ಇದು ನಮ್ಮ ವಿಶೇಷ ಸಂಪೂರ್ಣ  ಓದಿ
  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಗುಣದೋಷ
 

ಆಧುನಿಕ 'ರಾಮಾಯಣ' ಕಥೆಗಳು

 
ಕುತೂಹಲಭರಿತ, ಅಧ್ಯಯನಯೋಗ್ಯ 'ರಾಮಾಯಣ ಸ್ಟೋರೀಸ್ ಇನ್ ಮಾಡರ್ನ್ ಸೌತ್ ಇಂಡಿಯಾ'
 

ಧರ್ಮ, ಸಂಸ್ಕೃತಿ, ರಾಜಕಾರಣ- ಹೀಗೆ ಎಲ್ಲ ರಂಗಗಳಲ್ಲೂ ಶ್ರೀರಾಮಚಂದ್ರ ಭಾರತೀಯ ಸಮಾಜಕ್ಕೆ ಒಬ್ಬ ಆದರ್ಶಪುರುಷ, ಮರ್ಯಾದಾ ಪುರುಷೋತ್ತಮ. ಭಾರತದಲ್ಲಿ ರಾಮನ ಕಥೆಯನ್ನು ನಿರೂಪಿಸುವ ಮೂರು ಮುಖ್ಯ ಪ್ರಮಾಣೀಭೂತ ಗ್ರಂಥಗಳೆಂದರೆ; ವಾಲ್ಮೀಕಿ ರಾಮಾಯಣ, ತುಳಸೀದಾಸರ ರಾಮಚರಿತಮಾನಸ ಮತ್ತು ಕಂಬ ರಾಮಾಯಣ. ಉತ್ತರ ಭಾರತದಲ್ಲಿ 'ರಾಮಚರಿತಮಾನಸ' ಹೆಚ್ಚು ಸ್ವೀಕಾರಾರ್ಹವೆನಿಸಿದ್ದರೆ ದಕ್ಷಿಣದಲ್ಲಿ ವಾಲ್ಮೀಕಿ ರಾಮಾಯಣ. ಇದಲ್ಲದೆ ಸಂಸ್ಕೃತದಲ್ಲಿ ಭವಭೂತಿಯ ಉತ್ತರರಾಮಚರಿತವಿದೆ; ಕನ್ನಡದಲ್ಲಿ ಜೈನರಾಮಾಯಣ ಹಾಗೂ ತೊರವೆ ರಾಮಾಯಣಗಳಿವೆ. ಇಷ್ಟಲ್ಲದೆ, ಜಾನಪದದಲ್ಲಿ ಮತ್ತು ಶಿಷ್ಟಭಾಷೆಗಳಲ್ಲಿ, ಎ.ಕೆ. ರಾಮಾನುಜಂ ಅವರು ಹೇಳುವಂತೆ ಪ್ರಕ್ಷಿಪ್ತ ರಾಮಕಥೆಗಳು (Meta Ramayanas) ಹಲವಾರು ಇವೆ. ದಕ್ಷಿಣಭಾರತದಲ್ಲಿ ಪ್ರಚಲಿತವಾಗಿರುವ ಇಂಥ 'ರಾಮಕಥೆ'ಗಳ ಸಂಗ್ರಹ, ಅಮೆರಿಕದ ಇಂಡಿಯಾನ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಿರುವ, ಪೌಲರಿಚ್ಮನ್ ಅವರ 'ರಾಮಾಯಣ ಸ್ಟೋರೀಸ್ ಇನ್ ಮಾಡರ್ನ್ ಸೌತ್ ಇಂಡಿಯಾ'.

ಆದರ್ಶ ಒಂದು ಕನ್ನಡಿಯೂ ಹೌದು. ರಾಮನನ್ನು ಅವನದೇ ಆದರ್ಶದ ಕನ್ನಡಿಯಲ್ಲಿ ನೋಡಿ ತುಲನೆಮಾಡುವುದು, ಆ ಕನ್ನಡಿಯಲ್ಲಿ ರಾಮಾಯಣದ ಪಾತ್ರಗಳನ್ನು ವಿಶ್ಲೇಷಿಸುವುದು ಹಾಗೂ ನಮ್ಮ ವಿಚಾರಗಳು, ಆಸೆ ಆಶೋತ್ತರಗಳು, ವಿಮರ್ಶೆಗಳನ್ನು ಕಾಣಬಯಸುವುದು ರಾಮಕಥಾ ಪರಿವೀಕ್ಷಣೆಯ ಒಂದು ಪರಿ. ಜಾನಪದೀಯ ಹಾಗೂ ಎಲ್ಲವನ್ನೂ ಪ್ರಶ್ನಿಸುವ, ವೈಜ್ಞಾನಿಕವಾಗಿ, ಮನಶ್ಶಾಸ್ತ್ರೀಯವಾಗಿ ನೋಡುವ ಆಧುನಿಕ ಮನಸ್ಸುಗಳ ತುಡಿತಗಳು ಈ ಪರಿವೀಕ್ಷಣೆಯಲ್ಲಿ ಢಾಳವಾಗಿ ಎದ್ದುಕಾಣುತ್ತವೆ. ರಾಮನನ್ನು ದೇವರ ಅವತಾರದಿಂದ ಹೊರಕ್ಕೆಳೆದು ಮನುಷ್ಯತ್ವದ ನೆಲೆಯಲ್ಲಿ 'ಆದರ್ಶ ಪುರುಷನನ್ನಾಗಿ' ನಿಕಷಕ್ಕೆ ಒಡ್ಡುವ ಆಧುನಿಕ ಚಿಂತನೆ ಹತ್ತೊಂಬತ್ತು, ಇಪ್ಪತ್ತನೇ ಶತಮಾನಗಳಲ್ಲಿ ಆರಂಭವಾಯಿತೆನ್ನಬಹುದು. ಈ ಆಧುನಿಕ ಚಿಂತನೆಗಳು ಮುಖ್ಯವಾಗಿ ರಾಮಾಯಣವನ್ನು ನಿಕಷಕ್ಕೊಡ್ಡುವುದು ಜಾತಿ- ಮತ ಮತ್ತು ಲಿಂಗ ತಾರತಮ್ಯಗಳನ್ನು ಪ್ರಶ್ನಿಸುವ ನಿಟ್ಟಿನಿಂದ. ಜಾನಪದ ರಾಮಕಥೆಗಳಲ್ಲೂ, ಮುಖ್ಯವಾಗಿ ರಾಮಾಯಣದ ಸೀತೆಯ ಪರಿವೀಕ್ಷಣೆಯಲ್ಲಿ ಇಂಥ ಹೊಳಹುಗಳು ಕಾಣಿಸಿಕೊಳ್ಳುತ್ತವೆ. ಪೌಲರಿಚ್ಮನ್ ಸಂಗ್ರಹಿಸಿ, ಸಂಪಾದಿಸಿರುವ ಈ ಗ್ರಂಥದಲ್ಲಿ ದಕ್ಷಿಣ ಭಾರತದಲ್ಲಿ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ಕಳೆದ ಒಂದು ನೂರು ವರ್ಷಗಳಿಂದ ಪ್ರಚಲಿತದಲ್ಲಿರುವ, ಪ್ರಕಟವಾಗಿರುವ ರಾಮಕಥೆಗಳಿವೆ. ಸುದೀರ್ಘವಾದ ಪ್ರಸ್ತಾವನೆಯೊಂದಿಗೆ ಈ ಗ್ರಂಥದಲ್ಲಿ 'ರಾಮಾಯಣದ ಕಥೆಗಳು', ಸೀತೆ (Sita In context), ದೂಷಿತ ಪಾತ್ರಗಳು (Stigmatized characters), ಮತ್ತು ರಾಕ್ಷಸರು (so called Demons) ಈ ಮೂರು ವಿಭಾಗಗಳ ವರ್ಗೀಕರಣದಲ್ಲಿ ಪ್ರಕಾಶಗೊಂಡಿವೆ. ಪ್ರತಿಯೊಂದು ವಿಭಾಗದಲ್ಲೂ ದಕ್ಷಿಣ ಭಾರತದ ಭಾಷೆಗಳಿಂದ ಆಯ್ದ 'ರಾಮಕಥೆ'ಗಳ ಅಥವಾ ಪ್ರಕ್ಷಿಪ್ತ ರಾಮಾಯಣಗಳ ಇಂಗ್ಲಿಷ್ ಭಾಷಾಂತರವಿದೆ. ಭಾಷಾಂತರದ ಓದಿಗೆ ಮುನ್ನ ಲೇಖಕರು ಮತ್ತು ಅನುವಾದಿತ ಕೃತಿಯ ಪರಿಚಯಾತ್ಮಕ ಟಿಪ್ಪಣಿಗಳು ಇದ್ದು ಇವು ಕೃತಿ ಪ್ರವೇಶಕ್ಕೆ ಸಹಾಯಕವಾಗಿವೆ.

ಕನ್ನಡದಿಂದ, ಕುವೆಂಪು ಅವರ 'ಶೂದ್ರತಪಸ್ವಿ', ವಿಜಯ ದಬ್ಬೆ ಅವರ 'ದಿ ಕ್ವೆಶ್ಚನ್ಸ್ ರಿಟರ್ನ್' (The Questions Return) ಕವನ, ರಾಮೇಗೌಡ, ಪಿ.ಕೆ. ರಾಜಶೇಖರ ಮತ್ತು ಎಸ್. ಬಸವಯ್ಯ ಸಂಪಾದಿಸಿರುವ 'ಜಾನಪದ ರಾಮಾಯಣ' ಗ್ರಂಥದಿಂದ ಒಂದು ಜಾನಪದ ಕಾವ್ಯ (Do You Accept My Truth, My Lord?) ಹಾಗೂ ಎಚ್.ಎಸ್. ವೆಂಕಟೇಶ ಮೂರ್ತಿಯವರ, ಹೆಳವನಕಟ್ಟೆ ಗಿರಿಯಮ್ಮ ಜಾನಪದ ಕಥೆ ಆಧಾರಿತ 'ಚಿತ್ರಪಟ ರಾಮಾಯಣ' (Portrait Ramayana) ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಜಾತಿ-ವರ್ಗಗಳ ಮೇಲರಿಮೆಗಳನ್ನು, ಸ್ತ್ರೀ ಶೋಷಣೆಯನ್ನು ಪ್ರಶ್ನಿಸುವ, ಇವುಗಳಿಂದ ವಿಮೋಚನೆ ಬಯಸುವ ನೆಲೆಗಳಿಂದ 'ರಾಮಾಯಣ'ದ ಪರಿವೀಕ್ಷಣೆ ಮಾಡುವ ಈ ಕೃತಿಗಳು ಈಗಾಗಲೇ ಕನ್ನಡಿಗರಿಗೆ ಚಿರಪರಿಚಿತ. ಸಂಪಾದಕರು, 'ಶೂದ್ರ ತಪಸ್ವಿ'ಯ ಅನುವಾದದೊಂದಿಗೆ, ರಂಗಾಯಣದ ಸಿ. ಬಸವಲಿಂಗಯ್ಯನವರ 'ಶೂದ್ರ ತಪಸ್ವಿಯ' ರಂಗ ಪ್ರಯೋಗವನ್ನು 'ಶಂಭೂಕನ ಕಥೆಯ ಹೊಸ ವ್ಯಾಖ್ಯೆ'ಯಾಗಿ, ವಿಮರ್ಶಾತ್ಮಕವಾಗಿ ಚರ್ಚಿಸಿರುವುದು ಮೂಲ ಕೃತಿಯ ಅರ್ಥೈಸುವಿಕೆಗೆ ಸಹಕಾರಿಯಾಗಿದೆ. ಎಚ್ಚೆಸ್ವಿಯವರ ಸೀತೆ, ತಾನು ರೇಖಿಸಿದ ರಾವಣನ ಚಿತ್ರಕ್ಕೆ ಜೀವ ಬಂದಾಗ, ರಾವಣನನ್ನು ಮಗನೆಂದೇ ಭಾವಿಸಿ 'ತಾಯಿ ಮಗನ ಸಂಬಂಧಕ್ಕೆ ಕಳಂಕ ಹಚ್ಚಬೇಡಿ' ಎಂದು ಬೇಡಿಕೊಳ್ಳುತ್ತಾಳೆ.

ಮಲೆಯಾಳಂನ ಕೆ.ಬಿ. ಶ್ರೀದೇವಿಯವರ 'ವುಮನ್ ಆಫ್ ಸ್ಟೋನ್' ತಮಿಳಿನ ಕುಮುದಿನಿಯವರ 'ಸೀತೆಗೆ ಪತ್ರಗಳು' ತೆಲುಗಿನ ಗುಡಿಪತಿ ವೆಂಕಟಾಚಲಂ ಅವರ 'Sita Enters Fire', ಕವನ ಶರ್ಮ ಅವರ 'Shurpanakha's Sorrow', ಮಲೆಯಾಳಂನ ಹಸನ್‌ಕುಟ್ಟಿಯವರ 'ಮಾಪಿಳ್ಳೆ ರಾಮಾಯಣ', ಕೆ. ಸಚ್ಚಿದಾನಂದನ್ ಅವರ 'Ravana's Letter From Heaven' ಹೆಸರಿಸಲೇಬೇಕಾದಂಥ ಕುತೂಹಲಕಾರಿ ಪ್ರಯೋಗಗಳು. ಶ್ರೀದೇವಿಯವರ ಕಥೆಯಲ್ಲಿ ರಾಮ, ಸೀತೆಯನ್ನು ತ್ಯಜಿಸಿದ ಸುದ್ದಿ ಕೇಳಿ ಅವನಿಂದ ಮುಕ್ತಿ ಪಡೆದ ಅಹಲ್ಯೆ ಮತ್ತೆ ಶಿಲೆಯಾಗುತ್ತಾಳೆ; ವೆಂಕಟಾಚಲಂ ಅವರ 'ಸೀತೆ' ರಾಮನಿಂದ ಪರಿತ್ಯಕ್ತಳಾದಾಗ ರಾವಣನೊಂದಿಗೆ ಸಹಗಮನ ಮಾಡುತ್ತಾಳೆ; ಕವನ ಶರ್ಮಾ ಅವರ, ಪುರುಷ ತಿರಸ್ಕೃತ ಶೂರ್ಪನಖಿ 'ದೇವರೇ, ಪುರುಷಸಂಗವಿಲ್ಲದೆ ಗರ್ಭಧಾರಣೆಗೆ ಸಹಾಯ ಮಾಡು, ಪುರುಷ ಸಂತಾನ ಬೇಡವೇ ಬೇಡ' ಎಂದು ಮೊರೆ ಇಡುತ್ತಾಳೆ. ಕೇರಳದ ಮಲಬಾರ್ ಸೀಮೆಯ ಸ್ವದೇಶಿ ಮುಸ್ಲಿಮರು ಹಾಡುವ ರಾಮಾಯಣ 'ಮಾಪಿಳ್ಳೆ ರಾಮಾಯಣ' ಲಾಮಾಯಣವಾಗಿ, ರಾಮ- ರಾವಣರು 'ಲಾಮ- ಲಾವಣ'ರಾಗಿ ಮಾಪಿಳ್ಳೆ ಸಂಸ್ಕೃತಿಯಲ್ಲಿ ಕಾಣಿಸಿಕೊಂಡರೂ ಕಥೆ ರಾಮಕಥೆಯೇ. ಸಚ್ಚಿದಾನಂದರ ಕವನದಲ್ಲಿ, ರಾಮನಿಂದ ಹತನಾದ ರಾವಣ, 'ಹಿಂದಿನದನ್ನು ಮರೆತು ತನ್ನೊಡಗೂಡುವಂತೆ ಸೀತೆಗೆ ಸ್ವರ್ಗದಿಂದ ಪತ್ರ ಬರೆಯುತ್ತಾನೆ. ಈ ಎಲ್ಲಾ ಕುತೂಹಲಕಾರಿ ರಚನೆಗಳ ವೈಶಿಷ್ಟ್ಯವಿರುವುದು ಅವುಗಳ ಧ್ವನ್ಯಾರ್ಥ ವಿನ್ಯಾಸಗಳಲ್ಲಿ.

ಪೂರ್ಣ ಪ್ರಮಾಣದ ವಿಮರ್ಶೆಗೆ ಎಡೆಯಿಲ್ಲದ ಕಾರಣ, ಮೊತ್ತದಲ್ಲಿ, 'ರಾಮಾಯಣ ಸ್ಟೋರೀಸ್ ಇನ್ ಮಾಡರ್ನ್ ಸೌತ್ ಇಂಡಿಯಾ' ಕುತೂಹಲಭರಿತವಾದ ಅಧ್ಯಯನ ಯೋಗ್ಯ ಗ್ರಂಥ ಎಂದು ಖಚಿತವಾಗಿ ಹೇಳಬಹುದು.

ಟಿಎಸ್‌ಐ

ಜಿ.ಎನ್. ರಂಗನಾಥ ರಾವ್

ಪ್ರಕಾಶನ: ಇಂಡಿಯಾನ ಯೂನಿವರ್ಸಿಟಿ ಪ್ರೆಸ್, ಯುಎಸ್‌ಎ

 

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .