|
| ಡಾ| ಕೆ.ಎ. ಅಶೋಕ ಪೈ
|
ಮನಶ್ಶಾಸ್ತ್ರಜ್ಞ
|
ಸಮೂಹಸನ್ನಿ ಎಂಬ ಪದವನ್ನು ಆಗಾಗ ನಾವು
ಕೇಳುತ್ತಾ ಬಂದಿದ್ದರೂ ಅಥವಾ ಯಾವುದೋ ಒಂದು ಸನ್ನಿವೇಶವನ್ನು
ಸಮೂಹಸನ್ನಿಯೆಂದು ಬಣ್ಣಿಸಿದ್ದರೂ ಅದರ ನಿಜವಾದ ಅರ್ಥ ಬಹುತೇಕರಿಗೆ
ಗೊತ್ತಿಲ್ಲ. ಆತಂಕ,
ಕಳವಳ ಎಂಬುದು ಶಾರೀರಿಕವಾಗಿ ವ್ಯಕ್ತವಾಗುವುದೇ ಹಿಸ್ಟೀರಿಯಾ ಅಥವಾ
ಉನ್ಮಾದ. ಇದಕ್ಕೆ ಸನ್ನಿ ಎಂಬ ಹೆಸರೂ ಇದೆ.
ಬಗೆಹರಿಯದ ಸಮಸ್ಯೆಯೋ ಅಥವಾ ಇನ್ನಾವುದೋ ಚಿಂತೆಯಿಂದ ಆತಂಕ
ಹುಟ್ಟಿಕೊಳ್ಳುತ್ತದೆ. ಆ ಸಮಸ್ಯೆ
ಭಾವನಾತ್ಮಕ, ಸಾಮಾಜಿಕ,
ಲೈಂಗಿಕ ಅಥವಾ ಇಬ್ಬರ ನಡುವಿನ ಭಿನ್ನಾಭಿಪ್ರಾಯ,
ಇಲ್ಲವೇ ಕೌಟುಂಬಿಕ-
ವೃತ್ತಿಕ್ಷೇತ್ರದ ಸಮಸ್ಯೆಯೂ ಆಗಿರಬಹುದು.
ಅವರವರ ಸ್ವಭಾವ ಪ್ರಕೃತಿಗೆ ಅನುಗುಣವಾಗಿ ಪ್ರತಿಯೊಬ್ಬರೂ ಒಂದಲ್ಲಾ ಒಂದು
ವಿಷಯಕ್ಕೆ ಆತಂಕಕ್ಕೊಳಗಾಗುವುದಿದೆ. ಆದರೆ
ಅದೇ ಆತಂಕ ಎಲ್ಲಾ ಸಂದರ್ಭಗಳಲ್ಲೂ ಮೂಗುತೂರಿಸಿ ಸರ್ವವ್ಯಾಪಿ ಎನಿಸಿದಾಗ
ಅದನ್ನು ಮನಃಶಾಸ್ತ್ರ 'ಆಂಕ್ಸೈಟಿ
ನ್ಯೂರೋಸಿಸ್' ಅಥವಾ ಚಿತ್ತ ಚಾಂಚಲ್ಯ
ಎನ್ನುತ್ತದೆ. ಮಾನಸಿಕ ಕಾರಣಗಳಿಂದಾಗಿ
ಉತ್ಪತ್ತಿಗೊಂಡ ಆತಂಕ ಶಾರೀರಿಕವಾಗಿ ತೋರ್ಪಡುವುದು 'ಹಿಸ್ಟೆರಿಕಲ್
ಕನ್‌ವರ್ಶನ್' (ಅಂದರೆ
ಮಾನಸಿಕ ತುಮುಲ ಶಾರೀರಿಕವಾಗಿ ವ್ಯಕ್ತವಾಗುವಿಕೆ).
ಆದರೆ ಆ ಆತಂಕ- ಭಯ ಯಾವುದೋ ಒಂದು
ವಸ್ತುವಿನ ಬಗೆಗಾದರೆ ಅಥವಾ ಆ ವಸ್ತುಗಳನ್ನು ಕಂಡಾಗ ವ್ಯಕ್ತಿಯೊಬ್ಬ
ಚಡಪಡಿಸಿದರೆ ಅಥವಾ ಕಳವಳಕ್ಕೊಳಗಾದರೆ ಅದು ಫೋಬಿಯಾ.
ವ್ಯಕ್ತಿಯೊಬ್ಬ ಯಾವುದೋ ಒಂದು ಕೆಲಸವನ್ನು ಪದೇ-
ಪದೇ ಮಾಡುವ ಮೂಲಕ ತಮ್ಮ ಆತಂಕವನ್ನು ತೊಡೆದುಹಾಕಲು ಬಯಸುವುದು,
ಆದರೆ ಎಷ್ಟು ಬಾರಿ ಮಾಡಿದ ಕೆಲಸವನ್ನೇ ಮಾಡಿದರೂ ಅವರ ಆತಂಕ
ಕಡಿಮೆಯಾಗುವುದಿಲ್ಲ- ಅಂದರೆ ಪದೇ ಪದೇ ಕೈ
ತೊಳೆಯುವುದು, ಸ್ನಾನ ಮಾಡುವುದು,
ಬೀಗ ಹಾಕಿದೆಯೇ ಎಂದು ಮತ್ತೆ ಮತ್ತೆ ಎಳೆದು ನೋಡುವುದು ಇತ್ಯಾದಿ.
ಇಂಥ ಗುಣಲಕ್ಷಣಗಳಿರುವ ಆತಂಕಕ್ಕೆ ಮನಃಶಾಸ್ತ್ರ
'ಗೀಳು ರೋಗ'
(ಅಬ್ಸಸಿವ್ ಕಂಪಲ್ಸಿವ್ ಡಿಸಾರ್ಡರ್)
ಎಂದು ಹೆಸರಿಟ್ಟಿದೆ.
'ಸೈಕೋಸೊಮಾಟಿಕ್ ಡಿಸಾರ್ಡರ್'
ಅಥವಾ ಮನೋದೈಹಿಕ ಬೇನೆ ಎಂಬ ಆತಂಕದಲ್ಲಿ ಮನಸ್ಸು ದೇಹದಲ್ಲಿನ ಯಾವುದೋ ಒಂದು
ರೋಗದ ಉಲ್ಬಣಕ್ಕೆ ಕಾರಣವಾಗುತ್ತದೆ. ಮಾನಸಿಕ
ಪರಿಸ್ಥಿತಿಗೂ ದೇಹದ ಆರೋಗ್ಯಕ್ಕೂ ನೇರ ಸಂಬಂಧ.
ವ್ಯಕ್ತಿಯೊಬ್ಬ ತನಗೆ ಯಾವುದೋ ಕಾಯಿಲೆ ಅಂಟಿಕೊಂಡಿದೆ ಎಂಬ
ಕಲ್ಪನೆಗೊಳಗಾಗಿದ್ದರೆ ಅಥವಾ ಪದೇ ಪದೇ ಅದೇ ಪರೀಕ್ಷೆಗಳನ್ನು
ಮಾಡಿಸಿಕೊಳ್ಳುತ್ತಿದ್ದರೆ, ಅದು
ಹೈಪೋಕಾಂಡ್ರಿಯಾ ಅಥವಾ ರೋಗಭ್ರಮೆ.
ಹಿಸ್ಟೀರಿಯಾಕ್ಕೆ ಕಾರಣಗಳೇನು ಎಂದು
ಹುಡುಕಿದಾಗ ಮೂರು ಅಂಶಗಳು ಬಹಳ ಪ್ರಮುಖ ಪಾತ್ರವಹಿಸುವುದನ್ನು ಕಾಣಬಹುದು.
ಮೊದಲನೆಯದು ಲಾಬೆಲ್ಲೆ ಇಂಡಿಫರೆನ್ಸ್ (ನಿರ್ಲಿಪ್ತತೆ).
ಇಲ್ಲಿ ವ್ಯಕ್ತಿ ತನ್ನ ರೋಗವನ್ನು ಯಾರ ಮುಂದೂ ಬಿಚ್ಚಿಡುವುದಿಲ್ಲ.
ಬದಲಿಗೆ ಬೇರೇನನ್ನೋ ಮಾತನಾಡಿ ತನ್ನ ಆತಂಕವನ್ನು ಮುಚ್ಚಿಡುವ
ಪ್ರಯತ್ನಮಾಡುತ್ತಾನೆ. ಇನ್ನು ಕನ್‌ವರ್ಷನ್
ಅಥವಾ ಮಾರ್ಪಾಡಿನಲ್ಲಿ ಮಾನಸಿಕ ಆತಂಕ ದೈಹಿಕ ಚಿಹ್ನೆಯಾಗಿ ಮಾರ್ಪಾಡಾಗುತ್ತದೆ.
ಇಲ್ಲಿ ವ್ಯಕ್ತಿ ಅಥವಾ ಸಮಾಜ ಪ್ರದರ್ಶಿಸುವ ನಾಟಕೀಯ ಸ್ವಭಾವ ಮೂಲತಃ
ಎರಡು ಲಾಭ ಬಯಸುತ್ತದೆ. ಮೊದಲನೆಯದು
ಆತಂಕದಿಂದ ಹೊರಬರುವುದು. ವ್ಯಕ್ತಿಯೊಬ್ಬ
ತನ್ನ ಕಷ್ಟಗಳನ್ನು ಮತ್ತೊಬ್ಬರ ಮುಂದೆ ಹರವಿದರೆ ಸಿಗುವ ಪರಿಹಾರ
ಎಷ್ಟರಮಟ್ಟಿಗಿನದ್ದು ಎಂಬುದು ನಮಗೆ ಗೊತ್ತಿರುವಂಥದ್ದೇ!
ಆದರೆ ಅದೇ ವ್ಯಕ್ತಿ ದೊಪ್ಪನೆ ಕೆಳಗುರುಳಿ,
೨-೩ ನಿಮಿಷ ಹಾಗೆ ನಿಶ್ಚಲವಾಗಿ
ಮಲಗಿದ ಎಂದಿಟ್ಟುಕೊಳ್ಳಿ,
ಸುತ್ತಲಿದ್ದವರೆಲ್ಲಾ ಕಾರಣ ಹುಡುಕಿ 'ನಾವಿಲ್ಲವೇ
ಜೊತೆಗೆ, ಅದಕ್ಕೆಲ್ಲಾ ಇಷ್ಟೊಂದು
ತಲೆಕೆಡಿಸಿಕೊಳ್ಳುವುದೇ' ಎಂಬ ಭರಪೂರ
ಆಶ್ವಾಸನೆಗಳನ್ನು ನೀಡುತ್ತಾರೆ.
ಕೆಳಗುರುಳಿದ ವ್ಯಕ್ತಿಗೆ ಬೇಕಾಗಿದ್ದಿದ್ದೂ ಅದೇ!
ಇಲ್ಲಿ ಆತನ ಆತಂಕಕ್ಕೆ ಸಣ್ಣದೊಂದು ವಿರಾಮ ದೊರಕುತ್ತದೆ.
ಇನ್ನೊಂದು ಲಾಭವೆಂದರೆ ಜನರ ಗಮನಸೆಳೆಯುವುದು ಹಾಗೂ ಸಂತಾಪ
ಗಿಟ್ಟಿಸಿಕೊಳ್ಳುವುದು. ದೊಪ್ಪನೆ
ಕೆಳಗುರುಳುವುದು, ತಲೆ ಸುತ್ತು ಬರುವ ಎಲ್ಲಾ
ಗುಣ ಲಕ್ಷಣಗಳು ಆ ವ್ಯಕ್ತಿ ಒಂಟಿಯಾಗಿದ್ದಾಗ ಬರುವುದೇ ಇಲ್ಲ!
ಬದಲಿಗೆ ಆತ ನಾಲ್ಕು ಜನರ ಮಧ್ಯೆದಲ್ಲಿರುವಾಗಲೇ ಗೋಚರಿಸುವುದರಿಂದ ಈ
ಬಗೆಯ ಹಿಸ್ಟೀರಿಯಾವನ್ನು ಪತ್ತೆ ಹಚ್ಚುವುದು ಬಲು ಸುಲಭ.
ಕುತೂಹಲಕಾರಿ ವಿಷಯವೆಂದರೆ, ಹೇಗೇ
ಬಿದ್ದರೂ ಆ ವ್ಯಕ್ತಿಗೆ ಗಾಯಗಳಾಗುವುದಿಲ್ಲ!
ಜಾತ್ರೆಗಳಲ್ಲಿ ಮೈಮೇಲೆ ದೇವರು ಬಂದವರನ್ನು ಗಮನಿಸಿರಬಹುದು.
ಬಹಳ ಅಲೌಕಿಕವಾಗಿ ಮಾತನಾಡುತ್ತಿದ್ದರೂ ಅವರಿಗೆ ಸುತ್ತಲಿನ
ಪರಿಸ್ಥಿತಿಯ ಅರಿವಿರುತ್ತದೆ, ಎಷ್ಟೆಲ್ಲಾ
ಪರಾಕ್ರಮಗಳನ್ನು ತೋರಿದರೂ ಬಹುಬಾರಿ ಮೈ ಕೈಗೆ ಗಾಯಗಳಾಗುವ ಅತಿಗೆ
ಹೋಗುವುದಿಲ್ಲ ಎಂಬುದನ್ನು ಗಮನಿಸಿರಬಹುದು.
ಮೂರನೆಯದು 'ಮಾಸ್
ಹಿಸ್ಟೀರಿಯಾ' ಅಥವಾ
'ಸಮೂಹಸನ್ನಿ'.
ಹಿಸ್ಟೀರಿಯಾದಲ್ಲಿ ವ್ಯಕ್ತಿಯೊಬ್ಬನಲ್ಲಿ ಕಂಡುಬರುವ ಗುಣಲಕ್ಷಣಗಳು
ಸಮಾಜದಲ್ಲಿ ಅಥವಾ ಹಲವು ವ್ಯಕ್ತಿಗಳಲ್ಲಿ ಕಂಡುಬರುವುದು.
ಯಾರಿಗೋ ಯಾವುದೋ ಒಂದು ಕಾಯಿಲೆ ಬಂದಿದ್ದರೆ ಅದು ತಮಗೂ ಬಂದಿದೆ ಎಂದು
ಭಾವಿಸುವುದರಿಂದ ಹಿಡಿದು ಸಮಸ್ಯೆ ಅಥವಾ ಸಮಾಜದ ಯಾವುದೋ ಒಂದು ಆತಂಕದಿಂದ
ಹೊರಬರಲು ಪೂಜೆ- ಧರ್ಮ ಮುಂತಾದ ಮಾರ್ಗಗಳನ್ನು
ಹಿಡಿಯುವವರೆಗೆ ಸಮೂಹಸನ್ನಿ ಎಂಬುದು ಹರಡಿದೆ.
ಜಾತ್ರೆಗಳಲ್ಲಿ ದೇವರು ಮೈಮೇಲೆ ಬಂದವರನ್ನು
ನೀವು ನೋಡಿರಬಹುದು. ಇದನ್ನು ಮನಃಶಾಸ್ತ್ರ
'ವಿಸಿಟೇಷನ್ ಪೊಸೆಷನ್ ಸಿಂಡ್ರೋಮ್'
ಎನ್ನುತ್ತದೆ. ಇದೂ ಕೂಡ ಯಾವುದೋ ಮಾನಸಿಕ
ತುಮುಲದಿಂದ ಹೊರಬರಲು ಅಥವಾ ಸಮಸ್ಯೆಯೊಂದಕ್ಕೆ ಪರಿಹಾರ ಕಂಡುಕೊಳ್ಳಲು
ವ್ಯಕ್ತಿಯೊಬ್ಬ ಬಯಸುವ ಪರ್ಯಾಯ ಮಾರ್ಗ ಅಷ್ಟೆ.
ಅಲ್ಲಿ ಬಹಳ ನಾಟಕೀಯ ಸಂಭಾಷಣೆ ಹಾಗೂ ಸ್ವಭಾವ ಎದ್ದು
ಕಾಣುತ್ತಿರುತ್ತದೆ. ಆದರೆ ಅದು
ಉದ್ದೇಶಪೂರ್ವಕವಾಗಿರುವುದಿಲ್ಲ ಎಂಬುದು ಮಾತ್ರ ವಿಪರ್ಯಾಸ!
ನಮ್ಮ ಸಮಾಜವೂ ಅದನ್ನು ಸಂಪೂರ್ಣವಾಗಿ ಒಪ್ಪಿಕೊಂಡುಬಿಟ್ಟಿದೆ.
ಚಂದ್ರಗುತ್ತಿಯಲ್ಲಿದ್ದ ಬೆತ್ತಲೆಸೇವೆ ಜಾತ್ರೆ,
ಉಕ್ಕುಡಗಾತ್ರಿ ಇವೆಲ್ಲವೂ ಸಮೂಹಸನ್ನಿಗಳೇ.
ಏನೋ ಕಳವಳ ಅಥವಾ ಸಮಸ್ಯೆಗೆ ಸಮಾಜ ಸ್ವೀಕರಿಸುವ ಮಾರ್ಗದ ಮೂಲಕ
ಪರಿಹಾರ ಕಂಡುಕೊಳ್ಳುತ್ತಾರೆ. ಇದು ಶುದ್ಧ
ಮಾನಸಿಕ ಸಮಸ್ಯೆ ಎಂಬ ಅರಿವು ಯಾರಿಗೂ ಇರುವುದಿಲ್ಲ.
ಇಲ್ಲಿ ವ್ಯಕ್ತಿಯ ಅರಿವೇ ಇಲ್ಲದಂತೆ ಆತನ ಆತಂಕ-
ಕಳವಳಗಳು ತಮ್ಮ ಬೇರೊಂದು ಮಾಧ್ಯಮದ ಮೂಲಕ ವ್ಯಕ್ತವಾಗುತ್ತಿರುತ್ತವೆ.
ಮೈ ಮೇಲೆ ದೇವರು ಯಾವಾಗ ಬರುತ್ತಾನೆ,
ಯಾವಾಗ ಹೋಗುತ್ತಾನೆ ಅಥವಾ ಇದು ನಿಜವೇ ಸುಳ್ಳೇ ಆ ವ್ಯಕ್ತಿ ಈ ರೀತಿ
ಆಡಲು ಕಾರಣವೇನು ಎಂದು ಯಾರೂ ಚರ್ಚಿಸುವುದಿಲ್ಲ.
ಒಂದೇ ಸುಳ್ಳು ಹಲವು ಜನರ ಬಾಯಿಂದ ಹೊರಬಿದ್ದರೆ
ತಾನಾಗೇ ಅದಕ್ಕೆ ಸತ್ಯದ ಮೌಲ್ಯ ಬರುತ್ತದೆ.
ಸಮೂಹಸನ್ನಿಗೂ ಇಂಥ ಯಾವುದೋ ಒಂದು ಪೊಳ್ಳು ಸುದ್ದಿ ಸಾಕು.
ಗಣೇಶ ಹಾಲು ಕುಡಿದ ವಿಷಯದಲ್ಲೂ ಆಗಿದ್ದು ಅಷ್ಟೇ.
ವೈಜ್ಞಾನಿಕ ಕಾರಣಗಳನ್ನು ಹುಡುಕುವುದಕ್ಕೂ ಮುನ್ನ ಸಾಕ್ಷಾತ್
ಗಣಪತಿಯೇ ಧರೆಗಿಳಿದು ಭಕ್ತರ ನೈವೇದ್ಯವನ್ನು ಸ್ವೀಕರಿಸುತ್ತಿದ್ದಾನೆ ಎಂದು
ನಂಬಿ ಎಲ್ಲರೂ ಗಣೇಶನ ಮೂರ್ತಿಗೆ ಹಾಲು ಕುಡಿಸಿದರು.
ಮೊನ್ನೆ-
ಮೊನ್ನೆ ನಡೆದ ಸಾಯಿಬಾಬಾ ಕಣ್ಣು ಬಿಟ್ಟ ಪ್ರಕರಣವೂ ಅಷ್ಟೇ.
ತರ್ಕಬದ್ಧವಾಗಿ ಪರಿಸ್ಥಿತಿಯನ್ನು ನೋಡಿದವರು ಬಲು ವಿರಳ.
ವೈಜ್ಞಾನಿಕವಾಗಿ ಸಮಸ್ಯೆಯೊಂದನ್ನು ಬಗೆಹರಿಸುವ ಗುಣ ನಮ್ಮಲ್ಲಿ
ಕಡಿಮೆಯೇ. ನಮ್ಮ ಸಮಾಜದಲ್ಲಿ ಆಗಾಗ ನಡೆಯುವ
ಇಂಥ 'ಪವಾಡ'ಗಳಿಂದ
ಜನ ಮೋಸ ಹೋಗಬಾರದೆಂದರೆ ಸಾಕ್ಷಿ- ಪುರಾವೆಗಳ
ಸಹಿತ ವೈಜ್ಞಾನಿಕ ಕಾರಣಗಳನ್ನು ಮುಂದಿಡಬೇಕು.
'ಬರೀ ಸುಳ್ಳು ಅದನ್ನು ನಂಬಬೇಡಿ'
ಎಂದರೆ ಯಾರೂ ನಂಬಲಾರರು. ಅದೇ ತರ್ಕಬದ್ಧವಾದ
ವೈಜ್ಞಾನಿಕ ಕಾರಣವನ್ನು ತೋರಿಸಿದರೆ ಜನ ತಾನಾಗಿಯೇ ಮೂಢ ನಂಬಿಕೆಗಳಿಂದ
ಹೊರಬರುತ್ತಾರೆ. ಸಮೂಹಸನ್ನಿ ಎಂಬ
'ಸಾಮೂಹಿಕ ಮಾನಸಿಕ ಸಮಸ್ಯೆ'
ತಾನಾಗಿಯೇ ಮೂಲೆ ಸೇರುತ್ತದೆ.
ಟಿಎಸ್‌ಐ
|