|

...ಕಳೆದ ಸಂಚಿಕೆಯಿಂದ...
ವಾಸುವನ್ನು ಚೆಕ್‌ಅಪ್ ಮಾಡಿ ಟಿಬಿ
ಪೂರ್ತಿಯಾಗಿ ಗುಣವಾಗಿದೆ ಎಂದು ಡಾಕ್ಟರು
ದೃಢಪಡಿಸಿದ್ದಕ್ಕೆ ಸಂತೋಷಪಡಬೇಕೋ ಇಲ್ಲ,
ವಾಸು ಶಾಶ್ವತವಾಗಿ ಕಿವಿ ಕಳಕೊಂಡ ಎಂಬುದಕ್ಕೆ
ಅಳಬೇಕೋ ಗೊತ್ತಾಗಲಿಲ್ಲ.
ವಾಸು ಕಿವುಡ.
ಇನ್ನು ಮುಂದೆ ಎಷ್ಟು ಪ್ರೀತಿಯಿಂದ
'ವಾಸೂ...
ಅಂದರೂ ಅವನೆಂದೂ ಕೇಳಿಸಿಕೊಳ್ಳುವುದಿಲ್ಲ.
ಜೀವ ಹಿಂಡಿ ಕಚ ಕಚನೆ ಕೊಯ್ದು ಬಿಸುಟಂತಹ ಭಾವನೆ.
ಬಲೇ ಬಲೇ ಬೇಗ ಬಲೇ ಬಸ್ ಸರಿಯಾಂಡ್
(ಬನ್ನಿ ಬನ್ನಿ
ಬೇಗ ಬನ್ನಿ ಬಸ್ ಸರಿಯಾಯಿತು)
ಕಂಡಕ್ಟರ್‌ನ ಕೂಗು ಕೇಳಿಸಿತು.
ಇಳಿದವರೆಲ್ಲ ಬಸ್ಸನ್ನೇರಿದರು.
ನಾನೂ ಕೂಡ.
ಕೊಕ್ಕರೆ ಕೊಕ್ಕರೆ ಕೊಕ್ಕೋ...
ಇದಕ್ಕಿದ್ದಂತೆ ಬಸ್ಸಿನೊಳಗೆ ಕೋಳಿ ಕೂಗು.
ಕೂಲಿ ಕೆಲಸಗಾರರ ಒಂದು ಪರಿವಾರ,
ಬಹುಶಃ ಬಿಜಾಪುರದವರಿರಬೇಕು.
ಪಾತ್ರೆ ಪರಡಿಗಳನ್ನೆಲ್ಲ ಸೀರೆಯಲ್ಲಿ ಗಂಟು
ಹಾಕಿದ್ದಾರೆ.
ಅದರೊಳಗಿಂದ ಕೋಳಿಯೊಂದು ತಲೆಯೆತ್ತಿ ಕೂಗು ಹಾಕಿದೆ.
ಇಡೀ ಬಸ್ಸು ಅವರತ್ತ ನೋಡುತ್ತಿದ್ದರೂ ಅವರದೇ
ಪಾಡಿಗಿದ್ದಾರೆ.
ಹರಟುತ್ತಿದ್ದರು,
ಹಾಡುತ್ತಿದ್ದರು.
ಮಗುವೊಂದು ಅಜ್ಜಿ ಮುದುಕಿಯ ಕೂದಲು ಎಳೆಯುತ್ತಿದೆ.
ಇನ್ನೊಂದು ಸ್ವಲ್ಪ ದೊಡ್ಡ ಮಗು ಕೋಳಿ ತಲೆಯನ್ನು
ಸೀರೆ ಕಟ್ಟಿನೊಳಗೆ ನೂಕುತ್ತಿತ್ತು.
ಮತ್ತೊಂದು ಮಗು ಕಿಟಕಿಗೆ ಬಡಿಯುತ್ತಿದೆ.
ದಪ್ಪ ಮೀಸೆಯವನೊಬ್ಬ ಮಗುವಿಗೆ ಎರಡೇಟು ಹಾಕಿದ.
ಮಗು ಏರುದನಿಯಲ್ಲಿ ಆಳತೊಡಗಿತು.
ಅದೇ ದಪ್ಪ ಮೀಸೆ ಮಗುವನ್ನು ಎದೆಗವಚಿಕೊಂಡಿತು.
ಸಿಂಬಳವನ್ನು ಸೀಟಿ ತೆಗೆದು ಕಿಟಿಕಿಗೆ ಒರೆಸಿತು.
ಎಂಚೆಂಚಿನ ಮಾಲುಳು ಪೂರ ಬರ್‍ಪೋ ಮಾರಾಯ್ರೇ,
ಒಂಜಿ ದಿನ ನಾಯಿನ್ ತುಂಬೊಂದು ಬತ್ತ.
ಕುಡೋಂಜಿ ದಿನ ಪುಚ್ಚೆನ್ ಪತೊಂದ್ ಬತ್ತ ಸಾಕ್
ಸಾಕಾತ್ ಪೋಂಡ್ (ಎಂತೆಂತಹ
ಮಾಲುಗಳೆಲ್ಲ ಬರುತ್ತವೆ ಮಾರಾಯ್ರೇ,
ಒಂದು ದಿನ ನಾಯಿಯನ್ನೂ ಹೊತ್ತು ಬಂದಾರು.
ಮತ್ತೊಂದು ದಿನ ಬೆಕ್ಕು ಹಿಡಿದುಕೊಂಡು ಬಂದಾರು.
ಅಬ್ಬಾ,
ಸಾಕು ಸಾಕಾಗಿ ಹೋಯಿತು)
ಎಂದ ಕಂಡಕ್ಟರ್ ನನ್ನತ್ತ ತಿರುಗಿ.
ಕಂಡಕ್ಟರನಿಗೂ ನಾನು ಅವರವನೇ;
ಭಾಷೆಯಲ್ಲಿ,
ಏನಾದರೂ ಉತ್ತರಿಸಬೇಕಲ್ಲ.
'ಪೆಟ್ಟುಕಮ್ಮಿ'
(ಹುಚ್ಚು)
ಎಂದೆ ನಾನು.
ಕಂಡಕ್ಟರ್ ನಸುನಕ್ಕ.
ಪೆಟ್ಟುಕಮ್ಮಿ,
ಹಾಗನ್ನಲು ನಾನು ಯಾರು?
ವಾಸು ಕೂಡ ಪೆಟ್ಟು ಕಮ್ಮಿಯೇ ಆಗಿದ್ದನಲ್ಲ.
ಇವರೇನೋ ಕೋಳಿ ತಂದಿದ್ದಾರೆ.
ವಾಸುವಾದರೋ ಅರೆಬೆತ್ತಲೆಯಾಗಿ,
ಬೆತ್ತಲಾಗಿ ತಿರುಗಾಡಿದ್ದೂ ಉಂಟು.
ವಾಸು ಗುಣವಾಗಿದ್ದಾನೆ ಅಂತ ಡಾಕ್ಟರು ಸರ್ಟಿಫೈ
ಮಾಡಿದ್ದರು.
ಆದರೆ ಟಿಬಿ ಗುಣವಾಗಿದೆ ಎಂದಷ್ಟೇ ಸರ್ಟಿಫೈ ಮಾಡಿದ್ದು.
ದಿನ ಕಳೆದಂತೆ ವಾಸು ಗದ್ದಲ ಎಬ್ಬಿಸತೊಡಗಿದ.
ರಾತ್ರಿ ಎದ್ದು ದಬ ದಬನೆ ಬಾಗಿಲಿಗೆ ಒದೆಯುವುದು,
ಅಪ್ಪನೋ ಅಮ್ಮನೋ ತಡೆದರೆ ಅವರನ್ನು ತಳ್ಳುವುದು,
ಪರಚುವುದು,
ನಿದ್ದೆ ಮಾಡಿದ ಅಮ್ಮನನ್ನು ಎಬ್ಬಿಸಿ ಬ್ರೆಡ್ಡು-ಹಾಲು
ಕೊಡೆಂದೂ ಹಣ್ಣು ಕೊಡಿಸೆಂದೂ,
ಹಪ್ಪಳ ಕೊಡೆಂದೂ ಪೀಡಿಸುವುದು ಇಂಥದನ್ನೆಲ್ಲ
ಮಾಡುತ್ತಿದ್ದ.
ಒಂದು ರಾತ್ರಿ ಅಮ್ಮನನ್ನೆಬ್ಬಿಸಿ ಮುಸುಂಬಿ ಕೊಡಿಸು
ಎಂದನಂತೆ.
ಬೆಳಗಾಗಲಿ ಎಂದರೆ ಕೇಳಿಸಿಕೊಳ್ಳಲು ಕಿವಿ ಇರಲಿಲ್ಲ.
ಅಕ್ಕನ ಹತ್ತಿರ ಹೇಳುತ್ತೇನೆ ಅಂತ ಹೊರಟವನೆ
ಬಾಗಿಲು ತೆಗೆದು ದಢದಢನೆ ಕತ್ತಲಲ್ಲಿ ನಡೆದುಹೋದ.
ಅಮ್ಮ ಸುಬ್ಬನನ್ನೆಬ್ಬಿಸಿ ಕಳಿಸಿದರು.
ದಾರಿ ಕಾಣದೆ ಸಾಗಿದ ವಾಸು ತೋಟಕ್ಕಿಳಿಯುವ
ದಾರಿಯಲ್ಲಿ ಕೆಳಗೆ ಬಿದ್ದು ಗಾಯ ಮಾಡಿಕೊಂಡಿದ್ದನಂತೆ.
ಮತ್ತೊಂದು ದಿನ ಮಧ್ಯಾಹ್ನ ಹಿತ್ತಲಿಗೆಂದು
ಹೋದ ವಾಸು ಮನೆಗೆ ಬಾರದೆ ಪೇಟೆ ಕಡೆ ಹೋಗಿದ್ದ.
ಮನೆಯಿಂದ ಪೇಟೆಗೆ ಹೋಗುವ ದಾರಿಯಲ್ಲಿ ಒಂದು ಶರಾಬು
ಅಂಗಡಿ ಇದೆ.
ಪರಮಾತ್ಮ ತಲೆಗೇರಿದ ಕೆಲವರು ವಾಸು ಜೊತೆ ತಮಾಷೆಗಿಳಿದರಂತೆ.
ಕಾಚಬಿಚ್ಚಿ ಕುಣಿಸಿದರಂತೆ.
ಆ ದಾರಿಯಾಗಿ ಬರುತ್ತಿದ್ದ ಕೆಲಸದಾಳು ಮಾಂಕು ವಾಸು
ಅವಸ್ಥೆ ಕಂಡು ಅಕ್ಕಪಕ್ಕದವರನ್ನು ಗದರಿ ವಾಸುವನ್ನು ಕರೆತರದೆ ಇದ್ದಿದ್ದರೆ
ದೇವರೇ ಗತಿಯಾಗುತ್ತಿತ್ತು!
ಆಮೇಲೆ ವಾಸುವನ್ನು ಕೋಣೆಯೊಳಗೆ ಕೂಡಿ ಹಾಕಲಾಯಿತು.
ದಳಿ ಮುರಿದು ಹೊರಬಂದ.
ಬಿಗು ಬಂದೋಬಸ್ತು ಕೋಣೆಯಲ್ಲಿರಿಸಿದರೆ ಅವನ
ಆರ್ಭಟಕ್ಕೆ ಯಾರೂ ಮನೆಯಲ್ಲಿರುವಂತಿರಲಿಲ್ಲ.
ಸಹಿಸಲು ಸಾಧ್ಯವಾಗದೆ ಹೋದಾಗ ಸುಬ್ಬ ಎರಡೆರಡು
ಬಾರಿಸತೊಡಗಿದ.
ಮಾಲಿನಿ ತನ್ನ ಮದುವೆಯಾಗಿ ಮನೆ ತುಂಬಿದಳು.
ಲಕ್ಷ್ಮಿ ಸುಬ್ಬನ ಕೈಹಿಡಿದು ಮನೆ ತುಂಬಿದಳು.
ವಾಸೂಗೆ ಮದುವೆ ವಯಸ್ಸು ಆದರೆ ಯಾರು ಹೆಣ್ಣು
ಕೊಡುತ್ತಾರೆ?
ಕೊಟ್ಟರೂ ಬುದ್ದಿ ಇರುವ ಯಾರಾದರೂ ಮದುವೆ ಮಾಡಿಸಿಯಾರೇ.
ಹಾಗಂತ ವಯಸ್ಸನ್ನು ಕಟ್ಟಿಹಾಕಲು
ಆಗುವುದಿಲ್ಲವಲ್ಲ.
ಆವತ್ತು ಮಂಗಳವಾರವಂತೆ.
ಬೆಳಗೆದ್ದು ಸ್ನಾನಮಾಡಿ ಮಡಿಯುಟ್ಟು ಸುಬ್ಬನ
ಪೂಜೆಗೆ ನೀರು ತರಲು ಹೋದ ಲಕ್ಷ್ಮಿಗೆ ಬಾವಿಕಟ್ಟೆ ಬಳಿ ಹೆಡೆಯುತ್ತಿದ್ದ ಹಾವು
ಕಾಣಿಸಿತು.
ಹಾವು ಬುಸುಗುಟ್ಟುತ್ತಿತ್ತು.
ಕೊಡ ಎತ್ತಿಕೊಂಡೇ ಓಟಕಿತ್ತ ಲಕ್ಷ್ಮಿಯನ್ನು ಹಾವು
ಬೆನ್ನಟ್ಟಿಕೊಂಡು ಬಂತು.
ಇನ್ನೇನು,
ಜಗಳಿಯಲ್ಲಿ ಲಕ್ಷ್ಮಿ ಕುಸಿದು ಬೀಳಬೇಕು;
ಸುಬ್ಬ ಎತ್ತಿ ಹಿಡಿದುಕೊಂಡ.
ಸುಬ್ಬನನ್ನು ಕಾಣುತ್ತಲೇ ಹಾವು ಸರಸರನೆ ಸರಿದು
ಹೋಯಿತು.
ವಾಸು ಲಕ್ಷ್ಮಿಯನ್ನು ಕಾಡತೊಡಗಿದ.
ಅಪ್ಪನ ಗದರಿಕೆ ಅಮ್ಮನ ಬೈಗುಳು ಸುಬ್ಬನ ಹೊಡೆತ
ಯಾವುದೂ ನಾಟಲಿಲ್ಲ.
ವಯಸ್ಸಿನಲ್ಲಿ ಸಣ್ಣವಳಾದ ಲಕ್ಷ್ಮಿ ಕೈಯೆತ್ತಿ ಹೊಡೆದರೂ
ಕೋಪಿಸಿಕೊಳ್ಳಲಿಲ್ಲ.
ತನ್ನನ್ನು ತಿದ್ದಿಕೊಳ್ಳಲೂ ಇಲ್ಲ.
ಲಕ್ಷ್ಮಿಗೆ ಮೊದಲ ಹೆರಿಗೆಯಾಗಿ ಮೂರ್‍ನಾಲ್ಕು
ತಿಂಗಳು ಕಳೆದಿರಬೇಕು.
ತೊಟ್ಟಿಲಲ್ಲಿ ನೀತಾ ಮಲಗಿದ್ದಳು.
ಲಕ್ಷ್ಮಿ ಮಳೆಗಾಲಕ್ಕೆಂದು ಸೌದೆ ಅಟ್ಟಿ
ಕಟ್ಟುತ್ತಿದ್ದಳು.
ಸುಬ್ಬ ಪೇಟೆಗೆ ಹೋಗಿದ್ದ.
ಅತ್ತಿಂದಿತ್ತ ಇತ್ತಿಂದತ್ತ ಶಥಪಥ ಹಾಕುತ್ತಿದ್ದ
ವಾಸು ಲಕ್ಷ್ಮಿಯನ್ನು ತಿನ್ನುವಂತೆ ನೋಡಿದ.
ಏನನಿಸಿತೋ ಸೀದಾ ತೊಟ್ಟಿಲ ಬಳಿ ಹೋಗಿ ತೊಟ್ಟಿಲಿಗೆ
'ಧಡ್'
ಅಂತ ಒದ್ದ.
ಮಗು ಕೆಳಗುರುಳಿತು.
ಹಣೆಗೆ ಗಾಯವಾಗಿ ರಕ್ತ ಒಸರುತ್ತಿತ್ತು.
ಮಗು ಅರಚಿದ್ದನ್ನು ಕೇಳುತ್ತಲೇ ಕೈಲಿದ್ದ ಸೌದೆ
ತುಂಡು ಹಿಡಿದೇ ಬಂದ ಲಕ್ಷ್ಮಿಗೆ ಮಗುವಿನ ರಕ್ತ ಚೆಲ್ಲಿದ್ದನ್ನು ನೋಡಿ
ತಡೆಯಲಾಗಲಿಲ್ಲ.
ಎಲ್ಲೆಂದು ನೋಡದೆ ವಾಸುಗೆ ಹೊಡೆಯ ತೊಡಗಿದಳು.
ವಾಸು ತಲೆಗೆ ಸೌದೆ ಏಟು ಬಿದ್ದಿದ್ದೇ ರಕ್ತ
ಒಸರತೊಡಗಿತು.
ಗಾಬರಿಬಿದ್ದ ಲಕ್ಷ್ಮಿ
'ಅತ್ತೇ'
ಅಂತ ಕೂಗಿದಳು.
ಅಮ್ಮ-ಅಪ್ಪ
ಬರುವಾಗ ಕಂಡದ್ದು ಕೆಳಕ್ಕೆ ಬಿದ್ದ ಮಗುವನ್ನು;
ವಾಸುವನ್ನು.
ಹಿಡಿದ ಸೌದೆಯನ್ನು ಹಿಡಿದೇ ನಿಂತಿದ್ದ
ಲಕ್ಷ್ಮಿಯನ್ನು.
ಅಪ್ಪ ಹೋಗಿ ಮೇಲಿನ ಮನೆ ಸೀತಕ್ಕ,
ಶಂಕ್ರಯ್ಯನನ್ನು ಕರೆತಂದು ಔಷಧಿ ನೀಡಿ ಪಟ್ಟಿ
ಕಟ್ಟಿಸುವ ಹೊತ್ತಿಗೆ ಸುಬ್ಬ ಬಂದಿದ್ದ.
ಸುಬ್ಬ ಮಾತ್ರ ಲಕ್ಷ್ಮಿಯನ್ನೇ ಗದರಿದ್ದ.
ವಾಸು ಸುಮ್ಮನಿದ್ದದ್ದಕ್ಕೆ ಆಯಿತು.
ಅವನೇನಾದರೂ ತಿರುಗಿ ನಿಂತಿದ್ದರೆ
ಏನಾಗುತ್ತಿತ್ತೆಂದು ಯೋಚಿಸಿದ್ದೀಯಾ?
ನಮಗೇ ಅವನನ್ನು ಹಿಡಿಯಲು ಆಗುವುದಿಲ್ಲ.
ಇನ್ನು ನೀನವನಿಗೊಂದು ಲೆಕ್ಕವೇ.
ಸುಬ್ಬನ ಗದರಿಕೆಗೆ,
ಹಾಗಾದರೆ ನನ್ನನ್ನು ನನ್ನ ಮಗಳನ್ನು ಅಪ್ಪನ ಮನೆಗೆ
ಕಳಿಸಿಬಿಡಿ.
ನೀವು-ನಿಮ್ಮ
ತಮ್ಮ ಸುಖವಾಗಿರಿ ಅಳತೊಡಗಿದಳು ಲಕ್ಷ್ಮಿ.
ಶಂಕ್ರಯ್ಯನೇ ಎಲ್ಲರನ್ನೂ ಸಮಾಧಾನ ಮಾಡಬೇಕಾಯಿತು.
ಆದರೆ ಸುದ್ದಿ ಬಿದ್ದು ಸದ್ದಾಯಿತು.
ಶಂಕ್ರಯ್ಯ ಶಾಸ್ತ್ರಿಗಳ ಹತ್ತಿರ,
ಶಾಸ್ತ್ರಿಗಳು ಜೋಯಿಸರ ಹತ್ತಿರ,
ಸೀತಕ್ಕ ಮೀನಾಕ್ಷಮ್ಮನ ಹತ್ತಿರ,
ಮೀನಾಕ್ಷಮ್ಮ ಪಾರ್ವತಿ ಹತ್ತಿರ...
ಹೀಗೇ ಸುದ್ದಿ ಹಬ್ಬುತ್ತಾ ಹೋಯಿತು.
ಈ ನಡುವೆ ವಾಸು ರಾತ್ರಿ ಸುಬ್ಬ-ಲಕ್ಷ್ಮಿಯರ
ಕೋಣೆಗೆ ಒದೆಯಲು ಪ್ರಾರಂಭಿಸಿದ.
ಇನ್ನಿದು ಬಹಳ ಕಷ್ಟ ಅಂತ ಅಮ್ಮ ವಾಸುವನ್ನು
ಹೊರಜಗಲಿಯಲ್ಲಿ ಮಲಗಿಸಿ ಬಾಗಿಲು ಹಾಕಿಕೊಳ್ಳುವ ಹೊಸ ಕ್ರಮ ಶುರುಮಾಡಿದರು.
ಅದೇ ಬಲವಾಗುತ್ತಾ ಹೋಗಿ ವಾಸು ಮನೆಯಿಂದ ಹೊರಗೆ
ಎಂಬಂತಾಯಿತು.
ಊರಿಡೀ ಗುಲ್ಲು.
ಗುಲ್ಲು ದೂರಿನ ರೂಪದಲ್ಲಿ ಅನಾಮಧೇಯ ಪತ್ರವಾಗಿ
ಅಣ್ಣನ ತನಕ ಹೋಯಿತು.
ಅಣ್ಣ ಕೆಂಡವಾದ.
ಆಸ್ತಿಯಲ್ಲಿ ಅವನಿಗೂ ಪಾಲಿದೆ.
ನೀನೊಬ್ಬನೆ ನುಂಗಿ ನೀರು ಕುಡಿಯಬೇಕಾಗಿಲ್ಲ.
ಏನೂ ಗೊತ್ತಿಲ್ಲದ ಅವನನ್ನು ಹೀಗಾ
ನೋಡಿಕೊಳ್ಳುವುದು?
ನಿನಗಾಗದಿದ್ದರೆ ಹೇಳು ಅಂತ ಸುಬ್ಬನಿಗೆ ಪತ್ರ ಬರೆದ.
ಟಪಾಲಿಗೆ ಹಾಕುವ ಮೊದಲು ಯೋಚಿಸಲಿಲ್ಲ.
ಸುಬ್ಬನಿಗೂ ರೇಗಿಹೋಯಿತು ಮರುದಿನವೇ ಕಾರು
ತೆಗೆದುಕೊಂಡು ವಾಸುವನ್ನು ಅಣ್ಣನಲ್ಲಿಗೆ ಕರೆದೊಯ್ದು ಹತ್ತುಸಾವಿರದ ಚೆಕ್
ಅಣ್ಣನ ಕೈಗಿರಿಸಿ,
ವಾಸುವನ್ನು ನೀನೇ ನೋಡಿಕೋ;
ಎಂದವನೆ ನೀರು ಸಹ ಕುಡಿಯದೆ ಹಿಂದಿರುಗಿದ.
ಅಣ್ಣನ ಮನೆಯಲ್ಲಿ ವಾಸು ಜೀವನ ಆರಂಭವಾಯಿತು.
ಅಷ್ಟೇ ಬೇಗ ಅಂತ್ಯವೂ ಆಯಿತು.
ಮೊದಲೆರಡು ದಿನ ವಾಸು ಸರಿಯಾಗಿಯೇ ಇದ್ದ.
ಮೂರನೆ ದಿನ ಅಣ್ಣ ಫ್ಯಾಕ್ಟರಿಗೆ ಹೋಗಿದ್ದ.
ಅತ್ತಿಗೆ ಪ್ರಾಣಿ ದಯಾ ಸಂಘದ ಮೀಟಿಂಗಿಗೆ
ಹೋಗಿದ್ದರು.
ಚಿಕ್ಕಪ್ಪನಿಗೆ ಜಾಸ್ತಿ ಹಸಿವು ಎಂದು ಗೊತ್ತಿದ್ದ ಶಾಂತಿ
ಹನ್ನೊಂದುವರೆಗೆಲ್ಲ ವಾಸುಗೆ ಊಟ ಬಡಿಸಿ ಸ್ನಾನಕ್ಕೆ ಹೋಗಿದ್ದಳು.
ಊಟ ಬಿಟ್ಟೆದ್ದ ವಾಸು ಸ್ನಾನದ ಮನೆ
ಇಣುಕುತ್ತಿದ್ದ ಹೊತ್ತಿಗೆ ಅತ್ತಿಗೆ ಬಂದರು.
ವಾಸುವನ್ನು ಎಳೆದು ತರ ಹೋದರೆ ಅತ್ತಿಗೆಯ
ಮೈಯೆಲ್ಲ ಪರಚಿ ದೊಡ್ಡ ರಾದ್ಧಾಂತವಾಯಿತು.
ಉರಿದು ಬಿದ್ದ ಅಣ್ಣ ದನಕ್ಕೆ ಬಡಿದ ಹಾಗೆ ಬಡಿದು
ವಾಸು ಕೈಕಾಲು ಕಟ್ಟಿ ಕೋಣೆಗೆ ಹಾಕಿದ.
ವಾಸು ಗದ್ದಲಕ್ಕೆ ರಾತ್ರಿ ಯಾರಿಗೂ ನಿದ್ದೆಯಿಲ್ಲ.
ಚುಮುಚುಮು ನಸುಕಿಗೆ ಎದ್ದ ಅಣ್ಣ ಟ್ಯಾಕ್ಸಿ
ತರಿಸಿ ವಾಸುವನ್ನು ತುಂಬಿದ.
ವಾಸು ಈಗ ಲಗೇಜ್ ಆಗಿಬಿಟ್ಟಿದ್ದ.
ವಾಸುವನ್ನು ಬಿಡಲು ತಾನು ಹೊರಡದೆ ಅತ್ತಿಗೆಯನ್ನು
ಊರಿಗೆ ಕಳುಹಿಸಿದ.
ಆಸ್ತಿ ನನಗೆ ಬೇಡ ಅತ್ತಿಗೆ.
ನೀವೇ ಇಲ್ಲಿ ಬಂದು ನೋಡಿಕೊಳ್ಳಿ.
ನಾನು ಹೆಂಡತಿ ಮಗುವನ್ನು ಕರ್‍ಕೊಂಡು ಎಲ್ಲಾದರೂ
ಹೋಗಿ ಬದುಕುತ್ತೇವೆ ಎಂದ ಸುಬ್ಬನನ್ನು ಸಮಾಧಾನಪಡಿಸಿ ಹೊರಡುವುದೇ ಅತ್ತಿಗೆಗೆ
ಪ್ರಯಾಸವಾಯಿತು.
ವರ್ಷಗಳು ಉರುಳಿದವು.
ನೀತಾ ಶಾಲೆಗೆ ಹೋಗುತ್ತಿದ್ದಾಳೆ.
ವಾಸು ಹೆಸರೆತ್ತಿ ಸಹಪಾಠಿಗಳು ಅವಳನ್ನು
ಛೇಡಿಸುತ್ತಾರೆ.
ಬತ್ತಲೆ ಕುಳಿತ ಐಸ್ಸ...
ನೀತಾ ಚಿಕ್ಕಪ್ಪ ಐಸ್ಸ ಅಂತ ಸಹಪಾಠಿಗಳು
ಛೇಡಿಸಿದರೆ ಸಹಿಸುವ ಶಕ್ತಿ ಮಗುವಿಗಿಲ್ಲ.
ಅದನ್ನೆಲ್ಲ ಆಕೆ ವಾಸು ಮೇಲೆ ತೆಗೆಯುತ್ತಾಳೆ.
ವಾಸು ಮಲಗಿದ್ದಲ್ಲಿಗೆ ಹೋಗಿ ಬಳೆ ತುಂಡನ್ನು
ಕಾಯಿಸಿಟ್ಟು ಓಡುತ್ತಾಳೆ.
ಹಿಂದಿನಿಂದ ಹೋಗಿ ವಾಸು ಕುಂಡೆಗೆ ಸೂಜಿ
ಚುಚ್ಚುತ್ತಾಳೆ.
ಅವರಿವರು ನೆಂಟರಿಷ್ಟರು ಬಂದರೆ ವಾಸುವನ್ನು ಕೈಕಾಲು ಕಟ್ಟಿ
ಕೋಣೆಗೆ ಹಾಕುತ್ತಾರೆ.
ವಾಸು ಗದ್ದಲವೆಬ್ಬಿಸುತ್ತಾನೆ.
ಕೈಕಾಲು ಕಟ್ಟಿದ ವಾಸುಗೆ ಯಾರೂ ಬೇಕಾದರೂ ಹೋಗಿ
ಹೊಡೆಯುತ್ತಾರೆ.
ಹೆಚ್ಚು ತಿನ್ನುವುದರಿಂದ ಹೆಚ್ಚು ಶಕ್ತಿ;
ಆದ್ದರಿಂದಲೇ ಗಲಾಟೆ ಎಂಬ ತರ್ಕದಿಂದಾಗಿ ವಾಸುಗೆ
ತಿಂಡಿ ಊಟ ಕಡಿಮೆಯಾಗಿದೆ.
ಇದನ್ನೆಲ್ಲ ನೋಡುತ್ತಾ ಮುದಿಜೀವಿಗಳೆರಡು
ದಿನದೂಡುತ್ತವೆ.
ಭಾನುವಾರ ಬೆಳಿಗ್ಗೆ ನಾನು-ಮಾಲಿನಿ
ಹರಟುತ್ತಾ ಕಾಫಿ ಹೀರಿಕೊಂಡು ಪೊವ್‌ತೀರ್ಟಿಕೋದಲ್ಲಿ ಕುಳಿತಿದ್ದೆವು.
ಕಾರೊಂದು ಬಂದು ನಿಂತಿತು.
ಅಪ್ಪ-ಅಮ್ಮ,
ವಾಸು ಕೆಳಗಿಳಿದರು.
ಸುದ್ದಿಯೇ ಕೊಡದೆ ಅಪ್ಪ-ಅಮ್ಮ
ಬಂದಿದ್ದಾರೆ.
ಖುಷಿಯಾಯಿತು.
ನಾನು ಮನೆಬಿಟ್ಟ ಬಳಿಕ ಏನೆಲ್ಲ ನಡೆಯಿತೊ
ಅದೆಲ್ಲ ಫಸ್ಟ್ ಹ್ಯಾಂಡ್ ಮಾಹಿತಿಯಾಗಿ ಸಿಕ್ಕಿದ್ದು ಆಗಲೇ.
ಒಂದೆರಡು ತಿಂಗಳು ವಾಸೂನ ನಿನ್ನ ಮನೇಲಿ
ಇಟ್ಕೊಂತೀಯಾ ರಾಮ?
ಅಪ್ಪ ಗದ್ಗದ ಕಂಠದಲ್ಲಿ ಕೇಳಿದರು.
ಅಮ್ಮ ಯಾಚನೆಯ ಕಣ್ಣಿನಲ್ಲಿ ಮಾಲಿನಿಯನ್ನು
ನೋಡುತ್ತಿದ್ದರು.
ಅಪ್ಪ-ಅಮ್ಮ
ಇಷ್ಟೊಂದು ವಿಧೇಯರಾಗಬೇಕೆ.
'ಆಗಲಿ'
ಅಂದಿದ್ದೆವು.
ನಾಲ್ಕಾರು ದಿನ ನಮ್ಮೊಂದಿಗಿದ್ದ ಅಪ್ಪ-ಅಮ್ಮ
ಊರಿಗೆ ಹೊರಟರು.
ವಾಸು ರಂಪಾಟವೇನೂ ಮಾಡಲಿಲ್ಲ.
ಗಡದ್ದಾಗಿಯೇ ತಿಂಡಿ ಹೊಡೆಯುತ್ತಿದ್ದ.
ಮಾಲಿನಿ ಹಿಂದೆ-ಮುಂದೆ
ಸುಳಿದಾಡುವುದು ಕಿರಿಕಿರಿ ಎನಿಸಿದರೂ,
ಅವಳೇ
'ಇರ್‍ಲಿ ಬಿಡಿ'
ಎಂದಾಗ ನಾನೂ ನಸುನಕ್ಕೆ.
ಮುಸುಂಬಿ ಹಣ್ಣು ಕೊಡೆಂದು ಅತ್ತಿಗೆಯನ್ನು ಪೀಡಿಸಿ ಪಡೆದು
ತಿನ್ನುತ್ತಿದ್ದ ವಾಸು.
ಆ ಸಂಜೆ ಟಿವಿಯಲ್ಲಿ ಸಿನಿಮಾ ಬಂದಿತ್ತು.
ವಾಸು ಜ್ಯೂಸ್ ಕುಡೀತಿದ್ದ.
ಗೂಳಿಯೊಂದು ಬೆಂಕಿ ಹಾಯುವ ದೃಶ್ಯ
ಪ್ರಸಾರವಾಗುತ್ತಿತ್ತು.
ಠಳಾರ್...
ಕಣ ಕಣ ಅನ್ನುವ ಶಬ್ದ ಏನಾಯಿತೆಂದು
ನೋಡುವಷ್ಟರಲ್ಲಿ ಟಿವಿ ಒಡೆದು ಚೂರು ಚೂರಾಗಿತ್ತು.
ಜ್ಯೂಸ್ ಕುಡಿಯುತ್ತಿದ್ದ ವಾಸು ಗಾಜಿನ ಲೋಟೆಯನ್ನು
ಟಿವಿಗೆ ಬೀಸಿ ಒಗೆದಿದ್ದ.
ಮಾಲಿನಿಗೆ ಕೋಪ ಬಂದು ಒಂದು ಗುದ್ದಿದಳು.
ನಾನೂ ಎರಡೇಟು ಹಾಕುತ್ತಿದ್ದೆನೇನೋ,
ಅಷ್ಟರಲ್ಲಿ ವಾಸು ನಡುಗತೊಡಗಿದ್ದನ್ನು ಕಂಡು
ಗಾಬರಿಯಾಯಿತು.
ಜೊತೆಗೆ ಹೂಂಕರಿಸತೊಡಗಿದ್ದ.
ಡಾಕ್ಟರನ್ನು ಕರೆಸಿದ್ದೆ.
ಏನೂ ಆಗಿಲ್ಲ.
ಮಾನಸಿಕ ಕ್ಷೆಭೆ ಇರಬೇಕು ಎಂದರು.
ವೇಲಿಯಂ-೫
ಒಂದನ್ನು ಕೊಟ್ಟು ನುಂಗಿಸಿ ಮಲಗಿಸಲು ಹೇಳಿದರು ವಾಸು.
ಗಡದ್ದಾಗಿ ನಿದ್ದೆ ಮಾಡಿದ.
ನಾವು ನಿರಾಳವಾಗಿ ಉಸಿರಾಡಿದೆವು.
ಅಪ್ಪ,
ವಾಸುವನ್ನು ಎರಡು ತಿಂಗಳು ನಿಲ್ಲಿಸಿಕೊ ಎಂದರೆ
ನಾನು ಹತ್ತಿರ ಹತ್ತಿರ ಆರು ತಿಂಗಳು ನಿಲ್ಲಿಸಿಕೊಂಡಿದ್ದೆ.
ಯಾರಿಗೂ ಹೊಳೆಯದ ಉಪಾಯ ನನ್ನ ಬಳಿ ಇತ್ತು.
ಗಲಾಟೆ ಶುರು ಮಾಡಿದೊಡನೆ ಒಂದು ನಿದ್ದೆ ಮಾತ್ರೆ
ನುಂಗಿಸಿದರೆ ವಾಸು ಚೆನ್ನಾಗಿ ನಿದ್ದೆ ಮಾಡುತ್ತಿದ್ದ.
ಮಾತ್ರೆ ಬೇಡ ಎನ್ನುವ ತಕರಾರೇ ಇಲ್ಲ.
ಅಣ್ಣ-ಅತ್ತಿಗೆ
ಏನೂ ಕೊಟ್ಟರೂ ತೆಗೆದುಕೊಳ್ಳಬೇಕೆಂದು ನಂಬಿದಂತಿತ್ತು.
ಆ ಸಂಜೆಯನ್ನು ಮರೆಯುವಂತಿಲ್ಲ.
ಆಫೀಸ್ ಮುಗಿದು ಮನೆಗೆ ಬಂದು ನೋಡುತ್ತೇನೆ;
ವಾಸು ನಿದ್ರಿಸುತ್ತಿದ್ದ.
ಅಣ್ಣ ವಾಸು ತಲೆಯನ್ನು ತೊಡೆಯ ಮೇಲಿರಿಸಿಕೊಂಡು
ಅಳುತ್ತಿದ್ದ.
ಅಣ್ಣ ಯಾವಾಗ ಬಂದ ಎನ್ನುವುದಕ್ಕಿಂತ ಅಣ್ಣ,
ಅಳುತ್ತಿರುವುದೇ ಆಶ್ಚರ್ಯದ ಸಂಗತಿಯಾಗಿತ್ತು.
ನನ್ನನ್ನು ಕಂಡವನೇ ಕಣ್ಣೊರೆಸಿಕೊಂಡ.
ಸನ್ನೆಯಲ್ಲಿ ಹತ್ತಿರ ಕರೆದ.
ವಾಸು ತಲೆಯೊಂದಿಗೆ ನನ್ನ ಬೆನ್ನೂ ಸವರಿದ.
ನಮ್ಮ ವಾಸುಗೆ ಯಾಕೆ ಈ ಶಿಕ್ಷೆ ರಾಮ?
ಅಪ್ಪ-ಅಮ್ಮ
ಹೇಗೆ ಸಹಿಸಿಕೊಳ್ಳಬೇಕು ಹೇಳು?
ಪಾಪ ಸುಬ್ಬನದಾದರೂ ಏನು ತಪ್ಪಿದೆ?
ಇವನ್ನ ಒಂದು ದಿನ ತಡ್ಕೊಳೋದು ನನ್ನ ಕೈಲಿ
ಆಗಲಿಲ್ಲ.
ಸುಬ್ಬ ಮೂವತ್ತೆರಡು ವರ್ಷ ತಡ್ಕೊಂಡ ನೋಡು.
ಎಲ್ಲ ನಾವು ಪಡ್ಕೊಂಡು ಬಂದದ್ದು ಎಂದ.
ಅಣ್ಣ ಬದಲಾಗಿದ್ದಾನೆಯೇ,
ಅಲ್ಲ ಅಣ್ಣನನ್ನು ಅರ್ಥಮಾಡಿಕೊಂಡಿರಲಿಲ್ಲವೇ
ಗೊತ್ತಿಲ್ಲ.
ಎಲ್ಲಿಯೂ ಬೆಳಗಿಂದ ಸಂಜೆ ತನಕ ನಿಲ್ಲದ ಅಣ್ಣ ಆ ಬಾರಿ ಒಂದು
ವಾರ ನಮ್ಮೊಂದಿಗಿದ್ದ.
ಇಡೀ ದಿನ ವಾಸು ಜೊತೆಗಿರುತ್ತಿದ್ದ ಅಂತ ಬೇರೆ
ಹೇಳಬೇಕಾಗಿಲ್ಲ.
ವಾಸುಗೆ ಹಾಲು,
ತಿಂಡಿ,
ಮಾತ್ರೆ ಕೊಡುವುದನ್ನೆಲ್ಲ ಅವನೇ ಮಾಡುತ್ತಿದ್ದ.
ಅಣ್ಣ ಹೊರಟು ನಿಂತಾಗ ವಾಸುವನ್ನು ಊರಿಗೆ
ಕರೆದುಕೊಂಡು ಹೋಗಿ ಅಲ್ಲಿಂದ ಬೆಂಗಳೂರಿಗೆ ಹೋಗುತ್ತೇನೆ ಎಂದ.
ಅಮ್ಮ ವಾಸುವನ್ನು ಕರೆತರಲು ಹೇಳಿದ್ದರಂತೆ.
ಕಳಿಸಿಕೊಟ್ಟೆ.
ವಾಸುಗೆ ಜಾಂಡೀಸ್ ಅಂತ ಟೆಲಿಗ್ರಾಂ ಬಂತು.
ನಾನು ಮಾಲಿನಿ ಹೊರಟೆವು.
ವಾಸುಗೆ ಮುಸುಂಬಿ ಇಷ್ಟ ಅಂತ ಮಾಲಿನಿ ಆರು ಡಜನ್
ಮುಸುಂಬಿ ತೆಗೆದುಕೊಂಡಳು.
ವಾಸುವನ್ನು ಕಂಡಾಗ ಮುಸುಂಬಿ ಅವನಿಗೆ
ಬೇಕಿಲ್ಲವೆಂದು ಅರ್ಥವಾಯಿತು.
ಕೊಟ್ಟದ್ದಕ್ಕೆ ಒಂದು ಹಣ್ಣು ತೆಗೆದುಕೊಂಡ ವಾಸು
ಸುಲಿಯುವ ಪ್ರಯತ್ನ ಮಾಡಿ ಸುಲಿಯಲಾರದೆ ಉರುಳಿಸಿಬಿಟ್ಟ.
ಅವನ ಕೈ ನಡುಗುತ್ತಿದ್ದವು.
ಬೆರಳುಗಳು ಮರಗಟ್ಟಿದ್ದವು.
ಎದ್ದು ನಿಂತರೆ ಬಿದ್ದು ಹೋಗುತ್ತಾನೇನೋ
ಅನ್ನುವಂತೆ ತೂರಾಡುತ್ತಿದ್ದ.
ವಾಸುವನ್ನು ಈ ರೀತಿ ಕಲ್ಪಿಸಿಕೊಳ್ಳಲೂ
ಆಗುತ್ತಿಲ್ಲ.
ಯಾವ ಟಿಬಿ ಗಿಬಿಗೂ ವಾಸು ಶಕ್ತಿಯನ್ನು ಅಲುಗಾಡಿಸಲು
ಆಗುತ್ತಿರಲಿಲ್ಲ.
ನಾನೇನು ಹೇಳುತ್ತೇನೆಂದು ಅವನಿಗೆ ಕೇಳದಿರಬಹುದು.
ಆದರೆ ಮುಖ ಕಂಡೊಡನೆ
'ಅಣ್ಣಾ'
ಬಾಯಿ ತುಂಬಾ ಕರೆಯುತ್ತಿದ್ದ.
ಈ ಬಾರಿ
'ಅಣ್ಣಾ'
ಎನ್ನಲಿಲ್ಲ.
'ಅತ್ತಿಗೆ'
ಅನ್ನಲಿಲ್ಲ.
ಸುಮ್ಮನೆ ನನ್ನ ಮುಖವನ್ನೊಮ್ಮೆ ಮಾಲಿನಿ ಮುಖವನ್ನೊಮ್ಮೆ
ಪೆಚ್ಚಾಗಿ ನೋಡುತ್ತಿದ್ದ.
ಅವನ ಅಂತರಂಗವನ್ನು ಬಲ್ಲವರಾರು?
ಅಮ್ಮ ಹೇಳಿದಳು-ವಾಸುವನ್ನು
ತಂದು ಬಿಟ್ಟ ರಾಮ ಇವನನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದ ಅಂದನಂತೆ.
ನಿದ್ದೆ ಮಾತ್ರೆ ಕೊಟ್ಟರೆ ವಾಸು ಚೆನ್ನಾಗಿ
ನಿದ್ದೆ ಮಾಡುತ್ತಾನೆಂದು ಹೇಳಿದನಂತೆ.
ಯುರೇಕಾ!
ಸುಬ್ಬನಿಗಿಂದು ದಾರಿ ಸಿಕ್ಕಿತು.
ಇನ್ನೂ ರಗಳೆ ಬೇಡ ಅಂತ ಸುಬ್ಬನೂ ಮಾತ್ರೆ
ಕೊಡತೊಡಗಿದ್ದ.
ಮೊದಮೊದಲು ವೇಲಿಯಂ-೫ಗೆ
ಚೆನ್ನಾಗಿ ನಿದ್ದೆ ಮಾಡುತ್ತಿದ್ದ ವಾಸುಗೆ ಆಮೇಲೆ ವೇಲಿಯಂ-೫
ಕ್ಯಾರೇ ಇಲ್ಲವಾಯಿತು.
ಒಂದು ಮಾತ್ರೆಗೆ ನಿದ್ದೆ ಬರುವುದಿಲ್ಲವೆಂದು ಗೊತ್ತಾದಾಗ
ಮಾತ್ರೆ ಎರಡಾಯಿತು.
ಎರಡು ನಾಲ್ಕಾಯಿತು.
ವಾಸು ಇಳಿಯುತ್ತಾ ಹೋದ.
ಮಾತ್ರೆ ತಿಂದರೆ ಹುಷಾರಾಗಿರಬೇಕು;
ಇವನ್ಯಾಕೆ ಇಳಿಯುತ್ತಾ ಹೋಗಿದ್ದಾನೆ?
ಅಮ್ಮನ ಪ್ರಶ್ನೆಗೆ ಉತ್ತರ ಕೊಡುವ ಧೈರ್ಯ
ನನಗಿರಲಿಲ್ಲ.
ಆರೇಳು ತಿಂಗಳಿಂದ ವಾಸು ಮಲಗಿದ್ದಲ್ಲೇ ಅಂತೆ.
ಊಟಕ್ಕೇನು ಬಟ್ಟಲ ಮುಂದೆ ಕುಳಿತವನಿಗೆ ಬಟ್ಟಲು
ಯಾವುದು,
ನೆಲ ಯಾವುದೆಂದು ತಿಳಿಯುತ್ತಿಲ್ಲವಂತೆ.
ಅನ್ನವನ್ನು ಗಂಟಲಿಗೆ ಎಸೆಯುತ್ತಿದ್ದ ವಾಸು ಉಂಡರೆ
ಅವನ ಗಡ್ಡ ಮೀಸೆಗಳೂ ಕುರುಹನ್ನು ಹೇಳುತ್ತಿದ್ದವು.
ಅಕ್ಕಪಕ್ಕದವರ ಬಟ್ಟಲಿಗೆಲ್ಲ ವಾಸು ಬಟ್ಟಲಿನ
ಮಜ್ಜಿಗೆ,
ಸಾಂಬಾರು ಸಾರು ಹಾರಿ ಬೀಳುತ್ತಿದ್ದವು.
ವಾಸುಗೆ ಹೊರಜಗಲಿ ಖಾಯಂ ಆಗಿತ್ತು.
ಈಗವನಿಗೆ ಹೊಡೆತವಿಲ್ಲ.
ಬೈಗುಳವಿಲ್ಲ.
ಅವನೂ ಅಷ್ಟೇ ರಂಪಾಟ ಮಾಡುವುದಿಲ್ಲ.
ಅವನ ಮಾತೂ ಸ್ಪಷ್ಟವಾಗುವುದಿಲ್ಲ.
ಸದಾ ಮಲಗಿರುತ್ತಾನೆ.
ಶೂನ್ಯವನ್ನು ದಿಟ್ಟಿಸುತ್ತಾನೆ.
ತೂರಾಡಿಕೊಂಡು ಎದ್ದರೆ ಸ್ವಲ್ಪ ಸ್ವಲ್ಪ ಮಣ್ಣು
ತಿನ್ನುವುದಕ್ಕೂ ಶುರುಮಾಡಿದ್ದಾನೆ.
ಭಾರವಾದ ಮನಸ್ಸಿನಿಂದ ಹಿಂತಿರುಗಿದೆವು.
ಯಾವಾಗಲೂ ಹರಟುತ್ತಾ ಇರುವ ಮಾಲಿನಿ ಕೂಡ
ಮೌನವಾಗಿದ್ದಳು.
ಇಬ್ಬರ ಮನಸ್ಸಿಗೂ ವಾಸು ಬಹಳ ದಿನ ಇಲ್ಲ ಅಂತ
ಅರ್ಥವಾಗಿತ್ತು.
ಆದರೆ ಹೇಳಿಕೊಳ್ಳುವ ಧೈರ್ಯ ಇಬ್ಬರಿಗೂ ಇರಲಿಲ್ಲ.
ಆಮೇಲೆ ಒಂದು ಪತ್ರ ಬಂದಿತ್ತು.
ವಾಸು ನಾಲಗೆ ಬಿದ್ದು ಹೋಗಿದೆಯಂತೆ.
'ಬ್ಬೆಬ್ಬೆಬ್ಬೆ'
ಅನ್ನುವುದನ್ನು ಬಿಟ್ಟರೆ ಬೇರೇನೂ ಇಲ್ಲವಂತೆ.
ಅಪ್ಪ-ಅಮ್ಮ
ದೇವರ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರಂತೆ.
ವಾಸು ಚಾಪೆ ಹೊರಜಗಲಿಯಿಂದ ಸುಬ್ಬನ ಕೋಣೆಗೆ
ಬಂದಿದೆಯಂತೆ.
ಹೇಲು-ಉಚ್ಚೆಯೆಲ್ಲ
ಲಕ್ಷ್ಮಿಯೇ ಗೋಚುತ್ತಾಳಂತೆ,
ಹಾ ವಿಧಿಯೇ!
ಮತ್ತೆ ಬಂದ ಟೆಲಿಗ್ರಾಂ-
'ವಾಸು
ಸತ್ತ ಹೊರಡು'
ಮಾಲಿನಿಯನ್ನು ಕರೆದೆ.
ಆ ಮುಖ ನೋಡುವ ಎದೆಗಾರಿಕೆ ನನಗಿಲ್ಲರಿ,
ನೀವೂ ಹೋಗಿಬನ್ನಿ,
ಹೋಗುವಾಗ ನಾಲ್ಕು ಮುಸುಂಬಿ ತೆಕ್ಕೊಳ್ಳಿ.
ಅವನ ಕಾಲ ಬಳಿ ಇಡಿ ಎಂದಳು.
ಹಾಗೇ ಮಾಡಿದ್ದೆ.
ವಾಸು ಸಾಯುವುದಕ್ಕೆ ವಾರಕ್ಕೆ ಮೊದಲು ಸುಬ್ಬ
ಅವನ ಗಡ್ಡ ಮೀಸೆಯೆಲ್ಲ ಕತ್ತರಿಸಿದನಂತೆ.
ದಿನವೂ ಸುಬ್ಬನೇ ಸ್ನಾನ ಮಾಡಿಸುತ್ತಿದ್ದನಂತೆ.
ಕೈ ತುತ್ತು ಕೊಡಿಸುತ್ತಿದ್ದನಂತೆ.
ವಾಸು ಸತ್ತ ರಾತ್ರಿ ಸುಬ್ಬನೇ ಉಣಿಸಿ
ಮಲಗಿಸಿದ್ದನಂತೆ.
ಸರಿರಾತ್ರಿ ಬ್ಬೆಬ್ಬೆಬ್ಬೇsss
ಅನ್ನುವ ಕೂಗಿಗೆ ಬೆಚ್ಚಿ ಬಿದ್ದ ಸುಬ್ಬನ
ಆಕ್ರಂದನಕ್ಕೆ ಎಚ್ಚೆತ್ತ ಅಪ್ಪ-ಅಮ್ಮ-ಲಕ್ಷ್ಮಿ
ಹೋಗಿ ನೋಡಿದರೆ ವಾಸು ಹೆಣವಾಗಿ ಮಲಗಿದ್ದನಂತೆ.
ಇದನ್ನೆಲ್ಲ ಬೇರೆ ಯಾರೂ ಹೇಳಿದ್ದಲ್ಲ;
ಅಮ್ಮನೇ ಹೇಳಿದ್ದು.
ನಿಡುಸುಯ್ದು,
ಯಾಕಾದರೂ ಇವನನ್ನು ಹೆತ್ತೆನೋ ರಾಮ,
ನಾವಿಬ್ಬರೂ ಇನ್ನೆಷ್ಟು ಕಾಲ ಬದುಕಬೇಕು?
ಎಂದ ಅಮ್ಮನನ್ನು ಸಮಾಧಾನ ಮಾಡುವ ಶಕ್ತಿ
ನನಗಿರಲಿಲ್ಲ.
ಅಪ್ಪನ 'ಸರ್ವರಿಗೂ
ಸಮ ಬಾಳು'
ಸಿದ್ಧಿಸಲೇ ಇಲ್ಲ.
ಯಾರ್ರೀ ಹುಬ್ಳಿ,
ಹುಬ್ಳಿ ಬಂತು ಇಳ್ಕಳ್ಳಿ.
ಹುಬ್ಳಿ ಹುಬ್ಳಿ ತುಳುನಾಡ ಗಡಿ ದಾಟಿದ್ದರೂ ಭಾಷೆ
ಬದಲಿಸದೆ ಕಂಡಕ್ಟರ್ ಘಟ್ಟ ಹತ್ತಿದೊಡನೆ ಬದಲಿಸಿದ್ದ.
ಹೀಗೆ ಮನುಷ್ಯ ಬದಲಾಗುತ್ತಾ ಇರಬೇಕೇ?
ಕೆಲವರು ತಡವಾಗಿ ಬದಲಾಗುತ್ತಾರಾ?
ಸ್ವಾಮೀ,
ನಾನು ಇಳಿಯುವ ಜಾಗ ಬಂತು.
ಪ್ರಸಾದ ಅಂಚೆಯಲ್ಲಿ ಕಳಿಸ್ತೇವೆ.
ಇಳ್ಕೊಳ್ತೇನೆ.
ನಮಸ್ಕಾರ-ತಲೆಯೆತ್ತಿ
ನೋಡಿದರೆ ವಾಸುದೇವರಾಯ.
ಹಿಂದಿನ ಸೀಟಿನಲ್ಲಿ ಏಳುತ್ತಿದ್ದಾನೆ,
ಬಹುಶಃ ಎಲ್ಲಾ ಸೀಟುಗಳನ್ನೂ ಮುಗಿಸಿರಬೇಕು!
ಧಾರ್‍ವಾಡ್ ಧಾರ್‍ವಾಡ್ ಧಾರ್‍ವಾಡ್...
ರೈಟ್ ರೈಟ್
ಹೋ,
ವಾಸುದೇವರಾಯ ಇಳಿದ.
ನೆಕ್ಸ್ಟ್ ಸ್ಟಾಪ್ ನನ್ನದೇ.
ಟಿಎಸ್‌ಐ
|