|
ನಕ್ಸಲೀಯ ಚಳವಳಿ ಹೊರಳುದಾರಿಯಲ್ಲಿದೆ.
ಮಾವೋವಾದಿಗಳ ಇತ್ತೀಚಿನ ನಡೆ ಅರಣ್ಯದಿಂದ ನಗರಗಳ ಹಾದಿ ತುಳಿದಿದೆ.
ಗೆರಿಲ್ಲಾ ಸಮರದೊಂದಿಗೆ ಕಾರ್ಪೊರೇಟ್ ಹೋರಾಟಕ್ಕೆ ವೇದಿಕೆ
ಸಜ್ಜಾಗುತ್ತಿದೆ!
ಹೌದು,
ಕರ್ನಾಟಕದ ಮಲೆನಾಡಿನಿಂದ ದೂರದ ಛತ್ತೀಸ್‌ಗಢದ ಬಸ್ತಾರ್
ದಟ್ಟಡವಿಯವರೆಗೆ ಸದ್ದುಮಾಡುತ್ತಿರುವ ಬಂದೂಕುಗಳೊಂದಿಗೆ ಇದೀಗ ಹೊಸ ದನಿಯೂ
ಕೇಳಿಬರತೊಡಗಿದೆ. ಆ ದನಿ ಸಂಘಟನೆಯನ್ನೇ
ಇಬ್ಭಾಗವಾಗಿಸಿದ್ದು ಮಾತ್ರವಲ್ಲ, ಒಡೆದ ಬಣ
ನಗರ ಪ್ರದೇಶಗಳಲ್ಲಿ ಹೋರಾಟವನ್ನು ಸಂಘಟಿಸುವ ಹಾದಿಯಲ್ಲಿ ಸಾಗಿದೆ.
ಮಲೆನಾಡಿನಲ್ಲಿ 2001ರಿಂದಲೇ
ನೆಲೆಯೂರಿದ್ದ ಸಿಪಿಐ (ಮಾವೋವಾದಿ)
ಸಂಘಟನೆಯಲ್ಲಿ ಈಗ 'ಚಳವಳಿಯ
ನಗರೀಕರಣ'ದ ಕಾರಣದಿಂದಾಗಿ ಭಿನ್ನಾಭಿಪ್ರಾಯ
ತಲೆದೋರಿ, ಅದು ವಿಕೋಪಕ್ಕೆ ಹೋಗಿ
2007ರ ನವೆಂಬರ್‌ನಲ್ಲಿ ಮಾವೋವಾದಿಗಳು ಎರಡು
ಬಣಗಳಾಗಿ ಒಡೆದು ಹೋಗಿದ್ದಾರೆ.
ರೆವಲ್ಯೂಷನರಿ ಕಮ್ಯುನಿಸ್ಟ್ ಪಾರ್ಟಿ-
ಕರ್ನಾಟಕ (ಆರ್‌ಸಿಪಿ-ಕೆ)
ಎಂಬ ಹೊಸ ನಕ್ಸಲೀಯ ಸಂಘಟನೆಯ ಅಸ್ತಿತ್ವ ಪಡೆದುಕೊಂಡಿದೆ.
'ಆರ್‌ಸಿಪಿ ಕರ್ನಾಟಕ'
( http://rcpkarnataka.blogspot.com )
ಎಂಬ ಬ್ಲಾಗ್‌ನಲ್ಲಿ ಸಂಘಟನೆಯ ಮುಖಂಡರು ತಾವು ಸಿಪಿಐ
(ಮಾವೋವಾದಿ)ಯಿಂದ
ಹೊರಬರಲು ಕಾರಣವಾದದ್ದು ನಗರ ಪ್ರದೇಶದಲ್ಲಿ ಸಂಘಟನೆಯನ್ನು ಬಲಪಡಿಸುವ ಕುರಿತ
ಭಿನ್ನಮತ ಎಂದು ಹೇಳಿದ್ದಾರೆ. ಅಂದರೆ,
ನಗರ ಪ್ರದೇಶದಲ್ಲಿ ಸಂಘಟನೆಯನ್ನು ಬಲಪಡಿಸುವ ವಿಷಯ ನಕ್ಸಲೀಯ
ಒಗ್ಗಟ್ಟನ್ನೇ ಮುರಿಯುವಷ್ಟರ ಮಟ್ಟಿಗೆ ಗಂಭೀರ ಸ್ವರೂಪ ಪಡೆದಿದೆ.
ಇತ್ತ ಕರ್ನಾಟಕದಲ್ಲಿ ಚಳವಳಿಯ ನಗರೀಕರಣಕ್ಕೆ ಆದ್ಯತೆ ನೀಡಿದ ಒಂದು
ಬಣ, 2001ರಲ್ಲಿ
ಸಿಪಿಐ (ಎಂಎಲ್) (ಪೀಪಲ್ಸ್
ವಾರ್)ನ ಅಖಿಲ ಭಾರತ ಸಮ್ಮೇಳನದ
ಶಿಫಾರಸಿನಂತೆ ನಗರ ಪ್ರದೇಶಗಳಲ್ಲಿ ಸಂಘಟನೆಯನ್ನು ವಿಸ್ತರಿಸುವ ಕಾರ್ಯಕ್ಕೆ
ಆದ್ಯತೆ ನೀಡಿದ್ದರೆ, ಅತ್ತ ಛತ್ತೀಸಗಢದಲ್ಲಿ
ಕಳೆದ ಜೂನ್‌ನಲ್ಲಿ 'ಕ್ರಾಂತಿ ಸಪ್ತಾಹ'
ಆಚರಿಸುತ್ತಿದ್ದ ಮಾವೋವಾದಿ ಕೇಂದ್ರ ಸಮಿತಿ ನಾಯಕ ಕಾಮ್ರೇಡ್ ಸೋನು,
ನಗರ ಪ್ರದೇಶಗಳಲ್ಲಿ ನಮ್ಮ ಸಂಘಟನಾ ಜಾಲವನ್ನು ವಿಸ್ತರಿಸಿ,
ಅವುಗಳನ್ನು ನಮ್ಮ ಹಿಡಿತಕ್ಕೆ ಪಡೆಯದೇ ಹೋದಲ್ಲಿ ಕ್ರಾಂತಿ ಎಂಬುದು
ಬರಿ ಕನಸಾಗಿ ಉಳಿಯಲಿದೆ ಎಂದಿದ್ದಾರೆ.
ಒಂದೆಡೆ ಕರ್ನಾಟಕದ ಮಾವೋವಾದಿಗಳು ಸಂಘಟನೆಯ
ನಗರೀಕರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರೆ,
ಅತ್ತ ಅವರದೇ ಸಂಘಟನೆಯ ಛತ್ತೀಸಗಢ ಘಟಕ ನಗರೀಕರಣವನ್ನು ಹಠಕ್ಕೆ
ಬಿದ್ದು ಸಾಧಿಸಹೊರಟಿದೆ. ಈ ವಿಷಯದಲ್ಲಿ
ಕರ್ನಾಟಕದಲ್ಲಂತೂ ಕಾಡಿನ ನಕ್ಸಲೀಯರು ಮತ್ತು ನಗರಮುಖಿ ನಕ್ಸಲೀಯರ ನಡುವೆ
ಬ್ಲಾಗ್ ಮತ್ತು ಪತ್ರಿಕಾ ಪ್ರಕಟಣೆಗಳ ಮೂಲಕ ಭಾರೀ ಪ್ರಮಾಣದ ವಾದ-
ವಿವಾದಗಳು ಮುಂದುವರಿದಿವೆ. ಆ
ಮಟ್ಟಿಗೆ ದೇಶದ ನಕ್ಸಲೀಯ ಚಳವಳಿ ಗೆರಿಲ್ಲಾ ಸಮರದ ಕಾಲದಿಂದ ಕಾರ್ಪೊರೇಟ್
ಕಾಲಕ್ಕೆ ಅಪ್‌ಡೇಟ್ ಆಗುತ್ತಿರುವುದು ಹೊಸ ಬೆಳವಣಿಗೆ.
2003ರ ಸುಮಾರಿಗೆ ಕೇಂದ್ರ
ಸಮಿತಿಯಿಂದ ರಾಜ್ಯ ಸಮಿತಿಗಳಿಗೆ 'ಅರ್ಬನ್
ವರ್ಕ್ ಡಾಕ್ಯುಮೆಂಟ್'
(2001ರ ಸಮ್ಮೇಳನದಲ್ಲಿ
ಅಂಗೀಕರಿಸಿದ) ಕಳಿಸಿ,
ಅದರಂತೆ ನಗರ ಪ್ರದೇಶಗಳಲ್ಲಿ ಸಂಘಟನೆಯ ಜಾಲವನ್ನು ಬಲಪಡಿಸಲು ಸೂಚನೆ
ಕಳಿಸಲಾಗಿತ್ತು. ಆದರೆ,
ಕರ್ನಾಟಕದಲ್ಲಿ ಸಂಘಟನೆಯ ನಗರೀಕರಣದ ವಿಷಯದಲ್ಲಿ ರಾಜ್ಯ
ಸಮಿತಿಯಲ್ಲಿ ಒಡಕು ಮೂಡಿತು. ಕೆಲವರು
ಗೆರಿಲ್ಲಾ ಸಮರಕ್ಕಿಂತಲೂ ನಗರ ಪ್ರದೇಶಗಳಲ್ಲಿ ಕಾನೂನು ಬದ್ಧ ಸಂಘಟನೆಗಳ
ಬೆಂಬಲದೊಂದಿಗೆ ವ್ಯಾಪಕ ಸಂಘಟನಾ ಜಾಲ ಬೆಳೆಸಿ ಕ್ರಾಂತಿಯ ದಾಳಗಳನ್ನಾಗಿ
ಮಾಡಿಕೊಳ್ಳುವುದು ಹೆಚ್ಚು ಪರಿಣಾಮಕಾರಿ ಎಂದು ವಾದಿಸತೊಡಗಿದರು.
ಆದರೆ, ಆ ವಾದಕ್ಕೆ ರಾಜ್ಯ ಸಮಿತಿಯ
ಉನ್ನತ ನಾಯಕರು ಕಿಮ್ಮತ್ತು ನೀಡಲಿಲ್ಲ.
ಸಾಕೇತ್ ಎನ್‌ಕೌಂಟರ್ ಬಳಿಕ ಈ ಭಿನ್ನಮತ ಹೆಚ್ಚುತ್ತಾ ಸಾಗಿದ್ದು,
ಭಿನ್ನಮತೀಯ ಗುಂಪಿನ ಕೆಲವರು ಅದಾಗಲೇ ನಗರ ಪ್ರದೇಶಗಳಲ್ಲಿ ಕಾರ್ಯ
ಆರಂಭಿಸಿದ್ದರು. ಆ ಸಂದರ್ಭದಲ್ಲೇ ಸಂಘಟನೆಯ
ಪ್ರಮುಖರೊಬ್ಬರನ್ನು ಬೆಂಗಳೂರಿನ ಕೊಳಗೇರಿಯಲ್ಲಿ ಪೊಲೀಸರು ಬಂಧಿಸಿದ್ದರು
ಎಂಬ ವಿಷಯಗಳೆಲ್ಲ ಈಗ ಬೆಳಕಿಗೆ ಬರತೊಡಗಿವೆ.
ಟಿಎಸ್‌ಐ ಜೊತೆ ಮಾತನಾಡಿದ,
ಆರ್‌ಸಿಪಿ ಮತ್ತು ಮಾವೋವಾದಿಗಳ ನಡುವಿನ ತಿಕ್ಕಾಟವನ್ನು
ಹತ್ತಿರದಿಂದ ಬಲ್ಲ ಹೆಸರು ಹೇಳಲಿಚ್ಛಿಸದ ಕಾಮ್ರೇಡ್ ಒಬ್ಬರ ಪ್ರಕಾರ,
ಪಕ್ಷ ಎರಡು ಹೋಳಾದ ಬಳಿಕ ಕೆಲವರು ನಗರಗಳಲ್ಲಿ ಜಾಲ ವಿಸ್ತರಿಸುವ
ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಬದಲಾದ
ಕಾಲದಲ್ಲಿ ಮಾವೋ ಕಾಲದ ಚೀನಾ ಮಾದರಿಯಲ್ಲೇ ಕ್ರಾಂತಿ ಮಾಡುವುದು ಸಾಧ್ಯವಿಲ್ಲ
ಎಂಬುದು ಅವರ ವಾದ" ಎಂದರು.
ಆದರೆ,
ಕ್ರಾಂತಿಯ ಈ ಹೊಸ ಧೋರಣೆಗೆ ಮಾವೋವಾದಿ ಸಂಘಟನೆ ತನ್ನ ಒಂದು ಬ್ಲಾಗ್‌ನಲ್ಲಿ,
ನಗರ ಕೆಲಸದ ಬಗ್ಗೆ ನಮಗೆ ಸಂಕುಚಿತ ಧೋರಣೆ ಇದೆ ಎಂದು ಹೇಳಿರುವುದು
ಸರಿಯಲ್ಲ. ವಾಸ್ತವವಾಗಿ ಕರ್ನಾಟಕದಲ್ಲಿ
ನಮ್ಮ ಸಂಘಟನೆ ಈವರೆಗೂ ನಗರಕೇಂದ್ರಿತವಾಗೇ ಇತ್ತು.
2003ರಿಂದಲೇ ಸಂಘಟನೆಯ ಶೇ.೫0ರಷ್ಟು
ಮಂದಿಯನ್ನು ನಗರಗಳಲ್ಲೇ ನಿಯೋಜಿಸಲಾಗಿದೆ.
ಹಾಗಾಗಿ ಈ 'ಬಲ ಅವಕಾಶವಾದಿಗಳು'
(ಆರ್‌ಸಿಪಿ-ಕೆ)
ಹೇಳುವಂತೆ ಮಾವೋವಾದಿ ಸಂಘಟನೆ ತಪ್ಪುಹೆಜ್ಜೆಗಳನ್ನು ಇಡುತ್ತಿಲ್ಲ
ಎಂದು ತಿರುಗೇಟು ನೀಡಿದೆ.
ಹಾಗೇ ನಗರ ಪ್ರದೇಶದ ತನ್ನ ಕಾರ್ಯವೈಖರಿಯ
ರೂಪುರೇಷೆಗಳ ಬಗ್ಗೆಯೂ ಚರ್ಚೆ ನಡೆಸಿರುವ ಆರ್‌ಸಿಪಿ,
ನಗರ ಪ್ರದೇಶದಲ್ಲಿ ಕಾನೂನುಬದ್ಧ ಸಂಘಟನೆಗಳ ಜೊತೆಗೆ,
ಮುಖ್ಯವಾಗಿ ಮಾಧ್ಯಮಗಳಲ್ಲಿ ಸೇರಿಕೊಂಡು ತಮ್ಮ ಪರವಾದ ಸದಭಿಪ್ರಾಯ
ಮೂಡಿಸುವುದು ಹಾಗೂ ದೀರ್ಘಾವಧಿಯಲ್ಲಿ ವ್ಯವಸ್ಥೆಯ ಅತ್ಯಂತ ನಿರ್ಣಾಯಕ
ಅಂಗಗಳಾದ ಪೊಲೀಸ್, ಸೇನೆ,
ಟೆಲಿಕಾಂ, ವಿದ್ಯುತ್ ಮುಂತಾದ
ಇಲಾಖೆಗಳ ಮೇಲೆ ಹಿಡಿತ ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ
ಎಂದಿದೆ. ಅದಕ್ಕಿಂತ ಆಘಾತಕಾರಿ ಅಂಶವೆಂದರೆ,
ಪ್ರಭಾವಿ ಉದ್ಯಮಗಳಾದ ಐಟಿ,
ಬಿಪಿಒಗಳಲ್ಲಿ ಕೂಡ ಅಲ್ಲಿನ ನೌಕರರ ಉದ್ಯೋಗದ ಅಭದ್ರತೆ,
ನಿಯಮಾವಳಿಗಳಿಲ್ಲದ ಕೆಲಸದ ಹೊರೆ ಮುಂತಾದ ಅಂಶಗಳನ್ನೇ ಬಳಸಿಕೊಂಡು
ಸಂಘಟನೆಯನ್ನು ಕಟ್ಟಬೇಕು ಎಂದು ಯೋಜಿಸಿದೆ.
ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಸಮುದಾಯಗಳ ಕಾಲೋನಿಗಳನ್ನು ಕೂಡ ತಮ್ಮ
ಗುರಿಯನ್ನಾಗಿಸಿಕೊಳ್ಳುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.
ಹಾಗೇ ಬೆಂಗಳೂರಿನ ಕೊಳಗೇರಿಗಳಲ್ಲಿ ನಕ್ಸಲೀಯ ಚಟುವಟಿಕೆ
ನಡೆಯುತ್ತಿರುವ ಬಗ್ಗೆ ಕಳೆದ ವರ್ಷದ ನವೆಂಬರ್‌ನಲ್ಲೇ ವರದಿಯಾಗಿತ್ತು.
ಈ ಬಗ್ಗೆ ರಾಜ್ಯ ಪೊಲೀಸ್ ಗುಪ್ತಚರ ಇಲಾಖೆ ಕೂಡ ಮಾಹಿತಿ ಹೊಂದಿದ್ದು,
ಟಿಎಸ್‌ಐ ಜೊತೆ ಮಾತನಾಡಿದ ಇಲಾಖೆಯ ಉನ್ನತಾಧಿಕಾರಿಯೊಬ್ಬರು ಅಂತಹ
ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದ್ದೇವೆ.
ಆದರೆ, ಯಾವ ಕ್ರಮಗಳನ್ನು ಕೈಗೊಳ್ಳುತ್ತಿದೆ
ಎಂದು ಈ ಸಂದರ್ಭದಲ್ಲಿ ಹೇಳಲು ಸಾಧ್ಯವಿಲ್ಲ.
ಒಂದಂತೂ ನಿಜ. ಇಲಾಖೆ ಇದನ್ನು ಗಂಭೀರವಾಗಿ
ಪರಿಗಣಿಸಿದೆ ಎಂದರು. ಆ ಮೂಲಕ ನಕ್ಸಲೀಯರ
ನಗರ ಜಾಲದ ವಿಸ್ತರಣೆಯನ್ನು ತಳ್ಳಿಹಾಕಲಿಲ್ಲ.
ಆದರೆ, ಐಟಿ
ಮತ್ತು ಬಿಪಿಒ ಉದ್ಯಮದಲ್ಲಿ ಜಾಲ ವಿಸ್ತರಿಸುವ ಆರ್‌ಸಿಪಿ-ಕೆಯ
ಯೋಜನೆ ಬಗ್ಗೆ ನಗರದ ಬಿಪಿಒ ಕಂಪನಿಯೊಂದರ ಉನ್ನತ ಮಟ್ಟದ ಉದ್ಯೋಗಿ ವರುಣ್
(ಹೆಸರು ಬದಲಿಸಲಾಗಿದೆ),
ಈ ವಲಯದಲ್ಲಿ ಇರುವವರೆಲ್ಲಾ ಸಮಾಜದ ಉನ್ನತ ವರ್ಗಕ್ಕೆ ಸೇರಿದವರೇ
ಹೆಚ್ಚು. ಸಹಜವಾಗೇ ಉನ್ನತ ಜಾತಿಯ
ಹಿನ್ನೆಲೆಯವರೂ ಆಗಿರುತ್ತಾರೆ. ಆದ್ದರಿಂದ
ಅವರಲ್ಲಿ ಇಂತಹ ಕ್ರಾಂತಿಯ ಬಗ್ಗೆ ಒಲವಿರುವುದು ವಿರಳ.
ಜೊತೆಗೆ ಉದ್ಯೋಗ ಭದ್ರತೆ ಎಂಬುದು ಯಾರಿಗೂ ಬೇಕಾಗಿಲ್ಲ.
ವೃತ್ತಿ ಬದುಕಿನಲ್ಲಿ ಕ್ಷಿಪ್ರ ಏಳಿಗೆಗಾಗಿ ಕಂಪನಿ ಬದಲಾವಣೆ,
ವೃತ್ತಿ ಬದಲಾವಣೆ ಸಾಮಾನ್ಯವಾಗಿರುವಾಗ ಅಸಮಾಧಾನದ ಪ್ರಶ್ನೆಯೇ
ಬರುವುದಿಲ್ಲ. ಆದರೂ,
ಇಲ್ಲೂ ಎಡಪಂಥೀಯ ಧೋರಣೆಯವರು ಇರುತ್ತಾರೆ.
ಅವರ ಮೂಲಕ ಸಂಘಟನೆ ವಿಸ್ತರಿಸುವ ಸಾಧ್ಯತೆ ಇಲ್ಲ ಎನ್ನಲಾಗದು
ಎನ್ನುತ್ತಾರೆ.
ಇಂತಹ ಚಟುವಟಿಕೆಗಳ ಬಗ್ಗೆ ಬೆಂಗಳೂರಿನ
ಪೊಲೀಸ್ ಆಯುಕ್ತ ಶಂಕರ್ ಬಿದರಿಯವರನ್ನು ಪ್ರಶ್ನಿಸಿದಾಗ ಅವರು,
ಸದ್ಯಕ್ಕೆ ಅಂತಹ ಚಟುವಟಿಕೆಗಳು ಬಹಿರಂಗವಾಗಿ ನಡೆಯುತ್ತಿಲ್ಲ.
ಮಾಧ್ಯಮಗಳಲ್ಲಿ ವರದಿಗಳನ್ನು ನೋಡಿದ್ದೇವೆ ಅಷ್ಟೆ.
ಆದರೂ, ಇಲಾಖೆ ಅತ್ಯಂತ
ಸೂಕ್ಷ್ಮವಾಗಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ ಎಂದರೂ,
ಮಾತಲ್ಲಿ ಅಂತಹ ಚಟುವಟಿಕೆಗಳು ನಡೆದಿಲ್ಲ ಎಂಬ ಖಡಾಖಂಡಿತವಾದ
ಇರಲಿಲ್ಲ!
ಈಗ ನಕ್ಸಲೀಯ ಹೆಜ್ಜೆ ನಗರಗಳತ್ತ,
ಗೆರಿಲ್ಲಾ ಸಮರದ ಜೊತೆಗೆ ಕಾರ್ಪೊರೇಟ್ ಅಂಗಳಲ್ಲಿ ಕೆಂಪು ಕ್ರಾಂತಿಯ
ಸದ್ದೂ ಕೇಳುವ ದಿನಗಳು ದೂರವಿರಲಿಕ್ಕಿಲ್ಲ ಎಂಬುದು ಆರ್‌ಸಿಪಿ-ಕೆಯ
ದೀರ್ಘಕಾಲೀನ ತಂತ್ರಗಳೊಂದಿಗೆ ನಗರ ಪ್ರದೇಶಗಳಲ್ಲಿ ಸಂಘಟನೆಯನ್ನು ವಿಸ್ತಾರ
ನೆಲೆಯಲ್ಲಿ ಕಟ್ಟುವುದು ನಮ್ಮ ಈಗಿನ ಆದ್ಯತೆ.
ಅದರ ಭಾಗವಾಗಿ ಬಹಿರಂಗ ಕಾನೂನುಬದ್ಧ ಸಂಘಟನೆಯ ಜೊತೆಗೆ ಗುಪ್ತ
ಘಟಕಗಳೂ ಕಾರ್ಯನಿರ್ವಹಿಸುತ್ತಿವೆ' ಎಂಬುದೇ
ಸಾಕ್ಷಿ!
ಟಿಎಸ್‌ಐ
|