ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಮುಖಪುಟ ಲೇಖನ
ಹಸಿರು ಮತ್ತು ಕೆಂಪಿನ ಕರಿನೆರಳು
 
 

 


 

 

ಎರಡು ಶಕ್ತಿಗಳ ಕಪಿಮುಷ್ಟಿಯಲ್ಲಿ ಭಾರತ

ದೇಶಕ್ಕೆ ಮಾರಕವಾದ ವಿಚ್ಛಿದ್ರಕಾರಿ ಶಕ್ತಿಗಳೊಂದಿಗೆ ವ್ಯವಹರಿಸುವ ಮಾರ್ಗ ಯಾವುದು? ಟಿಎಸ್‌ಐನ ಸುತನು ಗುರು ವಿವರಣೆ

ವಕ್ರ ಐತಿಹಾಸಿಕ ಪ್ರಜ್ಞೆಯ ವ್ಯಕ್ತಿಗಳು ಪ್ರತಿ ಬಾರಿ ಮೋಹನ್‌ದಾಸ್ ಗಾಂಧಿ ಮತ್ತು ಜವಾಹರ್‌ಲಾಲ್ ನೆಹರು ಅವರನ್ನು ಟೀಕಿಸುವಾಗೆಲ್ಲಾ ನಾನು ಆ ಇಬ್ಬರು ಆಧುನಿಕ ಭಾರತದ ನಿರ್ಮಾತೃಗಳನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತೇನೆ. ಆದರೆ, 2 ಸಂದರ್ಭಗಳಲ್ಲಿ ಮಾತ್ರ ನಾನು ಅನಿವಾರ್ಯವಾಗಿ ಮೌನಕ್ಕೆ ಶರಣಾಗಬೇಕಾಗುತ್ತದೆ.

ಆ ಎರಡು ಸಂದರ್ಭಗಳಲ್ಲಿ ಮೊದಲನೆಯದು ಗಾಂಧಿಗೆ ಸಂಬಂಧಿಸಿದ್ದು. ಮೊದಲ ಮಹಾಯುದ್ಧದ ಬಳಿಕ ಮರೆಯಾಗಲಿದ್ದ ಒಟ್ಟಾಮನ್ ಖಿಲಾಫತ್ ಆಡಳಿತವನ್ನು ಉಳಿಸುವಂತೆ ಬ್ರಿಟಿಷ್ ಸಾಮ್ರಾಜ್ಯದ ಮೇಲೆ ಒತ್ತಡ ಹೇರಲು ಆರಂಭವಾದ ಭಾರತೀಯ (ಈಗಿನ ಪಾಕಿಸ್ತಾನ, ಬಾಂಗ್ಲಾದೇಶ ಸೇರಿ) ಮುಸ್ಲಿಮರ ಖಿಲಾಫತ್ ಚಳವಳಿಗೆ ಬೆಂಬಲಿಸಿದ್ದರು. ಆ ಮೂಲಕ ಈ ದೇಶದ ಜೊತೆ ಯಾವ ಸಂಬಂಧವೂ ಇಲ್ಲದ 'ಇಸ್ಲಾಂ'ಗೆ ಸಂಬಂಧಿಸಿದ ಕಾರಣವೊಂದಕ್ಕಾಗಿ ಕಾಂಗ್ರೆಸ್ ಪಕ್ಷ ಮೊದಲ ಬಾರಿಗೆ ಬೆಂಬಲವಾಗಿ ನಿಂತಿತು. ಅಂದು ಗಾಂಧಿಯ ಘನ ಉದ್ದೇಶದ ಪರಿಣಾಮವಾಗಿ ನಾವಿಂದು ದುಬಾರಿ ಬೆಲೆಯನ್ನೇ ತೆರುತ್ತಿದ್ದೇವೆ. ದಿನದಿಂದ ದಿನಕ್ಕೆ ಜೀವನ ನರಕಸದೃಶವಾಗುತ್ತಿದೆ.

ನಿರುತ್ತರನಾಗಬೇಕಾದ ಎರಡನೆಯ ಸಂದರ್ಭ, ನೆಹರು ಅವರಿಗೆ ಸಂಬಂಧಿಸಿದ್ದು. ಆದರ್ಶವಾದಿ, ಸಮಾಜವಾದಿ ಮತ್ತು ಅಷ್ಟೇ ರಸಿಕರೂ ಆಗಿದ್ದ ಜವಾಹರ್‌ಲಾಲ್ ನೆಹರು, ಮಾವೋವಾದಿ ಆಡಳಿತದ 'ಕೆಂಪು ಚೀನಾ'ದೊಂದಿಗೆ ರಾಯಭಾರ ಸಂಬಂಧ ಬೆಸೆದರು. ಮೂರನೇ ಜಗತ್ತಿನ ರಾಷ್ಟ್ರಗಳ ಒಗ್ಗಟ್ಟಿನ ಬಗ್ಗೆ ನೆಹರು ಅವರಿಗೆ ಇದ್ದ ಕಾಳಜಿಯ ಫಲ ಆ ನಿರ್ಧಾರ. ಆದರೆ, ಆ ನಂತರ 1962ರಲ್ಲಿ ಚೀನಾ ಭಾರತಕ್ಕೆ ಹೀನಾಯ ಅವಮಾನ ಮಾಡಿದ ನಂತರವೂ ಸಾವಿರಾರು ಕ್ರಾಂತಿಕಾರಿ ಭಾರತೀಯರ ಪಾಲಿಗೆ ಮಾವೋವಾದ ಎಂಬುದು ದೊಡ್ಡ ಆದರ್ಶವಾಗುವಂತೆ ಮಾಡಿಬಿಟ್ಟಿತು.

ಇಂದು, ಇಡೀ ದೇಶವನ್ನೇ ಊನಗೊಳಿಸುತ್ತಿರುವ ಜಿಹಾದಿ ಅಥವಾ ನಕ್ಸಲೀಯ ದಾಳಿಯ ಪ್ರಸ್ತಾಪವಿಲ್ಲದೆ ಭಾರತದ ಯಾವ ಮೂಲೆಯಲ್ಲೂ ಒಂದು ವಾರವೂ ಕಳೆಯುವುದಿಲ್ಲ. ಗತಕಾಲದ 'ಇಸ್ಲಾಂ ರಾಜ್ಯ'ದ ಮರುಸ್ಥಾಪನೆಯ ನಿಟ್ಟಿನಲ್ಲಿ ಜಿಹಾದಿಗಳ ನಿರಂತರ ಯತ್ನದಲ್ಲಿನ ಶ್ರದ್ಧೆ, ಪ್ರೇರಣೆಗಳ ಅಗಾಧತೆಯ ಒಂದು ನಿದರ್ಶನ ಅಹಮದಾಬಾದ್ ದುರ್ಘಟನೆ. ಕೆಲವು ವಾರಗಳ ಹಿಂದೆ ಒರಿಸ್ಸಾದ ಸರೋವರವೊಂದರಲ್ಲಿ ನಕ್ಸಲ್ ದಮನಕ್ಕಾಗಿಯೇ ನಿಯೋಜಿತವಾಗಿದ್ದ ಉನ್ನತ ಪೊಲೀಸ್ ಪಡೆ ಗ್ರೇಹೌಂಡ್ಸ್‌ನ 40 ಮಂದಿ ಪೊಲೀಸರನ್ನು ನಕ್ಸಲೀಯರು ಜಲಸಮಾಧಿ ಮಾಡಿದರು. ನಕ್ಸಲೀಯರಿಗೆ ಸಂಬಂಧಪಟ್ಟಂತೆ ಹೇಳುವುದಾದರೆ ಅವರ ದೃಷ್ಟಿಯಲ್ಲಿ ಕಪ್ಪು ಅಥವಾ ಬಿಳುಪು ಎರಡೇ ಇರಲು ಸಾಧ್ಯ. ಮೂರನೆಯದು ಸಾಧ್ಯವೇ ಇಲ್ಲ. ಹಾಗಾಗಿ ಭಾರತ ಸರ್ಕಾರ ವ್ಯವಸ್ಥೆಯನ್ನು ಬುಡಮೇಲು ಮಾಡುವ ಅವರ ದಾರಿಯಲ್ಲಿ ಎಲ್ಲವೂ ನಿಚ್ಚಳವೇ!

1947ರ ನಂತರ ಭಾರತ 'ಸಾವಿರಾರು' ದಂಗೆಗಳನ್ನೂ, ಬಂಡಾಯಗಳನ್ನೂ ಕಂಡಿದೆ. ಆ ಪೈಕಿ ಭಾರತೀಯ ಮಧ್ಯಮ ವರ್ಗ ಬಹುತೇಕ ಮರೆತೇ ಬಿಟ್ಟಿರುವುದೆಂದರೆ ಸ್ಥೈರ್ಯದೊಂದಿಗೆ ಅಮಾನುಷ ಕ್ರೌರ್ಯವೂ ಬೆರೆತುಹೋಗಿದ್ದ ನಾಗಾ ಕ್ರಾಂತಿ. ಈವರೆಗಿನ ಅಂತಹ ಎಲ್ಲಾ ಬಂಡಾಯ, ದಂಗೆಗಳು ಭಾರತವನ್ನು 'ಭೂಭಾಗ'ದ ವಿಷಯದಲ್ಲಿ ರಾಜಿ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದವು. ಕಾಶ್ಮೀರ, ನಾಗಾಲ್ಯಾಂಡ್, ಉಲ್ಫಾ, ಖಲಿಸ್ತಾನ್ ಮತ್ತು ಎಲ್‌ಟಿಟಿಇ ಹೋರಾಟಗಳು ಕೂಡ ಪ್ರತ್ಯೇಕ ರಾಜ್ಯ, ಪ್ರದೇಶಗಳ ಬೇಡಿಕೆಯ ದಂಗೆಗಳೇ. ಅವರ ಗುರಿ ದೆಹಲಿಯಾಗಿರಲಿಲ್ಲ, ಭಾರತದಾದ್ಯಂತ ವ್ಯವಸ್ಥೆಯ ಬುಡಮೇಲು ಮಾಡುವುದು ಅವರ ಕಾರ್ಯತಂತ್ರವಾಗಿರಲಿಲ್ಲ. ಬದಲಾಗಿ ತಮ್ಮ ಬೇಡಿಕೆಯ ಭೂ ಪ್ರದೇಶದಲ್ಲಿ ಸಶಸ್ತ್ರ ಹೋರಾಟ ಅವರದ್ದಾಗಿತ್ತು. ಅದೇ ಭಾರತದ ಮಟ್ಟಿಗೆ ಸಾಕಷ್ಟು ಹಾನಿ ಮಾಡಿತ್ತು.

ಆದರೆ, 21ನೇ ಶತಮಾನದ ದ್ವೇಷದ ವಿರಾಟ್ ರೂಪಗಳು ಇಂದು ದೇಶವನ್ನು ದಿಕ್ಕುಗೆಡಿಸಿವೆ. ಈ ಕದನ ಯಾವುದೇ ನಿರ್ದಿಷ್ಟ ಗಡಿಗಾಗಲೀ, ಭೂ ಪ್ರದೇಶಕ್ಕಾಗಲೀ ಸೀಮಿತವಾಗಿಲ್ಲ. ಇಡೀ ದೇಶವೇ ಅವರ ಕಪಿಮುಷ್ಟಿಯಲ್ಲಿ ಸಿಲುಕಿದೆ. ಜಿಹಾದಿಗಳು ಗುಜರಾತ್ ಆಗಲೀ, ಅಯೋಧ್ಯೆಯನ್ನಾಗಲಿ ಮಾತ್ರ ತಮ್ಮ ಪ್ರಾಬಲ್ಯ ಮೆರೆಯುವ ತಾಣವಾಗಿ ಆಯ್ಕೆಮಾಡಿಕೊಂಡಿಲ್ಲ. ಭಾರತ ಎಂಬ ಪರಿಕಲ್ಪನೆಯನ್ನೇ ನುಚ್ಚುನೂರು ಮಾಡುವುದು ಅವರ ಪರಮೋದ್ದೇಶ. ಹಾಗೇ ಮಾವೋವಾದಿಗಳು ಒಂದು ಛತ್ತೀಸ್‌ಗಢ ಅಥವಾ ಒರಿಸ್ಸಾವನ್ನು ಮಾತ್ರ ಬಯಸಿಲ್ಲ. ಅವರೂ ಭಾರತ ಎಂಬ ಕಲ್ಪನೆಯನ್ನೇ, ರಾಷ್ಟ್ರವನ್ನೇ ಬುಡಮೇಲು ಮಾಡುವ ಉದ್ದೇಶ ಹೊಂದಿದ್ದಾರೆ. ಗಡಿ- ಪ್ರಾಂತದ ಆಕಾಂಕ್ಷೆಯ ಹೋರಾಟಗಾರರೊಂದಿಗೆ ವ್ಯವಹರಿಸುವುದು ಸಾಧ್ಯ. ಆದರೆ, ಮಾರಕ ರೋಗದಂತೆ ದ್ವೇಷವನ್ನೇ ಮೆತ್ತಿಕೊಂಡಿರುವ 'ವಕ್ರ ಆದರ್ಶವಾದಿ'ಗಳೊಂದಿಗೆ ವ್ಯವಹರಿಸುವುದು ಹೇಗೆ?

ಇಂತಹ ದಿಕ್ಕುಗಾಣದ ಸ್ಥಿತಿಯಲ್ಲಿ ಭಾರತ ಪರಿಹಾರಕ್ಕಾಗಿ ಮತ್ತೆ ಗಾಂಧಿ, ನೆಹರೂ ಅವರನ್ನೇ ಎಡತಾಕಬೇಕಾಗಿದೆ. ಗಾಂಧಿ ಏಕೆಂದರೆ, ಅವರು ಜಗತ್ತಿನ ಮಹತ್ತರ ಸಿದ್ಧಾಂತಗಳಲ್ಲೊಂದಾದ 'ಸಂವಾದ'ದಲ್ಲಿ ಭರವಸೆ ಇಟ್ಟುಕೊಂಡಿದ್ದರು ಮತ್ತು ಅದನ್ನೇ ಅನುಸರಿಸಿದ್ದರು. ನೆಹರು ಏಕೆಂದರೆ, ಅವರು ಪ್ರಜಾಪ್ರಭುತ್ವದಲ್ಲಿ ಅತೀವ ನಂಬಿಕೆ ಇಟ್ಟಿದ್ದರು ಮತ್ತು ಅದನ್ನು ಅನುಷ್ಠಾನಕ್ಕೆ ತಂದಿದ್ದರು. ಬಂಧನ, ಪ್ರತೀಕಾರ, ವಿಚಾರಣೆ, ಪರಿಹಾರ, ಗೂಢಚರ್ಯೆ ಮತ್ತು ಭದ್ರತೆ ಎಲ್ಲವೂ ತೀರಾ ಅಗತ್ಯ ಮತ್ತು ಅನಿವಾರ್‍ಯ. ಹಾಗೇ ಸಂವಾದ, ಮಾತುಕತೆಗಳು ಮತ್ತು ಪ್ರಜಾಪ್ರಭುತ್ವದ ಮೇಲಿನ ವಿಶ್ವಾಸ ಕೂಡ ಈ ಕ್ಷಣಕ್ಕೆ ದೇಶಕ್ಕೆ ತೀರಾ ಅಗತ್ಯವಾಗಿರುವ ಊರುಗೋಲುಗಳು.

ಟಿಎಸ್‌ಐ

ಮುಖಪುಟ ಲೇಖನದಲ್ಲಿ ಇನ್ನೇನಿದೆ

ಎರಡು ಶಕ್ತಿಗಳ ಕಪಿಮುಷ್ಟಿಯಲ್ಲಿ ಭಾರತ

ನಗರದ ಬೀದಿಗಳಲ್ಲಿ ರಕ್ತ ಚೆಲ್ಲಿದ ರಕ್ಕಸರು

ಗ್ರಾಮೀಣ ಭಾರತ: ಕೆಂಪು ಸೈನ್ಯದ ಆರ್ಭಟ

ಐಎಸ್‌ಐ: ಪಾಕ್ ಸೃಷ್ಟಿಸಿದ ಭಯೋತ್ಪಾದನಾ ಪೆಡಂಭೂತ

ಉಗ್ರರ ಅಟ್ಟಹಾಸದೆದುರು ಎಟಿಸಿ ಎಂಬ ಬಡಕಲು ಹಸು

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .