ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

 

ಇತರ ವಿಭಾಗಗಳು
 
ಲಂಗರು
ನೃತ್ಯಗ್ರಾಮದಲಿ ಗೆಜ್ಜೆನಾದ ಕ್ಷೀಣ
 
 

ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳ ಪುನರುಜ್ಜೀವನದ ಧ್ಯೇಯದೊಂದಿಗೆ ಸೃಷ್ಟಿಯಾದದ್ದೇ ಪ್ರೊತಿಮಾ ಬೇಡಿ ಕನಸಿನ ಕೂಸು 'ನೃತ್ಯಗ್ರಾಮ'. ಆ 'ಕನಸಿನ ಲೋಕ'ಕ್ಕೆ ಕಾಲಿಟ್ಟ ಟಿಎಸ್‌ಐನ ಡಿ.ಎಸ್. ಶ್ರೀಕಲಾ ಗತವೈಭವವನ್ನು ಬಿಚ್ಚಿಟ್ಟಿದ್ದಾರೆ
 

Drop Anchor - The Sunday Indian Kannada

ಅಲ್ಲಿ ನೃತ್ಯವೊಂದನ್ನು ಬಿಟ್ಟರೆ ಬೇರೇನೂ ಇಲ್ಲ. ಗಾಳಿ, ನೀರು, ಮಾತು, ಕನಸು, ಕಲ್ಪನೆ, ಉಸಿರು... ಎಲ್ಲವೂ ಕೇವಲ ನೃತ್ಯಮಯ! ಗೆಜ್ಜೆಯ ದನಿ, ಕೊಳಲಿನ ನಿನಾದ ಬಿಟ್ಟರೆ ಬೇರೇನು ಕೇಳಲೂ ಸಾಧ್ಯವಿಲ್ಲ. ಹಿಂದೆ ನೃತ್ಯಗ್ರಾಮವೆಂಬ ಅದ್ಭುತ ಲೋಕವೊಂದು ಅನಾವರಣಗೊಳ್ಳುತ್ತಿದ್ದ ಪರಿ ಇದು... ಹಾಗಿದ್ದರೆ ಈಗ? ಕಲಾರಾಧಕರನ್ನು ಸ್ವಾಗತಿಸುವುದು ಗತ ವೈಭವದ ನೆನಪುಗಳು ಮಾತ್ರ. ಬೆಂಗಳೂರಿನ ಹೊರಭಾಗದ ಹೆಸರಘಟ್ಟವೆಂಬ ಹಳ್ಳಿಯಲ್ಲಿರುವ ಇಂತಹ ನೃತ್ಯ ಲೋಕವನ್ನು ಸೃಷ್ಟಿಸಿದ್ದು ರೂಪದರ್ಶಿಯಾಗಿದ್ದು ನಂತರ ಒಡಿಸ್ಸಿ ನೃತ್ಯಕ್ಕೇ ತಮ್ಮನ್ನು ಸಂಪೂರ್ಣ ಸಮರ್ಪಿಸಿಕೊಂಡ ಪ್ರೊತಿಮಾ ಬೇಡಿ ಎಂಬ ಅಪ್ರತಿಮ ಕನಸುಗಾತಿ. ಈಕೆ ಕಂಡ ಕನಸೇ 'ನೃತ್ಯಗ್ರಾಮ'!

1960ರ ದಶಕದ ಕೊನೆಯ ಭಾಗದಲ್ಲಿ ಭಾರತದ ಪ್ರಮುಖ ರೂಪದರ್ಶಿಯಾಗಿ ಬೆಳೆದ ಪ್ರೊತಿಮಾ ಜೀವನದ ದಿಕ್ಕು ಬದಲಾಗಿದ್ದು 1975ರಲ್ಲಿ. ಆಕೆಗಾಗ 27 ವರ್ಷ. ಒಡಿಸ್ಸಿ ನೃತ್ಯ ಕಾರ್ಯಕ್ರಮವೊಂದನ್ನು ನೋಡಿದ ನಂತರ ಆಕೆಗೆ ನೃತ್ಯದೆಡೆಗೆ ಅಪರಿಮಿತ ಒಲವು ಮೂಡಿತು. ಒಡಿಸ್ಸಿ ನೃತ್ಯ ದಿಗ್ಗಜ ಗುರು ಕೇಳುಚರಣ ಮಹಾಪಾತ್ರರ ಶಿಷ್ಯೆಯಾಗಿ ದಿನಕ್ಕೆ 12ರಿಂದ 14 ಗಂಟೆಗಳ ಸತತ ನೃತ್ಯಾಭ್ಯಾಸ ಮಾಡಲಾರಂಭಿಸಿದರು. ನಂತರ ಪ್ರೊತಿಮಾ ಹಿಂತಿರುಗಿ ನೋಡಿದ್ದೇ ಇಲ್ಲ. ರೂಪದರ್ಶಿಯಾಗಿದ್ದವರು ಪರಿಪೂರ್ಣ ನರ್ತಕಿಯಾಗಿ ಬದಲಾದರು. ಆಕೆಯ ಬದುಕೇ ನೃತ್ಯವಾಗಿದ್ದರಿಂದ 'ನೃತ್ಯಗ್ರಾಮ' ಉದ್ಭವಿಸಿತು.

ಈಗ ಕೂಡ ನೃತ್ಯಗ್ರಾಮ ಪ್ರವೇಶಿಸುತ್ತಿದ್ದಂತೆಯೇ ಬೆಂಗಳೂರಿನ ಟ್ರಾಫಿಕ್ ಜಂಜಡದಲ್ಲಿ ಇಷ್ಟು ಹೊತ್ತು ಇದ್ದದ್ದು ಹೌದೇ ಎಂಬ ಸಂಶಯ ಒಂದು ಬಾರಿಯಾದರೂ ಮನದೊಳಗೆ ಬಾರದಿರದು. ಪ್ರಶಾಂತವಾದ ಆವರಣದೊಳಗೆ ಹೊಕ್ಕರೆ ಅನ್ಯಲೋಕಕ್ಕೆ ಕಾಲಿಟ್ಟಂತೆ ಭಾಸವಾಗಿ ಬಿಡುತ್ತದೆ. ನೃತ್ಯಗ್ರಾಮದ ವೈಶಿಷ್ಟ್ಯವೇ ಅಂತಹುದು. 1990ರಲ್ಲಿ ಗುರುಕುಲ ಮಾದರಿಯಲ್ಲಿ ನೃತ್ಯಕ್ಕಾಗಿಯೇ 10 ಎಕರೆ ವಿಸ್ತೀರ್ಣದಲ್ಲಿ ನೃತ್ಯಗ್ರಾಮವೆಂಬ ಉಚಿತ ವಸತಿ ಶಾಲೆ ಸ್ಥಾಪನೆಗೊಂಡಿತು. ಭಾರತೀಯ ನೃತ್ಯ ಪ್ರಕಾರ ದೇಶಾದ್ಯಂತ ಪ್ರಸಾರಗೊಂಡು, ಬೆಳೆಯಬೇಕೆಂಬ ನಿಟ್ಟಿನಲ್ಲಿ ರೂಪುತಳೆದದ್ದು ನೃತ್ಯಗ್ರಾಮ. ದೇಹದ ಪಂಚೇಂದ್ರಿಯಗಳು ಪರಿಪೂರ್ಣತೆ ಪಡೆದು, ಪರಿಶುದ್ಧಿಗೊಳ್ಳಬೇಕು ಎಂಬ ಪರಿಕಲ್ಪನೆಯೇ ಅದರ ಹುಟ್ಟಿಗೆ ಕಾರಣ. ವಾಸ್ತುಶಿಲ್ಪದಲ್ಲಿ ಹೆಸರುವಾಸಿಯಾದ ಗೆರಾರ್ಡ್ ಡ ಕುನ್ಹಾ ಇದರ ಶಿಲ್ಪಿ. 1991ರಲ್ಲಿ ನೃತ್ಯಗ್ರಾಮಕ್ಕೆ ಉತ್ತಮ ಗ್ರಾಮೀಣ ವಾಸ್ತುಶಿಲ್ಪ ಪುರಸ್ಕಾರವೂ ಪ್ರಾಪ್ತವಾಯಿತು. ಹಾಗಿದ್ದಲ್ಲಿ ನೃತ್ಯಗ್ರಾಮದಲ್ಲಿ ಏನಾಗುತ್ತಿದೆ ಎಂಬುದು ನೃತ್ಯರಸಿಕರ ಗಮನಕ್ಕೆ ಬರದಿರಲು ಕಾರಣ? ಮೋಹಕ ಶಕ್ತಿ ಈಗಲ್ಲಿ ಮರೆಯಾಗುತ್ತಿದೆಯೇ?

ಹಾಗೆಂದು ನೃತ್ಯಗ್ರಾಮದಲ್ಲಿ ಗೆಜ್ಜೆ ಸದ್ದೇ ಮಾಯವಾಗಿದೆ ಎಂದಲ್ಲ. ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲಿ ಅತ್ಯಂತ ಭಾವಗೀತಾತ್ಮಕವಾದ ಮತ್ತು ಅಷ್ಟೇ ಆಕರ್ಷಕವಾದ ಒಡಿಸ್ಸಿ ನೃತ್ಯವೇ ಇಲ್ಲಿನ ಜೀವಾಳ. ಒಡಿಸ್ಸಿ ನೃತ್ಯಕ್ಕೆ ಸುಮಾರು 2000 ವರ್ಷಗಳ ಇತಿಹಾಸವಿದ್ದರೂ ಒಡಿಸ್ಸಿ ಈಗಿರುವ ರೂಪ ಪಡೆದದ್ದು ಕಳೆದ 60 ವರ್ಷಗಳಲ್ಲಷ್ಟೆ. ಹಾಗಾಗಿ ಇದು ಪ್ರಾಚೀನ ಹಾಗೂ ಆಧುನಿಕ ಕಲಾಶೈಲಿ ಜೊತೆಗೆ ಬುದ್ಧಿಮತ್ತೆಯ ಸಮ್ಮಿಶ್ರಣ. ಇಂದಿನ ಒಡಿಸ್ಸಿ ನೃತ್ಯಕ್ಕೆ ಅಡಿಪಾಯ ಹಾಕಿಕೊಟ್ಟದ್ದು ದೇವದಾಸಿಯರು. ಒಡಿಸ್ಸಿಯ ತ್ರಿಭಂಗಿ (ಮೂರು ತಿರುವುಗಳನ್ನು ರೂಪಿಸಿ ನಿಲ್ಲುವ ಭಂಗಿ) ಒರಿಸ್ಸಾ ದೇವಾಲಯದ ಮೂರ್ತಿಗಳಿಂದ ಸ್ಫೂರ್ತಿ ಪಡೆದಂತಹವು. ಪ್ರೊತಿಮಾ ಬೇಡಿಯೇ ಹೇಳಿದಂತೆ ನರ್ತಕಿಯರು ದ್ವೇಷ, ಅಸೂಯೆಗಳನ್ನು ತೊರೆದು ತನ್ನ ಸಹನರ್ತಕಿಯರನ್ನು ಸೋದರಿಯೆಂದು ಪರಿಗಣಿಸುತ್ತಾ ನರ್ತನ ಕ್ಷೇತ್ರದಲ್ಲಿ ಶ್ರೇಷ್ಠ ಸ್ಥಾನಕ್ಕೇರಬೇಕೆಂಬುದೇ ನೃತ್ಯಗ್ರಾಮದ ಧ್ಯೇಯ. ಅದು ಆಕೆ ಇದ್ದಾಗಲೂ ಸತ್ಯವಾಗಿತ್ತು. ಈಗಲೂ ಅಷ್ಟೇ ಸತ್ಯ. ಆದರೆ ಈಗ ಇಲ್ಲಿರುವ ಮುಖ್ಯ ನರ್ತಕಿಯರ ಸಂಖ್ಯೆ ಕೇವಲ ಆರು. ಪ್ರತಿಬಾರಿ ಇವರಷ್ಟೇ ದೇಶವಿದೇಶಗಳಲ್ಲಿ ನೃತ್ಯಗ್ರಾಮವನ್ನು ಪ್ರತಿನಿಧಿಸುತ್ತಾರೆ ಎಂಬುದೇ ವ್ಯತ್ಯಾಸ.

ನೃತ್ಯಗ್ರಾಮದ ಪಾಲಿಗೆ ನಾಲ್ಕು ಹೆಜ್ಜೆ ಇಡುವುದಷ್ಟೇ ನರ್ತನವಲ್ಲ. ಬದಲಿಗೆ ಅದು ಬದುಕಿಗೊಂದು ಪಾಠ; ಹಾಗಾಗಿಯೇ ಗುರುಕುಲ ಮಾದರಿಯಲ್ಲಿ ರೂಪುಗೊಂಡ ನೃತ್ಯಗ್ರಾಮದಲ್ಲಿನ ಬೆರಳಿಕೆಯ ವಿದ್ಯಾರ್ಥಿಗಳು ಕೇವಲ ನರ್ತಕಿಯರಷ್ಟೇ ಆಗುವುದಿಲ್ಲ. ಅವರು ಒಂದೊಮ್ಮೆ ಯೋಗಪಟುವಾದರೆ ಮತ್ತೊಮ್ಮೆ ತೋಟದ ಮಾಲಿಯ ವೇಷ ಧರಿಸುತ್ತಾರೆ, ಮಗದೊಮ್ಮೆ ವ್ಯವಸ್ಥಾಪಕಿಯರೂ ಆಗಿಬಿಡುತ್ತಾರೆ. ಜೊತೆಗೆ ನೃತ್ಯದ ಇತಿಹಾಸ ಅರಿಯುವ ಚಟುವಟಿಕೆಗಳಲ್ಲೂ ತೊಡಗುತ್ತಾರೆ. ಆದರೆ 21ನೇ ಶತಮಾನದಲ್ಲೂ ಗುರುಕುಲ ಪದ್ಧತಿಯನ್ನು ಅನುಸರಿಸುವ ವಿದ್ಯಾರ್ಥಿಗಳು ಇದ್ದಾರೆಯೇ ಎಂಬುದಕ್ಕೆ ನೃತ್ಯಗ್ರಾಮದ ನಿರ್ವಾಹಕ ಟ್ರಸ್ಟಿ ಲಿನ್ ಫೆರ್ನಾಂಡಿಸ್, ಈಗಿನ ಪರಿಸ್ಥಿತಿ, ಅಗತ್ಯತೆಗಳು ಬದಲಾಗಿವೆ. ಇದಕ್ಕೆ ಇಂದಿನ ಪೀಳಿಗೆಯನ್ನು ದೂಷಿಸುವಂತೆಯೂ ಇಲ್ಲ. ನಮ್ಮಲ್ಲಿ ಈಗ ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ಕಲಿಯುತ್ತಿರುವವರು ಕೇವಲ ಆರು ಮಂದಿ. ವಾರಾಂತ್ಯದಲ್ಲಿ ನಡೆಸುವ ತರಗತಿಗಳಿಗೆ ಸುಮಾರು 50 ವಿದ್ಯಾರ್ಥಿಗಳು ಬರುತ್ತಾರೆ. ಕಾಡಲ್ಲಿ ಆರು ವರ್ಷಗಳ ಕಾಲ ನೃತ್ಯಾಭ್ಯಾಸ ಮಾಡಲು ಈ ಕಾಲದಲ್ಲಿ ಯಾರು ಮುಂದೆ ಬರುತ್ತಾರೆ ಹೇಳಿ? ಎನ್ನುತ್ತಾರೆ. 1997ರಿಂದ ಲಿನ್ ನೃತ್ಯಗ್ರಾಮವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ.

ಇಷ್ಟಾದರೂ ನೃತ್ಯಗ್ರಾಮದ ಹಸಿರು ಅಲ್ಲಿನ ಸೊಬಗನ್ನು ವೃದ್ಧಿಸಿರುವುದು ಸುಳ್ಳಲ್ಲ. ನೃತ್ಯಗ್ರಾಮದ ದೇವಾಲಯದ ಗೋಡೆಯಲ್ಲಿ ನೃತ್ಯ ಮುದ್ರೆಗಳು, ವಸ್ತ್ರಾಭರಣ, ಗೆಜ್ಜೆಗಳ ಮಾದರಿಯನ್ನು ಕೆತ್ತಲಾಗಿದೆ. ನಂತರ ಎದುರಾಗುವುದು ನೃತ್ಯಗ್ರಾಮದ ಅತ್ಯಂತ ಮೋಹಕವಾದ ಒಡಿಸ್ಸಿ ಗುರುಕುಲ. ಇಲ್ಲಿನ ಗೋಡೆಯ ಇಂಚಿಂಚೂ ಒರಿಸ್ಸಾ ದೇವಾಲಯಗಳ ವಾಸ್ತುಶಿಲ್ಪ ಮಾದರಿಯಲ್ಲಿದೆ. ನಂತರ ಎದುರುಗೊಳ್ಳುವುದೇ ಕಥಕ್ ಗುರುಕುಲ. ಸಂಪೂರ್ಣ ಮೊಘಲ್ ವಾಸ್ತುಶಿಲ್ಪದ ಕೈಚಳಕವನ್ನಿಲ್ಲಿ ಕಾಣಬಹುದು. ಮುಂದಿರುವುದೇ ಕೇರಳದ ವಾಸ್ತುಶಿಲ್ಪ ಮಾದರಿಯಲ್ಲಿ ಕಟ್ಟಲಾಗಿರುವ ಮೋಹಿನಿಯಾಟ್ಟಂ ಗುರುಕುಲ. ಆದರೆ ಈಗ ಕಥಕ್ ಮತ್ತು ಮೋಹಿನಿಯಾಟ್ಟಂ ಗುರುಕುಲಗಳಲ್ಲಿ ನೃತ್ಯಾಭ್ಯಾಸ ನಡೆಯುತ್ತಿಲ್ಲ. ಮೋಹಿನಿಯಾಟ್ಟಂ ಗುರುಕುಲವಂತೂ ಶಿಥಿಲಾವಸ್ಥೆ ತಲುಪಿದೆ. ಮತ್ತೆ ಅಲ್ಲಿ ಗೆಜ್ಜೆಯ ದನಿ ಹೊಮ್ಮಿದರಷ್ಟೇ ಮೋಹಿನಿಯಾಟ್ಟಂ ಗುರುಕುಲಕ್ಕೆ ಜೀವಕಳೆ ಬರಬಹುದು. ವಿದ್ಯಾರ್ಥಿಗಳೇ ಇಲ್ಲದ ಕಾರಣ ಇವುಗಳ ಸ್ಥಿತಿ ಹೀಗಾಗಿದೆ ಎನ್ನುತ್ತಾರೆ ಲಿನ್ ಫೆರ್ನಾಂಡಿಸ್.

ಅಲ್ಲಿಂದ ಮುಂದೆ ಸುಮಾರು 4,000 ಪ್ರೇಕ್ಷಕರು ಕುಳಿತುಕೊಳ್ಳಬಹುದಾದ ತೆರೆದ ಸಭಾಂಗಣ. ರೋಮನ್ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಈ ವರ್ತುಲ ರಂಗಸ್ಥಳ ನೃತ್ಯಗ್ರಾಮದ ಅತ್ಯಂತ ಸುಂದರವಾದ ರಚನೆ. ಇಲ್ಲೇ ಪ್ರತಿ ವರ್ಷ 'ವಸಂತಹಬ್ಬ' ಕಾರ್ಯಕ್ರಮ ನಡೆಯುತ್ತಿದ್ದದ್ದು. 1990ರಲ್ಲಿ ಆರಂಭಗೊಂಡ ವಸಂತಹಬ್ಬದಲ್ಲಿ ಒಂದು ರಾತ್ರಿ ಇಡೀ ನೃತ್ಯ ಹಾಗೂ ಸಂಗೀತದ ಭೂರಿ ಭೋಜನವನ್ನು ಕಲಾರಾಧಕರಿಗೆ ಉಣಬಡಿಸಲಾಗುತ್ತಿತ್ತು. ದೇಶವಿದೇಶಗಳಿಂದ ಈ ಹಬ್ಬಕ್ಕೆ ಜನಸಾಗರ ಹರಿದು ಬರುತ್ತಿತ್ತು. ನ್ಯೂಯಾರ್ಕ್‌ನಲ್ಲಿ ನಡೆಯುವ ವಿಶ್ವಪ್ರಸಿದ್ಧ 'ವುಡ್‌ಸ್ಟಾಕ್' ಸಂಗೀತ ಹಾಗೂ ನೃತ್ಯ ಕಾರ್ಯಕ್ರಮಕ್ಕೆ ಇದನ್ನು ಹೋಲಿಸಲಾಗುತ್ತಿತ್ತು. ತಮ್ಮ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿದ ಕಲಾವಿದರು ವಸಂತಹಬ್ಬಕ್ಕೆ ಆಹ್ವಾನಿತರಾಗಿ ಕಾರ್ಯಕ್ರಮ ನೀಡುತ್ತಿದ್ದರು. ಆರಂಭಿಕ ವರ್ಷ 3,000 ಪ್ರೇಕ್ಷಕರಿದ್ದ ಕಾರ್ಯಕ್ರಮಕ್ಕೆ 2003ರಲ್ಲಿ 40,000 ಪ್ರೇಕ್ಷಕರು ಆಗಮಿಸಿದ್ದರು. ಪಂಡಿತ್ ವಿಶ್ವಮೋಹನ್ ಭಟ್, ಕದ್ರಿ ಗೋಪಾಲನಾಥ್, ಬಾಂಬೆ ಜಯಶ್ರೀಯಂತಹ ದಿಗ್ಗಜರು ಇಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಆದರೆ ಕಳೆದ ನಾಲ್ಕು ವರ್ಷಗಳಿಂದ 'ವಸಂತಹಬ್ಬ' ನಡೆಯುತ್ತಿಲ್ಲ. 2005ರಿಂದ ಗೆಜ್ಜೆ ಸದ್ದನ್ನೇ ಕೇಳದ ವಸಂತಹಬ್ಬದ ವೇದಿಕೆಯ ಮೇಲೀಗ ಹುಲ್ಲು ಬೆಳೆದಿದೆ! 2005ರಲ್ಲಿ ಸುನಾಮಿ ಬಂದ ಕಾರಣ ವಸಂತಹಬ್ಬದ ಪ್ರಾಯೋಜಕರು ಹಣವನ್ನು ಅತ್ತ ಕೊಡಬೇಕಾಗಿ ಬಂತು. ನಂತರದ 2006, 07, 08ರಲ್ಲಿ ಯಾವುದೇ ಪ್ರಾಯೋಜಕರು ಮುಂದೆ ಬರಲಿಲ್ಲವಾದ್ದರಿಂದ ವಸಂತಹಬ್ಬವೇ ಇಲ್ಲದಂತಾಗಿದೆ. ಸಂಪೂರ್ಣ ಉಚಿತವಾಗಿ ಪ್ರೇಕ್ಷಕರಿಗೆ ಕಲೆಯನ್ನು ಆಸ್ವಾದಿಸಲು ಅವಕಾಶವಿದ್ದ ಇಂತಹ ಅದ್ಭುತ ಕಾರ್ಯಕ್ರಮವೊಂದು ನಡೆಯದೆ ಇರುವುದು ಕಲಾಲೋಕಕ್ಕೆ ಬಿದ್ದ ದೊಡ್ಡ ಹೊಡೆತ. ಈ ಕುರಿತು ಲಿನ್ ಫೆರ್ನಾಂಡಿಸ್ ಅವರನ್ನು ಕೇಳಿದಾಗ, ಸಾಮಾನ್ಯ ಹಳ್ಳಿಗರನ್ನೂ ಕಲೆ ತಲುಪುವಂತಾಗಬೇಕು ಎಂಬ ಉದ್ದೇಶವಿಟ್ಟುಕೊಂಡು ಪ್ರೊತಿಮಾ ಬೇಡಿ ವಸಂತಹಬ್ಬ ಆರಂಭಿಸಿದರು. ಪಂಡಿತ್ ರವಿಶಂಕರ್ ಅವರ ಸಿತಾರ್ ಕಛೇರಿಯನ್ನು ಹಳ್ಳಿಗನೊಬ್ಬ ಸಾವಿರಾರು ರೂಪಾಯಿ ನೀಡಿ ನೋಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಬಡ ವ್ಯಕ್ತಿಯೊಬ್ಬನಿಗೂ ಕಲೆ ಸುಲಭವಾಗಿ, ಉಚಿತವಾಗಿ ತಲುಪಬೇಕು ಎಂಬ ಕಾರಣದಿಂದ ಹುಟ್ಟಿಕೊಂಡ ಪ್ರೊತಿಮಾ ಕನಸು ಈಗ ಪ್ರಾಯೋಜಕರಿಲ್ಲದೆ ನಿಂತಿದೆ ಎಂದು ವಿಷಾದಪಡುತ್ತಾರೆ.

ಪ್ರಸ್ತುತ ನೃತ್ಯಗ್ರಾಮದ ನೃತ್ಯ ನಿರ್ದೇಶಕಿ ಸುರೂಪ ಸೇನ್ ಸಾರಥ್ಯದಲ್ಲಿ 'ದ ನೃತ್ಯಗ್ರಾಮ್ ಡ್ಯಾನ್ಸ್ ಎನ್‌ಸೆಂಬಲ್' ತಂಡದ ಬಿಜಯಿನಿ ಸತ್ಪತಿ, ಪವಿತ್ರಾ ರೆಡ್ಡಿ, ಪ್ರಿಯಂಬದಾ ಪಟ್ನಾಯಕ್ ಮತ್ತು ಅಯೋನಾ ಭಾದುರಿ ದೇಶ- ವಿದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡುತ್ತಿದ್ದಾರೆ. ತಂಡದ ಪ್ರಮುಖ ನರ್ತಕಿ ಬಿಜಯಿನಿ ಸತ್ಪತಿ ಅವರಿಗೆ ನೃತ್ಯಗ್ರಾಮ ಸ್ವಂತ ಮನೆಯೇ ಆಗಿದೆ. ನೃತ್ಯಗಾರನಿಗೆ ಬೇಕಾಗಿರುವುದು ಕಲಾತ್ಮಕ ಸ್ವಾತಂತ್ರ್ಯ. ಅದು ಇಲ್ಲಲ್ಲದೆ ಬೇರೆಲ್ಲೂ ದೊರಕಿಲ್ಲ. ನನಗೆ ಒಡಿಸ್ಸಿ ನೃತ್ಯವೇ ವಿಜ್ಞಾನ, ಸಾಹಿತ್ಯ, ತಿಳಿವಳಿಕೆ ಎಲ್ಲವೂ ಆಗಿದೆ. ನರ್ತನಕ್ಕೆ ಬೇಕಾದ ಸಂಪೂರ್ಣ ಸಂಶೋಧನೆಗೆ ಇಲ್ಲಿ ಅವಕಾಶವಿದೆ ಎಂಬುದು 15 ವರ್ಷಗಳ ಹಿಂದೆ ಒಡಿಸ್ಸಿ ನೃತ್ಯ ಸಾಧನೆ ಮಾಡಬೇಕೆಂಬ ಕನಸು ಹೊತ್ತು ಒರಿಸ್ಸಾದಿಂದ ನೃತ್ಯಗ್ರಾಮಕ್ಕೆ ಬಂದ ಬಿಜಯಿನಿ ಅಭಿಪ್ರಾಯ. ಹಾಗಿದ್ದಲ್ಲಿ ಬಿಜಯಿನಿಯಂತಹ ವಿದ್ಯಾರ್ಥಿಗಳು ಈಗೇಕೆ ಬರುತ್ತಿಲ್ಲ? ಇದಕ್ಕೆ ವೈದ್ಯಕೀಯ, ಎಂಜಿನಿಯರಿಂಗ್‌ನಂತಹ ವೃತ್ತಿ ಶಿಕ್ಷಣ ಕೋರ್ಸ್‌ಗಳ ಬೆನ್ನು ಹತ್ತಿರುವವರಿಗೆ ಕೃತಜ್ಞತೆ ಅರ್ಪಿಸಬೇಕು!

ನೃತ್ಯಗ್ರಾಮದ ಭವಿಷ್ಯದ ಕನಸುಗಳು ಹಲವು. ಇವುಗಳಲ್ಲಿ ಒಂದು 'ಹೋಲ್ ಬಾಡಿ ಸೆಂಟರ್' ಯೋಜನೆ. ನೃತ್ಯ ದೇಹ ಮತ್ತು ಮನಸ್ಸುಗಳೆರಡಕ್ಕೂ ಸಂಬಂಧಪಟ್ಟ ವಿಚಾರ. ಹಾಗಾಗಿ ಅವೆರಡಕ್ಕೂ ತರಬೇತಿ ನೀಡುವ ನಿಟ್ಟಿನಲ್ಲಿ ರೂಪುಗೊಳ್ಳುತ್ತಿರುವುದೇ 'ಹೋಲ್ ಬಾಡಿ ಸೆಂಟರ್'. ನರ್ತನಕ್ಕೆ ತರಬೇತಿ ಆರಂಭಿಸುವ ಮೊದಲು ದೇಹವನ್ನು ನೃತ್ಯಕ್ಕೆ ತಕ್ಕುದಾಗಿ ರೂಪಿಸುವ ವ್ಯವಸ್ಥೆ ಇಲ್ಲಿರುತ್ತದೆ. ನರ್ತನಕ್ಕಾಗಿಯೇ ಎರಡು ಕಲಾಗಾರವಿದ್ದು ಒಂದರಲ್ಲಿ ಯೋಗ, 'ಮಸಾಜ್'ಗೆ ಬೇಕಾದ ವ್ಯವಸ್ಥೆ ಇರುತ್ತದೆ. ಇನ್ನೊಂದು ಕಲಾಗಾರದಲ್ಲಿ ನೃತ್ಯ ಪ್ರದರ್ಶನಕ್ಕೆ ಬೇಕಾದ ವ್ಯವಸ್ಥೆ ಮಾಡಲಾಗುತ್ತಿದ್ದು ಸುಮಾರು 120 ಪ್ರೇಕ್ಷಕರು ಕುಳಿತು ಕಾರ್ಯಕ್ರಮ ವೀಕ್ಷಿಸುವ ಅವಕಾಶವಿದೆ. 'ಸೆಂಟರ್ ಫಾರ್ ನೃತ್ಯಜ್ಞಾನ' ನೃತ್ಯಗ್ರಾಮದ ಭವಿಷ್ಯದ ಮತ್ತೊಂದು ಯೋಜನೆ. ಯಾವುದೇ ಕಲೆಯ ಕುರಿತ ಸಂಶೋಧನೆ ಆ ಪ್ರಕಾರವನ್ನು ಹೆಚ್ಚು ಪ್ರಸ್ತುತಗೊಳಿಸುತ್ತದೆ. ಈ ನಿಟ್ಟಿನಲ್ಲಿ ರೂಪುಗೊಳ್ಳುತ್ತಿರುವ ಗ್ರಂಥಾಲಯವೇ 'ಸೆಂಟರ್ ಫಾರ್ ನೃತ್ಯಜ್ಞಾನ'. ನೃತ್ಯಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸಂಗ್ರಹಿಸುವುದೇ ಈ ಕೇಂದ್ರದ ಮುಖ್ಯ ಉದ್ದೇಶ. ಆದರೆ ಯೋಜನೆ ಪೂರ್ಣಗೊಳ್ಳಲು ಕೆಲವು ವರ್ಷಗಳಾದರೂ ಬೇಕು. ಹಿಂದೆ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳ ಏಳು ಶೈಲಿಯನ್ನೂ ನೃತ್ಯಗ್ರಾಮದಲ್ಲಿ ಕಲಿಸುವ ಯೋಜನೆ ಇತ್ತು. ಒಡಿಸ್ಸಿ, ಮೋಹಿನಿಯಾಟ್ಟಂ, ಕಥಕ್, ಭರತನಾಟ್ಯ, ಕೂಚಿಪುಡಿ, ಕಥಕ್ಕಳಿ, ಮಣಿಪುರಿ ಶೈಲಿಗಳನ್ನು ಒಂದೇ ಸೂರಿನಡಿ ಕಲಿಸುವ ಯೋಜನೆ ಸದ್ಯಕ್ಕೆ ಪುನರುಜ್ಜೀವನಗೊಳ್ಳುವಂತೆ ಕಾಣುತ್ತಿಲ್ಲ. ಏಕೆ ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿ ಮೋಹಿನಿಯಾಟ್ಟಂ ಮತ್ತು ಕಥಕ್ ಗುರುಕುಲಗಳೇ ಕಣ್ಣೆದುರಿಗಿದೆ.

1998ರಲ್ಲಿ ತಮ್ಮ ಮಗನ ಸಾವಿನ ನಂತರ ನಿವೃತ್ತಿ ಘೋಷಿಸಿದ ಪ್ರೊತಿಮಾ ತೀರ್ಥಯಾತ್ರೆಗೆ ಹೊರಟು ಹಿಮಾಲಯದಲ್ಲಿ ಕೊನೆಯುಸಿರೆಳೆದರು. ಆದರೆ ಆಕೆ ತಮ್ಮ ಅದ್ಭುತ ಸಾಧನೆಯ ನೆನಪುಗಳನ್ನು ಬಿಟ್ಟುಹೋಗಿದ್ದರು- ಅದೇ ನೃತ್ಯಗ್ರಾಮ. ಬಟ್ಟಲು ಕಂಗಳ, ಆಕರ್ಷಕ ನಗುವಿನ ಪ್ರೊತಿಮಾ ಬೇಡಿ ಇವತ್ತಿಗೂ ಕಲಾರಾಧಕರನ್ನು ನೃತ್ಯಗ್ರಾಮಕ್ಕೆ ಸೆಳೆಯುತ್ತಿದ್ದಾರೆ. ನೃತ್ಯಕ್ಕಾಗಿಯೇ ತಮ್ಮನ್ನು ಸಂಪೂರ್ಣ ಮುಡಿಪಾಗಿಟ್ಟ ಆಕೆಯ ಕನಸುಗಳನ್ನು ಅಲ್ಲಿನ ನರ್ತಕಿಯರು ದೇಶ- ವಿದೇಶಗಳಲ್ಲಿ ಕಾರ್ಯಕ್ರಮ ನೀಡುವುದರ ಮೂಲಕ ಪೂರ್ಣಗೊಳಿಸುತ್ತಿರಬಹುದು.

ಆದರೆ ನೃತ್ಯಗ್ರಾಮಕ್ಕೆ ಭೇಟಿ ನೀಡಿದಾಗ ಅಲ್ಲಿನ ವೈಭವ ಹಿಂದಿನಂತೆ ಇದೆಯೇ ಎಂಬ ಪ್ರಶ್ನೆ ಪ್ರತಿ ನೃತ್ಯಪ್ರೇಮಿಯ ಮನದೊಳಗೆ ಒಂದು ಬಾರಿಯಾದರೂ ಇಣುಕು ಹಾಕದೆ ಇರದು. ನೃತ್ಯಗ್ರಾಮದಲ್ಲೊಂದು ಅಪ್ಯಾಯಮಾನತೆ ಇದೆ. ಧ್ಯಾನಸ್ಥ ಸ್ಥಿತಿಗೆ ತಲುಪಿದ ಯೋಗಿಯ ಪ್ರಶಾಂತತೆ ಇದೆ. ಆದರೆ ಹಳೆಯ ವೈಭವ ಕಳಚಿ ಬಿದ್ದಿದೆ. ಬಹುಶಃ ವ್ಯಾವಹಾರಿಕ ಲಾಭ ಮತ್ತು ದಿಢೀರ್ ಜನಪ್ರಿಯತೆಯ ಪ್ರಲೋಭನೆಗಳಿಗೆ ಯುವ ಮನಸ್ಸುಗಳು ಪರವಶವಾಗುತ್ತಿರುವ ಹೊತ್ತಿನಲ್ಲಿ, ಅದರ ಪರಿಣಾಮದ ಜೀವಂತ ಸಾಕ್ಷಿಯಾಗಿ ಈ ನೃತ್ಯಗ್ರಾಮ ಕಂಡರೆ ಅಚ್ಚರಿಯಿಲ್ಲ!

ಟಿಎಸ್‌ಐ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .