|
| ಅರಿಂದಮ್ ಚೌಧುರಿ, |
ಪ್ರಧಾನ ಸಂಪಾದಕರು,
ದ ಸಂಡೆ ಇಂಡಿಯನ್
|
ಜಾಗತಿಕ ರಾಜಕೀಯ ಜಿದ್ದಾಜಿದ್ದಿಯನ್ನು
ಬಿಡಿ, ಜನ ತಮ್ಮ- ತಮ್ಮ ವೈಯಕ್ತಿಕ ತಾಪತ್ರಯಗಳನ್ನೂ ಮರೆತು ಒಂದಾಗಿ
ಸಂಭ್ರಮಿಸುವ ವಿಶ್ವದ ಮಹಾ ಕ್ರೀಡಾಹಬ್ಬ ಒಲಿಂಪಿಕ್ಸ್. ಈ ಬಾರಿಯಂತೂ
ಚೀನಾದಲ್ಲಿ ಒಲಿಂಪಿಕ್ಸ್ ನಡೆಯುತ್ತಿರುವುದರಿಂದ ವಿಶ್ವದಾದ್ಯಂತ
ಕೋಟ್ಯಂತರ ಮಂದಿಗೆ ಈ ಕ್ರೀಡಾ ಉತ್ಸವವನ್ನು ಸುಸೂತ್ರವಾಗಿ
ನಡೆಸಿಕೊಡುವುದರಲ್ಲಿ ಅದು ಯಶಸ್ವಿಯಾಗುವುದೇ ಎಂಬ ಕುತೂಹಲವಿದೆ.
ಬೇರೆಲ್ಲಾ ವಿಷಯಕ್ಕಿಂತ ಮುಖ್ಯವಾಗಿ ಚೀನಾದ ಸಾಮರ್ಥ್ಯದ ಕಾರಣಕ್ಕಾಗಿ ಜನ
ಈ ಬಾರಿಯ ಒಲಿಂಪಿಕ್ಸ್ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಬಹುಶಃ
ಒಲಿಂಪಿಕ್ಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಆತಿಥೇಯ ರಾಷ್ಟ್ರ ಒಂದು
ಕಡೆಯಾದರೆ, ಇತರ ಇಡೀ ಜಗತ್ತು ಮತ್ತೊಂದು ಕಡೆ ಎಂಬಂತಹ ಸ್ಥಿತಿ
ನಿರ್ಮಾಣವಾಗಿದೆ. ಹಾಗಾಗಿ ಈ ಬಾರಿ ಒಲಿಂಪಿಕ್ಸ್ ಯಶಸ್ವಿಯಾಗಿ
ನಡೆಸಿಕೊಡುವುದರಲ್ಲಿ ಚೀನಾ ಏನಾದರೂ ಎಡವಿದರೆ ಅದಕ್ಕಾಗಿ ಮರುಗುವವರ
ಸಂಖ್ಯೆ ಕಡಿಮೆಯಾದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ.
ಕೆಲವು ವರ್ಷಗಳ ಹಿಂದೆ
2008ರ ಈ
ಒಲಿಂಪಿಕ್ಸ್ ಆತಿಥೇಯ ರಾಷ್ಟ್ರವಾಗಿ ಚೀನಾ ಆಯ್ಕೆಯಾದಾಗ, ಅದು ತನ್ನ
ಮತ್ತು ಜಗತ್ತಿನ ಇತರೆಲ್ಲಾ ರಾಷ್ಟ್ರಗಳ ನಡುವೆ ಇರುವ ಕಂದಕ ತುಂಬುವ ಒಂದು
ಸುವರ್ಣಾವಕಾಶ ಇದು ಎಂದು ಯೋಚಿಸಲೇ ಇಲ್ಲ. ಬದಲಾಗಿ ಚೀನಾ ತನ್ನ ಎಂದಿನ
ತಾನು `ನಡೆದದ್ದೇ
ದಾರಿ`
ಎಂಬಂತಹ ದಾರ್ಷ್ಟ್ರದ ವರ್ತನೆಯನ್ನೇ ತೋರಿತು. ಈ ಧೋರಣೆ ಒಲಿಂಪಿಕ್ಸ್
ಪೂರ್ವ ತಯಾರಿಯ ದಿನಗಳಿಂದಲೂ ಪ್ರತಿ ಹಂತದಲ್ಲೂ ಎದ್ದುಕಾಣುತ್ತಿತ್ತು.
ತೀರಾ ಬೃಹತ್ ಗಾತ್ರದ ಒಲಿಂಪಿಕ್ಸ್ ಸ್ಟೇಡಿಯಂ ನಿರ್ಮಾಣದಿಂದ, ವಿವಿಧ
ಹಂತದಲ್ಲಿ ಎದುರಾದ ಎಲ್ಲಾ ಬಗೆಯ ಪ್ರತಿರೋಧಗಳನ್ನು ದಮನ ಮಾಡುವವರೆಗೆ
ಚೀನಾ ಅದೇ ಧೋರಣೆಯನ್ನು ಮೆರೆಯಿತು. ಈ ಕ್ರೀಡಾಕೂಟ ನಡೆಸುವ ತಮ್ಮ
ದ್ಯೇಯಕ್ಕೆ ಅಡ್ಡಿಯಾಗುವ ಯಾರನ್ನೂ, ಯಾವುದನ್ನೂ ಸಾವಿರಾರು ಸಾವು-
ನೋವಾದರೂ ಸೈ ಬಗ್ಗುಬಡಿಯದೇ ಬಿಡುವುದಿಲ್ಲ ಎಂಬಂತಹ ಚೀನಾದ
ಹಠಮಾರಿತನವನ್ನಷ್ಟೇ ಅಲ್ಲದೆ, ಈ ವರ್ತನೆ ಬದಲಾವಣೆಯ ಭ್ರಮೆಯ ಹೊರತಾಗಿಯೂ
ಚೀನಾದ ಆಂತರ್ಯದಲ್ಲಿ ಇಂದಿಗೂ, ತಿಯನನ್‌ಮನ್ ಸ್ಕ್ವೇರ್ ಹತ್ಯಾಕಾಂಡದ
ಕಾಲದ ಸರ್ವಾಧಿಕಾರಿ ಧೋರಣೆ ಬದಲಾಗಿಯೇ ಇಲ್ಲ ಎಂಬುದಕ್ಕೂ ಸಾಕ್ಷಿಯಾಗಿದೆ.
ಒಲಿಂಪಿಕ್ಸ್‌ಗೆ ಪ್ರವೇಶ ಪಡೆದಾಗ ಚೀನಾ
ಆಡಳಿತಕ್ಕೆ ವಿಧಿಸಿದ್ದ ಷರತ್ತುಗಳಲ್ಲಿ ಪ್ರಮುಖವಾದದ್ದು ಅಲ್ಲಿನ ಮಾನವ
ಹಕ್ಕುಗಳ ಪರಿಸ್ಥಿತಿಯನ್ನು ಸುಧಾರಿಸಬೇಕು ಎಂಬುದಾಗಿತ್ತು. ಆದರೆ, ಮಾನವ
ಹಕ್ಕುಗಳಿಗಾಗಿ ಹೋರಾಡುತ್ತಿರುವ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆಯ
ಪ್ರಕಾರ, ಚೀನಾದಲ್ಲಿ ಒಲಿಂಪಿಕ್ಸ್ ಸಂಬಂಧ ನಡೆದಿರುವ ಪ್ರತಿರೋಧಗಳನ್ನು
ಸರ್ಕಾರ ಹತ್ತಿಕ್ಕಿರುವ ರೀತಿ ಇಡೀ ಕ್ರೀಡಾಕೂಟದ ಚರಿತ್ರೆಗೇ
ಕಳಂಕವಾಗಿವೆ. ಇದು ನಿಜವಾಗಿಯೂ ಚಿಂತಿಗೀಡುಮಾಡಬೇಕಾದ ಸಂಗತಿ. ಈ ವರದಿಯ
ವಿವರಗಳನ್ನು ಅರಿಯದಿದ್ದರೂ, ಇತ್ತೀಚೆಗೆ ಟಿಬೆಟ್‌ನ ಹೋರಾಟಗಾರರ ಮೇಲೆ
ಅವರ ನೆಲದಲ್ಲೇ ಚೀನಾ ನಡೆಸಿದ ಪೈಶಾಚಿಕ ಕೃತ್ಯಗಳ ದೃಶ್ಯಾವಳಿಗಳನ್ನು
ಕಾಣದೇ ಇರುವವರು ವಿರಳ. ಚೀನಾ ತನ್ನ ಲ್ಹಸಾಕಿಂಗ್‌ಶಾಯ್ ರೈಲು ಜಾಲವನ್ನು
ಜಗತ್ತಿನ ಎಂಜಿನಿಯರಿಂಗ್ ಅದ್ಭುತಗಳಲ್ಲಿ ಒಂದಾಗಿಸಿದೆ ಎಂಬುದರಲ್ಲಿ
ಯಾವುದೇ ಅನುಮಾನವಿಲ್ಲ. ಆದರೆ, ಆ ರೈಲು ಜಾಲ ಟಿಬೆಟ್‌ನಲ್ಲಿ ಗಮನಾರ್ಹ
ಭೌಗೋಳಿಕ ಬದಲಾವಣೆಗಳನ್ನು ತರುವ ಮೂಲಕ ಅದರ ಮೇಲೆ ಸಂಪೂರ್ಣ ಹಿಡಿತ
ಸಾಧಿಸುವ ಒಂದು ಪ್ರಯತ್ನ ಎಂಬುದನ್ನು ಟಿಬೆಟಿಯನ್ನರು ಅರಿಯದೇ ಇಲ್ಲ.
ಲಕ್ಷಾಂತರ ಮಂದಿ ಚೀನಾ ಬುಡಕಟ್ಟು ಜನರನ್ನು ಟಿಬೆಟ್‌ಗೆ ವಲಸೆ ಹೋಗುವಂತೆ
ಮಾಡುವ ಮೂಲಕ ಅಲ್ಲಿನ ಬೌದ್ಧಮತವನ್ನು ಹಾಡುಮಾಡುವ ತೀರಾ ಉದ್ದೇಶಿತ
ಕಾರ್ಯತಂತ್ರ ಅದರಲ್ಲಡಗಿದೆ ಎಂಬುದು ಟಿಬೆಟಿಯನ್ನರ ಗ್ರಹಿಕೆ.
ಆದರೆ, ಟಿಬೆಟಿನ ನಾಗರಿಕರು ಮತ್ತು
ಬೌದ್ಧಭಿಕ್ಷುಗಳನ್ನು ಚೀನಾ ತೀರಾ ಕ್ರೂರ ಸೇನೆಯನ್ನು ಬಳಸಿ ದಮನ
ಮಾಡಿದನ್ನು ಇಡೀ ಜಗತ್ತೇ ಮೂಕಸಾಕ್ಷಿಯಾಗಿ ಕಂಡಿದೆ. ಇಷ್ಟೇ ಅಲ್ಲ,
ಬೀಜಿಂಗ್ ಒಲಿಂಪಿಕ್ಸ್ ಇಡೀ ಜಗತ್ತಿನಲ್ಲೇ ಯಾವ ಒಲಿಂಪಿಕ್ಸ್‌ನಲ್ಲೂ
ನಡೆಯದ `ಮಾಧ್ಯಮದ
ಮೇಲಿನ ಕಣ್ಗಾವಲಿಗೂ`
ಸಾಕ್ಷಿಯಾಗಲಿದೆ. ಜಗತ್ತಿನ್ನೆಲೆಡೆ ಈವರೆಗೆ ಒಲಿಂಪಿಕ್ಸ್ ಎಂದರೆ, ಅದು
ನಡೆಯುತ್ತಿರುವ ದೇಶದ ಬಗ್ಗೆ ತಿಳಿದುಕೊಳ್ಳಲು ಇಡೀ ಜಗತ್ತಿಗೆ ಒಂದು
ಅವಕಾಶವಾಗಿರುತ್ತಿತ್ತು. ಹಾಗಾಗಿ ಒಲಿಂಪಿಕ್ಸ್ ಎಂದರೆ ಕೇವಲ
ಕ್ರೀಡೆಯಾಗಿರಲಿಲ್ಲ. ಆದರೆ, ಈ ಬಾರಿ ವಿದೇಶಿ ಮಾಧ್ಯಮದ ಮಂದಿಯ
ಚಲನವಲನಗಳನ್ನು ನಿರ್ಬಂಧಿಸಲಾಗುವುದು ಎಂಬ ವರದಿಗಳು ಈಗಾಗಲೇ
ಕೇಳಿಬರತೊಡಗಿವೆ. ಚೀನಾ ಇತರ ಜಗತ್ತಿನಿಂದ ಮುಚ್ಚಿಡುವಂತಹದ್ದು
ಸಾಕಷ್ಟಿದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ, ಸ್ವಾತಂತ್ರ್ಯ
ಮತ್ತು ಮುಕ್ತತೆಯ ಮಹಾ ಸಂಕೇತವಾಗಿರುವ ಒಲಿಂಪಿಕ್ಸ್ ವೇಳೆ ಮಾಧ್ಯಮಗಳಿಗೆ
ಕಡಿವಾಣ ಹಾಕುವುದೆಂದರೆ ತೀರಾ ಕೆಟ್ಟದ್ದು. ಹಾಗಾಗಿ ಕಮ್ಯುನಿಸ್ಟ್
ಚೀನಾದಲ್ಲಿ ಒಲಿಂಪಿಕ್ಸ್ ನೆಪದಲ್ಲಾದರೂ ಇನ್ನಷ್ಟು ಮುಕ್ತ ವಾತಾವರಣ
ಕಾಣಬಹುದೇನೊ ಎಂದುಕೊಂಡವರಿಗೆ ನಿರಾಶೆಯಾಗಿದೆ.
ಇದೆಲ್ಲಕ್ಕಿಂತ ಮಿಗಿಲಾಗಿ, ಕೆನಡಾ ಮೂಲದ
ಪ್ರೋಬ್ ಇಂಟರ್‌ನ್ಯಾಷನಲ್ ಎಂಬ ಸಂಸ್ಥೆಯ ಇತ್ತೀಚಿನ ವರದಿ, ಬೀಜಿಂಗ್
ಸದ್ಯದಲ್ಲೇ ತೀರಾ ಭೀಕರವಾದ ನೀರಿನ ಕ್ಷಾಮವನ್ನು ಎದುರಿಸಲಿದೆ ಎಂದಿದೆ.
ಅಲ್ಲಿ ಲಭ್ಯವಿದ್ದ ಅಂತರ್ಜಲದ ಮೂರನೇ ಒಂದು ಭಾಗವನ್ನು ಸಂಪೂರ್ಣವಾಗಿ
ಒಲಿಂಪಿಕ್ಸ್ ಸಂಬಂಧದ ನಿರ್ಮಾಣ ಕಾರ್ಯಗಳಿಗೇ ಬಳಸಿರುವುದೇ ಇದಕ್ಕೆ ಕಾರಣ
ಎಂದು ಆ ವರದಿ ಹೇಳಿದೆ. ಜೊತೆಗೆ ಬೀಜಿಂಗ್ ಮೇಲೆ ಭಾರೀ ಪ್ರಮಾಣದ ದೂಳಿನ
ಮೋಡಗಳು ಆವರಿಸಿರುವ ಬಗ್ಗೆ ಕೆಲವು ಖ್ಯಾತ ಕ್ರೀಡಾಪಟುಗಳೇ ಆತಂಕ
ವ್ಯಕ್ತಪಡಿಸಿದ್ದಾರೆ. ಕಡಿಮೆ ವೆಚ್ಚದ ಉತ್ಪನ್ನಗಳ ತಯಾರಿಕೆಯ ಮೋಹದಲ್ಲಿ
ಪರಿಸರ ನಿಯಮಗಳನ್ನೆಲ್ಲಾ ಗಾಳಿಗೆ ತೂರಿದರೆ ಏನಾಗುತ್ತದೆ ಎಂಬುದಕ್ಕೆ
ಇದೊಂದು ನಿದರ್ಶನವಷ್ಟೆ. ಹಾಗೇ ಅಪಾಯಕಾರಿ ಪ್ರಮಾಣದಲ್ಲಿ ಶೇಖರವಾಗಿರುವ
ದೂಳಿನ ಮೋಡಗಳು ಚೀನಾದ ಕಾರ್ಖಾನೆಗಳಲ್ಲಿ ಚಾಲ್ತಿಯಲ್ಲಿರುವ ತೀರಾ
ಅನಾರೋಗ್ಯಕರ ಉದ್ಯೋಗ ಸ್ಥಳದ ವಾತಾವರಣಕ್ಕೂ ಸಾಕ್ಷಿಯಾಗಿವೆ. ಹಾಗೇ
ಒಲಿಂಪಿಕ್ಸ್ ಸಂಬಂಧಿ ನಿರ್ಮಾಣ ಚಟುವಟಿಕೆಗಳ ಕಚ್ಛಾವಸ್ತುವಿನ ಅಗಾಧ
ಬೇಡಿಕೆಯನ್ನು ಸರಿಗಟ್ಟುವ ಧಾವಂತದಲ್ಲಿ ಆಫ್ರಿಕಾದ
ಯುದ್ಧಪಿಪಾಸುಗಳೊಂದಿಗೆ ಕೈಜೋಡಿಸಿದ ಚೀನಾ, ಇಂಧನ ಮತ್ತು ಖನಿಜಕ್ಕೆ
ಬದಲಾಗಿ ಅವರಿಗೆ ಶಸ್ತ್ರಾಸ್ತ್ರ ಸರಬರಾಜು ಮಾಡಿ ಮತ್ತಷ್ಟು ಪ್ರಮಾದ
ಎಸಗಿತು.
ಅದಕ್ಕಿಂತ ದುರಂತದ ಸಂಗತಿಯೆಂದರೆ, ಇಡೀ
ಜಗತ್ತಿನ ಪಾಲಿಗೆ ಕ್ರೀಡೆ ಎಂಬುದು ಆಸಕ್ತಿಯ ವಿಷಯವಾಗಿದ್ದರೆ,
ಚೀನಾದಲ್ಲಿ ಮಾತ್ರ ಚಿಕ್ಕಪುಟ್ಟ ಮಕ್ಕಳನ್ನೆಲ್ಲಾ ಒತ್ತಾಯಪೂರ್ವಕವಾಗಿ
ಒಂದಲ್ಲಾ ಒಂದು ಆಟೋಟಕ್ಕೆ ತಳ್ಳಿ, ಇತರಲ್ಲಾ ಆಸಕ್ತಿಗಳಿಂದ
ವಿಮುಖರನ್ನಾಗಿ ಮಾಡಲಾಗುತ್ತಿದೆ. ತೀರಾ ಕಠಿಣ ತರಬೇತಿಯ ಮೂಲಕ ಹೇಗಾದರೂ
ಮಾಡಿ ಅವರಲ್ಲಾ ಒಲಿಂಪಿಕ್ಸ್‌ನಲ್ಲಿ ಚಿನ್ನ ಬಾಚಬೇಕು ಎಂದು ಇಡೀ ದೇಶ
ಹಠಕ್ಕೆ ಬಿದ್ದಂತಿದೆ. ಹಾಗಾಗಿ ಚೀನಾದ ಬಹುತೇಕ ಮಂದಿ ತಮ್ಮ ಎದೆಯಾಳದಲ್ಲಿ
ಭೀತಿಯನ್ನು ಹಿಡಿದಿಟ್ಟುಕೊಂಡೇ ಒಲಿಂಪಿಕ್ಸ್ ಅಂಗಳಕ್ಕಿಳಿಯಬಹುದು.
ಏಕೆಂದರೆ, ಒಂದು ವೇಳೆ ಕ್ರೀಡೆಯಲ್ಲಿ ತಾವು ಸೋತರೆ ತಮಗೆ ಮತ್ತು ತಮ್ಮ
ಕುಟುಂಬಗಳಿಗೆ ಏನಾಗಬಹುದು ಎಂಬ ಆತಂಕ ಈಗಲೇ ಅವರಲ್ಲಿ ಮನೆಮಾಡಿದೆ.
ಇಷ್ಟೆಲ್ಲಾ ಸಾಲದು ಎಂಬಂತೆ, ಚೀನಾ ತನ್ನ
ಜಾಗತಿಕ ರಾಜಕೀಯದ ಒಂದು ಭಾಗವಾಗಿ ಒಲಿಂಪಿಕ್ಸ್‌ನಂತಹ ಶ್ರೇಷ್ಠ
ಕ್ರೀಡಾಕೂಟವನ್ನೂ ಬಳಸಿಕೊಳ್ಳಲು ಜಿದ್ದಿಗೆ ಬಿದ್ದಂತೆ
ಪ್ರಯತ್ನಿಸುತ್ತಿದೆ. ಅದರಲ್ಲಿ ಅವರು ಯಶಸ್ವಿಯಾದರೆ, ತಮ್ಮ
ಸರ್ವಾಧಿಕಾರವೇ ಸಮಂಜಸ ಎಂಬ ಧೋರಣೆಯಲ್ಲಿ ಈವರೆಗೆ ಏನೆಲ್ಲಾ ಮಾಡಿದ್ದಾರೋ
ಅದೆಲ್ಲದರೊಂದಿಗೆ ಮತ್ತೆ ಮುಂದುವರಿಯಲು ಅವರಿಗೆ ಇನ್ನಿಲ್ಲದ ಹುಮ್ಮಸ್ಸು
ತರಬಹುದು. ಹಾಗೇನಾದರೂ ಆದಲ್ಲಿ, ಕ್ರೀಡಾ ಇತಿಹಾಸದಲ್ಲೇ ಅತ್ಯಂತ
ದುರಾದೃಷ್ಟಕರ ಘಟನೆಯಾಗಿ ಬೀಜಿಂಗ್ ಒಲಿಂಪಿಕ್ಸ್ ಚರಿತ್ರೆಯ ಪುಟ
ಸೇರಲಿದೆ!!!
|