|

ಕೋಗಾರಿನ ಘಾಟಿ ರಸ್ತೆಯಲ್ಲಿ ವಾಹನದಲ್ಲಿ
ಹೋಗುವುದೆಂದರೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹೋದ ಹಾಗೆ.
ಸೂರ್ಯ ನೆತ್ತಿಗೇರಿದ್ದರೂ ಬೆಳಕಿನ ಕಿರಣ ಒಳಗೆ
ಇಳಿಯದಂತಹ ಕಾಡಿನ ನಡುವೆ ಹೋಗಲು ಧೈರ್ಯ ಬೇಕಿತ್ತು.
ಹಿಂದೆ ಯಾವುದೋ ಕಾಲದಲ್ಲಿ ಗಾಡಿಗಳ ಓಡಾಟಕ್ಕೆಂದು
ಮಾಡಲಾಗಿದ್ದ ರಸ್ತೆಯಲ್ಲಿ ಈಗಲೂ ಹೆಚ್ಚಾಗಿ ಗಾಡಿಗಳೇ ತಿರುಗಾಡುತ್ತಿದ್ದರೂ
ಬೆಳಿಗ್ಗೆ ಸಂಜೆ ಅನ್ನುವ ಹಾಗೆ ಎರಡು ಬಸ್ಸುಗಳು ಈ ರಸ್ತೆಯಲ್ಲಿ
ತಿರುಗಾಡುತ್ತಿದ್ದವು.
ಒಂದು ಸಾರಿ ಒಂದು ಬಸ್ಸು ಹಾದು ಹೋಯಿತೆಂದರೆ ಎದ್ದ ದೂಳಿನ
ಮೋಡ ತಿಳಿಯಾಗಲು ಅರ್ಧಗಂಟೆ ಬೇಕಾಗುತ್ತಿತ್ತು.
ಹೀಗೆ ಎದ್ದ ದೂಳು ಎಲೆಗಳ ಮೇಲೆ ಕೂತು ಎಲೆಗಳೆಲ್ಲ
ತಮ್ಮ ಮೂಲ ಬಣ್ಣವನ್ನ ಕಳೆದುಕೊಂಡಿದ್ದವು.
ಕೇವಲ ಗಿಡ ಮರ ಎಲೆಗಳು ಮಾತ್ರವಲ್ಲ ರಸ್ತೆಯ
ಇಕ್ಕೆಲದಲ್ಲಿಯ ಎಲ್ಲವೂ ದೂಳುಮಯವಾಗಿ ಅದೇ ಒಂದು ವಿಶೇಷ ದೃಶ್ಯಾವಳಿಯನ್ನ
ಸೃಷ್ಟಿಸಿತ್ತು.
ದಟ್ಟ ಕಾಡಿನ ಕತ್ತಲೆಯ ಜೊತೆಗೆ ಈ ದೂಳು ಆವರಿಸಿಕೊಂಡ ನೋಟ
ಕೂಡ ಅಲ್ಲಿಯ ಭೀಕರತೆಗೆ ತನ್ನ ಪಾಲನ್ನು ಸೇರಿಸಿತ್ತು.
ರಸ್ತೆಯ ಎಡ ಪಾರ್ಶ್ವ ನೆಟ್ಟ ಮೈಲಿ ಕಲ್ಲುಗಳು
ಈ ದೂಳಿನಿಂದ
ಅಲ್ಲಿ ಬೆಳೆದ ಗಿಡ ಬಳ್ಳಿಗಳಿಂದ
ಆವೃತ್ತಗೊಂಡು ತನ್ನ ಅಸ್ತಿತ್ವವನ್ನೇ
ಕಳೆದುಕೊಂಡಿದ್ದವು.
ಇಂತಹ ಮೈಲಿ ಕಲ್ಲುಗಳಿಗೆ ಹೊಸದಾಗಿ ಬಣ್ಣ ಹೊಡೆಸಬೇಕು
ಅನ್ನುವ ಒಂದು ಜ್ಞಾನ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗೆ ಬಂದಿದ್ದರೂ ಅಲ್ಲಿ
ಹೋಗಿ ಕಾಡಿನಲ್ಲಿ ಕಾಣೆ ಆಗಿರುವ ಮೈಲಿ ಕಲ್ಲುಗಳನ್ನು ಹುಡುಕಿ
ಅವುಗಳಿಗೆ ಬಣ್ಣ ಹಚ್ಚಲು ಯಾವ ಪೈಂಟರನೂ
ಬಾರದ್ದರಿಂದ ಇದೊಂದು ಕೆಲಸ ಹಾಗೇ ಬಾಕಿ ಉಳಿದಿತ್ತು.
ಅಲ್ಲದೆ ರಸ್ತೆಯುದ್ದಕ್ಕೂ ಇರುವ ಫರ್‍ಲಾಂಗ ಕಲ್ಲು
ಮೈಲಿ ಕಲ್ಲುಗಳಿಗೆ ಬಣ್ಣ ಹಚ್ಚುವುದು ಸುಲಭದ
ಕೆಲಸವಾಗಿರಲಿಲ್ಲ.
ಆ ರಸ್ತೆಯಲ್ಲಿ ವಾಹನ
ಜನರ ಓಡಾಟ ಕಡಿಮೆ.
ಅಲ್ಲಿ ಹಳ್ಳಿಗಳೂ ಇಲ್ಲ.
ದಟ್ಟವಾದ ಕಾಡು.
ಕಾಡು ಪ್ರಾಣಿಗಳು ಬೇರೆ.
ಹೀಗಾಗಿ ಈ ಕೆಲಸ ಬಹಳ ವರ್ಷಗಳಿಂದ ನೆನೆಗುದಿಗೆ
ಬಿದ್ದಿತ್ತು.
ಆದರೆ ಇಲ್ಲಿ ಮೈಲಿ ಕಲ್ಲುಗಳೇ ಇಲ್ಲ ಅನ್ನುವ ಒಂದು ಆಪಾದನೆ
ಇಲಾಖೆಯ ಮೇಲೆ ಇದ್ದುದರಿಂದ ಈ ಕೆಲಸವನ್ನ ಮಾಡಿಸಲು ಇಂಜಿನಿಯರ
ತರಾತುರಿಯಲ್ಲಿದ್ದ.
ಕೊನೆಗೂ ಆತ ಓರ್ವ ಪೈಂಟರನ್ನ ಈ ಕೆಲಸಕ್ಕೆ ಹುಡುಕಿ ತಂದ.
ಸಾಗರದ ಓರ್ವ ಪೈಂಟರಿನ ಬಳಿ ಸಹಾಯಕನಾಗಿ ಕೆಲಸ
ಮಾಡುತ್ತಿದ್ದ ಮಾಲಿಂಗನನ್ನ ಪುಸಲಾಯಿಸಿ ಈ ಕೆಲಸಕ್ಕೆ ಕರೆತಂದ.
ಒಂದು ದಿನ ಕೋಗಾರಿನ ಆ ನಿಗೂಢ ಕಾಡಿನ ನಡುವಣ
ಕೆಮ್ಮಣ್ಣಿನಿಂದ ತುಂಬಿದ ರಸ್ತೆಯ ಮೆಲೆ ಟಿಣ್ ಟಿಣ್ ಸದ್ದು ಮಾಡುತ್ತ ಒಂದು
ಸೈಕಲ್ಲು ಇಳಿದು ಬಂದಾಗ ಅಪರೂಪಕ್ಕೆ ಎದುರಾಗುವ ಒಂಟಿ ಮನೆಗಳ ಜನ ಏನೋ ಅಚ್ಚರಿ
ಕಂಡವರಂತೆ ಮನೆಗಳಿಂದ ಹೊರಬಂದು ಬೆರಗಾಗಿ ನೋಡತೊಡಗಿದರು.
ತುಸು ಹಳೆಯದಾದ ಸೈಕಲ್ಲು.
ಅದರ ಹಿಂಬದಿಯಲ್ಲಿ ಒಂದು ಚೀಲ
ಕೆಲ ಡಬ್ಬಗಳು.
ಅದರ ಮೇಲೆ ನಡು ವಯಸ್ಸಿನ ಓರ್ವ ಯುವಕ.
ಅವನು ತೊಟ್ಟ ಬಟ್ಟೆಗೆಲ್ಲ ಬಣ್ಣ.
ಅವನ ಕೈಗೂ ಬಣ್ಣ.
ಮುಖ ಕೆನ್ನೆಗೂ ಬಣ್ಣ.
ಆ ಕಾಡಿನ ಘಾಟಿ ರಸ್ತೆಯ ಹಂಗು ತನಗಿಲ್ಲ ಎನ್ನುವ
ಹಾಗೆ ಆತ ಸೈಕಲ್ ತುಳಿಯುತ್ತಿದ್ದ.
ಗಂಟೆ ಬಾರಿಸಿ
ಪೆಡಲ್ ತುಳಿದು ಕಾಡಿನ ಎತ್ತರದ ಮರಗಳನ್ನ
ಮರಗಳ ಆಚಿನ ಎತ್ತರದ ಬೆಟ್ಟಗಳನ್ನ ನೋಡುತ್ತ
ಸಿಳ್ಳೆ ಬೇರೆ ಹಾಕುತ್ತಿದ್ದ.
ಒಂದೆರಡು ಬಸ್ಸುಗಳು ಕೆಲ ಎತ್ತಿನ ಗಾಡಿಗಳು
ತಿರುಗಾಡುತ್ತಿದ್ದ ಆ ರಸ್ತೆಯ ಮೇಲೆ ಇದ್ದಕ್ಕಿದ್ದ ಹಾಗೆಯೇ ಸೈಕಲ್ಲೊಂದು
ಬಂದುದರಿಂದ ಮರದ ಮೇಲಿನ ಕೋತಿಗಳು
ಹಕ್ಕಿಗಳು
ಪೊದೆಯಲ್ಲಿ
ಅಡಗಿ ಕುಳಿತ ಇತರೆ ಪ್ರಾಣಿಗಳು ಗಾಬರಿಗೊಂಡು
ಗದ್ದಲ ಮಾಡತೊಡಗಿದವು.
ಈ ಬದಲಾವಣೆಯಿಂದ ಸಂತಸಗೊಂಡ ಸವಾರ ಹೆಮ್ಮೆಯಿಂದಲೇ
ಸೈಕಲ್ಲಿನ ಪೆಡಲನ್ನ ತುಳಿಯತೊಡಗಿದ.
ಈ ಹಿಂದಿನ ಮೈಲಿ ಕಲ್ಲಿಗೆ ಬಿಳಿ ಬಣ್ಣ ಹೊಡೆದು
ಮುಂದಿನ ಮೈಲಿ ಕಲ್ಲನ್ನ ಹುಡುಕಿಕೊಂಡು ಬಂದ ಆತ ಅತ್ತ ಇತ್ತ ನೋಡುತ್ತ ಸೈಕಲ್
ತುಳಿಯುತ್ತಿದ್ದ.
ಈ ಸೈಕಲ್ ಸವಾರನಿಗೆ ಆಯಾಸವಾಗಿತ್ತು
ಕುಡಿಯಲು ಏನಾದರೂ ಸಿಕ್ಕರಾಗುತ್ತಿತ್ತು ಎಂದು
ಕೂಡ ಆತ ಬಯಸುತ್ತಿದ್ದ.
ಅವನ ಬಯಕೆ ಈಡೇರಿಸುವಂತೆ ಒಂದನ್ನೊಂದನ್ನು ಅಪ್ಪಿಕೊಂಡು
ನಿಂತ ಮರಗಳ ನಡುವೆ ಚಾ ಅಂಗಡಿಯೊಂದನ್ನು ಕಂಡು ಆತನ ಮುಖ ಅರಳಿತು.
ತನ್ನ ಚಾ ಅಂಗಡಿಯ ಮುಂದಿನ ಅಡ್ಡ ಬೆಂಚಿನ ಮೇಲೆ
ಕುಳಿತಿದ್ದ ಪರಮಯ್ಯ ಆ ರಸ್ತೆಯಲ್ಲಿ ಇದೇ ಮೊದಲ ಬಾರಿಗೆ ಸೈಕಲ್ಲೊಂದು
ಬಂದುದರಿಂದ-
ವಾಯ್
ಬನ್ನಿ ಚಾ ಕುಡಿದು ಹೋಗುವಿರಂತೆ
ಎಂದು ಸೈಕಲ್‌ನವನನ್ನು ಸ್ವಾಗತಿಸಿದ.
ಪರಮಯ್ಯನ ಚಾ ದುಕಾನಿಗೆ ಗಿರಾಕಿಗಳೇ ಕಡಿಮೆ.
ಬೆಳಿಗ್ಗೆ
ಸಾಯಂಕಾಲ ಬರುವ ಬಸ್ಸುಗಳು ಅಲ್ಲಿ ನಿಲ್ಲುವುದು
ಬಿಟ್ಟರೆ
ಅಡಕೆ ತುಂಬಿಕೊಂಡು ಹೋಗುವ ಗಾಡಿಗಳು ಮಾತ್ರ ಅಲ್ಲಿ ಮೂಕಿ
ಊರುವುದು.
ಇನ್ನು ಜನ ಅಂದರೆ ಕೋಗಾರು
ನಾಗವಳ್ಳಿ
ಹಾಡುವಳ್ಳಿಗಳಿಗೆ ಹೋಗುವ ಜನ.
ಕೆಲ ಫಾರೆಸ್ಟ್ ಗಾರ್ಡುಗಳು.
ಇಷ್ಟೇ.
ಒಂದು ಅರ್ಥದಲ್ಲಿ ಪರಮಯ್ಯ ಇಲ್ಲಿ ಚಾ
ದುಕಾನಿನಲ್ಲಿ ಕೂತು ಕೆಲಬಾರಿ ನೊಣ ಹೊಡೆಯುವುದೂ ಇತ್ತು.
ಇಲ್ಲವೆ ಕಾಡಿನಲ್ಲಿ ಸದಾ ಕೂಗುವ ಜೀರುಂಬೆಗಳ
ಧ್ವನಿ ಕೇಳುವುದು.
ಹೀಗಾಗಿ ಈ ಹೊಸ ಜನವನ್ನ ಕೋಗಾರಿನ ರಸ್ತೆಯ ಮೇಲೆ ಕಂಡದ್ದೇ
ಪರಮಯ್ಯನ ನಾಲಿಗೆ ಚುರುಗುಟ್ಟಿತು.
ಬನ್ನಿ
ಬನ್ನಿ ಎಂದು ಆತ ಸೈಕಲ್ಲಿನವನಿಗೆ ಸ್ವಾಗತ ಕೋರಿಯೂ
ಆಯಿತು.
ಏನು ಕಾಡು
ಏನು ಕಾಡು
ಎಂದು ದುಕಾನಿನ ಮುಂದೆ ಸೈಕಲ್ಲನ್ನು ನಿಲ್ಲಿಸಿ
ಆತ ಒಳಗೆ ಬಂದ.
ಉದ್ದಕ್ಕೂ ಒಂದು ಚಾ ದುಕಾನ್ ಸಿಗಬಾರದೆ ಅಂತ
ಹರಕೆ ಹೇಳಿಕೊಂಡೇ ಬಂದೆ..
ಅಂತು ಇಲ್ಲೇ ಒಂದು ಚಾ ದುಕಾನು ಉಂಟು ಅಂತ ಆತಲ್ಲ..
ಒಂದು ಚಾ ಕೊಡಿ..
ಪೆಸಲ್ ಚಾ ಮಾಡಿ ಕಾಂಬ
ಎಂದ ಆ ಯುವಕ
ಕೈ ಬೆರಳಿಗೆ ಅಂಟಿಕೊಂಡ ಬಿಳಿ ಬಣ್ಣವನ್ನು ತುಂಡು
ಬಟ್ಟೆಯಿಂದ ಒರಿಸಿಕೊಳ್ಳುತ್ತ.
ಅಲ್ಲ ಇದೇನು ವೇಷ ನಿಮ್ಮದು..
ಮೈಕೈಗೆಲ್ಲ ಬಣ್ಣ..
ಏನು ತುಮ್ರಿ ಊರಾಗೆ ಏನಾರ ಗುಲಾಲು ಎರಚೋ ಹಬ್ಬಾನ...?
ಆತ ಈಗಾಗಲೇ ತನಗೆ ಪರಿಚಿತ ಎಂಬಂತೆ ಮಾತಿಗೆ
ತೊಡಗಿದ ಪರಮಯ್ಯ.
ನನ್ನ ಮೈಮೇಲೆ ಗುಲಾಲು ಎರಚೋದ...
ನಾನೇ ಬಣ್ಣದ ಮಾಲಿಂಗ ಗೊತ್ತೋ ನಿಮಗೆ...
ನಾನು ಮೈಲಿ ಕಲ್ಲಿಗೆ ಬಣ್ಣ ಹಚ್ಚಲಿಕ್ಕ ಬಂದಿರೋನು..
ಸರಕಾರಿ ಕೆಲಸ ನಂದು...
ಹಾಗೆಲ್ಲ ಸಸಾರಿ ಕೆಲಸ ಅಲ್ಲ...
ಒಂದ್ ಕಡೆ ಅರಲಗೋಡಿಂದ ಮೈಲಿ ಕಲ್ಲಿಗೆಲ್ಲ ಬಣ್ಣ
ಬಳೀತಾ ಬರತಾ ಇದೀನಿ
ಎಂದ ಯುವಕ
ಪರಮಯ್ಯ ಮೇಜಿನ ಮೇಲೆ ಇರಿಸಿದ ಪಾತ್ರೆಯಿಂದ ಮುಖ
ತೊಳೆದು ಒಳ ಬರುತ್ತ.
ನಿಮ್ಮ ಕೆಲಸ ಆದ್ರೆ ಆದೀತು ಬಿಡ್ರಾ
ಎಂದ ಪರಮಯ್ಯ.
ಅಲ್ಲ ಹಂಗೆ ಹೇಳೂಕೆ ಒಂದು ಕಾರಣ ಬೇಕಲ್ಲ.
ಯಾಕೆ ಈ ಕೆಲಸ ಆದೀತು ಅಂದಿದ್ದು ನೀವು?
ಎಂದು ತಿರುಗಿ ಪ್ರಶ್ನೆ ಕೇಳಿದ ಮಾಲಿಂಗ.
ಅಲ್ಲಪ್ಪ
ಲಾಗಾಯ್ತನಿಂದ ನಾನು ನೋಡ್ತಾ ಬಂದುದ್ದುಂಟಲ್ಲ...ಇಲ್ಲಿ
ಮೈಲಿ ಕಲ್ಲಿಗೆ ಬಣ್ಣ ಹಚ್ಚೂಕೆ ಅಂತ ಯಾರಾದರೂ ಬಂದದ್ದು ಉಂಟ ಹೇಳಿ...
ಇಷ್ಟ ವರ್ಷಕ್ಕೆ ನೀವೇ ಬಂದದ್ದೂ ಅದಕ್ಕೆ ಹೇಳಿದೆ
ಎಂದು ತನ್ನ ಮಾತಿಗೆ ಸಮಜಾಯಿಷಿ ನೀಡಿದ ಪರಮಯ್ಯ.
ಯಾರೂ ಬರೋದಿಲ್ಲ.
ಒಂಟಿ ಭೂತದ ಹಾಂಗೆ ಕಾಡಾಗೆ ಅಡಗಿರೋ ಕಲ್ಲನ್ನ
ಹುಡುಕಿ ಅದನ್ನ ಕಿಲೀನ್ ಮಾಡಿ
ಸುತ್ತ ಬೆಳೆದಿರೋ ಗಿಡ ಬಳ್ಳಿ ತೆಗೆದು ಹಾಕಬೇಕು.
ಬಿಳಿ ಬಣ್ಣ
ಆಮೇಲೆ ಕರೀ ಬಣ್ಣ ಅಂತ ಅದಕ್ಕೆ ಬಳೀಬೇಕು.
ಮರದಾಗಿನ ಮುಶಿಯ
ಮಂಗಗಳೆಲ್ಲ ನನ್ನನ್ನ ನೋಡಿ ಕೂಗಬೇಕು
ನರಿಯೋ ತೋಳವೋ ಕಾಡಿಂದ ಓಡಬೇಕು.
ಈ ಕೆಲಸಕ್ಕೆ ಯಾರೂ ಬರೋದಿಲ್ಲ...
ನಾನಂತೂ ಬಂದೀನಿ ಬಂದ ತಪ್ಪಿಗೆ ಮಾಡಿ ಹೋಗತೇನೆ...
ಎಂದು ಮಾಲಿಂಗ ತನ್ನ ಕಷ್ಟವನ್ನೆಲ್ಲ ಕೆಲವೇ
ಶಬ್ದಗಳಲ್ಲಿ ಹೇಳಿಕೊಳ್ಳುವ ಯತ್ನ ಮಾಡಿದ.
ಪರಮಯ್ಯ ಬಿಸಿಬಿಸಿ ಚಾ ಮಾಡಿ ಅದನ್ನ ನಾಲ್ಕು
ಸಾರಿ ಉದ್ದಕೆ ಎಳೆದು ತಣ್ಣಗಾಗಿಸಿ ಲೋಟಕ್ಕೆ ಹಾಕಿ ತಂದು ಮೇಜಿನ ಮೇಲೆ
ಇಡುವಾಗ ಮಾಲಿಂಗನನ್ನ ಕೇಳಿದ-
ಎಷ್ಟ ದಿನ ಈ ಕೆಲಸ?
ಹೀಗೆ ಹಾಡುವಳ್ಳಿ ತನಕ ಬಣ್ಣ ಹಚೋದು..
ಒಂದು ದಿನ ಬಿಳಿ ಬಣ್ಣ ಬಳಿಯೋದು
ಮತ್ತೊಂದು ದಿನ ಕರಿಬಣ್ಣ...
ತುಳೀದ ದಾರೀನ ತುಳಿಯೋದು...
ಹಿಡಿದ ಬ್ರಶನ್ನೇ ಹಿಡಿಯೋದು..
ಬಣ್ಣ ಬೇರೆ..
ಕಲ್ಲು ಬೇರೆ
ಸುರ್ ಸುರ್ ಎಂದು ಸದ್ದುಮಾಡುತ್ತಾ ಆತ ಚಾ
ಅನ್ನು ಗಂಟಲಿಗೆ ಇಳಿಸಿದ.
ಹಂ ಹಣ ಎಷ್ಟು?
ಚಾ ಚೆನ್ನಾಗದೆ
ಇರಲಿ
ಇರಲಿ.
ನೀವು ಇದೇ ಪಷ್ಟ ಅಲ್ದಾ ನಮ್ಮ ದುಕಾನಿಗೆ ಬಂದದ್ದು
ಮತ್ತೆ ಬನ್ನಿ..
ಇನ್ನೊಂದು ನಾಲ್ಕು ದಿನ..
ಇಲ್ಲಿರೋ ಐದಾರು ಕಲ್ಲಿಗೆ ಬಣ್ಣ ಹಚ್ಚೋ ತನಕ
ಅಷ್ಟೇ.
ನಂತರ ಮುಂದೆ ಪ್ರಯಾಣ ಆತ ನಕ್ಕ.
ಹಾಂಗೇ ಮಾಡಿ.
ಈ ಚಾ ದುಕಾನಿಗೆ ಖಾಯಂ ಗಿರಾಕಿಗಳು ಹೆಚ್ಚಿಲ್ಲ
ಕಾಣೆ.
ಬೆಳಿಗ್ಗೆ ಬರೋ ಗಜಾನನ ಬಸ್ಸಿನ ರುಜಾರಿ ಒಬ್ನೇ ನನಗೆ ಖಾಯಂ
ಗಿರಾಕಿ
ಆದರೆ ಅವಂ ಕಾಸು ಕೊಡೋದಿಲ್ಲ...
ಬಸ್ಸು ತಂದು ಇಲ್ಲಿ ನಿಲ್ಲಿಸಿ ಜನ ತಂದು ಕೊಡತಾನೆ.
ಒಳ್ಳೆಯವ...
ಇಲ್ಲ ಅಂದರೆ ಈ ಕಾಡಾಗೆ ನಾನು ಚಾ ದುಕಾನು
ನಡೆಸೋದುಂಟ?
ಆಯ್ತು ನಾ ಬರತೇನೆ
ಮಾಲಿಂಗನ ಸೈಕಲ್ಲು ಮಣ್ಣಿನ ರಸ್ತೆಗೆ ಇಳಿಯಿತು.
ಟಣ್ ಟಣ್ ಸದ್ದುಮಾಡುತ್ತ ಹೋದ ಅದು ಕೊಂಚ ದೂರ
ಹೋಗಿ ತಟ್ಟನೆ ನಿಂತಾಗ ಪರಮಯ್ಯ ಬಗ್ಗಿ ನೋಡಿದ.
ಮಾಲಿಂಗ ರಸ್ತೆ ಮಗ್ಗುಲಲ್ಲಿ ಬಿದ್ದುಕೊಂಡಿದ್ದ
ಕೂಸನನ್ನ ಕುತೂಹಲದಿಂದ ನೋಡುತ್ತ ನಿಂತಿದ್ದ.
ಇದು ಕೂಸನ ಎಂದಿನ ಹವ್ಯಾಸ.
ಬೆಳಿಗ್ಗೆ ಒಡೆಯರ ತೋಟದ ಕೆಲಸಕ್ಕೆ ಎಂದು ಬಂದವ
ಮೊದಲು ತನಿಯನ ಗಡಂಗಿಗೆ ಹೋಗಿ ಅಲ್ಲಿ ಕಂಠ ಮಟ ಕುಡಿದು ಇಲ್ಲಿ ರಸ್ತೆ
ಮಗ್ಗಲಲ್ಲಿ ಬಿದ್ದರೆ ಅವನನ್ನ ಹೊತ್ತೊಯ್ಯಲು ಅವನ ಮಗಳು ಶಂಕ್ರಿಯೇ ಬರಬೇಕು.
ಅಲ್ಲಿಯವರೆಗೆ ಕೂಸ ಇಲ್ಲಿಯೇ.
ಪರಮಯ್ಯ ಎರಡು ಹೆಜ್ಜೆ ಮುಂದೆ ಬಂದು
ಮಾಲಿಂಗನಿಗೆ ಹೇಳಿದ-
ಆ ಜನ ಹಂಗೆಯೇ
ನೀವು ಹೋಗಿ
ಇದನ್ನು ವಿಚಾರಿಸಿಕೊಳ್ಳೂಕೆ ಬೇರೆಯವರು ಬರತಾರೆ
ಅಲ್ಲ ಯಾರೋ ಪಾಪ...
ಅದು ಹಂಗೇಯ.
ನಮಗೆ ನಿಮಗೆ ಪಾಪ.
ಅವಂಗೆ ಪಾಪ ಗೀಪ ಏನಿಲ್ಲೇ...
ನಡಿರಿ ಕಾಂಬ
ಮಾಲಿಂಗ ಕೂಸನ ಮಗ್ಗುಲಲ್ಲಿ ನಿಂತು
ಕನಿಕರದಿಂದ ನೋಡಿ ನಿಧಾನವಾಗಿ ಅಲ್ಲಿಂದ ಹೊರಟಾಗ ದೂರದಲ್ಲಿ ಕೂಸನ ಮಗಳು
ಶಂಕ್ರಿ-
ದ್ಯಾವರೇ ಈಗ್ಲೇ ಕುಡಿದು ಬಿದ್ದಾತ ಇದು
ಎಂದು ಹೇಳುತ್ತ ಬರುತ್ತಿರುವುದನ್ನ ಪರಮಯ್ಯ
ನೋಡಿದ
ಆ ಮಾಲಿಂಗನೂ ನೋಡಿದ.
ಮುಂದೆ ಬಂದ ತಿರುವೊಂದು ಬೆನ್ನ ಹಿಂದಿನ
ದೃಶ್ಯವನ್ನ ಮುಚ್ಚಲು ಮಾಲಿಂಗ ಸೈಕಲ್ ತುಳಿಯತೊಡಗಿದ.
*******
ಮಾಲಿಂಗ ಸಂಜೆಯ ತನಕ ಆ ರಸ್ತೆಯುದ್ದಕ್ಕೂ
ಕೆಲಸ ಮಾಡಿದ.
ಇನ್ನೇನು ಭಟ್ಕಳ ಸಾಗರ ಬಸ್ ಬರುತ್ತದೆ ಅನಿಸಿದಾಗ
ಸೈಕಲನ್ನು ತಂದು ಪರಮಯ್ಯನ ಹೊಟೇಲಿನಲ್ಲಿ ಇರಿಸಿ-
ಭಟ್ಟರೆ ಇದು ಇಲ್ಲಿ ಇರಲಿ
ನಾನು ನಾಳಿ ಬೆಳಿಗ್ಗೆ ಬತ್ತೆ..
ಇಲ್ಲಿ ಇದಕ್ಕೆ ಏನೂ ತೊಂದರೆ ಇಲ್ಲ ಅಲ್ವಾ?
ಎಂದು ಕೇಳಿದ.
ಅಯ್ಯೋ ನಿಮ್ದು ಸೈಕಲ್ ಅಲ್ದಾ.
ಇಲ್ಲಿ ಲಾರಿ ಬಸ್ಸು ಸೈತ ಬಿಟ್ಟು ಹೋಗೋದುಂಟು.
ಅದು ಕೆಟ್ಟು ನಿಂತಾಗ ಅದನ್ನ ಮುಟ್ಟಾಕೆ ಯಾರೂ
ಬರೂದಿಲ್ಲ ಬಿಡಿ
ಎಂದ ಪರಮಯ್ಯ.
ಮಾಲಿಂಗ ಬಸ್ಸನ್ನು ಏರಲು ಸಿದ್ದನಾಗ ತೊಡಗಿದ.
ತನ್ನ ಶರಟು ಇತ್ಯಾದಿ ಸರಿಪಡಿಸಿಕೊಂಡ.
ತನ್ನ ಕೂದಲನ್ನ ಹೊಟೇಲಿನಲ್ಲಿಯ ಕನ್ನಡಿಯಲ್ಲಿ
ಒಂದು ಸಾರಿ ನೋಡಿಕೊಂಡ.
ಆತ ಅಲ್ಲಿ ನಿಂತಿರುವಾಗಲೇ ಕೂಸನ ಮಗಳು ಪರಮಯ್ಯನ ಹೊಟೇಲಿಗೆ
ಬಂದವಳು-
ಒಡೆಯಾ
ನಮ್ ಅಪ್ಪಯ್ಯ ಇಲ್ಲಿ ಎಲ್ಲಾರ ಕಂಡದ್ದುಂಟ?,
ಎಂದು ಕೇಳಿದಳು.
ಅದು ಎಲ್ಲಿ ಬಿದ್ದದೆಯೋ?
ಎಂದು ಕೆದರಿದ ತಲೆಯನ್ನು ಕೆರೆದುಕೊಳ್ಳುತ್ತ
ಮತ್ತೆ ರಸ್ತೆಗೆ ಇಳಿದು ಬೇರೊಂದು ದಿಕ್ಕಿನತ್ತ ನಡೆದಳು.
ಮಾಲಿಂಗ ಕುತೂಹಲದಿಂದೆಂಬಂತೆ ಪರಮಯ್ಯನಿಗೆ ಕೇಳಿದ.
ಯಾರು ಜನ ಇದು?
ಇವರದ್ದೇ ಒಂದು ಕತೆ.
ತಂದೆ ಇಲ್ಲಿ ಬಿಡಾರ ಮಾಡಿಕೊಂಡು ಇರೋದುಂಟು.
ಅಪ್ಪಯ್ಯನಿಗೆ ಕುಡಿಯೋ ಚಟ.
ಮಗಳು ಅವರಿವರಲ್ಲಿ ಚಾಕರಿ ಮಾಡಿ ಇಬ್ಬರ ಹೊಟ್ಟೆ
ಹೊರಿಬೇಕು...
ದೂರದಲ್ಲಿ ಬಸ್ಸು ಬರುತ್ತಿರುವ ಸದ್ದು
ಹತ್ತಿರವಾಗುತ್ತಿರಲು ಮಾಲಿಂಗ ಚಾ ದುಕಾನು ಬಿಟ್ಟು ರಸ್ತೆ ಬದಿಗೆ ಬಂದು
ನಿಂತ.
ಘಾಟಿ ಹತ್ತಿ ಬಂದ ಬಸ್ಸು ಪರಮಯ್ಯನ ಚಾ ದುಕಾನಿನ ಮುಂದೆ
ಮೇಲುಸಿರು ಬಿಡುತ್ತಾ ನಿಂತಾಗ ಒಂದಿಬ್ಬರು ಇಳಿದು
ಮಾಲಿಂಗನನ್ನು ಹತ್ತಿಸಿಕೊಂಡು ಮತ್ತೆ ಪ್ರಯಾಣ
ಮುಂದುವರಿಸಿತು.
ಬಸ್ಸಿನಲ್ಲಿ ಒಂದು ಖಾಲಿ ಸೀಟಿನ ಮೇಲೆ ಕುಳಿತುಕೊಳ್ಳುತ್ತಾ
ಮಾಲಿಂಗ ಬಸ್ಸಿನ ಕಿಟಕಿಯ ಮೂಲಕ ಹೊರಗೆ ದೃಷ್ಟಿ ಬೀರಿ ಒಮ್ಮೆ ಶಂಕ್ರಿಯನ್ನ
ತನ್ನ ಕಣ್ಣುಗಳಲ್ಲಿ ತುಂಬಿಕೊಂಡ.
*******
ಅರಲಗೋಡಿನಿಂದ
ಆಡುವಳ್ಳಿಯವರೆಗಿನ ಮೈಲಿ ಕಲ್ಲುಗಳಿಗೆ ಬಣ್ಣ ಬಳಿಯುವ ಕೆಲಸ ಮುಂದುವರಿದಿತ್ತು.
ಮಾಲಿಂಗ ಪರಮಯ್ಯನ ಚಾ ದುಕಾನಿಗೆ ಒಂದರ್ಥದಲ್ಲಿ
ಖಾಯಂ ಗಿರಾಕಿ ಆಗಿದ್ದ.
ಬೆಳಗ್ಗೆ ಬಸ್ಸಿನಲ್ಲಿ ಬರುವ ಆತ ಪರಮಯ್ಯನ ಚಾ
ದುಕಾನಿನಲ್ಲಿ ಇರಿಸಿದ ಸೈಕಲನ್ನ ತೆಗೆದುಕೊಂಡು ಕೆಲಸಕ್ಕೆ ಹೋಗುತ್ತಿದ್ದ.
ಸಂಜೆ ಮತ್ತೆ ಆ ಸೈಕಲನ್ನ ಅಲ್ಲಿ ಇರಿಸಿ ಬಸ್ಸನ್ನು
ಏರುತ್ತಿದ್ದ.
ಈ ನಡುವೆ ಚಾ ಕುಡಿಯಲು ಇಲ್ಲವೆ ಪರಮಯ್ಯ ಮಾಡುವ ಅಡಿಗೆ
ಸವಿಯಲು ಆತ ಬರುವುದಿತ್ತು.
ಪರಮಯ್ಯ ಬೇಯಿಸುವ ಕುಚಲಕ್ಕಿ ಅನ್ನ
ಅಪ್ಪೆ ಮಿಡಿ ಉಪ್ಪಿನಕಾಯಿ ಹೋಳಿಗೆ
ತೃಪ್ತಿಪಟ್ಟುಕೊಳ್ಳುತ್ತ ಬಂದಿದ್ದ.
ಪರಮಯ್ಯನ ಚಾ ದುಕಾನಿನಿಂದ ಸಾಕಷ್ಟು ದೂರ ಅವನು
ಕೆಲಸ ಮಾಡುವ ಮೈಲಿ ಕಲ್ಲುಗಳ ಸಾಲು ಉಳಿದಿತ್ತು.
ಅಲ್ಲಿಯವರೆಗೆ ಹೋಗಿ ಮೈಲಿ ಕಲ್ಲುಗಳಿಗೆ ಬಣ್ಣ
ಬಳಿದು ಆತ ತಿರುಗಿ ಪರಮಯ್ಯನ ದುಕಾನಿಗೆ ಬರುತ್ತಿದ್ದ.
ಏಕೆಂದರೆ ನಡುವೆ ಯಾವುದೇ ಮನೆ
ಹೋಟೆಲು ಅವನಿಗೆ ಇರಲಿಲ್ಲ.
ಅಕ್ಕಪಕ್ಕದಲ್ಲಿ ಹಬ್ಬಿಕೊಂಡ ಕಾಡಿನಲ್ಲಿ ಆತ
ಒಬ್ಬನೇ ಕೆಲಸ ಮಾಡಬೇಕಿತ್ತು.
ಈ ನಡುವೆ ಒಂದು ಘಟನೆ ನಡೆಯಿತು.
ಮೊನ್ನೆ ಆತ ತಿರುಗಿ ಬರುತ್ತಿದ್ದ.
ಪರಮಯ್ಯನ ಚಾ ದುಕಾನು ತಲುಪಿ ಅಲ್ಲಿ ಸೈಕಲ್ ಇರಿಸಿ
ಬರಲಿರುವ ಬಸ್ಸನ್ನು ಏರಿ ಊರಿಗೆ ಹೋಗುವ ತರಾತುರಿಯಲ್ಲಿ ಆತ ಇದ್ದ.
ತಲೆಯ ಮೇಲೆ ಬೇರೆ ಮುಂಗಾರು ಮೋಡಗಳು
ತೂಗತೊಡಗಿದ್ದವು.
ಆಗಾಗ್ಗೆ ಸಿಡಿಲು ಮೈಮುರಿದು ಗುಡುಗು ಅಪ್ಪಳಿಸುತ್ತಲಿತ್ತು.
ರಸ್ತೆ ಪಕ್ಕದ ಮರಗಳೆಲ್ಲ ಭೋರೆಂದು ತಲೆ
ಕೆದರಿಕೊಂಡು ಅಬ್ಬರಿಸುವಾಗ ಇವನ ವೇಗವನ್ನೂ ಮೀರಿದ ಹಾಗೆ ಮಳೆ ದಾಳಿ ಇಟ್ಟಿತು.
ಗೋಲಿ ಗಾತ್ರದ ಹನಿಗಳು ಮೈಗೆ ಅಪ್ಪಳಿಸಿದವು.
ಗಾಳಿ ಇವನ ಸೈಕಲನ್ನು ಹಿಡಿದು ಹಿಂದೆ ತಳ್ಳಿತು.
ರಸ್ತೆ
ಕಾಡಿನಲ್ಲಿನ ಎಲೆಗಳು
ಮಣ್ಣು
ಮೇಲೆದ್ದು ಇವನ ಮುಖಕ್ಕೆ ಬಂದು ಬಡಿಯಿತು.
ಇನ್ನು ಮುಂದೆ ಹೋಗಲು ಸಾಧ್ಯವಿಲ್ಲ ಅನ್ನುವಾಗ ಈತ
ರಸ್ತೆ ಪಕ್ಕದ ಒಂದು ಮರದತ್ತ ಓಡಿದ.
ಆಗಲೇ ಒಂದು ಮಿಂಚು ಕಪ್ಪು ಆಕಾಶದ ಹಿನ್ನೆಲೆಯಲ್ಲಿ
ಮೈ ಮುರಿದು ನೆಲ ನಡುಗುವಂತೆ ಸದ್ದು ಮಾಡಿತು.
ಹೀಗೆ ಮಿಂಚು ಕಾಣಿಸಿಕೊಂಡಾಗ ಮರಗಳ ಕೆಳಗೆ
ನಿಲ್ಲುವುದು ಅಪಾಯ ಎಂದು ತಿಳಿದು ಈತ ರಸ್ತೆಯಿಂದ ಕೊಂಚ ದೂರವಿದ್ದ
ಗುಡಿಸಲಿನತ್ತ ಓಡಿದ
ಅಲ್ಲಿ ಜಗಲಿಯ ಮೇಲೆ ಆಶ್ರಯ ಪಡೆದ.
ಈತ ತಲೆ ಬಗ್ಗಿಸಿ ಆ ಮನೆಯ ಮಾಡಿನ ಕೆಳಗೆ ತನ್ನ
ತಲೆ ತೂರಿಸಲು ಒಳಗಿನಿಂದ ಶಂಕ್ರಿ-
ಮಳೆ ಅಲ್ದಾ
ಒಳಗೆ ಬನ್ನಿ ಎಂದಳು.
ಮಾಲಿಂಗ ಮಂಕಾಗಿ ಉರಿಯುತ್ತಿದ್ದ ದೀಪದ
ಬೆಳಕಿನಲ್ಲಿ ಮನೆಯೊಳಗೆ ಒಂದು ಬಾರಿ ದೃಷ್ಟಿ ಬೀರಿ ಬಾಗಿಲ ಬಳಿಯೇ
ಕುಕ್ಕರಗಾಲಿನಲ್ಲಿ ಕುಳಿತ.
ಮಳೆ ಈಗ ಹಿಡಿದಿದೆ ಎಂದು ಶಂಕ್ರಿ ನುಡಿದಳು.
ಒಳಗಿನ ಬೆಳಕಿಗೆ ಅವನ ಕಣ್ಣುಗಳು
ಹೊಂದಿಕೊಳ್ಳುತ್ತಿರಲು ಗುಡಿಸಲ ಮೂಲೆಯಲ್ಲಿ ಮುದುರಿಕೊಂಡು ಮಲಗಿದ್ದ
ಶಂಕ್ರಿಯ ಅಪ್ಪ ಕೂಸ ಅವನಿಗೆ ಕಂಡ.
ಅವನ ಮೈಮೇಲೆ ಪ್ರಜ್ಞೆ ಇರಲಿಲ್ಲ.
ಆತ ಅಸ್ತವ್ಯಸ್ತನಾಗಿ ಒಂದು ಚಾಪೆಯ ಮೇಲೆ
ಬಿದ್ದುಕೊಂಡಿದ್ದ.
ಮಳೆ ಸುರು ಆಗೋಕಿಂತ ಮುಂಚೆ ನಿನ್ನ ಅಪ್ಪಯ್ಯ
ಮನೆಗೆ ಬಂದಾನೆ ಅಲ್ದಾ?
ಎಂದು ಕೇಳಿದ ಮಾಲಿಂಗ.
ಬರೂದಲ್ಲ ನಾನೆ ಕರಕೊಂಡು ಬಂದೆ.
ಕುಡಿದು ರಸ್ತೆ ಮ್ಯಾಲೆ ಬಿದ್ದಿದ್ದ ಆ ಚೌಡಿ
ಕಲ್ಲಿನ ಹತ್ರ ಎಂದಳು ಶಂಕ್ರಿ.
ಇದು ಮಾಲಿಂಗನಿಗೆ ಗೊತ್ತಿರುವ ವಿಷಯವೇ.
ಅವನಿಗೆ ಮಾತ್ರವಲ್ಲ ಇಡೀ ಸೀಮೆಗೆ ಗೊತ್ತಿರುವ
ವಿಷಯ.
ಕೂಸ ಒಳ್ಳೆಯ ಕೆಲಸಗಾರ.
ಅಡಕೆ ಮರ ಹತ್ತಿ ಸಮಸ್ತ ಕೆಲಸಗಳನ್ನೂ ಮಾಡಬಲ್ಲವ.
ಆದರೆ ದುಡಿದುದರಲ್ಲಿ ಒಂದೇ ಒಂದು ಕಾಸು ಮನೆಗೆ
ತಂದವನಲ್ಲ.
ಒಡೆಯರ ಹತ್ತಿರ ಹಣ ತೆಗೆದುಕೊಂಡು ಹೆಂಡದ ಅಂಗಡಿಗೆ ಅದನ್ನ
ಹಾಕಿ ಎಲ್ಲೋ ಕುಡಿದು ಬಿದ್ದುಕೊಂಡ.
ಶಂಕ್ರಿ ಅವನನ್ನ ಹುಡುಕಾಡಿ ಮನೆಗೆ ತಂದು
ಸೇರಿಸಬೇಕು
ಇಂತಹ ಪರಿಸ್ಥಿತಿ.
ಶಂಕ್ರಿ ತನ್ನ ಪಾಲಿಗೆ ಒಂದೆರಡು ಮನೆಗೆಲಸ
ನಾಟಿ
ಕೊಯ್ಲು
ಅಡಕೆ ಸುಲಿ ಎಂದು ಕೆಲಸ ಹುಡುಕಿಕೊಂಡಿದ್ದಳು.
ಈ ಕೆಲಸಗಳ ಜೊತೆಯಲ್ಲಿ ಅವಳಿಗೆ ತಂದೆಯನ್ನು
ನೋಡಿಕೊಳ್ಳುವ ಕೆಲಸ ಬೇರೆ.
ಸಂಜೆ ಆದಾಕ್ಷಣ ಅಪ್ಪಯ್ಯ ಎಲ್ಲಿ
ಬಿದ್ದುಕೊಂಡಿದ್ದಾನೆ ಅನ್ನುವುದನ್ನ ಹುಡುಕಿ ಅವನನ್ನ ಮನೆಗೆ ಕರೆ ತರುವುದು
ಅವಳ ಕೆಲಸ.
ಇದು ಇಲ್ಲಿಗೆ ಬಂದ ದಿನವೇ ಮಾಲಿಂಗನಿಗೆ ತಿಳಿದಿತ್ತು.
ಈ ಒಂದು ತಿಂಗಳಲ್ಲಿ ಹಲವು ಬಾರಿ ಮಾಲಿಂಗ ಇದನ್ನು
ಗಮನಿಸಿದ್ದ.
ಶಂಕ್ರಿಯ ತಾಯಿ ಇರುವ ತನಕ ಆ ಕುಟುಂಬ ಕೊಂಚ
ನೆಮ್ಮದಿಯಿಂದಿತ್ತು.
ಆಕೆ ಒಂದು ವರ್ಷದ ಹಿಂದೆ ಏನೋ ಜಡವಾಗಿ ತೀರಿಕೊಂಡಳು.
ಆವಾಗಿನಿಂದ ಕೂಸ ಮತ್ತೂ ಕುಡುಕನಾದ
ಶಂಕ್ರಿ ತಬ್ಬಲಿಯಾದಳು.
ಪರಮಯ್ಯ ಮೊದಲಾದವರು ಇವಳಿಗಾಗಿ ಮರುಗಿದರು.
ಆದರೆ ಮರುಗುವವರ ಸಾಲಿಗೆ ಹೊಸದಾಗಿ ಮಾಲಿಂಗ
ಸೇರಿಕೊಂಡ.
ಮಾಲಿಂಗ ಅಲ್ಲಿ ಕುಳಿತಿರುವಾಗಲೇ ಶಂಕ್ರಿ
ಒಳಗೆದ್ದು ಹೋದಳು.
ಪಾತ್ರೆ ಪಡಗ ಎತ್ತಿ ನೋಡಿದಳು.
ಏನೋ ಪಶ್ಚಾತ್ತಾಪದಿಂದ ನಿಟ್ಟುಸಿರು ಬಿಟ್ಟಳು.
ಹೊರಬಂದು ಬಾಗಿಲಲ್ಲಿ ನಿಂತು ಬೀಳುವ ಮಳೆಯನ್ನು
ನೋಡಿದಳು.
ಏನು?
ಎಂದು ಕೇಳಿದ ಮಾಲಿಂಗ.
ಈ ಬಾಳು ಸುಡ್ಲಿ.
ಮನೆಯಾಗೆ ಒಂದು ತೊಟ್ಟು ಹಾಲಿಲ್ಲೆ.
ಮನೆಯಾಗೆ ಬೆಂಕಿ ಮಾಡಾಕೆ ಬೆಂಕಿ ಪೊಟ್ಣ ಇಲ್ಲೆ'
ಎಂದು ಕಣ್ಣೊರೆಸಿಕೊಂಡಳು ಶಂಕ್ರಿ.
ಶಂಕ್ರಿ ಇದಕ್ಕೆಲ್ಲ ನೀನು ಚಿಂತೆ ಮಾಡೋಕಾಗ.
ಮಳೆ ನಿಂತರೆ ನಾನು ಚಾ ದುಕಾನಿಗೆ ಹೋಗುವವ ಎಂದ
ಮಾಲಿಂಗ ತುಂಬಾ ಕಕ್ಕುಲಾತಿ ಇಂದ.
ಈ ಮಳೆ ನಿಲ್ಲೂದಿಲ್ಲ.
ಚಾ ದುಕಾನು ಬಂದಾಗಿ ಅಲ್ಲಿ ಕಾಡುಕೋಣ ಬಂದು ಮಲಗದೆ
ಈಗ ಎಂದಳು ಶಂಕ್ರಿ.
ನೀವು ಕೂಕಣಿ ಕಾಂಬ ಎಂದು ಮಾಲಿಂಗನಿಗೆ
ಕುಳಿತಿರಲು ಹೇಳಿ ಜಗಲಿಯ ಮಾಡಿಗೆ ತೂಗು ಬಿದ್ದ ಎಲೆ ಗೊರಬನ್ನು ತಲೆಗೆ
ಸಿಕ್ಕಿಸಿಕೊಂಡು ಶಂಕ್ರಿ ಅಂಗಳಕ್ಕೆ ಇಳಿದಳು.
ಶಂಕ್ರಿ ನಿಲ್ಲು
ನಿಲ್ಲು ಎಂದರೂ ಅವಳ ಕಿವಿಗೆ ಇವನ ಕೂಗು
ಬೀಳಲಿಲ್ಲ.
ಗಾಳಿ ಭರೋ ಎಂದು ಬೀಸಿ
ಗುಡುಗು ಹಿಂದೆಯೇ ಕೇಳಿಸಿಕೊಂಡಿತು.
ಶಂಕ್ರಿ ಅಡಕೆ ತೋಟದ ಧರೆಯ ಮೇಲಿನಿಂದ ಒಡೆಯರ
ಮನೆಗೆ ಹೋಗಿ ಹಾಲು
ಚಾ ಸೊಪ್ಪು
ಎಂದೆಲ್ಲ ಮಡಿಲಲ್ಲಿ ಕಟ್ಟಿಕೊಂಡು ಬಂದಳು.
ಒಲೆಯ ಮುಂದೆ ಕುಳಿತು ಬೆಂಕಿ ಮಾಡುವಾಗ ಮಾಲಿಂಗ
ಮತ್ತೆ ಮತ್ತೆ ಹೇಳಿದ-
ಚಾ ದುಕಾನಿನ ಮುಂದೆ ನಾನು ಸೈಕಲ್ ಇಟ್ಟೀನಿ ಶಂಕ್ರಿ
ಮಳೆ ನಿಂತರೆ ನಾನು ಅರಲಗೋಡಿಗೆ ಹೋತೆ
ಮಳೆ ನಿಲ್ಲೂದಿಲ್ಲ ಬಿಡಿ.
ಸಂಜೆ ಬಂದ ನೆಂಟ
ಸಂಜೆ ಬಂದ ಮಳೆ ಹೋಗಾದಿಲ್ಲ ಅಂತಾರೆ ಎಂದಳು
ಶಂಕ್ರಿ ಅವನ ಮುಂದೆ ಬಿಸಿ ಬಿಸಿಯಾಗಿ ಕಂಚಿನ ಲೋಟದಲ್ಲಿ ಚಾ ತಂದು ಇರಿಸಿ.
ಮಾಲಿಂಗ ಹೊರಗೆ ಅಪ್ಪಳಿಸಿ ಸುರಿಯುತ್ತಿದ್ದ
ಮಳೆಯ ದನಿಯನ್ನ ಕೇಳುತ್ತ
ಆಗಾಗ್ಗೆ ಅಬ್ಬರಿಸುತ್ತಿದ್ದ ಗುಡುಗಿನ
ಆರ್ಭಟವನ್ನು ಆಲಿಸುತ್ತ
ಒಳಗೆ ಒಲೆಯ ಮುಂದೆ ಕುಳಿತ ಶಂಕ್ರಿಯ ಮೈಮೇಲೆ ಬೆಂಕಿಯ ಝಳ
ಕುಣಿಯುತ್ತಿದ್ದುದನ್ನೇ ನೋಡಿದ.
ಶಂಕ್ರಿ ಲಕ್ಷಣವಾಗಿದ್ದಳು.
ಅದೇ ಅರಳುತ್ತಿದ್ದ ಮೈ.
ಉರುಟುರುಟಾಗಿ ರೂಪುಗೊಳ್ಳುತ್ತಿದ್ದ ಅಂಗಾಂಗಗಳು
ಆಕರ್ಷಕವಾದ ಕೋಲು ಮುಖ
ಎಣ್ಣೆಗೆಂಪು ಬಣ್ಣ.
ಅದು ಯಾವತ್ತೋ ನೋಡಿ ಮೆಚ್ಚಿಕೊಂಡ ಆಕೆ ಈಗ ತೀರ
ಹತ್ತಿರದಿಂದ ನೋಡಲು ಸಿಕ್ಕಾಗ ಮಾಲಿಂಗ ಅವಳನ್ನ ತನ್ನ ಕಣ್ಣುಗಳಲ್ಲಿ
ತುಂಬಿಕೊಳ್ಳತ್ತ ಕುಳಿತ.
ಮಾಲಿಂಗನಿಗೆ ಬೇರೆ ಕಾರಣಕ್ಕೂ ಶಂಕ್ರಿ
ಮೆಚ್ಚುಗೆಯಾಗಿದ್ದಳು.
ಅವಳು ತಂದೆಗಾಗಿ ಪಡುವ ಶ್ರಮ ಮನೆಗೆ ಬಾರದ ಆತನನ್ನ
ಹುಡುಕಿಕೊಂಡು ಅಲೆದಾಡುವುದು
ಅವನನ್ನ ಎತ್ತಿಹಿಡಿದುಕೊಂಡು ಮನೆಗೆ
ಕರೆದೊಯ್ಯುವುದು
ಕುಡಿದು ಬಂದು ಅವನು ಮಾಡುವ ಗಲಾಟೆಯನ್ನ
ಸಹಿಸಿಕೊಂಡಿರುವುದು
ಅವನು ಕೇಳಿದಾಗ ಅವನಿಗೆ ಹಣ ಕೊಡುವುದು
ಅಮಲಿನಲ್ಲಿ ಅವನು ಹೊಡೆದರೆ ಅದನ್ನೆಲ್ಲ
ತಾಳಿಕೊಂಡಿರುವುದು ಇವನು ಮಾತ್ರವಲ್ಲ ಆ ಪ್ರದೇಶದ ಎಲ್ಲ ಜನ ಗಮನಿಸಿದ
ವಿಷಯವಾಗಿತ್ತು.
ಇದೆಲ್ಲವನ್ನ ಆತ ನೆನಸಿಕೊಂಡ.
ಆಗಲೇ ಶಂಕ್ರಿ ಅಡಿಗೆ ಎಂದು ಒಂದನ್ನ ಮುಗಿಸುವಾಗ
ಕೂಸ ಚಾಪೆಯ ಮೇಲೆ ಹೊರಳಾಡುತ್ತ-
ತೆಂಗಿ
ಯಾರೇ?
ಎಂದು ಕೇಳುತ್ತ ಎದ್ದು ಕುಳಿತ.
********
ಭಟ್ಕಳ ಸಾಗರ ಬಸ್ಸು ಹೋದ ಎಷ್ಟೋ ಹೊತ್ತಿನ
ನಂತರ
ಇನ್ನೇನು ಪರಮಯ್ಯ ತನ್ನ ದುಕಾನಿನ ಬಾಗಿಲು ಹಾಕಬೇಕು
ಅನ್ನುವಾಗ ಅಲ್ಲಿಗೆ ಮಾಲಿಂಗ ತನ್ನ ಸೈಕಲ್ಲಿನ ಮೇಲೆ ಬಂದಿಳಿದ.
ಬಸ್ಸು ಹೋಗಿ ಆತಲ್ಲ ಇವತ್ತೇನು ತಡ?,
ಎಂದು ಕೇಳಿದ ಪರಮಯ್ಯ.
ಇವತ್ತಿಗೆ ಮೈಲಿ ಕಲ್ಲಿಗೆ ಬಣ್ಣ ಬಳಿಯೋ ಕೆಲಸ
ಮುಗಿದಾಂಗೆ.
ಇನ್ನು ಈ ಬಸ್ಸು ಸೈಕಲ್ಲು ನನಗೆ ಬೇಡ ಎಂದ ಆತ ಮೈಮೇಲಿನ
ಒಂದು ಭಾರ ಇಳಿಸಿದ ಹಾಗೆ.
ಪರಮಯ್ಯ ಅಚ್ಚರಿಯಿಂದ ಅವನ ಮುಖ ನೋಡಿದ.
ಮಾಲಿಂಗ ವಿರಾಮವಾಗಿ ಪರಮಯ್ಯನ ಚಾ ದುಕಾನಿನ
ಅಡ್ಡ ಬೆಂಚಿನ ಮೇಲೆ ಕುಳಿತು ಹಿಂದಿನದನ್ನೆಲ್ಲ ನೆನಪು ಮಾಡಿಕೊಂಡವನಂತೆ-
ನಾನು ಸೈಕಲ್ ತಳ್ಳಿಕೊಂಡು ಬಂದದ್ದು ನೆನಪುಂಟಾ
ನಿಮಗೆ?
ಎಂದು ಕೇಳಿದ.
ಪರಮಯ್ಯ ಹೌದು ಅನ್ನುವಂತೆ ತಲೆದೂಗಿದಾಗ ಮಾಲಿಂಗ
ಎರಡು ತಿಂಗಳಾಯ್ತು ನಾನು ಇಲ್ಲಿಗೆ ಬಂದು ಎಂದು
ಮಾತಿಗೆ ತೊಡಗಿದ...
ಸಾಗರದಲ್ಲಿ ಯಾವುದೋ ಬಣ್ಣದ ಅಂಗಡಿಯಲ್ಲಿ
ಬೋರ್ಡು ಬರೆಯುತ್ತಿದ್ದ ತನಗೆ ಈ ಕೆಲಸ ದೊರಕಿಸಿಕೊಟ್ಟ ಇಂಜಿನಿಯರ್‌ಗೆ
ಕೃತಜ್ಞತೆ ಹೇಳಿದ.
ತುಂಬಾ ಕಷ್ಟವಾದ ಈ ಕೆಲಸವನ್ನ ತಾನು ಮಾಡಿ ಮುಗಿಸಿದ ಬಗ್ಗೆ
ತೃಪ್ತಿ ವ್ಯಕ್ತಪಡಿಸಿದ.
ಎರಡು ತಿಂಗಳು ಇಲ್ಲಿ ಕಳೆದು ಹೋದದ್ದೇ ತಿಳಿಯಲಿಲ್ಲ ಎಂದ.
ಈ ಕಾಡು ಈ ಗುಡ್ಡ ಬೆಟ್ಟ ಇಲ್ಲಿ ಜನ ಎಲ್ಲ ತನಗೆ
ಸಂತಸ ನೀಡಿದ್ದನ್ನ ಹೇಳುತ್ತ ನೀವು ಏನೇ ಹೇಳಿ ಪರಮಯ್ಯ
ನಾನು ಈ ಸಾಗರ ಪೇಟೇಲಿ ಇಷ್ಟೊಂದು ನೆಮ್ಮದಿಯಿಂದ
ಇರಲಿಲ್ಲ ಎಂದ.
ಅವನ ಮುಖ ನೋಡುತ್ತ ಪರಮಯ್ಯ-
ಮುಂದೆ ಏನು ಮಾಡೋರು ನೀವು?
ಉರಿಗೆ ಹೋಗಾದ?
ಎಂದು ಕೇಳಿದ.
ಯಾಕೆ
ಇಲ್ಲೇ ಒಂದು ಕೆಲಸ ನನಗೆ ಸಿಗಲಿಕ್ಕಿಲ್ಲ ಅಂತೀರ?
ಮಾಲಿಂಗ ಅವನ ಮುಖ ನೋಡುತ್ತ ಕೇಳಿದ.
ಸಿಗದಿದ್ರು ನಾನು ಹುಡುಕಿಕೊಳ್ತೆ ಎಂದು ಹೇಳಿ
ನಕ್ಕ ಮಾಲಿಂಗ.
ಕೆಲಸವಾ?
ಇಲ್ಲಿ ಮಾಡುತೇನೆ ಅಂದ್ರೆ ಕೆಲಸ ಸಿಗುತ್ತಪ್ಪ...
ನಾವೆಲ್ಲ ಬದುಕಿಲ್ವಾ ಇಲ್ಲಿ...
ಮುಖ್ಯ ಇಲ್ಲಿ ಇರತೇನೆ ಅನ್ನೋ ಛಲ ಬೇಕು
ಸರಿ ಬಿಡಿ ಹಂಗಾರೆ
ಮಾಲಿಂಗ ತನ್ನ ಸೈಕಲ್ಲಿನ ಮೇಲಿದ್ದ ಬಣ್ಣದ ಡಬ್ಬ
ಇತ್ಯಾದಿಗಳನ್ನ ಸರಿಯಾಗಿ ಇರಿಸಿಕೊಂಡು ಅಲ್ಲಿಂದ ಹೊರಟಾಗ ಪರಮಯ್ಯ ಕೇಳಿದ-
ಈಗ ಎಲ್ಲಿಗೆ ಹೊಂಟಿದ್ದು...
ಬಸ್ಸು ಹೋಯ್ತು...
ಕತ್ತಲೆಯೂ ಆತು
ಕೂಸನ ಮನೆಗೆ.
ಇನ್ನು ನನ್ನ ಬಿಡಾರ ಅಲ್ಲೇ...
ಕೂಸ ಇವತ್ತೋ ನಾಳೆಯೋ...
ಅವನ ಮಗಳು ಶಂಕ್ರಿಗೆ ಒಂದು ಆಸರೆ ಬೇಕಲ್ವಾ?
ಮಾಲಿಂಗನ ಸೈಕಲ್ಲು ರಸ್ತೆಗೆ ಇಳಿದು ಟಣ್ ಟಣ್
ಎಂದು ಸದ್ದು ಮಾಡಿತು.
ಈ ಸದ್ದು ಆ ಕಾಡಿನಲ್ಲಿ ಕವಿದ ವಿಚಿತ್ರ ಮೌನದ ನಡುವೆ
ಹಿತಕರವಾಗಿ ಕೇಳಿಸಿತು.
ಏನೇ ಆಗಲಿ ಆ ಪೇಟೆ ಹುಡುಗ ಈ ಕೂಸನ ಮಗಳಿಗೊಂದು
ಆಶ್ರಯ ಕೊಟ್ಟ ಎಂದು ಪರಮಯ್ಯ ಮನಸ್ಸಿನಲ್ಲಿಯೇ ಹೇಳಿಕೊಂಡ.
ಟಿಎಸ್‌ಐ
|