ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಪ್ರತಿಧ್ವನಿ
ಓದುಗರ ಪತ್ರ
 

Letters- The Sunday Indian - Kannada

ಕಳವಳಕಾರಿ

'ಮೇ 15ರ ಕೊಲೆ' ಮುಖಪುಟ ಲೇಖನ ವಿಕೃತ ಮನೋಭಾವದ ಮಾಧ್ಯಮಗಳು ಸುದ್ದಿಗೆ ನೀಡುವ ಪ್ರಾಶಸ್ತ್ಯ ಮತ್ತು ಪೂರ್ವಗ್ರಹ ಪೀಡಿತ ನಂಬಿಕೆಯಿಂದ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ವ್ಯವಸ್ಥೆಯ ಕುರಿತು ಸ್ಪಷ್ಟ ಚಿತ್ರಣ ನೀಡಿದೆ. ಇತ್ತೀಚೆಗೆ ಮಾಧ್ಯಮಗಳು ಅದರಲ್ಲೂ ವಿಶೇಷವಾಗಿ ದೃಶ್ಯ ಮಾಧ್ಯಮಗಳು ವರ್ತಿಸುವ ರೀತಿ ಕಳವಳಕಾರಿ. ಮಾಧ್ಯಮಗಳಲ್ಲಿ ಬರುವ ಸುದ್ದಿಯೆಲ್ಲಾ ನಿಜವೆಂದು ಭಾವಿಸುವ ಮುಗ್ಧ ಭಾರತೀಯರ ಮನೋಸ್ಥಿತಿ, ಕೇವಲ ಟಿಆರ್‌ಪಿಯನ್ನೇ ಕೇಂದ್ರವಾಗಿರಿಸಿಕೊಂಡು ಕಾರ್ಯನಿರ್ವಹಿಸುವ ಮಾಧ್ಯಮಗಳಿಗೆ ಹೇಗೆ ತಿಳಿದೀತು? ಇಲಿ ಹೋದರೆ ಹುಲಿ ಹೋಯಿತೆಂದು ಡಂಗುರ ಬಾರಿಸುವ ಈ ಮಾಧ್ಯಮಗಳಿಗೇನಾಗಿದೆ? ಮನೆಗೆ ಜಿಂಕೆಯೊಂದು ಬಂದು ಹೋಗುತ್ತಿದ್ದರೆ ಅದನ್ನೇ ಅರ್ಧ ಗಂಟೆಯ ಸುದ್ದಿ ಮಾಡಿ ಕೊರೆಯುವ ಇವರಿಗೆ ಟಿಆರ್‌ಪಿಯೇ ಮಾನದಂಡವಾದಂತೆ ಕಾಣುತ್ತದೆ. ಇದನ್ನು ನೋಡಿದಾಗ ಮಾಧ್ಯಮದ ವಿದ್ಯಾರ್ಥಿಯಾದ ನನಗೆ ಭವಿಷ್ಯದ ಬಗೆಗಿನ ಚಿಂತೆ ಪ್ರಾರಂಭವಾಗುತ್ತಿದೆ. ಮಾಧ್ಯಮ ಕ್ಷೇತ್ರದಲ್ಲಿ ಬೇರೂರಲು ಇಂತಹ ಕಪಿ ಚೇಷ್ಟೆಗಳನ್ನು ಮಾಡಬೇಕಾದ ಅನಿವಾರ್ಯತೆ ಇದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಇದಕ್ಕಿರುವ ಪರಿಹಾರವೊಂದೇ. ಐಬಿಎನ್ ೭ ಆಶುತೋಷ್ ಹೇಳಿದಂತೆ ಟಿಆರ್‌ಪಿ ಹಾಗೂ ಟಿಎಎಂ ವ್ಯವಸ್ಥೆಯನ್ನು ಕಿತ್ತೊಗೆಯಬೇಕು.

ಎಂ. ಇರ್ಷಾದ್
ವೇಣೂರು

ಸುದ್ದಿ ವೈಭವೀಕರಣ ಬೇಡ

ಮಾಧ್ಯಮಗಳು ಯಾವತ್ತೂ ಸುದ್ದಿ ಸ್ಫೋಟಿಸಬೇಕೆನ್ನುವ ಉದ್ದೇಶದಿಂದ ಬಕಪಕ್ಷಿಗಳಂತೆ ಕಾದು ಕುಳಿತಿರುತ್ತವೆ. ಜನರಿಗೆ ರೋಚಕ ಎಂದೆನಿಸುವ ಸುದ್ದಿಗಳನ್ನಷ್ಟೇ ಪ್ರಸಾರ ಮಾಡಲು ತಾಮುಂದು ನಾಮುಂದು ಎನ್ನುವುದು ಸಾಮಾನ್ಯವಾಗಿ ಹೋಗಿದೆ. ಇವರಿಗೆ ಟಿಆರ್‌ಪಿ ಮುಖ್ಯವೇ ಹೊರತು ಯಾವ ಮಾಹಿತಿ ಸರಿಯಾಗಿದೆ, ಯಾವುದು ಅಲ್ಲ ಎಂಬುದನ್ನು ಗಣನೆಗೇ ತೆಗೆದುಕೊಳ್ಳುವುದಿಲ್ಲ. ಟಿಎಸ್‌ಐನ 'ಮೇ 15ರ ಕೊಲೆ' ಮುಖಪುಟ ಲೇಖನ ಈ ನಿಟ್ಟಿನಲ್ಲಿ ಮಾಹಿತಿಯೋಗ್ಯವಾಗಿತ್ತು. ಜೊತೆಗೆ ಲೇಖನ ಟಿಆರ್‌ಪಿ ಬೆನ್ನು ಬಿದ್ದಿರುವ ದೃಶ್ಯಮಾಧ್ಯಮಗಳ ಮಂದಿಗೆ ಸರಿಯಾಗಿಯೇ ಛೀಮಾರಿ ಹಾಕಿದೆ. ಮಾಧ್ಯಮಗಳು ಸುದ್ದಿಯನ್ನು ವೈಭವೀಕರಿಸದೆ ಸತ್ಯವನ್ನಷ್ಟೇ ಜನರಿಗೆ ತಲುಪಿಸುವತ್ತ ಗಮನ ಹರಿಸಬೇಕಾಗಿರುವುದು ಈಗಿನ ತುರ್ತು.

ಆರ್. ಪ್ರಮೀಳಾ
ಬೆಂಗಳೂರು

ಅಡ್ಡಗಾಲು ಹಾಕಬೇಡಿ

Letters- The Sunday Indian - Kannada

ಚೀನಾ ಮತ್ತು ಗಲ್ಫ್ ರಾಷ್ಟ್ರಗಳು ಅಭಿವೃದ್ಧಿ ಹೊಂದುವುದನ್ನು ತಡೆಯಲು ಅಮೆರಿಕ ಪ್ರೊಟೊಕಾಲ್‌ಗೆ ಸಹಿ ಹಾಕಲು ತಡ ಮಾಡುತ್ತಿದೆ. ಇಂತಹ ಸ್ವಾರ್ಥಪರ ಚಿಂತನೆ ಶೋಭೆ ತರುವ ಕೆಲಸವಲ್ಲ. ಒಪೆಕ್ ರಾಷ್ಟ್ರಗಳ ಆದಾಯ ಗಳಿಕೆಯ ಸಂಪೂರ್ಣ ಲಾಭ ಅಮೆರಿಕಕ್ಕೆ ಷೇರುಗಳ ರೂಪದಲ್ಲಿ ಬರುತ್ತಿರುವುದರಿಂದ ಅದು ತೈಲಬೆಲೆ ಎಷ್ಟೇ ದುಬಾರಿಯಾದರೂ ಮೌನಾಚರಣೆ ಮುಂದುವರಿಸಿದೆ. ಆದರೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಾದ ಭಾರತ, ಬಾಂಗ್ಲಾದೇಶ, ಬರ್ಮಾ ಇನ್ನಿತರ ದೇಶಗಳ ಹಾಹಾಕಾರ ಮತ್ತು ತೈಲವಿಲ್ಲದೆ ಪಡುತ್ತಿರುವ ಪಾಡು ಅದಕ್ಕೆ ತಿಳಿದಿದೆ. ಅದರೂ ಎಲ್ಲಾ ದೇಶಗಳ ಮೇಲೆ ತನ್ನ ಸಂಪೂರ್ಣ ಅಸ್ತಿತ್ವದ ಹಕ್ಕನ್ನು ಸಾಧಿಸಲು ಅಮೆರಿಕ ಮೌನ ವ್ರತ ಆಚರಿಸುತ್ತಿದೆ. ಈ ರೀತಿಯ ಕೆಟ್ಟ ಬೆಳವಣಿಗೆ ಮುಂದುವರೆದ ರಾಷ್ಟ್ರಕ್ಕೆ ಹಿತಕಾರಿಯಲ್ಲ.

ಮಲ್ಲಿಕಾ
ರಾಯಚೂರು

ಬದಲಾದ ಮಾಧ್ಯಮ ದೃಷ್ಟಿ

Letters- The Sunday Indian - Kannadaಸಮಾಜದ ಉನ್ನತಿಗೆ ಹಾಗೂ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿ, ಸಾರ್ವಜನಿಕ ಶಾಂತಿ ಕಾಪಾಡುವುದು ಮಾಧ್ಯಮಗಳ ಕರ್ತವ್ಯ. ಆದರೆ ಇಂದು ಆಗುತ್ತಿರುವ ವಿಲಕ್ಷಣಗಳನ್ನೆಲ್ಲಾ ಗಮನಿಸಿದರೆ ಮಾಧ್ಯಮಗಳಿಂದಾಗಿಯೇ ಅನಾಹುತಗಳು ಸೃಷ್ಟಿಯಾಗುತ್ತಿವೆ ಎಂದು ಅನಿಸುತ್ತಿದೆ. ಸೂಕ್ಷ್ಮ ವಿಚಾರಗಳನ್ನು ಮಾಧ್ಯಮಗಳು ಅವಲೋಕಿಸುವ ಬಗೆ ಹಾಗೂ ಫಾಲೋ ಅಪ್ ವರದಿಗಳು ಬಹುತೇಕ ಸಂದರ್ಭದಲ್ಲಿ ಅತಿ ರಂಜಿತವಾಗಿರುತ್ತವೆ. ಇನ್ನು ಕೆಲವು ಮಾಧ್ಯಮಗಳಿಗಂತೂ ಸೆಕ್ಸ್, ಮೂಢನಂಬಿಕೆ ಹಾಗೂ ಗಾಸಿಪ್‌ಗಳೇ ಬಹುದೊಡ್ಡ ಸುದ್ದಿಯಾಗಿ ಬಿಡುತ್ತಿವೆ. ಒಟ್ಟಾರೆ ಮಾಧ್ಯಮಗಳು ಹಾದಿತಪ್ಪುತ್ತಿವೆ. ಸಮಾಜಕ್ಕೆ ಪಾಠಹೇಳಬೇಕಾದ ಮಾಧ್ಯಮಗಳಿಗೆ ಯಾರು ಪಾಠ ಹೇಳಬೇಕು ಎಂಬುದೇ ಈಗಿನ ಪ್ರಶ್ನೆ.

ಎಂ. ದೀಪ್ತಿ
ಮಂಗಳೂರು

ಬದಲಿ ಇಂಧನ

ಜಾಗತಿಕ ಮಟ್ಟದಲ್ಲಿ ಹೆಚ್ಚಿದ ಸಂಘರ್ಷಗಳ ಕುರಿತು 'ಮಹಾನ್ ತೈಲ ಬಿಕ್ಕಟ್ಟು: ಇದು ವ್ಯವಸ್ಥಿತ ಷಡ್ಯಂತ್ರದ ಫಲವೇ?' (ಅರಿಂದಮ್ ಚೌಧುರಿ) ಸಂಪಾದಕೀಯ ಅಮೆರಿಕ, ರಷ್ಯಾ, ಯುರೋಪ್ ರಾಷ್ಟ್ರಗಳ ರಾಜಕೀಯ ತಂತ್ರಗಾರಿಕೆ ಬಯಲು ಮಾಡಿದೆ. ಇಂದು ಜಾಗತಿಕವಾಗಿ ನಡೆಯುತ್ತಿರುವ ವಿದ್ಯಮಾನಗಳು ಹಾಗೂ ಕಚ್ಚಾ ತೈಲಕ್ಕಾಗಿ ಭುಗಿಲೆದ್ದಿರುವ ಸಂಘರ್ಷವನ್ನು ನೋಡಿದರೆ ಜಾಗತಿಕ ಯುದ್ಧಗಳು ನಡೆಯಬಹುದಾದ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಕಚ್ಚಾ ತೈಲ ಹೊಂದಿರುವ ಅರಬ್ ಹಾಗೂ ಆಫ್ರಿಕಾ ದೇಶಗಳು ತಮಗೆ ಅಗತ್ಯವಿರುವ ಆಹಾರ ಧಾನ್ಯ ಹಾಗೂ ಇನ್ನಿತರ ಸಾಮಗ್ರಿಗಳಿಗಾಗಿ ಜಾಗತಿಕ ರಂಗದಲ್ಲಿ ಅಮೆರಿಕ-ಯುರೋಪ್ ರಾಷ್ಟ್ರಗಳಿಗಾಗಿ ವಿವಿಧ ವ್ಯಾಪಾರ ವಹಿವಾಟುಗಳನ್ನು ಅನಿವಾರ್ಯವಾಗಿ ನಡೆಸುತ್ತಿವೆ. ಈ ಅವಕಾಶ ಉಪಯೋಗಿಸಿಕೊಂಡು ಅಮೆರಿಕ-ಯುರೋಪ್ ರಾಷ್ಟ್ರಗಳು ಇರಾಕ್-ಇರಾನ್-ಆಫ್ರಿಕಾ ರಾಷ್ಟ್ರಗಳ ಜೊತೆಗೆ ಆಗಾಗ್ಗೆ ಕುಂಟು ನೆಪಗಳನ್ನು ನೀಡಿ ಯುದ್ಧಕ್ಕೆ ಮುಂದಾಗುತ್ತಿದ್ದುದು, ತೈಲ ರಾಷ್ಟ್ರಗಳನ್ನು ತಮ್ಮ ನಿಯಂತ್ರಣಕ್ಕೆ ಒಳಪಡಿಸಲು ಹೆಣಗಾಡುತ್ತಾ ಬಂದಿರುವುದು ಇತಿಹಾಸ. ಅಪಾರ ವೆಚ್ಚದಲ್ಲಿ ಕಚ್ಚಾ ತೈಲ, ಕಲ್ಲಿದ್ದಲಿನ ಸಂಪನ್ಮೂಲದಿಂದ ಇಂಧನ ತಯಾರಿಸಬಹುದಾದರೂ ಪರಿಸರ ಮಾಲಿನ್ಯ ತಡೆಯುವುದು ಕಷ್ಟ. ಹಾಗಾಗಿ ಬದಲಿ ನೈಸರ್ಗಿಕ ಇಂಧನ ಆವಿಷ್ಕಾರವಾಗಬೇಕಿದೆ.

ರೇ.ಚ. ರೇವಡಿಗಾರ
ಸಿಂಧಗಿ

ಮಹತ್ತರ ಯೋಜನೆ

ಮತಬ್ಯಾಂಕ್ ರಾಜಕೀಯಕ್ಕಾಗಿ ಸ್ವಾರ್ಥ ಯೋಜನೆಗಳನ್ನು ಜಾರಿಗೆ ತರುವ ಕಾಲವಿದು. ಆದರೆ ಪಂಜಾಬ್ ಸರ್ಕಾರ ಮದ್ಯದ ಮೇಲೆ ಹೇರಲಾದ ಸುಂಕವನ್ನು ಶೈಕ್ಷಣಿಕ ಅನುದಾನ ಪೂರೈಸಲು ಬಳಸಿಕೊಳ್ಳುತ್ತಿರುವುದು ದೇಶದ ಪ್ರಗತಿ ನಿಟ್ಟಿನಲ್ಲಿ ಮಾದರಿ ಯೋಜನೆ. 'ಅನಿಷ್ಟಕ್ಕೆ ತೆರಿಗೆ, ಶಿಕ್ಷಣಕ್ಕೆ ಬಲ' (ಪ್ರಸೂನ್ ಮಜುಂದಾರ್) ಅಂಕಣ ಉತ್ತಮವಾಗಿತ್ತು. ಪಂಜಾಬ್ ಸರ್ಕಾರದ ಈ ಮಹತ್ತರ ಯೋಜನೆಯನ್ನು ಮೆಚ್ಚಿಕೊಳ್ಳಲೇಬೇಕು. ಇಂತಹ ಯೋಜನೆಗಳು ಬಡ ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಲಿವೆ. ಕಸದಿಂದ ರಸ ಎನ್ನುವ ಮಾತಿಗೆ ಹಿಡಿದ ಕನ್ನಡಿ ಈ ಯೋಜನೆ. ಇಂತಹ ಇನ್ನಷ್ಟು ವಿವೇಚನಾಶೀಲ ಚಿಂತನೆಗಳು ಜಾರಿಗೆ ಬರುವ ಅವಶ್ಯಕತೆಯಿದೆ. ದಿನೇ ದಿನೇ ಹೆಚ್ಚಾಗುತ್ತಿರುವ ಮದ್ಯವ್ಯಸನಿಗಳಿಂದ ನಮ್ಮ ದೇಶಕ್ಕೆ ನಷ್ಟವಿದೆಯೇ ಹೊರತು ಯಾವುದೇ ರೀತಿಯ ಲಾಭವಿಲ್ಲ. ನಮ್ಮಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇಂತಹ ಯೋಜನೆಗಳ ಅವಶ್ಯಕತೆ ಇದೆ. ಇದರಿಂದಾಗಿ ಅದೆಷ್ಟೋ ಬಡ ವಿದ್ಯಾರ್ಥಿಗಳ ಜೀವನ ರೂಪುಗೊಳ್ಳುತ್ತದೆ. ಆದಷ್ಟು ಬೇಗ ಇತರ ರಾಜ್ಯಗಳು ಹಾಗೂ ಕರ್ನಾಟದಲ್ಲೂ ಈ ಯೋಜನೆ ಜಾರಿಗೆ ಬರಲಿ ಎಂಬುದೇ ನಮ್ಮೆಲ್ಲರ ಆಶಯ.

ಸುನೀಲ ಎಸ್. ಅರಿಕೇರಿ
ಗುಲ್ಬರ್ಗಾ

ಅತ್ಯುತ್ತಮ ನಿರ್ಣಯ

'ಅನಿಷ್ಟಕ್ಕೆ ತೆರಿಗೆ, ಶಿಕ್ಷಣಕ್ಕೆ ಬಲ' (ಪ್ರಸೂನ್ ಮಜುಂದಾರ್) ಅಂಕಣ ಚಿಂತನೆಗೆ ಒರೆಹಚ್ಚಿತು. ಪಂಜಾಬ್ ಸರ್ಕಾರ ಕೈಗೊಂಡ ಮಹತ್ವದ ನಿರ್ಣಯವಿದು. ಮದ್ಯ ಮಾರಾಟದ ಮೇಲೆ ಸುಂಕ ವಿಧಿಸಿ ಸಂಗ್ರಹಿಸಿದ ಹಣದಿಂದ ಶಿಕ್ಷಣ ಕ್ಷೇತ್ರ ಅಭಿವೃದ್ಧಿ ಪಡಿಸಿ ಬಡ ಕುಟುಂಬದಿಂದ ಬಂದ ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡುವ ಕ್ರಮವನ್ನು ಎಲ್ಲೆಡೆ ಜಾರಿಗೆ ತರಬೇಕು. ಇದರಿಂದ ಒಬ್ಬ ವಿದ್ಯಾರ್ಥಿಯ ಬದುಕು ಹಸನಾಗುತ್ತದೆ. ರಾಜಕೀಯ ಮತ್ತು ಸಾಮಾಜಿಕ ಚೌಕಟ್ಟು ಇರುವ ಚಿಂತನೆ ಇದು. ಈ ಮಾದರಿ ಯೋಜನೆಯಲ್ಲಿ ಭಾರತೀಯ ಉದ್ಯಮಗಳು ಭಾಗವಹಿಸುತ್ತಿರುವುದು ಸಂತೋಷದ ವಿಷಯ. ಇತ್ತೀಚಿನ ದಿನದಲ್ಲಿ ಮದ್ಯವ್ಯಸನಿಗಳು ಹೆಚ್ಚಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂತಹ ಯೋಜನೆಗಳು ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿವೆ.

ನೀಲಕಂಠ ಸ್ವಾಮಿ ದಿನ್ನಿ
ರಾಯಚೂರು

ಪ್ರಭಾವಶಾಲಿ ಪತ್ರಿಕೆ

ಹದಿನಾಲ್ಕು ಭಾಷೆಗಳಲ್ಲಿ ಪ್ರಕಟವಾಗುತ್ತಿರುವ ಅತ್ಯಂತ ಪ್ರಭಾವಶಾಲಿ ವಾರಪತ್ರಿಕೆ ನೋಡಿದ್ದು ನಾನು ಇದೇ ಮೊದಲು. ಅತ್ಯುತ್ತಮ ಲೇಖನ ಸರಮಾಲೆಯೊಂದಿಗೆ ಮೊದಲ ಪುಟದಿಂದ ಕೊನೆಯ ಪುಟದವರೆಗೂ ಅಚ್ಚಾಗಿರುವ ವಿಷಯಗಳು ಸಮೃದ್ಧ ಭಾರತ ನಿರ್ಮಾಣದ ಮೈಲಿಗಲ್ಲುಗಳಾಗಿ ವಿಜೃಂಭಿಸುತ್ತಿರುವುದು ಈ ಪತ್ರಿಕೆಯ ವೈಶಿಷ್ಟ್ಯ. ಉತ್ತಮ ಗುಣಮಟ್ಟದ ಮುದ್ರಣ, ಗುಣಾತ್ಮಕ ವಿಚಾರಗಳುಳ್ಳ ಮಾಹಿತಿ... ಏನಿಲ್ಲ ಇದರಲ್ಲಿ? ಟಿಎಸ್‌ಐ ಪತ್ರಿಕಾ ರಂಗದಲ್ಲಿಯೇ ಹೊಸ ನಕ್ಷತ್ರವಾಗಿ ಮಿನುಗುತ್ತಿದೆ. ರಾಜ್ಯ, ರಾಷ್ಟ್ರ, ಅಂತರ್ ರಾಷ್ಟ್ರೀಯ ಮಟ್ಟದ ಸುದ್ದಿಯ ವಿಶ್ಲೇಷಣೆ ಅತ್ಯಂತ ಸರಳ ರೀತಿಯಲ್ಲಿ ಮತ್ತು ಮಾತೃಭಾಷೆಯಲ್ಲಿ ಲಭ್ಯವಾಗಿರುವುದು ವಿಶೇಷ. ಐತಿಹಾಸಿಕ, ಸಾಮಾಜಿಕ, ಆರ್ಥಿಕ, ಕೈಗಾರಿಕೆ, ಕ್ರೀಡೆ, ಕಲೆ, ಸಾಹಿತ್ಯ, ಸಂಸ್ಕೃತಿ, ಸಿನಿಮಾ, ರಾಜಕೀಯ ಹೀಗೆ ಹತ್ತು ಹಲವು ವಿಚಾರಗಳ ಮೇಲೆ ಬೆಳಕು ಚೆಲ್ಲುವ ಪತ್ರಿಕೆ ಇಂದಿನ ಸ್ಪರ್ಧಾಯುಗದ ಜನತೆಗೆ ಪೂರಕ. ಪ್ರತಿ ಪುಟವೂ ಒಂದೊಂದು ಸವಾಲು. ಪತ್ರಿಕಾ ಬಳಗಕ್ಕೆ

ನನ್ನ ಕೃತಜ್ಞತೆಗಳು.

ರಾಜು ಎಸ್. ಗಾಲಿ
ಬೆಳಗಾವಿ

ಹೊಸ ಸೇರ್ಪಡೆ?

Letters- The Sunday Indian - Kannadaಬಿಎಸ್‌ಪಿ ನಾಯಕಿ ಮಾಯಾವತಿ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ. ತಮಗಿಂತ ಎತ್ತರವಾಗಿದೆ ಎಂಬ ಕಾರಣಕ್ಕೆ ಮೂರ್ತಿ ನಾಶ ಪಡಿಸಿದ್ದು, ತಾವು ಬದುಕಿರುವಾಗಲೇ ತಮ್ಮ ಮೂರ್ತಿ ಸ್ಥಾಪಿಸಿದ್ದೆಲ್ಲವನ್ನೂ ನೋಡಿದರೆ ಇದು ಸ್ಪಷ್ಟವಾಗುತ್ತದೆ. ದಲಿತರಿಂದ ದಲಿತರಿಗಾಗಿ ಎಂಬ ಘೋಷಣೆಯಿಂದ ಹುಟ್ಟು ಹಾಕಿದ್ದ ಬಿಎಸ್‌ಪಿ ಇಂದು ಬ್ರಾಹ್ಮಣರ ಪಕ್ಷವಾಗಿದೆ. ಒಂದು ಕಾಲಕ್ಕೆ ದಲಿತರಲ್ಲಿ ಹೋರಾಟ ಮನೋಭಾವ ಹುಟ್ಟಿಸಿದ್ದ ಮಾಯಾ ಈಗ ಬಿಎಸ್‌ಪಿಯನ್ನು ಪಕ್ಷ ಸಿದ್ಧಾಂತ ಮರೆತ ಪಕ್ಷವನ್ನಾಗಿ ಮಾಡಿದ್ದಾರೆ. ಸಿಂಧ್ಯಾರಂತಹ ಧುರೀಣರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದು ಅವರ ಸರ್ವಾಧಿಕಾರಿ ಮನೋಭಾವಕ್ಕೆ ಸಾಕ್ಷಿ. ಶಾಸಕರು, ಸಂಸದರನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದ ಇಂದಿರಾಗಾಂಧಿ, ಸೋನಿಯಾ ಗಾಂಧಿ ಪಟ್ಟಿಗೆ ಮಾಯಾವತಿ ಹೊಸ ಸೇರ್ಪಡೆ.

ಅನಿಲಕುಮಾರ ಶೆಟ್ಟಿ
ಮುದಗಲ್

ಅಭಿನಂದನೆ

ಅಂತರ್ಜಾಲದಲ್ಲಿ ಟಿಎಸ್‌ಐ ಆವೃತ್ತಿ ನೋಡಿ ಖುಷಿ ಆಯಿತು. ನಮಗೆ ಕೆಲವೊಮ್ಮೆ ಪತ್ರಿಕೆ ಸಿಗುವುದಿಲ್ಲ. ಆಗ ಅಂತರ್ಜಾಲ ಆವೃತ್ತಿಯನ್ನೇ ಓದಿಗೆ ಅವಲಂಬಿಸುತ್ತೇವೆ. ಈ ಆವೃತ್ತಿಯಿಂದ ನಮ್ಮಂತಹ ಕಂಪ್ಯೂಟರ್ ಉಪಯೋಗಿಸುವ ಓದುಗರು ಹೆಚ್ಚಾಗುತ್ತಾರೆ. ಪತ್ರಿಕೆಯ ಅಂತರ್ಜಾಲ ತಾಣದ ಬಳಗಕ್ಕೆ ನನ್ನ ಅಭಿನಂದನೆಗಳು. 'ಪ್ರಗತಿಗೆ ವಿದ್ಯುತ್ ಬರೆ' (ಎನ್.ಕೆ. ಸುಪ್ರಭಾ) ಲೇಖನ ಸಮಯೋಚಿತವಾಗಿದೆ. ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ ರೈತರಿಗೆ ಉಚಿತ ವಿದ್ಯುತ್ ಕೊಡುತ್ತೇನೆ ಎನ್ನುತ್ತಿದ್ದಾರೆ. ಆದರೆ ಅದೆಷ್ಟು ನಿಜವೋ ಗೊತ್ತಿಲ್ಲ. ಬಣ್ಣದ ಲೋಕದಲ್ಲಿ ಸ್ಯಾಂಡಲ್‌ವುಡ್ ಬರಹಗಳು ಮತ್ತು ಅದರ ಶಿರೋನಾಮೆಗಳು ಚುರುಕಾಗಿರಲಿ.

ನಯನ, ಬೆಂಗಳೂರು
ಇ-ಮೇಲ್ ಮೂಲಕ

ಉತ್ತಮ ಕಥಾಶೈಲಿ

'ಮನಸ್ಸಿನ ಧರ್ಮ' (ಶಾಂತಾರಾಮ ಸೋಮಯಾಜಿ) ಕಥೆ ಉತ್ತಮ ಕಥಾಶೈಲಿಗೊಂದು ನಿದರ್ಶನ. ಪ್ರತಿಯೊಬ್ಬರ ಮನಸ್ಸಿನ ಮೂಲೆಯಲ್ಲಿ ಒಂದು 'ಧರ್ಮದ ಮನಸ್ಸು' ಯಾವ ರೀತಿ ಇರುತ್ತದೆ ಎನ್ನುವುದನ್ನು ಕಥೆ ತೆರೆದಿಟ್ಟಿದೆ. ಆದರೆ 'ಮುಸ್ಲಿಂ ಮನಸ್ಸು' ಹಿಂದೂ ಮನಸ್ಸಿನಲ್ಲೂ ಸೇರಿಕೊಂಡಿರುತ್ತದೆ ಎಂಬುದನ್ನು ಮರೆಯುವಂತಿಲ್ಲ.

ವಿಜಯ್ ಕುಮಾರ್
ಮೂಡಬಿದಿರೆ

ಸೂಕ್ಷ್ಮ ವಿಚಾರ ತೆರೆದಿಟ್ಟ ಕಥೆ

ಧರ್ಮದಂತಹ ಸೂಕ್ಷ್ಮ ವಿಷಯಗಳನ್ನು ಕಥೆಗೆ ವಸ್ತುವಾಗಿಸುವಾಗ ತಾನೇನು ಹೇಳುತ್ತಿದ್ದೇನೆ ಎನ್ನುವ ಸ್ಪಷ್ಟ ಕಲ್ಪನೆ ಕಥೆಗಾರರಲ್ಲಿ ಇರಬೇಕಾಗುತ್ತದೆ. ಆ ಸೂಕ್ಷ್ಮವನ್ನು 'ಮನಸ್ಸಿನ ಧರ್ಮ'ದಲ್ಲಿ ಸೋಮಯಾಜಿ ಅವರು ಚೆನ್ನಾಗಿ ಪ್ರತಿಬಿಂಬಿಸಿದ್ದಾರೆ.

ಮನೋಹರ್, ಧಾರವಾಡ
ಇ-ಮೇಲ್ ಮೂಲಕ

ಆಕರ್ಷಕ ವಿನ್ಯಾಸ

ಈ ವಾರದ ಟಿಎಸ್‌ಐ ಪತ್ರಿಕೆಯ ಮುಖಪುಟ ಮತ್ತು ವಿನ್ಯಾಸ ಉತ್ತಮವಾಗಿತ್ತು. ಟಿಎಸ್‌ಐ ಬಳಗಕ್ಕೆ ಕೃತಜ್ಞತೆಗಳು.

ಯೋಗೀಶ್ ಎಂ.ಎಚ್, ಚಿತ್ರದುರ್ಗ
ಇ-ಮೇಲ್ ಮೂಲಕ

ಬಹುಮಾನಿತ ಪತ್ರಗಳು

Letters- The Sunday Indian - Kannada

ನಾಚಿಕೆಗೇಡು

'ಬಿಜೆಪಿ-ಕಾಂಗ್ರೆಸ್ ಕೈಜೋಡಿಸಿದರೆ...' (ಅರಿಂದಮ್ ಚೌಧುರಿ) ಯಾವುದೇ ರಾಷ್ಟ್ರೀಯ ಧ್ಯೇಯಗಳಿಲ್ಲದ ಸಣ್ಣ ಪುಟ್ಟ ಪ್ರಾದೇಶಿಕ ಪಕ್ಷಗಳು ಭಾರತದ ಹಿನ್ನಡೆಗೆ ಕಾರಣವಾಗುತ್ತಿವೆ ಎನ್ನುವ ನಿಮ್ಮ ಮಾತು ಅಕ್ಷರಶಃ ಸತ್ಯ. ಹಣಕಾಸು, ಆಹಾರ, ತೈಲ, ಭಯೋತ್ಪಾದನೆ ಮತ್ತು ನಕ್ಸಲ್ ಸಮಸ್ಯೆಗಳು ಜೊತೆಯಾಗಿ ಭಾರತವನ್ನು ಕಾಡುತ್ತಿರುವಾಗ ಇಂತಹ ಪ್ರವೃತ್ತಿ ನಾಚಿಕೆಗೇಡು. ಈ ಪ್ರಾದೇಶಿಕ ರಾಜಕೀಯ ಪಕ್ಷಗಳು ಮಾತ್ರ ನಿರಾತಂಕವಾಗಿ ತಮ್ಮ ಸ್ವಾರ್ಥ ಸಾಧನೆಗಾಗಿ ರಾಷ್ಟ್ರಹಿತವನ್ನು ಬಲಿಕೊಡುತ್ತಿವೆ. ಉತ್ತರಪ್ರದೇಶವನ್ನೂ ಮೀರಿ ಬೆಳೆಯುತ್ತಿರುವ ಮಾಯಾವತಿ ಪ್ರಾಮುಖ್ಯತೆಯನ್ನು ಅಡಗಿಸುವುದೇ ಸಮಾಜವಾದಿ ಪಕ್ಷದ ಮುಲಾಯಂಸಿಂಗ್ ಅವರ ಮುಖ್ಯ ಧ್ಯೇಯವಾಗಿದೆಯೇ ವಿನಾ ಅಣು ಒಪ್ಪಂದದಿಂದ ದೇಶಕ್ಕಾಗುವ ಲಾಭ ಹಾಗೂ ನಷ್ಟದ ಚಿಂತೆ ಅವರಿಗಿಲ್ಲ. ಇತ್ತ ಮಾಯಾವತಿಗೆ ಪ್ರಧಾನಿಪಟ್ಟ ಏರುವ ತರಾತುರಿ! ಅತ್ತ ಆರೋಪಿ ಶಿಬು ಸೊರೇನ್‌ಗೆ ಮಂತ್ರಿಪಟ್ಟ! ಇದರಿಂದ ಜನಸಾಮಾನ್ಯರಿಗೆ ಏನು ಲಾಭ ಎಂದು ನಾವು ರಾಜಕೀಯ ಪಕ್ಷಗಳನ್ನು ಪ್ರಶ್ನಿಸಬೇಕಿದೆ. ಲಂಚದ ಹಣವನ್ನು ಪ್ರದರ್ಶಿಸಿದ್ದು, ಸಂಸತ್ತಿನ ಇತಿಹಾಸದಲ್ಲಿಯೇ ಕಪ್ಪು ಚುಕ್ಕೆ. ಇದು ನಿಜಕ್ಕೂ ನಾಚಿಕೆಗೇಡು. ರಾಷ್ಟ್ರೀಯ ಧ್ಯೇಯಗಳನ್ನು ಹೊಂದಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಕೈ ಜೋಡಿಸಬೇಕಿದೆ.

ರಿಚಾ ಅಗರ್‌ವಾಲ್
ಅಹಮದಾಬಾದ್ 

ಪಕ್ಷಗಳು ಒಂದಾಗಬೇಕು

ಅಧ್ಯಕ್ಷೀಯ ಪದ್ಧತಿಯ ಸರ್ಕಾರ ವ್ಯವಸ್ಥೆಯ ಕುರಿತು ಟಿಎಸ್‌ಐ ಪ್ರಕಟಿಸಿದ ಲೇಖನ ನೆನಪಾಗುತ್ತಿದೆ. ಅದು ಅತ್ಯಂತ ತರ್ಕಬದ್ಧ ಚಿಂತನೆ. ವಿಶ್ವಾಸಮತ ಯಾಚನೆಯ ಘಟನೆ ಈ ನಂಬಿಕೆಯನ್ನು ಮತ್ತೊಮ್ಮೆ ಬಲಪಡಿಸಿದೆ. ಅಧ್ಯಕ್ಷೀಯ ಪದ್ಧತಿಯನ್ನು ಭಾರತದಲ್ಲಿ ಜಾರಿಗೊಳಿಸಿದರೆ ಸಂಸದರು ಹಾಗೂ ಶಾಸಕರು ದಿನ ನಿತ್ಯ ಸರ್ಕಾರದ ಕಾರ್ಯವೈಖರಿಯಲ್ಲಿ ಮೂಗು ತೂರಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ ಪಕ್ಷಾಂತರ ಮತ್ತು ಮೈತ್ರಿ ರಾಜಕಾರಣದ ನಾಟಕಗಳನ್ನು ಜನ ಅನುಭವಿಸುವ ಸಾಧ್ಯತೆಯೂ ಇಲ್ಲವಾಗುತ್ತದೆ. ಈಗಿರುವ ವ್ಯವಸ್ಥೆ ಅತ್ಯಂತ ದುಬಾರಿ ಮತ್ತು ಅಭದ್ರ. ಹಾಗಾಗಿ ಚುನಾಯಿತ ಅಭ್ಯರ್ಥಿಗಳ ಅಧಿಕಾರವನ್ನು ಕಡಿಮೆ ಮಾಡಬೇಕಾದ ಅನಿವಾರ್ಯತೆ ಇದೆ. ಸಂಪಾದಕರು ಹೇಳಿದಂತೆ ಭಾರತದ ರಕ್ಷಣೆಗಾಗಿ ಎರಡು ಬೃಹತ್ ಪಕ್ಷಗಳು ತಮ್ಮ ಉದ್ದಿಶ್ಯಗಳನ್ನು ಸರಿಪಡಿಸಿಕೊಳ್ಳುವುದು ಅಗತ್ಯ. ಅಮೆರಿಕ ಹಾಗೂ ಇಂಗ್ಲೆಂಡ್‌ನಲ್ಲಾಗುವಂತೆ ದೇಶ ಹಿತಕ್ಕಾಗಿ ಎರಡೂ ಪಕ್ಷಗಳು ಒಂದಾಗಬೇಕು.

ನೀಲಂ ಪಹ್ವಾ
ಇ-ಮೇಲ್ ಮೂಲಕ

Letters- The Sunday Indian - Kannadaದೂರದೃಷ್ಟಿ ಅಗತ್ಯ

ಟಿಎಸ್‌ಐ ಇಂಗ್ಲಿಷ್ ಪತ್ರಿಕೆಯಲ್ಲಿ ಆರಂಭವಾಗಿರುವ ಹೊಸ ವಿಭಾಗ 'ಬ್ಯುಸಿನೆಸ್ & ಎಕಾನಮಿ' ಉದ್ಯಮ ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದರ ಪರಿಚಯ ಮಾಡಿಕೊಡುತ್ತಿದೆ. ಅಂಬಾನಿ ಸಹೋದರರ ನಡುವಿನ ವೈಷಮ್ಯವನ್ನು ಈ ವಿಭಾಗದಲ್ಲಿ ವಿಶ್ಲೇಷಿಸಿದ ರೀತಿ ಚೆನ್ನಾಗಿತ್ತು. ಅಂಬಾನಿ ಸಹೋದರರದು ಮಹತ್ವಾಕಾಂಕ್ಷೆ ಉಳ್ಳವರು. ಭಾರತದಲ್ಲಿ ಮುಂಚೂಣಿಯಲ್ಲಿರುವ ಉದ್ಯಮ ಸಮೂಹವಾಗಿರುವ ಇವರ ಶೀತಲ ಸಮರದಿಂದ ಎಂತಹ ಪರಿಣಾಮ ಉಂಟಾಗಬಹುದು ಎಂಬುದನ್ನು ಅವರು ಅರ್ಥೈಸಿಕೊಳ್ಳಬೇಕಾಗಿದೆ. ಕಳೆದ ಮೂರು ವರ್ಷಗಳಿಂದ ಇಬ್ಬರ ನಡುವಿನ ಜಗಳ ಹೆಚ್ಚುತ್ತಲೇ ಇದ್ದು ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಅಧಿಪತ್ಯ ಸಾಧಿಸಲು ಕಿತ್ತಾಡುತ್ತಿದ್ದಾರೆ. ಹೊಸದಾಗಿ ಆರಂಭಿಸಲಾಗಿದ್ದ 'ರಿಲಯನ್ಸ್ ಪವರ್ ಐಪಿಒ' ನೆಲಕಚ್ಚಿತು. ವ್ಯವಹಾರ ನಡೆಸುವುದಷ್ಟೇ ಮುಖ್ಯವಲ್ಲ. ಉತ್ತಮ ವ್ಯವಹಾರ ನಡೆಸಬೇಕಾದದ್ದು ಮುಖ್ಯ. ಅವರ ತಂದೆ ಧೀರೂಭಾಯಿ ಅಂಬಾನಿಗೆ ದೇಶದ ಕುರಿತಾಗಿ ದೂರದೃಷ್ಟಿ ಇತ್ತು. ಹಾಗಾಗಿಯೇ ಜಗತ್ತಿನ ವಿವಾದಾತೀತ ನಾಯಕರಾದರು. ಇದನ್ನೇ ಅಂಬಾನಿ ಸಹೋದರರಿಂದಲೂ ನಿರೀಕ್ಷಿಸಲಾಗುತ್ತಿದೆ. ಈ ಅಂತಃಕಲಹ ದೇಶದ ಉದ್ಯಮ ವಲಯವನ್ನೇ ಹಿಡಿದಿಟ್ಟಿರುವುದು ಸುಳ್ಳಲ್ಲ.

ದಿಲಿಪ್ ಸಿಂಗ್ ಚೌಹಾಣ್
ಅಜ್ಮೀರ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .