ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಅಂಕದ ಪರದೆ
 
 

ಶಿಕ್ಷಣ: ಲಿಂಗಭೇದ

ಬಾಲಕಿಯರದೇ ಮೇಲುಗೈ ಏಕೆ?

ಅರಬ್ ರಾಷ್ಟ್ರಗಳಲ್ಲಿ ಈಗ ಬಾಲಕಿಯರ ಪಾಲಿಗೆ ಶಿಕ್ಷಣ ಗಗನಕುಸುಮ

'ಒಂದು ಬೈಕ್ ಖರೀದಿಸಬೇಕು ಮತ್ತು ಆ ಸಾಲದ ಮಾಸಿಕ ಕಂತು ಕಟ್ಟಲು ಸಾಲುವಷ್ಟು ಸಂಬಳ ಸಿಕ್ಕಿದರೆ ಸಾಕು' ಎಂಬ ಜೀವನ ಧ್ಯೇಯ ಇಟ್ಟುಕೊಂಡ ಯಾರಾದರೂ ವಿಶ್ವವಿದ್ಯಾನಿಲಯದ ಮೆಟ್ಟಿಲು ಹತ್ತಲು ಸಾಧ್ಯವೇ? ದುರದೃಷ್ಟವಶಾತ್ ಹುಡುಗರ ಇಂಥ ಮನೋಭಾವವೇ ಶಿಕ್ಷಣದಲ್ಲಿ ಹುಡುಗಿಯರು ಮೇಲುಗೈ ಸಾಧಿಸಲು ಕಾರಣವಾಗುತ್ತಿದೆ. ಇದು ಹಠಾತ್ತನೆ ಸಂಭವಿಸಿದ ಅಥವಾ ಹೊಚ್ಚ ಹೊಸ ಬೆಳವಣಿಗೆಯೇನೂ ಅಲ್ಲ. ಪುರುಷ ಪ್ರಧಾನ ಸಮಾಜದಲ್ಲಿ ಹುಡುಗಿಯರು ಮೇಲುಗೈ ಸಾಧಿಸುತ್ತಿರುವುದು ಕಾನೂನು ನಿರ್ಮಾತೃಗಳನ್ನು ಮಾತ್ರವಲ್ಲದೆ ಪೋಷಕರು ಹಾಗೂ ಶಿಕ್ಷಕರನ್ನೂ ಚಿಂತೆಗೀಡು ಮಾಡಿದೆ.

ಶಿಕ್ಷಣದಲ್ಲಿ ಜಗತ್ತಿನಾದ್ಯಂತ ಹುಡುಗರು ಹುಡುಗಿಯರಿಗಿಂತ ಹಿಂದೆ ಬೀಳುತ್ತಿದ್ದಾರೆ ಎಂಬುದನ್ನು ಹಲವು ಅಧ್ಯಯನಗಳು ಸಾಬೀತುಪಡಿಸಿವೆ. ಯುನಿಸೆಫ್ ವರದಿಯ ಪ್ರಕಾರ ಅರಬ್ ರಾಷ್ಟ್ರಗಳಲ್ಲಿ ವಿದ್ಯಾರ್ಥಿನಿಯರು ಹುಡುಗರಿಗಿಂತ ಮೇಲುಗೈ ಸಾಧಿಸಿದ್ದಾರೆ. ಆದರೆ ಸಂಪ್ರದಾಯ ಹಾಗೂ ಆರ್ಥಿಕ ಪರಿಸ್ಥಿತಿಗಳಿಂದಾಗಿ ಆ ರಾಷ್ಟ್ರಗಳಲ್ಲಿ ಬಹುತೇಕ ಹುಡುಗಿಯರ ಪಾಲಿಗೆ ಶಿಕ್ಷಣ ಗಗನಕುಸುಮವಾಗೇ ಉಳಿದಿದೆ. ಅಲ್ಲದೆ ಯುನಿಸೆಫ್ ನಡೆಸಿದ ಅಧ್ಯಯನದ ಅನುಸಾರ ಬಾಲಕಿಯರ ಶಿಕ್ಷಣದ ವಿಷಯದಲ್ಲಿ ಯೆಮೆನ್, ಇರಾಕ್ ಹಾಗೂ ಈಜಿಪ್ಟ್ ರಾಷ್ಟ್ರಗಳ ಸಾಧನೆ ಅತೀ ಕಳಪೆ. 2005ರಲ್ಲಿ ಅಮೆರಿಕ ಶಿಕ್ಷಣ ಇಲಾಖೆ ನಡೆಸಿದ ಅಧ್ಯಯನದ ಪ್ರಕಾರ ಹಲವು ಸಾಧನೆಗಳು ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಹುಡುಗಿಯರೇ ಮುಂದು. ಅಂತರ್ ರಾಷ್ಟ್ರೀಯ ಅಂಕಿ-ಅಂಶಗಳ ಪ್ರಕಾರ ಫಿನ್‌ಲ್ಯಾಂಡ್‌ನ ಹುಡುಗಿಯರು ಹುಡುಗರಿಗಿಂತ 51 ಅಂಕಗಳಷ್ಟು ಮುಂದಿದ್ದರೆ ನ್ಯೂಜಿಲ್ಯಾಂಡ್‌ನಲ್ಲಿ 46, ಮೆಕ್ಸಿಕೋದಲ್ಲಿ 20 ಹಾಗೂ ಪೋರ್ಚುಗಲ್‌ನಲ್ಲಿ 25 ಅಂಕಗಳಷ್ಟು ಮುಂದಿದ್ದಾರೆ. 90ರ ದಶಕದ ಆರಂಭದಲ್ಲಿ ಇಂಥ ಒಂದು ಅಧ್ಯಯನ ಆಸ್ಟ್ರೇಲಿಯಾದಲ್ಲೂ ನಡೆದಿತ್ತು. ಇಲ್ಲೂ ವ್ಯತ್ಯಾಸವೇನೂ ಇಲ್ಲ. ಧಾರಣ ಶಕ್ತಿಯಲ್ಲಿ ಆಸ್ಟ್ರೇಲಿಯಾದ ಹುಡುಗಿಯರು ಹುಡುಗರಿಗಿಂತ 11 ಅಂಕಗಳ ಮೇಲುಗೈ ಸಾಧಿಸಿದ್ದಾರೆ. ಅಲ್ಲದೆ ವಿಶ್ವವಿದ್ಯಾನಿಲಯಗಳಲ್ಲಿ ಶೇ.6ರಷ್ಟು ಅಧಿಕ ದಾಖಲಾತಿಯೂ ಹುಡುಗಿಯರದ್ದೇ.

ಈ ಮೇಲಿನ ಅಂಕಿ-ಅಂಶಗಳು ಹಾಗೂ ಅಧ್ಯಯನಗಳ ವಿವರ ಖಂಡಿತಾ ಹುಡುಗ-ಹುಡುಗಿಯರಲ್ಲಿರುವ ಸ್ಪರ್ಧಾತ್ಮಕ ಮನೋಭಾವಕ್ಕೆ ಕಿಚ್ಚು ಹೊತ್ತಿಸಲು ಅಲ್ಲ. ಬದಲಿಗೆ ಹುಡುಗ, ಹುಡುಗಿಯರೆಂಬ ಭೇದವಿಲ್ಲದೆ ಹೇಗೆ ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಫಲಕಾರಿಯಾಗಿ ಬಳಸಿಕೊಳ್ಳಬಹುದು ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ.

ಲಿಂಗ ತಾರತಮ್ಯದಿಂದ ದೀರ್ಘಕಾಲೀನ ಪರಿಹಾರವಂತೂ ಸಿಗಲಾರದು. ಅಮೆರಿಕದಲ್ಲಿ ಶಿಕ್ಷಣದಲ್ಲಿ ಹಿಂದುಳಿದ ಬಾಲಕರಲ್ಲಿ ಬಹುತೇಕರು ಕರಿಯ ಜನಾಂಗದವರು, ಹಿಸ್ಪ್ಯಾನಿಕ್ (ಸ್ಪೇನ್ ಮತ್ತು ಪೋರ್ಚುಗಲ್ ಮೂಲದ) ವಿದ್ಯಾರ್ಥಿಗಳು ಅಥವಾ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು. ಸಾಮಾಜಿಕ- ಆರ್ಥಿಕ ಸಮಸ್ಯೆಗಳನ್ನು ಹಾಗೂ ಜನಾಂಗೀಯ ಭಿನ್ನತೆಯನ್ನು ಸರಿಪಡಿಸುವ ಮೂಲಕ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಅಲ್ಲದೆ, ಭಾರತ, ಆಸ್ಟ್ರೇಲಿಯಾ ಹಾಗೂ ಅರಬ್ ರಾಷ್ಟ್ರಗಳಲ್ಲಿ ನಡೆಸಿದ ಹಲವು ಅಧ್ಯಯನಗಳ ಪ್ರಕಾರ ಲಿಂಗಕ್ಕೆ ಸಂಬಂಧಿಸಿದ ರೂಢಿಗತ ಮಾದರಿಯಲ್ಲಿ ಮಕ್ಕಳನ್ನು ಬೆಳೆಸುವುದು ಅವರ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂಬುದನ್ನು ಸಾಬೀತುಪಡಿಸಿವೆ.

ಉತ್ತಮ ಬೋಧನಾ ವಿಧಾನ, ಸಹಕಾರ ಮತ್ತು ಸಾಂಘಿಕ ಕಲಿಕಾ ಅವಕಾಶ, ಮಕ್ಕಳ ಗುರಿ ಹಾಗೂ ಮಹತ್ವಾಕಾಂಕ್ಷೆಯನ್ನು ಉತ್ತೇಜಿಸುವುದು, ನೀತಿ, ನಿಯಮ ಪಾಲಿಸುವ ಪ್ರಜೆಗಳನ್ನಾಗಿಸುವುದು ಅತ್ಯವಶ್ಯ. ಜೊತೆಗೆ ಆಪ್ತ ಸಮಾಲೋಚನೆ ನಡೆಸುವುದು, ನುರಿತ ಶಿಕ್ಷಕ ವರ್ಗ ನೇಮಕ, ಮಕ್ಕಳಲ್ಲಿ ಸಕಾರಾತ್ಮಕ ಬದಲಾವಣೆ ತರಲು ಪಣತೊಟ್ಟ ಶಿಕ್ಷಣ ಸಮಿತಿಗಳ ರಚನೆ ಮುಂತಾದವುಗಳ ಬಗ್ಗೆ ಶಿಕ್ಷಕರು, ಪೋಷಕರು ಹಾಗೂ ಕಾನೂನು ನಿರ್ಮಾತೃಗಳು ಹೆಚ್ಚಿನ ಆದ್ಯತೆ ಕೊಡಬೇಕಾದ ಅಗತ್ಯವಿದೆ.

ಐಐಪಿಎಂ
'ಥಿಂಕ್ ಟ್ಯಾಂಕ್

ಅಕ್ರಂ ಹಕ್

ಗ್ರಾಮೀಣ : ಆಸ್ಪತ್ರೆ

ಲಾಭ ತರುವ 'ಆರೋಗ್ಯ ಉದ್ಯಮ'

ಚಿಲ್ಲರೆ ವ್ಯಾಪಾರದಂತೆ, ಆರೋಗ್ಯ ಕ್ಷೇತ್ರದಲ್ಲಿ ಗ್ರಾಹಕ ಸಂತೃಪ್ತಿ ಏಕೆ ಸಾಧ್ಯವಿಲ್ಲ?

ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮುಂತಾದ ರಾಷ್ಟ್ರಗಳಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ವಿಷಯದಲ್ಲಿ ಅತೀ ಕಳಪೆ ಪ್ರದರ್ಶನ ನೀಡುತ್ತಿರುವ ರಾಷ್ಟ್ರವೆಂದರೆ ಭಾರತ. ಆದರೆ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅವಲೋಕಿಸಿದರೆ, ಭಾರತ ತನ್ನ ಭವಿಷ್ಯವನ್ನು ಉಜ್ವಲವಾಗಿಸಲು ಪ್ರಯತ್ನಿಸುತ್ತಿದೆ ಮಾತ್ರವಲ್ಲ; ಭವಿಷ್ಯದ ಜಗತ್ತನ್ನು ವಾಸಯೋಗ್ಯವನ್ನಾಗಿಸುವ ನಿಟ್ಟಿನಲ್ಲೂ ಭಾರತ ಹರಿಕಾರನಂತೆ ವರ್ತಿಸುತ್ತಿದೆ. ಆದರೆ ಆರೋಗ್ಯ ಹಾಗೂ ಶಿಕ್ಷಣದ ವಿಷಯದಲ್ಲಿ ಸಾಕಷ್ಟು ಪ್ರಯತ್ನಗಳಾಗದಿದ್ದರೆ ಉಳಿದ ಪರಿಶ್ರಮಗಳೆಲ್ಲವೂ ನೀರಿನ ಮೇಲಿನ ಹೋಮ ಮಾಡಿದಂತೆಯೇ. ಗ್ರಾಮೀಣಾಭಿವೃದ್ಧಿಗೆ ಕೋಟಿಗಟ್ಟಲೆ ಹಣ ಸುರಿದ ಬಗ್ಗೆ ಆಗಾಗ ವರದಿಗಳು ಬಂದರೂ ಗ್ರಾಮೀಣ ಭಾರತದ ಅಭಿವೃದ್ಧಿ ಸಾಗುತ್ತಿರುವ ವೇಗ ಪ್ರತಿಯೊಬ್ಬ ಭಾರತೀಯನಿಗೂ ತಿಳಿದಿರುವಂಥದ್ದೇ. ನಗರ ಭಾರತದಲ್ಲಿ ಆರೋಗ್ಯಕ್ಷೇತ್ರ ಗಣನೀಯ ಪ್ರಗತಿ ಸಾಧಿಸುತ್ತಿದ್ದರೂ (ಖಾಸಗೀ ಆರೋಗ್ಯ ಸಂಸ್ಥೆಗಳ ಕೊಡುಗೆಯೇ ಅಪಾರ ಎಂಬ ಮಾತು ಒತ್ತಟ್ಟಿಗಿರಲಿ) ಗ್ರಾಮೀಣ ಭಾರತ ಏಕೆ ಹಿಂದುಳಿದಿದೆ ಎಂಬ ಪ್ರಶ್ನೆ ಕಾಡದೇ ಇರದು.

ಇದನ್ನು ಗಮನಿಸಿ: ವಾಲ್‌ಮಾರ್ಟ್ ಅಥವಾ ನಮ್ಮವೇ ಆದಂಥ ದೈತ್ಯ ಚಿಲ್ಲರೆ ವ್ಯಾಪಾರಿ ಮಳಿಗೆಗಳಾದ ರಿಲಯನ್ಸ್, ಬಿಗ್‌ಬಜಾರ್ ಅಥವಾ ಸುಭಿಕ್ಷಾಗಳು ತಮ್ಮ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತವೆ. ಇದಕ್ಕೆ ಕಾರಣ, ಸರಕುಗಳ ಪೂರೈಕೆಯನ್ನು ನಿಭಾಯಿಸುವಲ್ಲಿ ಅವುಗಳಿಗಿರುವ ಸಾಮರ್ಥ್ಯ. ಈ ಚಿಲ್ಲರೆ ವ್ಯಾಪಾರಿ ಮಳಿಗೆಗಳು ಉತ್ಪಾದಕರಿಗೆ ಭಾರೀ ಬೇಡಿಕೆಗಳನ್ನು ಒದಗಿಸುತ್ತವೆ. ಉತ್ಪಾದಕರು ಹಾಗೂ ವ್ಯಾಪಾರ ಮಳಿಗೆಗಳ ನಡುವೆ ಮಧ್ಯವರ್ತಿ ಮೂಗು ತೂರಿಸುವ ಅವಕಾಶ ಇಲ್ಲ. ಭಾರಿ ಪ್ರಮಾಣದ ನಿಗದಿತ ಬೇಡಿಕೆ ದೊರಕುವ ಕಾರಣ ಉತ್ಪಾದಕರು ಈ ದೈತ್ಯ ಚಿಲ್ಲರೆ ವ್ಯಾಪಾರ ಮಳಿಗೆಗಳಿಗೆ ಹೆಚ್ಚಿನ ರಿಯಾಯಿತಿ ದರದಲ್ಲಿ ವಸ್ತುಗಳ ಮಾರಾಟ ಮಾಡುತ್ತವೆ. ಹಾಗೆ ಬಂದ ಆ ರಿಯಾಯಿತಿಯಲ್ಲಿನ ಒಂದಂಶವನ್ನು ದೈತ್ಯ ಚಿಲ್ಲರೆ ವ್ಯಾಪಾರ ಮಳಿಗೆಗಳು ತಮ್ಮ ಗ್ರಾಹಕರಿಗೆ ಬಿಟ್ಟುಕೊಟ್ಟು ಸಂತೃಪ್ತರನ್ನಾಗಿಸುತ್ತವೆ.

ಪ್ರಶ್ನೆಯೆಂದರೆ, ಚಿಲ್ಲರೆ ವ್ಯಾಪಾರದಲ್ಲಿ ಇಂಥ ಗ್ರಾಹಕಸಂತೃಪ್ತಿ ಸಾಧ್ಯ ಎಂದಾದರೆ ಆರೋಗ್ಯ ಕ್ಷೇತ್ರದಲ್ಲಿ ಇದು ಸಾಧ್ಯವಿಲ್ಲವೇಕೆ? ಚಿಲ್ಲರೆ ವ್ಯಾಪಾರ ಮಳಿಗೆಗಳ ಈ ತಂತ್ರವನ್ನು ಉಪಯೋಗಿಸುವುದರಿಂದ ಆರೋಗ್ಯ ಸಂಸ್ಥೆಗಳು ಲಾಭದ ಫಸಲನ್ನು ಕೊಯ್ಯಬಹುದು ಮಾತ್ರವಲ್ಲದೆ ಅತೀ ಕಡಿಮೆ ದರದಲ್ಲಿ ಗ್ರಾಮೀಣ ಭಾರತೀಯರಿಗೆ ಆರೋಗ್ಯ ಸೇವೆಯನ್ನೂ ಒದಗಿಸಲು ಸಾಧ್ಯ.

ಭಾರತದಲ್ಲಿ ಸರಿ ಸುಮಾರು 610 ಜಿಲ್ಲೆಗಳಿವೆ. ಪ್ರತಿ ಜಿಲ್ಲೆಯಲ್ಲೂ ಸರಾಸರಿ ಮೂರು ಅಥವಾ ನಾಲ್ಕು ಉಪ ವಿಭಾಗಗಳಿರುತ್ತವೆ. ಭಾರತ ಸರ್ಕಾರ ಆರೋಗ್ಯಕ್ಷೇತ್ರಕ್ಕೆ ಸಹಾಯನಿಧಿ ಸ್ಥಾಪಿಸಿದರೆ ಅದರಲ್ಲಿ ಶೇ.26ರಷ್ಟು ಅಂಶವನ್ನು ಸ್ವತಃ ಸರ್ಕಾರವೇ ಭರಿಸಿ ಉಳಿದ ಶೇ.74ರಷ್ಟನ್ನು ಪ್ರಮುಖ ಆರೋಗ್ಯ ಸಂಸ್ಥೆಗಳಿಂದ ಗಳಿಸಿಕೊಳ್ಳಬಹುದು. ಹಾಗೇ, ಸುಮಾರು 2400ರಷ್ಟು ತಾಲೂಕು ಆಸ್ಪತ್ರೆಗಳ ಅಭಿವೃದ್ಧಿಗಾಗಿ ಸಹಾಯನಿಧಿಯನ್ನು ಸ್ಥಾಪಿಸಿ, ಚಿಲ್ಲರೆ ವ್ಯಾಪಾರಿಗಳು ಮಾಡುವ ರೀತಿಯಲ್ಲೇ ಪ್ರಮುಖ ಔಷಧ ವೈದ್ಯಕೀಯ ಉಪಕರಣ ತಯಾರಿಕಾ ಕಂಪನಿಗಳು ಹಾಗೂ ಕಟ್ಟಡ ನಿರ್ಮಾಪಕರಿಗೆ ದೀರ್ಘಕಾಲೀನ ಗುತ್ತಿಗೆ ನೀಡಿದರೆ ಅವುಗಳಿಂದ ಭಾರಿ ಲಾಭ ದೊರಕುತ್ತದೆ. ಮಾತ್ರವಲ್ಲ ಹಾಗಾದಾಗ ಆ ಕಂಪನಿಗಳಿಗೆ ಕಡಿಮೆ ದರದಲ್ಲಿ ಔಷಧಿಗಳ ಪೂರೈಕೆಯೂ ಸಾಧ್ಯವಾಗುತ್ತದೆ.

ಇದರ ಜೊತೆಗೆ 2400 ಆಸ್ಪತ್ರೆಗಳಲ್ಲಿ ದೂರ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸಿ ದೆಹಲಿ ಅಥವಾ ಮುಂಬೈನಿಂದ, ಇಲ್ಲವೇ ಉಪಗ್ರಹ ಅಥವಾ ವಿ-ಸ್ಯಾಟ್ ಮೂಲಕ ಪಾಠಗಳನ್ನು ಬಿತ್ತರಿಸಿದರೆ ಗ್ರಾಮೀಣ ಭಾರತದ ಚಹರೆಯೇ ಬದಲಾಗುವುದರಲ್ಲಿ ಆಶ್ಚರ್ಯವಿಲ್ಲ. ಹಾಗೆಯೇ ಶಾಪಿಂಗ್ ಮಾಲ್‌ಗಳಂತೆ ಇವುಗಳನ್ನೂ ಅಭಿವೃದ್ಧಿಪಡಿಸಿದರಂತೂ ಶಿಕ್ಷಣ, ಗ್ರಾಹಕ ಹಿತರಕ್ಷಣೆ, ಆರೋಗ್ಯ ಎಲ್ಲವನ್ನೂ ನ್ಯಾಯಸಮ್ಮತ ಬೆಲೆಯಲ್ಲಿ ನೀಡಲು ಸಾಧ್ಯವಾಗುವುದು ಮಾತ್ರವಲ್ಲದೆ ಇದೊಂದು ಲಾಭದಾಯಕ ಉದ್ಯಮವಾಗಿಯೂ ಬೆಳೆಯಬಲ್ಲದು. ಓಬೀರಾಯನ ಕಾಲದ ಗೊಡ್ಡು ನಂಬಿಕೆಗಳಿಂದ ಹೊರಬಂದರೆ ಮಾತ್ರ ದೀರ್ಘಕಾಲದ ಈ ಕನಸು ಸಾಕಾರವಾಗಲು ಸಾಧ್ಯ.

ಐಐಪಿಎಂ
'ಥಿಂಕ್ ಟ್ಯಾಂಕ್'

ಪಥಿಕೃತ್ ಪಾಯ್ನೆ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .