|
ಭೌಗೋಳಿಕ
ಪ್ರದೇಶವೊಂದರ ವ್ಯಾಪ್ತಿ ನಿರ್ಧರಿಸುವ ಗಡಿ ರೇಖೆ ಅತಿ ಮುಖ್ಯವಾದದ್ದು. ಈ
ಗಡಿ ರೇಖೆಯ ಕಾರಣದಿಂದಲೇ ಇತಿಹಾಸದಲ್ಲಿ ಅದೆಷ್ಟೋ ಯುದ್ಧಗಳು ನಡೆದು
ಹೋಗಿವೆ. ತಮ್ಮ ಗಡಿ ಕಾರಣದಿಂದಾಗಿಯೇ ಭಾರತದ ಬಹಳಷ್ಟು ರಾಜ್ಯಗಳು ಇನ್ನೂ
ಮುಸುಕಿನ ಗುದ್ದಾಟದಲ್ಲಿ ತೊಡಗಿವೆ. ಆದರೆ ರಾಜಕೀಯ ಕ್ಷೇತ್ರದ ಗಡಿ
ಬದಲಾಯಿಸುವ ಕ್ರಮವೊಂದು ರಾಜಕಾರಣದಲ್ಲಿ ಇಷ್ಟೆಲ್ಲಾ ಅಲ್ಲೋಲ-ಕಲ್ಲೋಲ ಉಂಟು
ಮಾಡುತ್ತದೆ ಎಂದು ಪ್ರಾಯಶಃ ಯಾರೂ ಊಹಿಸಿರಲಿಕ್ಕಿಲ್ಲ. ಬಿಜೆಪಿ ನೇತೃತ್ವದ
ಎನ್‌ಡಿಎ ಸರ್ಕಾರವು 2002ರಲ್ಲಿ ಕ್ಷೇತ್ರ ಮರುವಿಂಗಡಣಾ ಆಯೋಗ ರಚಿಸಿದಾಗ,
ತನ್ನ ಈ ನಡೆಯೇ 6 ವರ್ಷಗಳ ನಂತರ ವಿವಿಧ ರಾಜಕೀಯ ಪಕ್ಷಗಳ ಹಣೆಬರಹವ
ಬದಲಾಯಿಸಿಬಿಡಲಿದೆ ಎಂದು ಖಂಡಿತ ನಿರೀಕ್ಷಿಸಿರಲಿಲ್ಲ. ಜುಲೈ 22ರಂದು
ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರಕ್ಕೆ ವಿಶ್ವಾಸಮತ ದೊರಕಿಸಿಕೊಟ್ಟ
ಏಕೈಕ ಪ್ರಮುಖ ಅಂಶವೆಂದರೆ ಅದು 'ಸಂಸದೀಯ ಕ್ಷೇತ್ರದ ಮರುವಿಂಗಡಣೆ'. ತಾವು
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕ್ಷೇತ್ರವೇ ಇಲ್ಲ ಎಂಬ
ವಾಸ್ತವ ಅರಿತ 12ಕ್ಕೂ ಹೆಚ್ಚು ಸಂಸದರು (ಯುಪಿಎಯೇತರ) ಸರ್ಕಾರದ ಪರ ಮತ
ಚಲಾಯಿಸಿದ್ದಾರೆ. ಕ್ಷೇತ್ರ ಮರುವಿಂಗಡಣೆಯ ನಂತರ ಅವರ ಕ್ಷೇತ್ರಗಳು
ಎಸ್/ಎಸ್‌ಟಿಗೆ ಮೀಸಲಾಗಿವೆ ಅಥವಾ ಇಲ್ಲಿಯವರೆಗೆ ಹಾಗೆ ಮೀಸಲಾಗಿದ್ದವು
ಸಾಮಾನ್ಯ ಕ್ಷೇತ್ರಗಳಾಗಿವೆ ಇಲ್ಲವೇ ಮತ್ತೊಂದು ಕ್ಷೇತ್ರದಲ್ಲಿ
ವಿಲೀನವಾಗಿವೆ. ಚುನಾವಣೆ ನಡೆಯಲು ಇನ್ನು ಆರೆಂಟು ತಿಂಗಳು ಬಾಕಿ
ಇರುವುದರಿಂದ ಈ ಸಂಸದರೆಲ್ಲಾ ತಮ್ಮ ನಿಷ್ಠೆ ಬದಲಾಯಿಸಲು ಮುಂದಾಗಿದ್ದಾರೆ. ಈ
ಬೆಳವಣಿಗೆಯಿಂದ ಹೆಚ್ಚು ಹೊಡೆತ ತಿಂದಿದ್ದು ಬಿಜೆಪಿಯೇ. ಯುಪಿಎ ಪರ ಮತ
ಚಲಾಯಿಸಿದ ಅಥವಾ ತಟಸ್ಥರಾದ ಬಿಜೆಪಿ ಸಂಸದರ ಸಂಖ್ಯೆ ಎಂಟು. ಹಾಗೆಯೇ ಶಿವ
ಸೇನಾ, ತೆಲುಗು ದೇಶಂ, ಜನತಾ ದಳ (ಎಸ್), ಸಮಾಜವಾದಿ ಪಕ್ಷ ಮತ್ತು ಬಿಜು
ಜನತಾ ದಳ ಪಕ್ಷಗಳಿಗೂ ಕ್ಷೇತ್ರ ಮರುವಿಂಗಡಣೆಯ ಬಿಸಿ ತಗುಲಿದೆ.
ಮಹಾರಾಷ್ಟ್ರದ ಯವಟ್ಮಲ್ ಕ್ಷೇತ್ರದ ಬಿಜೆಪಿ ಸಂಸದ ಹರಿಸಿನ್ಹ ನಸರು ರಾಠೋಡ್
ಅವರು ವಿಶ್ವಾಸ ಗೊತ್ತುವಳಿ ವೇಳೆ ತಟಸ್ಥರಾದರು. ಏಕೆಂದರೆ ಅವರ ಕ್ಷೇತ್ರ ಈಗ
ಅಳಿಸಿಹೋಗಿದೆ; ಅಂದರೆ ಅದು ಪಕ್ಕದ ವಶೀಮ್ ಕ್ಷೇತ್ರದಲ್ಲಿ
ವಿಲೀನವಾಗಿಬಿಟ್ಟಿದೆ. ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವವರು
ಶಿವಸೇನೆಯ ಸಂಸದ ಭಾವ್ನಾ ಗವಳಿ.
ಹಾಗೆಯೇ ಲೋಕಸಭೆಯ ಸಭಾಪತಿ ಸೋಮನಾಥ ಚಟರ್ಜಿ
ಅವರು ಸಿಪಿಎಂ ಆದೇಶಕ್ಕೂ ಸೊಪ್ಪು ಹಾಕದೆ ತಮ್ಮ ಸ್ಥಾನದಲ್ಲಿ ಮುಂದುವರಿಯುವ
ಧೈರ್ಯ ಪ್ರದರ್ಶಿಸುವಲ್ಲೂ ಕ್ಷೇತ್ರ ಮರುವಿಂಗಡಣೆಯ ಪಾಲು ಇದೆ. ಪಶ್ಚಿಮ
ಬಂಗಾಳದಲ್ಲಿನ ಅವರ ಕ್ಷೇತ್ರ ಬೋಲ್‌ಪುರ್ ಈಗ ಎಸ್‌ಸಿಗೆ ಮೀಸಲಾಗಿದೆ.
ಹೀಗಾಗಿ ಚಟರ್ಜಿ ಅವರು ಲೋಕಸಭೆಗೆ ಮತ್ತೆ ಪ್ರವೇಶಿಸುವುದು ಅನುಮಾನ.
ಸಮಾಜವಾದಿ ಪಕ್ಷದ ಬಹುತೇಕ ಸಂಸದರು ಬಿಎಸ್‌ಪಿಯತ್ತ ಒಲವು ತೋರಲೂ ಇದೇ
ಪ್ರಮುಖ ಕಾರಣ. ಸಮಾಜವಾದಿ ಪಕ್ಷದ ಬಘೇಲ್ ಅವರು ಉತ್ತರ ಪ್ರದೇಶದ ಜಲ್ಸಾರ್
ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಆದರೆ ಕ್ಷೇತ್ರ ಮರುವಿಂಗಡಣೆಯ
ನಂತರ ಜಲ್ಸಾರ್ ಕ್ಷೇತ್ರವು ಫಿರೋಜಾಬಾದ್ ಕ್ಷೇತ್ರದಲ್ಲಿ
ವಿಲೀನವಾಗಿಬಿಟ್ಟಿದೆ. ಅಕ್ಕಪಕ್ಕದ ಕ್ಷೇತ್ರಗಳನ್ನು ಕೂಡಾ ಸಮಾಜವಾದಿ ಪಕ್ಷದ
ಸಂಸದರೇ ಪ್ರತಿನಿಧಿಸುತ್ತಿರುವುದರಿಂದ ತಾವು ಮುಂದಿನ ಚುನಾವಣೆಯಲ್ಲಿ ಪಕ್ಷದ
ಟಿಕೆಟ್ ಪಡೆಯುವ ಬಗ್ಗೆ ಬಘೇಲ್ ಅವರಿಗೆ ಯಾವುದೇ ಭರವಸೆ ಇಲ್ಲ.
ಬುಂದೇಲ್‌ಖಂಡದ ಹಮೀರ್‌ಪುರ ಕ್ಷೇತ್ರದ ಸಂಸದ ರಾಜನಾರಾಯಣ ಬುಧೌಲಿಯಾ ಅವರದೂ
ಇದೇ ಕತೆ. ಪಕ್ಷ ನಿಷ್ಠ ಬದಲಾಯಿಸುವ ಕಸರತ್ತು ವಿಶ್ವಾಸ ಗೊತ್ತುವಳಿಯೊಂದಿಗೇ
ಮುಕ್ತಾಯವಾಗುವ ಸಾಧ್ಯತೆಯೂ ಕಡಿಮೆ. ಪಕ್ಷದ ಟಿಕೆಟ್ ಕೊಡುವ ಆಮಿಷದಿಂದ
ಬುಧೌಲಿಯಾ, ಬಘೇಲ್, ಮುನವ್ವರ್ ಹಸನ್ ಮುಂತಾದ ಸಂಸದರನ್ನು ಬಿಎಸ್‌ಪಿ ನಾಯಕಿ
ಮಾಯಾವತಿ ಅವರು ಸೆಳೆಯುತ್ತಿದ್ದಾರೆ. ಆದರೆ ಅದೇನೂ ಅಷ್ಟು ಸರಳವಲ್ಲ.
ಏಕೆಂದರೆ ಉತ್ತರ ಪ್ರದೇಶದ ಬಹುತೇಕ ಎಲ್ಲಾ ಕ್ಷೇತ್ರಗಳಿಗೂ ಬಿಎಸ್‌ಪಿ
ಈಗಾಗಲೇ ತನ್ನ ಅಭ್ಯರ್ಥಿಗಳನ್ನು ಘೋಷಿಸಿಬಿಟ್ಟಿದೆ. ಹೀಗಾಗಿ ಬುಧೌಲಿಯಾ
ಅವರು ಟಿಕೆಟ್‌ಗಾಗಿ ಬಿಎಸ್‌ಪಿ ಅಭ್ಯರ್ಥಿ ವಿಜಯ್ ಬಹದ್ದೂರ್ ಸಿಂಗ್ ಅವರಿಂದ
ತೀವ್ರ ಸ್ಪರ್ಧೆ ಎದುರಿಸಬಹುದು. ವಿಜಯ್ ಬಹದ್ದೂರ್ ಕಳೆದ ಆರು ತಿಂಗಳಿಂದಲೇ
ಹಮೀರ್‌ಪುರದಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಇನ್ನು ಬಘೇಲ್ ಅವರು
ಫಿರೋಜಾಬಾದ್ ಮತ್ತು ಎಟಾಹ್‌ನಿಂದ ಸ್ಪರ್ಧಿಸಲು ಬಯಸಿದ್ದಾರೆ. ಆದರೆ ಅದೂ
ಕಷ್ಟ. ಈಗಾಗಲೇ ಮಾಯಾವತಿ ಅವರು ಈ ಎರಡೂ ಕ್ಷೇತ್ರಗಳಿಗೆ ಕ್ರಮವಾಗಿ
ರಾಮ್‌ಗೋಪಾಲ್ ವರ್ಮ ಮತ್ತು ಶ್ಯಾಮ್ ಸಿಂಗ್ ಶಾಕ್ಯ ಅವರನ್ನು
ಅಭ್ಯರ್ಥಿಗಳಾಗಿ ಘೋಷಣೆ ಮಾಡಿದ್ದಾರೆ.
ಒರಿಸ್ಸಾದ
ಅಸ್ಕಾ ಕ್ಷೇತ್ರದ ಸಂಸದ ಹರಿಹರ್ ಸ್ವೇನ್ ಅವರು ಕೂಡಾ ವಿಶ್ವಾಸ ಗೊತ್ತುವಳಿ
ಸಂದರ್ಭದಲ್ಲಿ ತಟಸ್ಥರಾಗುವ ಮೂಲಕ ತಮ್ಮ ಪಕ್ಷ ಬಿಜೆಡಿಗೆ ದಿಗ್ಭ್ರಮೆ ಉಂಟು
ಮಾಡಿದ್ದಾರೆ. ಅದೇ ಪಕ್ಷದ ಅರ್ಚನಾ ನಾಯಕ್ ಅವರೂ ತಮ್ಮ ಕ್ಷೇತ್ರ
ಕಳೆದುಕೊಳ್ಳಲಿದ್ದಾರೆ. ಜೈಪುರ್ ಸಂಸದ ಮೋಹನ್ ಜೇನಾ ಅವರದೂ ಇದೇ ಕಥೆ.
ಒರಿಸ್ಸಾದ ಫುಲಬಾನಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಮಿತ್ರಪಕ್ಷ ಬಿಜೆಪಿ
ಉತ್ಸಾಹ ತೋರುತ್ತಿರುವುದರಿಂದ ಆ ಕ್ಷೇತ್ರದ ಹಾಲಿ ಸಂಸದ ಬಿಜೆಡಿಯ ಸುಗ್ರೀಬ್
ಸಿಂಗ್ ಅವರಲ್ಲಿ ತಳಮಳ ಶುರುವಾಗಿದೆ.
ವಿಶ್ವಾಸ ಗೊತ್ತುವಳಿಯ ಬೆಳವಣಿಗೆಯಿಂದ ಪಕ್ಷದ
ಆಂತರಿಕ ಪ್ರಜಾಪ್ರಭುತ್ವಕ್ಕೆ ಇನ್ನಷ್ಟು ಅವಕಾಶ ಕೊಡಬೇಕಾದ ಅಗತ್ಯತೆಯನ್ನೂ
ಸಾರಿ ಹೇಳಿದಂತಾಗಿದೆ. ಪಕ್ಷದಲ್ಲಿ ನಿರ್ಲಕ್ಷ್ಯಕ್ಕೊಳಗಾದ, ಮೂಲೆಗೆ
ತಳ್ಳಲ್ಪಟ್ಟ, ಅತೃಪ್ತ ಸಂಸದರೆಲ್ಲಾ ಪಕ್ಷದ ನಾಯಕರಿಗೆ ಮುಖಭಂಗ ಉಂಟು
ಮಾಡಲು, ಆ ಮೂಲಕ ಸೇಡು ತೀರಿಸಿಕೊಳ್ಳಲು ಪ್ರಸಕ್ತ ಸಂದರ್ಭವನ್ನು ತುಂಬಾ
ಚಾಕಚಕ್ಯತೆಯಿಂದ ಬಳಸಿಕೊಂಡರು. ಮಹಾರಾಷ್ಟ್ರದ ಪರ್ಭಾನಿ ಕ್ಷೇತ್ರವನ್ನು
ಪ್ರತಿನಿಧಿಸುತ್ತಿರುವ ಶಿವಸೇನೆಯ ತುಕಾರಾಮ್ ರೆಂಗೆ ಪಾಟೀಲ್ ಮತ್ತು ಪಕ್ಷದ
ನಾಯಕ ಉದ್ಧವ್ ಠಾಕ್ರೆ ನಡುವ ಬಹುದಿನಗಳಿಂದ ವೈಮನಸ್ಯ ಇತ್ತು. ವಿಶ್ವಾಸ
ಗೊತ್ತುವಳಿಗೆ ನಾಲ್ಕು ದಿನ ಮುನ್ನ ಮುಂಬೈನಲ್ಲಿ ಪಕ್ಷದ ಸಂಸದೀಯ ಸಭೆ
ನಡೆದಿತ್ತು. ಆದರೆ ವಿಶ್ವಾಸ ಗೊತ್ತುವಳಿಯ ಕೊನೆಯ ಕ್ಷಣದವರೆಗೆ ಪಾಟೀಲ್
ಗುಟ್ಟು ಬಿಟ್ಟುಕೊಡದೇ ಉಳಿದುಬಿಟ್ಟರು.
ಮುಂಬರುವ ದಿನಗಳಲ್ಲಿ ಪಕ್ಷ ನಿಷ್ಠೆ
ಬದಲಾಯಿಸುವ ಪ್ರಕ್ರಿಯೆ ರಾಜಕೀಯ ವಲಯದಲ್ಲಿ ಇನ್ನಷ್ಟು ತೀವ್ರವಾಗಲಿದೆ.
ಪ್ರಕಾಶ್ ಕಾರಟ್ ಅವರ ತೃತೀಯ ರಂಗದ ಕನಸನ್ನು ನನಸು ಮಾಡುವಂತೆ ಎಡರಂಗವು
ಟಿಡಿಪಿ ಮತ್ತು ಬಿಎಸ್‌ಪಿ ಜೊತೆ ಕೈಜೋಡಿಸಿದೆ. ಮನಮೋಹನ್ ಸಿಂಗ್
ಸರ್ಕಾರಕ್ಕೆ ಬಹುಮತ ಸಿಕ್ಕಿದ 12 ಗಂಟೆ ಅವಧಿಯೊಳಗೇ ಮಾಯಾವತಿ ನಿವಾಸದಲ್ಲಿ
ಈ ಪಕ್ಷಗಳು ಜಂಟಿ ಸಭೆ ನಡೆಸಿವೆ. ಮುಂದಿನ ಲೋಕಸಭೆಯಲ್ಲಿ ಮೈತ್ರಿಕೂಟ
ರಾಜಕಾರಣವೇ ಪ್ರಮುಖ ಪಾತ್ರ ವಹಿಸಲಿದ್ದು -ಎನ್‌ಡಿಎ, ಯುಪಿಎ ಮತ್ತು
ಯುಎನ್‌ಪಿಎಗಳು ತಮ್ಮ ತಮ್ಮ ಮೈತ್ರಿಕೂಟಗಳನ್ನು ಸದೃಢಗೊಳಿಸಲು ಮುಂದಾಗಲಿವೆ.
ಪ್ರಸಕ್ತ ರಾಜಕೀಯ ಸನ್ನಿವೇಶ ಸಣ್ಣ ಸಣ್ಣ ಪಕ್ಷಗಳಿಗೆ ಅಷ್ಟೇನೂ
ಆಶಾದಾಯಕವಾಗಿಲ್ಲ. ತಮಿಳುನಾಡು ಮತ್ತು ಆಂಧ್ರಪ್ರದೇಶಗಳು ಮಾತ್ರ ಇದಕ್ಕೆ
ಹೊರತಾಗಿರಬಹುದು. ಅಲ್ಲಿ ಸಿನಿಮಾ ನಟರುಗಳ ಹೊಸ ರಾಜಕೀಯ ಪಕ್ಷಗಳು ಒಂದಿಷ್ಟು
ಗಮನ ಸೆಳೆಯುತ್ತಿವೆ. ಒಟ್ಟಾರೆಯಾಗಿ ಮುಂದಿನ ಚುನಾವಣೆಯಲ್ಲಿ ಎರಡು ಪ್ರಮುಖ
ಪಕ್ಷಗಳ ನಡುವೆ ಇಲ್ಲವೇ ಪ್ರಮುಖ ಮೈತ್ರಿಕೂಟಗಳ ನಡುವೆ ಸ್ಪರ್ಧೆ ನಡೆಯಲಿದೆ.
ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ವಿರುದ್ಧ ಎಸ್‌ಪಿ ಮತ್ತು ಕಾಂಗ್ರೆಸ್
ಜಂಟಿಯಾಗಿ ಸ್ಪರ್ಧೆ ಒಡ್ಡಲಿರುವುದರಿಂದ ಅಲ್ಲಿ ಬಿಜೆಪಿಯ ಪಾತ್ರ ಮತ್ತಷ್ಟು
ಕಿರಿದಾಗಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮತಗಳನ್ನೆಲ್ಲಾ
ಬಿಎಸ್‌ಪಿಯೇ ಬಾಚಿಕೊಂಡಿತ್ತು. ಎಸ್‌ಪಿ ತನ್ನ ಪಾಲಿನ ಮತಗಳನ್ನಷ್ಟೇ
ಉಳಿಸಿಕೊಂಡಿತ್ತು. ಬಿಹಾರದಲ್ಲಿ ಕೂಡಾ ಬಿಜೆಪಿ-ಜೆಡಿ(ಯು) ಮೈತ್ರಿಕೂಟದ
ವಿರುದ್ಧ ಒಂದಿಷ್ಟು ಸ್ಥಾನಗಳನ್ನು ಗೆಲ್ಲಬೇಕಾದಲ್ಲಿ ಯುಪಿಎ
ಮಿತ್ರಪಕ್ಷಗಳಾದ ಕಾಂಗ್ರೆಸ್, ಆರ್‌ಎಲ್‌ಡಿ ಮತ್ತು ಎಲ್‌ಜೆಪಿ ಜಂಟಿ ಯತ್ನ
ನಡೆಸಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಲ್‌ಜೆಪಿ ಏಕಾಂಗಿಯಾಗೇ
ಸ್ಪರ್ಧಿಸಿತು; ಶೇ. ೮ರಷ್ಟು ಮತ ಗಳಿಸಿದರೂ ನಿತೀಶ್ ಕುಮಾರ್ ಅವರಿಗೆ
ಮುಖ್ಯಮಂತ್ರಿ ಗಾದಿ ಬಿಟ್ಟುಕೊಡಬೇಕಾಯಿತು. ವಿಶ್ವಾಸ ಗೊತ್ತುವಳಿಯಲ್ಲಿ
ನಿರ್ಣಾಯಕ ಪಾತ್ರ ವಹಿಸಿದ ಸಣ್ಣ ಪಕ್ಷಗಳು -ಯುಪಿಎ ಮತ್ತು ಎನ್‌ಡಿಎ- ಎರಡೂ
ಮೈತ್ರಿಕೂಟಗಳಲ್ಲಿ ಹೆಚ್ಚಿನ ಪ್ರತಿಫಲವನ್ನೇ ಕೇಳಬಹುದು. ಒಟ್ಟಾರೆಯಾಗಿ
ಮೂರೂ ಮೈತ್ರಿಕೂಟಗಳು ಹೊಸ ಮಿತ್ರ ಪಕ್ಷಗಳನ್ನು ಒಲಿಸಿಕೊಳ್ಳುವತ್ತ
ಗಂಭೀರವಾಗಿ ಯತ್ನಿಸುತ್ತಿವೆ. ಇನ್ನು ಎಐಎಡಿಎಂಕೆ ಪಕ್ಷವು ಎನ್‌ಡಿಎ
ಕೂಟದತ್ತ ವಾಲಬಹುದು. ಎನ್‌ಡಿಎ ಕೂಟವು ಅಸ್ಸಾಂನಲ್ಲಿ ಎಜಿಪಿ ಸೇರಿದಂತೆ
ಈಶಾನ್ಯ ರಾಜ್ಯದ ಕೆಲವು ಸಣ್ಣ ಪಕ್ಷಗಳು, ಜಾರ್ಖಂಡ್‌ನಲ್ಲಿ ಬಾಬು ಲಾಲ್
ಮರಾಂಡಿ ಪಕ್ಷ ಮತ್ತು ಹರಿಯಾಣದಲ್ಲಿ ಭಜನ್‌ಲಾಲ್ ಅಥವಾ ಓಂ ಪ್ರಕಾಶ್ ಚೌಟಾಲ
ಮುಂತಾದ ಪಕ್ಷಗಳತ್ತ ಮೈತ್ರಿ ಹಸ್ತ ಚಾಚುತ್ತಿದೆ. ಆದರೂ ಸಣ್ಣ ಪಕ್ಷಗಳು
ಯುಎನ್‌ಪಿಎಯತ್ತಲೇ ಹೆಚ್ಚು ಒಲವು ತೋರುತ್ತಿವೆ. ಏಕೆಂದರೆ ಈ ಒಕ್ಕೂಟ
ಸ್ವಲ್ಪ ಹೆಚ್ಚು ಸ್ಥಾನಗಳನ್ನು ಗಳಿಸಿದರೆ ಬೆಂಬಲ ನೀಡುವಂತೆ ಎನ್‌ಡಿಎ ಅಥವಾ
ಯುಪಿಎ ಮೇಲೆ ಒತ್ತಡ ಹೇರಿ ಅಧಿಕಾರ ಹಿಡಿಯಬಹುದು. ಆದರೆ ಕನಿಷ್ಠ 20
ರಾಜ್ಯಗಳಲ್ಲಾದರೂ ಯುಪಿಎ ಮತ್ತು ಎನ್‌ಡಿಎ ನಡುವೆ ನೇರ ಸ್ಪರ್ಧೆ ಇದೆ.
ವಿಶ್ವಾಸ ಮತದ ಅಗ್ನಿಪರೀಕ್ಷೆಯಲ್ಲಿ ಜಯಗಳಿಸಿದ ಕೇಂದ್ರ ಸರ್ಕಾರ ಇನ್ನೂ
ಸಾಕಷ್ಟು ಕೆಲಸ ಮಾಡಬೇಕಿದೆ: ಆರ್ಥಿಕ ಸುಧಾರಣಾ ಪ್ರಕ್ರಿಯೆ
ಪೂರ್ಣಗೊಳಿಸುವುದು, ಜೆಎಂಎಂ ನಾಯಕ ಶಿಬು ಸೊರೆನ್ ಅವರನ್ನು ಸಂಪುಟಕ್ಕೆ
ಸೇರಿಸಿಕೊಳ್ಳುವ ಮೂಲಕ ಸಚಿವ ಸಂಪುಟ ವಿಸ್ತರಣೆ, ವಿಶ್ವಾಸ ಮತ ಗೆಲ್ಲಲು
ಸಂಸದರಿಗೆ ಹಣ ನೀಡಿದ ಆರೋಪದಿಂದ ಮುಕ್ತವಾಗುವುದು... ಇತ್ಯಾದಿ.
ಇತ್ತ ಬಿಎಸ್‌ಪಿ ನಾಯಕಿ ಮಾಯಾವತಿ ಅವರು
ರಾಜಕೀಯ ಕದನಕ್ಕೂ ಮುನ್ನ ಕಾನೂನು ಸಮರದಲ್ಲಿ ಜಯಗಳಿಸಬೇಕಿದೆ. ಆದಾಯ ಮೀರಿದ
ಆಸ್ತಿ ಪ್ರಕರಣದಲ್ಲಿ ಮಾಯಾವತಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಸಿಬಿಐ
ಮಾಡಿರುವ ಮನವಿಗೆ ಸದ್ಯವೇ ಸುಪ್ರೀಂ ಕೋರ್ಟ್‌ನಿಂದ ಆದೇಶ ಹೊರಬೀಳಲಿದೆ.
ಭ್ರಷ್ಟಾಚಾರ ಆರೋಪ ಪಟ್ಟಿ ಸಲ್ಲಿಸಲು ಸಿಬಿಐಗೆ ಸುಪ್ರೀಂ ಕೋರ್ಟ್ ಅನುಮತಿ
ನೀಡಿದಲ್ಲಿ ಮಾಯಾವತಿ ಅವರು ಅಧಿಕಾರದಲ್ಲಿದ್ದಾಗಲೇ ಜೈಲು ಸೇರಿದ ಮೂರನೇ
ಮುಖ್ಯಮಂತ್ರಿ ಎನಿಸಿಕೊಳ್ಳಲಿದ್ದಾರೆ. ಈ ಹಿಂದೆ ಜೆ. ಜಯಲಲಿತಾ ಮತ್ತು ಲಾಲೂ
ಪ್ರಸಾದ್ ಯಾದವ್ ಅವರು ಈ ಅಪಖ್ಯಾತಿಗೆ ಒಳಗಾಗಿದ್ದರು.
ಯುಪಿಎ ಸರ್ಕಾರ ಉರುಳದೇ ಇದ್ದುದರ
ಪರಿಣಾಮವಾಗಿ ನಿಗದಿತ ಸಮಯಕ್ಕೇ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ
ಮಾಯಾವತಿ ಅವರಿಗೆ ಸಂಬಂಧಪಟ್ಟ ಈ ಬೆಳವಣಿಗೆ ಪ್ರಮುಖ ತಿರುವಾಗಿ
ಪರಿಣಮಿಸಲಿದೆ.
ಟಿಎಸ್‌ಐ
|