ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಬಿಚ್ಚುಮಾತು
ಹೇಗಾದ ಗೊತ್ತಾ, ಚಿನ್ನಾರಿ ಮುತ್ತಾ...
 
ಬಾಲನಟನಾಗಿ ಸ್ಯಾಂಡಲ್‌ವುಡ್ ಪ್ರವೇಶಿಸಿ ಎಲ್ಲಾ ವಿಧದ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ವಿಜಯ್ ರಾಘವೇಂದ್ರ ಈಗ 'ಗಣೇಶ ಮತ್ತೆ ಬಂದ'ದಲ್ಲಿ ಅಭಿನಯಿಸಿ ನವರಸ ನಾಯಕರೆನಿಸಿಕೊಂಡಿದ್ದಾರೆ. ಅವರು ಟಿಎಸ್‌ಐನ ಎನ್.ಕೆ. ಸುಪ್ರಭಾ ಜೊತೆಗೆ ತಮ್ಮ ವೃತ್ತಿ ಜೀವನದ ಏರಿಳಿತಗಳನ್ನು ಹಂಚಿಕೊಂಡಿದ್ದಾರೆ

Celebrity- The Sunady Indian - Kannada

ಬಾಲನಟನಿಂದ ನಾಯಕ ನಟರಾದವರು ನೀವು... ನಡೆದು ಬಂದ ದಾರಿಯನ್ನು ಹಿಂತಿರುಗಿ ನೋಡಿದರೆ?

ಸುತ್ತಲೂ ಇದ್ದ ವಾತಾವರಣ ನನ್ನನ್ನು ಚಿತ್ರರಂಗದತ್ತ ಸೆಳೆಯಿತು. ಹಾಗೆಂದು ನಾನು ವಿದ್ಯಾಭ್ಯಾಸವನ್ನು ಕಡೆಗಣಿಸಿ ಚಿತ್ರರಂಗದಲ್ಲಿ ತೊಡಗಿಸಿಕೊಳ್ಳಲಿಲ್ಲ. ಬಾಲನಟನಾಗಿ ಧಾರವಾಹಿಗಳು, 'ಚಿನ್ನಾರಿ ಮುತ್ತಾ', 'ಕೊಟ್ರೇಶಿ ಕನಸು'... ಇತ್ಯಾದಿ ನಂತರ ಸಂಪೂರ್ಣವಾಗಿ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿದ್ದೆ. ನಟನೆಯತ್ತ ಎಷ್ಟೇ ಒಲವಿದ್ದರೂ ಕನಿಷ್ಠ ಪದವಿ ಶಿಕ್ಷಣವನ್ನಾದರೂ ಪೂರೈಸಿರಬೇಕು ಎನ್ನುವುದು ತಂದೆಯ ಕನಸಾಗಿತ್ತು. ಪದವಿ ಮುಗಿದ ಮೇಲೆ 'ನಿನಗಾಗಿ' ಅವಕಾಶ ಒಪ್ಪಿದೆ.

ನಾಯಕನಟನಾಗಿ ಬೆಳೆಯಲು ಕೌಟುಂಬಿಕ ಹಿನ್ನೆಲೆ ನೆರವಾಯಿತೆ ಅಥವಾ ಬಾಲನಟನಾಗಿದ್ದು ವರವಾಯಿತೆ?

ಚಿತ್ರರಂಗಕ್ಕೆ ಕಾಲಿಡುವಾಗ ಕೌಟುಂಬಿಕ ಹಿನ್ನೆಲೆ ಬೇಕೇ ಬೇಕು. ಇಲ್ಲವಾದರೆ ಬಹಳ ಕಷ್ಟ. ನನಗೂ ಈ ಸ್ನೇಹ ವಲಯ ಇದ್ದ ಕಾರಣ 'ಚಿನ್ನಾರಿ ಮುತ್ತ'... ನಂತರ 'ನಿನಗಾಗಿ' ಅವಕಾಶ ಸಿಕ್ಕಿತು. ಹಾಗೆಯೇ ಬಾಲನಟನಾಗಿದ್ದ ವಿಜಯ್ 'ನಿನಗಾಗಿ'ಯಲ್ಲಿ ಹೇಗೆ ನಟಿಸಿದ್ದಾನೆ ಎನ್ನುವ ಕುತೂಹಲ ಜನರಲ್ಲಿತ್ತು. ಆದರೆ ಚಿತ್ರರಂಗದಲ್ಲಿ ನಟನಾಗಿ ಬೆಳೆಯಲು ಇವ್ಯಾವುವೂ ನೆರವಾಗದು. ಕೌಟುಂಬಿಕ ಹಿನ್ನೆಲೆ ಅಥವಾ ಬಾಲನಟನಾಗಿದ್ದಲ್ಲಿ ಮೊದಲನೆ ಅವಕಾಶ ಸುಲಭವಾಗಿ ಸಿಗಬಹುದು. ಆದರೆ ನಟನನ್ನು ಸಿನಿಮಾರಂಗದಲ್ಲಿ ಬೆಳೆಸೋದು ಶ್ರದ್ಧೆ, ಶ್ರಮ ಮತ್ತು ಶಿಸ್ತು.

ನೀವು ಕೆಲವು ಅದ್ಭುತ ಚಿತ್ರಗಳಲ್ಲಿ ನಟಿಸಿದ್ದೀರಿ. ಮುಖ್ಯವಾಗಿ ಕಲ್ಲರಳಿ ಹೂವಾಗಿ... ಆದರೆ ಅತ್ಯುತ್ತಮ ಅಂಶಗಳಿದ್ದೂ ಆ ಚಿತ್ರ 'ಕಮರ್ಷಿಯಲ್ ಸಕ್ಸಸ್' ಅನ್ನೋ ರ್‍ಯಾಂಕ್ ಪಡೆದಿಲ್ಲ?

ಹೌದು, ನಾನು ಮತ್ತು ನಿರ್ದೇಶಕ ಟಿ.ಎಸ್. ನಾಗಾಭರಣ ಅವರು 'ಕಲ್ಲರಳಿ ಹೂವಾಗಿ' ಚಿತ್ರದ ಮೇಲೆ ತುಂಬಾ ನಿರೀಕ್ಷೆಗಳನ್ನಿಟ್ಟಿದ್ದೆವು. ಆದರೆ ನಮ್ಮ ನಿರೀಕ್ಷೆಗಳು ಫಲಿಸಲಿಲ್ಲ. ಚಿತ್ರ ಕಮರ್ಷಿಯಲ್ ಆಗಿ ಯಶಸ್ಸು ಕಾಣದೆ ಇರುವುದಕ್ಕೆ ಬಹಳಷ್ಟು ಕಾರಣಗಳನ್ನು ನೀಡಬಹುದು. ಮಾರುಕಟ್ಟೆ ತಂತ್ರಗಳು ಸರಿಯಾಗಿರಲಿಲ್ಲ. ಒಳ್ಳೆಯ ಚಿತ್ರಮಂದಿರಗಳು ಸಿಗಲಿಲ್ಲ. ಹೀಗಾಗಿ ಆ ಚಿತ್ರಕ್ಕೆ ಪ್ರೇಕ್ಷಕರನ್ನು ಆಕರ್ಷಿಸಲು ವಿಫಲವಾದೆವು.

'ಮಿಂಚಿನ ಓಟ'ದ ಬಗ್ಗೆ ಏನು ಹೇಳುವಿರಿ? ಈ ಚಿತ್ರ ಇನ್ನೂ ಓಡುತ್ತಲೇ ಇದೆ ಎನ್ನುವುದೇನೋ ನಿಜ. ಆದರೆ ವಿಮರ್ಶಕರ ಮನ ಗೆದ್ದಿಲ್ಲ... ಬಿಡುಗಡೆಗೆ ಮುನ್ನ ಇದ್ದ ನಿರೀಕ್ಷೆಗಳೆಲ್ಲಾ ತಲೆ ಕೆಳಗಾಗಿವೆ... ಏಕೆ ಹೀಗೆ?Celebrity- The Sunady Indian - Kannada

'ಮಿಂಚಿನ ಓಟ'ವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ ಎನ್ನುವುದು ನನ್ನ ನಂಬಿಕೆ. ಎಂ.ಆರ್. ರಮೇಶ್ ಅವರು ಈ ಹಿಂದೆ 'ಸೈನೈಡ್' ಎನ್ನುವ ಅತ್ಯುತ್ತಮ ಕಲಾತ್ಮಕ ಚಿತ್ರ ನಿರ್ದೇಶಿಸಿದ್ದರು. ಹೀಗಾಗಿ ವಿಮರ್ಶಕರಲ್ಲಿ ಕೆಲವು ನಿರೀಕ್ಷೆಗಳು ಇದ್ದಿರಬಹುದು. ಆದರೆ 'ಮಿಂಚಿನ ಓಟ' ಸಂಪೂರ್ಣ ಕಮರ್ಷಿಯಲ್ ಚಿತ್ರ. ಇದಕ್ಕೆ ಅದರದ್ದೇ ಆದ ಕೆಲವು ಮಸಾಲೆಗಳ ಮಿಶ್ರಣವಿತ್ತು. ಈ ಸಿನಿಮಾದ ದೃಶ್ಯಗಳು, ಹಾಡುಗಳು ಮತ್ತು ಸಾಹಸವನ್ನು ಪ್ರೇಕ್ಷಕರು ತುಂಬಾ ಮೆಚ್ಚಿಕೊಂಡಿದ್ದಾರೆ. ಈ ಸಾಹಸ ದೃಶ್ಯಗಳಿಗಾಗಿ ನಾವು ಜೀವದ ಹಂಗು ತೊರೆದು ಕೆಲವು ಸ್ಟಂಟ್‌ಗಳನ್ನು ಮಾಡಿದ್ದೇವೆ. ಚಿತ್ರ ತಂಡದ ಪರಿಶ್ರಮಕ್ಕೆ ಪ್ರೇಕ್ಷಕರು ಸಕಾರಾತ್ಮಕ ಪ್ರತಿಕ್ರಿಯೆಯನ್ನೇ ನೀಡಿದ್ದಾರೆ.

ನೀವು ಸಹೋದರರಿಬ್ಬರೂ ಅವಳಿ-ಜವಳಿಯಂತಿದ್ದೀರಿ. ಇದು ನಿಮ್ಮಿಬ್ಬರ ವೃತ್ತಿ ಜೀವನಕ್ಕೆ ಮುಳುವಾಯಿತೆ ಅಥವಾ ವರವಾಯಿತೆ?

ಕೆಡುಕೂ ಆಗಿಲ್ಲ, ನೆರವೂ ಆಗಲಿಲ್ಲ. ನಾನು ನಾನೇ. ಮುರಳಿ ಮುರಳಿಯೇ. ನಮ್ಮಿಬ್ಬರಲ್ಲಿ ಹೋಲಿಕೆ ಇರಬಹುದು. ಅಣ್ಣ-ತಮ್ಮಂದಿರಾದ್ದರಿಂದ ಎಲ್ಲರೂ ನಮ್ಮನ್ನು ಹೋಲಿಸಿ ನೋಡೇ ನೋಡುತ್ತಾರೆ. ಆದರೆ ಒಂದು ಚಿತ್ರದಲ್ಲಿ ನಟಿಸುವಾಗ ನಮ್ಮ ಸಾಮರ್ಥ್ಯವೇ ನಮಗೆ ಖ್ಯಾತಿ ತಂದು ಕೊಡುವುದು. ನಮ್ಮಲ್ಲಿ ಕೆಲವು ಹೋಲಿಕೆಗಳಿವೆ. ಹಾಗೆಯೇ ಭಿನ್ನತೆಗಳೂ ಇವೆ. ಅಂತಿಮವಾಗಿ ನಮಗೆ ಕೊಟ್ಟಿರೋ ದೃಶ್ಯಗಳಲ್ಲಿ ನಾವು ಹೇಗೆ ಅಭಿನಯಿಸುತ್ತೇವೆ ಎನ್ನುವುದು ಮುಖ್ಯ.

ನೀವು ಸಹೋದರರು ಚಿತ್ರಕ್ಕೆ 'ಮಿಂಚಿನ ಓಟ' ಎಂದು ಹೆಸರಿಟ್ಟಿದ್ದು ಅನಂತ್‌ನಾಗ್- ಶಂಕರ್‌ನಾಗ್ ಮೋಡಿ ಬರಲೆಂದೇ? 'ಮುರಳಿ-ವಿಜಯ್' ಫ್ಯಾಕ್ಟರ್ ಕೂಡಾ ಚಿತ್ರವನ್ನು ಗೆಲ್ಲಿಸಲಾಗಲಿಲ್ಲ?

'ಮುರಳಿ- ವಿಜಯ್' ಫ್ಯಾಕ್ಟರ್ ಇದೆ ಎನ್ನುವುದೇ ಈ ಚಿತ್ರದ ವಿಶೇಷವಾಗಿತ್ತು. ಚಿತ್ರಕ್ಕೆ ಒಂದು ಒಳ್ಳೆಯ ಆರಂಭ ಕೊಡಲು ಇದೇ ನೆರವಾಗಿದ್ದು. ಜೊತೆಯಲ್ಲಿ ಅನಂತ್-ಶಂಕರ್‌ನಾಗ್ ಅಭಿನಯದ ಹಳೇ ಚಿತ್ರ 'ಮಿಂಚಿನ ಓಟ'ದ ಹೆಸರನ್ನೇ ಇಟ್ಟುಕೊಂಡಿರುವುದು ಸಿನಿಮಾಗೆ ಒಂದು ಫೋರ್ಸ್ ಕೊಟ್ಟಿತ್ತು. ನಮ್ಮಿಬ್ಬರ ಕಾಂಬಿನೇಶನ್ ಪ್ರಯತ್ನಿಸಿದ್ದೇವೆ ಎನ್ನುವಾಗ ಇಂತಹ ವಾದಗಳೆಲ್ಲ ಸಾಮಾನ್ಯವೆ. ಈ ಹೋಲಿಕೆಗಳು, ಪ್ರಸ್ತುತತೆ... ಎಲ್ಲವೂ ಚಿತ್ರದ ಬಗ್ಗೆ ಒಂದು ರೀತಿಯ ಕುತೂಹಲ ಮೂಡಿಸುತ್ತದೆ. ನಾವು ಅವರ ಹಾದಿಯಲ್ಲಿ ಹೋಗುತ್ತಿದ್ದೇವೆ ಅಷ್ಟೆ.

ಆದರೂ ನೀವು ನಿಧಾನವಾಗಿ ಅನಂತ್‌ನಾಗ್ ಜಾಡಿನಲ್ಲಿ ಕಾಲಿಡುತ್ತಿದ್ದೀರಿ! ಫಣಿ ರಾಮಚಂದ್ರ ಅವರ ಗಣೇಶ ಸರಣಿಗಳಲ್ಲಿ ಲೇಟೆಸ್ಟ್ ಚಿತ್ರ 'ಗಣೇಶ ಮತ್ತೆ ಬಂದ' ಚಿತ್ರದ ನಾಯಕರಾಗಿದ್ದೀರಿ... ಅಕಸ್ಮಾತ್ತಾಗಿ ಹಾಸ್ಯದ ಕಡೆಗೆ ಒಲವು?

ಹೌದು, ಅನಂತ್‌ನಾಗ್- ಫಣಿರಾಮಚಂದ್ರ ಅವರ 'ಗಣೇಶ' ಚಿತ್ರಗಳು ಸಾಟಿಯಿಲ್ಲದ ಯಶಸ್ಸು ಪಡೆದಿವೆ. ನಾನು ಚಿಕ್ಕವನಿದ್ದಾಗ ಆ ಚಿತ್ರಗಳನ್ನೆಲ್ಲಾ ನೋಡಿ ಮೆಚ್ಚಿಕೊಂಡಿದ್ದೇನೆ. ಈಗ ಅದೇ 'ಗಣೇಶ'ನ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿರುವುದಕ್ಕೆ ಖುಷಿಯಾಗಿದೆ. ಮೊದಲಿಗೆ ನಾನು ಹಿಂಜರಿದಿದ್ದೆ. ಹೇಗಪ್ಪಾ ಮಾಡೋದು. ಏನಾದರೂ ಎಡವಟ್ಟಾದರೆ ಕೆಟ್ಟ ಹೆಸರು. ಆದರೆ ವಾರದೊಳಗೆ ರಿಲ್ಯಾಕ್ಸ್ ಆದೆ. ಫಣಿ ರಾಮಚಂದ್ರ ಅವರು ನನ್ನನ್ನು ಹುರಿದುಂಬಿಸಿದರು.

ನಿನಗಾಗಿ, ಖುಷಿ, ಹಾರ್ಟ್‌ಬೀಟ್ಸ್ ಚಿತ್ರಗಳ ನಂತರ ವಿಭಿನ್ನ ಪಾತ್ರಗಳತ್ತ ತೆರಳಿದಿರಿ. ಯಶಸ್ಸು ನಿಮ್ಮಿಂದ ದೂರವಾಯಿತೆ?

ಯಶಸ್ಸು ನನ್ನಿಂದ ದೂರವಾಗಿಲ್ಲ. ಎಲ್ಲೋ ಹತ್ತಿರದಲ್ಲೇ ಇದೆ. ಸಿಗ್ತಿಲ್ಲ ಅಷ್ಟೆ (ನಗು). ಜೀವನ ಪೂರ್ತಿ ಕಾಲೇಜಿಗೆ ಹೋಗುತ್ತಾ, ಪ್ರೇಮಿಯಾಗಿ ಮರ ಸುತ್ತುತ್ತಾ ತಿರುಗಾಡುವ ಚಿತ್ರಗಳಲ್ಲೇ ಮತ್ತೆ ಮತ್ತೆ ನಟಿಸುವುದು ನನಗಿಷ್ಟವಿಲ್ಲ. 'ರಿಷಿ' ಚಿತ್ರದ ನಂತರ ನನಗೆ ಒಂದು ಇಮೇಜ್ ಬದಲಾವಣೆ ಸಿಕ್ತು. ನೀಳ ಕೂದಲು ಬೆಳೆಸಿಕೊಂಡೆ. ಹಾಗೆಯೇ ಅಭಿನಯಕ್ಕೆ ಅವಕಾಶವಿರುವ ಪಾತ್ರಗಳು ದೊರೆತವು.

ನಟನೆ ಬಿಟ್ಟರೆ ವಿಜಯ್ ರಾಘವೇಂದ್ರರನ್ನು ಎಲ್ಲಿ ನೋಡಬಹುದು?

ನನ್ನ ವೃತ್ತಿ ಚಿತ್ರರಂಗದಲ್ಲೇ. ನಟನಾಗದೇ ಇರುತ್ತಿದ್ದರೆ ನಾನು ಉದ್ಯಮಿಯಾಗುತ್ತಿದ್ದೆ. ಆಗಲೂ ಚಿತ್ರಗಳನ್ನು ನಿರ್ಮಿಸುತ್ತಿದ್ದೆ, ನಿರ್ದೇಶಿಸುತ್ತಿದ್ದೆ. ನಮ್ಮದೇ ಬ್ಯಾನರ್ ಕೂಡಾ ಇದೆ. ಹೀಗಾಗಿ ಎಲ್ಲೋ ಒಂದು ಕಡೆ ಚಿತ್ರರಂಗಕ್ಕೆ ಸಮೀಪವಾಗಿರುವ ವೃತ್ತಿಯನ್ನೇ ಆರಿಸಿಕೊಳ್ಳುತ್ತಿದ್ದೆ. ಈಗ ನಾನು ನಟನೆಯಲ್ಲಿ ಬ್ಯುಸಿ. ಹೀಗಾಗಿ ಬೇರೆ ಕಡೆ ಗಮನ ಕೊಡುತ್ತಿಲ್ಲ. ಮುಂದೆ ಯಾವತ್ತಾದರೂ ನಿರ್ದೇಶನ, ನಿರ್ಮಾಣಕ್ಕೂ ಕೈ ಹಾಕುತ್ತೇನೆ. ಈಗಂತೂ ಅತ್ತ ಕಡೆ ಗಮನ ಹರಿಸಲೂ ಸಮಯವಿಲ್ಲ.

Celebrity- The Sunady Indian - Kannada ಚಿತ್ರರಂಗದ ಜೊತೆಗಿನ ನಿಮ್ಮ ನಂಟು ಜನ್ಮತಃ ಬೆಳೆದದ್ದು. ಒಂದೆಡೆ ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಇಲ್ಲ, ಚಿತ್ರಮಂದಿರಗಳೆಲ್ಲಾ ಮಾಲ್‌ಗಳಾಗುತ್ತಿವೆ... ಹಾಗೆಯೇ ಮಲ್ಟಿಫ್ಲೆಕ್ಸ್ ಸಂಸ್ಕೃತಿ ಹುಟ್ಟಿಕೊಂಡಿದೆ. ಜನರು ದುಪ್ಪಟ್ಟು ಹಣ ಕೊಟ್ಟು ಕನ್ನಡ ಚಿತ್ರಗಳನ್ನು ನೋಡುತ್ತಿದ್ದಾರೆ ಮತ್ತು ಅಲ್ಲಿ ಕನ್ನಡ ಚಿತ್ರಗಳು ವರ್ಷವಿಡೀ ಓಡುತ್ತಿವೆ. ಹಾಗಿದ್ದರೆ ಸ್ಯಾಂಡಲ್‌ವುಡ್ ಯಶಸ್ಸಿನ ಕಡೆ ಸಾಗುತ್ತಿದೆಯೆ ಅಥವಾ ಅಧೋಗತಿಗೆ ಇಳಿಯುತ್ತಿದೆಯೆ? ನಿಮಗೇನನ್ನಿಸುತ್ತಿದೆ?

ಇತರ ಎಲ್ಲಾ ಚಿತ್ರರಂಗಕ್ಕಿಂತಲೂ ಕನ್ನಡ ಚಿತ್ರರಂಗ ಉತ್ತಮ ಸ್ಥಿತಿಯಲ್ಲಿದೆ. ನಮ್ಮಲ್ಲಿ ಈಗೀಗ ಹೆಚ್ಚು ಚಿತ್ರಗಳು ನೂರು ದಿನ, ಐವತ್ತು ದಿನ ಓಡುತ್ತಿವೆ. ಗಣೇಶ್, ಪುನೀತ್ ರಾಜ್‌ಕುಮಾರ್, ವಿಜಯ್ ಚಿತ್ರಗಳು ಮತ್ತು ಇತ್ತೀಚೆಗೆ ದರ್ಶನ್, ಸುದೀಪ್ ಚಿತ್ರಗಳೂ ಯಶಸ್ವಿಯಾಗಿವೆ. ಹಾಗೆಯೇ ಹೊಸ ನಟರ ಚೊಚ್ಚಲ ಚಿತ್ರಗಳೂ ಗೆದ್ದಿವೆ. ಖಂಡಿತ ಕನ್ನಡ ಚಿತ್ರರಂಗ ಉಚ್ಛ್ರಾಯ ಸ್ಥಿತಿಯತ್ತ ಹೋಗುತ್ತಿದೆ.

ಶೂಟಿಂಗ್ ನಿಮಿತ್ತ ಭೇಟಿ ಕೊಟ್ಟ ಮರೆಯಲಾಗದ ಸ್ಥಳ? ಅನುಭವ?

'ಕಲ್ಲರಳಿ ಹೂವಾಗಿ' ಚಿತ್ರಕ್ಕಾಗಿ ಚಿತ್ರದುರ್ಗಕ್ಕೆ ಭೇಟಿ ನೀಡಿರುವುದನ್ನು ನಾನು ಮರೆಯಲೇ ಸಾಧ್ಯವಿಲ್ಲ. ಚಿಕ್ಕಂದಿನಿಂದಲೇ ನಾನು ಮದಕರಿ ನಾಯಕ, ಚಿತ್ರದುರ್ಗದ ಕಥೆಗಳನ್ನು ಕೇಳುತ್ತಾ ಬಂದಿದ್ದೆ. ಚಿತ್ರೀಕರಣದ ಸಂದರ್ಭದಲ್ಲಿ ಅಲ್ಲಿ ಕಳೆದಿರುವ ದಿನಗಳ ನೆನಪು ನನ್ನ ಮನದಲ್ಲಿ ಸದಾ ಹಸಿರಾಗಿರುತ್ತದೆ.

ನೀವು ಗಾಯಕರೂ ಹೌದು... ಆದರೆ ಈ ಪ್ರತಿಭೆ ಇನ್ನೂ ಹೊರ ಬಂದಿಲ್ಲ...

ಹೌದು, ನಾನು ಕರ್ನಾಟಕ ಸಂಗೀತದಲ್ಲಿ ಜ್ಯೂನಿಯರ್ ಮಾಡಿದ್ದೇನೆ. ಹಿಂದೂಸ್ತಾನಿ ಸಂಗೀತವನ್ನೂ ಕಲಿತಿರುವೆ. ತಂದೆಗೆ ನನ್ನ ಸಂಗೀತ ಕಛೇರಿ ಮಾಡಿಸಬೇಕು ಎನ್ನುವ ಆಸೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ನಾನು 'ಸೇವಂತಿ ಸೇವಂತಿ' ಚಿತ್ರಕ್ಕೆ ಹಾಡಿದ್ದೆ. ಈಗ 'ಗಣೇಶ ಮತ್ತೆ ಬಂದ' ಚಿತ್ರದಲ್ಲಿ ಹಾಡುತ್ತಿದ್ದೇನೆ. ಮುಂದೆ 'ಕಾರಂಜಿ' ಚಿತ್ರದಲ್ಲಿ ಹಾಡುವ ಸಾಧ್ಯತೆಯೂ ಇದೆ.

ಭವಿಷ್ಯದ ಯೋಜನೆಗಳೇನು?

ನನ್ನ ಯೋಜನೆಗಳೆಲ್ಲಾ ನಟನೆಯ ಸುತ್ತವೇ ತಿರುಗುತ್ತದೆ. ಈಗ 'ಗಣೇಶ ಮತ್ತೆ ಬಂದ' ಬಿಡುಗಡೆಗೆ ಕಾದಿದೆ. 'ನಮ್ಮೆಜಮಾನ್ರು', 'ಮಸ್ತ್ ಮಜಾ ಮಾಡಿ', 'ಕಾರಂಜಿ' ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. 'ಮಸ್ತ್ ಮಜಾ ಮಾಡಿ' ಸಂಪೂರ್ಣ ಹಾಸ್ಯ ಚಿತ್ರವಾದರೆ, 'ಕಾರಂಜಿ'ಯಲ್ಲಿ ಸಂಗೀತ ತಂಡವೊಂದರ ಕಥೆ ಇದೆ.

ನಿಮ್ಮ ಬಗ್ಗೆ ಯಾರಿಗೂ ತಿಳಿಯದ ಒಂದು ರಹಸ್ಯ?

2-3 ಗ್ಲಾಸ್ ಕೋಲ್ಡ್ ಕಾಫಿ ಕುಡಿದರೆ ಸಾಕು ನನಗೆ ಮತ್ತೇರಿ ಬಿಡುತ್ತೆ!

ಟಿಎಸ್‌ಐ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .