋವರ ಹಾಗೂ ಜಲಮೂಲ

ಅಭಿವೃದ್ಧಿ ಪ್ರಾಧಿಕಾರ'ದ ಪಾಲಿಗೆ ಇದು ತಮ್ಮ ದಕ್ಷತೆಯನ್ನು ಮೆರೆಯುವ ಸಮಯ. ದೋಣಿಮನೆಗಳಿಂದ ಬಿಡಲಾಗುವ ತ್ಯಾಜ್ಯ ಸರೋವರವನ್ನೇ ಅಪೋಷನಕ್ಕೆ ತೆಗೆದುಕೊಳ್ಳುತ್ತಿರುವುದರಿಂದ ನ್ಯಾಯಾಲಯ ತ್ಯಾಜ್ಯ ಸಂಸ್ಕರಣಾ ಘಟಕ(ಎಸ್‌ಟಿಪಿ)ವನ್ನು ಹೊಂದಿಲ್ಲದ ದೋಣಿಮನೆಗಳು ಸರೋವರವನ್ನು ಪ್ರವೇಶಿಸದಂತೆ ನಿಷೇಧ ಹೇರಿ ತೀರ್ಪು ನೀಡಿದೆ. 'ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ' ಈ ದೋಣಿಮನೆಗಳು ಸರೋವರವನ್ನು ಕಲುಷಿತಗೊಳಿಸಿ ಅಕ್ಷರಶಃ ವಿನಾಶದಂಚಿಗೆ ತಳ್ಳಿವೆ ಎಂದು ನ್ಯಾಯಾಲಯಕ್ಕೆ ಜನವರಿಯಲ್ಲಿ ವರದಿ ಸಲ್ಲಿಸಿತ್ತು. ಇದರಿಂದ ಎಚ್ಚೆತ್ತ ನ್ಯಾಯಾಲಯ ಫೆಬ್ರುವರಿಯಲ್ಲಿ ಈ ಆದೇಶ ನೀಡಿತ್ತು. ಆ ನಂತರ ಪ್ರಾಧಿಕಾರ ಕೂಡ ತನ್ನ ಚಟುವಟಿಕೆಯನ್ನು ಚುರುಕುಗೊಳಿಸಿದೆ.

ದೋಣಿಮನೆ ಮಾಲೀಕರಿಗೆ ಘನ ಹಾಗೂ ದ್ರವತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಚಿಕ್ಕ 'ದ್ರವ ಸಂಸ್ಕರಣಾ ಘಟಕ'ಗಳನ್ನು ಪ್ರಾಧಿಕಾರದ ನಿಗದಿತ ಗಡುವು ಮೀರುವುದರೊಳಗೆ ನಿರ್ಮಿಸಿಕೊಳ್ಳುವಂತೆ ನ್ಯಾಯಾಲಯ ತಾಕೀತು ಮಾಡಿದೆ. ತಪ್ಪಿದರೆ ಅಂತಹ ದೋಣಿಮನೆಗಳ ಮುಟ್ಟುಗೋಲು ಪ್ರಕ್ರಿಯೆಗೆ ಚಾಲನೆ ನೀಡುವುದಾಗಿ ಎಚ್ಚರಿಕೆಯನ್ನೂ ನೀಡಿದೆ.

ಪ್ರಾಧಿಕಾರದ ಹಿರಿಯ ವಿಜ್ಞಾನಿ ಸಭಾ-ಉಲ್-ಸಲೀಂ, "ಈವರೆಗೆ ಕೇವಲ 2 ದೋಣಿಮನೆಗಳು ಮಾತ್ರ ತ್ಯಾಜ್ಯ ಸಂಸ್ಕರಣಾ ಘಟಕ (ಎಸ್‌ಟಿಪಿ)ಗಳನ್ನು ನಿರ್ಮಿಸಿಕೊಂಡಿದ್ದವು. ಈಗಾಗಲೇ ೪ ಕಂಪನಿಗಳು ತಮ್ಮ ಮಾದರಿಯನ್ನು ನಮಗೆ ನೀಡಿದ್ದು, ಅವುಗಳ ಗುಣಮಟ್ಟ ಪರೀಕ್ಷಿಸಲಾಗುತ್ತಿದೆ" ಎನ್ನುತ್ತಾರೆ ಅವರು. ಆದರೆ ಈ ಎಸ್‌ಟಿಪಿ ಅಳವಡಿಕೆಗೆ ನ್ಯಾಯಾಲಯ ಕೇವಲ ಒಂದು ವಾರ ಕಾಲಾವಕಾಶ ನೀಡಿದ್ದು ಪ್ರಾಧಿಕಾರ ಹಾಗೂ ದೋಣಿಮನೆ ಮಾಲಿಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಶ್ರೀನಗರ ಪ್ರವಾಸೋದ್ಯಮದ ಮುಖ್ಯ ಆಕರ್ಷಣೆಯಾಗಿರುವ ದಾಲ್ ಸರೋವರದ ಶುದ್ಧೀಕರಣ ಪ್ರಕ್ರಿಯೆ ಕೇವಲ ನ್ಯಾಯಾಲಯ ನೀಡಿದ ಸಮಯಾವಕಾಶ ಸಮಸ್ಯೆಯನ್ನು ಮಾತ್ರ ಎದುರಿಸುತ್ತಿಲ್ಲ. ಭೂ ಒತ್ತುವರಿ ಮಿತಿಮೀರುತ್ತಿರುವ ಸರೋವರದ ದಕ್ಷಿಣ ದಡಗಳಲ್ಲಿ ವಾಸಿಸುತ್ತಿರುವ ಲಕ್ಷಾಂತರ ಜನ ತಮ್ಮ ತ್ಯಾಜ್ಯ ವಸ್ತುಗಳನ್ನು ಈ ಸರೋವರದ ಒಡಲಿಗೇ ಸುರಿಯುತ್ತಿದ್ದಾರೆ. ಸಂಬಂಧಿಸಿದ ಇಲಾಖೆಗಳ ಅದಕ್ಷತೆ ಹಾಗೂ ಅಸಮರ್ಪಕ ಕಾನೂನುಗಳು ಈ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಿಸುವಂತೆ ಮಾಡಿವೆ.

ದೋಣಿಮನೆ ಮಾಲಿಕರ ಸಂಘದ ಅಧ್ಯಕ್ಷ ಅಜೀಮ್ ಟುಮನ್, "ಸರೋವರದ ಮಾಲಿನ್ಯದಲ್ಲಿ ದೋಣಿಮನೆಗಳ ಪಾತ್ರ ಕೇವಲ ಶೇ.3ರಷ್ಟು ಮಾತ್ರ ಎಂದು ರೂಖಿ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯಲ್ಲಿ ದೃಢಪಟ್ಟಿದೆ" ಎನ್ನುತ್ತಾರೆ.

ಸರೋವರದಲ್ಲಿ ಪ್ರಸಕ್ತ 1200ಕ್ಕೂ ಹೆಚ್ಚು ದೋಣಿಮನೆಗಳಿವೆ. ಬೇಸಿಗೆ ಹಂಗಾಮಿನಲ್ಲಿ ಶ್ರೀನಗರ ಪ್ರವಾಸಿಗರಿಂದ ಕಿಕ್ಕಿರಿದು ತುಂಬಿರುತ್ತದೆ. ಈ ಪ್ರವಾಸಿಗರಿಂದಲೇ ಕಾಶ್ಮೀರದ ಸಾವಿರಾರು ಕುಟುಂಬಗಳ ಮನೆಯ ಒಲೆ ಉರಿಯುತ್ತದೆ. "ಇದು ಕೇವಲ ದೋಣಿಮನೆಗಳಿಗೆ ಮಾತ್ರ ಲಾಭ ತಂದುಕೊಡುವುದಿಲ್ಲ. ಇಲ್ಲಿ ವಾಸ್ತವ್ಯ ಹೂಡುವ ಪ್ರವಾಸಿಗರು ಇಲ್ಲಿನ ಟ್ರಾವೆಲ್ ಏಜೆಂಟರು, ಪ್ರವಾಸಿ ಮಾರ್ಗದರ್ಶಿಗಳು, ಟ್ಯಾಕ್ಸಿ ಚಾಲಕರು ಹಾಗೂ ಕುದುರೆ ಮಾಲಿಕರು ಮುಂತಾದವರ ಸೇವೆ ಪಡೆಯುತ್ತಾರೆ. ಇಲ್ಲಿನ ಹೊಟೇಲ್‌ಗಳು, ರೆಸ್ಟೋರೆಂಟ್‌ಗಳು ಕೂಡ ಪ್ರವಾಸಿಗಳನ್ನು ಅವಲಂಬಿಸಿವೆ. ಬೇಸಿಗೆ ಕಾಲದಲ್ಲಿ ದೋಣಿಮನೆಗಳು ಸರೋವರದಿಂದ ಹೊರಗುಳಿದರೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತದೆ. ಇದು ಸಹಜವಾಗಿ ಸಾವಿರಾರು ಕುಟುಂಬಗಳ ಮೇಲೆ ಪರಿಣಾಮ ಬೀರಲಿದೆ" ಎಂದು ಟುಮನ್ ಆತಂಕ ವ್ಯಕ್ತಪಡಿಸುತ್ತಾರೆ.

ಟಿಎಸ್‌ಐ

ಜುಬೇರ್-ಎ-ದಾರ್

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .