|

ಬಿಜೆಪಿ ಚುನಾವಣೆಗೆ ಸಜ್ಜಾಗುತ್ತಿದೆಯೇ?
ಚುನಾವಣೆ ಹೇಗಿದ್ದರೂ ನಡೆಯಲೇಬೇಕು;
ಪ್ರಸಕ್ತ ಸರ್ಕಾರ ಉರುಳಿದರೆ ಈ ವರ್ಷದ ಅಂತ್ಯಕ್ಕೇ
ಚುನಾವಣೆ ನಡೆಯಲಿದೆ.
ಇಂತಹ ಸಂದರ್ಭದಲ್ಲಿ ಯಾವುದೇ ಪಕ್ಷ ಕೂಡಾ ಚುನಾವಣೆಗೆ
ತಯಾರಾಗುವುದು ಸಹಜ.
ಬಿಜೆಪಿ ಕೂಡಾ ಖಂಡಿತ ಸಜ್ಜಾಗುತ್ತಿದೆ.
ಸಂಪೂರ್ಣ ಅಧಃಪತನಗೊಂಡಿರುವ ಯುಪಿಎ ನೇತೃತ್ವದ
ಸರ್ಕಾರ ಬಿಜೆಪಿಗೆ ಅಧಿಕಾರ ಹಿಡಿಯುವ ಸವಾಲು ಒಡ್ಡಿದೆ.
ನಾವು ಈ ಸವಾಲನ್ನು ಒಂದು ಸದವಕಾಶ ಎಂದು
ಒಪ್ಪಿಕೊಂಡಿದ್ದೇವೆ.
ನಿಮ್ಮ ಚುನಾವಣಾ ರೂಪುರೇಷೆಗಳ ಬಗ್ಗೆ ಇನ್ನಷ್ಟು
ಮಾಹಿತಿ ಕೊಡುತ್ತೀರಾ?
ನಾವಿನ್ನೂ ಚುನಾವಣೆ ಕುರಿತು ವಿವರವಾದ ರೂಪುರೇಷೆ
ಸಿದ್ಧಪಡಿಸಿಲ್ಲ;
ಆದರೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವತ್ತ ಗಮನ
ಹರಿಸಿದ್ದೇವೆ.
ಮೊದಲ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದ್ದೇವೆ.
ಜೊತೆಗೆ ಬೆಲೆ ಏರಿಕೆ,
ಭಯೋತ್ಪಾದನೆಯತ್ತ ಯುಪಿಎ ಸರ್ಕಾರದ ಮೃದು ಧೋರಣೆ,
ಅಮರನಾಥ ದೇವಾಲಯ ಮಂಡಳಿಗೆ ಜಮೀನು ನೀಡಿದ ಆದೇಶ
ವಾಪಸು...
ಮುಂತಾದ ರಾಷ್ಟ್ರೀಯ ಹಿತಾಸಕ್ತಿ ಸಂಗತಿಗಳ ಕುರಿತು ಜನರಲ್ಲಿ
ಜಾಗೃತಿ ಮೂಡಿಸಲು ಮತ್ತು ಪಕ್ಷ ಸಂಘಟಿಸಲು ಮುಂದಾಗಿದ್ದೇವೆ.
ಇದಲ್ಲದೆ ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ
ನಾಯಕತ್ವದ ಕೊರತೆ ಮತ್ತು ಯುಪಿಎ ಸರ್ಕಾರದ ಸಂಪೂರ್ಣ ವೈಫಲ್ಯದತ್ತ ಜನರ ಗಮನ
ಸೆಳೆಯಲಿದ್ದೇವೆ.
ಚುನಾವಣೆ ಈಗ ಅನಿವಾರ್ಯ ಎನಿಸುತ್ತದೆಯೇ?
ಚುನಾವಣೆ ಅನಿವಾರ್ಯ ಎಂದು ನನಗನಿಸುತ್ತದೆ.
ಅದು ನವೆಂಬರ್-ಡಿಸೆಂಬರ್‌ನಲ್ಲಿ
ನಡೆಯುತ್ತದೆಯೋ ಅಥವಾ ಫೆಬ್ರುವರಿ-ಮಾರ್ಚ್‌ನಲ್ಲಿ
ನಡೆಯುತ್ತದೆಯೋ ಎಂಬುದಷ್ಟೇ ಈಗ ಚರ್ಚೆಯ ಸಂಗತಿ.
ಆದರೂ ಈ
2 ತಿಂಗಳ ಅಂತರ ಗಮನಾರ್ಹ ವ್ಯತ್ಯಾಸವನ್ನೇನನ್ನೂ
ಮಾಡದು.
ಸರ್ಕಾರ ಅಭದ್ರವಾಗಿದೆ ಹೀಗಾಗಿ ಚುನಾವಣೆ ಅನಿವಾರ್ಯ ಎಂದು ಆಕೆಗೂ
(ಸೋನಿಯಾ)
ಅರಿವಿದೆ.
ಚುನಾವಣೆ ಯಾವಾಗ ನಡೆದರೂ,
ನಿಮ್ಮ ಪಕ್ಷ ಮುಂದಿನ ಸರ್ಕಾರ ರಚಿಸಲಿದೆ ಎಂಬ ಭರವಸೆ
ನಿಮ್ಮಲ್ಲಿದೆಯೇ?
ಕೇಂದ್ರದಲ್ಲಿ ಮುಂದಿನ ಸರ್ಕಾರ ರಚಿಸುವ ಖಚಿತ
ಭರವಸೆ ನಮ್ಮಲ್ಲಿದೆ.
ಯುಪಿಎ ವಿರುದ್ಧ ಈಗ ಆಡಳಿತ ವಿರೋಧಿ ಅಲೆ ಹೇಗಿದೆ ಎಂದರೆ ಅದು
ಮುಂದಿನ ಚುನಾವಣೆಯಲ್ಲಿ ಸಾಧಾರಣ ಸಾಧನೆ ಮಾಡುವುದೂ ಅನುಮಾನ.
ಬಿಜೆಪಿಗೆ ಈಚಿನ ದಿನಗಳಲ್ಲಿ ವಿಜಯಗಳ ಸರಮಾಲೆಯೇ
ಲಭಿಸಿದೆ.
ಹಿಮಾಚಲ,
ಗುಜರಾತ್ ಮತ್ತು ಕರ್ನಾಟಕ...
ಇತ್ಯಾದಿ ರಾಜ್ಯಗಳಲ್ಲಿ.
ಈ ಸರಣಿ ಎತ್ತ ಸಾಗಲಿದೆ?
ನಿಜ.
ನಾವು ಆ ರಾಜ್ಯಗಳಲ್ಲೆಲ್ಲಾ ಜಯಗಳಿಸಲು ಕೇಂದ್ರ
ಮತ್ತು ರಾಜ್ಯಕ್ಕೆ ಸಂಬಂಧಪಟ್ಟ ವಿಷಯಗಳೆರಡೂ ಕಾರಣವಾಗಿದ್ದವು.
ಹಲವು ರಾಜ್ಯಗಳಲ್ಲಿ ಈಗ ಬಿಜೆಪಿ ಸರ್ಕಾರವೇ ಇದೆ.
ಆದರೆ ಆಡಳಿತ ವಿರೋಧಿ ಅಲೆ ಕೇಂದ್ರದ ವಿರುದ್ಧ ಇದೆಯೇ
ವಿನಾ ರಾಜ್ಯ ಸರ್ಕಾರಗಳ ವಿರುದ್ಧ ಇಲ್ಲ.
ಹಾಗೆ ರಾಜ್ಯ ಸರ್ಕಾರಗಳ ವಿರುದ್ಧದ ಅಲೆ ಎದ್ದರೂ
ನಮ್ಮ ಪಕ್ಷ ಒಂದೆರಡು ಸ್ಥಾನ ಕಳೆದುಕೊಳ್ಳಬಹುದು ಅಷ್ಟೇ.
ಆದರೆ ಕಾಂಗ್ರೆಸ್ ಪಕ್ಷ ಯಾವುದೇ ರಾಜ್ಯದಲ್ಲಿ ಸಾಧನೆ
ಮಾಡುವ ಸ್ಥಿತಿಯಲ್ಲಿಲ್ಲ.
ಬೆಲೆ ಏರಿಕೆ ಚುನಾವಣಾ ವಿಷಯವೇ?
ಶೇ.
12ರಿಂದ
13ರಷ್ಟು
ಹಣದುಬ್ಬರ ಪರಿಸ್ಥಿತಿಯಲ್ಲಿ ಆಡಳಿತ ಪರ ಅಲೆ ಇದ್ದರೂ ಯಾವುದೇ ಸರ್ಕಾರ
ಉಳಿದುಕೊಳ್ಳುವುದು ಕಷ್ಟ.
ಯುಪಿಎ ಏನಾದರೂ ಮತ್ತೆ ಅಧಿಕಾರಕ್ಕೆ ಬಂದರೆ ಅದು ಪವಾಡವಷ್ಟೇ.
ಹಿಂದುತ್ವ ಮತ್ತು
370ನೇ ವಿಧಿಯ
ಬಗ್ಗೆ ಹೇಳಿ.
ಈ ಎರಡೂ ಬಿಜೆಪಿ ಕಾರ್ಯಸೂಚಿಯ ಅಂತರ್ಗತ ಅಂಶವಲ್ಲವೇ?
370ನೇ ವಿಧಿಯ ವಿಚಾರ
ನಮ್ಮ ಪಕ್ಷದ ತಾತ್ವಿಕ ಅಂಶಗಳಲ್ಲೊಂದು.
ಆದರೆ ಕಾಶ್ಮೀರದಲ್ಲಿ ಈಗ ಸಂಭವಿಸುತ್ತಿರುವ
ಘಟನಾವಳಿಗಳನ್ನು ನೋಡಿ.
ನಾವು ಸದಾ ಏನು ಹೇಳುತ್ತಿದ್ದೆವೋ ಅದು ನಿಜವಾಗಿದೆ.
ಈಗ ನಮಗೆ ನೆಹರು ಮಾದರಿ ಕಾಶ್ಮೀರ ಬೇಕೋ ಅಥವಾ ಡಾ.
ಶ್ಯಾಮಪ್ರಸಾದ್ ಮುಖರ್ಜಿ ಅವರ ಮಾದರಿ ಕಾಶ್ಮೀರ ಬೇಕೋ
ಎಂಬ ಬಗ್ಗೆ ರಾಷ್ಟ್ರಮಟ್ಟದಲ್ಲಿ ಗಂಭೀರ ಚರ್ಚೆ ನಡೆಯಬೇಕು.
370ನೇ
ವಿಧಿ ಎಂಬ ಐತಿಹಾಸಿಕ ಪ್ರಮಾದದಿಂದಾಗಿ ಕಾಶ್ಮೀರದಲ್ಲಿ ಇಂತಹ ಪರಿಸ್ಥಿತಿ
ನಿರ್ಮಾಣವಾಗಿದೆ.
ಸ್ವಾತಂತ್ರ್ಯೋತ್ತರ ಭಾರತದಲ್ಲಿನ ಜಾತ್ಯತೀತತೆಯ ಅತಿ ದೊಡ್ಡ
ವೈಫಲ್ಯ ಎಂದರೆ ಅದು ಕಾಶ್ಮೀರ.
ಅಲ್ಪಸಂಖ್ಯಾತ ಕಾಶ್ಮೀರಿ ಪಂಡಿತರನ್ನು ಕಣಿವೆಯಿಂದ
ಸಂಪೂರ್ಣವಾಗಿ ಹೊರಹಾಕಲಾಗಿದೆ.
ಈಗ ಯಾತ್ರಾರ್ಥಿಗಳ ಪೂಜೆ,
ಆರಾಧನೆಗೆ ಇನ್ನಷ್ಟು ಸೌಲಭ್ಯ ಒದಗಿಸುವ ಯತ್ನಕ್ಕೂ
ಕಲ್ಲುಹಾಕಲಾಗಿದೆ.
ರಾಷ್ಟ್ರದ ಬೇರ್‍ಯಾವುದೇ ಭಾಗದಲ್ಲಿ ಈ ರೀತಿ ನಡೆಯಲು
ಸಾಧ್ಯವೇ ಹೇಳಿ.
ಚುನಾವಣೆ ನಡೆಯಲಿ ಅಥವಾ ನಡೆಯದಿರಲಿ ರಾಷ್ಟ್ರೀಯ ಮನೋಭಾವಕ್ಕೆ
ಭಂಗ ತರಬಲ್ಲ ಇಂತಹ ವಿಷಯಗಳ ಬಗ್ಗೆ ಬಿಜೆಪಿ ಖಂಡಿತ ದನಿ ತೆಗೆಯಲಿದೆ.
ರಾಷ್ಟ್ರೀಯ ವಿಚಾರಗಳಲ್ಲಿ ಬಿಜೆಪಿ ಮತ್ತು ಅದರ ಉನ್ನತ
ಮಟ್ಟದ ನಾಯಕರು ಕೇಂದ್ರೀಕೃತ ಪಾತ್ರ ವಹಿಸುತ್ತಿದ್ದಾರೆ...
ಇದು ಕೇಂದ್ರೀಕೃತ ಅಥವಾ ಬಲಪಂಥೀಯ ತತ್ವದ
ಪ್ರಶ್ನೆ ಅಲ್ಲ.
ದೇಶದ ಆರ್ಥಿಕ ನಿರ್ವಹಣೆಯ ವಿಚಾರದಲ್ಲಿ
1991ರ ನಂತರದ
ಮಾರ್ಗಸೂಚಿ ಇದೆ.
ಅದು ಪ್ರಗತಿಯ ಮಾರ್ಗಸೂಚಿ.
ಅದು
2004ರ ಮೇವರೆಗೂ ಸಾಗಿ ಬಂತು.
ಆದರೆ ಯುಪಿಎ ಅಧಿಕಾರಕ್ಕೆ ಬಂದ ಮೇಲೆ ಅದು ಆರ್ಥಿಕ
ನಿರ್ಧಾರ ಕೈಗೊಳ್ಳುವುದನ್ನೇ ಸ್ಥಗಿತಗೊಳಿಸಿಬಿಟ್ಟಿತು.
ಬಡತನ ನಿರ್ಮೂಲನಾ ಯೋಜನೆಗಳನ್ನು ಕೈಗೊಳ್ಳುವಾಗ,
ಆ ಮೂಲಕ ಆರ್ಥಿಕ ಪ್ರಗತಿ ಸಾಧಿಸುವಾಗ ಎಡ ಮತ್ತು
ಬಲಪಂಥೀಯ ತತ್ವ ಎಂದು ವಿಂಗಡಿಸಲಾಗದು.
ಎನ್‌ಡಿಎ ಬಗ್ಗೆ ಏನು?
ಮಿತ್ರಪಕ್ಷಗಳನ್ನೂ ಜೊತೆಯಲ್ಲೇ ದಡಕ್ಕೆ ಮುಟ್ಟಿಸುವ
ಭರವಸೆ ಹೊಂದಿದ್ದೀರಾ?
ಎನ್‌ಡಿಎ ಬಲಿಷ್ಠವಾಗುತ್ತಿದೆ.
ಬಲಿಷ್ಠ ಬಿಜೆಪಿಯು ಬಲಿಷ್ಠ ಎನ್‌ಡಿಎಯನ್ನು
ಮುನ್ನಡೆಸುತ್ತಿದೆ ಹಾಗೂ ಮತ್ತಷ್ಟು ಮಿತ್ರರನ್ನು ಸೆಳೆದುಕೊಳ್ಳುತ್ತಿದೆ.
ಮಾಯಾವತಿ ಅವರತ್ತಲೂ ಬಿಜೆಪಿ ಸ್ನೇಹದ ಆಹ್ವಾನ
ನೀಡಿದೆ.
ಅವರು ಉತ್ತಮ ಮಿತ್ರ ಪಕ್ಷ ಆಗಬಲ್ಲರೇ?ಮಾಯಾವತಿ
ಅವರತ್ತ ಬಿಜೆಪಿ ಸ್ನೇಹದ ಆಹ್ವಾನ ನೀಡಿದೆ ಎಂಬುದು ಸತ್ಯವಲ್ಲ.
ಕಾನ್ಪುರ ಸಭೆಯ ಕುರಿತು ಏನು?
ಎಲ್.ಕೆ.
ಅಡ್ವಾಣಿ ಅವರು ಪ್ರಸ್ತಾವದ ಮಾತನ್ನಾಡಿದ್ದಾರಂತಲ್ಲ?
ಆ ಸಭೆಯಲ್ಲಿ ಬಿಎಸ್‌ಪಿ ಕುರಿತಾಗಲೀ,
ಮಾಯಾವತಿ ಅವರ ಕುರಿತಾಗಲೀ ಯಾವುದೇ ಉಲ್ಲೇಖ
ಮಾಡಲಾಗಿಲ್ಲ ಎಂಬುದನ್ನು ನಾನು ಸ್ಪಷ್ಟಪಡಿಸುತ್ತೇನೆ.
ಮಾಧ್ಯಮಗಳಲ್ಲಿ ಸಂಪೂರ್ಣ ತಪ್ಪಾಗಿ ವರದಿಯಾಗಿದೆ.
ಅಡ್ವಾಣಿ ಅವರು ಹೇಳಿದ್ದು ಕೇಂದ್ರ ಸರ್ಕಾರವು
ಕಾಂಗ್ರೆಸೇತರ ಮತ್ತು ಯುಪಿಎಯೇತರ ರಾಜ್ಯ ಸರ್ಕಾರಗಳ ಕುರಿತು ಪಕ್ಷಪಾತ ಧೋರಣೆ
ಅನುಸರಿಸುತ್ತಿದೆ ಎಂದಷ್ಟೇ.
ಆ ಮಾತನ್ನು ಬಿಎಸ್‌ಪಿಯತ್ತ ಸ್ನೇಹ ಹಸ್ತ ಚಾಚಿದ
ಪ್ರಸ್ತಾವ ಎಂದು ತಪ್ಪು ವ್ಯಾಖ್ಯಾನ ಮಾಡಲಾಗಿದೆ.
ಬಿಜೆಪಿ ಮತ್ತು ಬಿಎಸ್‌ಪಿ ನಡುವೆ ಯಾವುದೇ ಬಾಂಧವ್ಯ
ಏರ್ಪಡಲಿದೆ ಎಂದು ನನಗನಿಸುವುದಿಲ್ಲ.
ಹಾಗಾದರೆ ಉತ್ತರ ಪ್ರದೇಶದ ವಿಚಾರ ಏನು?
ಉತ್ತರ ಪ್ರದೇಶದ ವಿಚಾರವನ್ನು ನಾನೇ
ನೋಡಿಕೊಳ್ಳುತ್ತಿದ್ದೇನೆ.
ಆ ರಾಜ್ಯದಲ್ಲಿ ಪಕ್ಷದ ಸ್ಥಾನ ಉತ್ತಮಗೊಳ್ಳಲಿದೆ ಎಂಬ ಭರವಸೆ
ಇದೆ.
ಉತ್ತರ ಪ್ರದೇಶದ ಚುನಾವಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರ
ವಿರುದ್ಧವೂ ಆಡಳಿತ ವಿರೋಧ ಅಲೆ ಏಳಲಿದೆ.
ಅದರ ಲಾಭವನ್ನು ಬಿಜೆಪಿ ಪಡೆಯಲಿದೆ.
ನಿಮ್ಮ ಪಕ್ಷದಲ್ಲೇ ಬಿಹಾರ ಮತ್ತು ಮಹಾರಾಷ್ಟ್ರ
ಮುಂತಾದ ಕಡೆ ಆಂತರಿಕ ಕಲಹ ಇದೆ...
ಯಾವುದೇ ದೊಡ್ಡ ಪಕ್ಷದಲ್ಲಿ ಆಂತರಿಕ ಕಲಹಗಳು
ಹಾಗೂ ಭಿನ್ನಾಭಿಪ್ರಾಯಗಳು ಇರುವುದು ಸಾಮಾನ್ಯ.
ಆದರೆ ಆ ಕಲಹಗಳನ್ನು ಹೇಗೆ ಬಗೆಹರಿಸುತ್ತೀರಿ
ಎಂಬಲ್ಲೇ ನಿಮ್ಮ ಚಾಕಚಕ್ಯತೆ ಅಡಗಿರುತ್ತದೆ.
ಬಿಜೆಪಿ ಇತಿಹಾಸದಲ್ಲಿ ಸುಶೀಲ್ ಮೋದಿ ಪ್ರಕರಣ ಅತಿ
ಮಹತ್ವದ್ದು.
ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಸಾಮಾನ್ಯವಾಗಿ
ಬಲಿಪಶುವಾಗಿಬಿಡುತ್ತದೆ.
ಆದರೆ ಬಿಜೆಪಿ ಮಾತ್ರ ಇದಕ್ಕೆ ಹೊರತು.
ಪ್ರತಿ ವಿಷಯದಲ್ಲೂ ಹೈಕಮಾಂಡ್ ನಿರ್ಧಾರ
ತೆಗೆದುಕೊಳ್ಳುವ ಬದಲು ಆಯಾ ರಾಜ್ಯದ ಶಾಸಕರ ಬಹುಮತ ಆಧರಿಸಿ ನಿರ್ಧಾರ
ಕೈಗೊಳ್ಳುವುದು ದೊಡ್ಡ ವಿಚಾರವಲ್ಲವೇ?
ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು
ಇದೊಂದು ಮಾದರಿ ತಂತ್ರ.
ಈ ಹೆಜ್ಜೆಯನ್ನು ನಿಜವಾಗಿಯೂ ಶ್ಲಾಘಿಸಬೇಕು.
ಉಮಾ ಭಾರತಿ,
ಮದನ್ ಲಾಲ್ ಖುರಾನಾ,
ಗೋವಿಂದಾಚಾರ್ಯ ಅವರಂತಹ ಬಂಡಾಯಗಾರರತ್ತ ಬಿಜೆಪಿ
ಮತ್ತೆ ತೆರಳಲಿದೆಯೇ?
ಇದು ಬಿಜೆಪಿ ಪಕ್ಷಕ್ಕೆ ಅಂತಹ ಗಂಭೀರ
ವಿಚಾರವೇನಲ್ಲ.
ಯಾರು ಯಾರ ಬಳಿ ತೆರಳುತ್ತಾರೆ ಎಂಬುದು ವೈಯಕ್ತಿಕ ವಿಷಯ.
ನೀವೀಗ ಬಿಜೆಪಿ ಕಾರ್ಯತಂತ್ರ ರೂಪಿಸುವ ಚತುರ ಚಾಣಕ್ಯ
ಎಂದೇ ಪರಿಗಣಿಸಲ್ಪಟ್ಟಿದ್ದೀರಿ...
ಆ ಹೊಗಳಿಕೆಯನ್ನೆಲ್ಲಾ ನಾನು ಗಂಭೀರವಾಗಿ
ಪರಿಗಣಿಸುವುದಿಲ್ಲ.
ಏಕೆಂದರೆ ಒಂದು ಚುನಾವಣೆ ಗೆದ್ದರೆ ಆ ಸಾಧನೆಯ ಪಾಲು ಪಕ್ಷದ
ನಾಯಕರು,
ಎಲ್ಲಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೂ ಸಲ್ಲಬೇಕು.
ಕೇವಲ ಒಂದು ರಾಜ್ಯದ ಉಸ್ತುವಾರಿ ಹೊತ್ತ ಮಾತ್ರಕ್ಕೆ
ಗೆಲುವಿನ ಪಾಲೆಲ್ಲಾ ಒಬ್ಬರಿಗೇ ಸೇರಬೇಕು ಎಂದರ್ಥವಲ್ಲ.
ವಿಜಯಕ್ಕಾಗಿ ಹೋರಾಡಿದ ನಾಯಕರು ಮತ್ತು
ಕಾರ್ಯಕರ್ತರಲ್ಲಿ ನಾನೂ ಒಬ್ಬ ಅಷ್ಟೆ.
ಪರಮಾಣು ಒಪ್ಪಂದದ ವಿಷಯ ಏನು?
ಅಮೆರಿಕದೊಂದಿಗಿನ ಕಾರ್ಯತಾಂತ್ರಿಕ
ಬಾಂಧವ್ಯವನ್ನು ಬಿಜೆಪಿ ವಿರೋಧಿಸುವುದಿಲ್ಲ.
ಇಂದಿಗೂ ಕೂಡಾ ಆ ಒಪ್ಪಂದವನ್ನು ನಾವು
ವಿರೋಧಿಸುತ್ತಿಲ್ಲ.
ಆದರೆ ಈಗಿರುವ ಮಾದರಿಯಲ್ಲಿ ಭಾರತ-ಅಮೆರಿಕ
ಬಾಂಧವ್ಯ ಏರ್ಪಡುವುದು ಅಷ್ಟು ಒಳ್ಳೆಯದಲ್ಲ ಎಂಬುದು ನಮ್ಮ ಅಭಿಪ್ರಾಯ.
ನಮ್ಮ ಪ್ರಾದೇಶಿಕ ಹಿನ್ನೆಲೆಯನ್ನು ಪರಿಗಣಿಸಿದರೆ
ಪರಮಾಣು ಪರೀಕ್ಷೆ ಮೊದಲಾದ ವಿಚಾರದಲ್ಲಿ ಭಾರತದ ಮೇಲೆ ಹೇರುವ ಕೆಲವು
ನಿರ್ಬಂಧಗಳ ಬಗ್ಗೆ ಬಿಜೆಪಿಗೆ ಸಹಮತವಿಲ್ಲ.
ಈ ಲೋಪಗಳನ್ನೆಲ್ಲಾ ಬಗೆಹರಿಸಿದರೆ ಬಿಜೆಪಿ ಎಂದಿಗೂ
ರಾಷ್ಟ್ರ ಹಿತಾಸಕ್ತಿಯ ಪರವೇ ಎಂಬುದನ್ನು ಮುಖಂಡರಾದ ಅಡ್ವಾಣಿ ಅವರೂ
ಸ್ಪಷ್ಟಪಡಿಸಿದ್ದಾರೆ.
ದುರದೃಷ್ಟವೆಂದರೆ ಕಾಂಗ್ರೆಸ್ ಪಕ್ಷ ಈಗಿನ ಮಾದರಿಯಲ್ಲೇ
ಒಪ್ಪಂದಕ್ಕೆ ಮುಂದಾಗುವ ಕಠಿಣ ನಿಲುವು ತಾಳಿದೆ.
ಟಿಎಸ್‌ಐ |