ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

 

ಇತರ ವಿಭಾಗಗಳು
 
ಲಂಗರು
ಭೂತ- ಭವಿಷ್ಯಗಳ ತೂಗುಯ್ಯಾಲೆ!
 

ತಮಿಳುನಾಡಿನ ವೈದ್ಯೇಶ್ವರನ್ ಕೋವಿಲ್ ದೇವಾಲಯದ ಸುತ್ತಲಿರುವ ಜ್ಯೋತಿಷ್ಯಾಲಯಗಳು 'ನಾಡಿ ಶಾಸ್ತ್ರ'ಕ್ಕೆ ಲೋಕಪ್ರಸಿದ್ಧಿ. ಹಲವು ನಿಗೂಢಗಳನ್ನು ತನ್ನೊಳಗೇ ಇಟ್ಟುಕೊಂಡಿರುವ ಈ ಜೋತಿಷ್ಯ ಶಾಸ್ತ್ರ ಹಲವರ ಪ್ರಕಾರ ಒಂದು ಪವಿತ್ರ ವಿದ್ಯೆಯಾಗಿದ್ದರೂ, ಕೆಲವರಿಗೆ ಇದೊಂದು ಹಣಗಳಿಸುವ ತಂತ್ರ ಮಾತ್ರ. ನಾಡಿ ಶಾಸ್ತ್ರದ ಕೌತುಕ ಲೋಕವನ್ನು ತೆರೆದಿಟ್ಟಿದ್ದಾರೆ ಟಿಎಸ್‌ಐನ ಎನ್. ಅಶೋಕನ್

Drop Anchor - The Sunday Indian Kannada

ಈ ಪುಟ್ಟ ಹಾಗೂ ಜನಪ್ರಿಯ ಹಳ್ಳಿ ಪರಶಿವನ ಆವಾಸ ಸ್ಥಾನ. ಇಲ್ಲಿ ನೆಲೆ ನಿಂತ ಕಾಲಭೈರವನ ವೈಶಿಷ್ಟ್ಯವೆಂದರೆ ರೋಗ ಶಮನ. ಅದರಲ್ಲೂ ಕುಷ್ಠ ರೋಗ ನಿವಾರಣೆ ಬಯಸಿ ಸಾಗರೋಪಾದಿಯಲ್ಲಿ ಜನಸಮೂಹ ಇಲ್ಲಿಗೆ ಹರಿದು ಬರುತ್ತದೆ. ಅದಕ್ಕೆಂದೇ ಇಲ್ಲಿನ ಶಿವನಿಗೆ 'ವೈದ್ಯೇಶ್ವರ' ಎಂಬ ಹೆಸರು. ತಮಿಳಿನಲ್ಲಿ ವೈದ್ಯೇಶ್ವರನ್ ಎಂದರೆ ವೈದ್ಯನ ಕೆಲಸ ಮಾಡುವ ಭಗವಂತ ಎಂದರ್ಥ. ಆದರೆ ಈ ಹಳ್ಳಿ ವಿಶ್ವವಿಖ್ಯಾತವಾಗಿದ್ದು ಇಲ್ಲಿರುವ ದೇವರಿಂದಂತೂ ಖಂಡಿತಾ ಅಲ್ಲ. ಬದಲಿಗೆ ದೇವಸ್ಥಾನದ ಸುತ್ತಲೂ ಇರುವ ಸುಮಾರು 40 'ನಾಡಿ ಶಾಸ್ತ್ರ' ಜ್ಯೋತಿಷ್ಯಾಲಯಗಳಿಂದ!

ತಮ್ಮ ಭವಿಷ್ಯದ ಕುರಿತ ಮಾಹಿತಿಗಾಗಿ ಚೆನ್ನೈನಿಂದ 6 ಗಂಟೆ ಪಯಣದ ದೂರದಲ್ಲಿರುವ ವೈದ್ಯೇಶ್ವರನ್ ಕೋವಿಲ್ ಎಂಬ ಹಳ್ಳಿಗೆ ಜನ ವಿಶ್ವದೆಲ್ಲೆಡೆಯಿಂದ ಬರುತ್ತಾರೆ. 'ನಾಡಿ ಶಾಸ್ತ್ರ' ಹಲವು ನಿಗೂಢಗಳನ್ನು ತನ್ನೊಳಗೆ ಹುದುಗಿಸಿಟ್ಟುಕೊಂಡಿರುವ ಪವಿತ್ರವಾದ ವಿದ್ಯೆ ಎಂಬುದು ಹಲವರ ಅಭಿಪ್ರಾಯ. ಸಹಸ್ರಾರು ವರ್ಷಗಳ ಹಿಂದೆ ಅಗಸ್ತ್ಯ, ಕೌಶಿಕ, ವಸಿಷ್ಠ, ಭೃಗು, ಪುಲಿಪಾಣಿ, ಬೊಹಾರ್ ಮುಂತಾದ ಋಷಿ ಶ್ರೇಷ್ಠರು ಇದನ್ನು ಬರೆದರು ಎಂಬ ಪ್ರತೀತಿ ಇದೆ. ಆ ತಾಳೆ ಗರಿಗಳು ಹಳ್ಳಿಯ ಕೆಲವು ಮನೆಗಳಲ್ಲಿ ಇನ್ನೂ ಇವೆ. ತಮಿಳಿನಲ್ಲಿ ನಾಡಿ ಎಂದರೆ ಅರಸು ಅಥವಾ ಹುಡುಕು ಎಂದರ್ಥ. ಅಂದರೆ ಯಾರಾದರೂ ತಮ್ಮ ಭವಿಷ್ಯವನ್ನು ಅರಸುತ್ತಾ ನಾಡಿ ಜ್ಯೋತಿಷಿಗಳ ಬಳಿ ಬಂದರೆ ಆತ ತಾಳೆ ಗರಿಯಲ್ಲಿ ಅವರ ಭವಿಷ್ಯದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುತ್ತಾನೆ. ವೈದ್ಯೇಶ್ವರನ್ ಕೋವಿಲ್‌ನ ಪ್ರಸಿದ್ಧ ಜ್ಯೋತಿಷಿ ಶಿವಸ್ವಾಮಿ "ತಮ್ಮ ಭೂತ-ವರ್ತಮಾನ ಹಾಗೂ ಭವಿಷ್ಯವನ್ನು ಅರಸುವವರು ನಮ್ಮ ಬಳಿ ಬರುತ್ತಾರೆ. ಆದರೆ ಎಲ್ಲರಿಗೂ ಉತ್ತರ ಸಿಗುವುದಿಲ್ಲ. ನಮ್ಮ ಬಳಿ ಬರುವ ಶೇ.70ರಷ್ಟು ಜನರಿಗೆ ಮಾತ್ರ ಅವರ ಭವಿಷ್ಯ ಬರೆದಿರುವಂಥ ತಾಳೆ ಗರಿಗಳು ಸಿಗುತ್ತವೆ" ಎನ್ನುತ್ತಾರೆ

ತಾಳೆ ಗರಿಗಳೇ ಏಕೆ? ಅದು ತಮಿಳು ನಾಡಿನ ಸಂಪ್ರದಾಯ. ಕಾಗದದ ಬಳಕೆ ಆರಂಭವಾಗುವುದಕ್ಕೂ ಮುನ್ನ ಎಲ್ಲವನ್ನೂ ತಾಳೆ ಗರಿಗಳ ಮೇಲೆಯೇ ಬರೆಯಲಾಗುತ್ತಿತ್ತು. ಬಹುತೇಕ ಪುರಾತನ ತಮಿಳು ಸಾಹಿತ್ಯ ತಾಳೆ ಗರಿಗಳ ಮೇಲೆ ದಾಖಲಾಗಿದೆ.

ದೆಹಲಿಯ 'ಶ್ರೀ ಕೌಶಿಕ ಮಹಾಶಿವ ಜ್ಯೋತಿಷ್ಯ ನಿಲಯಂ'ನ ನಾಡಿ ಶಾಸ್ತ್ರ ಜ್ಯೋತಿಷಿ ರಾಜು ಟಿಎಸ್‌ಐ ಬಳಿ ಮಾತನಾಡುತ್ತಾ "ಈ ತಾಳೆ ಗರಿಗಳ ಮೂಲದ ಬಗ್ಗೆ ಹಲವು ಅಭಿಪ್ರಾಯಗಳಿವೆ. ನನಗೆ ವೈದ್ಯೇಶ್ವರನ್ ಕೋವಿಲ್‌ನಲ್ಲಿರುವ ನನ್ನ ಗುರು ಈ ತಾಳೆ ಗರಿಗಳನ್ನು ನೀಡಿದರು. ನಮಗೆ ಅವರಿಂದ ತಾಳೆ ಗರಿಗಳು ಸಿಗುತ್ತವೆ ಮತ್ತು ಸ್ವಲ್ಪ ಸಮಯ ನಮ್ಮ ಬಳಿ ಇಟ್ಟುಕೊಂಡ ಬಳಿಕ ಅವುಗಳನ್ನು ಹಿಂತಿರುಗಿಸಿ ಬೇರೆ ತಾಳೆ ಗರಿಗಳನ್ನು ಅವರಿಂದ ಪಡೆದುಕೊಳ್ಳುತ್ತೇವೆ" ಎನ್ನುತ್ತಾರೆ. Drop Anchor - The Sunday Indian Kannada

ಅವರಿಗೆ ಆ ತಾಳೆ ಗರಿಗಳು ಎಲ್ಲಿಂದ ದೊರೆತವು? ಆ ಬಗ್ಗೆ ಹಲವು ಮಾಹಿತಿ ಸಿಗುತ್ತವೆ. ತಂಜಾವೂರಿನ ವಸ್ತು ಸಂಗ್ರಹಾಲಯದಲ್ಲಿ ಹಲವು ವರ್ಷಗಳ ಹಿಂದೆ ಈ ತಾಳೆ ಗರಿಗಳನ್ನು ಹರಾಜು ಹಾಕಲಾಗಿತ್ತಂತೆ. ತಾಳೆಯೋಲೆಗಳ ಮೌಲ್ಯದ ಅರಿವಿದ್ದ ಜ್ಯೋತಿಷಿಗಳು ಅವುಗಳನ್ನು ಕೊಂಡುಕೊಂಡರು ಎಂಬ ಪ್ರತೀತಿ ಇದೆ. ಹಾಗೆ ಈ ತಾಳೆ ಗರಿಗಳು ಯಾವುದೋ ದೇವಾಲಯವೊಂದರಲ್ಲಿ ಇದ್ದವು ಹಾಗೂ ಅವುಗಳನ್ನು ಮತ್ತೆ ಪತ್ತೆಮಾಡಲಾಯಿತು ಎಂಬುದು ಮತ್ತೆ ಕೆಲವರ ಅಭಿಪ್ರಾಯ.

ಈ ನಾಡಿ ತಾಳೆ ಗರಿಗಳು ನಿರ್ದಿಷ್ಟ ವ್ಯಕ್ತಿಯದ್ದೇ ಎಂದು ಹೇಗೆ ತಿಳಿಯುತ್ತದೆ?

ನೀವು ನಾಡಿ ಜ್ಯೋತಿಷಿಯ ಬಳಿ ಹೋದರೆ ಆತ ಮೊದಲು ನಿಮ್ಮ ಹೆಬ್ಬೆರಳ ಮುದ್ರಿಕೆ ತೆಗೆದುಕೊಳ್ಳುತ್ತಾನೆ. ಪುರಷರಿಗೆ ಬಲಗೈ ಹೆಬ್ಬೆರಳ ಗುರುತಾದರೆ, ಮಹಿಳೆಯರಿಗೆ ಎಡಗೈಯ ಹೆಬ್ಬೆರಳಿನದು. "ಒಟ್ಟು 108 ಮಾದರಿ ಹೆಬ್ಬೆರಳು ಮುದ್ರಿಕೆಗಳಿವೆ. ಪ್ರತಿ ಒಂದಕ್ಕೂ ನಾಲ್ಕರಿಂದ ಐದು ಕಂತೆ ತಾಳೆ ಗರಿಗಳಿರುತ್ತವೆ. ನಾವು ಆ ತಾಳೆ ಗರಿಗಳ ಕಂತೆಯನ್ನು ಹುಡುಕಿ ಓದುತ್ತೇವೆ" ಎನ್ನುತ್ತಾರೆ ವೈದ್ಯೇಶ್ವರನ್ ಕೋವಿಲ್‌ನ ಜ್ಯೋತಿಷಿ ಸೆಲ್ವರಾಜ್. ಸೆಲ್ವರಾಜ್ ಪ್ರಕಾರ ಅವರ ಬಳಿ 1500 ಕಂತೆ ತಾಳೆ ಗರಿಗಳಿವೆಯಂತೆ.

ಅಂದರೆ ನಿಮ್ಮ ಭವಿಷ್ಯವನ್ನು ಉದ್ದಕ್ಕೆ ಓದುತ್ತಾ ಹೋಗುವುದು ಎಂದುಕೊಂಡೀರಾ ಮತ್ತೆ! ನಿಮ್ಮ ಭವಿಷ್ಯ ಬರೆದಿರುವ ತಾಳೆ ಗರಿಯನ್ನು ಹುಡುಕುವುದು ಅಷ್ಟು ಸುಲಭದ ಕೆಲಸವಲ್ಲ. ಈಗ ನಿಮ್ಮ ಹೆಸರು ರಾಮ ಎಂದಾಗಿದ್ದರೆ ತಾಳೆ ಗರಿಯಲ್ಲಿ ರಾಮ ಎಂದು ನೇರವಾಗಿಯೋ, ಸೀತಾಪತಿಯೆಂದೋ ಅಥವಾ ರಾಮ ಎಂದು ಅರ್ಥ ನೀಡುವ ಇನ್ನೇನಾದರೂ ವಿಶೇಷಣ ಬಳಸಿಯೋ ಬರೆಯಲಾಗಿರುತ್ತದೆ. ನಂತರ ನಿಮ್ಮ ತಂದೆ ತಾಯಿಯ ಹೆಸರನ್ನೂ ಹುಡುಕಬೇಕು. ಆ ಹೆಸರುಗಳೂ ನೇರವಾಗಿರಲೂಬಹುದು ಅಥವಾ ಸೂಚ್ಯವಾಗಿರಲೂಬಹುದು. ಎಲ್ಲಾ ವಿವರಗಳೂ ಹೊಂದಿಕೆಯಾದರೆ ಆ ತಾಳೆಗರಿ ನಿಮ್ಮದಾಗಿರುತ್ತದೆ. ನಂತರ ಜ್ಯೋತಿಷಿ ನಿಮ್ಮ ಭವಿಷ್ಯವನ್ನು ಓದುತ್ತಾರೆ. ಆ ಬರಹಗಳೆಲ್ಲಾ ತಮಿಳಿನಲ್ಲಿರುತ್ತವೆ ಹಾಗೂ ಅದನ್ನು ಓದುವವನು ನಿಜಕ್ಕೂ ನಿಪುಣನಾಗಿರಬೇಕು. ಅವರು ನಿಮ್ಮ ಭವಿಷ್ಯವನ್ನು ಕಂದಂ (ಜೀವನದ ಘಟ್ಟಗಳು) ಪ್ರಕಾರ ಹೇಳುತ್ತಾರೆ. ಅವರು ಜೀವನವನ್ನು 16 ಘಟ್ಟಗಳಾಗಿ ವಿಭಾಗಿಸಿದ್ದಾರೆ. ಪ್ರತಿ ಕಂದಂಗೂ 100 ರಿಂದ 1000 ರೂಪಾಯಿ ಬೆಲೆ ನಿಗದಿಯಾಗಿರುತ್ತದೆ. Drop Anchor - The Sunday Indian Kannada

ರಾಜು ಅವರ ಪ್ರಕಾರ ನಾಡಿ ಶಾಸ್ತ್ರ ಹೇಳಿಸಿಕೊಳ್ಳಲು ವಿದೇಶಿಯರೂ ಬರುತ್ತಾರೆ. ಜಾನ್, ವಿಕ್ಟರ್ ಮುಂತಾದ ಹೆಸರುಗಳೂ ಆ ತಮಿಳು ಗ್ರಂಥಗಳಲ್ಲಿ ಸೂಚ್ಯವಾಗಿ ಉಲ್ಲೇಖವಾಗಿವೆಯಂತೆ.

ಹಲವು ದೇಶಗಳನ್ನು ಸುತ್ತಿ ಬಂದಿರುವ ಶಿವಸ್ವಾಮಿ, "ನನಗೆ ಜರ್ಮನಿ, ಡೆನ್ಮಾರ್ಕ್, ಸಿಂಗಾಪುರ ಹಾಗೂ ಮಲೇಷಿಯಾದ ಗ್ರಾಹಕರಿದ್ದಾರೆ. ಬಹುತೇಕ ಎಲ್ಲರಿಗೂ ನನ್ನ ಹೇಳಿಕೆ ತೃಪ್ತಿ ನೀಡಿದೆ" ಎನ್ನುತ್ತಾರೆ.

ಹಿಂದೆ, ಅಂದರೆ ಸರಿ ಸುಮಾರು 50 ವರ್ಷಗಳ ಹಿಂದೆ ವೈದ್ಯೇಶ್ವರನ್ ಕೋವಿಲ್‌ನಲ್ಲಿ ಕೇವಲ ಎರಡೇ ಕುಟುಂಬಗಳು ಈ ಕೆಲಸದಲ್ಲಿ ತೊಡಗಿಕೊಂಡಿದ್ದವು. ಈಗಂತೂ ಹಲವಾರು ಕುಟುಂಬಗಳ ನಾಡಿ ಶಾಸ್ತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ಪ್ರಸಿದ್ಧ ವ್ಯಕ್ತಿಗಳು ಹೇಗೆ ನಾಡಿ ಶಾಸ್ತ್ರದ ಗೀಳು ಅಂಟಿಸಿಕೊಂಡಿದ್ದಾರೆ ಎಂಬುದಕ್ಕೆ ಹಲವು ಕಥೆಗಳೂ ಇವೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಮೊದಲಾದ ರಾಜಕೀಯ ಧುರೀಣರು ಹಾಗೂ ಹಲವು ಬಾಲಿವುಡ್ ನಟ-ನಟಿಯರು ವೈದ್ಯೇಶ್ವರನ್ ಕೋವಿಲ್‌ಗೆ ಭೇಟಿ ನೀಡುತ್ತಿದ್ದರಂತೆ.

ಬಂಗಾರಪ್ಪ ಕರ್ನಾಟಕದ ಮುಖ್ಯಮಂತ್ರಿಗಳಾಗುತ್ತಾರೆ ಎಂಬುದನ್ನು ಇಲ್ಲಿನ ಪ್ರಸಿದ್ಧ ಜ್ಯೋತಿಷಿಯೊಬ್ಬರು ಹೇಳಿದ್ದರಂತೆ. ಒಂದು ವೇಳೆ ಬಂಗಾರಪ್ಪ ಮುಖ್ಯಮಂತ್ರಿಗಳಾದರೆ ಸ್ಥಿರಾಸ್ತಿಯೊಂದನ್ನು ಕಾಣಿಕೆಯಾಗಿ ನೀಡಬೇಕು ಎಂದಿದ್ದರಂತೆ ಆ ಜ್ಯೋತಿಷಿ. ಹಾಗೆ ಬಂಗಾರಪ್ಪ ಕರ್ನಾಟಕದ ಮುಖ್ಯಮಂತ್ರಿಯಾದರು ಹಾಗೂ ಕೊಟ್ಟ ಮಾತಿಗೆ ತಪ್ಪದ ಬಂಗಾರಪ್ಪ, ಆ ಜ್ಯೋತಿಷಿಗೆ ಒಂದು ವಸತಿ ಗೃಹವನ್ನೂ ನಿರ್ಮಿಸಿಕೊಟ್ಟರಂತೆ!! Drop Anchor - The Sunday Indian Kannada

ಆದರೆ ಕೆಲವು ಸಮಸ್ಯೆಗಳೂ ಇವೆ. ಹೆಸರು ಹೇಳಲಿಚ್ಛಿಸದ ಜ್ಯೋತಿಷಿಯೊಬ್ಬರು ತಾಳೆ ಗರಿಯ ಮೇಲೆ ಬರೆದಿದ್ದ ಸತ್ಯವನ್ನು ನುಡಿದ ಪರಿಣಾಮವಾಗಿ ಹೇಗೆ ಚಂಢೀಗಡ ಜೈಲು ಸೇರಬೇಕಾಯಿತು ಎಂಬುದನ್ನು ಟಿಎಸ್‌ಐ ಬಳಿ ವಿವರಿಸಿದರು. "ಅದೊಂದು ಕಹಿ ಅನುಭವವಾಗಿತ್ತು. ಆದರೆ ಕೊನೆಗೆ ನನ್ನನ್ನು ಸತ್ಯ ರಕ್ಷಿಸಿತು. ಆ ವ್ಯಕ್ತಿ ಆಗ ಮುಖ್ಯಮಂತ್ರಿಗಳಿಗೆ ಆಪ್ತನಾಗಿದ್ದ ಎಂಬ ವಿವರ ನಮಗೆ ತಿಳಿದಿರಲಿಲ್ಲ" ಎನ್ನುತ್ತಾರೆ ಅವರು. ಪತ್ನಿ ಹಾಗೂ ಮಕ್ಕಳ ಮುಂದೆ ಪತಿಯ ವಿವಾಹೇತರ ಸಂಬಂಧದ ವಿಚಾರ ಹೊರ ಬಂದ ಪ್ರಸಂಗಗಳೂ ಇವೆ.

ಇಂದು ನಾಡಿ ಶಾಸ್ತ್ರ ವಾಣಿಜ್ಯೀಕರಣಗೊಳ್ಳುತ್ತಿದೆ. ಈ ಹಿಂದೆ ನಿಮ್ಮ ತಾಳೆ ಗರಿಯನ್ನು ಒಂದು ದಿನ ಪೂರ್ತಿ ಹುಡುಕಿಯೂ ಸಿಗದೇ ಹೋಗಿದ್ದರೆ ಜ್ಯೋತಿಷಿ ಹಣ ತೆಗೆದುಕೊಳ್ಳುತ್ತಿರಲಿಲ್ಲ. ಅದು ಅವರ ಪದ್ಧತಿಯಾಗಿತ್ತು. ಆದರೆ ಈಗ ಆ ಹುಡುಕುವಿಕೆಗೂ ಜ್ಯೋತಿಷಿಗಳು ನಿಮ್ಮಿಂದ ಹಣ ಕೀಳುತ್ತಾರೆ. ಅಲ್ಲದೆ ಜ್ಯೋತಿಷಿಗಳೇ ತಯಾರಿಸುವ ತಾಳೆ ಗರಿಯ ಬಗ್ಗೆ ಹಲವು ವರದಿಗಳೂ ಬಂದಿದ್ದವು. ತಾಜಾ ತಾಳೆ ಗರಿಗಳನ್ನು ಹಬೆಯಲ್ಲಿ ಬೇಯಿಸಿ ಅವುಗಳಿಗೆ ಹಳೆ ತಾಳೆ ಗರಿಗಳ ರೂಪು ನೀಡಲಾಗುತ್ತದಂತೆ!!

"ಒಮ್ಮೆ ನನ್ನ ಗೆಳತಿಯೊಬ್ಬಳು ನಾಡಿ ಹೇಳಿಸಿಕೊಳ್ಳಲು ಹೋದಳು. ಎಲ್ಲ ಕೇಳಿಸಿಕೊಂಡ ಮೇಲೆ ಅವರು ಆ ತಾಳೆ ಗರಿಯನ್ನು ಪರೀಕ್ಷಿಸಿದರೆ ಅದು ಪ್ರಸಿದ್ಧ ತಮಿಳು ಸಾಹಿತ್ಯವೊಂದರ ತಾಳೆ ಗರಿಯಾಗಿತ್ತಂತೆ, ಎಲ್ಲಾ ತಾಳೆ ಗರಿಗಳೂ ನಾಡಿ ಶಾಸ್ತ್ರದ ಭವಿಷ್ಯವಾಣಿಗಳಾಗಿರುವುದಿಲ್ಲ" ಎನ್ನುತ್ತಾರೆ ಚೆನ್ನೈ ಮೂಲದ ಸಂಶೋಧಕಿ ಮಹಾಲಕ್ಷ್ಮಿ.

Drop Anchor - The Sunday Indian Kannadaಹಲವು ವರ್ಷಗಳ ಹಿಂದೆ ನಾನೂ ನಾಡಿ ಶಾಸ್ತ್ರ ಹೇಳಿಸಿಕೊಂಡಿದ್ದೆ. ನನ್ನನ್ನು ಮದುವೆಯಾಗುವ ಹುಡುಗಿ ಎಲ್ಲಿದ್ದಾಳೆ ಎಂಬ ನನ್ನ ಪ್ರಶ್ನೆಗೆ ಆ ಜ್ಯೋತಿಷಿ, ಹುಡುಗಿಯ ಹೆಸರು, ಊರು, ದಿಕ್ಕು ಕೊನೆಗೆ ಅವಳ ಮನೆಯ ರಸ್ತೆಯ ಹೆಸರನ್ನೂ ಹೇಳಿದ್ದರು. ವರ್ಷಗಳ ನಂತರ ನನಗೆ ಮದುವೆಯೂ ಆಯಿತು. ಆದರೆ ಆ ಜ್ಯೋತಿಷಿಯ ಭವಿಷ್ಯ ವಾಣಿಗೂ ನನ್ನ ಪತ್ನಿಗೂ ಎಳ್ಳಷ್ಟೂ ಸಾದೃಶ್ಯವಿರಲಿಲ್ಲ!! ಆ ಪುರಾತನ ಋಷಿ ನನಗೆ ಮದುವೆಯೋಗ ಬರೆದಿರಲಿಲ್ಲವೇನೋ! ಅಥವಾ ಆ ಜ್ಯೋತಿಷಿ ಏನಾದರೂ ಕುಟಿಲ ತಂತ್ರ ಪ್ರಯೋಗ ಮಾಡಿರಬಹುದೇ? ಇಲ್ಲವೇ ನಾನು ಬೇರೆ ಯಾರನ್ನೋ ಮದುವೆಯಾದೆನೇ? ಇನ್ನೂ ಉತ್ತರ ಸಿಕ್ಕಿಲ್ಲ.

ಹಲವರಿಗೆ ಇದು ಇನ್ನೂ ನಿಗೂಢ ರಹಸ್ಯ. ಇನ್ನು ಕೆಲವರಿಗೆ ಇದೊಂದು ತಂತ್ರವಷ್ಟೇ!

ಟಿಎಸ್‌ಐ

ಪೂರಕ ಮಾಹಿತಿ: ಎಂ. ರಾಘವನ್

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .