ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ವಿಶೇಷ ವರದಿ
ಚಂಬಲ್ ಕಣಿವೆಯ ಸಿಂಹಸ್ವಪ್ನ
 

ಶೋಲೆ ಚಿತ್ರತಂಡ ಚಂಬಲ್ ಕಣಿವೆಯ ಓರ್ವ ನೈಜ ಡಕಾಯಿತನ ಪಾತ್ರವನ್ನು ಚಿತ್ರಕಥೆಯಲ್ಲಿ ಬಳಸಿಕೊಂಡಿತ್ತು. ಅದರಲ್ಲಿ ಪೊಲೀಸ್ ಅಧಿಕಾರಿ ಹಾಗೂ ಅವರ ತಂಡವನ್ನು ಬಫೂನ್‌ಗಳಂತೆ ಚಿತ್ರಿಸಿದ್ದರು. ಆದರೆ ವಸ್ತುಸ್ಥಿತಿ ಹಾಗಿರಲಿಲ್ಲ ಎನ್ನುತ್ತಾರೆ ಟಿಎಸ್‌ಐನ ಅನಿಲ್ ದ್ವಿವೇದಿ

  

ಆತನ ಗದ್ದದ ಮೂಲಕ ಹಾದುಹೋದ ಆ ಗುಂಡು ಮುಖವನ್ನು ಬಹುತೇಕ ಪುಡಿಗಟ್ಟಿತ್ತು. ಹಾಗೇ ಆ ಗುಂಡು ಚಂಬಲ್ ಕಣಿವೆಯನ್ನು ಎಂದೆಂದಿಗೂ ಕಾಡುವ ದುಃಸ್ವಪ್ನವಾಗಿರುವ ಡಕಾಯಿತ ಗಬ್ಬರ್ ಸಿಂಗ್‌ನನ್ನು ಇತಿಹಾಸದ ಪುಟಗಳಿಗೆ ಅಪ್ಪಳಿಸಿತ್ತು. ಆದರೆ, ಆತನ ಹೆಸರು ಮಾತ್ರ ಇಂದಿಗೂ ಮರೆಯಾಗಿಲ್ಲ. ಬಹುಶಃ ಇನ್ನೂ ಕೆಲವು ದಶಕಗಳವರೆಗೆ ಆ ಹೆಸರು ಜನಮಾನಸದಿಂದ ಮಾಸಿಹೋಗಲಾರದು. ಅಂತಹ ಅಚ್ಚಳಿಯದ ನೆನಪಾಗಿ ಉಳಿಯಲು ಸಾರ್ವಕಾಲಿಕ ಸೂಪರ್‌ಹಿಟ್ ಚಿತ್ರ 'ಶೋಲೆ'ಯ ಪಾತ್ರವೂ ಇದೆ. ಆದರೆ, 'ವೀರು' (ಧರ್ಮೇಂದ್ರ) ಮತ್ತು ಕೈಯನ್ನೇ ಕಳೆದುಕೊಂಡ ಪೊಲೀಸ್ ಅಧಿಕಾರಿ ಠಾಕೂರ್ ಸಾಹೇಬರೇ ಗಬ್ಬರ್‌ಸಿಂಗ್‌ನ ಅಟ್ಟಹಾಸಕ್ಕೆ ಅಂತ್ಯ ಹಾಡಲಿಲ್ಲ. ವಾಸ್ತವವಾಗಿ ಆತನ ಹುಟ್ಟಡಗಿಸಿದ್ದು ರಾಜೇಂದ್ರ ಪ್ರಸಾದ್ ಮೋದಿ ಎಂಬ ದಿಟ್ಟ ಐಪಿಎಸ್ ಅಧಿಕಾರಿ ನಡೆಸಿದ ಎನ್‌ಕೌಂಟರ್ ಎಂಬುದು ಬಹಳಷ್ಟು ಜನಕ್ಕೆ ತಿಳಿದಿರಲಿಕ್ಕಿಲ್ಲ. ನಿವೃತ್ತಿಯ ಜೀವನ ಸಾಗಿಸುತ್ತಿರುವ ಮೋದಿ ಅವರಿಗೆ ಆ ಚಿತ್ರ ಪೊಲೀಸರನ್ನು 'ಕೈಲಾಗದವರು' ಎಂಬಂತೆ ಅವಹೇಳನಕಾರಿಯಾಗಿ ಚಿತ್ರಿಸಿರುವುದು ಬೇಸರ ತರಿಸದೇ ಇಲ್ಲ. ಏಕೆಂದರೆ, 1960-70ರ ದಶಕಗಳು ಡಕಾಯಿತರ ಅಟ್ಟಹಾಸಗಳಿಗೆ ಹೆಸರಾದಂತೆಯೇ, ಕೆಲವರಾದರೂ ದಕ್ಷ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಹೋರಾಟ ಮತ್ತು ತ್ಯಾಗಕ್ಕೂ ಸಾಕ್ಷಿಯಾಗಿತ್ತು ಎಂಬುದನ್ನು ಆ ಚಿತ್ರ ಮರೆಮಾಚಿದಂತಾಗಿದೆ.

"ನನಗೆ ಗಬ್ಬರ್ ಬೇಕು... ಜೀವಸಹಿತ, ಜೀವಸಹಿತವಾಗಿಯೇ ನನಗವನು ಬೇಕು..." ಎಂಬ ಸಂಜೀವ್ ಕುಮಾರ್ ('ಶೋಲೆ'ಯ ಠಾಕೂರ್ ಸಾಹೇಬ್) ಅವಡುಗಚ್ಚಿದ ದನಿಯಲ್ಲಿ ಮೊಳಗಿಸುವ ಆದೇಶ, ಆ ಚಿತ್ರವನ್ನು ನೋಡಿದ ಯಾರ ಕಿವಿಗಳಿಂದಲೂ ಸುಲಭವಾಗಿ ಮರೆಯಾಗಲಾರದು. ಅದು ಚಿತ್ರದ ಮಾತಾದರೆ, ನಿಜವಾಗಿಯೂ ರಾಜ್ಯದ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಇಂತಹ ಕಟ್ಟಾಜ್ಞೆಯನ್ನು ನೀಡಿದವರು ಮಧ್ಯಪ್ರದೇಶ ಸರ್ಕಾರದ ಅಂದಿನ ಮುಖ್ಯಮಂತ್ರಿಯಾಗಿದ್ದ ಕೈಲಾಶ್‌ನಾಥ್ ಕಾಟ್ಜು. "ಗಬ್ಬರ್‌ನನ್ನು ಜೀವಂತವಾಗಿಯಾಗಲೀ, ಶವವಾಗಿಯಾಗಲೀ ತಂದು ನನಗೆ ಒಪ್ಪಿಸಿ" ಎಂದು ಗುಡುಗಿದ್ದರು. ಹಾಗೆ ನೋಡಿದರೆ ಅವರಿಗೆ ಬೇರೆ ಆಯ್ಕೆಗಳಿರಲೇ ಇಲ್ಲ. ಏಕೆಂದರೆ, ವಿರೋಧ ಪಕ್ಷದವರು ವಿಧಾನಸಭೆಯಲ್ಲಿ ಗದ್ದಲವೆಬ್ಬಿಸಿದ್ದರು. ಹಾಗಾಗಿ ಅವರು ದಿಟ್ಟ ನಿಲುವೊಂದನ್ನು ತೆಗೆದುಕೊಂಡಿದ್ದರು. ದಂತಕಥೆಯಂತಾಗಿದ್ದ ಪುತಲಿಬಾಯಿ ಸೇರಿದಂತೆ ಹಲವಾರು ಪಾತಕಿಗಳ ಪಡೆಗಳನ್ನು ಸದೆಬಡಿಯುವ ಮೂಲಕ ಅದಾಗಲೇ ತನ್ನ ಸಾಮರ್ಥ್ಯವನ್ನು ತೋರಿಸಿದ್ದ ಮೋದಿಗೆ ಗಬ್ಬರ್ ಸೆರೆಹಿಡಿಯುವ ಹೊಣೆ ವಹಿಸಿದರು.

ಆ ಬಳಿಕ ಮೋದಿ ಕೆಲವು ದಿನಗಳ ಕಾಲ ಗಬ್ಬರ್ ಚಲನವಲನಗಳ ಮೇಲೆ ಆತನ ಮೂಲಹಳ್ಳಿ ಡಾಂಗ್ ಮೇಲೆ ಕಣ್ಣಿಟ್ಟಿದ್ದರು. ತನ್ನ ಸ್ವಂತ ಹಳ್ಳಿಯ ಜನರ ಹಣ ಮತ್ತು ಮಹಿಳೆಯರನ್ನು ಕೂಡ ಆತ ಬಿಡುತ್ತಿಲ್ಲ. ಹಣವನ್ನು ಕಿತ್ತುಕೊಳ್ಳುವ ಜೊತೆಗೆ ಮಹಿಳೆಯರನ್ನು ತನ್ನ ಮೋಜಿಗೆ ಬಳಸಿಕೊಳ್ಳುತ್ತಿದ್ದ. ಹಾಗೆ ಹಳ್ಳಿಯನ್ನು ದೋಚಲು ಬರಲಿರುವ ಬಗ್ಗೆ ಒಮ್ಮೆ ಮೋದಿ ಅವರಿಗೆ ಗುಪ್ತಚರ ಮಾಹಿತಿ ಲಭ್ಯವಾಯಿತು. ಕೂಡಲೇ ಆ ಹಳ್ಳಿಗೆ ತೆರಳಿದರು. ಆದರೆ, ಅಷ್ಟರಲ್ಲಿ ಡಕಾಯಿತ ಪರಾರಿಯಾಗಿದ್ದ. ಬರಿಗೈಲಿ ಹೊರಟ ಮೋದಿ ಅವರಿಗೆ ಬೆಂಕಿಬಿದ್ದಿದ್ದ ಒಂದು ಮನೆ ಕಣ್ಣಿಗೆ ಬಿತ್ತು. ಬೆಂಕಿಯ ನಡುವೆ ಬಾಲಕನೊಬ್ಬ ಸಿಕ್ಕಿಹಾಕಿಕೊಂಡಿದ್ದ. ಅಷ್ಟರಲ್ಲಿ ಅಲ್ಲಿಗೆ ಧಾವಿಸಿದ ಮೋದಿ ಬೆಂಕಿಯ ನಡುವೆ ನುಗ್ಗಿ ಹೋಗಿ ಬಾಲಕ ಶಿಖಾರ್‌ನನ್ನು ಹೊರತಂದು ರಕ್ಷಿಸಿದರು.

ಅದೇ ನವೆಂಬರ್ 13, 1959ರ ತಡರಾತ್ರಿ, ಶಿಖಾರ್‌ನ ನೆರೆಮನೆಯ ವ್ಯಕ್ತಿಯೊಬ್ಬರು ಅವರು ಉಳಿದುಕೊಂಡಿದ್ದ ಬಂಗಲೆಯ ಬಳಿ ಬಂದರು. ವಿಷಯ ಏನೆಂದು ಕೇಳಿದಾಗ ಆತ, "ನೀವು ಗಬ್ಬರ್‌ನನ್ನು ಹಿಡಿಯಲು ಹರಸಾಹಸ ಮಾಡುತ್ತಿರುವುದು ನಮಗೆಲ್ಲಾ ಗೊತ್ತು. ನಿಜವಾಗಿಯೂ ಹೇಳಬೇಕೆಂದರೆ ನಾವೂ ಅದನ್ನೇ ಬಯಸಿದ್ದೇವೆ. ನಮ್ಮನ್ನು ನೀವು ಈ ಗಬ್ಬರ್‌ನ ಉಪಟಳದಿಂದ ರಕ್ಷಿಸಬೇಕು. ನಾಳೆ ಮತ್ತೆ ನಮ್ಮ ಊರಿಗೆ ಗಬ್ಬರ್ ಬರುತ್ತಾನೆ ಎಂಬುದನ್ನು ನಿಮಗೆ ತಿಳಿಸಲೋಸುಗಲೇ ನಾನು ಇಲ್ಲಿಗೆ ಬಂದಿರುವೆ" ಎಂದ.

ಗಬ್ಬರ್‌ನನ್ನು ಸದೆಬಡಿಯುವ ಹವಣಿಕೆಯಲ್ಲೇ ಇದ್ದ ಮೋದಿ ಅವರಿಗೆ ಅಷ್ಟು ಸಾಕಿತ್ತು. ಕೂಡಲೇ 500ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ಕರೆಸಿದರು. ಮಾರನೇ ದಿನ ಸದ್ದಿಲ್ಲದಂತೆ ಹಳ್ಳಿಯನ್ನು ಸುತ್ತುವರಿದ ಅವರು, ಪೊದೆಗಳ ಮರೆಯಲ್ಲಿ ಅಡಗಿ ಕೂತರು. ಗಬ್ಬರ್ ಅಷ್ಟರಲ್ಲಾಗಲೇ ಆ ಹಳ್ಳಿಯ ಒಳ ಪ್ರವೇಶಿಸಿ, ವಿಶ್ರಾಂತಿ ಪಡೆಯುತ್ತಿದ್ದ. ಆಗ ಆತ ತಂಗಿದ್ದ ಸ್ಥಳವನ್ನು ಸುತ್ತುವರಿದ ಮೋದಿ, ಅವರ ಪಡೆಯ ಎರಡು ಡಜನ್ ಸಿಬ್ಬಂದಿ ಕಡೆ ಗುಂಡು ಹಾರಿಸತೊಡಗಿದರು. ದಿಢೀರನೇ ಗುಂಡಿನ ಸುರಿಮಳೆಯಾಗತೊಡಗಿದಂತೆ ಹೇಗೆ ಪ್ರತಿಕ್ರಿಯಿಸಬೇಕು, ಏನು ಮಾಡಬೇಕು ಎಂದು ತೋಚದೆ ಗಬ್ಬರ್‌ನ ಸಹಚರರು ಕೆಲವೇ ಕ್ಷಣದಲ್ಲಿ ಪೊಲೀಸರ ಗುಂಡಿಗೆ ಶವವಾಗಿ ಒರಗಿದರು. ಗಬ್ಬರ್ ಮಾತ್ರ ಉಪಾಯವಾಗಿ ಅಲ್ಲಿಂದ ಜಾರಿಕೊಳ್ಳುವ ಯೋಚನೆಯಲ್ಲಿ ಓಡತೊಡಗಿದ.

"ಆಗ ನಾನು ಗ್ರನೇಡನ್ನು ಆತನೆಡೆಗೆ ಗುರಿ ಇಟ್ಟು ಹೊಡೆದೆ. ಅದು ನೇರವಾಗಿ ಆತನ ಗದ್ದವನ್ನು ಸೀಳಿಕೊಂಡು ಮುಖವನ್ನು ಪುಡಿಗಟ್ಟಿತು. ಆ ಚಿತ್ರದಲ್ಲಿ ನೀವೇ ನೋಡಿದಿರಲ್ಲ, ಹೇಗೆ ಮುಖ ಪುಡಿಯಾಗಿತ್ತೆಂದು..." ಟಿಎಸ್‌ಐಗೆ ಮೋದಿ ಅಂದಿನ ಆ ಘಟನೆಯನ್ನು ವಿವರಿಸುತ್ತಿದ್ದರು. "ಆದರೂ ಆತನ ಸಂಬಂಧಿಕರು ಯಾವ ಕಾರಣವಿಲ್ಲದೆ ಆತನನ್ನು ಕೊಂದೆ ಎಂದು ನನ್ನನ್ನು ಇಂದಿಗೂ ಶಪಿಸುತ್ತಾರೆ. ಆದರೆ, ಅದು ನಿಜವಲ್ಲ" ಎಂದರು ಮೋದಿ. ಯಾವಾಗಲೂ ಪ್ರಾಮಾಣಿಕ ಮತ್ತು ನಿಜವಾದ ಹೋರಾಟ ಮನೋಭಾವದ ಪೊಲೀಸ್ ಅಧಿಕಾರಿಗಳ ವಿರುದ್ಧ ಇಂತಹ ಆರೋಪಗಳು ಕೇಳಿಬರುವುದು ಸಹಜವೇ. ಜೊತೆಗೆ ತೀರಾ ಅಪಾಯಕಾರಿ ಪಾತಕಿಗಳನ್ನು ಮಟ್ಟ ಹಾಕಿದ್ದು ಮೋದಿ ಅವರಿಗೆ ಇದು ಹೊಸದೇನೂ ಆಗಿರಲಿಲ್ಲ. ಕಾನೂನಿಗೆ ವಿರುದ್ಧವಾಗಿ ಹೋಗುವವರ ಬಗ್ಗೆ ಸಲ್ಲದ ಅನುಕಂಪ ಹುಟ್ಟಿಸುವ ವ್ಯವಸ್ಥೆಯೊಂದು ಸದಾ ಇದ್ದೇ ಇರುವುದು ತಾನೇ?

ಕಳೆದ ಮಾನವನ್ನು ಮತ್ತೆ ಗಳಿಸಿಕೊಳ್ಳುವ ಸೇಡು ಚಂಬಲ್ ಕಣಿವೆಯಲ್ಲಿ ಇನ್ನೂ ಹೆಡೆಯಾಡುತ್ತಲೇ ಇದೆ. ಇಲ್ಲಿನ ಈ ಬಿಹಾದ್ (ಕಣಿವೆ)ನ ಯಾವುದೇ ವ್ಯಕ್ತಿ ತನಗೆ ಅನ್ಯಾಯವಾಗುತ್ತಿದೆ ಎಂದುಕೊಂಡರೆ ಆತನ ಮನಸ್ಸು ಹೊರಳುವುದು ಚಂಬಲ್ ಕಣಿವೆಯ ಕಡೆಗೇ. 'ಬಾಘಿ'(ಬಂಡೆದ್ದವರು)ಯಾಗಿ ತನ್ನ ಸೇಡನ್ನು ತೀರಿಸಿಕೊಳ್ಳದ ಹೊರತು ಆತನಿಗೆ ನಿದ್ರೆ ಬಾರದು. ಪನಾ, ಸುಲ್ತಾನ್, ಮಾನ್ ಸಿಂಗ್, ಅಮೃತ್‌ಲಾಲ್, ಲಖನ್, ಗಬ್ಬರ್ ಮತ್ತು ಪುತಲಿ ಅಂತಹ ಬಾಘಿಗಳಲ್ಲಿ ಕೆಲವರು ಅಷ್ಟೆ. ಅವರಲ್ಲಿ 'ಡಾಕು' ಮಾನ್ ಸಿಂಗ್‌ಗೆ ಅತ್ಯುನ್ನತ ಸ್ಥಾನ. ಆತ ಒಂದು ನೀತಿ ಸಂಹಿತೆಯನ್ನೇ ರೂಪಿಸಿದ. ಅದರ ಪ್ರಕಾರ ಮಹಿಳೆಯರ ಕೊಲೆ ಅಥವಾ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವಂತಿರಲಿಲ್ಲ. ಹಾಗೆ ಅಗತ್ಯವಿಲ್ಲದೇ ಇದ್ದಲ್ಲಿ ಡಕಾಯಿತಿ ಮಾಡುವಂತಿರಲಿಲ್ಲ. ಡಕಾಯಿತರು ತಮ್ಮದೇ ಆದ ರೀತಿಯ ಅದ್ಭುತ ಸಂಗೀತ ಅಲಾ- ಉಧಾಲ್ ಎಂಬ ಜಾನಪದ ಸಂಗೀತವನ್ನು ಅಭ್ಯಾಸ ಮಾಡಿಕೊಂಡಿರುತ್ತಿದ್ದರು. ಮತ್ತೊಬ್ಬ ದಂತಕತೆಯಾಗಿದ್ದ ಡಕಾಯಿತೆ ಪುತಲಿ ಬಾಯಿ ಮನಮುಟ್ಟುವ ಲಾವಣಿಗಳ ಮೂಲಕ ಅಂತಹ ಸಂಗೀತವನ್ನು ಬೆಳೆಸಿದ್ದಳು. ಆ ನಂತರದ ದಿನಗಳಲ್ಲಿ ಬಂದ ಡಕಾಯಿತಿಗಳೆಲ್ಲ ಫೂಲನ್‌ದೇವಿಯಂತೆ ತೀರಾ ವಿಕೃತಿಗಿಳಿದರೂ, ಜನ ಪುತಲಿಬಾಯಿಯನ್ನು ಮಾತ್ರ ಆಕೆಯ ಲಾವಣಿಗಳಿಗಾಗಿ ನೆನಪಿಟ್ಟುಕೊಂಡಿದ್ದಾರೆ.

ಮೋದಿ ಅವರ ಕೈಯಲ್ಲಿ ಸಾವು ಕಂಡ ಡಕಾಯಿತರಲ್ಲಿ ಪುತಲಿ ಬಾಯಿಯೇ ಮೊದಲಿಗಳು. ಒಮ್ಮೆ ಡಕಾಯಿತನೊಬ್ಬನ ಸಂಗಾತಿಯಾಗಿದ್ದ ಆಕೆ, ಕ್ರಮೇಣ 1950ರ ಹೊತ್ತಿಗೆ ಇಡೀ ಚಂಬಲ್ ಕಣಿವೆಯನ್ನೇ ನಡುಗಿಸುವ ಮಟ್ಟಿಗಿನ ಡಕಾಯಿತ ರಾಣಿಯಾದಳು. 1958ರ ಜನವರಿ 23ರಂದು ಭಿಂದ್ ಜಿಲ್ಲೆಯ ಸಾಂಗ್ಲಿ- ಹರಿಸಾ ಹಳ್ಳಿಯಲ್ಲಿ ಪುತಲಿ ಮತ್ತು ಆಕೆಯ ಗ್ಯಾಂಗ್ ತಂಗಿದೆ ಎಂಬ ಮಾಹಿತಿ ಮೋದಿಯವರಿಗೆ ತಲುಪಿತು. ತಕ್ಷಣವೇ ತಮ್ಮ ಸಿಬ್ಬಂದಿಯೊಂದಿಗೆ ಅಲ್ಲಿಗೆ ದಾಳಿ ನಡೆಸಿದ ಮೋದಿ ಅವರು ಡಕಾಯಿತರ ಗ್ಯಾಂಗ್ ಸುತ್ತುವರಿದರು. "ನಾವು ಅವರನ್ನು ಸುತ್ತುವರಿದಿರುವುದು ತಿಳಿಯುತ್ತಲೇ ಓಡತೊಡಗಿದರು. ಆದರೂ ನಾನು ಗುಂಡು ಹಾರಿಸಲು ನಮ್ಮವರಿಗೆ ಸೂಚನೆ ನೀಡಿರಲಿಲ್ಲ. ಅವರಿಂದ ಕೇವಲ ಆರೇಳು ಅಡಿ ದೂರದಲ್ಲಿ ನಾವಿದ್ದೆವು. ಆಗ ಗುಂಡು ಹಾರಿಸಲು ತೊಡಗಿದೆವು. ಅದಕ್ಕೆ ಪ್ರತಿಯಾಗಿ ಅವರೂ ಹಾರಿಸಿದರು. ಆದರೆ, ಒಂದೆರಡು ನಿಮಿಷದಲ್ಲೇ 11 ಮಂದಿ ಡಕಾಯಿತರು ನೆಲಕ್ಕೊರಗಿದರು. ನಂತರ ನಾವು ಅವರ ದೇಹಗಳನ್ನು ಪರಿಶೀಲಿಸುವಾಗ ಮೂರನೆಯವಳಾಗಿ ನೆಲಕ್ಕೊರಗಿದಾಕೆಯೇ ಪುತಲಿ ಎಂಬುದು ಗೊತ್ತಾಯಿತು" ಎಂದು ಅಂದಿನ ಘಟನೆಯನ್ನು ಮೋದಿ ಮೆಲುಕು ಹಾಕಿದರು.

ರಾಷ್ಟ್ರಪತಿಗಳ ಪೊಲೀಸ್ ಪದಕದಂತಹ ಉನ್ನತ ಗೌರವವೂ ಸೇರಿದಂತೆ ಹಲವು ಗೌರವ, ಪ್ರಶಸ್ತಿಗಳನ್ನು ಪಡೆದಿರುವ ಮೋದಿ ಇದೀಗ ಗೌರವಾನ್ವಿತ ಅಧಿಕಾರಿ. ಛತ್ತೀಸಗಢದ ಬಿಲಾಸ್‌ಪುರದಲ್ಲಿ ತಮ್ಮ ಸಂಸಾರದೊಂದಿಗೆ ನೆಮ್ಮದಿಯ ನಿವೃತ್ತಿ ಜೀವನ ಸಾಗಿಸುತ್ತಿರುವ ಮೋದಿ, ಆ ಅವಾಸ್ತವಿಕ ಚಲನಚಿತ್ರ ಗಬ್ಬರ್‌ಸಿಂಗ್‌ನ ಅಸಲಿ ವ್ಯಕ್ತಿತ್ವವನ್ನು ತೋರಿಸಿತು. ಆದರೆ, ಪೊಲೀಸ್ ಅಧಿಕಾರಿಗಳು ಆತನನ್ನು ಹಿಡಿಯಲು ಇಬ್ಬರು ಚಿಲ್ಲರೆ ಕಳ್ಳರ ನೆರವು ಪಡೆಯುವ ಮಟ್ಟಿಗೆ ಬಲಹೀನರು ಎಂಬಂತೆ ಬಿಂಬಿಸಿತು ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಆದರೆ, ವಾಸ್ತವದಲ್ಲಿ ಅತ್ಯುನ್ನತವಾದ ಪ್ರಶಂಸೆ ಬರುವುದು ಬಹುತೇಕ ಅತ್ಯಂತ ಜಿದ್ದಿನ ವೈರಿಯಿಂದಲೇ ಆಗಿರುತ್ತದೆ ಎಂಬ ಮಾತಿದೆ. ಅದನ್ನು ನಿಜಮಾಡುವಂತೆ ಚಂಬಲ್‌ನ ಒಂದು ಕಾಲದ ದುಸ್ವಪ್ನವಾಗಿದ್ದ ಮೊಹಾರ್ ಸಿಂಗ್ ಮೋದಿಯ ಕುರಿತು ಮಾತನಾಡಿದರು. 1970ರಲ್ಲಿ ಸಾಮಾಜಿಕ ಬದಲಾವಣೆಯ ಹರಿಕಾರ ಜಯಪ್ರಕಾಶ ನಾರಾಯಣರ (ಜೆಪಿ) ಪ್ರಭಾವದಿಂದಾಗಿ ಸ್ವ-ಇಚ್ಛೆಯಿಂದ ಶರಣಾದ ಮೊಹಾರ್‌ನನ್ನು ಟಿಎಸ್‌ಐ ಬಿಂಧ್‌ನಿಂದ 70 ಕಿ.ಮೀ. ದೂರದ ಮೆಹಗಾಂವ್ ಎಂಬಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಸಭೆಯೊಂದರಲ್ಲಿ ಭೇಟಿ ಮಾಡಿತು. ಧೋತಿ-ಕುರ್ತಾ ಧರಿಸಿದ್ದ ಆತನ ಹಣೆಯ ಮೇಲೆ ಕುಂಕುಮದ ಉದ್ದನೆಯ ನಾಮವೂ ಇತ್ತು. ಹಾಗೇ ಬಗಲಲ್ಲಿ ಬಂದೂಕ ನೇತಾಡುತ್ತಿತ್ತು. ರಾಜಕೀಯವಾಗಿ ಸಾಕಷ್ಟು ಬೆಳೆದಿರುವ ಆತ "ಅವರನ್ನು ಮೊದಲ ಬಾರಿ ನೋಡಿದಾಗಲೇ ನಾವು ಈತ ಅತ್ಯಂತ ಪ್ರಾಮಾಣಿಕ ಮತ್ತು ಧೈರ್ಯವಂತ ಅಂದುಕೊಂಡಿದ್ದೆ. ಆತನನ್ನು ಮತ್ತೊಮ್ಮೆ ಭೇಟಿಯಾಗಬೇಕು ಎಂಬ ಆಸೆ ಈಗಲೂ ಇದೆ" ಎಂದು ಮೋದಿಯ ಕುರಿತು ಹೇಳಿದರು.

ಜೆಪಿಯವರ ಆಂದೋಲನದ ಬಳಿಕ ಸಾವಿರಾರು ಡಕಾಯಿತರು ಶರಣಾದ ಬಳಿಕ ಇದೀಗ ಚಂಬಲ್ ಕಣಿವೆಯಲ್ಲಿ ಬಹುತೇಕ ಮೌನ ಆವರಿಸಿದೆ. ಆದರೆ, ಈ ಕಣಿವೆಗೆ ಅಂಟಿರುವ ದಂತಕತೆಗಳು ಮಾತ್ರ ಯಾವ ಕ್ಷಣದಲ್ಲಿ ಮತ್ತೊಬ್ಬ ಡಕಾಯಿತನನ್ನು ಸದ್ದಿಲ್ಲದೆ ಸೃಷ್ಟಿಸುತ್ತವೆಯೋ ಹೇಳಲಾಗದು. ಯಾವ ಕ್ಷಣದಲ್ಲಿ ಸಿಡಿದೆದ್ದ ವ್ಯಕ್ತಿಯೋ, ಮಹಿಳೆಯೋ ಬಂದೂಕು ಹೆಗಲಿಗೇರಿಸಿ ಘರ್ಜನೆ ಮೊಳಗಿಸುತ್ತಾರೋ ಹೇಳಲಾಗದು. ಆದರೆ, ರಾಜೇಂದ್ರ ಮೋದಿಯಂತಹ ದಂತಕತೆಗಳು ಮಾತ್ರ ಯಾರೂ ಅರಿಯದ ಹೀರೋಗಳಾಗಿ ತೆರೆಮರೆಯಲ್ಲೇ ಬದುಕು ಕಳೆಯುತ್ತಾರೆ!

ಟಿಎಸ್‌ಐ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .