ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಸಣ್ಣ ಕಥೆ
ಮನಸ್ಸಿನ ಧರ್ಮ
ಶಾಂತಾರಾಮ ಸೋಮಯಾಜಿ

Short story- The Sunay Indian - Kannada

ಬಣ್ಣ ಕಳೆದುಕೊಂಡ ಟೆರೇಸ್ ಮನೆಯ ಗೋಡೆಗೆ ಅಂಟಿಸಿದ ಫಲಕದಲ್ಲಿ ಶಾಸ್ತ್ರಿಯವರ ಹೆಸರಿತ್ತು. ಮುಂಭಾಗದಲ್ಲಿ ಎರಡು ತೆಂಗಿನ ಮರಗಳು. ಅವುಗಳ ಬುಡದಲ್ಲಿ ಮರದಿಂದ ಬಿದ್ದು ಒಣಗುತ್ತಿರುವ ಸೋಗೆಗಳು. ಎಡಬದಿಯಲ್ಲೊಂದು ಭಾರಿ ಗಾತ್ರದ ಹೆಬ್ಬಲಸಿನ ಮರ. ಮನೆಯ ಮೂರ್‍ನಾಲ್ಕು ಪಾಲು ಎತ್ತರದ ಮರದ ನೆರಳಿನಿಂದಾಗಿ, ಮುಂಭಾಗದಲ್ಲಿ ಕತ್ತಲಿತ್ತು. ಮನೆಯ ಸುತ್ತ ವಿಪರೀತ ಹುಲ್ಲು, ಮುಳ್ಳು. ಪೊದೆ ಬಿದ್ದು ಕೊಳೆಯುತ್ತಿರುವ ಹೆಬ್ಬಲಸಿನ ಹಣ್ಣುಗಳ ಸುತ್ತ ನುಸಿಗಳ ಹಿಂಡು.

ನಾನು ಗೇಟು ತೆರೆದೆ. ಹೆಬ್ಬಲಸಿನ ಮರದ ರೆಂಬೆಯಿಂದ ಒಂದು ಹಕ್ಕಿ ವಯ್ ವಯ್ ಎಂದು ಹಾರಿ ಹೋಯ್ತು. ಆ ಸದ್ದಿನಿಂದ ಕಾಗೆಯಾಗಿರಬೇಕು ಎಂದುಕೊಂಡೆ. ಮೆಟ್ಟಿಲಿಗೆ ಭುಜಕೊಟ್ಟು ನಿಂತ ಕಾರನ್ನು ಹಳದಿ ಹೊದಿಕೆ ಮುಚ್ಚಿತ್ತು. ಈ ಮಧ್ಯಾಹ್ನದ ಬಿಸಿಲಲ್ಲೂ ಎದುರಿನ ಕೋಣೆಯಲ್ಲಿ ಲೈಟು ಉರಿಯುವುದನ್ನು ನೋಡಿ ಅಚ್ಚರಿಯಾಯಿತು. ಶಾಸ್ತ್ರಿಯವರು ಓದುತ್ತಿರಬಹುದೇನೋ ಅಥವಾ ನನ್ನ ನಿರೀಕ್ಷೆಯಲ್ಲಿ ಲೈಟು ಹಾಕಿರಬಹುದು.

ನಾನು ಮೆಟ್ಟಿಲೇರಿದ್ದೇ ತಡ, ಮುಂಬಾಗಿಲು ತೆರೆದುಕೊಂಡಿತು, ಫ್ಯಾನಿನ ಗಾಳಿ ಮುಖಕ್ಕೆ ಬಡಿಯಿತು. ಹೊಸ್ತಿಲ ಹಿಂದೆ ನಿಂತ ಭರ್ತಿ ದೇಹ ಹೇಳಿತು- "ಬನ್ನಿ ಬನ್ನಿ ಅರ್ಧ ಗಂಟೆಯಿಂದ ಕಾಯ್ತಾ ಇದ್ದೇನೆ."

ಪತ್ರಿಕೆಗಳಲ್ಲಿ ಶಾಸ್ತ್ರಿಯವರ ಫೋಟೋ ಸುಮಾರು ಸಲ ನೋಡಿದ್ದೆ. ಎರಡ್ಮೂರು ವರ್ಷಗಳ ಹಿಂದೆ ಸಮಾರಂಭವೊಂದರಲ್ಲಿ ಅವರ ಭಾಷಣ ಕೇಳಿದ್ದೆ. ಟಿ.ವಿ ಯಲ್ಲಿ ಸಂವಾದ ನೋಡಿದ್ದೆ. ಆದರೆ ಹೀಗೆ ಅವರ ಮನೆಯಲ್ಲಿ ಭೇಟಿ ಮಾಡುತ್ತಿರುವುದು ಇದೇ ಮೊದಲು. ಹಿಂದೆ ನೋಡಿದ್ದಕ್ಕಿಂತ ಬಾಗಿದ ದೇಹ, ನನ್ನ ಹೆಗಲಿನೆತ್ತರಕ್ಕೆ ಬರುವ ಕುಳ್ಳ, ಆದರೆ ದಪ್ಪ ಆಕೃತಿ. ಬಹುಪಾಲು ಬೋಳಾದ ತಲೆ. ಹಣೆಯ ಮೇಲೆ ಕುಂಕುಮದ ಭರ್ಜರಿ ಬೊಟ್ಟು. ನೇತಾಡುವ ಕೆನ್ನೆಗಳು.

ನಾನು ಮನೆಯೊಳಗೆ ಕಾಲಿಟ್ಟಾಗ ಅವರ ದೃಷ್ಠಿ ತೀಕ್ಷ್ಣವಾಗಿದ್ದನ್ನು ಗಮನಿಸಿದೆ. ಕ್ಷಮೆ ಕೇಳುವ ಧಾಟಿಯಲ್ಲಿ ಹೇಳಿದೆ- "ಸಾರೀ ಸಾರ್, ಈ ಹೈವೇ ಇನ್ನು ರಿಪೇರಿಯಾಗ್ಲಿಲ್ಲ. ಅದು ನನ್ಗೆ ಗೊತ್ತಿರ್ಲಿಲ್ಲ. ಬಸ್ಸು ಒಂದು ಗಂಟೆ ಲೇಟು"

"ಆ ಬಗ್ಗೆ ನಾನು ಫೋನಿನಲ್ಲಿ ಹೇಳಿರಬೇಕಲ್ವಾ? ಹೇಳ್ಳಿಲ್ವಾ?" ಇಲ್ಲ ಎಂಬಂತೆ ತಲೆಯಾಡಿಸಿದೆ. "ಇಲ್ವಾ ? ಹೇಳ್ಬೇಕಂತ ಮಾಡಿದ್ದೆ, ಅದು ಖಂಡಿತಾ, ಹೇಳ್ಳಿಕ್ಕೆ ಮರ್ತುಬಿಟ್ನೋ ಏನೋ. ಇರ್ಲಿ, ಬಂದ್ರಲ್ಲಾ, ಕೂತ್ಕೊಳ್ಳಿ".

ಹಳೆ ಸೋಫಾದ ಮೇಲೊಂದು ಕಂದು ಬೆಡ್ ಶೀಟ್ ಹಾಸಲಾಗಿತ್ತು. ಅದರ ಒಂದು ಮೂಲೆಯಲ್ಲಿ ಕುಳಿತುಕೊಂಡೆ. ಅವರು ಆ ಮೂಲೆಯಲ್ಲಿ ಕುಳಿತಾರು ಎಂದುಕೊಂಡಿದ್ದೆ. ಪಕ್ಕದ ಮರದ ಕುರ್ಚಿಯೊಂದನ್ನು ನನ್ನೆದುರಿಗೆಳೆದು ಕುಳಿತರು. ತಕ್ಷಣ ಕೇಳಿದರು- "ನಿಮಗೆ ಬಾಯಾರಿಕೆ ಏನಾದ್ರು...?'

"ಏನೂ ಬೇಡ ಸಾರ್. ಬರೀ ಮಾತಾಡಿಸಿ ಹೋಗ್ಲಿಕ್ಕಂತ ಬಂದಿದ್ದು".

"ಸಂಕೋಚ ಬೇಡ. ಹೇಳಿ; ಕಾಫಿ, ಟೀ, ಏನಾದ್ರು? ಮಾಡ್ತೇನೆ ಬೇಕಿದ್ರೆ"

"ಬೇಡ ಸಾರ್ ಈಗೆಂತದೂ ಬೇಡ"

"ಸರಿ ಹಾಗಾದ್ರೆ. ನಮ್ಮಲ್ಲಿ ಕಾಯಂ ಅಡಿಗೆಯವಳೊಬ್ಳು ಇದ್ಲು. ಬೆಳಗ್ಗಿನಿಂದ ಸಾಯಂಕಾಲದವರೆಗೆ ಇಲ್ಲೇ ಇರ್ತಿದ್ಲು. ಹೋದ ವರ್ಷ ಅವ್ಳ ಗಂಡನಿಗೆ ಇಲ್ಲಿಂದ ಮಂಡ್ಯಾಕ್ಕೆ ಟ್ರಾನ್ಸ್‌ಫರ್ ಆಯ್ತು; ಅವ್ಳು ಅವನೊಟ್ಟಿಗೆ ಹೋದ್ಲು. ಹೋಗ್ಲೆ ಬೇಕಲ್ವಾ? ಈಗೊಬ್ಳು ಬರ್ತಿದಾಳೆ. ಆದರೆ ಬಂದು ಮಾಡಿಟ್ಟು ಹೋಗ್ತಾಳಷ್ಟೆ. ಆದದ್ರಿಂದ ಬಂದವರಿಗೆ ನಂದೇ ಉಪಚಾರ. ಅದೇನು ದೊಡ್ಡ ವಿಚಾರ ಅಲ್ಲ, ಸುಮ್ನೆ ಹೇಳಿದ್ದಷ್ಟೆ"

ಅವರ ಬಾಗಿದ ತಲೆಯನ್ನೇ ನೋಡುತ್ತಿದ್ದೆ. ಹಣೆಯ ನೆರಿಗೆಗಳು ತಲೆಯ ಮೇಲ್ಭಾಗದವರೆಗೂ ಹಬ್ಬಿದ್ದವು. ಬಾಗಿದ ತಲೆಯನ್ನು ನೆಟ್ಟಗೆ ಮಾಡಿ, ಹಿಂದಿನ ಹಾಗೆ ತೀಕ್ಷ್ಣವಾಗಿ ನೋಡುತ್ತಾ ಅವರು ಹೇಳಿದರು- "ಏನ್ ಮಾಡ್ತೀರಿ ನನ್ನ ಇಂಟರ್‌ವ್ಯೂ ತಗೊಂಡು? ಫೋನಿನಲ್ಲಿ ಅದನ್ನೆ ಕೇಳುವಾಂತಿದ್ದೆ. ಮತ್ತೆ ಕಂಡಿತು, ಹೇಗೂ ಬರ್ತೀರಲ್ವಾ, ಆ ಮೇಲೆ ಕೇಳಿದ್ರಾಯ್ತುಂತ. ಬಾಯಿಮುಚ್ಚಿದೆ".

"ಒಂದು ಲೇಖನ ಬರಿಬೇಕಂತಿದ್ದೇನೆ ಸಾರ್."

"ಲೇಖನ? ಯಾವುದ್ರ ಬಗ್ಗೆ?"

"ಧರ್ಮ ಮತ್ತು ಮನುಷ್ಯನ ಮನಸ್ಸು- ಹೀಗೊಂದು ಜನರಲ್ ಥೀಮ್ ಇಟ್ಟುಕೂಂಡಿದ್ದೇನೆ. ಆದ್ರೆ ನನ್ಗೆ ಅದು ಸ್ಪಷ್ಟ ಆಗಿಲ್ಲ."

"ನನ್ನನ್ಯಾಕೆ ಸೇರಿಸಿಕೊಂಡ್ರಿ ನಿಮ್ಮ ಲೇಖನದಲ್ಲಿ?"

ನೇರ ಪ್ರಶ್ನೆಗೆ ಸ್ವಲ್ಪ ಕಸಿವಿಸಿಯಾಯಿತು. ಬ್ಯಾಗ್‌ನಿಂದ ಪೆನ್ನು, ನೋಟ್‌ಬುಕ್ ತೆಗೆದೆ. ಹೇಗೆ ಉತ್ತರ ಕೊಡುವುದು? ಅವರ ಸಿಟ್ಟಿನ ಬಗ್ಗೆ ಕೇಳಿದ್ದೆ. ಅವರನ್ನು ಕೆರಳಿಸುವುದು ನನಗೆ ಬೇಕಿರಲಿಲ್ಲ. ಕೆಲ ಕ್ಷಣ ಬಿಟ್ಟು ಹೇಳಿದೆ- "ನೀವೊಬ್ಬ ಪ್ರಸಿದ್ಧ ಲೇಖಕರು. ಇನ್ನೊಂದು ನೀವು ಮುಸ್ಲಿಮರ ಬಗ್ಗೆ ಮಾಡಿದ ಭಾಷಣ ನಾನು ಪೇಪರಲ್ಲಿ ಓದಿದ್ದೆ".

"ಆ ಭಾಷಣದ ಬಗ್ಗೆ ನನ್ಗೆ ಪಶ್ಚಾತ್ತಾಪ ಏನೂ ಇಲ್ಲ. ಕೆಲ ಗುಂಪಿನವರು ನಾನು ಕ್ಷಮೆ ಕೇಳಬೇಕಂತ ಒತ್ತಾಯ ಮಾಡಿದ್ದು ನನಗೆ ಗೊತ್ತುಂಟು. ಆದ್ರೆ ಅದೊಂದು ಜೋಕ್ ಅಷ್ಟೇ. ಯಾಕಂದ್ರೆ, ಆ ಬಗ್ಗೆ ನನ್ಗೆ ತುಂಬಾ ಹೆಮ್ಮೆ ಉಂಟು. ಸಮಾಜದ ಕಪ್ಪು ಕಲೆಯನ್ನು ಕಪ್ಪು ಕಲೆ ಅಂತ ಹೇಳಲಿಕ್ಕೆ ಧೈರ್ಯ ಇದ್ರೆ ಸಾಲ್ದು; ಅಖಂಡ ನಂಬಿಕೆಯು ಬೇಕು. ಒಪ್ತೀರಾ?"

ತಲೆಕೆಡಿಸಿಕೊಂಡು ಹೇಳಿದೆ- "ಒಪ್ತೇನೆ ಸಾರ್. ಆದ್ರೆ ನೀವು ಉಪಯೋಗಿಸಿದ ಶಬ್ದ ಮುಸ್ಲಿಂ ಮನಸ್ಸು- ಅದ್ರ ಬಗ್ಗೆ ನನಗೆ ವಿವರಣೆ ಬೇಕು"

"ವಿವರಣೆ ಬೇಕಾ? ಕೊಡ್ವಾ. ಆದ್ರೆ ಒಂದು ವಿಷ್ಯಾ ನೀವು ತಿಳಿದಿರಬೇಕು. ಅದೇನಂದ್ರೇ, ದೃಷ್ಟಿ ಸರಿಯಿದ್ದವರಿಗೆ ಏನನ್ನಾದರು ತೋರ್‍ಸಿ ವಿವರಿಸಬಹುದು. ಹಾಗೆ ಮಾಡಿದರೆ ಅವರಿಗದು ಅರ್ಥ ಆಗ್ತದೆ. ಅದ್ರ ಬದಲು ಕಣ್ಣಲ್ಲಿ ಪೊರೆ ಬಂದವ್ರಿಗೆ ತೋರಿಸಿ ಹೇಳುವುದು ಹೇಗೆ? ಸರಿಯಾಗಿ ಕಾಣಿಸದವ್ರಿಗೆ ಹೇಳುವುದು ಕಷ್ಟದ ಕೆಲಸ. ಜಗತ್ತೇ ಮಾಯೆ ಅಂತ ಕಾಣ್ತಿರ್‍ತದೆ ಅವ್ರಿಗೆ. ನೀವಿನ್ನೂ ಸಣ್ಣ ಪ್ರಾಯದವರು. ಆದ್ರಿಂದ ನಿಮ್ಮ ಕಣ್ಣಿಗೆ ಪೊರೆ ಬಂದಿಲ್ಲ ಅಂತ ಎಣಿಸಿಕೊಂಡಿದ್ದೇನೆ ಸರಿಯಾ?"

"ಸರಿ"

"ಹಾಗಾದ್ರೆ ಹೇಳ್ತೇನೆ. ಮುಸ್ಲಿಂ ಮನಸ್ಸು? ಏನದು, ಮುಸ್ಲಿಂ ಮನಸ್ಸಂದ್ರೆ? ಅದಕ್ಕಿಂತ ಮೊದಲು ಇನ್ನೊಂದು ವಿಚಾರ ಹೇಳ್ಬೇಕಾಗಿದೆ. ಯಾಕಂದ್ರೆ, ಮೊನ್ನೆ ಒಂದು ದಿವ್ಸ, ಯಾವಾಗದು? ಯುಗಾದಿ ಮುಗಿದ ಎರಡ್ಮೂರು ದಿವ್ಸ ಆಗಿತ್ತೂಂತ ಕಾಣ್ತದೆ. ತಾರೀಕು ಹದಿನಾರೋ, ಹದಿನೇಳೋ ಇರ್‍ಬೇಕು. ಬೆಂಗ್ಳೂರಿನಿಂದ ಒಬ್ಬ ಫೇಮಸ್ ಉಪಸಂಪಾದಕರು ಬಂದಿದ್ರು. ಅವ್ರ ಹೆಸರು ಹೇಳುವುದಿಲ್ಲ. ಅವ್ರು ಬಂದವ್ರು ಕೇಳಿದ್ದೆಂತದು ಗೊತ್ತುಂಟಾ? 'ಮುಸ್ಲಿಂ ಹುಡುಗಿಯೊಬ್ಳು ನಿಮ್ಮ ಒಬ್ನೇ ಮಗನನ್ನು ಲವ್ ಮಾಡಿ, ಮದುವೆಯಾಗಿ, ದುಬೈಗೆ ಕರ್‍ಕೊಂಡು ಹೋದದ್ರಿಂದಾಗಿ ನೀವು ಮುಸ್ಲಿಂ ದ್ವೇಷಿಗಳಾಗಿದಿರಿ ಅಂತ ಕೇಳಿದೆ; ಅದು ಸತ್ಯವಾ?"-ಹಾಗೆ ಕೇಳಿದ. ಅದೊಂದು ಪ್ರಶ್ನೆಯಾ? ಹೇಳಿ, ಅದೊಂದು ಕೇಳಬಹುದಾದ ಪ್ರಶ್ನೆಯಾ?"

ಕೊಂಚ ತಬ್ಬಿಬ್ಬಾದರೂ, ತೋರಿಸಿಕೊಳ್ಳದೆ ಹೇಳಿದೆ- "ಅಲ್ಲ ಸಾರ್"

"ಅವ್ನಿಗೆ ಹೇಳಿದೆ, ನೋಡಪ್ಪಾ, ನಾನು ಯುನಿವರ್ಸಿಟಿಯಲ್ಲಿ ಮೂವತ್ತಾರು ವರ್ಷ ಪಾಠ ಮಾಡಿದ್ದವನು. ಯಾವುದೇ ಜಾತಿ, ಧರ್ಮ, ಗಂಡು, ಹೆಣ್ಣು ಭೇದ-ಭಾವ ಇಲ್ದೆ ಕಲಿಸಿದ್ದೇನೆ. ವಿದ್ಯಾರ್ಥಿ ಹಿಂದು ಆಗಿರ್ಲಿ, ಮುಸ್ಲಿಂ ಆಗಿರ್ಲಿ, ಕ್ರಿಶ್ಚಿಯನ್ ಆಗಿರ್ಲಿ, ಯಾರೇ ಆಗಿರ್ಲಿ ಎಲ್ರಿಗೂ ಒಂದೇ ಪಾಠ ಮಾಡ್ತಾ ಇದ್ದೋನು. ಹಾಗಿದ್ಮೇಲೆ ಅನ್ಯ ಧರ್ಮೀಯರ ಮೇಲೆ ನನ್ನಲ್ಲಿ ದ್ವೇಷ ಹೇಗೆ ಸಾಧ್ಯ?"

"ಅವನೇನು ಹೇಳಿದ?"

"ಏನು ಹೇಳಿಯಾನು? ಅವ್ನಿಗೆ ಆ ಪ್ರಶ್ನೆಯ ಮೇಲೆ ನಂಬಿಕೆಯಿಲ್ಲ. ಇಲ್ಲಿ ನಂಬಿಕೆ ಮುಖ್ಯ. ಅದಿಲ್ಲದಿದ್ರೆ ಜಗತ್ತೇ ಇಲ್ಲ. ನಾನವನಿಗೆ ಇನ್ನೂ ಹೇಳಿದೆ. ಎಲ್ಲಾ ಧರ್ಮಗಳ ಗುರಿ ಒಂದೇ. ಮಾನವನ ಉನ್ನತಿ. ಮಾನವತ್ವವನ್ನು ದೇವತ್ವದ ಕಡೆಗೆ ತಲುಪಿಸುವುದು. ಅದನ್ನು ನೀವು ಕೂಡಾ ಅರ್ಥಮಾಡಿಕೊಳ್ಳಬೇಕು"

"ಸರಿ"

"Short story- The Sunay Indian - Kannadaಮನುಷ್ಯ ಅಂತ ಆದ್ಮೇಲೆ ಎಲ್ರಿಗೂ ಒಂದು ದೇಹ, ಒಂದು ಮನಸ್ಸು ಉಂಟು. ಎಲ್ರಿಗೂ ಎರಡು ಕಾಲು, ಒಂದು ತಲೆ, ಎರಡು ಕೈ, ಒಂದು ನಾಲಿಗೆ-ಹೀಗೆ ಅವೆಲ್ಲಾ ಎಲ್ರಿಗೂ ಒಂದೇ. ಆದ್ರೆ ಮನಸ್ಸು? ಅದು ಮಾತ್ರ ಪೂರ್ತಿ ಬೇರೆ ಬೇರೆ. ಕೆಲವ್ರಲ್ಲಿ ಅದು ಕಲ್ಲಿನ ಹಾಗೇ ಕಠೋರ. ಇನ್ನೂ ಕೆಲವ್ರಲ್ಲಿ ಚೂರಿಯ ಹಾಗೆ ಇರಿತ. ಕ್ರೂರ ಅಂತ್ಲೂ ಹೇಳ್ಬಹುದು. ಮತ್ತೂ ಕೆಲವ್ರಲ್ಲಿ ಅದು ತುಂಬಾ ಮೃದು. ಕೆಲವು ಮನಸ್ಸು ಹೊಲಸು, ಕೆಲವ್ರದ್ದು ಸೊಗಸು. ಅದು ವಾಸ್ತವ, ಪ್ರಕೃತಿ. ಅದನ್ನು ತಿಳ್ಕೊಂಡವ್ರಿಗೆ ಅಂಥ ಪ್ರಶ್ನೆ ಹಾಕುವ ಅಗತ್ಯ ಇರುವುದಿಲ್ಲ. ನನ್ನ ಒಬ್ನೇ ಮಗನನ್ನು ಒಂದು ಮುಸ್ಲಿಂ ಹುಡುಗಿ ಕಿಡ್ನಾಪ್ ಮಾಡಿದ್ದಕ್ಕೂ, ನನಗೆ ಪ್ರಕೃತಿ ಕೊಟ್ಟ ಮನಸ್ಸಿಗೂ ಯಾವ್ದೇ ಸಂಬಂಧ ಇಲ್ಲ, ಅಂತ ಆ ಮನುಷ್ಯನಿಗೆ ಅರ್ಥ ಆಗ್ಲಿಲ್ಲ ಅಷ್ಟೇ. ಇದೆಲ್ಲಾ ಯಾಕೆ ಈಗ ಹೇಳ್ತಿದ್ದೇನಂದ್ರೇ.. ನೀವೂ ಈ ತರ ಪ್ರ್ರಿಜುಡೀಸ್ ಇಟ್ಕೊಂಡು ಪ್ರಶ್ನೆ ಕೇಳಿದ್ದಾಗಿದ್ರೆ ಅದಕ್ಕೆ ಉತ್ತರ ಬೇರೆ ಉಂಟು. ಹಾಗಿರಲಾರದು ಅಂತ ಅಂದುಕೊಂಡಿದ್ದೇನೆ. ನನ್ನ ಮಗ ಒಳ್ಳೆ ಹುಡ್ಗ. ರಿಯಲೀ ಎ ನೈಸ್ ಜಂಟಲ್‌ಮ್ಯಾನ್. ಕಂಪ್ಯೂಟರ್ ಸೈನ್ಸ್ ಬಿಇನಲೂ, ಎಂಇನಲ್ಲೂ ರ್‍ಯಾಂಕ್ ಸ್ಟೂಡೆಂಟ್. ಎಲ್‌ಪಿ ಕಂಪನಿಯಲ್ಲಿ ಒಳ್ಳೆ ಪೊಸಿಶನ್ ಇತ್ತು. ವೆರಿ ಪ್ಲೆಸೆಂಟ್ ಬಾಯ್. ಅಂತಹ ಐಸ್‌ಬ್ಲಾಕ್‌ನಂತ ಹುಡ್ಗನಿಗೆ ಆ ಬೆಂಕಿಯಂತಾ ಹುಡ್ಗಿ ಹೇಗೆ ಗಂಟುಬಿದ್ಳು? ಆ ಶಿವನೇ ಬಲ್ಲ"

ಫ್ಯಾನಿನ ಸದ್ದು ಸ್ಪಷ್ಟವಾಯ್ತು. ಸೀಲಿಂಗ್‌ನುದ್ದಕ್ಕೂ ನೀರ ಕುಂದುಕಲೆಗಳು. ಎದುರಿನ ಬುಕ್‌ಶೆಲ್ಫಿನ ಮೇಲೆ ಧೂಳು, ಜೇಡರ ಬಲೆ, ಟೀವಿಯ ಮೇಲಿದ್ದ ಫೋಟೋದ ಮಹಿಳೆ, ತೀರಿಕೊಂಡ ಅವರ ಹೆಂಡತಿಯದ್ದಾಗಿರಬೇಕು ಎಂದುಕೊಂಡೆ. ನೋಟ್‌ಬುಕ್‌ನಿಂದ ತಲೆಯೆತ್ತಿ ಕೇಳಿದೆ- "ಅವರಿಬ್ರ ಸಂಬಂಧ ನಿಮ್ಗೆ ಆರಂಭದಲ್ಲಿ..."

ನನ್ನ ಪ್ರಶ್ನೆ ಮುಗಿಯುವ ಮೊದಲೇ ಅವರು ಹೇಳಿದರು- "ಇಲ್ಲಪ್ಪಾ, ನನ್ಗೆ ಅದ್ರ ಬಗ್ಗೆ ಏನೂ ಗೊತ್ತಿರ್ಲಿಲ್ಲ. ಗೊತ್ತಾದಾಗ ಇಟ್ ವಾಸ್ ಟೂ ಲೇಟ್. ಹೋದ ವರ್ಷ ಫೆಬ್ರವರಿ ನೈಂತ್ ಅಥವಾ ಟೆಂಥ್ ಇರ್‍ಬೇಕು. ನಾನು ಪೇಪರ್ ಓದ್ತಾ ಕೂತಿದ್ದೆ, ಇದೇ ಜಾಗದಲ್ಲಿ. ನೀವೀಗ ಕೂತ್ಕೊಂಡಿದ್ದೀರಲ್ವಾ? ಅಲ್ಲಿ ಗೌತಮ ಕೂತ್ಕೊಂಡಿದ್ದ. ಯಾವ್ದೇ ಪೀಠಿಕೆ ಇಲ್ದೇ ಹೇಳಿದ- "ಡ್ಯಾಡಿ, ಐ ಹ್ಯಾವ್ ಡಿಸೈಡೆಡ್ ಟು ಮ್ಯಾರಿ ಆಯಿಷಾ". "ಆಯಿಷಾ! ಅದು ಮುಸ್ಲಿಂ ಹೆಸ್ರಲ್ವಾ?" ನಾನು ಹಾಗೇ ಕೇಳಿದೆ. "ಯಸ್, ಶಿ ಈಸ್ ಫ್ರಮ್ ಕೇರಳ. ಕೊಟ್ಟಾಯಂನಲ್ಲಿ ಅವ್ರ ಮನೆ" ಅಂತ ಹೇಳಿದ. ನನ್ಗೆ ಶಾಕ್! ನಾನು ಸ್ವಲ್ಪ ಜೋರಾಗಿಯೇ ಹೇಳಿದೆ-"ಶಿ ಈಸ್ ಎ ಮುಸ್ಲಿಂ". ಅವನು ಅಷ್ಟೇ ಜೋರಾಗಿ ಹೇಳಿದ- "ನೋ ಡ್ಯಾಡಿ, ಯು ಆರ್ ರಾಂಗ್. ಶಿ ಈಸ್ ಎ ಗರ್ಲ್". ನನ್ಗೆ ವಿಪರೀತ ಸಿಟ್ಟು ಬಂತು. "ವಾಟ್ ಡು ಯು ಮೀನ್? ಶಿ ಈಸ್ ಎ ಮುಸ್ಲಿಂ. ನೀನು ಮುಸ್ಲಿಂ ಹುಡುಗಿಯನ್ನು ಮದುವೆ ಆಗ್ಲಿಕ್ಕೆ ಸಾಧ್ಯವಿಲ್ಲ. ಇಟ್ ಈಸ್ ಇಂಪಾಸಿಬಲ್" -ಹಾಗೇ ಹೇಳಿದೆ. ಅದಕ್ಕೆ ಹೇಳಿದ- "ನಾನು ಮದ್ವೆ ಆಗುವುದು ಒಂದು ಹುಡುಗಿಯನ್ನು. ಜಾತಿ- ಧರ್ಮ ಎಲ್ಲಾ ನನ್ಗೆ ಸಂಬಂಧ ಇರದ ವಿಷ್ಯ". ನಾನು ಕೇಳಿದೆ- "ಸಂಬಂಧ ಇಲ್ಲ? ಏನು ಹಾಗಂದ್ರೆ? ನೀನು ಬ್ರಾಹ್ಮಣ. ಅವ್ಳು ಮುಸ್ಲಿಂ. ಟೆರ್ರೆರಿಸ್ಟು ಧರ್ಮಕ್ಕೆ ಸೇರಿದವ್ಳು ಅವ್ಳು". ಅದಕ್ಕೆ ಅವ್ನು ಕೂಲಾಗಿ- "ನೀವೊಬ್ರು ಹಿಂದೂ ಅಂತ ನಂಬಿಕೊಂಡ ಮಾತ್ರಕ್ಕೆ ಹಿಂದೂ ಅಲ್ಲದವ್ರೆಲ್ಲಾ ಟೆರ್ರೆರಿಸ್ಟು ಆಗುವುದಿಲ್ಲ. ಅಂಥಾ ಅಭಿಪ್ರಾಯದವ್ರು ನನ್ನ ತಂದೆ ಅಂತ ಹೇಳ್ಳಿಕ್ಕೆ ನನ್ಗೆ ಶೇಮ್ ಆಗ್ತದೆ". ಆಗ ನಾನು ಹೇಳಿದೆ-

"ನಿಂಗೆಷ್ಟು ನಾಚ್ಕೆಯಾಗ್ತದೋ ನನ್ಗೆ ಅದ್ರ ನೂರು ಪಾಲು. ಒಂದು ಮುಸ್ಲಿಂ ಹುಡುಗಿಯ ಗಾಳಕ್ಕೆ ಬೀಳುವಷ್ಟು ಮೂರ್ಖ ಮಗ ನನ್ಗಿದ್ದಾನಲ್ಲಾ ಅಂತ, ಗೊತ್ತಾಯ್ತಾ?!" ಅದಕ್ಕೆ ಹೇಳಿದ- 'ಯಾರೂ ಯಾರಿಗೂ ಗಾಳ ಹಾಕ್ಲಿಲ್ಲ. ನಾನು ಮೀನೂ ಅಲ್ಲ, ಮೀನುಗಾರನೂ ಅಲ್ಲ. ಅದೆಲ್ಲಾ ನಿಮ್ದು ಭ್ರಮೆ'. ನನ್ಗೆ ಇನ್ನಷ್ಟು ಸಿಟ್ಟು ಬಂತು. ನಾನು ಹೇಳಿದೆ- 'ಭ್ರಮೆ ನಂಗೋ ನಿಂಗೋ ಅಂತ ನಿಂಗೇ ಗೊತ್ತಾಗ್ತದೆ. ಅವ್ಳು ನಿನ್ನನ್ನು ಮಂಕು ಮಾಡಿದ್ದಾಳೆ. ಅವ್ಳದ್ದು ವಿಶ್ವಾಸಕ್ಕೆ ಯೋಗ್ಯ ಅಲ್ಲದ ಧರ್ಮಕ್ಕೆ ಸೇರಿದ ಮನಸ್ಸು. ತಲೆತಲಾಂತರದಿಂದ ಬಂದದ್ದು. ಅದು ಜೀನ್‌ನಲ್ಲೇ ಉಂಟು; ಕ್ರೌರ್ಯ, ವಂಚನೆ, ದೌರ್ಜನ್ಯ, ಎಲ್ಲಾ...' ನಾನಿನ್ನೂ ಹೇಳುವವನಿದ್ದೆ. ಆದ್ರೆ ಅವ ಪಟ್ಟಂತ ಹೇಳಿದ 'ಸ್ಟಾಪ್ ಇಟ್. ದಟ್ ಈಸ್ ಇನಫ್. ಐ ಯ್ಯಾಮ್ ಲೀವಿಂಗ್.' ಎಲ್ಲಿಗೆ? ಅಂತ ಕೇಳಿದೆ. "ಎಲ್ಲಿಗಾದ್ರೂ ಸರಿ. ನಿಮ್ಮಿಂದ ಎಷ್ಟು ದೂರ ಇರ್ಲಿಕ್ಕೆ ಸಾಧ್ಯವೋ ಅಷ್ಟು ದೂರ" ಹಾಗೆ ಹೇಳಿ ಹೊರಟೇ ಬಿಟ್ಟ. "ಹಾಗೇ ಹೋದವನದ್ದು ಪತ್ತೆಯೇ ಇಲ್ಲ. ಫೆಬ್ರವರಿಗೆ ಒಂದು ವರ್ಷ ಆಯ್ತು. ಒಂದೆರಡು ತಿಂಗ್ಳ ಹಿಂದೆ ಯಾರೋ ಹೇಳಿದ್ರು, ಆ ಹುಡ್ಗಿಯನ್ನೇ ಮದ್ವೆಯಾಗಿ ಈಗ ಇಬ್ರು ದುಬೈಲ್ಲಿದ್ದಾರಂತೆ. ಇರ್ಲಿ, ನಮ್ಮ ಸೊಗಸಾದ ಹಿಂದೂ ಮನಸ್ಸಿಗಿಂತ ಆ ಮುಸ್ಲಿಂ ಮನಸ್ಸು ಎಷ್ಟು ಕೆಟ್ಟದಾಗಿರ್ತದೆ ಅಂತ ಅವನಿಗೆ ಖಂಡಿತಾ ಗೊತ್ತಾಗ್ತದೆ. ಆಗಿಯೇ ಆಗ್ತದೆ."

"ಹಾಗಾದ್ರೆ, ಈ ಮುಸ್ಲಿಂ ಮನಸ್ಸು ಅಂತ ಒಂದು ಉಂಟಾ?"

"ಉಂಟು, ಖಂಡಿತಾ ಉಂಟು. ನಾನು ಸಾಕಷ್ಟು ಸಂಶೋಧನೆ ಮಾಡಿದ್ದೇನೆ. ಬಹಳಷ್ಟು ಚರಿತ್ರೆ ಪುಸ್ತಕ ಓದಿದ್ದೇನೆ. ನೂರಾರು ವರ್ಷಗಳ ಹಿಂದೆಯೇ ಚೈನೀಸರು ಚೆಂಗಿಸ್‌ಖಾನನ ಕ್ರೌರ್ಯ ನೋಡಿ, ಮುಸ್ಲಿಂ ಮನಸ್ಸು ಯಾವ ರೀತಿ ಅಂತ ಅರಿವು ಮಾಡಿಸಿಕೊಂಡಿದ್ದಾರೆ. ಆದ್ರೆ ನಮ್ಮ ಹಿಂದೂ ಮನಸ್ಸು ಎಲ್ಲವನ್ನೂ ಸಹಿಸಿಕೊಳ್ಳುವ ಮನಸ್ಸು. ಆದ್ರಿಂದ ಅದು ಕುರುಡಾಗಿದೆ. ಅದನ್ನು ತೆರೆಸುವುದಷ್ಟೇ ನನ್ನ ಗುರಿ. ಅದನ್ನೇ ನಾನು ಮಾಡ್ತಾ ಇರುವುದು"

"ಅದಕ್ಕೇನು ಮಾಡ್ತಿದ್ದೀರಿ ಸಾರ್?"

"ನನ್ನಿಂದೇನು ಮಾಡ್ಲಿಕ್ಕೆ ಸಾಧ್ಯವೋ ಅದನ್ನು. ನನ್ನನ್ನೆಲ್ಲಿಗೆ ಕರೀತಾರೋ ಅಲ್ಲಿಗೆ ಹೋಗ್ತೇನೆ. ಮುಸ್ಲಿಂ ಮನಸ್ಸು ಯಾವ ತರದ್ದು ಅಂತ ವಿವರಿಸ್ತೇನೆ. ಅದು ಟೆರ್ರೆರಿಸ್ಟು ಮನಸ್ಸು. ಗೊಂದಲದ ಮನಸ್ಸು. ವಂಚನೆಯ ಮನಸ್ಸು. ದೇಶಾಭಿಮಾನ ಇರದ ಮನಸ್ಸು. ಇದು, ಪಾಂಡಿತ್ಯ ಹಾಗೂ ಸಂಶೋಧನೆಯಿಂದ ಮಾಡಿದ ತೀರ್ಮಾನ. ಈಗ್ಲೂ ನನ್ನ ಸಂಶೋಧನೆ ಮುಂದುವರೀತಾ ಉಂಟು. ಆದ್ರೆ ಬಹಳ ಕಷ್ಟ. ದೇಹಕ್ಕೆ ನಿತ್ರಾಣ ಬಂದಿದೆ. ಬಿಪಿ, ಶುಗರ್ ಈ ಎಲ್ಲಾ ಪ್ರಾಬ್ಲೆಮ್ ಉಂಟು. ಕಣ್ಣು, ಕಿವಿ ಎಲ್ಲಾ ಮೊದ್ಲಿನ ಹಾಗಿಲ್ಲ. ಆದ್ರೆ ತಲೆ ಮಾತ್ರ ಹಿಂದಿನ ಹಾಗೆ ಚುರುಕು. ಆದದ್ರಿಂದ ಎಲ್ಲವೂ ಸ್ಪಷ್ಟವಾಗಿ ಕಾಣ್ತದೆ. ಆಚೀಚೆ ಓಡಾಟ ಕಷ್ಟ. ದಿನದ ಹೆಚ್ಚಿನ ಸಮಯ ಇಲ್ಲೇ ಕಳೀತೇನೆ. ಇದೇ ಕುರ್ಚಿಯಲ್ಲಿ. ಇಲ್ಲಿಂದ ಈ ಕಡೆ ತಿರುಗಿದ್ರೆ ಸೆಕೆಂಡ್ ಕ್ರಾಸ್‌ನಲ್ಲಿ ನಡೆಯುವುದೆಲ್ಲಾ ಕಾಣ್ತದೆ. ಮುಂದೆ ಮುಖಮಾಡಿ ಕೂತ್ರೆ ನೈಂತ್ ಮೈನ್ ಉದ್ದಕ್ಕೂ ನೋಡ್ಲಿಕ್ಕಾಗ್ತದೆ. ಕೂತಲ್ಲಿಂದ್ಲೇ ನನಗೆ ಯಾವ್ದು ಹಿಂದೂ ಮನಸ್ಸು, ಯಾವ್ದು ಮುಸ್ಲಿಂ ಮನಸ್ಸು ಅಂತ ಗೊತ್ತಾಗ್ತದೆ. ಸೈಕಲಲ್ಲಿ ಬರುವವರು, ಟೂವೀಲರಲ್ಲಿ ಬರುವವರು, ಮಾರ್ಗದಲ್ಲಿ ಆಚೀಚೆ ಓಡಾಡುವವರು, ಕೆಲಸರ್ತಿ ಬಸ್ಸಲ್ಲಿ ಕೂತವರು, ಅವರೆಲ್ರ ಮನಸ್ಸು ಯಾವ ತರದ್ದು ಅಂತ ಹೀಗೆ ಕೂತಲ್ಲಿಂದ್ಲೇ ನಾನು ಹೇಳ್ತೇನೆ. ಅದನ್ನೆಲ್ಲಾ ಪತ್ತೆ ಹಚ್ಲಿಕ್ಕೆ ಸ್ವಲ್ಪ ಪ್ರಾಕ್ಟೀಸು ಬೇಕು. ಮನುಷ್ಯನ ಒಳಮನಸ್ಸನ್ನು ಆತನ ದೈಹಿಕ ಲಕ್ಷಣಗಳಿಂದ ಗುರುತಿಸ್ಲಿಕ್ಕೆ ಕೆಲವು ನಿಯಮಗಳುಂಟು. ಅವನ್ನು ಅಭ್ಯಾಸ ಮಾಡ್ಬೇಕು. ಹಾಗೇ ಪ್ರಾಕ್ಟೀಸು ಮಾಡಿದ್ರೆ ಯಾರೂ ಕೂಡ ಅದ್ರಲ್ಲಿ ಎಕ್ಸ್‌ಪರ್ಟ್ ಆಗ್ಬಹುದು. ನೀವು ಕೂಡಾ."

"ಏನು ರೂಲ್ಸು ಸಾರ್?"

"ಏನು ರೂಲ್ಸಂತ ಕೇಳಿದ್ರೆ ನಾನೆಂತ ಹೇಳುವುದು? ಒಂದು ಜೀವಮಾನದಲ್ಲಿ ನಾನು ಸಂಪಾದಿಸಿದ್ದನ್ನೆಲ್ಲಾ ಒಂದೆರಡು ನಿಮಿಷದಲ್ಲಿ ವಿವರಿಸಬೇಕಂತ ಹೇಳಿದ್ರೆ ಹೇಗೆ ಸಾಧ್ಯ? ನಾಟ್ ಪಾಸಿಬಲ್. ಬೇಕಿದ್ರೆ ಉದಾಹರಣೆ ಕೊಟ್ಟು ತೋರಿಸ್ತೇನೆ. ತೋರಿಸ್ಬೇಕಾ?"

"ತೋರ್‍ಸಿ ಸಾರ್"

"ಹಾಗಾದ್ರೆ ಸ್ವಲ್ಪ ಈ ಕಡೆ ತಿರುಗಿ ಕೂತ್ಕೊಳ್ಳಿ"

ನಾನು ಸೋಫಾದಲ್ಲಿ ಅಡ್ಡಕ್ಕೆ ತಿರುಗಿದೆ. "ಈಚೆ ಇನ್ನು ಈಚೆ" ಎಂದರು. ನಾನು ಪೂರ್ತಿ ಅಡ್ಡವಾಗಿ ಕೂತ್ಕೊಂಡೆ. ಒಂದು ಕಾಲು ಕೆಳಗೆ, ಮತ್ತೊಂದು ಸೋಫಾದ ಮೇಲೆ. ಕಾಲು ನೋಯುತ್ತಿತ್ತು. ಅವರು ಹೇಳಿದರು. "ಒಂದು ಸ್ಯಾಂಪಲ್ ತೋರಿಸ್ತೇನೆ. ಗಂಟೆ ಎಷ್ಟೀಗ? ನನ್ಗೆ ವಾಚಿನ ಸಣ್ಣ ಸಂಖ್ಯೆ ಕಾಣುವುದಿಲ್ಲ"

"ಮೂರೂವರೆ"

"ಮೂರೂವರೆಯಾ? ದಟ್ ಈಸ್ ಫೈನ್. ನೋಡಿ ಅಲ್ಲಿ. ಓ ಅಲ್ಲಿ ಕಾಣ್ತದಾ? ನೈಂತ್ ಮೈನ್‌ನ ತುದಿಯಲ್ಲಿ ಪೆಟ್ರೋಲ್ ಬಂಕ್, ಕಾಣ್ತದಾ?"

ಬಾಗಿ ನೋಡಿದೆ. ಹೌದು, ಪೆಟ್ರೋಲ್ ಬಂಕ್ ದೂರದಲ್ಲಿ ಕಂಡಿತು. ಕೆಲ ನಿಮಿಷಗಳಾದುವು. ಆ ತುದಿಯಿಂದ ಯಾರೋ ಬರ್ತಿದ್ದಾರೆ. ಅವರು ಬೆರಳಿಂದ ತೋರಿಸುತ್ತಾ ಹೇಳಿದರು, "ಈಗ ನೋಡಿ. ಅಲ್ಲೊಬ್ಬ ಹಣ್ಣಿನ ಗಾಡಿ ದೂಡಿಕೊಂಡು ಬರ್ತಿದ್ದಾನೆ, ಕಾಣ್ತದಾ?"

ತಲೆಯಾಡಿಸಿದೆ. ಅವರು ಮುಂದುವರೆಸಿದರು, "ಅಲ್ಲಿಂದ ಅವನೀಗ ಸೆಕೆಂಡ್ ಕ್ರಾಸ್‌ಗೆ ತಿರುಗ್ತಿದ್ದಾನೆ, ನೋಡಿ. ನೋಡಿದ್ರಾ? ಅವನನ್ನೇ ಅಬ್ಸರ್ವ್ ಮಾಡಿ. ಒಂದು ಕೆಂಪು ಟೊಪ್ಪಿ ಹಾಕಿದ್ದಾನೆ. ಚೌಕುಳಿ ಮುಂಡು. ಅದನ್ನು ಕಾಲ್ಗಂಟಿನ ಮೇಲೆ ಎತ್ತಿಕಟ್ಟಿದ್ದಾನೆ. ಅವ್ನ ಕಾಲಿನ ಕಪ್ಪು- ಕಪ್ಪು ರೋಮ ನೋಡಿ. ಎಷ್ಟು ಅಸಹ್ಯ. ಆದ್ರೆ ಅವನಿಗೆ ಅದ್ರದ್ದು ಕೇರೇ ಇಲ್ಲ ಅಲ್ವಾ? ಯಾವುದನ್ನು ಪ್ರದರ್ಶಿಸಬೇಕು? ಯಾವುದನ್ನು ಮುಚ್ಚಿಡ್ಬೇಕು? ಅಷ್ಟೂ ತಿಳಿಯದ ಮನಸ್ಸು. ಅವ್ನ ಬೆನ್ನು ನೋಡಿ; ನೆಟ್ಟಗುಂಟಾ? ಇಲ್ಲ. ಬಲ ಬದಿಗೆ ವಾಲಿದೆ ಅಲ್ವಾ? ಕುತ್ತಿಗೆ ನೋಡಿ. ಹೇಗೆ ಕಾಣ್ತದೆ? ನೆಲಕ್ಕೆ ಬಿದ್ದ ಮಾಂಸ ಕುಕ್ಕುವ ಕಾಗೆಯ ಕುತ್ತಿಗೆ ಹಾಗೇ ಅಲ್ವಾ? ಅವ್ನ ಕಣ್ಣು ನೋಡಿ, ಬಲಕಣ್ಣು ಎಡಕಣ್ಣು ಸಮ ಉಂಟಾ? ಎಡಕಣ್ಣು ಕೋಸು. ಮತ್ತೆ ಅವ್ನ ಮುಖ ನೋಡಿ. ಒಮ್ಮೆ ಆಚೆ, ಮತ್ತೊಮ್ಮೆ ಈಚೆ. ಅದು ಸಂಶಯದ ಮನಸ್ಸು. ಒಂದು ಕಡೆ ಸ್ಥಿರ ಇಲ್ಲ. ಅವ್ನು ಬೊಬ್ಬೆ ಹಾಕಿದ್ದಾನೆ. ಕೇಳಿಸ್ತದಾ? ಪುಟ್ವಾಳೆ ಅಂತ ಹೇಳ್ತಿದ್ದಾನೆ; ಪುಟ್ವಾಳೆ, ಪುಟ್‌ಬಾಳೆ ಅಂತ ಸ್ಪಷ್ಟ ಹೇಳ್ಳಿಕ್ಕೂ ಬರುವುದಿಲ್ಲ. ನೋಡಿ, ನೋಡಿ ಈಗ ನಮ್ಮ ಮನೆ ಎದುರಿಗೇ ಬಂದ. ಬೊಬ್ಬೆ ಹಾಕುವುದನ್ನು ನಿಲ್ಲಿಸಿಬಿಡ್ತಾನೆ ನೋಡಿ. ಈಗ ನಿಲ್ಸಿ ಬಿಟ್ಟ. ಈ ಕಡೆ ಕುತ್ತಿಗೆ ತಿರುಗಿಸಿ ನೋಡ್ತಿದ್ದಾನೆ. ಆ ಕಣ್ಣನ್ನು ಇನ್ನಷ್ಟು ಕೋಸು ಮಾಡಿ ಈಚೆ ನೋಡ್ತಿದ್ದಾನೆ. ಈಗ ನೋಡಿ ಏನು ಮಾಡ್ತಿದ್ದಾನೆ? ನೋಡಿದ್ರಾ? ಉಗುಳಿದ. ನನ್ನ ಕಂಪೌಂಡ್ ಗೋಡೆಗೇ ಬೀಳುವ ಹಾಗೆ ಪಚಕ್ ಅಂತ ಉಗುಳಿದ. ನೋಡಿದ್ರಾ? ಯಾವಾಗ್ಲೂ ಹೀಗೇ ಅವ್ನು. ಬರೀ ಹೊಲಸು ಪ್ರಾಣಿ. ಎಷ್ಟು ಹೊಲಸು ಮನಸ್ಸು ನೋಡಿ ಅವಂದು! ಸರಿಯಾ ನಾನು ಹೇಳಿದ್ದು? ಅದು ಕ್ಲಾಸಿಕ್ ಮುಸ್ಲಿಂ ಮನಸ್ಸು. ದೈಹಿಕ ರೂಪ, ವ್ಯವಹಾರ, ನಡವಳಿಕೆ, ಇಂತಾ ಕೆಲವು ಲಕ್ಷಣಗಳೇ ಸಾಕು. ಯಾವುದು ಹಿಂದೂ ಮನಸ್ಸು, ಯಾವುದು ಮುಸ್ಲಿಂ ಮನಸ್ಸು ಅಂತ ಕಂಡು ಹಿಡೀಲಿಕ್ಕೆ"

ಆ ಬಡ ಹಣ್ಣು ಮಾರುವವ ಹೋಗಿಬಿಟ್ಟ. ಅವನ ಗಾಡಿಯ ಗಡಗಡ ಸದ್ದು ದೂರವಾಯ್ತು. ಸ್ವಲ್ಪ ಸಮಯದ ನಂತ್ರ ಅವರು ಹೇಳಿದ್ರು, "ನಾನು ಮಾತ್ನಾಡಿದ್ದು ಜಾಸ್ತಿಯಾಯ್ತಂತ ಕಾಣ್ತದೆ. ಹೈ ಬಿಪಿ ಉಂಟಲ್ವಾ? ಜಾಸ್ತಿ ಮಾತ್ನಾಡಿದ್ರೆ

ಕೆಲಸರ್ತಿ ಕಣ್ಣು ಕತ್ತಲೆ ಬಂದ ಹಾಗಾಗ್ತದೆ" ಅವರ ತಲೆ ಮುಂದೆ ವಾಲಿತ್ತು. ಎದ್ದು ನಿಲ್ಲುತ್ತಾ ನಾನು ಹೇಳಿದೆ. "ಸರ್. ನೀವು ಮಲಕ್ಕೊಳ್ಳಿ." ಸೊಂಟಕ್ಕೆ ಕೈಕೊಟ್ಟು ಎದ್ದು ನಿಲ್ಲುತ್ತಾ ಹೇಳಿದರು- "ನಿಮ್ಗೆ ಅತಿಥಿ ಸತ್ಕಾರ ಮಾಡ್ಲಿಕ್ಕೆ...." ಅವರನ್ನು ತಡೆಯುತ್ತಾ ಹೇಳಿದೆ. "ಅದೇನೂ ಬೇಡ ಸಾರ್.. ಮಲಕ್ಕೊಳ್ಳಿ ನೀವು" ನಾನು ಬಾಗಿಲಿಗೆ ಹೆಜ್ಜೆಹಾಕಿದೆ. "ಮಲಗ್ತೇನೆ..

ಮಲಗ್ತೇನೆ.. ಒಂದು ವಿಷ್ಯ" ನಾನು ಅವರನ್ನೇ ನೋಡಿದೆ. ಸ್ವಲ್ಪ ತಗ್ಗಿದ ಸ್ವರದಲ್ಲಿ ಕೇಳಿದರು, "ನಿಮ್ಗೇನಾದ್ರೂ ನಮ್ಮ ಗೌತಮನ ಸುದ್ದಿ ಗೊತ್ತುಂಟಾ?" ಗೌತಮ? ಗೌತಮ ಅವರ ಮಗನ ಹೆಸರೆಂದು ನೆನಪಾಯ್ತು. "ಇಲ್ಲ ಸಾರ್" ಬೇಸರದಿಂದಲೇ ಹೇಳಿದೆ. ನಿರಾಶೆ ಹೊತ್ತ ಸ್ವರದಲ್ಲಿ ಹೇಳಿದರು. "ಇಲ್ವಾ. ಯಾರಿಗೂ ಗೊತ್ತಿರುವ ಹಾಗಿಲ್ಲ. ಅವ್ನು ಅಲ್ಲಿ ದುಬೈನಲ್ಲಿ ಕ್ಷೇಮದಿಂದ ಇದ್ರೆ ಸಾಕು" ಮನೆಯ ಹೊರಗೆ ಬಂದಿದ್ದೆ. "ಖಂಡಿತಾ ಕ್ಷೇಮದಿಂದ ಇದ್ದಾನೆ" ಎಂದು ಹೇಳ್ಬೇಕೆಂದು ತಿರುಗುತ್ತಿದ್ದಂತೆ ಬಾಗಿಲು ಟಪ್ಪಂತ ಮುಚ್ಚಿಕೊಂಡಿತು...

ಟಿಎಸ್‌ಐ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .