ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಮುಖಪುಟ ಲೇಖನ
ಮೇ 15ರಂದು ನಡೆದ ಕೊಲೆ

..

ಡಜನ್ ಗಟ್ಟಲೆ ಭಾರತೀಯರು- ಹೆಣ್ಣು/ಗಂಡು ಮಕ್ಕಳು, ಗಂಡಂದಿರು, ತಾಯಂದಿರು, ಸ್ನೇಹಿತರು ಸೇರಿದಂತೆ ಹಲವು ಮಂದಿ ದೇಶದಾದ್ಯಂತ 2008, ಮೇ 15ರ ಕರಾಳ ದಿನದಂದೇ ಇಹಲೋಕ ತ್ಯಜಿಸಿದ್ದರು. ಹಾಗಿದ್ದರೂ ಭಾರತದ ಮಧ್ಯಮ ವರ್ಗ ಹಾಗೂ ಮಾಧ್ಯಮಗಳಿಗೆ ಈ ಭೀಕರ ಕೊಲೆಗಳು ಮಹತ್ವದ ವಿಚಾರವಾಗಿ ಪರಿಣಮಿಸಲೇ ಇಲ್ಲ. ಎಲ್ಲಿ ನೋಡಿದರಲ್ಲಿ ಆರುಷಿ ಹಾಗೂ ಆ ಕುರಿತಾದ ಅತಿರಂಜಿತ ವರದಿಗಳೇ ಬಿತ್ತರವಾಗುತ್ತಿದ್ದವು. ನಿರ್ಲಕ್ಷ್ಯಕ್ಕೊಳಗಾದ ಆ ಅಪರಿಚಿತರ ಮನೆ-ಮಂದಿಯನ್ನು ಭೇಟಿ ಮಾಡಿದ ಟಿಎಸ್‌ಐ ಮಾಧ್ಯಮಗಳ ಸುದ್ದಿ ಪ್ರಾಶಸ್ತ್ಯದ ರೀತಿ, ವಿಕೃತ ಮನೋಭಾವ ಮತ್ತು ಪೊಲೀಸ್ ಪಡೆಯ ಪೂರ್ವಗ್ರಹ ಪೀಡಿತ ವರ್ತನೆ ಕುರಿತು ಬೆಳಕು ಚೆಲ್ಲಿದೆ

 

ದೆಹಲಿಯ ಸೀಮಾಪುರಿ ಕೊಳಚೆ ಪ್ರದೇಶದಲ್ಲಿನ ಅಜೀಜ್ ಮತ್ತು ಆತನ ನೆರೆಹೊರೆಯವರಿಗೆ ಅಂದು ಮಹದಚ್ಚರಿ. ಜನಜಂಗುಳಿಯ, ಕಸದ ರಾಶಿಯ, ಕೊಳಕು ತುಂಬಿದ ಆ ಪ್ರದೇಶಕ್ಕೆ ಪತ್ರಕರ್ತರೊಬ್ಬರು ಭೇಟಿ ನೀಡಿದ್ದನ್ನು ಅವರೆಂದಿಗೂ ಕಂಡೂ ಇರಲಿಲ್ಲ, ಕೇಳಿಯೂ ಇರಲಿಲ್ಲ. ಅಷ್ಟೇ ಅಲ್ಲ, ಅಜೀಜನ 6 ವರ್ಷದ ಮಗಳು ಶಬನಮ್ ಕೊಲೆ ಮತ್ತು ಅಂತ್ಯಸಂಸ್ಕಾರದ ಕುರಿತು ಪ್ರಶ್ನಿಸಿದಾಗಂತೂ ಅವರು ಮತ್ತಷ್ಟು ಅಚ್ಚರಿ ಪಟ್ಟರು. ಹಳೆ ದೆಹಲಿಯ ಪ್ಯಾಕಿಂಗ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುವ ಅಜೀಜನಂತೂ ಶಬನಮ್ ಭಾವಚಿತ್ರ ನೋಡುತ್ತಾ ಎದೆ ಬಡಿದುಕೊಂಡು ಅಳತೊಡಗಿದ. ಆಲ್ಬಂನಿಂದ ಆಕೆಯ ಒಂದು ಭಾವಚಿತ್ರವನ್ನು ತೆಗೆದು ಗೋಡೆಗೆ ಅಂಟಿಸಿ ಪ್ರತಿದಿನವೂ ಅದನ್ನು ನೋಡುತ್ತಾ ಕಂಬನಿ ಮಿಡಿಯಬೇಕೆಂದು ಅವನಿಗೇನೋ ಆಸೆ. ಆದರೆ ಆತನ ಧರ್ಮದಲ್ಲಿ ಇಂತಹುದಕ್ಕೆ ಅವಕಾಶವಿಲ್ಲ.

ಬೆಂಗಳೂರಿನ ನಿವಾಸಿ ಮಂಜುಳಾ ಬಳಿ ಟಿಎಸ್‌ಐ ವರದಿಗಾರರು ಲೋಕೇಶನ ಕೊಲೆಯ ಬಗ್ಗೆ ಮಾತು ತೆಗೆದಾಗ ಆಕೆಯೂ ಅಳತೊಡಗಿದಳು. ಆಕೆ ವಿಠ್ಠಲ್ ನಗರದ ಬಳಿ ಗಾರ್ಮೆಂಟ್ಸ್‌ವೊಂದರಲ್ಲಿ ಕೆಲಸ ಮಾಡುತ್ತಾಳೆ. ಆಟೋ ರಿಕ್ಷಾ ಓಡಿಸುತ್ತಿದ್ದ ಆಕೆಯ ತಮ್ಮ ಲೋಕೇಶನನ್ನು ಆಕೆಯ ಪತಿಯೇ ಕೊಲೆ ಮಾಡಿದ್ದ. ದುಶ್ಚಟಗಳ ದಾಸನಾಗಿದ್ದ ಲೋಕೇಶ ಸದಾ ಹಣಕ್ಕಾಗಿ ಅಕ್ಕನನ್ನು ಪೀಡಿಸುತ್ತಿದ್ದ. ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಈಗ ತಮ್ಮ ಸತ್ತ, ಗಂಡ ಕಂಬಿಯ ಹಿಂದೆ. ಇದು ಆಕೆಯ ದುಸ್ಥಿತಿ.

ಅದು ಕೋಲ್ಕತ್ತಾದ ದೊಡ್ಡ ಬಿಲ್ಡಿಂಗ್‌ವೊಂದರಲ್ಲಿದ್ದ ಅಪೂರ್ವ ರಾಯ್ ಚೌಧರಿ ಅವರ ಮನೆ. ನೋವು ಮತ್ತು ಭೀತಿಯ ವಾಸನೆ ಹೊಸಲು ದಾಟುತ್ತಿದ್ದಂತೆಯೇ ಗಾಢವಾಗಿ ಬಡಿಯತೊಡಗಿತು. ಆತನ ಪತ್ನಿ ಶಾಂತಿಯಂತೂ ಟಿಎಸ್‌ಐ ಅಥವಾ ಮತ್ತಾವುದೇ ಮಾಧ್ಯಮದ ಜೊತೆ ಮಾತನಾಡುವ ಆಸಕ್ತಿ ಹೊಂದಿರಲಿಲ್ಲ. ಆಕೆಯ ಪುತ್ರ ರಾಜರ್ಷಿ ಕೂಡಾ ಮಾತನಾಡಲು ನಿರಾಕರಿಸಿದ. ಲುಮ್‌ಟೆಕ್ಸ್ ಸೆಣಬಿನ ಕಾರ್ಖಾನೆಯ ಸಿಬ್ಬಂದಿ ಮೇಲ್ವಿಚಾರಕನಾಗಿದ್ದ ಅಪೂರ್ವ ಆ ಕಾರ್ಖಾನೆಯ ಕಾರ್ಮಿಕರಿಂದಲೇ ಕೊಲೆಯಾಗಿದ್ದ. ಶಾಂತಿ ಮತ್ತು ರಾಜರ್ಷಿಗಳಿಬ್ಬರಿಗೂ ಮಾಧ್ಯಮದ ಬಗ್ಗೆ ಒಳ್ಳೆಯ ಮಾತನಾಡಲು ಯಾವುದೇ ಕಾರಣ ಇರಲಿಲ್ಲ.

 ದೆಹಲಿ ಬಳಿಯ ಬಲ್ಲಭ್‌ಘರ್‌ನ ತೋಟದ ಮಾಲಿ ಲೇಖರಾಜ್ ಮತ್ತು ಆತನ ಪತ್ನಿ ಲಕ್ಷ್ಮಿ ಕೂಡಾ ಕೊಲೆಯಾದ ತಮ್ಮ ಆರು ವರ್ಷದ ಮಗ ಮನೀಶ್‌ನ ಭಾವಚಿತ್ರ ಹಿಡಿದು ಕಂಬನಿ ಮಿಡಿಯತೊಡಗಿದರು. ಕೊಲೆಗಾರರು ಇನ್ನೂ ಪತ್ತೆಯಾಗಿಲ್ಲ. "ನನ್ನ ಹತ್ತಿರ ಸಾಕಷ್ಟು ಹಣ, ಅಧಿಕಾರ ಇದ್ದಿದ್ದರೆ ಪೊಲೀಸರು ಈ ಪ್ರಕರಣದತ್ತ ಹೆಚ್ಚು ಆಸಕ್ತಿ ತೋರಿಸುತ್ತಿದ್ದರೋ ಏನೋ? ಅಯ್ಯಾ, ಹಣವಂತರಿಗಷ್ಟೇ ನ್ಯಾಯ" ಎಂದ ಆತ ಬೇಸರದ ದನಿಯಲ್ಲಿ.

ಇನ್ನು ಹೈದರಾಬಾದ್‌ನ ಸೈದಾಪೇಟೆ ಪ್ರದೇಶದ ಲಕ್ಷ್ಮಮ್ಮ ಮತ್ತು ಆಕೆಯ ಇಬ್ಬರು ಮೊಮ್ಮಕ್ಕಳಂತೂ ಭಯ, ಆತಂಕದಿಂದ ಕುಸಿದು ಹೋದರು. ಆಕೆಯ 30 ವರ್ಷದ ಮಗಳು, ಹೈದರಾಬಾದ್ ಮುನಿಸಿಪಲ್ ಕಾರ್ಪೊರೇಷನ್ ನೌಕರಳೂ ಆದ ಜಯಮ್ಮ ಅತಿ ಭೀಕರವಾಗಿ ಕೊಲೆಯಾಗಿದ್ದಳು.

ಹೀಗೆ ಕೊಲೆಯಾಗಿ ಹೋದ ಈ ಎಲ್ಲಾ ನತದೃಷ್ಟರಲ್ಲೂ ಒಂದು ಸಾಮಾನ್ಯ ಅಂಶ ಇದೆ! ಭಾರತದ ಮಧ್ಯಮ ವರ್ಗದ ಜನರಿಗಂತೂ ಈ ಕೊಲೆಗಳ ಬಗ್ಗೆ ಅಷ್ಟೇನೂ ಗೊತ್ತಿಲ್ಲ ಬಿಡಿ. ಅವರು ಇಂಥವುಗಳ ಬಗ್ಗೆ ಅಷ್ಟು ಆಸಕ್ತರೂ ಅಲ್ಲ. ಯಾವುದೇ ರಾಷ್ಟ್ರೀಯ ಟಿವಿ ಚಾನಲ್ ಆಗಲಿ, ವೃತ್ತಪತ್ರಿಕೆಯಾಗಲೀ ಅಥವಾ ನಿಯತಕಾಲಿಕೆಗಳಾಗಲೀ ಈ ಕೊಲೆಗಳ ಬಗ್ಗೆ, ಕೊಲೆಯಾದವರ ಕುಟುಂಬಗಳ ನೋವು-ಸಂಕಟಗಳ ಬಗ್ಗೆ ಅಷ್ಟೇನೂ ಮಹತ್ವ ನೀಡಲಿಲ್ಲ. ಹೆಚ್ಚೆಂದರೆ ದಿನಪತ್ರಿಕೆಗಳ ಒಳಪುಟಗಳಲ್ಲಿ ಈ ಸುದ್ದಿಗಳ ತುಣುಕೊಂದು ಪ್ರಕಟವಾಯಿತಷ್ಟೇ. ಅಂದ ಹಾಗೆ ಕೊಲೆಯಾಗಿ ಹೋದ ಈ ಎಲ್ಲರಲ್ಲೂ ಇರುವ ಒಂದು ಸಾಮಾನ್ಯ ಅಂಶ ಎಂದರೆ: ಇವರೆಲ್ಲಾ 2008ರ ಮೇ 15ರಂದು ಕೊಲೆಯಾದವರು. ಗಮನಿಸಿ, ನೋಯ್ಡಾದ ತನ್ನ ಮನೆಯಲ್ಲಿ, ಡಾ. ರಾಜೇಶ್ ಮತ್ತು ಡಾ. ನೂಪುರ್ ತಲ್ವಾರ್ ಅವರ ಪುತ್ರಿ, 14 ವರ್ಷದ ಬಾಲಕಿ ಆರುಷಿ ತಲ್ವಾರ್ ಕೊಲೆಯಾದದ್ದು ಕೂಡಾ ಅದೇ ದಿನ!

ಶಬನಮ್ ಕೊಲೆಯಾದದ್ದು ಆಕೆಯ ಮಲತಾಯಿ ಪರ್ವೀನ್‌ಳಿಂದ; ಲೋಕೇಶ್ ಕೊನೆಯುಸಿರೆಳೆದಿದ್ದು ಆತನ ಖಾಸಾ ಭಾವ ಚಂದ್ರಶೇಖರ್‌ನಿಂದ; ಅಪೂರ್ವ ತನ್ನ ಕಾರ್ಮಿಕರಿಂದಲೇ ಇಹಲೋಕ ತ್ಯಜಿಸಿದ್ದು; ಮನೀಶ್‌ನನ್ನು ಕೊಂದವರು ಯಾರೆಂಬುದು ಇನ್ನೂ ತನಿಖೆಯಾಗಬೇಕಿದೆ; ಜಯಮ್ಮನಂತೂ ತನ್ನ ಪ್ರಿಯಕರನಿಂದಲೇ ಕೊಲೆಯಾಗಿ ಹೋದಳು. ಇನ್ನು ಸಿಬಿಐ ಹೇಳಿಕೆಯನ್ನು ನಂಬುವುದಾದರೆ ಆರುಷಿ ಕೊಲೆಯಾದದ್ದು ಆಕೆಯ ತಂದೆ ಡಾ. ರಾಜೇಶ್ ತಲ್ವಾರ್ ಬಳಿ ಕಾಂಪೌಂಡರ್ ಆಗಿದ್ದ ಕೃಷ್ಣರಾಜ್‌ನಿಂದ. ಮತ್ತೊಂದು ವಿಷಯವೆಂದರೆ ಸಿಬಿಐ ಮೂಲ ಹೇಳುವಂತೆ ಇಲ್ಲಿಯವರೆಗೆ ಕೇವಲ ತನಿಖೆಗಾಗಿಯೇ ಐದು ಕೋಟಿ ರೂ. ಖರ್ಚಾಗಿದೆ.

ಅದಿರಲಿ. ನಮ್ಮ ಗಾಸಿಪ್ ಪ್ರಿಯ ಮಧ್ಯಮ ವರ್ಗದ ಮಂದಿ ಅಥವಾ ಮಾಧ್ಯಮಗಳು ಶಬನಮ್, ಮನೀಶ್, ಲೋಕೇಶ್, ಜಯಮ್ಮ ಮತ್ತು ಅಪೂರ್ವ ಅವರ ಕೊಲೆಗಳ ಬಗ್ಗೆ ಗಮನ ಹರಿಸಬೇಕಿತ್ತೆಂದು ನಿರೀಕ್ಷಿಸುವುದು ತೀರಾ ಆಶಾವಾದವಾಗುತ್ತದೆ. ಈ ಕೊಲೆಗಳಲ್ಲಿ ಕಾಮ, ದ್ವೇಷ, ಕಿರಿಕಿರಿ, ದೊಂಬಿ ಮತ್ತು ಕ್ರೌರ್ಯ... ಮುಂತಾದ ಅಂಶಗಳಿದ್ದರೂ ಯಾವುದೇ ವ್ಯತ್ಯಾಸ ಇಲ್ಲ. ನಿಜ, ಮಧ್ಯಮ ವರ್ಗದ ಭಾರತೀಯರು ಲೈಂಗಿಕತೆ, ವದಂತಿ, ಹಗರಣ, ಗಾಸಿಪ್‌ಗಳನ್ನೆಲ್ಲಾ ಇಷ್ಟಪಡುತ್ತಾರೆ. ಆದರೆ ಸೀಮಾಪುರಿ ಎಂಬ ಕೊಳಕು ಪ್ರದೇಶದ ಮೂಲೆಯಲ್ಲಿರುವ ಶಬನಮ್ ವಿಚಾರದಲ್ಲಿ ಯಾರಿಗೆ ಆಸಕ್ತಿ ಇರುತ್ತದೆ? ಅಥವಾ ನವದೆಹಲಿಯ ಮಧ್ಯಮ ವರ್ಗದ ಗಾಸಿಪ್‌ಪ್ರಿಯರಿಗೆ ಬಲ್ಲಭ್‌ನಗರದ ಸಮೀಪವಿರುವ ಹಳ್ಳಿಯೊಂದು ಬಹುದೂರದ ಆಕಾಶಕಾಯದಂತೆ ಕಂಡರೆ ಅಚ್ಚರಿ ಇಲ್ಲ.

ಆದರೆ ಆರುಷಿಯತ್ತ ಇಂಥ ನಿರ್ಲಕ್ಷ್ಯವೇನೂ ಇರಲಿಲ್ಲ. ಆಕೆಯ ಕೊಲೆ, ನಂತರದ ತನಿಖಾ ಪ್ರಕ್ರಿಯೆ, ಆನಂತರದ ಊಹಾಪೋಹಗಳು, ಗಾಸಿಪ್ ಮತ್ತು ಸಲಹೆ-ಸೂಚನೆಗಳಂತೂ ತನ್ನದೇ ಬಗೆಯಲ್ಲಿ ಮೆರೆದಾಡಿದವು. ಈ ಘಟನೆ ಸಮಾಜ ಶಾಸ್ತ್ರದ ಮುಂದಿನ ವಿದ್ಯಾರ್ಥಿಗಳಿಗೆ ಮಧ್ಯಮ ವರ್ಗದ ಭಿನ್ನ ಮನೋಭಾವದ ಬಗೆಗಿನ ಅಧ್ಯಯನಕ್ಕೆ ಉತ್ತಮ ಉದಾಹರಣೆಯಾಗಬಲ್ಲುದು. ಇನ್ನು ಮಾಧ್ಯಮ ಸಂಶೋಧಕರಿಗೆ ಈ ಪ್ರಕರಣ: ಮಾಧ್ಯಮಗಳು ಒಂದು ಘಟನೆಯ ಹಿಂದೆ ಬೆನ್ನುಬಿದ್ದರೆ ಅದಕ್ಕೆ ಅದೆಷ್ಟು ಮಹತ್ವ ಬಂದುಬಿಡುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ನಿಲ್ಲಬಲ್ಲದು. ನಗರ ವಿಶ್ಲೇಷಕರಿಗೆ ಭಾರತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹೇಗೆ ನಾಶವಾಗುತ್ತಾ ಬರುತ್ತಿದೆ ಎಂಬುದಕ್ಕೆ ದೃಷ್ಟಾಂತವಾಗಬಲ್ಲುದು.

ಈ ಪ್ರಕರಣಗಳನ್ನೆಲ್ಲಾ ಗಮನಿಸಿದರೆ ಥಟ್ಟನೆ ಮನಸ್ಸಿಗೆ ಗೋಚರವಾಗುವ ಅಂಶವೆಂದರೆ ಶ್ರೀಮಂತರು ಮತ್ತು ಬಡವರ ನಡುವಿನ ಸ್ಪಷ್ಟ ವಿಭಜನೆ. ದೆಹಲಿ ಮತ್ತು ದೆಹಲಿ ಹೊರವಲಯದಲ್ಲಿನ ಗ್ರಾಮವೊಂದರಲ್ಲಿ ನಡೆದ ಶಬನಮ್ ಮತ್ತು ಮನೀಶ್ ಕೊಲೆಗಳು ಅತ್ಯಂತ ಹೃದಯವಿದ್ರಾವಕ, ಭೀಕರವಾಗಿದ್ದರೂ ಮಾಧ್ಯಮಗಳಲ್ಲಿ ಮಾತ್ರ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿಬಿಟ್ಟವು. ಏಕೆಂದರೆ ಈ ಇಬ್ಬರೂ ಪ್ರತಿನಿಧಿಸುತ್ತಿದ್ದ ಸಾಮಾಜಿಕ ವರ್ಗಗಳು ಗಾಸಿಪ್‌ಪ್ರಿಯ ಮಧ್ಯಮ ವರ್ಗದ ಪಾಲಿಗೆ ಅಂತಹ ಆಸಕ್ತಿದಾಯಕವೇನೂ ಅಲ್ಲ. ಬದಲಿಗೆ ಆರುಷಿ ಪ್ರಕರಣ ಇದೆಯಲ್ಲಾ ಸುದ್ದಿ, ಗಾಸಿಪ್, ಮಾಹಿತಿ, ರೋಚಕತೆ ಹೀಗೆ ಎಲ್ಲಾ ದೃಷ್ಟಿಯಿಂದಲೂ ಮಧ್ಯಮ ವರ್ಗ ಮತ್ತು ಮಾಧ್ಯಮಗಳೆರಡಕ್ಕೂ ಅತ್ಯಂತ 'ಪರ್ಫೆಕ್ಟ್' ಆದದ್ದು.

ಮೊದಲಿಗೆ ಕೊಲೆಯಾದ ಹದಿಹರೆಯದ ಬಾಲಕಿ ಮತ್ತು ಆಕೆಯ ಬಾಯ್‌ಫ್ರೆಂಡ್ ನಡುವೆ ಇದ್ದಿರಬಹುದಾದ ಸಂಬಂಧದ ಕುರಿತು ತೀವ್ರ ಕುತೂಹಲ ಮೂಡಿತು. ಆನಂತರ ಮನೆಗೆಲಸದವನೊಂದಿಗೆ ಅನುಚಿತ ಭಂಗಿಯಲ್ಲಿದ್ದ ಹದಿಹರೆಯದ ಮಗಳ ವ್ಯಭಿಚಾರವನ್ನು ತಂದೆಯೊಬ್ಬ ನೋಡಿ ಕೋಪೋದ್ರಿಕ್ತನಾದ ಎಂಬ ಸುದ್ದಿಯಂತೂ ಇನ್ನಷ್ಟು ಕುತೂಹಲ ಮೂಡಿಸಿತು.

"ಪ್ರತಿ ಬಾರಿ ಟಿವಿಯಲ್ಲಿ ಆರುಷಿಯನ್ನು ನೋಡಿದಾಗಲೂ ನನ್ನ ಕಣ್ಣುಗಳು ಕಂಬನಿ ಮಿಡಿಯುತ್ತಿದ್ದವು. ಶಬಾನಾ ನನ್ನಿಂದ ಏಕೆ ದೂರವಾದಳು ಎಂಬ ಪ್ರಶ್ನೆಯನ್ನು ನನಗೆ ನಾನೇ ಕೇಳಿಕೊಳ್ಳುತ್ತಿದ್ದೆ. ತಲ್ವಾರ್ ದಂಪತಿಗಳ ದುಃಖವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ನಾನೂ ಕೂಡಾ ಹಾಗೆಯೇ ಮಗಳನ್ನು ಕಳೆದುಕೊಂಡವ. ಆ ಅಗಲಿಕೆಯ ನೋವು ಎಂಥದೆಂಬುದು ನನಗೆ ಗೊತ್ತು. ಆದರೆ ನಮ್ಮಂಥ ಜನರ ನೋವಿನತ್ತ ಪೊಲೀಸರು ಗಮನ ಹರಿಸುತ್ತಾರೆಯೇ ಎಂಬುದು ನನ್ನ ಪ್ರಶ್ನೆ" ಎನ್ನುತ್ತಾನೆ ಅಜೀಜ್.

ಅಂದು ದೆಹಲಿಯ ಮೇಲೆ ವರುಣರಾಯ ಅನಿರೀಕ್ಷಿತ ದಾಳಿ ಮಾಡಿದ್ದ. ಹೀಗಾಗಿ ಸೀಮಾಪುರಿಯ ಬೀದಿಗಳು ಕೆಸರಿನಿಂದ ಆವೃತವಾಗಿದ್ದವು. ಅಲ್ಲಿನ ಕೊಳಚೆಯ ರಾಶಿಯನ್ನು ಕಂಡು ಟಿಎಸ್‌ಐ ತಂಡಕ್ಕೂ ಹೇಸಿಗೆಯಾಯಿತು. ಅಜೀಜ್‌ನಂತೂ ವಿಡಿಯೋ ಕ್ಯಾಮರಾ ನೋಡಿ ಬೇಸರದಿಂದಲೇ ಮಾತನಾಡಿದ. ಅಂಥ ವಿಡಿಯೋ ಕ್ಯಾಮರಾ ಆರುಷಿಯ ಹುಟ್ಟುಹಬ್ಬದ ಉಡುಗೊರೆಯೇ ಆಗಬೇಕಿತ್ತು. ಶಬನಮ್ ಕೂಡಾ ತಂಟೆ ಮಾಡುವ ಹುಡುಗಿಯೇ ಆಗಿದ್ದಳು. ಅದು ಬೇಕು, ಇದು ಬೇಕು ಎಂಬ ಅವಳ ಚಂದದ ದನಿಯ ಬೇಡಿಕೆಗಳೆಲ್ಲಾ ಪೂರೈಸಲಾಗುತ್ತಿರಲಿಲ್ಲ. ಅದರಲ್ಲೂ ವಿಡಿಯೋ ಕ್ಯಾಮರಾ ಬೇಡಿಕೆಯನ್ನು ಪೂರೈಸುವುದಂತೂ ಅಸಾಧ್ಯವೇ ಆಗಿತ್ತು. ಆದರೆ ಸಮೀಪದ ಸ್ಟುಡಿಯೋದಲ್ಲಿ ಮಾತ್ರ ಆಕೆಯ ಅಸಂಖ್ಯಾತ ಫೋಟೋಗಳನ್ನು ತೆಗೆಯಲಾಗಿತ್ತು. ಏಕೆಂದರೆ ತನ್ನ ಫೋಟೋ ನೋಡುವುದು ಶಬನಮ್‌ಗೆ ಇಷ್ಟದ ಸಂಗತಿಯಾಗಿತ್ತು. ಅಜೀಜ್‌ನಂತೂ ಆಕೆಯ ಹುಟ್ಟುಹಬ್ಬಕ್ಕೆ ಏನಾದರೂ ಉಡುಗೊರೆ ಕೊಡಬೇಕೆಂಬ ಯೋಚನೆಯನ್ನೂ ಮಾಡಿರಲಿಲ್ಲ.

ಇತ್ತ ಆರುಷಿಯ ವಿಚಾರಕ್ಕೆ ಬಂದಾಗ: ಆಕೆಯ ಹುಟ್ಟುಹಬ್ಬಕ್ಕೆ ವಿಡಿಯೋ ಕ್ಯಾಮರಾ ಕೊಟ್ಟು ಅಚ್ಚರಿ ಮೂಡಿಸಬೇಕೆಂದು ತಲ್ವಾರ್ ದಂಪತಿಗಳು ಉದ್ದೇಶಿಸಿದ್ದ ಸಂಗತಿಯಂತೂ ವೃತ್ತಪತ್ರಿಕೆ ಓದುವ, ಟಿವಿ ನೋಡುವ ಎಲ್ಲರಿಗೂ ಗೊತ್ತು. ಬರೀ ಮಾಧ್ಯಮಗಳೇನು, ಭಾರತದಲ್ಲಿ ಪೊಲೀಸರು ಕೂಡಾ ಬಡವರು ಮತ್ತು ಶ್ರೀಮಂತರ ಮಧ್ಯೆ ಅದೇ ರೀತಿಯ ಪೂರ್ವಗ್ರಹ ಪೀಡಿತ ಅಭಿಪ್ರಾಯ ಹೊಂದಿದ್ದಾರೆ.

"ಇಂಥ ಹೇಳಿಕೆ ತಪ್ಪು. ಪೊಲೀಸರೂ ಎಲ್ಲಾ ಕೊಲೆ ಪ್ರಕರಣಗಳನ್ನೂ ಸಮಾನ ದೃಷ್ಟಿಯಿಂದಲೇ ತನಿಖೆ ನಡೆಸುತ್ತಾರೆ" ಎಂದು ಕೇಂದ್ರ ಗೃಹಖಾತೆ ರಾಜ್ಯ ಸಚಿವ ಪ್ರಕಾಶ್ ಜೈಸ್ವಾಲ್ ಅವರೇನೋ ಹೇಳುತ್ತಾರೆ. ತಿರುಚ್ಚಿ, ಪುರಿ, ಹೈದರಾಬಾದ್, ಕೋಲ್ಕತ್ತಾ, ಬೆಂಗಳೂರು, ಬಲ್ಲಭ್‌ಘರ್, ಮುಂಬೈ ಮತ್ತು ದೆಹಲಿಯ ಪೊಲೀಸರನ್ನು ಟಿಎಸ್‌ಐ ವರದಿಗಾರರು ಮಾತನಾಡಿಸಿದಾಗಲೂ ಇದೇ ಬಗೆಯ ಪ್ರತಿಕ್ರಿಯೆ ಕೇಳಿಬಂತು. ಆದರೆ ಈ ಅಧಿಕೃತ ಪ್ರತಿಕ್ರಿಯೆಗಳ ಜೊತೆಯಲ್ಲೇ 'ಇಂಡಿಯಾ' ಮತ್ತು 'ಭಾರತ'ದ ನಡುವಿನ ಸ್ಪಷ್ಟ ಪಕ್ಷಪಾತವೂ ಗೋಚರಿಸುತ್ತದೆ. ಅದೇ 2008ರ ಮೇ 15ರಂದು ಒರಿಸ್ಸಾದ ಪುರಿ ಸಮೀಪದ ಎರಡು ಗ್ರಾಮಸ್ಥರ ನಡುವೆ ನಡೆದ ಭೀಕರ ಗುಂಪು ಘರ್ಷಣೆಯಲ್ಲಿ ನಾಲ್ವರು ಮೃತಪಟ್ಟರು. ಅವರಲ್ಲಿ 20ರ ಹರೆಯದ ಕುನಾ ತಾರೈ ಎಂಬಾತನನ್ನು ಬಡಿದೇ ಕೊಲ್ಲಲಾಯಿತು. ಮತ್ತೆ ಇತರ ಮೂವರನ್ನು- 20ರ ಹರೆಯದ ಅನಂತ ಪಟೇಲ್, ಆತನ 65 ವರ್ಷದ ಪತ್ನಿ ಹೇಮಾ ಮತ್ತು 2 ವರ್ಷದ ಮೊಮ್ಮಗಳು ಮಂಡೂಲಿಯನ್ನು ಜೀವಂತವಾಗಿ ಬೆಂಕಿ ಹಚ್ಚಿ ಸುಡಲಾಯಿತು. ಈ ಸುದ್ದಿ ಟಿಎಸ್‌ಐನ ಒರಿಯಾ ಆವೃತ್ತಿಯಲ್ಲಿ ಪ್ರಕಟವಾಯಿತು. ಆದರೆ ಇಂಗ್ಲಿಷ್ ಆವೃತ್ತಿ ಈ ಸುದ್ದಿಯಲ್ಲಿ ಅಂತಹ 'ಸ್ವಾರಸ್ಯ'ವನ್ನೇನನ್ನೂ ಕಾಣಲಿಲ್ಲ. ಈ ಘಟನೆಯಲ್ಲಿ ಭಾಗಿಯಾಗಿದ್ದ 20 ಆರೋಪಿಗಳನ್ನು ಬಂಧಿಸಿರುವುದಾಗಿ ಪುರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಜತ್ ಕಾಂತಿ ಮಿಶ್ರಾ ಹೇಳುತ್ತಾರೆ. ಆದರೆ ಸ್ಥಳೀಯರು ಹೇಳುವುದೇ ಬೇರೆ: ನಿಜವಾದ ಕೊಲೆಗಾರರು ಬೇರೆ. ಅವರಿಗೆ ರಾಜಕಾರಣಿಗಳ ಬೆಂಬಲವಿದೆ. ಆದರೆ ಪೊಲೀಸರು ಕೆಲವು ಅಮಾಯಕ ಪುಂಡರನ್ನು ಬಂಧಿಸಿ ಮಾಡದ ತಪ್ಪನ್ನು ಒಪ್ಪಿಕೊಳ್ಳುವಂತೆ ಅವರನ್ನು ಬಡಿಯುತ್ತಿದ್ದಾರೆ!

ಮನೀಶ್, ಶಬನಮ್, ಲೋಕೇಶ್ ಮತ್ತು ಜಯಮ್ಮ ಅವರ ಕುಟುಂಬಗಳು ಪ್ರಾಯಶಃ 'ದ ಸಂಡೆ ಇಂಡಿಯನ್' ವಾರಪತ್ರಿಕೆಯನ್ನು ಓದುವುದಿಲ್ಲ. ಆದರೆ ನಮ್ಮ ನಿಮ್ಮಂಥವರು ಓದುತ್ತೇವಲ್ಲ. ವಿಚಿತ್ರವೆಂದರೆ ಮಾಧ್ಯಮಗಳ ಸುದ್ದಿ ಪ್ರಾಶಸ್ತ್ಯದ ಬಗೆ ಮತ್ತು ಪೊಲೀಸ್ ಪಡೆಯ ಪೂರ್ವಾಗ್ರಹ ಪೀಡಿತ ಮನೋಭಾವ ಬ್ರಿಟಿಷರ ಕಾಲದ ವಸಾಹತುಶಾಹಿ ನೀತಿಯನ್ನೇ ನೆನಪಿಸುತ್ತವೆ. ಇದು ಶ್ರೀಮಂತರು ಮತ್ತು ಬಡವರ ನಡುವಿನ ಗೋಡೆಯನ್ನು ಮತ್ತಷ್ಟು ಬಲಗೊಳಿಸುತ್ತಿದೆ. ಅದರಲ್ಲೂ ಶೋಷಣೆ ಮಾಡುವುದು, ಅನುಮಾನಪಡುವುದು, ದೌರ್ಜನ್ಯ ಎಸಗುವ ವಿಚಾರದಲ್ಲಂತೂ ಈ ತಾರತಮ್ಯ ಕಠೋರ ವಾಸ್ತವ. ನಿಜವಾಗಿಯೂ ರಾಜೇಶ್ ತಲ್ವಾರ್ ಅದೃಷ್ಟವಂತ. ಆತ ಸೀಮಾಪುರಿ ಅಥವಾ ಬಲ್ಲಭ್‌ಘರ್‌ನಂತಹ ಕೊಳಚೆ, ಗ್ರಾಮೀಣ ಪ್ರದೇಶದ ನಿವಾಸಿ ಅಲ್ಲ. ಕಂಬಿಯ ಹಿಂದೆ 50 ದಿನಗಳನ್ನು ಕಳೆದರೂ ಆತ ಇನ್ನೂ ಜೀವಂತವಿದ್ದಾನೆ. ಆತನ ವಕೀಲರು ಪೊಲೀಸ್ ದೌರ್ಜನ್ಯದ ಬಗ್ಗೆ ಅಧಿಕೃತವಾಗಿ ದೂರು ನೀಡಿಲ್ಲ. ಪೊಲೀಸ್ ಅಥವಾ ನ್ಯಾಯಾಂಗ ಬಂಧನದಲ್ಲಿ ಮೃತಪಡುವ ವಿಷಯ ಬೇಡ; ಕಡೇ ಪಕ್ಷ ಪೊಲೀಸ್ ಬಂಧನ ಅನುಭವಿಸಿ ಹೊರಬರುವ ಎಲ್ಲಾ ಬಡವರಲ್ಲೂ ಕಂಡುಬರುವಂತೆ ತಲ್ವಾರ್ ಮೈಮೇಲೆ ಹಿಂಸೆಯ ಕುರುಹುಗಳೂ ಕಂಡುಬಂದಿಲ್ಲ.

ಅಷ್ಟರ ಮಟ್ಟಿಗೆ ಭಾರತೀಯ ಪ್ರಜಾಪ್ರಭುತ್ವವನ್ನು ನಾವು 'ಶ್ಲಾಘಿಸಲೇ'ಬೇಕು. ಪೊಲೀಸರು ಬಡ ಆರೋಪಿಗಳು ಅಥವಾ ಶಂಕಿತರ ಬಗ್ಗೆ 'ವ್ಯಕ್ತಿತ್ವ ಇಲ್ಲದವ', 'ದುಷ್ಟ', 'ವಿಚಿತ್ರ ಮನೋಭಾವದವ', 'ವಿಕೃತ ಕಾಮಿ', 'ಅನಾಗರಿಕ' ಎಂದೆಲ್ಲಾ ವಿಶೇಷಣಗಳನ್ನು ಹಚ್ಚಿ ಹೇಳುವುದು ಮಾಮೂಲು. ನಮ್ಮ ಮಾಧ್ಯಮಗಳು ಕೂಡಾ ಯಾವುದೇ ಬಗೆಯ 'ಕ್ರಾಸ್ ಚೆಕ್' ಮಾಡದೇ ಅವೇ ಬಗೆಯ ವಿಶೇಷಣಗಳನ್ನು ಶಂಕಿತರ ಮೇಲೆ ಆರೋಪಿಸುವುದೂ ಹೊಸತಲ್ಲ. ಹಾಗೆಯೇ ಬಡಜನರಲ್ಲಿ ನೈತಿಕತೆಯ ತಳಪಾಯವೇ ಇಲ್ಲದಿರುವ ಬಗ್ಗೆ ಮಧ್ಯಮ ವರ್ಗದ ಜನ 'ಗಾಸಿಪ್' ಮಾಡುವುದಕ್ಕೂ ಇಂತಹ ಸುದ್ದಿಗಳು ಪ್ರೇರಣೆ ನೀಡುತ್ತವೆ. ಆದರೆ ಇಲ್ಲಿ ಶ್ರೀಮಂತ ಮತ್ತು ಪ್ರಭಾವಿಯೂ ಆದ ತಲ್ವಾರ್‌ನನ್ನು ಪೊಲೀಸರು ನಿಷ್ಪಕ್ಷಪಾತವಾಗಿಯೇ ಬಂಧಿಸಿದ್ದಾರೆ. ಜೈಲಿನಲ್ಲೂ ಸಾಮಾನ್ಯ 'ಟ್ರೀಟ್‌ಮೆಂಟ'ನ್ನೇ ನೀಡಿದ್ದಾರೆ. ಬಡಜನರ ಅನೈತಿಕ ವ್ಯಾಪಾರಗಳ ಬಗೆಗಿನ 'ರೆಡಿಮೇಡ್ ಸುದ್ದಿ'ಯಂತೆಯೇ ತಲ್ವಾರ್ ಸುದ್ದಿಯನ್ನೂ ಮಾಧ್ಯಮಗಳು ದಿಢೀರನೇ ಪ್ರಕಟಿಸಿಬಿಟ್ಟು 'ಸಾರ್ವಜನಿಕ ಹಿತಾಸಕ್ತಿ' ಮೆರೆದಿವೆ. ಆದರೆ ಈ ಪ್ರಕರಣದಲ್ಲಂತೂ ಮಧ್ಯಮ ವರ್ಗದ ಭಾರತೀಯರ ಕೊಲೆ, ಮಕ್ಕಳನ್ನು ಬೆಳೆಸುವುದು, ಲೈಂಗಿಕ ಸಂಬಂಧಗಳು, ಹದಿಹರೆಯದ ಹುಡುಗಿಯ ಸಮಸ್ಯೆಗಳು, ಮನೆಕೆಲಸದವರಿಂದಾಗುವ ತೊಂದರೆಗಳು ಇತ್ಯಾದಿಗಳ ಬಗ್ಗೆ ಉಪದೇಶ ಕೊಡುವ, ನಾನಾ ಸಿದ್ಧಾಂತಗಳನ್ನು ಹೇಳುವ ತಜ್ಞ ವಿಶ್ಲೇಷಕರಾಗಿಬಿಟ್ಟರು.

ಜಾಹೀರಾತು ತಜ್ಞ ಮತ್ತು ಅಂಕಣಕಾರ ಸಂತೋಷ್ ದೇಸಾಯಿ ಅವರು ಹೇಳುವಂತೆ, "ಭಾರತೀಯ ಮಧ್ಯಮ ವರ್ಗದ ಮೇಲೆ 24ಗಂಟೆಯ ಟಿವಿ ಚಾನಲ್‌ಗಳು ಯಾವ ಪರಿ ಮುಗಿಬಿದ್ದಿವೆ ಎಂದರೆ ಅವು ತಮ್ಮ ಟಿಆರ್‌ಪಿಗಾಗಿ ಏನನ್ನು ಬೇಕಾದರೂ ಮಾಡಬಲ್ಲವು. ಅವುಗಳ ಅನಾರೋಗ್ಯಕರ ಸ್ಪರ್ಧೆಗೆ ಮಿತಿಯೇ ಇಲ್ಲದಂತಾಗಿದೆ. ವೀಕ್ಷಕರನ್ನು ಸೆಳೆಯಲು ರೋಚಕವಾದ ಮತ್ತು ವಿಚಿತ್ರವಾದ ಸುದ್ದಿ ನೀಡುವ ಮತ್ತು ಅದನ್ನು ಅತಿರಂಜಿಸುವ ಪರಿಪಾಠ ಟಿವಿ ಚಾನಲ್‌ಗಳಲ್ಲಿ ಈಗ ಹೆಚ್ಚಾಗಿ ಬೆಳೆಯುತ್ತಿದೆ. ಈ ಅಪಾಯಕಾರಿ ಸಾಂಕ್ರಾಮಿಕ ರೋಗಕ್ಕೆ ಪ್ರತಿಯೊಬ್ಬರೂ ಬಲಿಯಾಗುತ್ತಿದ್ದಾರೆ".

ಹಿರಿಯ ವರದಿಗಾರ ಆಶುತೋಷ್ ಅವರು, "ಕುಖ್ಯಾತ ಜೆಸಿಕಾ ಲಾಲ್, ಪ್ರಿಯದರ್ಶಿನಿ ಮಟ್ಟೂ, ಮಧುಮಿತಾ ಶುಕ್ಲಾ ಮತ್ತು ನಿತೀಶ್ ಕತಾರ ಮುಂತಾದ ಪ್ರಕರಣಗಳಲ್ಲಿ ಬಲಿಪಶುಗಳ ಕುಟುಂಬಗಳು ನ್ಯಾಯ ಪಡೆಯಲು ನೆರವಾದದ್ದು ಇವೇ ಮಾಧ್ಯಮಗಳು, ನಿಜ. ಆದರೆ ಮಧ್ಯಮ ವರ್ಗಗಳ ಬಗ್ಗೆ ಏನು? ಆ ವರ್ಗ ಮತ ಚಲಾಯಿಸುವುದನ್ನು ತ್ಯಜಿಸಿ ಬಹುಕಾಲವಾಯಿತು; ಆ ವರ್ಗ ಖಾಸಗಿ ರಕ್ಷಣಾ ವ್ಯವಸ್ಥೆ, ಖಾಸಗಿ ನೀರು ಮತ್ತು ವಿದ್ಯುತ್ ಪೂರೈಕೆ ವ್ಯವಸ್ಥೆ ರೂಪಿಸಿಕೊಂಡಿದೆ. ಜಾಗತೀಕರಣದ ಪ್ರಭಾವಕ್ಕೆ ಒಳಗಾದ ಆ ವರ್ಗಕ್ಕೆ ಈಗ ಅತ್ಯಾಧುನಿಕ ಮಾಲ್‌ಗಳೇ ಸಂತೆ, ಮಲ್ಟಿಪ್ಲೆಕ್ಸ್‌ಗಳೇ ದೇಗುಲ. ಹೀಗಾಗಿ ಆ ವರ್ಗ ಇದೀಗ ಒಂದರ್ಥದಲ್ಲಿ ಭಾರತೀಯ ಗಣರಾಜ್ಯದಿಂದ ಪ್ರತ್ಯೇಕವೇ ಆಗಿಬಿಟ್ಟಿದೆ" ಎಂದು ಆತಂಕ ವ್ಯಕ್ತಪಡಿಸುತ್ತಾರೆ.

ಆದರೆ ಆರುಷಿ ಪ್ರಕರಣದಲ್ಲಿ ಆ ವರ್ಗದ ನಿಜವಾದ ಬಣ್ಣ ಹೊರಕ್ಕೆ ಬಂತು. ಅಂದರೆ 'ರಾಗ್ ದರ್ಬಾರಿ' ಕಾದಂಬರಿಯಲ್ಲಿ ಬರುವಂತೆ ಗಾಸಿಪ್ ಮಾಡುವುದು, ಕಾಲೆಳೆಯುವುದು, ವಂಚನೆ ಮುಂತಾದ ತನ್ನ 'ಸಾಂಪ್ರದಾಯಿಕ ಣ'ಗಳನ್ನು ಬಹಿರಂಗಪಡಿಸಿತು. ಆ ಪುಸ್ತಕದಲ್ಲಿ ಹಲವು ಗ್ರಾಮಸ್ಥರು ಗಾಸಿಪ್ ಮಾಡುವುದು, ಕಾಲೆಳೆಯುವುದು, ಇನ್ನೊಬ್ಬರಲ್ಲಿ ಹುಳುಕು ಹುಡುಕುತ್ತಾ ಹರಟುವುದರಲ್ಲೇ ಕಾಲ ಕಳೆಯುತ್ತಿರುತ್ತಾರೆ.

ಹೀಗಾಗಿ 24 ಗಂಟೆ ಸುದ್ದಿವಾಹಿನಿಗಳ ದೆಸೆಯಿಂದ 200 ದಶಲಕ್ಷ ಮಧ್ಯಮ ವರ್ಗದ ಭಾರತೀಯರು ಒಂದೇ ಏಟಿಗೆ ಭಾರತದ 'ಟಿಪಿಕಲ್ ಗ್ರಾಮಸ್ಥ'ರಂತೆ ವರ್ತಿಸಿದರು. ಇದಕ್ಕೆ ನೋಯ್ಡಾದ ಆರುಷಿ ಹತ್ಯೆ ಪ್ರಕರಣ ಒಂದು ನೆಪವಾಯಿತಷ್ಟೇ!

ಟಿಎಸ್‌ಐ

ಆರುಷಿ-ಹೇಮ್‌ರಾಜ್ ಹತ್ಯೆ ನಂತರದ ಬೆಳವಣಿಗೆ

ಮೇ 16, 2008: ದಂತ ವೈದ್ಯ ದಂಪತಿಗಳ ಪುತ್ರಿ ಆರುಷಿ ತಲ್ವಾರ್ ತನ್ನ ಬೆಡ್‌ರೂಂನಲ್ಲಿ ಕುತ್ತಿಗೆ ಸೀಳಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದಳು. ಮನೆ ಕೆಲಸದಾಳು ಹೇಮ್‌ರಾಜ್ ಮೇಲೆ ಪೊಲೀಸರ ಅನುಮಾನದ ದೃಷ್ಟಿ.

ಮೇ 17: ತಲ್ವಾರ್ ದಂಪತಿಗಳ ನಿವಾಸದ ಟೆರೆಸ್‌ನಲ್ಲಿ ಹೇಮ್‌ರಾಜ್ ಮೃತ ದೇಹ ಪತ್ತೆ. ಎಲ್ಲರ ಊಹೆಯನ್ನು ಹುಸಿಗೊಳಿಸಿ, ಆರುಷಿ ಮೇಲೆ ಯಾವುದೇ ಲೈಂಗಿಕ ಹಲ್ಲೆ ನಡೆದಿಲ್ಲ ಎಂಬುದನ್ನು ದೃಢಪಡಿಸಿದ ಮರಣೋತ್ತರ ಪರೀಕ್ಷಾ ವರದಿ.

ಮೇ 18: ಪೊಲೀಸರ ಪ್ರಕಾರ ಆರುಷಿ ಹತ್ಯೆಗೆ ಹರಿತವಾದ ಶಸ್ತ್ರ ಚಿಕಿತ್ಸೆಗೆ ಬಳಸುವ ಉಪಕರಣವನ್ನು ಉಪಯೋಗಿಸಲಾಗಿತ್ತು. ರಾಜ್ಯದ ವಿಶೇಷ ತನಿಖಾ ದಳ (ಎಸ್‌ಟಿಎಫ್) ಪ್ರಕರಣದ ತನಿಖೆ ನಡೆಸಲಿದೆ ಎಂದ ಉತ್ತರ ಪ್ರದೇಶ ಪೊಲೀಸ್ ಪಡೆಯ ಎಡಿಜಿ ಬ್ರಿಜ್ ಲಾಲ್.

ಮೇ 19: ತಲ್ವಾರ್ ಕುಟುಂಬದ ಹಿಂದಿನ ಮನೆ ಕೆಲಸದಾಳು ವಿಷ್ಣು ಶರ್ಮ ಮೇಲೆ ಪೊಲೀಸರ ಸಂಶಯದ ಕತ್ತಿ ತೂಗಲಾರಂಭಿಸಿತು.

ಮೇ 21: ಕೊಲೆ ಪ್ರಕರಣದ ತನಿಖೆಗೆ ದೆಹಲಿ ಪೊಲೀಸರ ಸಹಭಾಗಿತ್ವ. 'ವೈದ್ಯ ಅಥವಾ ಕಟುಕ'ನಿಂದ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದರು.

ಮೇ 22: ತಲ್ವಾರ್ ಕುಟುಂಬದ ಮೇಲೆ ಪೊಲೀಸರ ಅನುಮಾನ. ಕುಟುಂಬ ಗೌರವ ಕಾಪಾಡಲು ಹತ್ಯೆ ಮಾಡಿರಬಹುದಾದ ಸಾಧ್ಯತೆಯ ಕುರಿತು ತನಿಖೆ.

ಮೇ 23: ಆರುಷಿ ತಂದೆ ರಾಜೇಶ್ ತಲ್ವಾರ್ ಅವರ ಬಂಧನ. ಮೀರತ್ ವಲಯದ ಪೊಲೀಸ್ ಐಜಿ ಗುರುದರ್ಶನ್ ಸಿಂಗ್ ಹೇಳುವಂತೆ, 'ತನ್ನ ಮಗಳನ್ನು ಮನೆಗೆಲಸದಾಳು ಹೇಮ್‌ರಾಜ್ ಜೊತೆ ಅನುಚಿತ ಭಂಗಿಯಲ್ಲಿ ನೋಡಿದ ಕಾರಣ ತಂದೆಯಿಂದಲೇ ಮಗಳ ಕೊಲೆ". ರಾಜೇಶ್ ತಲ್ವಾರ್ ಅವರಿಗೆ ನ್ಯಾಯಾಂಗ ಬಂಧನ.

ಮೇ 24: ತನ್ನ ಪತಿ ನಿರಪರಾಧಿ ಎಂದು ಸಮರ್ಥಿಸಿದ ನೂಪುರ್ ತಲ್ವಾರ್ (ಆರುಷಿಯ ತಾಯಿ). ಘಾಜಿಯಾಬಾದ್‌ನ ದಾಸ್ನಾ ಜೈಲಿನಲ್ಲಿ ರಾಜೇಶ್ ತಲ್ವಾರ್ ಅವರನ್ನು ಭೇಟಿ ಮಾಡಿದ ನೂಪುರ್ ತಲ್ವಾರ್.

ಮೇ 26: ರಾಜೇಶ್ ತಲ್ವಾರ್ ಜೊತೆ ಅಕ್ರಮ ಸಂಬಂಧ ಇತ್ತು ಎಂಬುದನ್ನು ನಿರಾಕರಿಸಿದ ದಂತವೈದ್ಯೆ ಅನಿತಾ ದುರಾನಿ. ಪೊಲೀಸರ ಪ್ರಕಾರ ಈ ಅಕ್ರಮ ಸಂಬಂಧವನ್ನು ಆಕ್ಷೇಪಿಸಿದ್ದೇ ಆರುಷಿ ಹತ್ಯೆಗೆ ಕಾರಣ.

ಮೇ 22: ತಲ್ವಾರ್ ಅವರನ್ನು ಮೂರುದಿನಗಳ ಕಾಲ ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಯಿತು. ಕುಟುಂಬ ಸಿಬಿಐ ತನಿಖೆಗೆ ಒತ್ತಾಯಿಸಿತ್ತು.

ಮೇ 28: ಆರುಷಿಯ ತೇಜೋವಧೆ ಮಾಡಿದ್ದಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ರೇಣುಕಾ ಚೌಧುರಿ ಉತ್ತರ ಪ್ರದೇಶ ಪೊಲೀಸರನ್ನು ಟೀಕಿಸಿದರು. ಈ ಪ್ರಕರಣವನ್ನು ತನಿಖೆ ಮಾಡುತ್ತಿದ್ದ ಅಧಿಕಾರಿ ತೃತೀಯ ಬಾರಿ ಬದಲಾದರು.

ಮೇ 29: ಉತ್ತರ ಪ್ರದೇಶ ಸರ್ಕಾರ ಸಿಬಿಐ ತನಿಖೆಗೆ ಶಿಫಾರಸು ಮಾಡಿತು.

ಜೂನ್ 1: ಸಿಬಿಐ ರಾಜೇಶ್ ತಲ್ವಾರ್ ವಿರುದ್ಧ ಕೇಸು ದಾಖಲಿಸಿತು

ಜೂನ್ 2: ಸಿಬಿಐ ತಲ್ವಾರ್ ಮನೆಯನ್ನು ಪರಿಶೋಧನೆ ನಡೆಸಿದ್ದಲ್ಲದೆ ಅನಿತಾ ದುರಾನಿ ಅವರನ್ನು ವಿಚಾರಣೆಗೆ ಒಳಪಡಿಸಿತು. ಒಂದು ದಿನದ ಮಟ್ಟಿಗೆ ಡಾ. ರಾಜೇಶ್ ಅವರನ್ನು ವಶಕ್ಕೆ ತೆಗೆದುಕೊಂಡಿತು.

ಜೂನ್ 3:ಮುಖ್ಯಮಂತ್ರಿ ಮಾಯಾವತಿ ಜೋಡಿ ಕೊಲೆಗೆ ಸಂಬಂಧಿಸಿದಂತೆ ರಾಜ್ಯ ಪೊಲೀಸರನ್ನು ಸಮರ್ಥಿಸಿಕೊಂಡರು.

ಜೂನ್ 4: ಕೊಲೆ ಆರೋಪಕ್ಕೆ ಒಳಗಾದ ರಾಜೇಶ್ ತಲ್ವಾರ್ ಅವರನ್ನು ಸಿಬಿಐ ವಶದಲ್ಲಿಯೇ ಸುಳ್ಳು ಪತ್ತೆ ಹಚ್ಚುವ ಪರೀಕ್ಷೆಗೆ ಒಳಪಡಿಸಲಾಯಿತು.

ಜೂನ್ 10: ತಲ್ವಾರ್ ಅವರ ಕಂಪೌಂಡರ್ ಕೃಷ್ಣ ಅವರನ್ನು ಸುಳ್ಳು ಪತ್ತೆ ಹಚ್ಚುವ ಪರೀಕ್ಷೆಗೆ ಒಳಪಡಿಸಲಾಯಿತು. ಈಗ ಅವರು ಪ್ರಮುಖ ಶಂಕಿತ ಆರೋಪಿ. ಸಿಬಿಐ ಮತ್ತೊಮ್ಮೆ ತಲ್ವಾರ್ ಮನೆಯನ್ನು ಶೋಧಿಸಿತು.

ಜೂನ್ 12: ಕೃಷ್ಣ ಮಂಪರು ಪರೀಕ್ಷೆ ಅಥವಾ ಸುಳ್ಳು ಪತ್ತೆ ಹಚ್ಚುವ ಪರೀಕ್ಷೆಗೆ ಒಳಪಟ್ಟರು.

ಜೂನ್ 13: ಸುಳ್ಳು ಪತ್ತೆ ಪರೀಕ್ಷಾ ಫಲಿತಾಂಶದ ಆಧಾರದಲ್ಲಿ ಸಿಬಿಐ ಡಾ. ರಾಜೇಶ್ ತಲ್ವಾರ್ ಅವರ ಕಂಪೌಂಡರ್ ಕೃಷ್ಣ (ಅಲಿಯಾಸ್ ಕಿಶನ್) ಅವರನ್ನು ಬಂಧಿಸಿತು.

ಜೂನ್ 14: ಸಿಬಿಐ ತಂಡ ಕೃಷ್ಣ ಅವರ ನಿವಾಸಗಳಾದ ಜಲ್ವಾಯು ವಿಹಾರ್, ನೋಯ್ಡಾಗಳನ್ನು ಶೋಧಿಸಿತು. ಅಲ್ಲಿಂದ ಸಿಬಿಐ ತಂಡ ಬಟ್ಟೆಬರೆ ಮತ್ತಿತರ ವಸ್ತುಗಳನ್ನು ಬೆರಳಚ್ಚು ಪರೀಕ್ಷೆಗಾಗಿ ವಶಪಡಿಸಿಕೊಂಡಿತು. ದುರಾನಿ ಅವರ ಮನೆಕೆಲಸದ ವ್ಯಕ್ತಿ ರಾಜ್‌ಕುಮಾರ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಲಾಯಿತು.

ಜೂನ್ 12: ಕೃಷ್ಣ ಅವರನ್ನು ಸಿಬಿಐ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು. ಕೃಷ್ಣ ಅವರನ್ನು ಹನ್ನೊಂದು ದಿನಗಳವರೆಗೆ ವಶಕ್ಕೆ ತೆಗೆದುಕೊಳ್ಳುವ ಸಿಬಿಐ ಅಹವಾಲಿಗೆ ಆರು ದಿನಗಳ ಅವಕಾಶ ಮಾತ್ರ ಸಿಕ್ಕಿತು.

ಜೂನ್ 20: ದೆಹಲಿಯ ಸಿಎಫ್‌ಎಸ್‌ಎಲ್‌ನಲ್ಲಿ ರಾಜೇಶ್ ತಲ್ವಾರ್ ಅವರ ಮೇಲೆ ಸುಳ್ಳು ಪತ್ತೆ ಹಚ್ಚುವ ಪರೀಕ್ಷೆ ನಡೆಯಿತು.

ಜೂನ್ 25: ನೂಪುರ್ ತಲ್ವಾರ್ ಮೇಲೆ ನಡೆಸಿದ ಮೊದಲ ಸುಳ್ಳು ಪತ್ತೆ ಹಚ್ಚುವ ಪರೀಕ್ಷೆ ಯಶಸ್ವಿಯಾಗದೆ ಇದ್ದುದರಿಂದ ಎರಡನೇ ಬಾರಿ ಅವರನ್ನು ಪರೀಕ್ಷೆಗೆ ಒಡ್ಡಲಾಯಿತು.

ಜೂನ್ 22: ಸಿಬಿಐ ಕೃಷ್ಣ ಅವರನ್ನು ತಲ್ವಾರ್ ನಿವಾಸಕ್ಕೆ ಕರೆದೊಯ್ಯಿತು. ದುರಾನಿ ಕುಟುಂಬದ ಮನೆಕೆಲಸದ ವ್ಯಕ್ತಿ ರಾಜ್‌ಕುಮಾರ್‌ನನ್ನು ಬಂಧಿಸಲಾಯಿತು. ಮಾನವ ರಕ್ತವಿರುವ ಸ್ವಚ್ಛ ಮಾಡಿದ ಟಿ ಶರ್ಟ್‌ಗಳನ್ನು ವಶಪಡಿಸಿಕೊಳ್ಳಲಾಯಿತು. ಇದರಲ್ಲಿನ ರಕ್ತದ ಡಿಎನ್‌ಎ ಹೋಲಿಕೆ ದೃಢವಾಯಿತು.

ಜುಲೈ 9: ರಾಜ್‌ಕುಮಾರ್‌ನನ್ನು ನಾರ್ಕೋ ಅನಾಲಿಸಿಸ್ ಪರೀಕ್ಷೆಗೆ ಒಳಪಡಿಸಲಾಯಿತು.

ಜುಲೈ 10: ಮಾಧ್ಯಮಗಳ ವರದಿ ಪ್ರಕಾರ ರಾಜ್‌ಕುಮಾರ್ ತನ್ನ ತಪ್ಪೊಪ್ಪಿಕೊಂಡಿದ್ದು, ಹಲವು ಸತ್ಯಗಳನ್ನು ಸಿಬಿಐಗೆ ತಿಳಿಸಿದ್ದಾನೆ. ಆತ ಹತ್ಯೆಗೆ ಕೃಷ್ಣ, ಸಾಂಭು ಹಾಗೂ ಹೇಮ್‌ರಾಜ್‌ನ ನೆರವು ಪಡೆದುಕೊಂಡಿದ್ದ ಎನ್ನಲಾಗಿತ್ತು.

ಜುಲೈ 11: ಸಿಬಿಐ ಮೂವರು ಮನೆಗೆಲಸದಾಳುಗಳು ಹಾಗೂ ಕೃಷ್ಣ ಕೊಲೆಯ ಹಿಂದಿನ ಮುಖ್ಯ ಆರೋಪಿಗಳು ಎಂಬುದನ್ನು ದೃಢವಾಗಿ ಹೇಳಿತು. ಆದರೆ ಸಿಬಿಐನ ಪಾಲಿಗ್ರಾಫ್ ಪರೀಕ್ಷೆ ನ್ಯಾಯಾಲಯದಲ್ಲಿ ಸ್ವೀಕಾರಾರ್ಹವಲ್ಲ. ಹತ್ಯೆಗೆ ಬಳಸಿದ ಆಯುಧ ಹಾಗೂ ಆರುಷಿ, ಹೇಮ್‌ರಾಜ್‌ನ ಮೊಬೈಲ್ ಫೋನ್- ಗಳನ್ನು ಇನ್ನೂ ವಶಪಡಿಕೊಂಡಿಲ್ಲ.

ಜುಲೈ 12: ಗಾಜಿಯಾಬಾದ್‌ನ ದಾಸ್ನಾ ಜೈಲಿನಿಂದ ರಾಜೇಶ್ ತಲ್ವಾರ್ ಬಿಡುಗಡೆ.

ಟಿಎಸ್‌ಐ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .