ಇದು ನಮ್ಮ ವಿಶೇಷ ಸಂಪೂರ್ಣ  ಓದಿ
  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

 

ಇತರ ವಿಭಾಗಗಳು
 
ವಿಶೇಷ ವರದಿ

ಮುಸ್ಲಿಂ ರಾಜಕೀಯ ಕನಸು

ಪ್ರಸ್ತುತ ರಾಜಕೀಯ ವ್ಯವಸ್ಥೆ ತಮ್ಮ ಹಿತಾಸಕ್ತಿ ಕಾಯುವಲ್ಲಿ ವಿಫಲವಾಗಿರುವುದರಿಂದ ಮುಸ್ಲಿಂ ಸಮುದಾಯ ತಮ್ಮದೇ ಆದ ಪ್ರತ್ಯೇಕ ರಾಜಕೀಯ ಪಕ್ಷ ಕಟ್ಟುವುದೂ ಸೇರಿದಂತೆ ಸಾಧ್ಯವಿರುವ ಪರ್ಯಾಯ ರಾಜಕೀಯ ಮಾರ್ಗಗಳನ್ನು ಹುಡುಕುತ್ತಿದೆ ಎನ್ನುತ್ತಾರೆ ಶರದ್ ಗುಪ್ತಾ ಮತ್ತು ಮಲಿಕ್ ರಶೀದ್ ಫೈಸಲ್

 

ಕಳೆದ 60 ವರ್ಷಗಳಿಂದ ಮುಸ್ಲಿಂ ಸಮುದಾಯ ರಾಜಕೀಯವಾಗಿ ಸಾಕಷ್ಟು ಗೊಂದಲ ಮತ್ತು ಯಾವುದೇ ಪಕ್ಷದಿಂದ ನ್ಯಾಯಸಮ್ಮತ ಪ್ರಾತಿನಿಧ್ಯವಿಲ್ಲದೆ ಅನಾಥ ಪ್ರಜ್ಞೆ ಅನುಭವಿಸುತ್ತಿದೆ. ನಂಬಿದ ಪ್ರತಿಯೊಬ್ಬರೂ ಅವರನ್ನು ವಂಚಿಸಿದ್ದಾರೆ. ಇತ್ತೀಚಿನ ಕೆಲವು ಘಟನೆಗಳು ಭಾರತೀಯ ಮುಸ್ಲಿಮರಿಗೆ ಒಳ್ಳೇ ಪಾಠವನ್ನೇ ಕಲಿಸಿವೆ. ಬಾಟ್ಲಾ ಹೌಸ್ ಎನ್‌ಕೌಂಟರ್ ನಂತರ ಆರಂಭಿಸಿದ 'ಪೂರ್ವಗ್ರಹಪೀಡಿತ ತನಿಖೆ' ಅಥವಾ ಮಾಲೆಗಾಂವ್ ಸ್ಫೋಟದ ಕುರಿತ 'ಕಣ್ಣೊರೆಸುವ' ತನಿಖೆಯೇ ಆಗಿರಲಿ, ಒಟ್ಟಿನಲ್ಲಿ ರಾಜಕೀಯ ವರ್ಗದಿಂದ ಮೋಸ ಹೋದ ಭಾವನೆ ಮುಸ್ಲಿಮರಲ್ಲಿದೆ. 1989-91ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಬಾಬ್ರಿ ಮಸೀದಿ ರಕ್ಷಣೆಗಾಗಿ ನಡೆಸಿದ ಪ್ರಯತ್ನಗಳಿಗಾಗಿ 'ಮೌಲಾನಾ' ಎನ್ನುವ ಅಡ್ಡಹೆಸರು ಪಡೆದಿದ್ದ ಒಬಿಸಿ ಮುಖಂಡ ಮುಲಾಯಂ ಸಿಂಗ್ ಯಾದವ್ ಮುಂದೊಂದು ದಿನ 'ಬಾಬ್ರಿ ಮಸೀದಿ ಧ್ವಂಸ' ಮಾಡಿದ ವ್ಯಕ್ತಿಯ ಜೊತೆ ಸೇರಿಕೊಳ್ಳುತ್ತಾರೆ ಎಂದು ಯಾರು ತಾನೇ ಊಹಿಸಿದ್ದರು? ಅಥವಾ ಅಲ್ಪಸಂಖ್ಯಾತರ ಏಳಿಗೆಗೇ ಬದ್ಧರಾಗಿರುವಂತೆ ತೋರಿಕೆಯ ಪ್ರದರ್ಶನ ನೀಡುವ ಕಾಂಗ್ರೆಸ್, ಏಳು ಮಂದಿಯನ್ನು ಬಲಿ ತೆಗೆದುಕೊಂಡು 70 ಜನರು ಗಾಯಗೊಂಡ ಮಾಲೆಗಾಂವ್ ಸ್ಫೋಟ ಪ್ರಕರಣದ ತೇಪೆ ಹಚ್ಚುವ ತನಿಖೆಯ ಬಗ್ಗೆ ಕುರುಡಾಗಿದ್ದು ಸುಳ್ಳೇ? ಮತ್ತೊಬ್ಬ ಪ್ರಭಾವೀ ಯಾದವ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಸರ್ಕಾರದ ಭಾಗವಾಗಿದ್ದುಕೊಂಡೂ ಮುಸ್ಲಿಂ ಸಮುದಾಯ ನಿರ್ಲಕ್ಷ್ಯಕ್ಕೊಳಗಾಗಿರುವ ಬಗ್ಗೆ ದನಿ ಎತ್ತುತ್ತಿಲ್ಲ. ಹಾಗೇ, ದೆಹಲಿಯ ದಿವಂಗತ ಪೊಲೀಸ್ ಇನ್‌ಸ್ಪೆಕ್ಟರ್ ಎಂ.ಸಿ. ಶರ್ಮಾ (ಬಾಟ್ಲಾ ಹೌಸ್ ಎನ್‌ಕೌಂಟರ್) ಅವರ ಪತ್ನಿಯನ್ನು ಗೌರವಿಸಿ 'ಭಯೋತ್ಪಾದಕರನ್ನು ಸಂಹರಿಸಿದನ್ನು' ಹಾಡಿಹೊಗಳಿದ ಎರಡೇ ದಿನಗಳಲ್ಲಿ ಇಡೀ ಘಟನೆ 'ಅಮಾಯಕ ವಿದ್ಯಾರ್ಥಿಗಳ ನಕಲಿ ಎನ್‌ಕೌಂಟರ್' ಎಂದು ತನಿಖೆಗೆ ಒತ್ತಾಯಿಸಿದ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ಅವರನ್ನು ಮುಸ್ಲಿಂ ಸಮುದಾಯ ನಂಬಬಹುದೆ?

ಇವು, ಮುಸ್ಲಿಂ ಸಮುದಾಯ ಮುಖ್ಯವಾಹಿನಿ ರಾಜಕೀಯ ಪಕ್ಷಗಳಿಂದ ಅಂತರ ಕಾಯ್ದುಕೊಳ್ಳಲು ಕಾರಣವಾದ ನೂರಾರು ಪ್ರಕರಣಗಳಲ್ಲಿ ಕೆಲವು ಅಷ್ಟೆ. ಕಳೆದ ವಾರ ಮುಸ್ಲಿಂ ಸಮುದಾಯದ ಈ ಆಕ್ರೋಶ ರಾಜಧಾನಿಯ ಬೀದಿಗಳಲ್ಲಿ ಅನಾವರಣಗೊಂಡಿತ್ತು. ಸಂಪೂರ್ಣ ಮುಸ್ಲಿಂ ಸಮುದಾಯವನ್ನೇ ಭಯೋತ್ಪಾದಕರು ಅಥವಾ ಭಯೋತ್ಪಾದನೆ ಬೆಂಬಲಿಗರು ಎಂದು ಬ್ರಾಂಡ್ ಮಾಡುವುದರ ವಿರುದ್ಧ ನಡೆದ ಆ ರ್‍ಯಾಲಿಗೆ ಉತ್ತರಪ್ರದೇಶದ ಆಜಂಗಢದಿಂದ ರೈಲು ತುಂಬಾ ಮುಸ್ಲಿಮರು ಬಂದಿಳಿದಿದ್ದರು. ಬಾಟ್ಲಾ ಹೌಸ್ ಎನ್‌ಕೌಂಟರ್ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸುವಂತೆ ಒತ್ತಾಯಿಸಲು ಸ್ಥಳೀಯ ಮುಸ್ಲಿಂ ಧರ್ಮಗುರು ಮೌಲಾನಾ ಅಮೀರ್ ರಶ್ದಿ ಅವರು 'ಉಲೇಮ ಎಕ್ಸ್‌ಪ್ರೆಸ್' ಎನ್ನುವ ವಿಶೇಷ ರೈಲಿನಲ್ಲಿ ಮುಸ್ಲಿಂ ಸಮುದಾಯದ ಸಾವಿರಾರು ಮಂದಿಯನ್ನು ದೆಹಲಿಗೆ ಕರೆತಂದಿದ್ದರು.

ಎಲ್ಲಕ್ಕಿಂತ ಹೆಚ್ಚಾಗಿ ಮುಸ್ಲಿಂ ಸಮುದಾಯದವರು ವಿವಿಧ ರಾಜಕೀಯ ಪಕ್ಷಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತಮ್ಮದೇ ಸಮುದಾಯದ ಸದಸ್ಯರ ಮೇಲೂ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಈ ಮುಸ್ಲಿಂ ರಾಜಕಾರಣಿಗಳಲ್ಲಿ ಹಲವರು ಗಾಳಿ ಬಂದ ಕಡೆ ತೂರಿಕೊಳ್ಳುವವರೇ ಆಗಿದ್ದಾರೆ. ತಮ್ಮದೇ ಶಾಸಕರೊಬ್ಬರು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಒಬ್ಬನನ್ನು ಕೊಲೆ ಮಾಡಿದ ನಂತರ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅಲೆ ತಣ್ಣಗಾಗಿತ್ತು. ಆದರೆ ಕಲ್ಯಾಣ್ ಸಿಂಗ್ ಅವರು ಮುಲಾಯಂ ಸಿಂಗ್ ಜೊತೆ ಕೈಜೋಡಿಸಿದ್ದೇ ತಡ, ಮಾಯಾವತಿ ದಿಢೀರ್ ವಿರುದ್ಧ ದಿಕ್ಕಿನ ನಡೆ ಆರಂಭಿಸಿದರು! ಮುಸ್ಲಿಂ ಸಮುದಾಯದವರು ಸಮಾಜವಾದಿ ಪಕ್ಷದಿಂದ ದೂರ ಸರಿಯುತ್ತಿರುವುದನ್ನು ಗಮನಿಸಿದ ಮಾಯಾವತಿ ಮುಸ್ಲಿಮರಿಗೆ ಕನಿಷ್ಠ ಶೇ. 25ರಷ್ಟು ಟಿಕೆಟ್ ಹಂಚಿಕೆಯನ್ನು ಘೋಷಿಸಿಯೇ ಬಿಟ್ಟರು! ಪರಿಣಾಮ, ಸಮಾಜವಾದಿ ಪಕ್ಷದಿಂದ ನಿರ್ಗಮಿಸುವ ಮುಸ್ಲಿಮರ ಸಂಖ್ಯೆ ಏರತೊಡಗಿತು. ಶಫೀಕರ್ ರೆಹಮಾನ್ ಬರ್ಕ್ ಮತ್ತು ಅಫ್ಜಲ್ ಅನ್ಸಾರಿ ಮೊದಲಾದ ಪಕ್ಷದ ಹಾಲಿ ಸಂಸದರು ಮಾತ್ರವಲ್ಲ, ಬಿಎಸ್‌ಪಿಯಿಂದ ಟಿಕೆಟ್ ನಿರೀಕ್ಷೆಯಲ್ಲಿರುವ ಕಳೆದ 20 ವರ್ಷಗಳಿಂದ ಸಮಾಜವಾದಿ ಪಕ್ಷದ ಮುಸ್ಲಿಂ ಮುಖವಾಣಿಯಾಗಿದ್ದ ಮಹಮ್ಮದ್ ಆಜಂ ಖಾನ್ ಅವರೂ ಅಮರ್ ಸಿಂಗ್ ನಡವಳಿಕೆ ವಿರೋಧಿಸಿದ್ದಾರೆ. ಆದರೆ, "ಅವರಿಗೆ ಟಿಕೆಟ್ ಕೊಡುವುದಿಲ್ಲ ಎಂದು ನಾವು ಈ ಹಿಂದೆಯೇ ನಿರ್ಧರಿಸಿದ್ದೆವು ಮತ್ತು ಅವರಿಗೂ ಈ ವಿಚಾರ ತಿಳಿದಿತ್ತು. ಅವರು ಬಿಎಸ್‌ಪಿಗೆ ವಲಸೆ ಹೋಗಿದ್ದಲ್ಲಿ ಅಚ್ಚರಿ ಏನೂ ಇಲ್ಲ. ಖಾನ್ ಅವರು ಜೀವನ ಪರ್ಯಂತ 'ಮಹಮ್ಮದ್ ಅಲಿ ಜೋಹರ್' ವಿಶ್ವವಿದ್ಯಾನಿಲಯದ ಕುಲಪತಿಯಾಗಿರಲು ಬಯಸಿದ್ದರು" ಎಂದು ತಿರುಗೇಟು ನೀಡಿದ್ದಾರೆ ಅಮರ್ ಸಿಂಗ್. ಆದರೆ ಈ ಟ್ರೆಂಡ್ ಶೀಘ್ರವೇ ಬದಲಾಗಲಿದೆ ಎನ್ನುವುದು ಸಮಾಜವಾದಿ ಪಕ್ಷದ ನಾಯಕರ ನಂಬಿಕೆ. ಮುಸ್ಲಿಂ ಮತಗಳನ್ನು ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಉತ್ತರ ಪ್ರದೇಶದಲ್ಲಿ ಮುಸ್ಲಿಂ ಸಮುದಾಯದ ನಡುವೆ ಪ್ರಭಾವ ಬೀರಬಲ್ಲ ದರುಲ್ ಉಲೂಮ್ ಮತ್ತು ದೇವ್‌ಬಂದ್‌ಗೆ ಭೇಟಿ ನೀಡಿದ್ದಾರೆ.

ಈ ಭೇಟಿಯ ಹಿನ್ನೆಲೆಯನ್ನು ಅರಿಯದಿರುವಷ್ಟು ಮುಗ್ಧರಲ್ಲ ಮುಸ್ಲಿಂ ಸಮುದಾಯ. ಅರ್ಜುನ್ ಸಿಂಗ್, ಅಬ್ದುಲ್ ರೆಹಮಾನ್ ಅಂತುಲೆ ಮತ್ತು ಶರದ್ ಪವಾರ್ ಅವರಂತಹ ನಾಯಕರು ಹೇಳುವ ಪ್ರತಿಯೊಂದು ಹೇಳಿಕೆಗಳ ಹಿಂದಿನ ತರ್ಕವನ್ನು ವಿಶ್ಲೇಷಣೆ ಮಾಡಲು ಅವರು ಕಲಿತಿದ್ದಾರೆ. "ಎಲ್ಲಾ ಪಕ್ಷಗಳೂ ನಮ್ಮ ಕೈಬಿಟ್ಟಿವೆ. ನಮ್ಮನ್ನು ಮೂಲಭೂತ ಹಕ್ಕುಗಳಿಂದ ವಂಚಿತರನ್ನಾಗಿಸಿದ್ದಾರೆ" ಎನ್ನುತ್ತಾರೆ ಮುಂಬೈಯ 'ಶಾಂತಿ ಮತ್ತು ಸಾಮರಸ್ಯಕ್ಕಾಗಿ ಚಳವಳಿ' ಅಧ್ಯಕ್ಷ ಡಾ. ಅಜೀಮುದ್ದೀನ್. ಸಮುದಾಯದ ಈ ಪರಿತ್ಯಕ್ತ ಭಾವನೆ ವ್ಯಾಪಕವಾಗಿ ಪ್ರತ್ಯೇಕ ಮುಸ್ಲಿಂ ಪಕ್ಷ ಸ್ಥಾಪನೆಗೆ ಕಾರಣವಾಗುತ್ತಿದೆ.

ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ಅದರಲ್ಲಿ ಕೆಲವರು ಯಶಸ್ವಿಯಾಗಿದ್ದಾರೆ ಮತ್ತು ಕೆಲವರು ವಿಫಲರಾಗಿದ್ದಾರೆ. ಆಂಧ್ರಪ್ರದೇಶದ 'ಅಖಿಲ ಭಾರತ ಮಜ್ಲೀಸ್-ಇ-ಇತ್ತೆಹಾದುಲ್ ಮುಸ್ಲಿಮ್‌ಮೆನ್'(ಎಐಎಂಐಎಂ) ಮತ್ತು ಕೇರಳದ ಮುಸ್ಲಿಂ ಲೀಗ್ ಇತ್ತೀಚೆಗೆ ಸಕ್ರಿಯ ರಾಜಕೀಯದಲ್ಲಿ ತೊಡಗಿಸಿಕೊಂಡಿದೆ. ಎರಡೂ ಪಕ್ಷಗಳಿಂದ ಒಬ್ಬೊಬ್ಬ ಎಂಪಿಗಳು ಲೋಕಸಭೆ ಪ್ರತಿನಿಧಿಸುತ್ತಿದ್ದಾರೆ. ಯುಡಿಎಫ್ ಮತ್ತು ಎಲ್‌ಡಿಎಫ್ ಸರ್ಕಾರಗಳೆರಡರ ಜೊತೆಯಲ್ಲೂ ಮೈತ್ರಿ ಮಾಡಿಕೊಂಡಿದ್ದ ಮುಸ್ಲಿಂ ಲೀಗ್ ಮಾತ್ರ ಕೇರಳದಲ್ಲಿ ಸ್ವಲ್ಪ ಯಶಸ್ಸು ಸಾಧಿಸಿದೆ.

2 ವರ್ಷಗಳ ಹಿಂದೆ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಸುಗಂಧ ದ್ರವ್ಯಗಳ ಮಾರಾಟಗಾರ ಬದ್ರುದ್ದೀನ್ ಅಜ್ಮಲ್ ಮುಸ್ಲಿಮರ ಪ್ರಗತಿಯ ಧ್ಯೇಯವನ್ನಿರಿಸಿ ನಿರ್ದಿಷ್ಟ ಸಿದ್ಧಾಂತಗಳನ್ನು ಮುಂದಿಟ್ಟುಕೊಂಡು 'ಅಸ್ಸಾಂ ಯುನೈಟೆಡ್ ಡೆಮಾಕ್ರೆಟಿಕ್ ಫೋರಂ' ರಾಜಕೀಯ ಪಕ್ಷ ಹುಟ್ಟು ಹಾಕಿದ್ದರು. ಅವರ ಪಕ್ಷ ಹತ್ತು ಸ್ಥಾನ (ಇಬ್ಬರು ಹಿಂದೂ ಶಾಸಕರು)ಗಳನ್ನು ಗೆದ್ದದ್ದಲ್ಲದೆ, ಇತರ ಕೆಲವು ಕ್ಷೇತ್ರಗಳಲ್ಲಿ ಉತ್ತಮ ಪ್ರದರ್ಶನ ತೋರಿಸಿ ಯಶಸ್ಸಿನ ರುಚಿ ಕಂಡಿದೆ. ಒಟ್ಟಾರೆ ರಾಜ್ಯದಲ್ಲಿ ಮತದಾರರ ಓಲೈಕೆಯ ಕಾಂಗ್ರೆಸ್ ತಂತ್ರಗಳು ತಲೆಕೆಳಗಾಗಿದ್ದವು. ಈಗ ಅಜ್ಮಲ್ ತಮ್ಮ ಪಕ್ಷವನ್ನು ರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಲು ಬಯಸಿದ್ದಾರೆ. ಬಿಹಾರ್, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಉದ್ದೇಶಿಸಿದ್ದಾರೆ. ಕಾಂಗ್ರೆಸ್, ರಾಷ್ಟ್ರೀಯ ಜನತಾ ದಳ, ಸಮಾಜವಾದಿ ಪಕ್ಷ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷಗಳಿಗೆ ಎಚ್ಚರಿಕೆಯ ಗಂಟೆ ಇದು. ಅಜ್ಮಲ್ ತಮ್ಮ ಪಕ್ಷದ ಧ್ಯೇಯೋದ್ದೇಶಗಳ ಬಗ್ಗೆ ಸ್ಪಷ್ಟತೆ ಹೊಂದಿದ್ದಾರೆ.

ಎಐಯುಡಿಎಫ್ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಮೌಲಾನಾ ಖಾಸಿ, "ಕೋಮು ತಳಹದಿಯ ಮೇಲೆ ಧ್ರುವೀಕರಣವಾಗಬಾರದು ಎನ್ನುವ ಕಾರಣದಿಂದ ನಾವು ಈವರೆಗೆ ಪ್ರತ್ಯೇಕ ಪಕ್ಷ ಕಟ್ಟಿರಲಿಲ್ಲ. ಹಾಗೇನಾದರೂ ಮಾಡಿದ್ದರೆ ಬಿಜೆಪಿಗೇ ಲಾಭವಾಗುತ್ತಿತ್ತು. ಆದರೆ ಮಾಯಾವತಿ ಮತ್ತು ರಾಂ ವಿಲಾಸ್ ಪಾಸ್ವಾನ್ ಅವರು ದಲಿತರ ಏಳಿಗೆಗಾಗಿ ಕೆಲಸ ಮಾಡಬಹುದೆಂದಾದಲ್ಲಿ ಹಾಗೂ ಮುಲಾಯಂ ಸಿಂಗ್ ಮತ್ತು ಲಾಲೂ ಪ್ರಸಾದ್ ಯಾದವ್ ತಮ್ಮ- ತಮ್ಮ ಕುಟುಂಬವರ್ಗದವರಿಗೆ ನಿರ್ಭೀತಿಯಿಂದ ನೆರವು ನೀಡುತ್ತಿರುವಾಗ ನಾವೂ ನಮ್ಮ ಸಮುದಾಯಕ್ಕಾಗಿ ಯಾಕೆ ಕೆಲಸ ಮಾಡಬಾರದು?" ಎಂದು ಪ್ರಶ್ನಿಸುತ್ತಾರೆ.

ದೇಶದ ವಿವಿಧೆಡೆ ಪ್ರತ್ಯೇಕ ಮುಸ್ಲಿಂ ಪಕ್ಷಗಳನ್ನು ರಚಿಸುವ ಕೆಲವು ಪ್ರಯತ್ನಗಳು ನಡೆದಿವೆ. 'ಮುಸ್ಲಿಂ ಇತ್ತೆಹಾದ್ ಯುನೈಟೆಡ್ ಫ್ರಂಟ್' ಕಳೆದ ವರ್ಷ ರಚನೆಯಾಗಿದ್ದು, ಔರಂಗಾಬಾದ್ ಪುರಸಭೆ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳನ್ನು ಪಡೆದುಕೊಂಡಿದೆ. 2006ರಲ್ಲಿ ನಡೆದ ಮಾಲೆಗಾಂವ್ ಸ್ಫೋಟದ ಒಂಬತ್ತು ತಿಂಗಳ ಬಳಿಕ ನಡೆದ 'ಮಾಲೆಗಾಂವ್ ಪುರಸಭೆ' ಚುನಾವಣೆಯಲ್ಲಿ ಭಾರತೀಯ ಮುಸ್ಲಿಂ ಕಾಂಗ್ರೆಸ್ ಪಕ್ಷ(ಐಎಂಸಿಪಿ) 71 ಸ್ಥಾನಗಳ ಪೈಕಿ 27 ಸ್ಥಾನಗಳನ್ನು ಗೆದ್ದಿತ್ತು. ಸೆಪ್ಟೆಂಬರ್ 2006 ಸ್ಫೋಟದ ನಂತರ ಶಾಂತಿ ಕಾಪಾಡಲು ಬಹಳಷ್ಟು ಶ್ರಮ ವಹಿಸಿದ್ದ ಮುಫ್ತಿ ಇಸ್ಮಾಯಿಲ್ ನೇತೃತ್ವದ ಐಎಂಸಿಪಿ ಅಭಿವೃದ್ಧಿ ಆಧಾರಿತ ಕಾರ್ಯೋದ್ದೇಶಗಳನ್ನು ಮುಂದಿಟ್ಟು ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಆದರೆ ಇಂತಹುದೇ ಇತರ ಪ್ರಯತ್ನಗಳು ಯಶಸ್ವಿಯಾಗಿಲ್ಲ. ಅಸ್ಸಾಂನಲ್ಲಿ ಅಜ್ಮಲ್ ಅವರ ಗೆಲುವನ್ನು ಪುನರಾವರ್ತಿಸಲು ಪ್ರಯತ್ನಿಸಿದ ಶಿಯಾ ನಾಯಕ ಕಾಲ್ಬೆ ಜವಾದ್ ಅವರ ಪ್ರಯತ್ನ ಕೈಗೂಡಲಿಲ್ಲ. ದೆಹಲಿ ಜಮಾ ಮಸೀದಿಯ ಇಮಾಮ್ ಮೌಲಾನಾ ಅಹಮದ್ ಬುಖಾರಿ ಅವರ ಒತ್ತಾಸೆಯಿದ್ದರೂ ಹೊಸ ರಾಜಕೀಯ ಪಕ್ಷ ರಚಿಸುವ ಅವರ ಪ್ರಯತ್ನ ಯಶ ಸಾಧಿಸಲಿಲ್ಲ. 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ನಿಂತ ಬುಖಾರಿ ತಮ್ಮ ವರ್ಚಸ್ಸನ್ನು ಕಳೆದುಕೊಂಡರು. "ಕೆಲವರು ಸಮುದಾಯದ ಕಲ್ಯಾಣವನ್ನೇ ಮರೆತು ತಮ್ಮ ಪಟ್ಟಭದ್ರ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳಲು ಮುಂದಾಗುತ್ತಾರೆ. ಅಂತಹ ಕೃತ್ಯಗಳಿಗೆ ಕಾರಣವೇನು ಎಂಬುದು ನಮಗೆ ಗೊತ್ತು. ಆದರೆ ಸಮುದಾಯ ಅಂತಹ ಗಿಮಿಕ್‌ಗಳಿಂದ ದೂರವಿರಬೇಕು" ಎನ್ನುತ್ತಾರೆ ಮಹಾರಾಷ್ಟ್ರದ 'ಖಾರಿ-ಇ-ಉಮ್ಮತ್ ಟ್ರಸ್ಟ್' ಮುಖ್ಯಸ್ಥ ಹರೂನ್ ಮೊಜವಲ್ಲಾ.

ಈ ಹಠಾತ್ ಜಾಗೃತಿಗೆ ಕಾರಣವೇನು? 1992ರಲ್ಲಿ ಬಾಬ್ರಿ ಮಸೀದಿ ಧ್ವಂಸವಾದಂದಿನಿಂದ ಮುಸ್ಲಿಂ ನಾಯಕರು ತಮ್ಮದೇ ಆದ ಪಕ್ಷದ ಅಗತ್ಯವನ್ನು ಮನಗಂಡಿದ್ದರು. ಬಾಟ್ಲಾ ಹೌಸ್ ಹತ್ಯೆಗಳು ಆ ಕನಸನ್ನು ಸಾಕಾರಗೊಳಿಸಲು ಮತ್ತಷ್ಟು ಪ್ರೇರಣೆಯಾದವು. ಆದರೆ ಏಕ ರಾಷ್ಟ್ರೀಯ ಪಕ್ಷ ರಚನೆಯತ್ತ ಮುಸ್ಲಿಂ ಸಮುದಾಯ ಒಗ್ಗಟ್ಟಿನಿಂದ ಮುಂದಾಗದೇ ಇರಲು ಕಾರಣವೇನು? "ಮೊದಲಿಗೆ ನಾವು ರಾಜಕೀಯವಾಗಿ ನಮ್ಮ ಪ್ರಭಾವವನ್ನು ಹೆಚ್ಚಿಸಿಕೊಂಡು ಬಲ ಪಡೆಯಬೇಕಿದೆ. ಅದನ್ನು ಸಾಧಿಸಿದ ಮೇಲೆ ನಾವು ಮುಸ್ಲಿಂ ಸಮುದಾಯದ ಪ್ರತ್ಯೇಕ ರಾಷ್ಟ್ರೀಯ ಪರ್ಯಾಯ ಪಕ್ಷದ ಬಗ್ಗೆ ಯೋಚಿಸುತ್ತೇವೆ" ಎನ್ನುತ್ತಾರೆ ಟಿಎಸ್‌ಐ ಜೊತೆ ಮಾತನಾಡಿದ 'ಪೀಸ್ ಪಾರ್ಟಿ ಆಫ್ ಇಂಡಿಯಾ' ಅಧ್ಯಕ್ಷ ಡಾ. ಆಯುಬ್ ಅನ್ಸಾರಿ.

ಮುಸ್ಲಿಂ ಸಮುದಾಯ ರಾಜಕೀಯವಾಗಿ ಸ್ಪಷ್ಟ ಚಿಂತನೆಯೊಂದನ್ನು ಮುಂದಿಟ್ಟುಕೊಂಡಿದೆ. ತಾವು ಸ್ವತಃ ಅಧಿಕಾರದ ರುಚಿ ಪಡೆಯಬಹುದೆಂದಾದಲ್ಲಿ ಮತ್ತೊಬ್ಬರಿಗೆ ಅಧಿಕಾರದಲ್ಲಿರುವ ಅವಕಾಶ ಏಕೆ ನೀಡಬೇಕು? ಆದರೆ ಈ ನಿಲುವು ಸಮುದಾಯದ ನಾಯಕರೊಳಗೆ ಸ್ವಪ್ರತಿಷ್ಠೆ ಮತ್ತು ಹಿತಾಸಕ್ತಿಗಳ ಘರ್ಷಣೆಗೆ ಕಾರಣವಾಗಬಹುದೆ ಅಥವಾ ಕೋಮು ಧ್ರುವೀಕರಣಕ್ಕೆ ಕಾರಣವಾಗಬಹುದೆ? ಕಾದು ನೋಡಬೇಕಿದೆ.  

ಟಿಎಸ್‌ಐ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .