ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 ವಿಶ್ಲೇಷಣಾ ವರದಿ
ಇಳಿಬಿದ್ದ ಅಂಕದ ಪರದೆ

ಯುಪಿಎ ಸದ್ಯಕ್ಕೆ ಎಸ್‌ಪಿ ಬೆಂಬಲದಿಂದ ವಿಶ್ವಾಸಮತ ಗಳಿಸಿ ಸರ್ಕಾರವನ್ನೇನೋ ಉಳಿಸಿಕೊಳ್ಳಬಹುದು. ಆದರೆ ಈ ರಾಜಕೀಯ ಅಸ್ಥಿರತೆ ಅಷ್ಟು ಶೀಘ್ರವಾಗಿ ಬಗೆಹರಿಯುವುದಿಲ್ಲ ಎನ್ನುತ್ತಾರೆ ಟಿಎಸ್‌ಐನ ಶರದ್ ಗುಪ್ತಾ

 

Special Story - The Sunday Indian- Kannada

ಕಳೆದ ನಾಲ್ಕು ವರ್ಷಗಳ ಕಾಲ ಯುಪಿಎ ಸರ್ಕಾರ ಒಂದು ರೀತಿ ಎಡಪಕ್ಷಗಳ ಕಪಿಮುಷ್ಟಿಯಲ್ಲಿ ಬಂಧಿಯಾಗೇ ಉಳಿದುಬಿಟ್ಟಿತ್ತು. ಸರ್ಕಾರದ ವಿವಿಧ ನೀತಿಗಳಾದ ಬಂಡವಾಳ ವಾಪಸಾತಿ, ವಿವಿಧ ವಲಯದಲ್ಲಿನ ವಿದೇಶಿ ನೇರ ಹೂಡಿಕೆ ಮತ್ತು ಪರಮಾಣು ಒಪ್ಪಂದದಂತಹ ಯಾವುದೇ ಸರ್ಕಾರಿ ನೀತಿಯಲ್ಲೂ ಎಡ ಪಕ್ಷಗಳು ತಮ್ಮ ವಾದವೇ ನಡೆಯಬೇಕೆಂದು ಪಟ್ಟು ಹಿಡಿಯುತ್ತಿದ್ದವು. ಇಂಥ ಪ್ರತಿ ಸಂದರ್ಭದಲ್ಲೂ ಸರ್ಕಾರ ನುರಿತ ಅಧಿಕಾರಿಗಳನ್ನು ಕಳುಹಿಸಿ ಎಡಪಕ್ಷಗಳ ನಾಯಕರನ್ನು ಸಮಾಧಾನ ಮಾಡಬೇಕಿತ್ತು. ಅಂತಿಮವಾಗಿ ಜುಲೈ 9ರಂದು ಎಡ ಪಕ್ಷಗಳು ಬೆಂಬಲ ಹಿಂದೆಗೆದುಕೊಂಡಾಗ ಕೇಂದ್ರ ಸರ್ಕಾರ ನಿಜವಾಗಿಯೂ ಸಮಾಧಾನದ ನಿಟ್ಟುಸಿರು ಬಿಡಬೇಕಾದ ಸಮಯ. ದುರದೃಷ್ಟವೆಂದರೆ ಇದೀಗ ಕೇಂದ್ರ ಸರ್ಕಾರ ಸಮಾಜವಾದಿ ಪಕ್ಷದ ಹೊಸ ಬೇಡಿಕೆಗಳ ಕಪಿಮುಷ್ಟಿಗೆ ಸಿಲುಕಬೇಕಾಗಿದೆ.

ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ಅವರು ಯುಪಿಎ ಸರ್ಕಾರಕ್ಕೆ ಬೆಂಬಲ ಘೋಷಿಸಿ ಪ್ರಧಾನ ಮಂತ್ರಿಗಳಿಗೆ ಬರೆದ ಪತ್ರದ ಜೊತೆಯಲ್ಲೇ ಬೇಡಿಕೆಗಳ ಪಟ್ಟಿಯೂ ಇತ್ತು. ಬೇಡಿಕೆಗಳ ಬಗ್ಗೆ ಮಾತುಕತೆಯಾಡಲು ಹಣಕಾಸು, ಪೆಟ್ರೋಲಿಯಂ ಮತ್ತು ಟೆಲಿಕಾಂ ಇಲಾಖೆಗಳ ಅಧಿಕಾರಿಗಳು ಅಮರ್ ಸಿಂಗ್ ಅವರ ಮನೆಯತ್ತ ಓಡಬೇಕಾಯಿತು.

ಭಾರತ-ಅಮೆರಿಕ ಪರಮಾಣು ಒಪ್ಪಂದ ಕುರಿತ ಯುಪಿಎ ಸರ್ಕಾರದ ಪ್ರತಿಕ್ರಿಯೆಯನ್ನು ವಿಶ್ಲೇಷಿಸಲು ಜುಲೈ ೮ರಂದು ಎಡಪಕ್ಷಗಳು ಸಭೆ ಸೇರಬೇಕಿತ್ತು. ಆದರೆ ಅದಕ್ಕೆ ಒಂದು ದಿನ ಮೊದಲೇ ಪ್ರಧಾನಿ ಮನಮೋಹನ್ ಸಿಂಗ್ ಅವರು, ಭಾರತದ ಹಿತಾಸಕ್ತಿ ದೃಷ್ಟಿಯಿಂದ ಅಂತರ್ ರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ ಸೇರುವ ಬಗ್ಗೆ ಜಪಾನ್‌ನಲ್ಲಿ ತಮ್ಮ ದೃಢ ನಿರ್ಧಾರ ಪ್ರಕಟಿಸಿಬಿಟ್ಟರು. ಎಡ ಪಕ್ಷಗಳು ಬೆಂಬಲ ಹಿಂತೆಗೆದುಕೊಂಡಿರುವುದರಿಂದ ತಕ್ಷಣವೇ ಸಂಸತ್ತಿನ ವಿಶೇಷ ಅಧಿವೇಶನ ನಡೆಸಿ ವಿಶ್ವಾಸಮತ ಯಾಚಿಸುವುದು ಸರ್ಕಾರಕ್ಕೆ ಅನಿವಾರ್ಯ. ವಿಶ್ವಾಸಮತ ದೊರೆಯುವ ಬಗ್ಗೆ ಯುಪಿಎ ಸರ್ಕಾರಕ್ಕೇನೋ ಭರವಸೆ ಇದೆ. ತೆಲಂಗಾಣ ರಾಷ್ಟ್ರೀಯ ಸಮಿತಿ, ಜಾರ್ಖಂಡ್ ಮುಕ್ತಿ ಮೋರ್ಚಾ, ತೃಣಮೂಲ ಕಾಂಗ್ರೆಸ್, ಜೆಡಿ(ಎಸ್)ಗಳಂತಹ ಸಣ್ಣ ಪಕ್ಷಗಳ ಜೊತೆಗೆ ಕೆಲವು ಸಂಸದರೂ ಸರ್ಕಾರದ ಪರ ಮತ ಚಲಾಯಿಸಬಹುದು. ಇದಲ್ಲದೆ ಎನ್‌ಡಿಎ ಮೈತ್ರಿಕೂಟದಲ್ಲಿರುವ ಶಿರೋಮಣಿ ಅಕಾಲಿದಳ ಮತ್ತು ಶಿವಸೇನಾದಂತಹ ಪಕ್ಷಗಳು ಸರ್ಕಾರದ ಪರ ಮತ ಚಲಾಯಿಸಬಹುದು ಇಲ್ಲವೇ ತಟಸ್ಥರಾಗಬಹುದು. "ಪರಮಾಣು ಒಪ್ಪಂದ ರಾಷ್ಟ್ರದ ಹಿತಾಸಕ್ತಿಗೆ ಅನುಗುಣವಾಗೇ ಇದೆ. ಆದರೂ ನಾವು ಯಾವುದರ ಪರ ಮತ ಚಲಾಯಿಸಬೇಕೆಂದು ಇನ್ನೂ ನಿರ್ಧರಿಸಬೇಕಿದೆ" ಎನ್ನುತ್ತಾರೆ ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್.

ಆದರೆ ಪ್ರಮುಖ ಪ್ರಶ್ನೆ ಎಂದರೆ: ಸರ್ಕಾರ ಉಳಿದರೂ ಎಷ್ಟು ದಿನ ಮತ್ತು ಹೇಗೆ ಮುಂದುವರಿಯಲಿದೆ? ಮತ್ತೆ ಸಮಾಜವಾದಿ ಪಕ್ಷದ ಬೇಡಿಕೆಗಳನ್ನು ಪೂರೈಸಬೇಕಾದ ಒತ್ತಡದಲ್ಲೇ ಸಿಲುಕಿ ಕುಂಟುತ್ತಾ ಸಾಗುವುದಿಲ್ಲವೇ? ಅಥವಾ ತನ್ನ ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸುವ ಭರವಸೆ ಸರ್ಕಾರಕ್ಕಿದೆಯೇ?

ಗ್ರಾಮೀಣ ಬಡ ಜನರಿಗೆ ಉದ್ಯೋಗ ಭರವಸೆ ನೀಡುವ ಯೋಜನೆ; ಅಸಂಘಟಿತ ವಲಯದ ಕಾರ್ಮಿಕರಿಗೆ ಆರೋಗ್ಯ ವಿಮೆ ಯೋಜನೆ; ಲಕ್ಷಾಂತರ ಬುಡಕಟ್ಟು ಜನರಿಗೆ ಜಮೀನು ಹಕ್ಕು ನೀಡುವ ಕಾನೂನಿನ ಜೊತೆಗೆ ವಿಶೇಷ ಆರ್ಥಿಕ ವಲಯ, ತಾಂತ್ರಿಕ ಮತ್ತು ಜವಳಿ ಪಾರ್ಕ್ ಮುಂತಾದ ಯೋಜನೆಗಳನ್ನು ಕೇಂದ್ರ ಸರ್ಕಾರ ರೂಪಿಸಿದೆ. ಆದರೆ ಟೆಲಿಕಾಂ, ಹಣಕಾಸು, ಕೃಷಿ ಮತ್ತು ವಿಮೆ ಕ್ಷೇತ್ರಗಳಲ್ಲಿ ತಾನು ಉದ್ದೇಶಿಸಿದ್ದ ಪ್ರಮುಖ ಆರ್ಥಿಕ ಸುಧಾರಣೆ ಮಾಡುವಲ್ಲಿ ಸರ್ಕಾರ ಸಫಲವಾಗಿಲ್ಲ. ಬಿಎಚ್‌ಇಎಲ್, ನವರತ್ನ ಮುಂತಾದ ಕಂಪನಿಗಳಲ್ಲಿನ ಶೇ. 10ರಷ್ಟು ಷೇರುಗಳನ್ನು ಮರು ಹೂಡಿಕೆ ಮಾಡುವ ಬಗ್ಗೆ ಎಡ ಪಕ್ಷಗಳು ಸೂಚಿಸಿದಾಗ ಬಂಡವಾಳ ಹೂಡಿಕೆಯ ಒಟ್ಟಾರೆ ಪ್ರಕ್ರಿಯೆಯೂ ಸ್ಥಗಿತವಾಗಿಬಿಟ್ಟಿತು. ಟೆಲಿಕಾಂ, ವಿಮೆ ಮತ್ತು ನಾಗರಿಕ ವಿಮಾನಯಾನ ವಲಯಗಳಲ್ಲೂ ವಿದೇಶಿ ನೇರಹೂಡಿಕೆಯನ್ನು ಹೆಚ್ಚಿಸಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ.

ಕಳೆದ ನಾಲ್ಕು ವರ್ಷಗಳಲ್ಲಿ ಸರ್ಕಾರದ ಕೈಗಳು ಎಡಪಕ್ಷಗಳಿಂದ ಕಟ್ಟಿ ಹೋಗಿತ್ತು; ಇನ್ನು ಮುಂದಿನ ಮೇ ತಿಂಗಳವರೆಗೆ ಅಧಿಕಾರದಲ್ಲಿ ಉಳಿಯಲು ಸಮಾಜವಾದಿ ಪಕ್ಷದ ಬೇಡಿಕೆಗಳಿಗೆ ಮಣಿಯುವ ಪರಿಸ್ಥಿತಿ ಯುಪಿಎ ಸರ್ಕಾರದ್ದು. ಜುಲೈ 2 ಮತ್ತು 4ರಂದು ಪ್ರಧಾನಿ ಮನಮೋಹನ್‌ಸಿಂಗ್ ಅವರಿಗೆ ಅಮರ್ ಸಿಂಗ್ ಬರೆದ ಎರಡು ಪತ್ರಗಳಲ್ಲಿ ಭಾರಿ ಬೇಡಿಕೆಗಳೇ ಇವೆ. ಲಾಭ ಅಥವಾ ನಷ್ಟದಲ್ಲಿರುವ ತೈಲ ಉತ್ಪನ್ನ ಸಂಸ್ಥೆಗಳು ಹಾಗೂ ತೈಲ ಸಂಸ್ಕರಣ ಘಟಕಗಳ ಆದಾಯದ ಮೇಲೆ ಶೇ. 50ರಷ್ಟು ತೆರಿಗೆ ವಿಧಿಸಲು ಕೋರಲಾಗಿದೆ. ಇದರಿಂದ 100,000 ಕೋಟಿ ರೂ. ಆದಾಯ ಬರುವುದಾಗಿ ಹೇಳಿದ್ದಾರೆ. ಎರಡನೆಯದಾಗಿ ಹೆಚ್ಚುತ್ತಿರುವ ಜಿಎಸ್‌ಎಂ (ಗ್ಲೋಬಲ್ ಸಿಸ್ಟಮ್ ಫಾರ್ ಮೊಬೈಲ್) ಕೈಗಾರಿಕೆಗಳ ಮೇಲೆ ಹೆಚ್ಚುವರಿ ಶುಲ್ಕ ವಿಧಿಸಿದರೆ 10,000 ಕೋಟಿ ರೂ. ಆದಾಯ ಬರಲಿದೆ ಎಂದು ಸೂಚಿಸಿದ್ದಾರೆ. ಮೊದಲನೆಯ ಬೇಡಿಕೆ ಮುಖೇಶ್ ಅಂಬಾನಿಯವರ ರಿಲೈಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ಗೆ ಹೊಡೆತ ನೀಡಲಿದೆ. ಎರಡನೆಯ ಬೇಡಿಕೆ ಅನಿಲ್ ಅಂಬಾನಿ ಮತ್ತು ಜಿಎಸ್‌ಎಂ ದಿಗ್ಗಜಗಳಾದ ಭಾರ್ತಿ ಮತ್ತು ವೊಡಾಫೋನ್ ಕಂಪನಿಗಳಿಗೆ ಪೆಟ್ಟು ನೀಡಲಿದೆಯೆಂದು ನಿರೀಕ್ಷಿಸಲಾಗಿದೆ. Special Story - The Sunday Indian- Kannada

ಯುಪಿಎಗೆ ಈಗ ಎರಡು ಆಯ್ಕೆಗಳಿವೆ: ಅಮರ್ ಸಿಂಗ್ ಅವರ ಬೇಡಿಕೆಗಳಿಗೆಲ್ಲಾ ತಲೆಬಾಗಿ ಮುಂದಿನ ಏಪ್ರಿಲ್‌ವರೆಗೆ ಸರ್ಕಾರವನ್ನು ನಡೆಸಿ ಚುನಾವಣೆಯನ್ನು ತಡೆಯುವುದು. ಇಲ್ಲವೇ ಮುಂಗಾರು ಅಧಿವೇಶನದ ನಂತರ ಸಂಸತ್ತನ್ನು ವಿಸರ್ಜಿಸಿ ಚುನಾವಣೆ ನಡೆಯುವವರೆಗೆ ಉಸ್ತುವಾರಿ ಸರ್ಕಾರ ನಡೆಸುವುದು. ಸದ್ಯದ ರಾಜಕೀಯ ಪರಿಸ್ಥಿತಿ ರಾಷ್ಟ್ರ ಮತ್ತು ಪ್ರಾದೇಶಿಕ ಮಟ್ಟದ ರಾಜಕೀಯ ಮೈತ್ರಿಯಲ್ಲೂ ಹೊಸ ತಿರುವು ಮೂಡಿಸಲಿದೆ. ಯುಎನ್‌ಪಿಎ ಕೂಟ ಸೇರಲು ಬಿಎಸ್‌ಪಿ ಈಗಾಗಲೇ ಟಿಡಿಪಿ ಜೊತೆ ಮಾತುಕತೆ ನಡೆಸಿದೆ. ಆಂಧ್ರಪ್ರದೇಶದಲ್ಲಿ ಟಿಆರ್‌ಎಸ್ ಮತ್ತು ಚಿರಂಜೀವಿ ಅವರ ಸ್ವಯಂ ಕೃಷಿ ಪಕ್ಷಗಳೆರಡನ್ನೂ ತಮ್ಮತ್ತ ಸೆಳೆದುಕೊಳ್ಳಲು ಬಿಜೆಪಿ ಮತ್ತು ಕಾಂಗ್ರೆಸ್ ಯತ್ನಿಸುತ್ತಿವೆ. ತಮಿಳುನಾಡಿನಲ್ಲಿ ಜಯಲಲಿತಾ ಅವರ ಮೈತ್ರಿಗೆ ಪಿಎಂಕೆ ಸಿದ್ಧವಾಗಿದೆ. ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ವಿರುದ್ಧ ಪರಿಣಾಮಕಾರಿಯಾಗಿ ಸ್ಪರ್ಧೆ ನಡೆಸಲು ಕಾಂಗ್ರೆಸ್ ಜೊತೆ ಮೈತ್ರಿಗೆ ಎಸ್‌ಪಿ ಸಿದ್ಧವಾಗಿದೆ. ಕಾಂಗ್ರೆಸ್ ನೆರವಿನೊಂದಿಗೆ ಮಧ್ಯ ಪ್ರದೇಶ, ಆಂಧ್ರ ಪ್ರದೇಶ, ದೆಹಲಿ, ರಾಜಸ್ಥಾನ ಮತ್ತು ಬಿಹಾರಗಳಲ್ಲಿ ಖಾತೆ ತೆರೆಯಲು ಎಸ್‌ಪಿ ಹವಣಿಸುತ್ತಿದೆ. ಹೀಗೆ ಎಸ್‌ಪಿ ನಿರ್ಗಮನದೊಂದಿಗೆ ಯುಎನ್‌ಪಿಎ ಒಕ್ಕೂಟ 'ಅಕಾಲ ಮರಣ'ಕ್ಕೆ ತುತ್ತಾಗಬಹುದು; ಈಗಾಗಲೇ ಯುಎನ್‌ಪಿಎಯಲ್ಲಿನ ಇತರ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್, ಅಸ್ಸಾಂ ಗಣ ಪರಿಷತ್, ಬಾಬು ಲಾಲ್ ಮರಾಂಡಿ ಮತ್ತು ಇಂಡಿಯನ್ ನ್ಯಾಷನಲ್ ಲೋಕ ದಳ ಪಕ್ಷಗಳು ಎನ್‌ಡಿಎ ಸೇರಲು ಸಜ್ಜಾಗಿವೆ. 'ನಾವು ಒಂದೊಮ್ಮೆ ಎನ್‌ಡಿಎನಲ್ಲೇ ಇದ್ದೆವು' ಎಂದು ಐಎನ್‌ಎಲ್‌ಡಿ ಪಕ್ಷದ ಒ.ಪಿ. ಚೌಟಾಲಾ ಈಗಾಗಲೇ ರಾಗ ತೆಗೆದಿದ್ದಾರೆ.

ಪರಮಾಣು ಒಪ್ಪಂದದ ರಾಜಕೀಯ ಆಯಾಮವನ್ನು ಸರಳವಾಗಿಸಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲವಾಗಿದ್ದೇ ಇಂದಿನ ರಾಜಕೀಯ ಸಂದಿಗ್ಧತೆಗೆ ಕಾರಣ. ಅದೇನೇ ಇರಲಿ.

ರಾಜಕೀಯ ನಾಟಕದ ಪ್ರಥಮ ಅಂಕದ ಪರದೆಯಂತೂ ಇಳಿಬಿದ್ದಿದೆ. ಇನ್ನೂ ಬಹಳಷ್ಟು ನಾಟಕೀಯ ತಿರುವುಗಳಿಗೆ ವೇದಿಕೆ ಸಿದ್ಧವಾಗಿದೆ.

 ಟಿಎಸ್‌ಐ

ಪೂರಕ ಮಾಹಿತಿ: ಅನಿಲ್ ಪಾಂಡೆ (ದೆಹಲಿ),
ಅವಿನಾಶ್ ಮಿಶ್ರಾ (ಲಖನೌ)

ಯುಪಿಎ ಸರ್ಕಾರದ ಅಪೂರ್ಣ ಕಾರ್ಯಸೂಚಿಗಳು

ಸರ್ಕಾರಿ ಕಂಪನಿಗಳ ಖಾಸಗೀಕರಣ

ಟೆಲಿಕಾಂ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆ ಈಗಿನ ಶೇ. 49ರಿಂದ ಶೇ. 74ಕ್ಕೆ ಏರಿಕೆ

ವಿಮೆ ಮತ್ತು ನಾಗರಿಕ ವಿಮಾನಯಾನ ಕ್ಷೇತ್ರಗಳಲ್ಲಿ ವಿದೇಶಿ ನೇರ ಹೂಡಿಕೆ ಏರಿಕೆ

ಪಿಂಚಣಿ ಅನುದಾನ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರ ಮಸೂದೆ

ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಷೇರುಗಳ ಮಾರಾಟ

ರೀಟೇಲ್ ಕ್ಷೇತ್ರದಲ್ಲಿ ವಿದೇಶಿ ಷೇರುಗಳು

ವಿದೇಶಿ ಬ್ಯಾಂಕುಗಳಿಗೆ ಸರಳ ನಿಯಮಾವಳಿಗಳು

ಕ್ರೆಡಿಟ್ ರೇಟಿಂಗ್ ಕಂಪನಿಗಳಿಗೆ ಸರಳ ಪ್ರವೇಶ ನಿಯಮಾವಳಿಗಳು

ಸರ್ಕಾರಿ ಸಂಸ್ಕರಣ ಯೋಜನೆಗಳಲ್ಲಿ ವಿದೇಶಿ ನೇರ ಹೂಡಿಕೆ ಏರಿಕೆ

ದಿನಪತ್ರಿಕೆಗಳು ಮತ್ತು ಪ್ರಚಲಿತ ವಿದ್ಯಮಾನಗಳ ವಾರಪತ್ರಿಕೆಗಳಲ್ಲಿ ವಿದೇಶಿ ನೇರ ಹೂಡಿಕೆ ಏರಿಕೆ

ಎಫ್‌ಎಂ ರೇಡಿಯೋಗಳಲ್ಲಿ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳ ಪ್ರಸಾರಕ್ಕೆ ಅವಕಾಶ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .