ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಮುಖಪುಟ ಲೇಖನ
ರಕ್ಷಣಾಪಡೆ ವಿಶೇಷಾಂಕ :  ಭಾರತೀಯ ನೌಕಾಪಡೆ 
 
ಅಜೇಯ 'ಐಎನ್‌ಎಸ್ ಮುಂಬೈ'
 

ವಿಶಿಷ್ಟ ತಂತ್ರಜ್ಞಾನಗಳಿಂದ ಕೂಡಿದ ಭಾರತೀಯ ನೌಕಾಪಡೆಯ ಅತ್ಯಂತ ದೊಡ್ಡ ಹಾಗೂ ಬಲಶಾಲಿ ಕ್ಷಿಪಣಿ ವಿನಾಶಕ ಸಮರ ನೌಕೆಯತ್ತ ನೋಟ ಹರಿಸಿದ್ದಾರೆ ಪ್ರಿಯಾಂಕ ರಾಯ್. ಚಿತ್ರಗಳು: ಸಂಜಯ್ ಸೋಲಂಕಿ
 

ಆ ಅದ್ಭುತ ದೃಶ್ಯ ನೋಡುವ ಕ್ಷಣ ಕೊನೆಗೂ ಕೂಡಿಬಂದಿತ್ತು. ಭಾರತದ ನೌಕಾಪಡೆಯ ಅತ್ಯಂತ ಬಲಶಾಲಿ ಹಾಗೂ ಅತಿದೊಡ್ಡ ಕ್ಷಿಪಣಿ ವಿನಾಶಕ ಸಮರ ನೌಕೆ ದೆಹಲಿ ಕ್ಲಾಸ್ 'ಐಎನ್‌ಎಸ್ ಮುಂಬೈ' ನೇರ ದೃಷ್ಟಿಯಿಂದ ನೋಡತೊಡಗಿದೆ. ವೈರಿಪಡೆಯನ್ನು ಒಂದೇ ಏಟಿಗೆ ಹತ್ತಿಕ್ಕುವಂಥ ವಿಶಿಷ್ಟ ತಂತ್ರಜ್ಞಾನಗಳನ್ನೊಂಡ ಸಮರ ನೌಕೆ ಇದು ಎಂಬುದು ಆ ನೋಟಕ್ಕೆ ಸ್ಪಷ್ಟವಾಗಿತ್ತು.

ಭಾರತದ ನೌಕಾಪಡೆಗೆ 2001ರಲ್ಲಿ ನಿಯೋಜಿತಗೊಂಡ ದೆಹಲಿ ಕ್ಲಾಸ್ 'ಐಎನ್‌ಎಸ್ ಮುಂಬೈ' ನಾನು ಮೊದಲ ಬಾರಿ ಹತ್ತಿರದಿಂದ ನೋಡಿದ ಸಮರ ನೌಕೆ. ನೋಡನೋಡುತ್ತಲೇ ಒಂದು ಕ್ಷಣಕ್ಕೆ ನಿಬ್ಬೆರಗಾಗಿದ್ದೆ. ಬಹುತೇಕ ಸಂದರ್ಭದಲ್ಲಿ ಕ್ಷಿಪಣಿ ವಿನಾಶಕ ಸಮರ ನೌಕೆಗಳನ್ನು ಚಿತ್ರ ಮಂದಿರಗಳಲ್ಲಿ ನೋಡಿದ್ದು ಬಿಟ್ಟರೆ, ಪ್ರತ್ಯಕ್ಷವಾಗಿ ಕಾಣುವ ಸಂದರ್ಭ ಒದಗಿ ಬರುವುದು ತೀರಾ ಅಪರೂಪ. ಇಷ್ಟೆಲ್ಲಾ ಹಿನ್ನೆಲೆ ಹಾಗೂ ಐಎನ್‌ಎಸ್ ಬಗ್ಗೆ ತಿಳಿದಿದ್ದ ನನಗೆ 6,700 ಟನ್ ಭಾರ ಹೊರುವ ಸಾಮರ್ಥ್ಯದ 'ಐಎನ್‌ಎಸ್ ಮುಂಬೈ'ಯನ್ನು ಪ್ರತ್ಯಕ್ಷ ಕಂಡಾಗ ಉಸಿರುಬಿಗಿ ಹಿಡಿದಂತೆ ಆದದ್ದು ಮಾತ್ರ ನಿಜ.

ಭಾರತದಲ್ಲೇ ವಿನ್ಯಾಸಗೊಂಡು ಮುಂಬೈನ ಮಝಗಾಂವ್ ಡಾಕ್ಸ್ ಲಿಮಿಟೆಡ್ ವತಿಯಿಂದ ನಿರ್ಮಾಣಗೊಂಡ 'ಐಎನ್‌ಎಸ್ ಮುಂಬೈ', ಶೇಕಡಾ 70ಕ್ಕಿಂತಲೂ ಅಧಿಕ ದೇಸಿ ಬಿಡಿಭಾಗಗಳಿಂದಲೇ ರೂಪುಗೊಂಡಿದೆ. ಬಂದರು ನಗರಿ ಹಾಗೂ ಅಲ್ಲಿನ ಜನತೆಗೆ ಗೌರವ ಸೂಚಿಸುವ ಉದ್ದೇಶದಿಂದ ನೌಕೆಗೆ 'ಐಎನ್‌ಎಸ್ ಮುಂಬೈ' ಎಂದು ಹೆಸರಿಡಲಾಯಿತು. ಹಾಗೇ ಮಾರ್ಷಲ್ ಪರಂಪರೆ ಮತ್ತು ಮರಾಠರ ಸಾಧನೆಗಳನ್ನು ಬಿಂಬಿಸುವ ಉದ್ದೇಶದಿಂದ ನೌಕಾಪಡೆ 'ಐಎನ್‌ಎಸ್ ಮುಂಬೈ'ಯನ್ನು ಭಾರತೀಯ ಸೇನೆಯ 'ಮರಾಠ ಲೈಟ್ ಇನ್‌ಫೆಂಟ್ರಿ ರೆಜಿಮೆಂಟ್'ಗೆ ಸಂಯೋಜಿಸಲು ನಿರ್ಧರಿಸಿತ್ತು. ಆ ಮೂಲಕ ಮರಾಠರ ಸಾಹಸ ಮತ್ತು ಯುದ್ಧಗಾಥೆಗಳಿಗೆ ಗೌರವ ಸಮರ್ಪಿಸುವ ಉದ್ದೇಶದಿಂದ ಈ ಐತಿಹಾಸಿಕ ಸಂಯೋಜನೆ ಮಾಡಲಾಗಿದೆ.

30 ಮಂದಿ ಆಫೀಸರ್‌ಗಳ ಒಂದು ತಂಡ ಹಾಗೂ 300 ಮಂದಿ ನಾವಿಕರು ಈ ಸಮರ ನೌಕೆಯಲ್ಲಿ ಬಿಡುವಿಲ್ಲದೆ ದುಡಿಯುತ್ತಿದ್ದಾರೆ. ಸಮರ ನೌಕೆ ಏರಿದ ಒಂದು ಗಂಟೆಯ ಬಳಿಕ ನೌಕೆ ಸಂಪೂರ್ಣ ಶಸ್ತ್ರಾಸ್ತ್ರಗಳಿಂದ ಸಜ್ಜುಗೊಂಡಿದ್ದು ಒಂದು ತುದಿಯಿಂದ ಮತ್ತೊಂದು ತುದಿವರೆಗೆ ಕ್ಷಿಪಣಿಗಳ ಸರಣಿಯೇ ಇದೆ ಎಂಬುದು ಸ್ಪಷ್ಟವಾಯಿತು. ಯಾವ ಕ್ಷಣದಲ್ಲಿ ಕೂಡ ಶರವೇಗದಲ್ಲಿ ವೈರಿಪಡೆಯನ್ನು ಹತ್ತಿಕ್ಕಲು ಸಿದ್ಧವಾದಂತಿವೆ ಆ ಶಸ್ತ್ರಾಸ್ತ್ರಗಳು. ಇದರ ಜೊತೆಗೆ 100 ಎಂಎಂ ಗನ್, ನಾಲ್ಕು 300 ಎಂಎಂ ಗ್ಯಾಟ್ಲಿಂಗ್ ಗನ್‌ಗಳು, ಟೋರ್ಪೆಡೊಸ್, ಆಂಟಿ-ಸಬ್‌ಮೆರಿನ್ ರಾಕೆಟ್ ಹಾಗೂ ಚ್ಯಾಫ್ ಡಿಕಾಯ್‌ಗಳು ಕೂಡ ಸಮರ ಸನ್ನದ್ಧವಾಗಿವೆ. ಆಧುನಿಕ ರೆಡಾರ್‌ಗಳು, ಸೋನಾರ್‍ಸ್ ಹಾಗೂ ಎಲೆಕ್ಟ್ರಾನಿಕ್ ಶಸ್ತ್ರಾಸ್ತ್ರಗಳು ಕೂಡ ನೌಕೆಯಲ್ಲಿವೆ.

ಐಎನ್‌ಎಸ್ ಮುಂಬೈನ ಮತ್ತೊಂದು ವೈಶಿಷ್ಟ್ಯವೆಂದರೆ ಏಕಕಾಲದಲ್ಲಿ ಎರಡು ದೇಶೀಯ ಅತ್ಯಾಧುನಿಕ ಲಘು ಯುದ್ಧ ಹೆಲಿಕಾಪ್ಟರ್‌ಗಳನ್ನು ಕೊಂಡೊಯ್ಯುವ ಸಾಮರ್ಥ್ಯ. ಎದುರಾಳಿ ಕ್ಷಿಪಣಿಗಳನ್ನು ಧ್ವಂಸಗೈಯುವ ಕ್ಷಿಪಣಿ ವಿನಾಶಕಗಳಿಂದ ಕೂಡಿದ ಯುದ್ಧ ಹೆಲಿಕಾಪ್ಟರ್ ಹಾಗೂ ಸಕಲ ವಿನಾಶಕಾರಿ ಶಸ್ತ್ರಾಸ್ತ್ರಗಳನ್ನು ತನ್ನ ಮಡಿಲಲ್ಲಿಟ್ಟುಕೊಂಡು ಎಂತಹ ಸಮಯದಲ್ಲೂ ಹೋರಾಟಕ್ಕೆ ಅಣಿಯಾಗಿರುವ ಸಮರ್ಥ ಸಮುದ್ರ ಸಮರ ನೌಕೆ ಎಂಬ ಖ್ಯಾತಿಯೊಂದಿಗೆ ಐಎನ್‌ಎಸ್ ಮುಂಬೈ ಸೋಲಿಲ್ಲದ ಸರದಾರನೆನಿಸಿಕೊಂಡಿದೆ. ನಾನು ಅಜೇಯ ಎಂಬ ತನ್ನ ಧ್ಯೇಯ ವಾಕ್ಯವನ್ನು ವಿರೋಧಿ ಪಡೆಗೆ ಸ್ಪಷ್ಟಪಡಿಸುತ್ತಲೇ ಇದೆ.

ಜಗತ್ತಿನ ಕಡಲ ತಡಿಯ ಮೋಜಿನ ತಾಣಗಳಲ್ಲಿ ಒಂದಾದ ಮತ್ತು ದೇಶದ ಆರ್ಥಿಕ ಚಟುವಟಿಕೆಗಳ ರಾಜಧಾನಿಯಾದ ಮುಂಬೈ ಹೆಸರನ್ನು ಹೊತ್ತಿರುವುದು ಇದೇ ಮೊದಲ ಯುದ್ಧನೌಕೆಯಲ್ಲ. 1739ರಲ್ಲಿ 'ಬಾಂಬೆ ಡಕ್'ನಲ್ಲಿ ನಿರ್ಮಾಣ ಮಾಡಿದ್ದ 'ಕಂಪನಿ'ಗೆ ಸೇರಿದ್ದ ನೌಕೆಯೊಂದಕ್ಕೆ ಅಂದಿನ ಬಾಂಬೆಯ ಗವರ್ನರ್ 'ಬಾಂಬೆ' ಎಂದೇ ಹೆಸರಿಟ್ಟಿದ್ದರು. ಇತ್ತೀಚಿನ ಮತ್ತೊಂದು ಅದೇ ಹೆಸರಿನ ನೌಕೆಯೆಂದರೆ, 1942ರಲ್ಲಿ ಸೇವೆ ಆರಂಭಿಸಿದ 'ಎಚ್‌ಎಂಐಎಸ್ ಬಾಂಬೆ' ಎಂಬ 733 ಟನ್ ನೆಲಬಾಂಬ್ ಸ್ಫೋಟಕ ಸಾಮರ್ಥ್ಯದ ನೌಕೆ. ನಂತರ ಅದನ್ನು ಐಎನ್‌ಎಸ್ ಬಾಂಬೆ ಎಂದು ಮರುನಾಮಕರಣ ಮಾಡಲಾಯಿತು. ಅದು ಜನವರಿ 26, 1950ರವರೆಗೂ ಸೇವೆಯಲ್ಲಿತ್ತು ಎನ್ನುತ್ತಾರೆ ಐಎನ್‌ಎಸ್ ಮುಂಬೈನ ಕಮಾಂಡರ್.

ಹಲವಾರು ಸಾಧನಗಾಥೆಗಳನ್ನು ತನ್ನ ಮುಡಿಗೇರಿಸಿಕೊಂಡಿರುವ ಐಎನ್‌ಎಸ್ ಮುಂಬೈ ತನ್ನ ಆಪರೇಷನ್ ಸುಕೂನ್ ಹಾಗೂ ಐಬಿಎಸ್‌ಎಎಂಎಆರ್ ಪ್ರಯೋಗದಿಂದ ಜನಪ್ರಿಯತೆ ಪಡೆದಿದೆ. ಆಪರೇಷನ್ ಸುಕೂನ್ ಎಂಬುದು ಯುದ್ಧಪೀಡಿತ ಲೆಬನಾನ್‌ನಿಂದ ಭಾರತೀಯರು ಮತ್ತು ಅದರ ಉಪಖಂಡಗಳ ಸುಮಾರು 2000ಕ್ಕಿಂತಲೂ ಹೆಚ್ಚು ನಾಗರಿಕರನ್ನು ಸ್ಥಳಾಂತರಗೊಳಿಸಿದ ಒಂದು ಮಹತ್ತರ ಕಾರ್ಯಾಚರಣೆ ಆಗಿತ್ತು.

'ಐಬಿಎಸ್‌ಎಎಂಎಆರ್' ಎಂಬುದು 3 ದೇಶಗಳ ನಡುವಿನ ಬಾಂಧವ್ಯ ವೃದ್ಧಿಗೆ ಮುನ್ನುಡಿ ಬರೆದ ಪ್ರಯೋಗ. ಭಾರತ, ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾ (ಐಬಿಎಸ್‌ಎ) ರಾಷ್ಟ್ರಗಳ ನೌಕಾಪಡೆಗಳು ಒಟ್ಟಾಗಿ ಕಾರ್ಯನಿರ್ವಹಿಸಲು ಮತ್ತು ತಮ್ಮ ನಡುವಿನ ಬಾಂಧವ್ಯ ಹಾಗೂ ಸಹಕಾರ ವೃದ್ಧಿಗೆ ಮುನ್ನುಡಿ ಬರೆದ ಪ್ರಯೋಗ ಎಂದು ಖ್ಯಾತಿ ಪಡೆದಿದೆ. ದಕ್ಷಿಣ ಅಟ್ಲಾಂಟಿಕ್ ಸಾಗರದ ಸೈಮನ್ಸ್ ಟೌನ್ ಹಾಗೂ ಕೇಪ್ ಟೌನ್‌ನಲ್ಲಿ 200೮ ಮೇ 2ರಿಂದ 16ರವರೆಗೆ 3 ದೇಶಗಳ ನಡುವೆ ಪ್ರಯೋಗಾಭ್ಯಾಸಗಳು ನಡೆದಿದ್ದವು. 3 ದೇಶಗಳ ನೌಕಾಪಡೆಗೆ ಸಂಬಂಧಿಸಿದ ಸಮರ ನೌಕೆಗಳು ಮೂಲ ಕಾರ್ಯಾಚರಣೆಗಳಿಂದ ಹಿಡಿದು ಅತ್ಯಂತ ಸುಧಾರಿತ ಸಮರಾಭ್ಯಾಸಗಳನ್ನು ಜಂಟಿಯಾಗಿ ನಡೆಸಿದ್ದವು. 'ಐಎನ್‌ಎಸ್ ಕಾರ್ಮುಕ್' ಜೊತೆ 'ಐಎನ್‌ಎಸ್ ಮುಂಬೈ' ಸಮರ ನೌಕೆ ಭಾರತವನ್ನು ಪ್ರತಿನಿಧಿಸಿದ ಪ್ರಸಿದ್ಧಿಗೆ ಪಾತ್ರವಾಯಿತು.

ಭಾರತದ ರಾಯಭಾರಿಗಳಂತೆ ನಾವು ನಮ್ಮ ದೇಶವನ್ನು ವಿಶ್ವದೆಲ್ಲೆಡೆ ಪ್ರತಿನಿಧಿಸುತ್ತಿರುವುದರಿಂದ ಇತರ ಬಂದರುಗಳಿಗೆ ತಲುಪುತ್ತಿದ್ದಂತೆಯೇ ಅಲ್ಲಿನ ಜನರ ಸಂತಸದ ಸ್ವಾಗತವೇ ದೊರಕುತ್ತದೆ. ಒಮ್ಮೆ ನಾವು ಮಾರಿಷಸ್‌ನಲ್ಲಿದ್ದಾಗ ಅಲ್ಲಿನ ಹಲವಾರು ಮಂದಿ, ನಮ್ಮ ನೌಕೆಯ ತಳಭಾಗವನ್ನು ಸ್ಪರ್ಶಿಸಿದ್ದರು. ಮಾತ್ರವಲ್ಲ ನೀವು ನಿಮ್ಮ ತಾಯ್ನಾಡಿನ ಮಣ್ಣನ್ನು ಜೊತೆಗೆ ತಂದಿದ್ದೀರಿ ('ಆಪ್ ವತನ್ ಕಿ ಮಿಟ್ಟಿ ಸಾಥ್ ಲಾಯೆ ಹೇ') ಎಂದು ಹೇಳುತ್ತಾ ಕಂಬನಿ ಸುರಿಸಿದ್ದರು ಎಂದು ನೌಕಾಪಡೆಯ ಸಂಪರ್ಕ ಅಧಿಕಾರಿ ಹಿತೇಶ್ ಗೋಯೆಲ್ ಟಿಎಸ್‌ಐ ಜೊತೆ ಸಂತಸ ಹಂಚಿಕೊಂಡರು.

ನೌಕಾಪಡೆಯ ಮಂದಿಯಲ್ಲಿ ಸದಾ ಸಂತಸದ ನಗೆ ಎದ್ದು ಕಾಣುತ್ತದೆ ಎಂದು ಅಂದುಕೊಂಡರೆ ಅದು ತಪ್ಪಾಗಬಹುದೇನೋ. ಏಕೆಂದರೆ ಈಗ ಸ್ಥಿತಿ ಮೊದಲಿದ್ದಂತಿಲ್ಲ. ಸೇನಾ ಪಡೆಯ ವ್ಯಕ್ತಿಗಳು ಎಂದರೆ ಹಿಂದೆ ಅತ್ಯಂತ ಗೌರವಾನ್ವಿತ ವ್ಯಕ್ತಿಗಳು ಎಂಬ ಭಾವನೆಯಿತ್ತು. ಆದರೆ ಪರಿಸ್ಥಿತಿ ಇಂದು ವ್ಯತಿರಿಕ್ತವಾಗಿದೆ. ಸೇನಾಪಡೆಯ ಸಮವಸ್ತ್ರಧಾರಿಗೆ ನೀಡುತ್ತಿದ್ದ ಗೌರವ, ಪ್ರಶಂಸೆಗಳೆಲ್ಲಾ ಇಂದು ಕಾಣುವುದೇ ಇಲ್ಲ ಎಂದು ಖೇದ ವ್ಯಕ್ತಪಡಿಸುತ್ತಾರೆ ಹಿತೇಶ್.

ನಂತರ ಐಎನ್‌ಎಸ್ ಮುಂಬೈನ ದಕ್ಕೆಯ ಬಳಿ ನಿಂತಿದ್ದ ಸಂದರ್ಭದಲ್ಲಿ ಯುವ ಅಧಿಕಾರಿ ಒಬ್ಬರು ತನ್ನ ಕೆಲಸದ ಬಗ್ಗೆ ವಿವರಿಸುತ್ತಾ, ನನ್ನ ಕೆಲಸವನ್ನು ತುಂಬಾ ಪ್ರೀತಿಸುತ್ತೇನೆ. ನೌಕಾಪಡೆಗೆ ಸೇರಿದ ಬಳಿಕ ನಾನು ವಿವಾಹ ಕೂಡ ಆದೆ. ಈಗ ಕುಟುಂಬ ನೋಡಿಕೊಳ್ಳುವ ಜವಾಬ್ದಾರಿ ಕೂಡ ನನ್ನ ಹೆಗಲಮೇಲಿದ್ದು, ದಿನದಿಂದ ದಿನಕ್ಕೆ ಬದುಕು ಹೊರೆಯಾಗುತ್ತಿದೆಯೇನೋ ಎಂದು ಅನಿಸುತ್ತಿದೆ. ಮೊದಲೆಲ್ಲಾ ಅತ್ಯಂತ ಉಲ್ಲಸಿತನಾಗಿ ಕಾರ್ಯಮಗ್ನನಾಗುತ್ತಿದ್ದೆ. ಆದರೆ, ಇದೀಗ ಈ ಕೆಲಸ ಅವಿವಾಹಿತರಿಗೆ ಸರಿ ಎನಿಸುತ್ತಿದೆ ಎನ್ನುತ್ತಾರೆ. ಮೂವತ್ತರ ಹರೆಯದ ಆತನ ಸಹೋದ್ಯೋಗಿ ಮಾತಿಗಿಳಿದು, ಇಂದಿನ ಯುವ ಜನತೆ ಸೇನಾ ಪಡೆಯಲ್ಲಿ ಕಾರ್ಯನಿರ್ವಹಿಸಲು ಆಸಕ್ತಿ ತೋರುತ್ತಿಲ್ಲ. ಹಾಗಾಗಿ ಯುವಜನತೆಯನ್ನು ಸೇನಾಪಡೆಗೆ ಆಕರ್ಷಿತರಾಗುವಂತೆ ಮಾಡಲು ಏನಾದರು ಮಾಡಬೇಕಾದ ಅಗತ್ಯವಿದೆ ಎಂದರು.

ಹೌದು, ಅವರು ಹೇಳಿದಂತೆ ಈ ನಿಮಿತ್ತ ಕಾಯೋನ್ಮುಖವಾಗಬೇಕಾದ ಅನಿವಾರ್ಯತೆ ಖಂಡಿತ ಇದೆ. ಭೂ ಸೇನೆ, ನೌಕಾಪಡೆ ಹಾಗೂ ವಾಯುಪಡೆಯ ಪ್ರತಿಯೊಬ್ಬರಿಗೂ ಸಂದರ್ಭದ ಬಿಸಿಯ ಅನುಭವವಾಗುತ್ತಿದೆ. ಈಗಿರುವ ಸನ್ನಿವೇಶಗಳು ಬದಲಾಗದೆ ಇದ್ದರೆ ಯುವ ಜನತೆ ಸೇನಾ ಪಡೆಯತ್ತ ಮನಸ್ಸು ಮಾಡುವುದು ಕಷ್ಟಸಾಧ್ಯ. ಯುವಜನಾಂಗದ ಮನಸೆಳೆಯಲು ಕೇವಲ ಹೋರ್ಡಿಂಗ್‌ಗಳಿಂದ ಸಾಧ್ಯವಿಲ್ಲ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಅದಲ್ಲದೆ ರಕ್ಷಣಾ ಸಚಿವಾಲಯದ ಮಾಹಿತಿ ಪುಸ್ತಕಗಳು (ಬ್ರೋಶರ್) ಸೇನಾ ದಳದ ಹೊರಭಾಗದಲ್ಲಿ ಕಂಡುಬರುವುದು ತೀರಾ ಅಪರೂಪವೆನಿಸಿದೆ! ಪರಿಸ್ಥಿತಿ ಹೀಗಿರುವಾಗ ಯುವಜನತೆ ಆಕರ್ಷಿತರಾಗುವುದಾದರೂ ಹೇಗೆ? ಅಷ್ಟು ಮಾತ್ರವಲ್ಲ, ವೇತನ ಶ್ರೇಣಿಯಲ್ಲೂ ಗಮನಾರ್ಹ ಬದಲಾವಣೆಯೂ ಸದ್ಯದ ತುರ್ತು ಎಂಬುದನ್ನು ರಕ್ಷಣಾ ಇಲಾಖೆ ಗಮನಿಸಬೇಕಿದೆ.

ಐಎನ್‌ಎಸ್ ಮುಂಬೈನ ನಾವಿಕರು ಸದಾ ಕಾರ್ಯನಿರತರಾಗಿರುವುರಿಂದ ದೀರ್ಘ ಕಾಲ ತಮ್ಮ ಕುಟುಂಬದಿಂದ ದೂರವಿರುತ್ತಾರೆ. ಅದು ಅನಿವಾರ್ಯವೂ ಹೌದು. ಯುದ್ಧ ಕಲೆ ಹಾಗೂ ಸಮರಾಭ್ಯಾಸಗಳಿಂದಾಗಿ ಅವರು ಸುಮಾರು 3-4 ತಿಂಗಳುಗಳ ಕಾಲ ಸಮುದ್ರದಲ್ಲೇ ಕಳೆಯಬೇಕಾಗುತ್ತದೆ. ಹಾಗಾಗಿ ನಾವಿಕರಿಗೆ ರಜಾದಿನಗಳು ದಕ್ಕುವುದು ಕೂಡ ಸುಲಭದ ಮಾತಲ್ಲ.

ಒಟ್ಟಾರೆ ಐಎನ್‌ಎಸ್ ಮುಂಬೈ ಸುಂದರ ನಗರಿಯಂತೆ ಭಾಸವಾದರೂ ಅಲ್ಲಿ ಏಕಾಂಗಿತನ ನಿಮ್ಮನ್ನು ಕಾಡದಿರದು. ಆದರೆ ನೀವು ಇದನ್ನು ಯಾರಲ್ಲೂ ದೂರುವಂತಿಲ್ಲ. ದೇವರಲ್ಲೂ ಕೂಡ. ಏಕೆಂದರೆ ಐಎನ್‌ಎಸ್ ಮುಂಬೈನ 'ಅಜೇಯರು' ಒಮ್ಮೆ ನೌಕೆಯೇರಿದರೆಂದರೆ ದೇವರು, ಧರ್ಮ ಎಲ್ಲವನ್ನೂ ಮನಸ್ಸಿನಿಂದ ಹೊರಗಟ್ಟಿ ದೇಶ ಸೇವೆಗೆ ಮುಂದಾಗಬೇಕಾಗುತ್ತದೆ. ಅದು ಅನಿವಾರ್ಯವೂ ಹೌದು.

ಟಿಎಸ್‌ಐ

ಮುಖಪುಟ ಲೇಖನದಲ್ಲಿ ಇನ್ನೇನಿದೆ

ಭಾರತೀಯ ಸೇನೆ

  ರಕ್ಷಣೆಯ ನೊಗಹೊತ್ತ ಹೋರಾಟಗಾರರು

  ಕಠಿಣ ಕಮಾಂಡೋ ಜೀವ

  ಸರಹದ್ದಿನ ಸೋಲರಿಯದ ಸರದಾರ

  ಹೋರಾಟದ ಬದುಕಿಗೆ ಮುನ್ನುಡಿ

  ಯುದ್ಧ ತಂತ್ರಜ್ಞರ ಸಾಹಸಗಾಥೆ

  'ಗೆರಿಲ್ಲಾ' ಕಲೆ ಕಲಿಸುವ ಅಪರೂಪದ ಶಾಲೆ

  ಇವರೆಂದರೆ ಭಯವೂ ಬೆಚ್ಚುತ್ತದೆ!

  'ನಮಗೀಗ ಸಮರ್ಥ ಮಾನವ ಸಂಪನ್ಮೂಲದ ಅವಶ್ಯಕತೆ ಇದೆ' : ಜನರಲ್ ದೀಪಕ್ ಕಪೂರ್

  ವೇತನ ಸುಳಿಯಲ್ಲಿ ಸೇನಾ ಸಿಬ್ಬಂದಿ

ಭಾರತೀಯ ನೌಕಾಪಡೆ

  ಅಜೇಯ 'ಐಎನ್‌ಎಸ್ ಮುಂಬೈ'

  'ಚೀನಾದೊಂದಿಗಿನ ಸ್ಪರ್ಧೆ ಯುದ್ಧದಲ್ಲಿ ಪರ್ಯವಸಾನವಾಗದಂತೆ ತಡೆಯಬೇಕು' : ಅಡ್ಮಿರಲ್ ಸುರೀಶ್ ಮೆಹ್ತಾ

 "ಸರ್ಕಾರಿ ನೀತಿಯಲ್ಲಿ ನೌಕಾಪಡೆಗೆ ಪ್ರಮುಖ ಆದ್ಯತೆ' :ಅಡ್ಮಿರಲ್ ಅರುಣ್ ಪ್ರಕಾಶ್

ಭಾರತೀಯ ವಾಯುಪಡೆ

  ಹಾರುವ ಯಂತ್ರಗಳ ಬೆನ್ನೇರಿ ಹೊರಟಾಗ

  'ಸಿಬ್ಬಂದಿ ಆಯ್ಕೆ: ಗುಣಮಟ್ಟದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ' : ಫಾಲಿ ಮೇಜರ್

ಇತರ

ಯಾರೂ ಅರಿಯದ ಹೀರೋ ಪಡೆ

  ಬಾಲಿವುಡ್ ಗ್ಲಾಮರ್ ಸೇನೆ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .