ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ದೂರದೂರಿಂದ
 
 

ಮಲೇಷ್ಯಾ: ರಾಜಕೀಯ

ಅನ್ವರ್ ಕೈಗೆ ಮತ್ತೆ ಕೋಳ?

ಆರೋಪದ ಬಲೆಗೆ ಬಿದ್ದ ಮಲೇಷ್ಯಾದ ಮಾಜಿ ಉಪಪ್ರಧಾನಿ

Farpavilion- The Sunday Indian- Kannada

ಇತಿಹಾಸ ಮರುಕಳಿಸುತ್ತದೆ! ಇದು ಮಲೇಷ್ಯಾದ ಮಾಜಿ ಉಪ ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಪಾಲಿಗೆ ಅಸತ್ಯವೇನೂ ಅಲ್ಲ. ಒಂದು ಕಾಲದಲ್ಲಿ ರಾಜಕೀಯ ಹಗೆತನಕ್ಕೆ ಇದೇ ಅನ್ವರ್ ಬಲಿಪಶುವಾಗಿದ್ದರು. 1998ರಲ್ಲಿ ಭ್ರಷ್ಟಾಚಾರ ಮತ್ತು ಸಾಡಮಿ (ವಿಕೃತ ಕಾಮಿ) ಕೃತ್ಯದಲ್ಲಿ ಭಾಗಿಯಾದ ಆರೋಪದ ಹಿನ್ನೆಲೆಯಲ್ಲಿ ಅಧಿಕಾರದಿಂದ ಅವರನ್ನು ಪದಚ್ಯುತಗೊಳಿಸಲಾಗಿತ್ತು. ೬ ವರ್ಷಗಳ ಕಾಲ ಜೈಲುಶಿಕ್ಷೆ ಅನುಭವಿಸಿದರೂ ಮತ್ತೆ ಅಂತಹುದೇ ಪರಿಸ್ಥಿತಿಗೆ ಸಿಲುಕಿಕೊಳ್ಳುತ್ತೇನೆ ಎಂದು ಅವರು ಯೋಚಿಸಿಯೇ ಇರಲಿಲ್ಲವೇನೋ? ಮಲೇಷ್ಯಾ ಸುಪ್ರೀಂಕೋರ್ಟ್ 1998ರಲ್ಲಿ ಅನ್ವರ್ ಅವರ ಮೇಲಿದ್ದ ಸಾಡಮಿ ಆರೋಪವನ್ನು ವಜಾಗೊಳಿಸಿತ್ತು. ಆದರೆ ಭ್ರಷ್ಟಾಚಾರ ಆರೋಪದ ಮೇಲೆ ಅವರಿಗೆ ಶಿಕ್ಷೆಯಾಗಿತ್ತು. ಈಗ ಮತ್ತೆ ಅವರು ಸಾಡಮಿ ಆರೋಪ ಎದುರಿಸುತ್ತಿದ್ದು, ಮಲೇಷ್ಯಾದ ಇಸ್ಲಾಮಿಕ್ ಕಾನೂನು ಪ್ರಕಾರ ಈ ತಪ್ಪಿಗೆ 20 ವರ್ಷಗಳ ಕಾಲ ಶಿಕ್ಷೆ ನೀಡಬಹುದು.

ಒಂದು ಕಾಲದಲ್ಲಿ ಟೈಮ್ಸ್ ನಿಯತಕಾಲಿಕದ ಜಗತ್ತಿನ ನೂರು ಪ್ರಭಾವೀ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ವ್ಯಕ್ತಿ ಅನ್ವರ್. ಹಲವು ಸುಧಾರಣಾ ಕಾರ್ಯ ಮತ್ತು ಕ್ರೈಸ್ತ ಮುಖಂಡರಿಗೆ ಇಸ್ಲಾಮಿಕ್ ವಿದ್ವಾಂಸರು ಶಾಂತಿ ಮರುಸ್ಥಾಪನೆಗೆ ಬರೆದ ಬಹಿರಂಗ ಪತ್ರ 'ಎ ಕಾಮನ್ ವರ್ಡ್ ಬಿಟ್ವೀನ್ ಅಸ್ ಆಂಡ್ ಯು'ಗೆ ಸಹಿ ಹಾಕಿದ ಅನ್ವರ್‌ರಂತಹ ವ್ಯಕ್ತಿಯೊಬ್ಬರು 23 ವರ್ಷದ ಮೊಹಮದ್ ಸೈಫಲ್ ಬುಖಾರಿ ಅಜ್ಲನ್ ಎಂಬಾತ ಮಾಡಿದ ಆರೋಪದ ಮೇಲೆ ಬಂಧಿಯಾಗಿರುವುದು ವಿಪರ್ಯಾಸವೇ ಸರಿ.

ಅನ್ವರ್ ಅವರು ಈಗಾಗಲೇ ಪೊಲೀಸ್ ಅಧಿಕಾರಿಗಳೆದುರು ಪ್ರತಿವಾದ ಸಲ್ಲಿಸಿದ್ದಾರೆ. ಸಾಕ್ಷ್ಯ ತಿರುಚುವ ಆತಂಕದಿಂದ ಮತ್ತು ಸಾಕ್ಷ್ಯವನ್ನು ತಮ್ಮ ವಿರುದ್ಧವೇ ಬಳಸಬಹುದೆಂಬ ಭಯದಿಂದ ಅವರು ಡಿಎನ್‌ಎ ಮಾದರಿಯನ್ನು ಇನ್ನೂ ನೀಡಿಲ್ಲ. ಪೊಲೀಸ್ ಮಹಾನಿರ್ದೇಶಕ ಮುಸಾ ಹಸನ್ ಮತ್ತು ಅಟರ್ನಿ ಜನರಲ್ ಅಬ್ದುಲ್ ಗನಿ ಪಟೇಲ್ ಅವರು ತಮ್ಮ ವಿರುದ್ಧ ಸಾಕ್ಷ್ಯಗಳನ್ನು ರೂಪಿಸಿದ್ದಾರೆ ಎಂದು ಮತ್ತೊಮ್ಮೆ ಅನ್ವರ್ ಆರೋಪಿಸಿದ್ದಾರೆ. 1998ರಲ್ಲಿ ಅನ್ವರ್ ಮೇಲೆ ಸಾಡಮಿ ಆರೋಪ ಇದ್ದಾಗಲೂ ಇದೇ ಅಧಿಕಾರಿಗಳು ತಮ್ಮ ವಿರುದ್ಧ ಸಾಕ್ಷ್ಯ ರೂಪಿಸಿದ್ದರು ಎಂಬುದಾಗಿ ಹೇಳಿರುವ ಅನ್ವರ್ ಅಧಿಕಾರಿಗಳನ್ನು ವಜಾ ಮಾಡಬೇಕೆಂದು ಆಗ್ರಹಿಸಿದ್ದಾರೆ. ಆದರೆ ಹಿಂದಿಗಿಂತ ಈಗಿನ ಪರಿಸ್ಥಿತಿ ತುಸು ಭಿನ್ನವಾಗಿದೆ. ಮಾರ್ಚ್‌ನಲ್ಲಿ ನಡೆದ ಚುನಾವಣೆಯಲ್ಲಿ ಮೂರು ಪಕ್ಷಗಳ ಮೈತ್ರಿಯಲ್ಲಿ 82 ಸ್ಥಾನಗಳನ್ನು ಗಳಿಸಿದ ಅನ್ವರ್ ಅವರ ಪಕ್ಷ ಸಂಸತ್ತಿನ 222 ಸ್ಥಾನಗಳಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಆಕ್ರಮಿಸಿದೆ. ಈ ವಿಚಾರದಿಂದಾಗಿ ಅವರು ಸ್ವಲ್ಪವಾದರೂ ನಿರಮ್ಮಳರಾಗಿದ್ದಾರೆ. ಅನ್ವರ್ ಅವರ ಮೇಲಿನ ಆರೋಪದ ವಿರುದ್ಧವಾಗಿ ಬೃಹತ್ ಪ್ರತಿಭಟನೆ ನಡೆಯುತ್ತಿದ್ದರೂ, ಅದು ರಾಜಕೀಯ ಸ್ಥಿರತೆಯ ಬುಡಕ್ಕೆ ಪೆಟ್ಟು ಕೊಡುವ ಹಾಗೇನೂ ಕಾಣುತ್ತಿಲ್ಲ. ಟಿಎಸ್‌ಐ ಜೊತೆ ಮಾತನಾಡುತ್ತಾ ಮಲೈಸಿಯಾಕಿನಿ ಅಂತರ್ಜಾಲ ಪತ್ರಿಕೆಯ ಸಂಪಾದಕ ಫ್ರಾನ್ಸಿಸ್ ಸಿಯಾಹ್ "ಪಾಕಿಸ್ತಾನದಂತೆ ಮಲೇಷ್ಯಾದಲ್ಲಿ ರಾಜಕೀಯ ಸ್ಥಿರತೆ ಸುಲಭವಾಗಿ ಬುಡಮೇಲಾಗುವುದು ಸಾಧ್ಯವಿಲ್ಲ. ಸೇನೆ ಹಾಗೂ ಇಲ್ಲಿನ ಪೊಲೀಸರು ರಾಜಕೀಯ ಇಚ್ಛಾಶಕ್ತಿಗಳನ್ನು ಓಲೈಸುವುದಿಲ್ಲ" ಎನ್ನುತ್ತಾರೆ. ಭವಿಷ್ಯದಲ್ಲಿ ಏನಾಗುತ್ತದೆ ಎಂಬುದು ತಿಳಿದಿಲ್ಲ. ಆದರೆ ಇಂಧನ ಬೆಲೆ ಹೆಚ್ಚಳ ಮತ್ತು ಹಣದುಬ್ಬರದ ಏರಿಕೆ ವಿರುದ್ಧ ದನಿ ಎತ್ತಿದ ಅನ್ವರ್ ಅವರಂತೂ ಜನರ ಕಣ್ಮಣಿಯಾಗಿದ್ದಾರೆ.

ಟಿಎಸ್‌ಐ

ಶಶಾಂಕ್ ತ್ರಿಪಾಠಿ

ಆಫ್ರಿಕಾ: ಅಧೋಗತಿ

ಶಸ್ತ್ರಾಸ್ತ್ರ ವಿತರಣೆ; ಶಾಂತಿಯ ಒಗ್ಗರಣೆ

ಸ್ವಾರ್ಥ ಸಾಧನೆಗಾಗಿ ಚೀನಾ ಆಫ್ರಿಕಾ ದೇಶಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದೆ

Farpavilion- The Sunday Indian- Kannada

ಯುರೋಪಿಯನ್ ದೈತ್ಯರು ಸಂಪೂರ್ಣ ಆಫ್ರಿಕಾವನ್ನು ಆಕ್ರಮಿಸಿಕೊಂಡ ಕಾಲ ಬಹಳ ಹಿಂದಿನದಾಯಿತು, ಅಂದರೆ 19ನೇ ಶತಮಾನದಲ್ಲಿ. ಆಗ ಸಂಪೂರ್ಣ ಆಫ್ರಿಕಾ ಖಂಡ ಮಹಾ ತುಮುಲವನ್ನು ಎದುರಿಸಿತ್ತು. ಈಗೇನಿದ್ದರೂ ಆಫ್ರಿಕಾ ಖಂಡದಲ್ಲಿ ಚೀನಾ ಕಾರುಬಾರು! ಪಶ್ಚಿಮ ಸೂಡಾನ್‌ನ ಯುದ್ಧ ಪೀಡಿತ ಡರ್ಫರ್ ಪ್ರಾಂತ್ಯದಲ್ಲಿ ಪರಿಸ್ಥಿತಿ ನಿಧಾನವಾಗಿ ಬದಲಾಗುತ್ತಿರುವುದನ್ನು ಕಂಡರೆ ಮತ್ತು ಇಲ್ಲಿ ವೃದ್ಧಿಸುತ್ತಿರುವ ಚೀನಾ ಹಸ್ತಕ್ಷೇಪ ಗಮನಿಸಿದರೆ ಆಫ್ರಿಕಾ ಮತ್ತೊಮ್ಮೆ ಅವ್ಯವಸ್ಥೆಯ ಗೂಡಾಗುವುದರಲ್ಲಿ ಸಂಶಯವೇ ಇಲ್ಲ.

ಸೂಡಾನ್‌ಗೆ ಅತೀ ಹೆಚ್ಚು ಶಸ್ತ್ರಾಸ್ತ್ರ ಮಾರಾಟ ಮಾಡುತ್ತಿರುವ ಪ್ರಮುಖ ದೇಶ ಚೀನಾ ಇತ್ತೀಚೆಗೆ ಅಲ್ಲಿನ ಪರಿಸ್ಥಿತಿಗೆ ತೀವ್ರ ಕಳವಳ ವ್ಯಕ್ತಪಡಿಸಿದೆ! ಕಾರಣ? ಸೂಡಾನ್ ಅಧ್ಯಕ್ಷ ಓಮರ್ ಹಸನ್ ಅಲ್ ಬಶೀರ್ ಮೇಲೆ ಅಂತರ್ ರಾಷ್ಟ್ರೀಯ ಅಪರಾಧ ನ್ಯಾಯಾಲಯದ ವಕೀಲರು ಮಾರಣಹೋಮದ ಆರೋಪ ಹೊರಿಸಿದ್ದಾರೆ. ಈ ಆಪಾದನೆಯಿಂದ ಡರ್ಫರ್‌ನಲ್ಲಿ ಈಗಾಗಲೇ ನೆನೆಗುದಿಗೆ ಬಿದ್ದಿರುವ ಶಾಂತಿ ಸ್ಥಾಪನಾ ಪ್ರಯತ್ನಗಳು ಹಳಿ ತಪ್ಪಲಿವೆ ಎಂಬುದೇ ಚೀನಾದ ಕಳವಳ. ಅದಕ್ಕೆ ಸರಿಯಾಗಿ ಈ ಆಪಾದನೆಗಳ ತರುವಾಯ ಖಾರ್ಟೌಮ್ ಪ್ರಾಂತ್ಯದ ಸುತ್ತ ನಡೆಯುತ್ತಿದ್ದ ಶಾಂತಿ ಸ್ಥಾಪನಾ ಚಟುವಟಿಕೆಗಳಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ವಕೀಲರ ನಿರ್ಣಯಗಳು ಡರ್ಫರ್‌ನಲ್ಲಿ ಶಾಂತಿ ನೆಲೆಯೂರಲು ನಡೆಸುತ್ತಿರುವ ಪೂರಕ ಪ್ರಯತ್ನಗಳಿಗೆ ತಡೆಯೊಡ್ಡಲಿವೆ ಎಂದು ಡರ್ಫರ್ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. "ಡರ್ಫರ್‌ನ ಅಮಾಯಕರ ಪರವಾಗಿ ವಕೀಲರು ವಾದಿಸುತ್ತಿದ್ದಾರೆ ಎನ್ನುವುದೇನೋ ನಿಜವೇ. ಆದರೆ ಈ ಸಂಬಂಧ ಅಧಿಕಾರದ ಚುಕ್ಕಾಣಿ ಹಿಡಿದವರು ವ್ಯಾಪಕ ಗಲಭೆ ಮತ್ತು ವಿನಾಶವನ್ನು ಸೃಷ್ಟಿಸುವ ಸಾಮರ್ಥ್ಯ ಪಡೆದಿದ್ದಾರೆ ಎನ್ನುವುದನ್ನೂ ನಾವು ಮರೆಯುವಂತಿಲ್ಲ. ಸೂಡಾನ್ ಸರ್ಕಾರದ ಅಧಿಕೃತ ವಕ್ತಾರರು ಮತ್ತು ಆಡಳಿತ ಪಕ್ಷ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದೆ" ಎನ್ನುತ್ತಾರೆ ಟಿಎಸ್‌ಐ ಜೊತೆ ಮಾತನಾಡಿದ 'ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಟ್ರಾನ್ಸಿಶನಲ್ ಜಸ್ಟಿಸ್'ನ ಆಫ್ರಿಕಾ ಕಾರ್ಯಕ್ರಮದ ನಿರ್ದೇಶಕರಾದ ಸುಲೈಮಾನ್ ಬಾಲ್ಡೋ.

ಈ ನಡುವೆ ಚೀನಾದ ಆಡಳಿತ ಪಕ್ಷ 'ಚೈನೀಸ್ ಕಮ್ಯುನಿಸ್ಟ್ ಪಕ್ಷ'ದ ಮುಖವಾಣಿ 'ಪೀಪಲ್ಸ್ ಡೈಲಿ' ವಕೀಲರ ನಡೆಯನ್ನು 'ಬೆಂಕಿಗೆ ತುಪ್ಪ ಸುರಿಯಲಾಗಿದೆ' ಎಂದೇ ವ್ಯಾಖ್ಯಾನಿಸಿದೆ. ಈ ಆಪಾದನೆಗೆ ಸರ್ಕಾರದ ಉಗ್ರ ಕೋಪ ಮತ್ತು ಪ್ರತಿಭಟನೆ ವ್ಯಕ್ತವಾಗಿದೆ. ಬಶೀರ್ ಅವರನ್ನು ಪದಚ್ಯುತರನ್ನಾಗಿಸಲು ಪಾಶ್ಚಾತ್ಯರು ನಡೆಸುತ್ತಿರುವ ಹುನ್ನಾರವಿದು ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ. ಕೆಲ ದಿನಗಳಿಂದ ಚೀನಾ ಮತ್ತು ಸೂಡಾನ್ ನಡುವೆ ಉತ್ತಮ ಬಾಂಧವ್ಯವಿದೆ. ಸೂಡಾನ್‌ನ ತೈಲ ಉದ್ಯಮಗಳ ಪ್ರಮುಖ ಹೂಡಿಕೆದಾರ ಚೀನಾ. ಹಾಗೆಯೇ ಖಾರ್ಟೌಮ್‌ಗೆ ಅತೀ ಹೆಚ್ಚು ಶಸ್ತ್ರಾಸ್ತ್ರ ಸರಬರಾಜು ಮಾಡುವ ದೇಶವೂ ಚೀನಾ! ಜೊತೆಗೆ ಡರ್ಫರ್‌ನಲ್ಲಿ ಶಾಂತಿ ನೆಲೆಸುವಂತೆ ಮಾಡುವ ನಿಟ್ಟಿನಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿರುವುದು ಚೀನಾ ಎನ್ನುವುದು ದೊಡ್ಡ ವಿಪರ್ಯಾಸ. ಇತ್ತ ಸೂಡಾನ್ ಅಧ್ಯಕ್ಷರು ನಡೆಸುತ್ತಿರುವ ಮಾರಣಹೋಮಕ್ಕೆ ಸಂಬಂಧಿಸಿ ಅಂತರ್ ರಾಷ್ಟ್ರೀಯ ಆಪಾದನೆಗಳನ್ನು ಎದುರಿಸುತ್ತಿರುವಂತೆಯೇ, ಅತ್ತ ಚೀನಾ ಮಾತ್ರ ಅತಿ ನಾಜೂಕಾಗಿ ಆಫ್ರಿಕಾದ ನಾಯಕನ ಜೊತೆ ವ್ಯವಹರಿಸುತ್ತಿದೆ.

 

ಟಿಎಸ್‌ಐ

ಗುಲಾಮ್ ಜೀಲಾನಿ

ಭಾಷೆ: ಸಮಸ್ಯೆ

ವಿಭಜನೆಯ ಹಾದಿಯಲ್ಲಿ ಬೆಲ್ಜಿಯಂ

Farpavilion- The Sunday Indian- Kannada

ಬೆಲ್ಜಿಯಂ ನಿವಾಸಿಗಳು ಹೇಳುವಂತೆ ಬ್ರುಸೆಲ್ಸ್‌ನಲ್ಲಿ ಎರಡು ವಿಚಾರಗಳು ಮಾತ್ರ ಶಾಶ್ವತ. ಸ್ಕ್ಯಾಂಡಿನೇವಿಯಾದ ಬೇಸಗೆ ಮತ್ತು ಮುಗಿಯದ ರಾಜಕೀಯ ಬಿಕ್ಕಟ್ಟು. ಯುರೋಪಿಯನ್ ಒಕ್ಕೂಟ ಮತ್ತು ನ್ಯಾಟೋ ಸಂಘಟನೆಗಳ ಕೇಂದ್ರ ಕಚೇರಿ ಇರುವ ಈ ಪುಟ್ಟ ನಗರ ನಿರ್ಮಾಣವಾಗಿದ್ದೇ ಯುರೋಪ್‌ನಲ್ಲಿ ಸ್ಥಿರತೆ ಕಾಪಾಡಲು. ಇದೇ ಕಾರಣಕ್ಕೆ ಪಾಶ್ಚಾತ್ಯರು ಸ್ವಲ್ಪ ತಲೆಕೆಡಿಸಿಕೊಳ್ಳುವ ಪ್ರಾಂತವಿದು. ಹಾಗಾಗಿ ಕಳೆದ ವಾರ ಹಲವಾರು ಸ್ಥಳೀಯ ಫ್ರೆಂಚ್ ಭಾಷಾ ಪತ್ರಿಕೆಗಳಲ್ಲಿ ಒಂದಾಗಿರುವ ಸೋಯರ್' "ಬೆಲ್ಜಿಯಂ ಮತ್ತೊಮ್ಮೆ ಪಾತಾಳಕ್ಕಿಳಿದಿದೆ" ಎಂದು ಟೀಕಿಸಿದಾಗ ಹಲವರು ಕಾತರದಿಂದ ಹುಬ್ಬೇರಿಸಿದ್ದರು.

ಬೆಲ್ಜಿಯಂನ ಎರಡು ಭಾಷಾ ಸಮುದಾಯಗಳ ನಡುವಿನ ಬಿಕ್ಕಟ್ಟು ಪರಿಹರಿಸುವಲ್ಲಿ ಅಸಮರ್ಥರಾಗಿರುವುದರಿಂದ ಪ್ರಧಾನಿ ಪಟ್ಟಕ್ಕೆ ರಾಜೀನಾಮೆ ನೀಡುವ ವೈವೆಸ್ ಲೆಟರ್‌ಮೆ ಅವರ ತೀರ್ಮಾನ ಕುರಿತು ರಾಜ ಎರಡನೇ ಅಲ್ಬರ್ಟ್ ಮತ್ತು ಪ್ರಧಾನಿ ನಡುವೆ ತೀವ್ರ ಚರ್ಚೆ ನಡೆದಿರುವ ಸಂಬಂಧ ಪತ್ರಿಕೆ ಕಳವಳ ವ್ಯಕ್ತಪಡಿಸಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ರಾಜ ಪ್ರಧಾನಿ ಅವರ ರಾಜೀನಾಮೆಯನ್ನು ತಾತ್ಕಾಲಿಕವಾಗಿ ತಿರಸ್ಕರಿಸಿದ್ದಾರೆ. ಪ್ರಧಾನಿ ಆ ಹುದ್ದೆಯಲ್ಲಿ ಮುಂದುವರಿಯಬೇಕು ಎನ್ನುವುದು ಅವರ ಆಶಯ. ಈ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ತಿಂಗಳ ಅಂತ್ಯದೊಳಗೆ ಮಾತುಕತೆ ನಡೆಸಲು ತೀರ್ಮಾನಿಸಲಾಗಿದ್ದು, ಇದಕ್ಕೆ ವೇದಿಕೆಯಾಗಬಲ್ಲ ಪರಿಪೂರ್ಣ ವರದಿ ಸಿದ್ಧಪಡಿಸುವಂತೆ ಮೂವರು ಹಿರಿಯ ಅಧಿಕಾರಿಗಳಿಗೆ ಅವರು ಆದೇಶ ನೀಡಿದ್ದಾರೆ.

ಈ ವರ್ಷಾರಂಭದಲ್ಲಿ, ಒಕ್ಕೂಟ ರಾಷ್ಟ್ರದಲ್ಲಿ ವ್ಯಾಪಕ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ಫ್ಲಾಂಡರ್‍ಸ್ ಮತ್ತು ವಲೋನಿಯಾ ಸಮುದಾಯಗಳ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಲೆಟರ್‌ಮೆ ಅವರು ಜುಲೈ 15ರ ದಿನಾಂಕವನ್ನು ಅಂತಿಮದಿನವನ್ನಾಗಿ ಗೊತ್ತುಪಡಿಸಿದ್ದರು. ಆದರೆ ಇದನ್ನು ಕಾರ್ಯರೂಪಕ್ಕೆ ತರುವಲ್ಲಿ ಅವರು ವಿಫಲರಾಗಿದ್ದಾರೆ. ೪೭ ವರ್ಷ ಹಳೆಯದಾದ 'ಫ್ಲೆಮಿಶ್ ಕನ್ಸರ್ವೇಟಿವ್ ಪಕ್ಷ' ಮೂರು ಪ್ರತ್ಯೇಕ ಸಂದರ್ಭಗಳಲ್ಲಿ ಸಮಸ್ಯೆಯನ್ನು ಪರಿಹರಿಸುವ ಸಾಧ್ಯತೆಗಳಿದ್ದರೂ ಯಶಸ್ಸು ಸಾಧಿಸದೆ ಇರುವುದರಿಂದ ರಾಜೀನಾಮೆಗೆ ನಿರ್ಧರಿಸಿದ್ದರು. "ಮೂರು ಅವಕಾಶಗಳು ಸಾಕಷ್ಟಾದವು. ಆದರೆ ಅವರು ತಮಗೆ ಸಿಕ್ಕಿರುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ವಿಫಲರಾದರು" ಎನ್ನುತ್ತಾರೆ ಬಿಕ್ಕಟ್ಟಿನ ಕುರಿತು ಟಿಎಸ್‌ಐಗೆ ಪ್ರತಿಕ್ರಿಯೆ ನೀಡಿದ 'ಫ್ರೀ ಯುನಿವರ್ಸಿಟಿ ಆಫ್ ಬ್ರಸಲ್ಸ್'ನ ಪ್ರಮುಖ ಬೆಲ್ಜಿಯಂ ತಜ್ಞ ಪಾಸ್ಕಲ್ ಡೆಲ್ವಿಟ್.

1830ರಲ್ಲಿ ಸ್ವತಂತ್ರ ರಾಷ್ಟ್ರವಾಗಿರುವ ಬೆಲ್ಜಿಯಂ ವ್ಯಾಪಕ ರಾಜಕೀಯ ಬಿಕ್ಕಟ್ಟುಗಳನ್ನು ಎದುರಿಸಿದೆ. ಡಚ್ ಭಾಷಿಕ ಫ್ಲೆಮಿಶ್‌ಗಳು ಮತ್ತು ಫ್ರೆಂಚ್ ಭಾಷಿಕ ವಾಲಾನ್‌ಗಳ ನಡುವಿನ ಸಂಘರ್ಷ ಇಂದು ನಿನ್ನೆಯದಲ್ಲ. ತಲಾ ಆದಾಯ ಮತ್ತು ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕೆ ಡಚ್ ಭಾಷಿಕರ ಕೊಡುಗೆ ಅಧಿಕ. ಫ್ರೆಂಚ್ ಭಾಷಿಕರಿಗಿಂತಲೂ ಹೆಚ್ಚು. ವಾರ್ಷಿಕ ಆದಾಯದ ಲೆಕ್ಕದಲ್ಲಿ ಫ್ಲೆಮಿಶ್‌ಗಳು ಹೆಚ್ಚು ಅಭಿವೃದ್ಧಿ ಹೊಂದಿರುವ ಸಮುದಾಯವಾಗಿದ್ದು, ವಾಲನ್‌ಗಳಿಗೆ ಆರ್ಥಿಕವಾಗಿ ಬೆಂಬಲ ನೀಡುತ್ತಿದ್ದಾರೆ. ಹೀಗಾಗಿ ಬಹಿರಂಗವಾಗಿಯೇ ಝೆಕೋಸ್ಲೋವೇಕಿಯಾದ ಆಧಾರದಲ್ಲಿ ವಿಭಜನೆಯ ಮಾತನಾಡುತ್ತಿದ್ದಾರೆ. ಇದು ಸಾಲದೆಂಬುದಕ್ಕೆ ಎರಡೂ ಪ್ರಾಂತಗಳಿಗೂ ತಮ್ಮದೇ ಆದ ಪ್ರತ್ಯೇಕ ರಾಜಕೀಯ ಪಕ್ಷಗಳಿದ್ದು ಸಾಮರಸ್ಯ ಕಾಪಾಡಿಕೊಳ್ಳುವಲ್ಲಿ ಸೋತಿವೆ. ಫ್ರೆಂಚ್ ಭಾಷಿಕ ತಂದೆಯ ಡಚ್ ಭಾಷಿಕ ಮಗನಾಗಿರುವುದರಿಂದ ಪ್ರಧಾನಿ ಅವರು ಪೂರ್ವಗ್ರಹಪೀಡಿತವಲ್ಲದ ಚಿಂತನೆಯಿಂದ ಸಮಸ್ಯೆ ಪರಿಹರಿಸುವ ಆಶಾವಾದವಿದೆ.

ಯುರೋಪ್‌ನ ಕೆಲವು ಸಣ್ಣಪುಟ್ಟ ರಾಷ್ಟ್ರಗಳ ಗಡಿರೇಖೆಯನ್ನು ಗುರುತಿಸುವುದೂ ಅಸಾಧ್ಯವೆನ್ನುವ ಪರಿಸ್ಥಿತಿ ಇದೆ. ಕಳೆದ ಶತಮಾನದಲ್ಲಿ ಈ ಪ್ರಾಂತಗಳಲ್ಲಿ ಕೆಲ ಮೂಲಭೂತ ಹಾಗೂ ಪ್ರಚಂಡ ಬದಲಾವಣೆ ಉಂಟಾಗಿದೆ. ಹಲವಾರು ಹೊಸ ರಾಷ್ಟ್ರಗಳು ಉದಯವಾಗಿವೆ. ಇನ್ನು ಕೆಲವು ಇತಿಹಾಸ ಪುಸ್ತಕಗಳಲ್ಲಿ ಮಾತ್ರ ಇವೆಯೇ ವಿನಾ ಭೌಗೋಳಿಕ ಭೂಪಟದಲ್ಲೆಲ್ಲೂ ಕಾಣಿಸುತ್ತಿಲ್ಲ. ಇತ್ತೀಚೆಗಿನ ಬೆಳವಣಿಗೆಗಳನ್ನು ಗಮನಿಸಿದಲ್ಲಿ ಬೆಲ್ಜಿಯಂ ಕೂಡ ಅದೇ ಪಟ್ಟಿಯಲ್ಲಿ ಹೋಗುವಂತೆ ಕಾಣುತ್ತದೆ.

ಟಿಎಸ್‌ಐ

ಸೌರಭ್ ಕುಮಾರ್ ಶಾಹಿ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .