|

ಒಬ್ಬ ಅಥ್ಲೀಟ್ ಪಾಲಿಗೆ ಒಲಿಂಪಿಕ್ಸ್ ಪದಕ ಎಷ್ಟು
ಮಹತ್ವದ್ದು?
ಈ ಪ್ರಶ್ನೆಗೆ ಉತ್ತರ ನೀಡಲು ಬಹುತೇಕ ನನ್ನಷ್ಟು
ಸಮರ್ಥರು ಯಾರೂ ಇರಲಿಕ್ಕಿಲ್ಲ. ಏಕೆಂದರೆ ಒಂದು
ಸೆಕೆಂಡಿನ ನೂರನೇ ಒಂದು ಭಾಗದಲ್ಲಿ ನಾನು ಒಲಿಂಪಿಕ್ಸ್ ಪದಕವನ್ನು
ಕಳೆದುಕೊಂಡವಳು. 1984ರ
ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನ 400 ಮೀಟರ್
ಹರ್ಡಲ್ಸ್‌ನಲ್ಲಿ ಆ ಪದಕ ಕಳೆದುಕೊಂಡಾಗ ನಾನು ನಿಂತ ನೆಲವೇ ಕುಸಿದು,
ಭೂಮಿ ನನ್ನನ್ನು ನುಂಗಿದಂತೆ ಭಾಸವಾಗಿತ್ತು.
ಆಗ ನಾನು 400 ಮೀಟರ್ ಓಟದ ಸ್ಪರ್ಧೆ
ಹಾಗೂ ಹರ್ಡಲ್ಸ್ ಎರಡೂ ವಿಭಾಗದಲ್ಲೂ ಫೈನಲ್ ಪ್ರವೇಶಿಸಿದ್ದೆ.
ಹರ್ಡಲ್ಸ್‌ನಲ್ಲಿ ನೂರನೇ ಒಂದು ಸೆಕೆಂಡ್‌ನಲ್ಲಿ ಪದಕ ಕಳೆದುಕೊಂಡೆ.
ನನಗೆ ತೀವ್ರ ಪ್ರತಿಸ್ಪರ್ಧೆ ಒಡ್ಡಿದ ಅಮೆರಿಕದ ಜೂನ್ ಬ್ರೌನ್ ಕಿಂಗ್
ಕಂಚಿನ ಪದಕ ಗೆದ್ದರು. ಅಚ್ಚರಿಯ ವಿಷಯವೆಂದರೆ
ಲಾಸ್ ಏಂಜಲೀಸ್‌ನಲ್ಲಿಯೇ ಒಂದು ಒಲಿಂಪಿಕ್ ಪೂರ್ವ ಚಾಂಪಿಯನ್‌ಷಿಪ್ ನಡೆದಿತ್ತು.
ಅದರಲ್ಲಿ ನಾನು ಜೂನ್ ಬ್ರೌನ್ ಕಿಂಗ್ ಅವರನ್ನು ಸೋಲಿಸಿ ಚಿನ್ನದ ಪದಕ
ಗೆದ್ದಿದ್ದೆ. ಅದರೆ,
ಒಲಿಂಪಿಕ್ಸ್‌ನಲ್ಲಿ ಅದೃಷ್ಟ ಕೈಕೊಟ್ಟಿತು.
ನೀವು ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಆಯ್ಕೆಯಾದಾಗ
ವಿವಾದದ ಹೊಗೆ ಎದ್ದಿತ್ತಲ್ಲವೇ?
ಒಲಿಂಪಿಕ್ಸ್‌ಗೆ ತಂಡ ಅಯ್ಕೆ ಮಾಡುವ ಮೊದಲು
ನವದೆಹಲಿಯಲ್ಲಿ ಅಯ್ಕೆ ಟ್ರಯಲ್ಸ್ ನಡೆದಿತ್ತು.
ಆ ಸಂದರ್ಭದಲ್ಲಿ ನನ್ನ ಸ್ನೇಹಿತರಾಗಿದ್ದ ಅಥ್ಲೀಟ್‌ಗಳೇ ನನ್ನನ್ನು ತಂಡಕ್ಕೆ
ಆಯ್ಕೆ ಮಾಡಬಾರದು ಎಂದು ಪ್ರತಿಭಟನೆ ಮಾಡಿದ್ದರು.
ಅದು ಎಲ್ಲಿಯವರೆಗೆ ಹೋಗಿತ್ತು ಎಂದರೆ ಅಕಸ್ಮಾತ್ ನಾನು ಅಯ್ಕೆಯಾದಲ್ಲಿ
ಅವರೆಲ್ಲ ತಂಡದಿಂದ ಹೊರಗುಳಿಯುವ ಬೆದರಿಕೆ ಹಾಕುವವರೆಗೆ.
ಐಒಎ ಮತ್ತು ಉಳಿದ ವ್ಯವಸ್ಥಾಪಕರು ಎಷ್ಟೇ ಪ್ರಯತ್ನ ಮಾಡಿದರೂ
ವಿರೋಧಿಗಳ ಪಟ್ಟು ಸಡಿಲವಾಗಲಿಲ್ಲ. ಕೊನೆಗೆ
ನಾನೇ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ವಾಪಸು ಹೋದೆ.
ಪ್ರತಿಭಟನೆಗೆ ಗೆಳೆಯರು ನೀಡಿದ ಕಾರಣ 'ತಾಂತ್ರಿಕ'
ಎಂದು. ಮುಂಬೈನಲ್ಲಿ ನಡೆದ ಎರಡನೇ ಟ್ರಯಲ್ಸ್‌ನಲ್ಲಿ
ನಾನು ರೈಲ್ವೆ ವತಿಯಿಂದ ಭಾಗವಹಿಸಿದೆ. ಅಲ್ಲಿ
ಏಷ್ಯನ್ ದಾಖಲೆ ಮೂಲಕ ನಾನು ಮೊದಲನೆಯವಳಾಗಿ ಹೊರಹೊಮ್ಮಿದೆ.
ನಂತರ ಮೂರನೇ ಟ್ರಯಲ್ಸ್ ದೆಹಲಿಯಲ್ಲಿಯೇ ನಡೆಯಿತು.
ಹೀಗೆ ಆತಂಕಗಳ ನಡುವೆಯೇ ನಾನು ಲಾಸ್ ಏಂಜಲೀಸ್ ತಲುಪಿದೆ.
ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಅಥ್ಲೀಟ್‌ಗಳು
ಪದಕ ಗೆಲ್ಲುವ ಸಾಧ್ಯತೆಗಳು...
ಮೇಲ್ನೋಟಕ್ಕೆ ಕೈಬೆರಳೆಣಿಕೆಯಷ್ಟು ಪದಕ ಬರಬಹುದು
ಎಂದೆನ್ನಿಸುತ್ತಿದೆ. ಮುಖ್ಯವಾಗಿ ಆ ದಿನ,
ಆ ಸಂದರ್ಭದಲ್ಲಿ ನಮ್ಮ ಅಥ್ಲೀಟ್‌ಗಳು ಎಂತಹ ಪ್ರದರ್ಶನ ನೀಡುತ್ತಾರೆ
ಎನ್ನುವುದರ ಮೇಲೆ ಎಲ್ಲವೂ ಅವಲಂಬಿಸಿದೆ.
ಬಾಕ್ಸಿಂಗ್‌ನಲ್ಲಿ ಅಖಿಲ್ ಕುಮಾರ್ ಮತ್ತು ವಿಜಯೇಂದ್ರ ಕುಮಾರ್ ಪದಕ ಗೆಲ್ಲುವ
ಸಾಧ್ಯತೆಯಿದೆ. ಅಭಿನವ್ ಭಿಂದ್ರ,
ನಗರ್ ನವೀನ್, ಮಾನವ್ ಜೀತ್ ಮತ್ತು
ಮೇಜರ್ ರಾಜವರ್ಧನ ರಾಥೋಡ್ ಶೂಟಿಂಗ್‌ನಲ್ಲಿ ಭಾರತದ ನೆಚ್ಚಿನ ಸ್ಪರ್ಧಿಗಳು.
ಬಿಲ್ಲುಗಾರಿಕೆಯಲ್ಲಿ ಕೂಡ ನಮ್ಮ ಸ್ಪರ್ಧಿಗಳು ಪದಕ ಗೆದ್ದರೆ
ಅಚ್ಚರಿಯಿಲ್ಲ. ಟೆನಿಸ್‌ನಲ್ಲಿ ಮಹೇಶ್ ಭೂಪತಿ-
ಲಿಯಾಂಡರ್ ಪೇಸ್ ಜೋಡಿ ಸಂಭ್ರಮದ ಅಲೆ ಎಬ್ಬಿಸಬಹುದು.
ಇನ್ನು ಕುಸ್ತಿಯಲ್ಲಿ ಕೂಡ ನಮ್ಮವರನ್ನು ಕಡೆಗಣಿಸುವಂತಿಲ್ಲ.
ಟ್ರ್ಯಾಕ್ ಅಂಡ್ ಫೀಲ್ಡ್ ಸ್ಪರ್ಧೆಗಳಲ್ಲಿ...
ಡಿಸ್ಕಸ್ ಥ್ರೋನಲ್ಲಿ ಪದಕ ಬರುವ ಸಾಧ್ಯತೆಯಿದೆ.
4-400
ರಿಲೆ ತಂಡದಲ್ಲಿರುವ ಮಂಜೀತ್ ಕೌರ್, ಮನದೀಪ್
ಕೌರ್, ಚಿತ್ರ ಸೋಮನ್,
ಎಂ.ಆರ್.
ಪೂವಮ್ಮ, ಎಸ್.
ಗೀತ ಮತ್ತು ಮೃದುಲ ಅವರನ್ನು ಕೂಡ ಕಡೆಗಣಿಸುವಂತಿಲ್ಲ.
ಇತ್ತೀಚಿನ ದಿನಗಳಲ್ಲಿ ಉಷಾ ಮತ್ತು ಮಿಲ್ಖಾ ಸಿಂಗ್
ಅವರಂತಹ ಶ್ರೇಷ್ಠ ಮಟ್ಟದ ಅಥ್ಲೀಟ್‌ಗಳು ಭಾರತದಲ್ಲಿ ಏಕೆ ಉದ್ಭವಿಸುತ್ತಿಲ್ಲ?
ಒಲಿಂಪಿಕ್ಸ್,
ಕಾಮನ್‌ವೆಲ್ತ್, ಏಷ್ಯನ್ ಗೇಮ್ಸ್ ಮತ್ತು
ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ದೇಶವನ್ನು ಪ್ರತಿನಿಧಿಸಿರುವ ನಾನು
4 ಚಿನ್ನ,
7 ಬೆಳ್ಳಿ ಹಾಗೂ ಒಂದು ಕಂಚಿನ ಪದಕವನ್ನು
ದೇಶಕ್ಕೆ ಉಡುಗೊರೆಯಾಗಿ ನೀಡಿದ್ದೇನೆ. ಈಗ ನನಗೆ
ನೀಡಲಾಗುತ್ತಿರುವ ನಿವೃತ್ತಿ ವೇತನ ಎಷ್ಟು ಎಂದು ಹೇಳಲು ಕೂಡ ನಾಚಿಕೆಯಾಗುತ್ತದೆ.
ಅದು ತಿಂಗಳಿಗೆ ರೂ.
3,500.
ಇದು ನಮ್ಮ ದೇಶದಲ್ಲಿ ಸರ್ಕಾರ ಕ್ರೀಡೆಯನ್ನು ಪ್ರೋತ್ಸಾಹಿಸುತ್ತಿರುವ
ರೀತಿ. ಇಲ್ಲಿ ಕ್ರೀಡೆಗೆ ಇರುವುದು ಕೊನೆಯ
ಆದ್ಯತೆ. ಒಲಿಂಪಿಕ್ಸ್,
ಕಾಮನ್‌ವೆಲ್ತ್ ಮತ್ತು ಏಷ್ಯನ್ ಕ್ರೀಡಾಕೂಟ ನಡೆಯುವ ಸಂದರ್ಭದಲ್ಲಿ
ಒಂದಿಷ್ಟು ಸುದ್ದಿಯಾಗುತ್ತದೆ. ಆನಂತರ ಯಾರೂ
ಇತ್ತ ತಲೆ ಹಾಕುವುದಿಲ್ಲ. ಕ್ರೀಡೆ ಅಥವಾ
ಕ್ರೀಡಾಪಟುವನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ.
ಇಂತಹ ಪರಿಸ್ಥಿತಿಯ ನಡುವೆ ಶ್ರೇಷ್ಠ ಕ್ರೀಡಾಪಟು ಉದ್ಭವಿಸುವುದು ಹೇಗೆ?
ಈ ಸಮಸ್ಯೆಗೆ ಪರಿಹಾರ?
ಕ್ರೀಡಾಲೋಕದಲ್ಲಿ ಶ್ರೇಷ್ಠ ಸಾಧನೆ ಮಾಡಬೇಕು
ಎಂದಾದಲ್ಲಿ ಮಕ್ಕಳು ಕನಿಷ್ಠ 10 ವರ್ಷಗಳ ಕಾಲ
ಪರಿಶ್ರಮ ಪಡಬೇಕು. ಬೇರು ಮಟ್ಟದಲ್ಲಿನ
ಪ್ರತಿಭೆಗಳ ಅನ್ವೇಷಣೆ ಮತ್ತು ತರಬೇತಿಯನ್ನು ನಾವು ಸಂಪೂರ್ಣವಾಗಿ
ಕಡೆಗಣಿಸಿದ್ದೇವೆ. ಪ್ರತಿಯೊಂದು ರಾಜ್ಯದಲ್ಲಿ
ಕೂಡ ಉನ್ನತ ಮಟ್ಟದ ಕ್ರೀಡಾ ತರಬೇತಿ ಶಿಬಿರಗಳು ನಡೆಯಬೇಕು.
ಹಾಗೆ ಮಾಡಿದಲ್ಲಿ ವಿದ್ಯಾಭ್ಯಾಸ ಕಡೆಗಣಿಸಿ ಮಕ್ಕಳು ಕ್ರೀಡೆಯತ್ತ
ಹೋಗುವುದನ್ನು ತಪ್ಪಿಸಬಹುದು. ಇದರ
ಜೊತೆಯಲ್ಲಿಯೇ ಇಡೀ ದೇಶದಲ್ಲಿ ಕ್ರೀಡಾ ಸಂಸ್ಕೃತಿಯೊಂದು ಹರಡುವ ಜವಾಬ್ದಾರಿ
ನಮ್ಮ ಮೇಲಿದೆ. ಅಂತಹ ಒಂದು ಸಂಸ್ಕೃತಿ ಹರಡಿದರೆ
ಪ್ರತಿಭೆಗಳು ತಾವೇ, ತಾವಾಗಿ ಕಣ್ಣಿಗೆ ಬೀಳಲು
ಆರಂಭಿಸುತ್ತವೆ. ನಮ್ಮ ದೇಶದಲ್ಲಿ
ಕ್ರೀಡಾಭಿವೃದ್ಧಿಗಾಗಿ ಸಾಂಘಿಕ ಯತ್ನಗಳು ನಡೆಯುತ್ತಿಲ್ಲ ಎನ್ನುವುದು
ವಿಷಾದನೀಯ.
ಈಗಿನ ಆಯ್ಕೆ ಪ್ರಕ್ರಿಯೆ ಬಗ್ಗೆ ನಿಮ್ಮ ಅಭಿಪ್ರಾಯವೇನು?
ರಾಷ್ಟ್ರ ಮಟ್ಟದಲ್ಲಿ ಮೊದಲ ಮೂರು ಸ್ಥಾನಗಳನ್ನು
ಪಡೆದ ಅಥ್ಲೀಟ್‌ಗಳನ್ನು ಮೊದಲು ಒಲಿಂಪಿಕ್ಸ್‌ಗೆ ಆಯ್ಕೆ ಮಾಡಲಾಗುತ್ತಿತ್ತು.
ಆದರೀಗ ಆಯ್ಕೆ ಪ್ರಕ್ರಿಯೆಯಲ್ಲಿ ಸಂಪೂರ್ಣ ಬದಲಾವಣೆಯಾಗಿದೆ.
1998ರಿಂದ ಹೊಸದಾದ ಆಯ್ಕೆ ಪ್ರಕ್ರಿಯೆ
ಜಾರಿಯಲ್ಲಿದೆ. ಭಾರತೀಯ ತರಬೇತುದಾರರ ಮೇಲೆ
ಇಲ್ಲಿನ ವ್ಯವಸ್ಥೆ ನಂಬಿಕೆ ಕಳೆದುಕೊಂಡಿದೆ.
ಉಕ್ರೇನ್, ರಷ್ಯಾದಿಂದ ನಾವು ತರಬೇತುದಾರರನ್ನು
ಆಮದು ಮಾಡಿಕೊಳ್ಳುತ್ತಿದ್ದೇವೆ. ಅವರ
ಜೊತೆಯಲ್ಲಿಯೇ ಅಲ್ಲಿನ ವೈದ್ಯರು, ತಜ್ಞರ ದಂಡೇ
ಇಲ್ಲಿಗೆ ಬರುತ್ತಿದೆ. ಅದಕ್ಕಾಗಿ ನಾವು
ಕೋಟ್ಯಂತರ ರೂಪಾಯಿಗಳನ್ನು ವೆಚ್ಚ ಮಾಡುತ್ತಿದ್ದೇವೆ.
ರಾಷ್ಟ್ರೀಯ ಕ್ರೀಡಾಕೂಟಗಳನ್ನು ವೀಕ್ಷಿಸುವ ಆ ತರಬೇತುದಾರರು ಅವರಿಗೆ
ಸರಿಯೆನಿಸಿದ ತಂಡವನ್ನು ಆಯ್ಕೆ ಮಾಡುತ್ತಾರೆ.
ಅಂತರ್ ರಾಷ್ಟ್ರೀಯ ಅಥ್ಲೆಟಿಕ್ ಕ್ಯಾಲೆಂಡರ್ ಪ್ರಕಾರ
365 ದಿನಗಳ ಕಾಲ ಒಬ್ಬ ಅಥ್ಲೀಟ್ ಮಾಡಿದ ಸಾಧನೆಯನ್ನು ಅವಲೋಕಿಸಿ ಆಯ್ಕೆ
ಪ್ರಕ್ರಿಯೆ ನಡೆಸುವುದು ಈಗಿನ ಪದ್ಧತಿ.
ವೈಯಕ್ತಿಕ ಸಾಧನೆಗಳ ಮೂಲಕ ಭಾರತೀಯ ತಂಡವನ್ನು ಪ್ರವೇಶಿಸಲು ಈಗ ಆಗುವುದಿಲ್ಲ.
ನಿಮ್ಮ ಮಹತ್ವಾಕಾಂಕ್ಷೆಯ 'ಉಷಾ
ಸ್ಕೂಲ್ ಆಫ್ ಅಥ್ಲೆಟಿಕ್ಸ್' ಈಗ ಯಾವ ರೂಪ
ತಳೆದಿದೆ?
2002ರಲ್ಲಿ ನಾವು ಈ ಶಾಲೆಯನ್ನು
ಅರಂಭಿಸಿದೆವು. ಕೇರಳ ಸರ್ಕಾರ
30 ಎಕರೆ ಭೂಮಿಯನ್ನು
50 ವರ್ಷಗಳ ಗುತ್ತಿಗೆ ಆಧಾರದ ಮೇಲೆ ನಮಗೆ ನೀಡಿದೆ.
ಇತ್ತೀಚೆಗಷ್ಟೆ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ ಕೂಟದಲ್ಲಿ ನಮ್ಮ
ಶಾಲೆಯ ವಿದ್ಯಾರ್ಥಿ ಟಿಂಟು ಲುಕ್ಕಾ ಎಂಟನೇ ಸ್ಥಾನ ಪಡೆದಿದ್ದಾಳೆ.
ಅದು 44 ಸ್ಪರ್ಧಿಗಳ ಪೈಕಿ.
ಇದೇನು ಸಣ್ಣ ಸಾಧನೆಯಲ್ಲ. ಒಂದೆಡೆ
ಕೇಂದ್ರ ಸರ್ಕಾರ ಕ್ರೀಡಾ ತರಬೇತಿಗಾಗಿ ಪ್ರತಿ ವರ್ಷ
380 ಕೋಟಿ ರೂಪಾಯಿಗಳನ್ನು ವ್ಯಯ ಮಾಡುತ್ತಿದೆ.
ಪ್ರತಿಯೊಂದು ರಾಜ್ಯ ಸರ್ಕಾರಗಳು ಕಡಿಮೆಯೆಂದರೆ
10 ಕೋಟಿ ರೂಪಾಯಿಗಳನ್ನು ಕ್ರೀಡಾಭಿವೃದ್ಧಿಗಾಗಿ ಬಳಕೆ ಮಾಡುತ್ತವೆ.
ಇಂತಹ ಪರಿಸ್ಥಿತಿಯ ನಡುವೆ ಯಾವುದೇ ಸರ್ಕಾರಿ ಪ್ರಾಯೋಜಕತ್ವ ಇಲ್ಲದ
ನಮ್ಮ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಆ ಸಾಧನೆ ಮಾಡಿದ್ದಾಳೆ ಎನ್ನುವುದು
ಗಮನಿಸಬೇಕಾದ ಅಂಶ. ಅದು ಸಾಧ್ಯವಾಗಿದ್ದು ನಮ್ಮ
ಬದ್ಧತೆಯ ಮೂಲಕ!
ಹಾಗಿದ್ದರೆ ಶಾಲೆ ನಡೆಸಲು ಅಗತ್ಯವಾದ ಹಣಕಾಸಿನ ನೆರವು
ಎಲ್ಲಿಂದ ಬರುತ್ತದೆ?
ಅಪ್ಪಟ ಕ್ರೀಡಾಪ್ರೇಮಿಗಳ ಪ್ರಾಯೋಜಕತ್ವದ ಮೂಲಕ
ನಾವು ಶಾಲೆಯನ್ನು ನಡೆಸಿಕೊಂಡು ಹೋಗುತ್ತಿದ್ದೇವೆ.
ಬೆಂಗಳೂರಿನ ಶೋಭಾ ಡೆವಲಪರ್ಸ್‌ನ ಪಿ.ಎನ್.ಸಿ.
ಮೆನನ್, ಇನ್ಫೋಸಿಸ್ ಫೌಂಡೇಷನ್‌ನ
ಅಧ್ಯಕ್ಷರಾದ ಸುಧಾ ಮೂರ್ತಿ, ಇನ್ಫೋಸಿಸ್‌ನವರೇ
ಆದ ಮೋಹನ್‌ದಾಸ್ ಪೈ, ಕುಮಾರಿ ಅವರ ಸರೋಜಿನಿ
ದಾಮೋದರ್ ಟ್ರಸ್ಟ್, ರಾಜು ಮೆನನ್,
ಗುಲ್ಫಾರ್ ಮಹಮದ್ ಅಲಿ, ರೇಷ್ಮಿ,
ಡಾ.ಅರುಣ್ ರಾವ್ ಮತ್ತು ಫಾರಿಸ್
ಅಬೂಬಕರ್ ಮುಂತಾದವರು ಶಾಲೆಯ ಪ್ರಾಯೋಜಕತ್ವದ ಹೊಣೆ ಹೊತ್ತಿದ್ದಾರೆ.
ನಿಮ್ಮ ಜೀವನ ಸುವರ್ಣ ಗಳಿಗೆಗಳು ಯಾವುವು?
ಬಹುತೇಕ 1984-96.
ಲಾಸ್ ಏಂಜಲೀಸ್‌ನಲ್ಲಿ ನಾನು ಪದಕ ವಂಚಿತಳಾದರೂ,
ಅದೊಂದು ಮಹತ್ವದ ಗಳಿಗೆ. ಜಕಾರ್ತದಲ್ಲಿ
(1985)
ನಡೆದ ಏಷ್ಯನ್ ಟ್ರ್ಯಾಕ್ ಅಂಡ್ ಫೀಲ್ಡ್ ಕೂಟದಲ್ಲಿ
5 ಚಿನ್ನ ಮತ್ತು 1
ಕಂಚಿನ ಪದಕ ಗೆದ್ದದ್ದು ನನ್ನ ಶ್ರೇಷ್ಠ ಸಾಧನೆ.
1986ರ ಸಿಯೋಲ್ ಏಷ್ಯನ್
ಕ್ರೀಡಾಕೂಟದಲ್ಲಿ 4 ಚಿನ್ನ ಮತ್ತು
1 ಬೆಳ್ಳಿಯ ಪದಕ ಗೆದ್ದಾಗ ಜೀವನದಲ್ಲಿ ಮಹತ್ತರ
ಸಾಧನೆ ಮಾಡಿದ ಭಾವನೆ ಮೂಡಿತ್ತು.
ಟಿಎಸ್‌ಐ
ವ್ಯಕ್ತಿ ವಿವರ:
ಜನ್ಮ ದಿನಾಂಕ:
ಜೂನ್ 27,
1964
ಜನ್ಮ ಸ್ಥಳ:
ಕೂತಳಿ
ಸಾಧನೆಗಳು:
ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊತ್ತ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದು,
1984.
ಜಕಾರ್ತದಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್
ಕೂಟದಲ್ಲಿ ಶ್ರೇಷ್ಠ ಮಹಿಳಾ ಅಥ್ಲೀಟ್ ಪ್ರಶಸ್ತಿ ಗೆದ್ದಿದ್ದು,
1985.
ಪ್ರಶಸ್ತಿಗಳು:
ಅರ್ಜುನ ಪ್ರಶಸ್ತಿ-
1984, ಪದ್ಮಶ್ರೀ-
1984
|