ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ವಿಶೇಷ ವರದಿ
ಅವಕಾಶವಾದಿ ರಾಜಕಾರಣದ ವಿರಾಟ್ ದರ್ಶನ
 

ಒಂದೆಡೆ ಅಧಿಕಾರ ಉಳಿಸಿಕೊಳ್ಳಲಿಕ್ಕಾಗಿ ವಿಶ್ವಾಸಮತ ಪಡೆಯಲು ಯುಪಿಎ ಹರಸಾಹಸಪಡುತ್ತಿದ್ದರೆ ಮತ್ತೊಂದೆಡೆ ಯುಪಿಎ ಸರ್ಕಾರ ಉರುಳಿಸಲು ರಾಜಕೀಯದ ವಿರುದ್ಧ ಧ್ರುವಗಳೆಲ್ಲಾ ಒಂದಾಗುತ್ತಿವೆ ಎನ್ನುತ್ತಾರೆ ರಂಜಿತ್ ಭೂಷಣ್

  

ಈಗ ನಡೆಯುತ್ತಿರುವ ರಾಜಕೀಯ ಪಕ್ಷಗಳ ಹೊಸ ಹೊಂದಾಣಿಕೆ ಲೆಕ್ಕಾಚಾರಗಳು ಒಂದು ವಿಚಾರವನ್ನಂತೂ ಸ್ಪಷ್ಟಪಡಿಸುತ್ತವೆ; ಎರಡು ದಶಕಗಳ ನಂತರ ದೇಶದ ರಾಜಕೀಯದಲ್ಲಿ ಮತ್ತೊಮ್ಮೆ ಪಕ್ಷಗಳ ನಡುವಿನ ಸೈದ್ಧಾಂತಿಕ ಭಿನ್ನತೆ ಎಂಬುದು ಅಕ್ಷರಶಃ ಕರಗಿ ಹೋಗುತ್ತಿದೆ. 1990ರ ಮಂದಿರ-ಮಸೀದಿ ಸಂಘರ್ಷದ ರಕ್ತಸಿಕ್ತ ದಿನಗಳ ನಂತರ ಹಾವು ಮುಂಗಸಿಯಂತಾಡುತ್ತಿದ್ದ ಸಿಪಿಎಂ ಮತ್ತು ಬಿಜೆಪಿ ಪಕ್ಷಗಳು ಇದೀಗ ಜುಲೈ 22ರಂದು, ಯುಪಿಎ ವಿರುದ್ಧ ಒಮ್ಮತದಿಂದ ಮತ ಚಲಾಯಿಸಲು ತೀರ್ಮಾನಿಸಿದಂತಿದೆ. ಅದಕ್ಕೆ ವಿರುದ್ಧವಾಗಿ 1990ರ ನಂತರ ಸೈದ್ಧಾಂತಿಕವಾಗಿ ತುಂಬಾ ಆಪ್ತರಾಗಿದ್ದ ಎಸ್‌ಪಿಯ ಮುಲಾಯಂ ಸಿಂಗ್ ಯಾದವ್ ಮತ್ತು ಎಡ ಪಕ್ಷಗಳ ನಾಯಕರು ಈಗ ಪರಸ್ಪರ ಕತ್ತಿ ಮಸೆಯುತ್ತಿದ್ದಾರೆ. ಹಠಾತ್ ರಾಜಕೀಯ ಬೆಳವಣಿಗೆಯೊಂದರಲ್ಲಿ ಎಡರಂಗ ಮುಲಾಯಂ ಸಿಂಗ್‌ರ ರಾಜಕೀಯ ಕಡುವೈರಿ ಬಿಎಸ್‌ಪಿಯ ಮಾಯಾವತಿಯವರ ಕೈಕುಲುಕುವುದರೊಂದಿಗೆ ರಾಜಕೀಯದ ಮುಂದಿನ ನಡೆಯ ಕುರಿತು ರಾಜಕೀಯ ಪಂಡಿತರು, ವಿಶ್ಲೇಷಣೆಗಾರರ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದ್ದಾರೆ.

ಕಾಂಗ್ರೆಸ್ ಈಗ ಬಹುಮತ ಸಾಬೀತುಪಡಿಸಲು ಬೇಕಾಗುವ ಸಂಖ್ಯಾಬಲವನ್ನು ಸಂಪಾದಿಸುವುದಕ್ಕೆ ಕ್ರಮಿಸಬೇಕಾದ ಹಾದಿಯೇನೂ ಸುಗಮವಾಗಿಲ್ಲ. ಕಾಂಗ್ರೆಸ್‌ನಲ್ಲಿರುವ ಯಾರೊಬ್ಬರೂ 'ಪ್ರಜಾಪ್ರಭುತ್ವದ ಮುಂದುವರಿಕೆ'ಯ ಹೆಸರಲ್ಲಿ 'ವಿಶ್ವಾಸಮತ' ಯಾಚನೆಗೆ ಮುನ್ನ ನಡೆಯಲಿರುವ ಕುದುರೆ ವ್ಯಾಪಾರದಲ್ಲಿ ಯಾವ ಪ್ರಮಾಣದ ಹಣ ಕೈ ಬದಲಾಯಿಸುತ್ತ್ತಿದೆ ಎಂಬ ಊಹೆ ಕೂಡ ಇಲ್ಲ.

ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಕಾಂಗ್ರೆಸ್‌ಗೆ ಮ್ಯಾಜಿಕ್ ಸಂಖ್ಯೆಯನ್ನು ಗಳಿಸುವುದು ಹೇಗೆ ಎಂಬ ಚಿಂತೆ ಇಲ್ಲ ಎಂದಿದ್ದಾರೆ. ಆದರೆ, ಬಹುಮತ ಸಾಬೀತಿಗೆ ಸಂಬಂಧಿಸಿದ ಬಿಸಿ- ಬಿಸಿ ಚರ್ಚೆಗಳಲ್ಲಿ ಸದ್ಯದ ಅತಿ ದೊಡ್ಡ ಸವಾಲು 'ಹಣದುಬ್ಬರ' ಜನರ ಮನಸ್ಸಿನಿಂದ ದೂರ ಸರಿಯುತ್ತದೆ ಎಂಬುದು ಸಿಂಗ್‌ಜೀಯವರ ಚಿಂತೆಯನ್ನು ದೂರಮಾಡಿರುವ ಸಂಗತಿ ಎಂಬುದು ಗಮನಾರ್ಹ. ಹಾಗಾಗೇ, ತೀರಾ ಅಂತಹ ಅಗತ್ಯ ಬಿದ್ದಾಗ ಮಾತ್ರ ಸಂಖ್ಯಾಬಲದ ಬಗ್ಗೆ ತಲೆಕೆಡಿಸಿಕೊಳ್ಳುವುದಾಗಿ ಹೇಳಿದ್ದಾರೆ.

ವಿಶ್ವಾಸಮತ ಕೋರಲು ಇನ್ನೂ ಒಂದು ವಾರ ಸಮಯವಿರುವಂತೆಯೇ ರಾಹುಲ್ ಗಾಂಧಿ "ಒಂದು ವೇಳೆ ನಾವು ಬಹುಮತವನ್ನು ಸಾಬೀತುಪಡಿಸಲು ಸಾಧ್ಯವಾಗದೇ ಹೋದರೂ, ಅಣು ಒಪ್ಪಂದ ಕುರಿತ ನಮ್ಮ ಈಗಿನ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗದು" ಎಂದು ಸಮರ್ಥಿಸಿಕೊಂಡಿದ್ದಾರೆ. ಆ ಹೇಳಿಕೆ ಕಾಂಗ್ರೆಸ್ಸಿಗರನ್ನು ಗೊಂದಲಕ್ಕೆ ನೂಕಿದ್ದು, ಇಂತಹ ಸೂಕ್ಷ್ಮ ಸನ್ನಿವೇಶಗಳಲ್ಲಿ ಒಂದು ಹೇಳಿಕೆಗೆ ಅದರ ಎರಡರಷ್ಟು ಶಕ್ತಿಯಿರುತ್ತದೆ ಎಂಬುದನ್ನು ಅವರು ನಿರ್ಲಕ್ಷಿಸಲಾರರು. ಏಕೆಂದರೆ, ರಾಹುಲ್ ನೀಡಿರುವ ಈ ಹೇಳಿಕೆ ಜುಲೈ 22ರಂದು ನಡೆಯುವ ಘಟನೆಗಳು ಕಾಂಗ್ರೆಸ್‌ನ ಪರವಾಗಿರುವುದಿಲ್ಲ ಎಂಬುದರ ಸುಳಿವು ನೀಡುತ್ತಿದೆ ಎಂಬುದು ಅವರ ಲೆಕ್ಕಾಚಾರ.

ಒಟ್ಟಾರೆ, ಇತ್ತೀಚಿನ ಈ ರಾಜಕೀಯ ಬೆಳವಣಿಗೆಗಳು ಕಾಂಗ್ರೆಸ್ ಘಟಾನುಘಟಿಗಳ ನಿದ್ದೆಗೆಡಿಸಿವೆ. 'ಟಿಎಸ್‌ಐ'ನೊಂದಿಗೆ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ವಯಲಾರ್ ರವಿ "ಕೇಸರಿ ಪಡೆಯೊಂದಿಗಿನ ತನ್ನ ಹೊಂದಾಣಿಕೆಯಿಂದಾಗಿ ಮುಂದಾಗಬಹುದಾದ ಪರಿಣಾಮದ ಕುರಿತು ಎಡಪಕ್ಷಗಳು ಗಂಭೀರವಾಗಿ ಯೋಚಿಸಬೇಕು. ಎಡರಂಗ ಈಗ ತಳೆದಿರುವ ಕಾಂಗ್ರೆಸ್ ವಿರೋಧಿ ನಿಲುವನ್ನು ನೋಡಿದರೆ ಅದು ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಬಿಜೆಪಿಯೊಂದಿಗೆ ಕೈಜೋಡಿಸುವುದು ನನಗೆ ಖಾತರಿಯಾಗಿದೆ. ಇದು ಮತ್ತೊಂದು ಐತಿಹಾಸಿಕ ಪ್ರಮಾದವಾಗಲಿದೆ" ಎಂದಿದ್ದಾರೆ.

ಹಾಗೇ ಈ ಹೊಂದಾಣಿಕೆಗಳು ರಾಷ್ಟ್ರಪತಿ ಭವನದ ನಿದ್ದೆಗೆಡಿಸುವ ಮಟ್ಟಿಗೆ ಶಕ್ತಿಶಾಲಿಯಾಗಿವೆ. ಜೊತೆಗೆ ವಿಶ್ವಾಸಮತದ ಬಳಿಕ ದಿಢೀರನೆ ಮತ್ತೊಂದು ಹೊಸ ರಾಜಕೀಯ ರಂಗ ಅಸ್ತಿತ್ವಕ್ಕೆ ಬರಲಿದ್ದು, ಆ ಸಾಧ್ಯತೆಗೆ ಪ್ರಕಾಶ್ ಕಾರಟ್ ಮತ್ತು ಮಾಯಾವತಿ ಅವರ ಇತ್ತೀಚಿನ ಭೇಟಿ ಹೊಸ ತಿರುವು ನೀಡಿದೆ. ಸಿಪಿಎಂ ಮತ್ತು ಬಿಎಸ್‌ಪಿ ಕಾಂಗ್ರೆಸ್ ವಿರುದ್ಧ ವಿಶ್ವಾಸ ಮತ ಚಲಾಯಿಸಲಿವೆ ಎಂದು ಹೇಳುವಾಗ ಕಾರಟ್ ಮಾತಿನಲ್ಲಿ ಭವಿಷ್ಯದ ರಾಜಕೀಯ ಲೆಕ್ಕಾಚಾರಗಳ ಸುಳಿವೇನೂ ಇರಲಿಲ್ಲ. ಆದರೆ, ಮಾಯಾ ಮತ್ತು ಕಾರಟ್ ನಡುವಿನ ಮಾತುಕತೆ ವೇಳೆ ಹಾಜರಿದ್ದ ಕೆಲವರ ಪ್ರಕಾರ ಹಲವು ಭವಿಷ್ಯದ ಲೆಕ್ಕಾಚಾರಗಳು ಇತ್ಯರ್ಥಗೊಂಡಿವೆ. ಎರಡೂ ಪಕ್ಷದವರು ಸಮಾನ ಮನಸ್ಥಿತಿಯನ್ನು ಹೊಂದಿದ್ದರೂ ಮುಂದಿನ ಚುನಾವಣೆಗಳ ಕುರಿತು ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಸಂಸದರ ಒಂದು ಗುಂಪು ಮುಂದಿನ ಲೋಕಸಭೆಯಲ್ಲಿ ಪ್ರಭಾವಶಾಲಿಯಾಗಿ ರೂಪುಗೊಳ್ಳಬಹುದು. ಮುಂದಿನದು ಯಾರಿಗೆ ಗೊತ್ತು?

ಬಿಜೆಪಿ ಕೂಡಾ ತನ್ನ ಗತಿಯಲ್ಲಿ ಬದಲಾವಣೆ ತಂದಿದೆ. ಎಲ್.ಕೆ.ಅಡ್ವಾಣಿ ಎಡಪಕ್ಷಗಳಿಗೆ "ಯುಪಿಎ ಸರ್ಕಾರವನ್ನು ಯಶಸ್ವಿಯಾಗಿ ಕೆಳಗುರುಳಿಸಲು ಸಹಕರಿಸಿ ಮತ್ತು ಬಿಜೆಪಿ ವಿರುದ್ಧದ ನಿಮ್ಮ ಸಾಂಪ್ರದಾಯಿಕ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳ್ಳಿ" ಎಂದು ಕರೆ ನೀಡಿದ್ದಾರೆ. ಲಂಡನ್‌ನಲ್ಲಿ ನಡೆದ ಭಾರತೀಯ ಉದ್ಯಮಿಗಳ ಸಮಾವೇಶದಲ್ಲಿ ಮಾತನಾಡಿದ ಸಿಪಿಎಂ ನಾಯಕ ಬೀಮನ್ ಬೋಸ್, ಬಿಜೆಪಿ ತನ್ನ 'ಕೋಮುವಾದಿ ಸಿದ್ಧಾಂತ'ವನ್ನು ಕೈ ಬಿಟ್ಟರೆ ಅದಕ್ಕೆ ಸಹಕರಿಸುವುದಾಗಿ ತಿಳಿಸಿದ್ದಾರೆ. ಈ ಎರಡು ಹೇಳಿಕೆಗಳು ಎಲ್ಲೋ ಒಂದು ಕಡೆ (ಇಲ್ಲಿಯವರೆಗೆ ರಾಜಕೀಯವಾಗಿ ಅಸಾಧ್ಯವಾಗಿದ್ದ) ವಿರುದ್ಧ ಧ್ರುವಗಳು ಒಂದಾಗುವ ಸೂಚನೆ ನೀಡುತ್ತವೆ. ಇದು ಸಾಲದೆಂಬಂತೆ ಸ್ಟಾಲಿನ್ ಸಿದ್ಧಾಂತದಲ್ಲಿ ಅಚಲ ನಿಷ್ಠೆಯನ್ನಿಟ್ಟಿರುವ ಪ್ರಕಾಶ್ ಕಾರಟ್ ಕೂಡಾ 1990ರ ಮೊದಲಿದ್ದ ತಮ್ಮ ಹಾಗೂ ಬಿಜೆಪಿಯ ನಡುವಿನ 'ಮಧುರ ಸಂಬಂಧ'ವನ್ನು, ಹಾಗೂ ಕೆಲವು ಸಂದರ್ಭಗಳಲ್ಲಿ ಇಬ್ಬರೂ ಜೊತೆಗೂಡಿ ಕಾಂಗ್ರೆಸ್‌ನ ವಿರುದ್ಧ ಮತ ಚಲಾಯಿಸಿದ್ದನ್ನು ನೆನಪಿಸಿಕೊಂಡಿದ್ದಾರೆ.

ಪಕ್ಷಗಳಲ್ಲಿಯೇ ಇರುವ, ಇಲ್ಲಿಯವರೆಗೆ ಪಕ್ಷದ ಗೋಡೆ ದಾಟಿ ಹೊರಬೀಳದ, ಒಳಗುಂಪುಗಳು ಈಗ ಎಲ್ಲರ ಗಮನ ಸೆಳೆಯುತ್ತಿವೆ. ಸಿಪಿಎಂ ಮತ್ತು ಅದರ ಎಡರಂಗದ ಸ್ನೇಹಿತರ ನಡುವೆ ಮೂಡಿರುವ ಭಿನ್ನಮತ ಸಭಾಧ್ಯಕ್ಷ ಸೋಮನಾಥ್ ಚಟರ್ಜಿ ಮತ್ತು ಸಿಪಿಎಂ ನಡುವಿನ ವಾಕ್ಸಮರದ ಮೂಲಕ ಹೊರಬಿದ್ದಿದೆ. ಪಾಲಿಟ್ ಬ್ಯುರೋದ ಹಿರಿಯ ನಾಯಕರು ಸೋಮನಾಥ ಚಟರ್ಜಿ ಅವರಿಗೆ ತಮ್ಮ ಸ್ಥಾನದಿಂದ ಕೆಳಗಿಳಿಯಲು ಸೂಚಿಸಿದ್ದಾರೆ. ಆದರೆ, ಸಿಪಿಎಂನ ಈ ಹಿರಿಯ ಸಂಸದೀಯ ಪಟು ಕಾರಟ್ ಮತ್ತಿತರ 'ಕಾಮ್ರೇಡ್'ಗಳು ವಿಧಿಸಿದ ಷರತ್ತುಗಳಿಂದ ಅಸಮಾಧಾನಗೊಂಡಿರುವುದಾಗಿ ಮೂಲಗಳು ತಿಳಿಸಿವೆ. ತಮ್ಮ ವೃತ್ತಿ ಜೀವನದ ವಸಂತ ಕಾಲದಲ್ಲಿರುವ, ನಿಷ್ಪಕ್ಷಪಾತದಿಂದ ತಮ್ಮ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಹೊಂದಿರುವ ಸೋಮನಾಥ್ ಚಟರ್ಜಿಯವರಿಗೆ ಈ ಪಕ್ಷ-ರಾಜಕೀಯದಲ್ಲಿ ಭಾಗವಹಿಸುವ ಯಾವುದೇ ಆಸಕ್ತಿಯಿದ್ದಂತಿಲ್ಲ.

ನಂಬಲಾರ್ಹ ಮೂಲಗಳ ಪ್ರಕಾರ ಸೋಮನಾಥ್ ತಮ್ಮ ಮುಖಂಡ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು ಅವರನ್ನು ಭೇಟಿ ಮಾಡಿ, ತಾವು ಸಭಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಈ ಭೇಟಿಯ ನಂತರ, 'ಸೋಮನಾಥ ಚಟರ್ಜಿ ಅವರಿಗೆ ಯೋಚಿಸಲು ಸಮಯ ಬೇಕು. ಆದ ಕಾರಣ ಯಾವುದೇ ರೀತಿಯ ಊಹೆಯನ್ನು ಮಾಡದಿರುವಂತೆ' ಕಾರಟ್ ಮಾಧ್ಯಮಗಳನ್ನು ಒತ್ತಾಯಿಸಿದ್ದಾರೆ.

ಈಗ ನಮ್ಮೆದುರಿಗಿರುವ ಅತಿ ಕ್ಲಿಷ್ಟಕರ ಪ್ರಶ್ನೆ ಎಂದರೆ: ಅವಶ್ಯವಿರುವ ಸಂಖ್ಯಾಬಲ ಹೊಂದಿರದ ಕಾರಣ ಯುಪಿಎ ಸರ್ಕಾರದ ಅಡಿಪಾಯ ಕುಸಿಯುತ್ತಿದೆಯೇ? ಪ್ರಧಾನ ಮಂತ್ರಿಗಳ 'ತಣ್ಣಗಿನ' ನಿಲುವಿನ ನಡುವೆಯೂ ಪಕ್ಷದ ಒಳಗಿರುವವರಿಗೆ ಮುಂದೆ ಘಟಿಸಬಹುದಾದ ಅನಾಹುತದ ಸೂಚನೆ ಸಿಕ್ಕಂತಿದೆ. 543 ಸದಸ್ಯ ಬಲದ ಲೋಕಸಭೆಯಲ್ಲಿ ಸ್ಪಷ್ಟ ಬಹುಮತಕ್ಕೆ ಅಗತ್ಯವಿರುವ 272 ಮ್ಯಾಜಿಕ್ ಸಂಖ್ಯೆ ಪಡೆಯಲು ಯುಪಿಎ ಹರಸಾಹಸ ಮಾಡಬೇಕಿದೆ. ಅದಕ್ಕಾಗಿ ಯುಪಿಎ ಈಗಾಗಲೇ ಸ್ವತಂತ್ರ ಅಭ್ಯರ್ಥಿಗಳನ್ನು, ಸಣ್ಣ-ಪುಟ್ಟ ಪ್ರಾಂತೀಯ ಪಕ್ಷಗಳನ್ನು ಓಲೈಸತೊಡಗಿದೆ. ಇದೇ ಸಂದರ್ಭದಲ್ಲಿ ಪರಿಸ್ಥಿತಿಯ ಲಾಭ ಪಡೆದು 'ಕಿಂಗ್‌ಮೇಕರ್'ಗಳಾಗುವುದಕ್ಕೆ ಹುನ್ನಾರ ಮಾಡುತ್ತಿರುವ ಸಣ್ಣ ಪಕ್ಷಗಳಿಗೇನೂ ಕೊರತೆಯಿಲ್ಲ.

ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ 1999ರ ವಿಶ್ವಾಸ ಮತ ಯಾಚನೆಯ ಸಂದರ್ಭದಲ್ಲಿ ಕೇವಲ ಒಂದು ಮತದ ಅಂತರದಿಂದ ಅಧಿಕಾರದಿಂದ ಕೆಳಗಿಳಿದಿದ್ದ ನೆನಪು ಹಚ್ಚಹಸಿರಾಗಿರುವ ಸಮಯದಲ್ಲಿಯೇ ಕಾಂಗ್ರೆಸ್ ಅದು ಹೇಗೆ ೬ ಮಂದಿ ಪಕ್ಷೇತರರೂ ಸೇರಿದಂತೆ 19 ಮಂದಿ ಸಂಸದರನ್ನು ಒಲಿಸಿಕೊಳ್ಳುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಕಾಂಗ್ರೆಸ್ ಪಕ್ಷ ಆ ಎಲ್ಲಾ ಸದಸ್ಯರನ್ನು ಸೇರಿಸಿಕೊಂಡರೂ, ಈಗಿನ ತನ್ನ 257 ಸಂಖ್ಯಾಬಲವನ್ನು ಮ್ಯಾಜಿಕ್ ಸಂಖ್ಯೆಗೆ ಹೆಚ್ಚಿಸುವುದು ಸುಲಭದ ಮಾತಲ್ಲ. ಹಾಗೊಂದು ವೇಳೆ ಆ ಸಾಧನೆ ಮಾಡಿದರೂ ಅದು ಹಗ್ಗದ ಮೇಲಿನ ನಡಿಗೆಯೇ ಆಗಲಿದೆ.

ಟಿಎಸ್‌ಐ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .