ಇದು ನಮ್ಮ ವಿಶೇಷ ಸಂಪೂರ್ಣ  ಓದಿ
  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

 

ಇತರ ವಿಭಾಗಗಳು
 
ಲಂಗರು
ಗೂಡಿನ ಜಾಡು ಮರೆಯದ ಪಾರಿವಾಳ
 

ವಿದೇಶಗಳಲ್ಲಿ ಸಿಗುವಷ್ಟು ಪ್ರೋತ್ಸಾಹ ಭಾರತದಲ್ಲೂ ಸಿಕ್ಕರೆ, 'ಪಿಜನ್ ರೇಸಿಂಗ್'ಗೆ ವೃತ್ತಿಪರತೆ ಲಭ್ಯವಾಗಬಹುದು ಎನ್ನುತ್ತಾರೆ ಚಿತ್ರಾ ಕರ್ಕೇರಾ

ಅಂದು ಸಂಜೆ ಬೆಂಗಳೂರಿನ ಬಾಣಸವಾಡಿಯ ಆ ಗಲ್ಲಿಯೊಂದರ ಕ್ರೀಡಾಂಗಣದಲ್ಲಿ ಎಂದಿನಂತೆ ಮಕ್ಕಳು ಆಡುತ್ತಿರಲಿಲ್ಲ. ಬದಲಿಗೆ ಮೂರ್‍ನಾಲ್ಕು ಲಂಟಾನಾ ಬುಟ್ಟಿಗಳಿದ್ದವು. ಅವುಗಳಿಂದ ಪಾರಿವಾಳದ ಕಲರವ ಕೇಳಿ ಬರುತ್ತಿತ್ತು. ಅಲ್ಲಿದ್ದ ಜನ ಆ ಬುಟ್ಟಿಯೊಳಗಿಂದ ಒಂದೊಂದೇ ಪಾರಿವಾಳವನ್ನು ತೆಗೆದು, ಪುಸ್ತಕದಲ್ಲಿ ಅದರ 'ಹೆಸರ'ನ್ನು ನೋಂದಣಿ ಮಾಡಿ, ಅವುಗಳ ಪಾದಕ್ಕೆ ಒಂದು ಬಗೆಯ ರಿಂಗ್ ತೊಡಿಸಿ ಬೇರೊಂದು ಬುಟ್ಟಿಯೊಳಗಿಡುತ್ತಿದ್ದರು. ಇದೇನು ಪಾರಿವಾಳಕ್ಕೆ ಗೆಜ್ಜೆ ಕಟ್ಟುತ್ತಿದ್ದಾರೆಯೇ?!

ಇಲ್ಲಾ, ಪಾರಿವಾಳದ ವಿಶಿಷ್ಟ ಹಾರಾಟ ಸ್ಪರ್ಧೆ ಆರಂಭವಾಗುವುದೇ ಹೀಗೆ. ಅದು 'ಕರ್ನಾಟಕ ರೇಸಿಂಗ್ ಪಿಜನ್ ಕ್ಲಬ್' ಆಯೋಜಿಸಿದ್ದ ಪಾರಿವಾಳ ಹಾರಾಟ ಸ್ಪರ್ಧೆ. ರಿಂಗ್ ತೊಡಿಸಿಕೊಂಡ ಪಾರಿವಾಳಗಳು ಬುಟ್ಟಿ ಸೇರಿ, ಬೆಂಗಳೂರು ರೈಲು ನಿಲ್ದಾಣಕ್ಕೆ ಬರುತ್ತವೆ. ಅಲ್ಲಿಂದ ರೈಲು ಹತ್ತಿ ಸೀದಾ ಮಧ್ಯಪ್ರದೇಶದ ನಾಂದೇಡ್‌ಗೆ ತೆರಳುತ್ತವೆ. ಅಲ್ಲಿ ಒಂದು ದಿನದ ವಿಶ್ರಾಂತಿಯ ನಂತರ ಈ ಪಾರಿವಾಳಗಳನ್ನು ಬುಟ್ಟಿಯಿಂದ ಹಾರಿ ಬಿಡಲಾಗುತ್ತದೆ. ಯಾರ ಪಾರಿವಾಳ ಬೇಗನೇ ಮನೆ ತಲುಪುತ್ತದೋ ಅವರೇ ವಿಜಯಿಗಳು. ಎಲ್ಲೇ ಹೋದರೂ ತಮ್ಮ ನಿವಾಸಕ್ಕೆ ಹಾರಿ ಬರುವ ಪಾರಿವಾಳಗಳ ಮೂಲಪ್ರವೃತ್ತಿಯ ಆಧಾರದ ಮೇಲೆ ವಿನ್ಯಾಸಗೊಂಡ ವಿಶಿಷ್ಟ ಸ್ಪರ್ಧೆ ಇದು. ಸಾಕಿದ ಪಾರಿವಾಳಗಳಿಗೆ ತವರುಮನೆಯ ನೆನಪು ಎಷ್ಟಿದೆ ಎಂಬ ಪರೀಕ್ಷೆ ಸ್ಪರ್ಧೆಯ ಮುಖೇನ ನಡೆದುಬಿಡುತ್ತದೆ. ಬೆಂಗಳೂರಿನಲ್ಲಿ ಪ್ರತಿ ವರ್ಷ ಇಂತಹ 'ಪಾರಿವಾಳ ಹಾರಾಟ ಸ್ಪರ್ಧೆ' ನಡೆಯುತ್ತವೆ.

'ಕರ್ನಾಟಕ ರೇಸಿಂಗ್ ಪಾರಿವಾಳ ಕ್ಲಬ್' (ಕೆಆರ್‌ಪಿಸಿ)ನ ಸದಸ್ಯರ ಪ್ರತಿ ಮನೆ-ಮನೆಯಲ್ಲೂ ಬಣ್ಣ-ಬಣ್ಣದ ಪಾರಿವಾಳಗಳದ್ದೇ ಕಾರುಬಾರು. ದಿನವಿಡೀ ಅವುಗಳಿಗೆ ತರಬೇತಿ. 12ರಿಂದ 13 ಗಂಟೆಗಳ ತನಕ ವೇಗವಾಗಿ ಹಾರುವ ತರಬೇತಿ! ಈ ಪಾರಿವಾಳ ಸ್ಪರ್ಧೆ ಅಷ್ಟು ಪ್ರಚಲಿತವಾಗಿಲ್ಲವಾದರೂ ವಾಸ್ತವವಾಗಿ ಬೆಂಗಳೂರಿನಲ್ಲಿ ಇದಕ್ಕೆ 80 ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. 1920ರಲ್ಲೇ 'ಬೆಂಗಳೂರು ಹೋಮಿಂಗ್ ಸೊಸೈಟಿ' ಎಂಬ ಹೆಸರಿನಲ್ಲಿ ಬ್ರಿಟಿಷರು ಇಂತಹ ಸ್ಪರ್ಧೆ ನಡೆಸುತ್ತಿದ್ದರು. ನಂತರ ಸ್ವಾತಂತ್ರೋತ್ತರದಲ್ಲಿ ಪಾರಿವಾಳ ಹಾರಾಟ ಸ್ಪರ್ಧೆ ತೆರೆಮರೆಗೆ ಸರಿಯಿತು. 1975ರ ಬಳಿಕ ಪಕ್ಷಿಪ್ರಿಯರಿಂದಾಗಿ ಪಾರಿವಾಳ ಸ್ಪರ್ಧೆಗೆ ಮತ್ತೆ ಕಳೆ ಬಂತು. 'ಬೆಂಗಳೂರು ಹೋಮಿಂಗ್ ಸೊಸೈಟಿ'ಯನ್ನೇ 'ಕರ್ನಾಟಕ ರೇಸಿಂಗ್ ಪಾರಿವಾಳ ಕ್ಲಬ್' ಎಂಬ ಹೆಸರಿನಲ್ಲಿ ಮತ್ತೆ ಚಾಲನೆ ನೀಡಲಾಯಿತು. ಈ ಸ್ಪರ್ಧೆಗೆ ಮರುಜೀವ ನೀಡಿದ ಶ್ರೇಯಸ್ಸು ಆಂಗ್ಲೋ-ಇಂಡಿಯನ್ ಲೆಫ್ಟಿನೆಂಟ್ ಕರ್ನಲ್ ಎಫ್.ಸಿ. ಸ್ಮಿತ್ ಅವರಿಗೆ ಸಲ್ಲಬೇಕು. ಪಕ್ಷಿಗಳ ಕುರಿತು ಕುತೂಹಲ ಹಾಗೂ ಪ್ರೀತಿ ಬೆಳೆಸಿಕೊಂಡಿದ್ದ ಸ್ಮಿತ್ 1980ರಿಂದ 25 ವರ್ಷಗಳ ತನಕ ಕೆಆರ್‌ಪಿಸಿ ಅಧ್ಯಕ್ಷರಾಗಿ ಪಾರಿವಾಳ ಸಾಕಣೆಗೆ ಹೊಸ ರೂಪ ನೀಡಿದ್ದರು. ಇಂದು ಕೆಆರ್‌ಪಿಸಿಯಲ್ಲಿ 16 ಮಂದಿ ಸದಸ್ಯರಿದ್ದಾರೆ. ಪ್ರತಿಯೊಬ್ಬರ ಮನೆಯಲ್ಲೂ 100ಕ್ಕೂ ಅಧಿಕ ಪಾರಿವಾಳಗಳಿವೆ. ಈ ಸದಸ್ಯರು ಪಾರಿವಾಳಗಳನ್ನು ಅಕ್ಕರೆಯಿಂದ ಪೋಷಿಸುತ್ತಾ ವಾರ್ಷಿಕ 'ಹಾರಾಟ ಸ್ಪರ್ಧೆ'ಗೆ ಅಣಿಗೊಳಿಸುತ್ತಾರೆ.

ಸಂಘಟಕರ ಪ್ರಕಾರ ಜನವರಿಯಿಂದ ಮಾರ್ಚ್‌ವರೆಗಿನ ಸಮಯ ಈ ಸ್ಪರ್ಧೆಗೆ ಸೂಕ್ತ. ಹಾಗಾಗಿ ವಾರ್ಷಿಕ ಸ್ಪರ್ಧೆಗಳು ಜನವರಿಯಿಂದಲೇ ಆರಂಭವಾಗಿ ಮಾರ್ಚ್‌ವರೆಗೂ ನಡೆಯುತ್ತವೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಪಾರಿವಾಳಗಳಿಗೆ 12-13 ಗಂಟೆಗಳ ಕಾಲ ನಿರಂತರವಾಗಿ ಆಕಾಶದಲ್ಲಿ ಹಾರುವ ತರಬೇತಿ ನೀಡಲಾಗುತ್ತದೆ. ಹಾರುವ ಮಧ್ಯೆ ಅವು ಎಲ್ಲೂ ಕುಳಿತುಕೊಳ್ಳುವಂತಿಲ್ಲ! ಅಷ್ಟೇ ಅಲ್ಲ, ಆಕಾಶದಲ್ಲಿ ಗರಿಷ್ಠ ಸಮಯ ಕಳೆದು ತನ್ನ ಒಡೆಯನ ಮನೆ ಸೇರಬೇಕು. ಒಂದು ವೇಳೆ ಪಾರಿವಾಳ ಸ್ವಲ್ಪ ಸಮಯದಲ್ಲೇ ದಣಿದು ಕುಳಿತರೆ... ಆ ಪಾರಿವಾಳ ಸ್ಪರ್ಧೆಗೆ ಅನರ್ಹ ಎಂದು ಪರಿಗಣಿಸಲಾಗುತ್ತದೆ. ಈ 'ಪೂರ್ವಭಾವಿ ಪರೀಕ್ಷೆ'ಯಲ್ಲಿ ತೇರ್ಗಡೆಯಾಗುವ ಪಾರಿವಾಳಗಳಿಗೆ ಮಾತ್ರ ಅಂತಿಮ ಹಂತದ ಸ್ಪರ್ಧೆಗೆ ಅವಕಾಶ!

ಈ ಮುನ್ನ ಕರ್ನಾಟಕದೊಳಗೇ ವಿವಿಧೆಡೆ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿತ್ತು. ಆದರೆ, ಇದೀಗ ಗುಜರಾತ್, ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶಗಳಿಂದಲೂ ಸ್ಪರ್ಧೆ ಏರ್ಪಡಿಸಲಾಗುತ್ತಿದೆ. ಕಳೆದ ವರ್ಷ ರಾಯಚೂರು, ಗುಲ್ಬರ್ಗಾ, ಆಂಧ್ರಪ್ರದೇಶದ ಅನಂತಪುರಂ, ಗುಂತಕಲ್ ಮತ್ತು ಮಹಾರಾಷ್ಟ್ರದ ವಾರ್ಧಾ ಹಾಗೂ ನಾಂದೇಡ್‌ಗಳಿಂದಲೂ ಆಯೋಜಿಸಲಾಗಿತ್ತು. ಅಲ್ಲ್ಲಿ 1000ಕ್ಕೂ ಹೆಚ್ಚು ಪಾರಿವಾಳಗಳು ಭಾಗವಹಿಸಿದ್ದವು. ಫೆಬ್ರುವರಿ ತಿಂಗಳಲ್ಲಿ ವಾರ್ಧಾ ಸ್ಪರ್ಧೆ ಹಾಗೂ ಮಾರ್ಚ್ ಕೊನೆಯಲ್ಲಿ ಈ ಬಾರಿಯ ಅತೀ ಹೆಚ್ಚಿನ ವೈಮಾನಿಕ ದೂರದ 'ಭೂಪಾಲ್ ರೇಸ್' ನಡೆಯಲಿದೆ. ಇದನ್ನು ತಮಿಳುನಾಡಿನ 'ಸೌತ್ ಇಂಡಿಯನ್ ಫೆಡರೇಷನ್ ಆಫ್ ರೇಸಿಂಗ್ ಪಿಜನ್ ಕ್ಲಬ್' ಆಯೋಜಿಸುತ್ತಿದ್ದು, ಕರ್ನಾಟಕ, ತಮಿಳುನಾಡಿನ ಪಾರಿವಾಳಗಳು ಜಂಟಿಯಾಗಿ ಭೂಪಾಲ್‌ನಿಂದ ಹಾರಾಟ ಆರಂಭಿಸಲಿವೆ. "ಭೂಪಾಲ್‌ನಿಂದ ಚೆನ್ನೈ ಮತ್ತು ಬೆಂಗಳೂರಿಗೆ ಇರುವ ವೈಮಾನಿಕ ಅಂತರ (ಏರ್ ಡಿಸ್ಟೆನ್ಸ್) ಹೆಚ್ಚು-ಕಡಿಮೆ ಸಮಾನ: ಅಂದರೆ 1020 ಕಿ.ಮೀ. ಹಾಗಾಗಿ ತಮಿಳುನಾಡಿನೊಂದಿಗೆ ನಾವು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೇವೆ" ಎನ್ನುತ್ತಾರೆ ಕೆಆರ್‌ಪಿಸಿ ಕಾರ್ಯದರ್ಶಿ ಚೆಲ್ಲಯ್ಯ.

ಕನಿಷ್ಠ 6 ತಿಂಗಳಿಗಿಂತ ಹೆಚ್ಚಿನ ವಯಸ್ಸಿನ ಪಾರಿವಾಳಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಆದರೆ ಸಾಮಾನ್ಯವಾಗಿ ಒಂದು ಪಾರಿವಾಳದ ಸರಾಸರಿ ಸ್ಪರ್ಧಾ ವಯಸ್ಸು ಗರಿಷ್ಠ 3 ವರ್ಷಗಳು ಮಾತ್ರ. ಸ್ಪರ್ಧೆಯಲ್ಲಿ 3 ವಿಭಾಗಗಳಿವೆ. 'ಯಂಗ್ ಬರ್ಡ್', 'ಓಪನ್ ಬರ್ಡ್' ಮತ್ತು 'ಡರ್ಬಿ ಬರ್ಡ್'. ಯಂಗ್ ಬರ್ಡ್ ಮತ್ತು ಓಪನ್ ಬರ್ಡ್ ವಿಭಾಗಗಳಲ್ಲಿ ಸದಸ್ಯರೊಬ್ಬರ ಗರಿಷ್ಠ 25 ಪಾರಿವಾಳಗಳು ಭಾಗವಹಿಸಬಹುದು. ಡರ್ಬಿಯಲ್ಲಿ ಪ್ರತಿ ಸದಸ್ಯರ ಕೇವಲ ಒಂದು ಪಾರಿವಾಳಕ್ಕೆ ಮಾತ್ರ ಅವಕಾಶ.

ಯಂಗ್ ಬರ್ಡ್ ವಿಭಾಗದಲ್ಲಿ ಮೊಟ್ಟಮೊದಲ ಬಾರಿಗೆ ಸ್ಪರ್ಧಿಸುವ ಪಾರಿವಾಳಗಳಿಗಷ್ಟೇ ಅವಕಾಶ. ಓಪನ್ ಬರ್ಡ್ ವಿಭಾಗದಲ್ಲಿ ಈ ಹಿಂದೆ ಭಾಗವಹಿಸಿದ ಹಾಗೂ ಜಯಗಳಿಸಿದ ಪಾರಿವಾಳಗಳೂ ಭಾಗವಹಿಸಬಹುದು. ಇನ್ನು ವಿಜೇತರನ್ನು ಗುರುತಿಸುವುದು ಹೇಗೆ? ಪ್ರತಿ ಸದಸ್ಯರ ಪಾರಿವಾಳದ ಕಾಲಿಗೂ 'ರಿಂಗ್' ಕಟ್ಟಲಾಗಿರುತ್ತದೆ ಅದರಲ್ಲಿ ಲಿಂಗ, ಹೆಸರು, ವಯಸ್ಸು ಮತ್ತಿತರ ವಿವರಗಳಿರುತ್ತವೆ. ಆ ಪಾರಿವಾಳಗಳು ತಮ್ಮ ಒಡೆಯನ ಮನೆ ಸೇರುವಾಗಲೂ ಅವುಗಳನ್ನು ಗುರುತಿಸಲು ಅಲ್ಲೊಬ್ಬ 'ರೆಫ್ರಿ' ಇರುತ್ತಾರೆ. ಅವುಗಳು ಬಂದು ತಲುಪಿದ ಸಮಯವನ್ನು ಗುರುತಿಸಿಕೊಂಡ ರೆಫ್ರಿ, ಪಾರಿವಾಳವನ್ನು ಹಾರಿಬಿಟ್ಟ ಸ್ಥಳ, ತಲುಪಬೇಕಾದ ಗುರಿಯ ನಡುವಿನ ಅಂತರ, ಪಾರಿವಾಳ ಗುರಿ ತಲುಪಲು ತೆಗೆದುಕೊಳ್ಳುವ ಸಮಯ ಹಾಗೂ ಕ್ರಮಿಸಿದ ವೇಗವನ್ನು ಜಿಪಿಎಸ್ ತಂತ್ರಜ್ಞಾನ ಬಳಸಿಕೊಂಡು ಅಳೆಯುತ್ತಾರೆ. ಎಷ್ಟೋ ದೂರದಿಂದ ಹಾರಿಬಿಟ್ಟರೂ, ಒಡೆಯರನ್ನು ವಂಚಿಸುವುದಾಗಲೀ, ಹಾದಿ ತಪ್ಪುವುದಾಗಲೀ ಈ ಪಾರಿವಾಳಗಳ ಜಾಯಮಾನವಲ್ಲ!

"ಭೂ ಅಯಸ್ಕಾಂತೀಯ ಶಕ್ತಿಯನ್ನು ಅನುಸರಿಸಿ ಅವು ಮರಳಿ ಗೂಡಿಗೆ ತಲುಪುತ್ತವೆ. ಸೂರ್ಯನ ಚಲನೆಯನ್ನು ಗುರುತಿಸಿಯೂ ತಮ್ಮ ಮೂಲ ಸ್ಥಳಕ್ಕೆ ಹಿಂದಿರುಗುತ್ತವೆ" ಎನ್ನುತ್ತಾರೆ ಪಾರಿವಾಳ ತಜ್ಞ ಕೆ.ಪಿ. ರಾಮ್‌ಪ್ರಸಾದ್.

"ಕೊಲ್ಕತ್ತಾದಲ್ಲಿ 'ಪಿಜನ್ ರೇಸ್' ತೀರ ಪ್ರಚಲಿತ. ಕರ್ನಾಟಕಕ್ಕೆ ಹೋಲಿಸಿದರೆ ಅಲ್ಲಿ ಅತೀ ಹೆಚ್ಚು ಪಾರಿವಾಳ ಪ್ರಿಯರಿದ್ದಾರೆ. ಕರ್ನಾಟಕದಲ್ಲಿ ಇಂಥ ಆಟಗಳಿಗೆ ತಕ್ಕ ಪ್ರೋತ್ಸಾಹ, ಪ್ರಚಾರ ಸಿಕ್ಕರೆ ಪಾರಿವಾಳಗಳ ಪೋಷಣೆ ಜೊತೆಗೆ, ಸ್ಪರ್ಧೆಯೂ ಹೆಚ್ಚು ಪ್ರಗತಿ ಕಾಣಬಹುದು" ಎನ್ನುತ್ತಾರೆ ರಾಮ್‌ಪ್ರಸಾದ್.

ಇನ್ನು ವಿದೇಶಗಳಲ್ಲಿ ಹೇಗೆ? ಬಾರ್ಸಿಲೋನ, ಪೆಪ್ರಿಗಾನ್‌ಗಳಲ್ಲಿ ಪಾರಿವಾಳ ಹಾರಾಟ ಸ್ಪರ್ಧೆ ಹವ್ಯಾಸಿ ಕ್ರೀಡೆಯಾಗಿ ಪ್ರಚಲಿತದಲ್ಲಿದ್ದರೆ, ಬೆಲ್ಜಿಯಂನಲ್ಲಿ ಇದು ರಾಷ್ಟ್ರೀಯ ಕ್ರೀಡೆ. ವಿದೇಶದಲ್ಲಿ ಕ್ರೀಡೆಗಾಗಿಯೇ ಪಾರಿವಾಳ ಸಾಕುವವರು ಹೆಚ್ಚು. ಆದರೆ ಭಾರತದಲ್ಲಿ ಪಾರಿವಾಳ ಸ್ಪರ್ಧೆಗೆ ನಿರೀಕ್ಷಿತ ಪ್ರೋತ್ಸಾಹ ದೊರೆಯುತ್ತಿಲ್ಲ.

ಇಷ್ಟೊಂದು ವೇಗದಿಂದ, ದೀರ್ಘ ಅವಧಿ ಹಾರಾಡುವ ಸಾಮರ್ಥ್ಯ ಪಾರಿವಾಳಗಳಿಗೆ ಹೇಗೆ ಬರುತ್ತದೆ? "ಇವು ಪಕ್ಕಾ ಸಸ್ಯಾಹಾರಿ. ಕಾಳುಗಳೇ ಅವುಗಳ ಆಹಾರ. ಬಟಾಣಿ, ಗೋಧಿ, ಸಾಫ್ಟ್ ಫ್ಲವರ್, ಹೆಸರುಕಾಳು, ಕಡಲೆಬೀಜ, ಮುಸುಕಿನ ಜೋಳಗಳೇ ಇವುಗಳ ಶಕ್ತಿಮೂಲ" ಎನ್ನುತ್ತಾರೆ ಕ್ಲಬ್ ಸದಸ್ಯರು...

ಅದೋ ನೋಡಿ ಹಾರಿ ಬರುತ್ತಿದೆ ಪಾರಿವಾಳ...

ಟಿಎಸ್‌ಐ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .