ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 
ಸಂಪಾದಕೀಯ
ಭಯೋತ್ಪಾದನೆ ವಿರುದ್ಧ ಸಮರದ ಕುಯಿಲು ಕೊಯ್ದ ಪಿಎಂಸಿ ಉದ್ಯಮ
 
    
Arindam Choudhuri
ಅರಿಂದಮ್ ಚೌಧುರಿ,
ಪ್ರಧಾನ ಸಂಪಾದಕರು,
ದ ಸಂಡೆ ಇಂಡಿಯನ್

ಅಮೆರಿಕ ಯೋಧರು ಒಬ್ಬೊಬ್ಬರಾಗಿ ಇರಾಕ್‌ನಿಂದ ಶವಗಳಾಗಿ ವಾಪಸಾಗತೊಡಗಿದಂತೆ ವಿಯೆಟ್ನಾಂ ದುಃಸ್ವಪ್ನ ಮತ್ತೆ ಕಾಡಲಾರಂಭಿಸಿತು. ಅಮೆರಿಕ ಮತ್ತು ಸೋವಿಯತ್‌ನ ಅಧಿಕಾರದ ಚುಕ್ಕಾಣಿ ಹಿಡಿದವರ ನಡುವಿನ ಸೈದ್ಧಾಂತಿಕ ತಿಕ್ಕಾಟದಿಂದಾಗಿ ಸಾವಿರಾರು ಮಂದಿ ಅಮೆರಿಕ ಯೋಧರು ಅನಾವಶ್ಯಕವಾಗಿ ಜೀವ ಬಿಟ್ಟ ವಿಯೆಟ್ನಾಂ ಯುದ್ಧದಲ್ಲಿ ಅವರ ಪಾಲಿಗೆ ಸೋಲು ಎಂಬುದು 40 ವರ್ಷಗಳ ಕಾಲ ನಿಧಾನವಾಗಿ ಹರಿಯುತ್ತಾ ಹೆಜ್ಜೆ ಇಟ್ಟಿತ್ತು. ಆದರೂ, ಆ ಯುದ್ಧ ಮನುಕುಲದ ಒಳಿತಿಗಾಗಿ ಏನು ಮಾಡಿತು ಎಂದರೆ, ಯಾವ ಕ್ಷಣದಲ್ಲಿ ಮಹಾಯುದ್ಧ ಎರಗುವುದೋ ಎಂಬ ನಿತ್ಯಭೀತಿಯ ಶೀತಲ ಸಮರವನ್ನು ಬಿಟ್ಟು ಇನ್ನೇನನ್ನೂ ಅದು ಕೊಡುಗೆ ನೀಡಲಿಲ್ಲ.

ಇರಾಕ್ ವಿಷಯದಲ್ಲಿ ಕೂಡ ಹಾಗೇ. ಅಮೆರಿಕ ಯೋಧರ ಸರಣಿ ಸಾವನ್ನು ಕಂಡು ಸ್ಥಳೀಯರಲ್ಲಿ ತಮ್ಮ ಆಡಳಿತದ ವಿರುದ್ಧ ಹೆಚ್ಚುತ್ತಿರುವ ಆಕ್ರೋಶವನ್ನು ಅರಿತೂ ಮತ್ತೆ ಇರಾಕ್‌ನಲ್ಲಿನ ತನ್ನ ಕಾರ್ಯಾಚರಣೆಯನ್ನು ಮುಂದುವರಿಸುವುದು ಅಮೆರಿಕ ಅಧ್ಯಕ್ಷ ಬುಷ್ ಮತ್ತು ಅವರ ಆಡಳಿತಕ್ಕೆ ಸರಳವಾಗಿರಲಿಲ್ಲ. ಆದರೆ, ಅಲ್ಲಿನ ತೈಲ ನಿಕ್ಷೇಪ ಮತ್ತು ಇರಾಕ್ ಪುನರ್ ನಿರ್ಮಾಣದ ಅಗಾಧ ಪ್ರಮಾಣದ ಗುತ್ತಿಗೆಗಳ ಆಮಿಷ ಯಃಕಶ್ಚಿತ್ ಯೋಧರ ಸಾವಿಗಾಗಿ ಹಿಂದೆ ಸರಿಯದಂತೆ ಅವರನ್ನು ತಡೆದವು! ಇರಾಕಿನಲ್ಲಿ ಸಿಗಲಿರುವ ಭಾರೀ ರಸದೌತಣದ ಎದುರು ಯೋಧರ ಸಾವು ಯಾವ ಲೆಕ್ಕ!? ಆದರೂ, ದೇಶದ ಜನರ ಆಕ್ರೋಶ ಶಮನಕ್ಕೆ ಉಳಿದಿರುವ ದಾರಿ ಏನು ಎಂದು ಯೋಚಿಸಿದಾಗ ಬುಷ್‌ಗೆ ಹೊಳೆದದ್ದು ಹೊರಗುತ್ತಿಗೆಯ ಈ ಜಾಯಮಾನದಲ್ಲಿ ಅಮೆರಿಕ ಯೋಧರ ಜೀವವನ್ನೂ ಉಳಿಸಿಕೊಂಡು, ಅಲ್ಲಿ ಸಿಗಲಿರುವ ಭಾರೀ ವ್ಯವಹಾರದ ಲಾಭವನ್ನೂ ಗಳಿಸುವ ಉಪಾಯವೆಂದರೆ ಖಾಸಗಿ ಸೇನೆಯನ್ನು ಗುತ್ತಿಗೆ ಪಡೆಯುವುದು!

ಆಗ ಸಿಕ್ಕಿದ್ದೇ ಖಾಸಗಿ ಸೇನಾ ಸಂಸ್ಥೆಗಳು (ಪಿಎಂಸಿ). ಅವುಗಳ ಕೆಲಸವೆಂದರೆ ಅತ್ಯಂತ ಕಠಿಣ ತರಬೇತಿ ಹೊಂದಿದ ತಮ್ಮ ಪಡೆಯ ಮೂಲಕ ಇರಾಕಿನಲ್ಲಿನ ಅಮೆರಿಕದ ಆಸ್ತಿ-ಪಾಸ್ತಿಯನ್ನು ರಕ್ಷಿಸುವುದು. ಅಭಿವೃದ್ಧಿಶೀಲ ರಾಷ್ಟ್ರಗಳಿಂದ ಮಾನವ ಸಂಪನ್ಮೂಲವನ್ನು ಬಾಡಿಗೆ ಪಡೆಯುವ ಬಹುತೇಕ ಅಮೆರಿಕನ್ ಕಾರ್ಪೊರೇಟ್ ಕಂಪನಿಗಳಂತೆಯೇ ಈ ಪಿಎಂಸಿಗಳು ಕೂಡ. ಎಷ್ಟು ಬಡ ರಾಷ್ಟ್ರದಿಂದ ತಮ್ಮ ಪಡೆಗೆ ಯೋಧರನ್ನು ನೇಮಕ ಮಾಡಿಕೊಳ್ಳುತ್ತಾರೋ ಅಷ್ಟು ಅವರಿಗೆ ಲಾಭ. ಉದಾಹರಣೆಗೆ, ಬುಷ್ ಅವರ ಇರಾಕ್ ಕಾರ್ಯಾಚರಣೆಯಿಂದ ಬಹು ದೊಡ್ಡ ಲಾಭ ಪಡೆದ ಬ್ಲಾಕ್‌ವಾಟರ್ ಖಾಸಗಿ ಸೇನಾ ಸಂಸ್ಥೆಯನ್ನೇ ತೆಗೆದುಕೊಳ್ಳಿ. ಲ್ಯಾಟಿನ್ ಅಮೆರಿಕ ಮತ್ತು ಏಷ್ಯಾ ರಾಷ್ಟ್ರಗಳ ಮಾಜಿ ಸೈನಿಕರನ್ನು ನೇಮಕ ಮಾಡಿಕೊಳ್ಳುವ ಮೂಲಕ ಬಹುದೊಡ್ಡ ಪ್ರಮಾಣದ ಲಾಭವನ್ನೇ ಮಾಡಿತು. ಪೆರು, ಚಿಲಿ, ಫಿಜಿ ಮತ್ತು ನೇಪಾಳ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಭಾರೀ ಪ್ರಮಾಣದ ಬಡತನ ಮತ್ತು ನಿರುದ್ಯೋಗ ತೀವ್ರವಾಗಿದೆ. ಇತ್ತೀಚಿನ ವರದಿಗಳ ಪ್ರಕಾರ ಬಹುತೇಕ ಮಂದಿಗೆ ತಿಂಗಳಿಗೆ ಒಂದು ಸಾವಿರದಿಂದ 3000 ಡಾಲರ್‌ವರೆಗೆ ಸಂಬಳ ನೀಡಲಾಗಿದೆ. ಅವರ ದೇಶಗಳ ಸ್ಥಿತಿಗೆ ಹೋಲಿಸಿದರೆ ಪೆರು, ಚಿಲಿ ಮತ್ತಿತರ ಲ್ಯಾಟಿನ್ ಅಮೆರಿಕ ಅಥವಾ ಏಷ್ಯಾ ರಾಷ್ಟ್ರಗಳ ಮಂದಿಗೆ ಒಂದು ಸಾವಿರ ಡಾಲರ್ ಸಂಬಳವೆಂಬುದು ಕನಸಿನಲ್ಲೂ ಊಹಿಸಲಾಗದಷ್ಟೇ ಸರಿ. ಹಾಗೇ ಇತ್ತ ಬ್ಲಾಕ್‌ವಾಟರ್ ಮತ್ತು ಅಮೆರಿಕ ಸರ್ಕಾರಕ್ಕೆ ಅಂತಹವರು ಎರಡು ಬಗೆಯಲ್ಲಿ ಲಾಭದಾಯಕ. ಒಂದು ಸಾವಿನ ಬೆಲೆ ತೆತ್ತರೂ ಅದರ ಯಾವ ಅಂಜಿಕೆಯೂ ಇಲ್ಲದೆ ತಮ್ಮವರನ್ನು ಉಳಿಸಿಕೊಳ್ಳಬಹುದು ಎಂಬುದು. ಏಕೆಂದರೆ, ಈ ಜಗತ್ತಿನಲ್ಲಿ ಒಬ್ಬ ಅಮೆರಿಕನ್ನನ ಜೀವ ಉಳಿಸಲು ನೂರು ಮಂದಿ ಚಿಲಿಯನ್ನರು ಅಥವಾ ಪೆರುವಿಗರು ಜೀವ ತೆತ್ತರೂ ಅವರ ಜೀವಗಳಿಗೆ ಮೂರು ಕಾಸಿನ ಕಿಮ್ಮತ್ತೂ ಇಲ್ಲವಲ್ಲ!

ಕಡುಬಡ ದೇಶಗಳ ದಿಕ್ಕೆಟ್ಟ ಕುಟುಂಬಗಳ ಗಂಡಸರನ್ನು ಅವರಿಗೆ ಸಂಬಂಧವೇ ಪಡದ ಯುದ್ಧದಲ್ಲಿ ಕಾದಾಡಲು ಅವರದ್ದಲ್ಲದ ದೇಶವೊಂದಕ್ಕೆ ಕಳುಹಿಸುವುದಕ್ಕಿಂತ ಹೇಯ ಶೋಷಣೆ ಮತ್ತೊಂದಿರಲಾರದು. ಅಂತಹ ಸಂದಿಗ್ಧತೆಯಿಂದ ಮಾನಸಿಕವಾಗಿ ಜರ್ಝರಿತರಾಗುವ ಯೋಧರು ಮರಳಿ ತವರು ನಾಡಿಗೆ ಹೋದ ನಂತರ ಅಲ್ಲಿ ಹಲವು ದೌರ್ಜನ್ಯ ಪ್ರಕರಣಗಳಿಗೆ ಕಾರಣರಾಗುತ್ತಿದ್ದಾರೆ. ಅಂತಹ ಪ್ರಕರಣಗಳು ಈಗ ಅತಿಹೆಚ್ಚು ಯೋಧರ ಸರಬರಾಜು ಮಾಡುವ ಚಿಲಿಯಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿವೆ. ಆದರೆ, ಅಮೆರಿಕದ ಪಿಎಂಸಿಗಳು ಮಾತ್ರ ಅಲ್ಲಿನ ನಾಗರಿಕರಿಗೆ ಅಮೆರಿಕ ಯೋಧರ ಸಾವಿನ ಬಗ್ಗೆ ಹುಯಿಲೆಬ್ಬಿಸಿದ್ದಕ್ಕಾಗಿ ಋಣಿಯಾಗಿರಲೇಬೇಕಿದೆ. ಏಕೆಂದರೆ ನಾಗರಿಕರು ಹಾಗೆ ಮಾಡದಿದ್ದಿದ್ದರೆ ಈ ಖಾಸಗಿ ಸೇನಾ ಸಂಸ್ಥೆಗಳಿಗೆ ವ್ಯವಹಾರವೇ ಕುದುರುತ್ತಿರಲಿಲ್ಲ! ಇಂದು 100 ಶತಕೋಟಿ ಡಾಲರ್ ವಾರ್ಷಿಕ ವಹಿವಾಟಿನ ಉದ್ಯಮವಾಗಿರುವ ಪಿಎಂಸಿ ಇರಾಕ್ ಸಮರದ ಬಳಿಕ ನೂರಾರು ಪಟ್ಟು ಬೆಳೆದುನಿಂತಿದೆ. ಅಂದಾಜಿನ ಪ್ರಕಾರ ಅಮೆರಿಕ ತೆರಿಗೆಯ ಒಂದು ಡಾಲರ್‌ನಲ್ಲಿ 40 ಸೆಂಟ್ ಪಿಎಂಸಿಗಳಿಗೇ ವ್ಯಯವಾಗುತ್ತಿದೆ. ಇರಾಕ್ ಒಂದರಲ್ಲೇ ವಾರಕ್ಕೆ 2 ಶತಕೋಟಿ ಡಾಲರ್‌ನಷ್ಟು ವೆಚ್ಚದಲ್ಲಿ ಏರಿಕೆಯಾಗುತ್ತಿದೆ. ಈ ನಡುವೆ ಅಮೆರಿಕ ಸೇನಾಪಡೆಗಳಲ್ಲಿ ಉನ್ನತಾಧಿಕಾರಿಗಳ ಕೊರತೆ ಏರುಗತಿಯಲ್ಲಿದೆ. ಅದಕ್ಕೆ ಕಾರಣ ಅಲ್ಲಿನ ಯೋಧರು ಬೇಗನೇ ನಿವೃತ್ತಿ ಪಡೆದುಕೊಂಡು ಪಿಎಂಸಿಗಳಿಗೆ ಸೇರತೊಡಗಿದ್ದಾರೆ! ಅದೂ ದಿನವೊಂದಕ್ಕೆ ಸಾವಿರ ಡಾಲರ್ ವೇತನ ಕೂಡ ಅವರಿಗೆ ಸಿಗುತ್ತಿದೆ!

ಬ್ಲಾಕ್‌ವಾಟರ್ ಹೊರತುಪಡಿಸಿದರೆ, ಏರ್‌ಸ್ಕ್ಯಾನ್, ಸಿ3 ಡಿಫೆನ್ಸ್, ಡೈನ್ ಕಾರ್ಪೊರೇಷನ್, ಜಾಗ್ಸ್ ಡೆಸ್ಮಂಡ್ ಮತ್ತು ಟ್ಯಾಕ್ಟಿಕಲ್ ರೆಸ್ಪಾನ್ಸ್ ಸರ್ವೀಸ್ ಮುಂತಾದವು ಮುಂಚೂಣಿಯಲ್ಲಿರುವ ಪಿಎಂಸಿಗಳು. ಇಷ್ಟೇ ಅಲ್ಲ, ಪಿಎಂಸಿ ಉದ್ಯಮವೆಂಬುದು ಇರಾಕ್ ಅಷ್ಟೇ ಅಲ್ಲದೆ ಆಫ್ರಿಕಾ ಮತ್ತು ಇತರ ರಾಷ್ಟ್ರಗಳಿಗೂ ವ್ಯಾಪಿಸಿದೆ (ಅಂದರೆ, ಯಾವಾಗೆಲ್ಲಾ ಪಾಶ್ಚಿಮಾತ್ಯ ಹಿತಾಸಕ್ತಿಯ ರಕ್ಷಣೆಗಾಗಿ ಸಂಘರ್ಷ ಎದುರಾಗುತ್ತದೆಯೋ ಅಲ್ಲೆಲ್ಲಾ ಪಿಎಂಸಿ ವ್ಯಾಪಿಸಿವೆ). ಅದಕ್ಕೊಂದು ನಿದರ್ಶನವೆಂದರೆ; ಬೆನಿನ್‌ನಲ್ಲೇ ತನ್ನೆಲ್ಲಾ ಕಾರ್ಯಾಚರಣೆಗಳನ್ನು ಹೊಂದಿರುವ ಸ್ಯಾನ್ ಡೈಗೋ ಮೂಲದ ಪಿಎಂಸಿ ಟೈಟಾನ್ ಕಾರ್ಪೊರೇಷನ್. ದುರಂತವೆಂದರೆ ಎಲ್ಲಾ ಕಡೆಯೂ ಅಭಿವೃದ್ಧಿಶೀಲ ರಾಷ್ಟ್ರಗಳಿಂದ ಗುತ್ತಿಗೆ ಪಡೆದ ವ್ಯಕ್ತಿಗಳನ್ನೇ ಮನಬಂದಂತೆ ಬಳಸಿಕೊಳ್ಳಲಾಗುತ್ತಿದೆ. ಯೋಧರನ್ನು ಪೂರ್ವನಿಗದಿತ ಗುತ್ತಿಗೆ ಕರಾರಿನ ಮೇಲೆ ನೇಮಕ ಮಾಡಿಕೊಂಡಿರುವುದು ಹಾಗೂ ಗಾಯಗೊಂಡಲ್ಲಿ ಅಥವಾ ಇನ್ನಾವುದೇ ಬಗೆಯ ಆರೋಗ್ಯ ಸಮಸ್ಯೆ ಎದುರಾದಲ್ಲಿ ಕಾಳಜಿ ತೋರದೇ ಇರುವುದು ಸಾಮಾನ್ಯವಾಗಿಬಿಟ್ಟಿದೆ. ಯಾವುದೇ ನಿರ್ದಿಷ್ಟ ಕಾನೂನು ನಿರ್ಬಂಧ ಮತ್ತು ಸ್ಥಳೀಯ ನ್ಯಾಯಾಂಗದ ನಿಷ್ಕ್ರಿಯತೆಗಳಿಂದಾಗಿ ಈ ಪಿಎಂಸಿಗಳಿಗೆ ಕಡಿವಾಣವೇ ಇಲ್ಲದಂತಾಗಿದೆ. ಇದಕ್ಕೆ ತದ್ವಿರುದ್ಧವಾಗಿ ಪಿಎಂಸಿ ಯೋಧರೇ ಎಷ್ಟೋ ಸಂದರ್ಭದಲ್ಲಿ ಸ್ಥಳೀಯ ನಾಗರಿಕರ ಮೇಲೆ ದೌರ್ಜನ್ಯ ಎಸಗಿರುವ ಪ್ರಕರಣಗಳೂ ನಡೆದಿವೆ.

ಯಾವುದೇ ನಾಗರಿಕ ದೇಶದ ಸರ್ಕಾರಿ ಸೇನಾ ಪಡೆಯ ಉದ್ದೇಶವೇ ಆಂತರಿಕ ಸಂಘರ್ಷಗಳನ್ನು ಕಡಿಮೆ ಮಾಡುವುದು ಹಾಗೂ ದೇಶವನ್ನು ಮುನ್ನಡೆಸುವಲ್ಲಿ ಸೇನೆಯ ಪಾತ್ರವನ್ನು ಸಾಧ್ಯವಾದಷ್ಟು ಕಡಿಮೆ ಮಾಡುತ್ತಲೇ ವಿವಿಧ ದಂಗೆಗಳನ್ನು ಹತ್ತಿಕ್ಕುವುದು. ಆದರೆ, ಅಗಾಧ ಪ್ರಮಾಣದ ಹಣ ಮತ್ತು ಅದರೊಂದಿಗೆ ಬೆಸೆದುಕೊಳ್ಳುವ ಉದ್ಯಮ ಹಿತಾಸಕ್ತಿಗಳು ಇಂದು ಅಂತಹ ಸಂಘರ್ಷ, ದಂಗೆಗಳನ್ನು ಕೂಡ ಲಾಭದಾಯಕವಾಗಿಸುತ್ತಿವೆ. ಹಾಗಾಗಿ ಬ್ಲಾಕ್‌ವಾಟರ್‌ನಂತಹ ಸಂಸ್ಥೆಗಳು ಅಮೆರಿದಂತಹ ದೇಶಗಳಿಂದ ಲಾಭದಾಯಕ ಗುತ್ತಿಗೆಗಳನ್ನು ಪಡೆಯುತ್ತಿವೆ. ಹಾಗೇ ಅಭದ್ರತೆಯ ಪ್ರಮಾಣ ಮತ್ತು ಭೀತಿಯ ಸ್ಥಿತಿ ಯಾವ ಕಾರಣಕ್ಕಾಗಿ ಕಡಿಮೆಯಾಗದಂತೆ ಅವು ಕಟ್ಟೆಚ್ಚರ ವಹಿಸುತ್ತವೆ! ಹೆಚ್ಚು ಜನ ಭೀತಿಗೊಳಗಾದರೆ, ಉದ್ಯಮ ಅವಕಾಶವೂ ಹೆಚ್ಚು ಎಂಬುದು ಅವರ ಲೆಕ್ಕಾಚಾರ. ಹಾಗೊಂದು ವೇಳೆ ಭಯದ ವಾತಾವರಣವಿಲ್ಲದೇ ಇದ್ದರೆ, ತಮ್ಮ ವ್ಯವಹಾರದ ಲಾಭಕ್ಕಾಗಿ ಅವರು ಭೀತಿಯನ್ನೇ ಸೃಷ್ಟಿಸಬಲ್ಲರು! ಅಷ್ಟಕ್ಕೂ ಇಡೀ ಅಮೆರಿಕದ ಆರ್ಥಿಕ ಮೂಲಾಧಾರ ಅವಲಂಬಿತವಾಗಿರುವುದೇ ಇಂತಹ ತತ್ವಗಳ ಮೇಲಲ್ಲವೇ?

 

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .