ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಲೋಕಾಯುಕ್ತ ಕಾಯ್ದೆ ತಿದ್ದುಪಡಿ ಎಂದಿಗೆ?
 
ಪ್ರಸಕ್ತ ಕಾಯ್ದೆಯ ಅನುಸಾರ ಭ್ರಷ್ಟಾಚಾರದ ವಿರುದ್ಧ ದೂರು ಬಂದಲ್ಲಿ ಮಾತ್ರ
ಲೋಕಾಯುಕ್ತ ದಾಳಿ ನಡೆಸಬಹುದಷ್ಟೇ
 
..
ನಿವೃತ್ತ ನ್ಯಾಯಮೂರ್ತಿ
ಎನ್. ವೆಂಕಟಾಚಲ

ಮಾಜಿ ಲೋಕಾಯುಕ್ತ

ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ, ಕೋಟಿಗಟ್ಟಲೆ ಆಸ್ತಿ ಬಹಿರಂಗದಂತಹ ವಿಷಯ ಇಂದು ಮಾಧ್ಯಮಗಳಲ್ಲಿ ಎಷ್ಟು ಸಾಮಾನ್ಯ ವಿಷಯವಾಗಿಬಿಟ್ಟಿದೆ ಎಂದರೆ, ಇಂಥ ಸುದ್ದಿಗಳು ಮುಖಪುಟದಲ್ಲಿ ಬಂದರೂ ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಇದನ್ನೆಲ್ಲಾ ಗಮನಿಸಿದರೆ ಪ್ರಸಕ್ತ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರಕ್ಕೆ ಕೊನೆಯೇ ಇಲ್ಲವೇ ಎಂದು ಒಂದು ಕಡೆ ಜುಗುಪ್ಸೆಯಾಗುತ್ತದೆ; ಮತ್ತೊಂದು ಕಡೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡುವ ಜನ ಹೆಚ್ಚಾಗುತ್ತಿದ್ದಾರಲ್ಲ ಎಂದು ಸಮಾಧಾನವೂ ಆಗುತ್ತದೆ.

ಭ್ರಷ್ಟಾಚಾರ ಏಕಿಷ್ಟು ವ್ಯಾಪಕವಾಗಿದೆ? ಇದಕ್ಕೆ ನಮ್ಮ ಆಡಳಿತ ವ್ಯವಸ್ಥೆಯತ್ತ ಬೊಟ್ಟು ಮಾಡಬಹುದು. ನಮ್ಮ ಸಚಿವರು, ಜನಪ್ರತಿನಿಧಿಗಳೆಲ್ಲಾ ಭ್ರಷ್ಟಾಚಾರಕ್ಕೆ ಇಂಬುಕೊಡುತ್ತಿದ್ದಾರೆ ಎಂದರೆ ತಪ್ಪಲ್ಲ. ಕೆಲವರಿಗೆ ಭ್ರಷ್ಟಾಚಾರವನ್ನು ನಿಯಂತ್ರಿಸುವ ಬಗೆ ಗೊತ್ತಿಲ್ಲ. ಮತ್ತೆ ಕೆಲವರು ತಾವೇ ಭ್ರಷ್ಟಾತಿಭ್ರಷ್ಟರಾಗಿಬಿಟ್ಟಿದ್ದಾರೆ. ತಮ್ಮ ಮೇಲಿನವನೇ ಹೀಗೆ ಭ್ರಷ್ಟನಾದರೆ ಅದನ್ನು ಆತನ ಕೆಳಗಿನವನೂ ಅನುಸರಿಸುತ್ತಾನೆ. ಹೀಗಾದಾಗ ಸಚಿವರಿಂದ ಜವಾನನವರೆಗೆ ಭ್ರಷ್ಟತೆ ಸಾಗಿಬಿಡುತ್ತದೆ.

ಹಾಗೆ ನೋಡಿದರೆ ಭ್ರಷ್ಟಾಚಾರದ ವಿರುದ್ಧ ಕರ್ನಾಟಕದಲ್ಲಿ ಲೋಕಾಯುಕ್ತ ಚುರುಕಾಗಿ ಕಾರ್ಯ ನಿರ್ವಹಿಸುತ್ತಿರುವಂತೆ ಇತರ ರಾಜ್ಯಗಳಲ್ಲಿ ಯಾವುದೇ ಏಜೆನ್ಸಿ ಚುರುಕಾಗಿಲ್ಲ. ಕೇಂದ್ರದಲ್ಲಿ ಕೂಡಾ ಲೋಕಪಾಲ್ ಮಸೂದೆ ನೆನೆಗುದಿಯಲ್ಲೇ ಬಿದ್ದಿದೆ. ಕೇಂದ್ರದಲ್ಲಿ ಭ್ರಷ್ಟಚಾರದ ವಿರುದ್ಧ ತನಿಖೆ ನಡೆಸಲು ಸಿಬಿಐನಂತಹ ಸಂಸ್ಥೆಗಳು ಇದ್ದರೂ ಅವೆಲ್ಲಾ ಪ್ರಧಾನ ಮಂತ್ರಿಗಳ ನಿಯಂತ್ರಣದಲ್ಲೇ ಇವೆ. ಆದರೆ ಲೋಕಾಪಾಲ್‌ನಂತಹ ಕಾಯ್ದೆ ಜಾರಿಯಾಗಲು ಏನು ಅಡ್ಡಿ ಎಂದು ನಮ್ಮ ಸಂಸದರು, ಕೇಂದ್ರ ಸರ್ಕಾರ ಹೇಳಬೇಕು.

ಕರ್ನಾಟಕ ಲೋಕಾಯುಕ್ತ ವಿಷಯಕ್ಕೆ ಬಂದಾಗ ನಾನು ಕೇಳುವ ಮೊದಲ ಪ್ರಶ್ನೆ ಎಂದರೆ ಲೋಕಾಯುಕ್ತ ಕಾಯ್ದೆಗೆ ಇನ್ನೂ ತಿದ್ದುಪಡಿ ಏಕೆ ಆಗಿಲ್ಲ? ಎಂಬುದು. ಈಗಿನ ಕಾಯ್ದೆಯ ಅನುಸಾರ ಭ್ರಷ್ಟಾಚಾರದ ವಿರುದ್ಧ ದೂರು ಬಂದಲ್ಲಿ ಮಾತ್ರ ಲೋಕಾಯುಕ್ತ ದಾಳಿ ನಡೆಸಬಹುದೇ ವಿನಾ ಸ್ವಇಚ್ಛೆಯಿಂದ ಕ್ರಮ ಕೈಗೊಳ್ಳಲು ಬರುವುದಿಲ್ಲ. ಎಷ್ಟೋ ವೇಳೆ ಮಾಧ್ಯಮಗಳಲ್ಲಿ ಭ್ರಷ್ಟಾಚಾರದ ವಿರುದ್ಧ ವರದಿಗಳು ಬಂದರೂ ಲೋಕಾಯುಕ್ತ ಅದನ್ನು ನೋಡುತ್ತಾ ಸುಮ್ಮನೆ ಕೂರಬೇಕಷ್ಟೇ. ನನ್ನ ಅವಧಿಯಲ್ಲೇ ಹಲವು ಭ್ರಷ್ಟರ ವಿರುದ್ಧ ಮಾಧ್ಯಮಗಳು ದಾಖಲೆ ಸಹಿತ ವರದಿ ಪ್ರಕಟಿಸಿದ್ದನ್ನು ಕಂಡಿದ್ದೇನೆ. ಆದರೆ ಯಾರೂ ದೂರು ನೀಡದೆ, ಸ್ವಯಂ ಆಗಿ ಕ್ರಮ ಕೈಗೊಳ್ಳಲು ಸಾಧ್ಯವಾಗದೆ ಕೈಕೈ ಹಿಸುಕಿಕೊಂಡಿದ್ದೇನೆ. ಪತ್ರಿಕೆಗಳಲ್ಲಿ ವರದಿ ಬಂದಾಗ ನಮಗೆ ತಕ್ಷಣಕ್ಕೆ ದಾಖಲೆಗಳು ಲಭ್ಯವಾಗುತ್ತವೆ. ಹೀಗಾಗಿ ಕ್ರಮ ಕೈಗೊಳ್ಳಲು ಅವಕಾಶ ಇರುತ್ತದೆ. ಆದರೆ 'ಸು-ಮೋಟೊ ಅಧಿಕಾರ' (ವಿವೇಚನಾಧಿಕಾರ) ಇಲ್ಲದೆ ಲೋಕಾಯುಕ್ತ ಇದ್ದೂ ಇಲ್ಲದಂತಾಗುತ್ತದೆ.

ಶಾಸಕರು, ಸಚಿವರು ಮತ್ತು ಮುಖ್ಯಮಂತ್ರಿಗಳು ಈಗಲೂ ಕೂಡಾ ಲೋಕಾಯುಕ್ತ ವ್ಯಾಪ್ತಿ ಅಡಿ ಬರುತ್ತಾರೆ, ನಿಜ. ಆದರೆ ಅಂಥವರ ವಿರುದ್ಧ ಯಾರು ದೂರು ನೀಡಲು ಮುಂದಾಗುತ್ತಾರೆ ಹೇಳಿ? ಇಂದಿನ ದ್ವೇಷದ ರಾಜಕೀಯದಲ್ಲಿ ಪ್ರಭಾವಿಗಳ ವಿರುದ್ಧ ದೂರು ನೀಡಿ ಉಳಿದವರುಂಟೆ? ಹೀಗಾಗಿ ಪ್ರಭಾವಿಗಳು ಲೋಕಾಯುಕ್ತದ ಕುಣಿಕೆಯಿಂದ ತಪ್ಪಿಸಿಕೊಳ್ಳುತ್ತಲೇ ಹೋಗುತ್ತಾರೆ. ಲೋಕಾಯುಕ್ತಕ್ಕೆ ವಿವೇಚನಾ ಅಧಿಕಾರ ಮತ್ತು ಸ್ವಯಂ ಇಚ್ಛೆಯಿಂದ ಕ್ರಮ ಕೈಗೊಳ್ಳುವ ಅಧಿಕಾರ ನೀಡಬೇಕೆಂಬ ಬೇಡಿಕೆ ತುಂಬಾ ಹಳೆಯದು. ಆದರೆ ತಿದ್ದುಪಡಿ ಮಸೂದೆ ಜಾರಿಯಾಗಿಸಲು ನಮ್ಮ ಶಾಸಕರು ಮತ್ತು ಸರ್ಕಾರ ಇನ್ನೂ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ.

ಕೇವಲ ಲೋಕಾಯುಕ್ತದಿಂದ ಮಾತ್ರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲ. ಈ ಹೋರಾಟದಲ್ಲಿ ಪೊಲೀಸರು, ನ್ಯಾಯಾಲಯ ಮತ್ತು ಸರ್ಕಾರ ಕೈಜೋಡಿಸುವುದೂ ಅಗತ್ಯ. ಹಾಗೇ ಮಾಧ್ಯಮಗಳ ಪಾತ್ರ ತುಂಬಾ ಮುಖ್ಯ. ನಾನು ಲೋಕಾಯುಕ್ತ ಆಗಿದ್ದ ಅವಧಿಯಲ್ಲಿ ಮಾಧ್ಯಮಗಳು ಉತ್ತಮವಾಗಿ ಸ್ಪಂದಿಸಿದ್ದವು. ಹೀಗಾಗಿ ಜನರಿಗೆ ಭ್ರಷ್ಟಾಚಾರ ನಿಯಂತ್ರಿಸಲು ಲೋಕಾಯುಕ್ತ ಎಂಬ ಒಂದು ಸಂಸ್ಥೆ ಇದೆ; ಅದಕ್ಕೆ ದೂರು ನೀಡಿದರೆ ಕ್ರಮ ಜರುಗುತ್ತದೆ ಎಂಬ ವಿಷಯ ಗೊತ್ತಾಯಿತು. ಜನರೂ ಕೂಡಾ ಹೆಚ್ಚು ಹೆಚ್ಚು ದೂರು ನೀಡಲು ಮುಂದಾದರು.

ಹಿಂದೆ ಭ್ರಷ್ಟತೆಯ ವಿರುದ್ಧ ದನಿ ಎತ್ತಲೇ ಜನರು ಅಂಜುತ್ತಿದ್ದರು. ಸರ್ಕಾರಿ ಕೆಲಸವೆಂದರೆ ಸಂಬಳಕ್ಕಿಂತ ಗಿಂಬಳವೇ ಹೆಚ್ಚು ಎಂಬ ನಂಬಿಕೆ ಸಾರ್ವತ್ರಿಕವಾಗಿತ್ತಲ್ಲದೇ, ಸರ್ಕಾರಿ ಕೆಲಸ ಮಾಡಿಸಿಕೊಳ್ಳಲು ಲಂಚ ನೀಡುವುದು ಕಡ್ಡಾಯವೆಂಬ ಮನೋಭಾವ ಇತ್ತು. ಆದರೆ ಲೋಕಾಯುಕ್ತ ದಾಳಿಯಿಂದಾಗಿ ಈ ಮನೋಭಾವ ಅಲ್ಪಮಟ್ಟದಲ್ಲಾದರೂ ಕಡಿಮೆಯಾಗಿದೆ ಎಂಬುದು ಸುಳ್ಳಲ್ಲ. ಲಂಚ ಪಡೆಯಲು ಭ್ರಷ್ಟ ಅಧಿಕಾರಿಗಳು ಸ್ವಲ್ಪ ಹಿಂದೆ-ಮುಂದೆ ನೋಡುವಂತಾಗಿರುವ ಬದಲಾವಣೆ ಕೂಡಾ ಲೋಕಾಯುಕ್ತದ ಸಾಧನೆಯೇ. ಜನರು ಇನ್ನಷ್ಟು ಜಾಗೃತರಾಗಿ ಭ್ರಷ್ಟಾಚಾರದ ವಿರುದ್ಧ ಮುಲಾಜಿಲ್ಲದೆ ದೂರು ನೀಡುವ ಮನೋಭಾವ ರೂಢಿಸಿಕೊಂಡಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಲ್ಲಿ ಇನ್ನೂ ಹೆಚ್ಚಿನ ಬದಲಾವಣೆ ಕಾಣಬಹುದು. ಈಗಿನ ಯುವಜನಾಂಗ ನಿಜವಾಗಿಯೂ ಭ್ರಷ್ಟಾಚಾರದ ವಿರುದ್ಧ ಕಿಡಿಕಾರುವ ಮನೋಭಾವದವರೇ. ದುರದೃಷ್ಟವಶಾತ್ ಅವರು ಉದ್ಯೋಗ ಗಳಿಸುವ ಆರಂಭದಲ್ಲೇ ಭ್ರಷ್ಟಾಚಾರದ ತಿರುಗಣಿಯಲ್ಲಿ ಸಿಲುಕುತ್ತಾರೆ. ಲಂಚವಿಲ್ಲದೆ ಸರ್ಕಾರಿ ಕೆಲಸ ಸಿಗಲು ಸಾಧ್ಯವೇ ಇಲ್ಲ ಎಂಬಂಥ ಪರಿಸ್ಥಿತಿ ಇದೆ. ಹೀಗೆ ಲಂಚ ಕೊಟ್ಟು ಬಂದ ನೌಕರ ಅಥವಾ ಅಧಿಕಾರಿಯಿಂದ ಭ್ರಷ್ಟಾಚಾರವನ್ನಲ್ಲದೆ ಬೇರೆ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ? ಹೀಗಾಗಿ ಪ್ರಸಕ್ತ ವ್ಯವಸ್ಥೆಯೇ ಯುವಜನಾಂಗವನ್ನು ಭ್ರಷ್ಟಾಚಾರದ ಹೊಲಸಿಗೆ ನೂಕುತ್ತಿದೆ.

ಹಾಗಂತ ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೇ ಭ್ರಷ್ಟಾಚಾರ ತಳುಕು ಹಾಕಿಕೊಂಡಿದೆ ಎಂದು ಕೆಲವರಿಗೆ ಅನ್ನಿಸಬಹುದು. ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಈ ರೀತಿ ಅನ್ನಿಸುವುದು ಸಹಜ. ಆದರೆ, ವಾಸ್ತವವೆಂದರೆ ಪ್ರಜಾಪ್ರಭುತ್ವ ಅತ್ಯುತ್ತಮ ವ್ಯವಸ್ಥೆ. ನಮ್ಮ ಪ್ರತಿನಿಧಿಗಳು ಪ್ರಜಾಪ್ರಭುತ್ವವನ್ನು ತಪ್ಪುದಾರಿಗೆ ಎಳೆದೊಯ್ಯುತ್ತಿದ್ದಾರೆ ಅಷ್ಟೆ. ಹಾಗೆಯೇ ಸಂಸದೀಯ ಪದ್ಧತಿಗೆ ಬದಲಾಗಿ ಅಧ್ಯಕ್ಷೀಯ ಪದ್ಧತಿ ಒಳ್ಳೆಯದು ಎಂಬ ವಾದವೂ ಇದೆ. ಆದರೆ ಅಮೆರಿಕದಂತಹ ರಾಷ್ಟ್ರಗಳಿಗೆ ಅಧ್ಯಕ್ಷೀಯ ಪದ್ಧತಿ ಸೂಕ್ತವಾಗಬಹುದು. ಭಾರತದಂತಹ ರಾಷ್ಟ್ರಕ್ಕೆ ಅದೇನೂ ಅಷ್ಟು ಒಳ್ಳೆಯ ಪದ್ಧತಿ ಅಲ್ಲ. ನಮ್ಮಲ್ಲಿ ನೂರು ಕೋಟಿ ಮೀರಿದ ಜನಸಂಖ್ಯೆ ಇದೆ. ಅದರಲ್ಲಿ ಬಹುಪಾಲು ಅನಕ್ಷರಸ್ಥರೇ ಇದ್ದಾರೆ. ಹೀಗಿರುವಾಗ ಅಧ್ಯಕ್ಷನೊಬ್ಬನಲ್ಲೇ ಅಧಿಕಾರ ಕೇಂದ್ರೀಕೃತವಾಗುವಂತಾದರೆ ಸರ್ವಾಧಿಕಾರತ್ವಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ. ಹಾಗಾಗಿ ನಾವು ಪ್ರಸ್ತುತ ರೂಢಿಯಲ್ಲಿ ಇರುವ ವ್ಯವಸ್ಥೆಯನ್ನೇ ಸರಿಪಡಿಸುತ್ತಾ ಸಾಗಬೇಕಿದೆ.

ಇಷ್ಟನ್ನೆಲ್ಲಾ ಹೇಳಿ ಕೊನೆಗೆ ನಾನು ಅದೇ ಒತ್ತಾಯವನ್ನು ಪುನರ್ ಉಚ್ಚರಿಸುತ್ತೇನೆ. ಅದೆಂದರೆ ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ಕೊಡುವಂತೆ ಲೋಕಾಯುಕ್ತ ಕಾಯ್ದೆಗೆ ಆದಷ್ಟು ಬೇಗ ತಿದ್ದುಪಡಿ ತರಬೇಕು. ಅದಕ್ಕೆ ಹೆಚ್ಚೇನೂ ಸಮಯ ಬೇಕಿಲ್ಲ. ಸದನದಲ್ಲಿ ಮಸೂದೆ ಮಂಡಿಸುವುದು; ಸರ್ವಾನುಮತ ತೋರುವುದು; ರಾಜ್ಯಪಾಲರು ಸಹಿ ಹಾಕುವುದು -ಅಷ್ಟೇ ತಾನೆ? ಮೂರು ದಿನಗಳು ಸಾಕು ಎಂದು ನನಗನಿಸುತ್ತದೆ. ಈಗಿನ ಸರ್ಕಾರ ಮತ್ತು ಆಡಳಿತ ಪಕ್ಷ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತದೆಂದು ಆಶಿಸುತ್ತೇನೆ.

ಟಿಎಸ್‌ಐ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location

ಮುಖಪುಟ ಲೇಖನದಲ್ಲಿ ಇನ್ನೇನಿದೆ

ಭ್ರಷ್ಟಾಸುರ ಸಂಹಾರ ಬ್ರಹ್ಮಾಸ್ತ್ರ ಕೊಡಿ 

ಲೋಕಾಯುಕ್ತ ಕಾಯ್ದೆ ತಿದ್ದುಪಡಿ ಎಂದಿಗೆ? : ಮಾಜಿ ಲೋಕಾಯುಕ್ತ ಎನ್. ವೆಂಕಟಾಚಲ

ಭ್ರಷ್ಟರಿಗೆ ಬಡ್ತಿ ಲೋಕಾಯುಕ್ತಕ್ಕೆ ಅವಮಾನ : ಲೋಕಾಯುಕ್ತ ಸಂತೋಷ್ ಹೆಗ್ಡೆ 

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .