ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಪ್ರತಿಧ್ವನಿ
ಓದುಗರ ಪತ್ರ
 

Letters- The Sunday Indian - Kannada

ಅಮಾಯಕರ ಬಲಿ

'ಮೂರು ಪ್ರಜಾಪ್ರಭುತ್ವಗಳ ದುರಂತಗಾಥೆ (ಸುತನು ಗುರು)', 'ಭೀತಿ-ಭ್ರಮನಿರಸನಗಳ ನಡುವೆ ಪಾಕ್' (ಶಾಹಿದ್ ಹುಸೇನ್) ಲೇಖನಗಳು ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ದುಸ್ಥಿತಿಗಳನ್ನು ಕಣ್ಣ ಮುಂದಿಟ್ಟವು. ಜಾಗತಿಕ ಭಯೋತ್ಪಾದನೆ ಹಾಗೂ ಸರ್ವಾಧಿಕಾರಗಳ ನಡುವೆ ಬೆಂದು ಕರಕಲಾಗಿರುವ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಸುಧಾರಿಸಬೇಕೆಂದರೆ ಮೊದಲು ಜಾರ್ಜ್ ಬುಷ್ ಹಾಗೂ ಪರ್ವೇಜ್ ಮುಷರಫ್ ಅಧಿಕಾರದ ಗದ್ದುಗೆಯಿಂದ ಕೆಳಗಿಳಿಯಬೇಕು. ಅಮೆರಿಕದ ಆರ್ಥಿಕ ಸಮಸ್ಯೆಯನ್ನು ನಿಭಾಯಿಸಲಿಕ್ಕಾಗದೆ ಒದ್ದಾಡುತ್ತಿರುವ ಬುಷ್, ಪಾಕ್‌ನ ಉದ್ಧಾರಕ ಎಂಬ ಸೋಗು ಹಾಕಿಕೊಂಡು ಮೆರೆಯುತ್ತಿರುವುದನ್ನು ನೋಡಿದರೆ ಯಾರಿಗಾದರೂ ನಗು ಬಾರದೆ ಇರದು. ಇನ್ನು 9/11ರ ವಾಸ್ತವಾಂಶಗಳ ಕುರಿತ ದಿವ್ಯ ನಿರ್ಲಕ್ಷ್ಯಕ್ಕೆ ಏನು ಹೇಳಬೇಕೆಂದು ತಿಳಿಯುತ್ತಿಲ್ಲ. ಇನ್ನು ಇರಾಕ್, ಭಯೋತ್ಪಾದಕರು ಹಾಗೂ ಅಮೆರಿಕದ ನಿರಂತರ ದಾಳಿಯಿಂದಾಗಿ ನಲುಗಿ ಹೋಗಿದೆ. ಒಟ್ಟಾರೆ ಅಮೆರಿಕ, ಜಿಹಾದಿ ಪಡೆ, ಸೇನೆ, ಸರ್ವಾಧಿಕಾರಿಗಳ ಹಗ್ಗ ಜಗ್ಗಾಟದಲ್ಲಿ ಅಮಾಯಕರು ಬಲಿಯಾಗುತ್ತಿದ್ದಾರೆ ಎಂದು ಹೇಳಬಹುದಷ್ಟೇ.

ಸೊಹೇಲ್ ಅಬ್ಬಾಸ್
ಹುಬ್ಬಳ್ಳಿ

ಎಲ್ಲವೂ ಸ್ವಹಿತಕ್ಕಾಗಿ!

'ವಿಘಟನೆಯ ಹೊಸ್ತಿಲಲ್ಲಿ ಪಾಕಿಸ್ತಾನ' ಮುಖಪುಟ ಲೇಖನ ವಾಸ್ತವಕ್ಕೆ ಹಿಡಿದ ಕನ್ನಡಿ. ಯಾವ ಹುತ್ತದಲ್ಲಿ ಯಾವ ಹಾವೋ? ಜಾರ್ಜ್ ಬುಷ್ ತಾಳಕ್ಕೆ ತಕ್ಕಂತೆ ಕುಣಿದ ಪಾಕಿಸ್ತಾನ, ಯಾವುದೇ ಲಾಭವಿಲ್ಲದೆ ಅಮೆರಿಕ ಸ್ನೇಹಹಸ್ತ ಚಾಚದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಭಯೋತ್ಪಾದನೆಯನ್ನೇ ತೊಡೆದು ಹಾಕುವೆ ಎಂದು ತೊಡೆತಟ್ಟಿ ಹೇಳಿರುವ ಬುಷ್, ನಿಜ ಹೇಳಬೇಕೆಂದರೆ ದೇಶಗಳ ನಡುವೆ ದ್ವೇಷದ ಬೀಜ ಬಿತ್ತಿದ್ದಾರೆ. ಅಕ್ರಮ ದಂಧೆ, ಧರ್ಮಾಂಧತೆಯಲ್ಲಿ ನಲುಗಿರುವ ಪಾಕಿಸ್ತಾನವನ್ನು ತನ್ನ ತೆಕ್ಕೆಗೆಳೆದುಕೊಳ್ಳುವ ಅಮೆರಿಕ, ಇರಾನ್ ಮತ್ತಿತರ ರಾಷ್ಟ್ರಗಳ ವಿರುದ್ಧ ಹಗೆ ಸಾಧಿಸಲು ಪ್ರಯತ್ನಿಸುತ್ತಿದೆ. ಭಯೋತ್ಪಾದನೆಯಿಂದ ಇಡೀ ರಾಷ್ಟ್ರವೇ ನಲುಗುತ್ತಿದ್ದರೂ ಚಿಂತೆಯಿಲ್ಲದೆ ನಿದ್ದೆ ಮಾಡಿದ್ದರು ಮುಷರಫ್! ಪ್ರಸ್ತುತ ಹೊಸ ಸರ್ಕಾರ ಬಂದಿದೆ. ಈಗಲಾದರೂ ಪಾಕಿಸ್ತಾನದ ಜನತೆಗೆ ನಿಜವಾದ ಪ್ರಜಾಪ್ರಭುತ್ವದ ಹಕ್ಕುಗಳು ಸಿಗಬೇಕಿದೆ.

ಎಚ್.ಎಸ್. ಕರುಣಾಕರ್
ಬೆಂಗಳೂರು

 ವಿಶ್ವಾಸಾರ್ಹತೆಯ ಪ್ರಶ್ನೆ

Letters- The Sunday Indian - Kannada

ಉಡುಪಿ ಶಾಸಕ ರಘುಪತಿ ಭಟ್ ಪತ್ನಿ ಪದ್ಮಪ್ರಿಯ ಆತ್ಮಹತ್ಯೆ ಪ್ರಕರಣದ ಕುರಿತಾಗಿ ಟಿಎಸ್‌ಐಯಲ್ಲಿ ಮೂಡಿಬಂದ 'ಪದ್ಮಪ್ರಿಯ ಹುಟ್ಟುಹಾಕಿದ ಪ್ರಶ್ನೆಗಳಿಗೆ ಉತ್ತರ? (ಕೆ. ರಾಘವ ಶರ್ಮ) ಲೇಖನ ರಾಜ್ಯದ ಇತರ ಮಾಧ್ಯಮಗಳ ವರದಿಗಿಂತ ಭಿನ್ನವಾಗಿತ್ತು. ಹಲವು ಮಾಹಿತಿಗಳನ್ನು ಆಧಾರ ಸಹಿತ ನೀಡಿ ಓದುಗರನ್ನು ಚಿಂತನೆಗೆ ಹಚ್ಚಿದ್ದೀರಿ. ರಾಜ್ಯದ ಗೃಹ ಸಚಿವರ ನೇತೃತ್ವದಲ್ಲಿ ಪೊಲೀಸರು ನಾಡಿನ ಜನತೆಗೆ ಸುಳ್ಳು ಸುದ್ದಿ ಹಬ್ಬಿಸಿದಂತಹ ಬೇಜವಾಬ್ದಾರಿ ಕೃತ್ಯ ಸರಕಾರದ ವಿಶ್ವಾಸಾರ್ಹತೆಯನ್ನು ಶಂಕಿಸುವಂತೆ ಮಾಡುತ್ತದೆ. ಪೊಲೀಸ್ ಇಲಾಖೆಯ ಅಸಮರ್ಥತೆ, ರಾಜಕೀಯ ಕುಮ್ಮಕ್ಕು, ಜತೆಗೆ ಶಂಕಿತ ಸುದ್ದಿಗಳನ್ನೇ ಬ್ರೇಕಿಂಗ್ ನ್ಯೂಸ್ ಆಗಿ ನೀಡುವ ಮಾಧ್ಯಮಗಳ ಕಾರ್ಯವೈಖರಿ ಕಂಡಾಗ ಕರ್ನಾಟಕವು ಗುಜರಾತ್ ಮಾದರಿಯಾಗುವ ಬದಲು ಉತ್ತರ ಪ್ರದೇಶವೋ, ಬಿಹಾರವೋ ಆಗುತ್ತಿದೆ ಎಂಬ ಭಯ ಮೂಡುತ್ತದೆ. ಪದ್ಮಪ್ರಿಯ ಪ್ರಕರಣದಲ್ಲಿ ಕರ್ನಾಟಕ ಪೊಲೀಸರು ದೆಹಲಿ ಪೊಲೀಸರ ಸಹಾಯ ಆರಂಭದಲ್ಲಿಯೇ ಯಾಕೆ ತೆಗೆದುಕೊಳ್ಳಲಿಲ್ಲ? ಎಂಬ ಪ್ರಶ್ನೆಗೆ ರಾಜ್ಯದ ಗೃಹ ಸಚಿವರು ಉತ್ತರಿಸಬೇಕಾಗುತ್ತದೆ. ಕರ್ನಾಟಕ ಸರಕಾರ, ಗೃಹ ಸಚಿವರು ಮತ್ತು ಪೊಲೀಸ್ ಇಲಾಖೆ ಸ್ವಲ್ಪ ವಿವೇಚನೆ ತೋರಿಸಿದ್ದರೆ ಪದ್ಮಪ್ರಿಯ ನೇಣಿಗೆ ಶರಣಾಗುತ್ತಿರಲಿಲ್ಲ ಎಂಬ ನಿಮ್ಮ ಅಭಿಪ್ರಾಯಕ್ಕೆ ನನ್ನ ಸಂಪೂರ್ಣ ಸಹಮತವಿದೆ.

ಡಿ. ಬಾಲಕೃಷ್ಣ ನಾಯ್ಕ್
ನೋಯ್ಡಾ

ಕೆಚ್ಚೆದೆಯ ನಾಯಕ ಬೇಕು

'ಭೀತಿ-ಭ್ರಮನಿರಸನದ ನಡುವೆ ಪಾಕ್' (ಶಾಹಿದ್ ಹುಸೇನ್) ಲೇಖನ ಅರ್ಥಗರ್ಭಿತ. ಹೌದು! ದೇವರ ಆದೇಶದಂತೆ ಅಲ್-ಖೈದಾ ಮತ್ತು ಸದ್ದಾಂ ಹುಸೇನ್ ಮೇಲೆ ದಾಳಿ ನಡೆಸಿದ ಬುಷ್ ಅವರಿಗೆ ಈಗ ಪಾಕಿಸ್ತಾನದ ಮೇಲೂ ದಾಳಿ ನಡೆಸಲು ದೇವರು ಆದೇಶಿಸಿರಬಹುದು ಎನ್ನುವ ಲೇಖಕರ ಮಾತಿನಲ್ಲಿ ಸತ್ಯಾಸತ್ಯತೆ ಇದೆ. ಅಮೆರಿಕ ಪಾಕಿಸ್ತಾನಕ್ಕೆ ಸಹಾಯ ಹಸ್ತ ಚಾಚಿದೆ ಎಂದು ಖುಷಿ ಪಡಬೇಕಾಗಿಲ್ಲ. ನೆರವಿನ ನೆಪದಲ್ಲಿ ಪಾಕಿಸ್ತಾನದ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ಅಮೆರಿಕ ಹೊಂಚು ಹಾಕುತ್ತಿದೆ ಎಂಬುದನ್ನು ಪಾಕಿಸ್ತಾನ ಅರಿತಿಲ್ಲ. ಈವರೆಗೆ ಅಮೆರಿಕದ ಮಾತಿಗೆ ಬಸವನಂತೆ ಕುಣಿದ ಮುಷರಫ್ ಮಾಡಿರುವ ಘನಕಾರ್ಯಗಳನ್ನು ತಿದ್ದುವ ಹೊಣೆ ಪಾಕಿಸ್ತಾನದ ನಾಗರಿಕರು ಮತ್ತು ನೂತನ ಸರ್ಕಾರದ ಮೇಲಿದೆ. ನಿರುದ್ಯೋಗ, ಬಡತನ, ಇಂಧನ ಬಿಕ್ಕಟ್ಟು, ಭಯೋತ್ಪಾದನೆ ಇವೆಲ್ಲ ಸಮಸ್ಯೆಗಳಿಂದ ಬೇಯುತ್ತಿರುವ ಪಾಕಿಸ್ತಾನಕ್ಕೆ ಭರವಸೆಯ ನಾಯಕತ್ವ ಬೇಕು. ನಾಗರಿಕ ಸಮಾಜವನ್ನು ಪ್ರಗತಿಯತ್ತ ಸಾಗಿಸುವ ಪ್ರಜ್ಞಾವಂತ ನೇತಾರರು ಬೇಕು. ಭಯೋತ್ಪಾದನೆಯ ಸದ್ದಡಗಿಸುವ ಕೆಚ್ಚೆದೆಯ ನಾಯಕ ಬೇಕು. ಈ ಕೆಲಸವನ್ನು ನೂತನ ಸರ್ಕಾರ ಮಾಡಬಹುದೇ?

ಮಹಮ್ಮದ್ ಆಸಿಫ್
ಮಂಗಳೂರು

ಸರ್ಕಾರದ ವೈಫಲ್ಯLetters- The Sunday Indian - Kannada

'ಮಲೆನಾಡ ಮಡಿಲಲ್ಲಿ ಒಂದು ಹಳ್ಳಿಯ ಕೊಲೆ' (ಸತೀಶ್ ಚಪ್ಪರಿಕೆ) ವಿಶೇಷ ವರದಿ ಚೆನ್ನಾಗಿತ್ತು. ಲೇಖನ ಓದುತ್ತಿದ್ದಂತೆ 'ದೇವಕಾರು'ನಂತಹ ಗ್ರಾಮಗಳೂ ಇವೆಯೇ ಎನ್ನುವ ಅಚ್ಚರಿ ಸುಳಿಯದಿರಲಿಲ್ಲ. ಒಂದೂವರೆ ಗಂಟೆಗಳ ಕಾಲ ದಟ್ಟಕಾಡಿನಲ್ಲಿ ನಡೆದು ಸಾಗುವುದೆಂದರೆ ಸಾಹಸವೇ ಸರಿ. ಬೃಹತ್ ಜಲವಿದ್ಯುತ್ ಅಣೆಕಟ್ಟುಗಳು ಮತ್ತು ಅಣುವಿದ್ಯುತ್ ಸ್ಥಾವರಗಳಿರುವ ಈ ಗ್ರಾಮಕ್ಕೆ ಕನಿಷ್ಠ ಮೂಲಸೌಕರ್ಯಗಳಿಲ್ಲ. ಕಳೆದ ಏಳು ವರ್ಷಗಳಿಂದ ಪುನವರ್ಸತಿಗಾಗಿ ಮೊರೆಯಿಡುತ್ತಿರುವ ದೇವಕಾರು ಜನರ ಕೂಗು ಸರ್ಕಾರಕ್ಕೆ ಏಕೆ ಕೇಳಿಸಿಲ್ಲ? ಯೋಜನೆ ಕಾರ್ಯಾರಂಭಕ್ಕೆ ಮೊದಲೇ ಒಕ್ಕಲೆಬ್ಬಿಸುವ ಕೆಲಸ ನಡೆಯುತ್ತದೆ, ಪುನರ್ವಸತಿಯ ಆಶ್ವಾಸನೆ ಮಾತ್ರ ಸಮರ್ಪಕವಾಗಿ ಅನುಷ್ಠಾನವಾಗುವುದಿಲ್ಲ. ಹಾಗೆಯೇ ರಾಜಕಾರಣಿ ಅಥವಾ ಗಣ್ಯರ ಭೂಮಿಯನ್ನು ಕಸಿದುಕೊಳ್ಳಲು ಹಿಂದೆ-ಮುಂದೆ ನೋಡುವ ನಮ್ಮ ಸರ್ಕಾರ ಬಡಜನರ ಭೂಮಿಯನ್ನು ವಶವಡಿಸಿಕೊಳ್ಳಲು ಹಿಂಜರಿಯುವುದಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರ ಜನಪರ ಕೆಲಸ ಮಾಡುತ್ತಿದೆ ಎಂಬ ವಿಶ್ವಾಸ ಮೂಡುವುದು ಅನುಮಾನವೇ.

ಆರ್. ಅಕ್ಷತಾ
ಶಿವಮೊಗ್ಗ

ಕಸದಿಂದ ರಸ ಪಡೆಯಿರಿ

ಸ್ವಾವಲಂಬಿ ಕೃಷಿಗೆ 'ಸಾವಯವ ಮಾರ್ಗ' (ಡಾ. ಸೋಮಶೇಖರ್ ಎಸ್. ರುಳಿ) ಅಂಕಣ ಬರಹ ಸಕಾಲಿಕ. ಕೃಷಿ ತಜ್ಞರ ಸಲಹೆಗಳಿಲ್ಲದ ಪಾರಂಪರಿಕ ಸಾವಯವ ಮಾರ್ಗಗಳ ಬಗ್ಗೆ ಈಗ ರೈತರಿಗೆ ಮಾಹಿತಿಯೇ ಇಲ್ಲ. ಇದರಿಂದಾಗಿ ರಸಗೊಬ್ಬರಗಳ ತಯಾರಕರು ಮತ್ತು ಮಾರಾಟ ಸಂಸ್ಥೆಗಳು ಹೆಚ್ಚಾಗಿವೆ. ನಮ್ಮ ರೈತ ರಾಸಾಯನಿಕ ರಸಗೊಬ್ಬರಗಳಿಲ್ಲದ ಕೃಷಿ ಬಗ್ಗೆ ಚಿಂತಿಸುವುದೂ ಇಲ್ಲ. ಹೆಚ್ಚಿನ ಲಾಭದ ಬೆನ್ನುಹತ್ತಿ ರಸಗೊಬ್ಬರಗಳನ್ನು ಆಶ್ರಯಿಸಿರುವ ರೈತ ಒತ್ತಡದಲ್ಲಿ ಸಿಲುಕಿದ್ದಾನೆ. ರಾಸಾಯನಿಕ ಅಥವಾ ಕೃತಕ ಗೊಬ್ಬರಗಳಿಂದ ತನ್ನ ಮಣ್ಣಿನ ಸತ್ವ ಕಳೆದುಕೊಳ್ಳುವ ಅರಿವು ಆತನಿಗಿಲ್ಲ. 'ಕಸದಿಂದ ರಸ' ಎಂಬಂತೆ ನಮ್ಮ ರೈತರು ಪ್ರಾಕೃತಿಕ ವಸ್ತುಗಳನ್ನು ಬಳಸಿ ಸಂಯುಕ್ತ ರಸಗೊಬ್ಬರದಿಂದ ಜ್ವಲಂತ ಸಮಸ್ಯೆ ನಿವಾರಿಸಬಹುದು. ಸಾವಯವ ಗೊಬ್ಬರ ಹಾಕಿದ ಬೆಳೆಯಿಂದ ಸಮೃದ್ಧ ಫಸಲನ್ನು ಪಡೆದು, ಸ್ವಾವಲಂಬಿ ಜೀವನ ಸಾಗಿಸಬೇಕು. ಈ ಕುರಿತು ರೈತರು ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆಯಿದೆ.

ಎಸ್. ಸುನೀಲ
ಗುಲ್ಬರ್ಗಾ

ಇರುವುದೊಂದೇ ಭೂಮಿ

'ಅಸ್ತಿತ್ವ ರಾಜಕಾರಣದಲ್ಲಿ ನಲುಗಿರುವ ಭಾರತಕ್ಕೆ ಬೇಕಿದೆ ಮತ್ತೊಬ್ಬ 'ಸರ್ದಾರ್' (ಅರಿಂದಮ್ ಚೌಧುರಿ) ಸಂಪಾದಕೀಯ ಕುರುಡು ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ. ಸ್ವಾತಂತ್ರ್ಯಾನಂತರ ಸರ್ದಾರ್ ವಲ್ಲಭಾ ಭಾಯ್ ಪಟೇಲ್ ಅವರು 600 ರಾಜಾಡಳಿತ ಪ್ರದೇಶಗಳನ್ನು ಭಾರತ ಸರ್ಕಾರದ ಜೊತೆ ವಿಲೀನಗೊಳಿಸಲು ತೆಗೆದುಕೊಂಡಿದ್ದ ಸಂಯಮ ಮತ್ತು ಚಾಕಚಕ್ಯತೆಯೆಲ್ಲಾ ನೀರ ಮೇಲೆ ಹೋಮ ಮಾಡಿದಂತೆ ಆಗುವ ಸಾಧ್ಯತೆ ತೋರುತ್ತಿದೆ. ಈಗಿನ ರಾಜಕಾರಣಿಗಳು ಉತ್ತರ ಭಾರತೀಯರು, ಕನ್ನಡಿಗರು, ಮರಾಠಿಗರೆಂದು ಪ್ರಾದೇಶಿಕ ಅಂಧಾಭಿಮಾನದ ಮೂಲಕ ಕೊಳಕು ರಾಜಕೀಯ ಪ್ರದರ್ಶನದಲ್ಲೇ ಕಾಲ ಕಳೆಯುತ್ತಿದ್ದಾರೆನ್ನುವುದು ನಿಜವೇ. ಇರುವುದೊಂದೇ ಭೂಮಿ... ಇರುವುದೊಂದೇ ದೇಶ... ಅದು ಭಾರತ ಎನ್ನುವ ಕನಿಷ್ಠ ಜ್ಞಾನವೂ ಇವರಿಗಿಲ್ಲ. ಪ್ರಸ್ತುತ ಸರ್ದಾರ್ ಅವರಂಥ ಒಬ್ಬನೇ ಒಬ್ಬ ಸಮರ್ಥ ನಾಯಕ ಇರುತ್ತಿದ್ದರೆ, ನಮ್ಮ ದೇಶದಲ್ಲಿ ಅಂಧಾಭಿಮಾನಕ್ಕೆ ಅದೆಷ್ಟೋ ಅಸಹಾಯಕ, ಮುಗ್ಧ ಜನರು ಬಲಿಯಾಗುತ್ತಿರಲಿಲ್ಲ. ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅವಿವೇಕಕ್ಕೆ ಯಾವ ತಪ್ಪೂ ಮಾಡದ ಬಡಪಾಯಿ ಉತ್ತರಭಾರತೀಯರು ಸೂರು ಕಳೆದುಕೊಳ್ಳುತ್ತಿರಲಿಲ್ಲ. ಇಷ್ಟಕ್ಕೂ ಪರಸ್ಪರ ಸಹಕಾರ, ಐಕ್ಯತೆಯಿಂದ ಬದುಕಬೇಕಾಗಿದ್ದ ದೇಶದಲ್ಲಿ ಈ ಪ್ರಾದೇಶಿಕ ಅಂಧಾಭಿಮಾನ ಎಂಬ ವಿಷಬೀಜ ಬಿತ್ತಿದವರಾರು? ಹಿಂಸಾತ್ಮಕ ಪ್ರಾದೇಶಿಕವಾದದ ವಿರುದ್ಧ ಸಮಸ್ತ ಭಾರತೀಯರು ಒಗ್ಗೂಡಬೇಕು. ಅಂಧಾಭಿಮಾನದ ಕೊಚ್ಚೆಯನ್ನು ತೊಲಗಿಸಿ, ರಾಷ್ಟ್ರೀಯ ಏಕತೆ ಮೂಡಿಸಬೇಕು. ಹೌದು! ಒಂದೇ ಒಂದು ಸಲ ದೇಶ ಸಾಗಿಬಂದ ದಾರಿಯನ್ನು ಅವಲೋಕಿಸಬೇಕು. ಮತ್ತೊಬ್ಬ ಸರ್ದಾರ್ ಹುಟ್ಟಿಬರುವ ಕನಸು ನನಸಾಗಲಿ.

ಎಂ.ಎನ್. ಕೃಷ್ಣಮೂರ್ತಿ
ಕೋಲಾರ

ತರ್ಕಬದ್ಧ ಸಂಪಾದಕೀಯ

ಅಸ್ತಿತ್ವ ರಾಜಕಾರಣದಲ್ಲಿ ಭಾರತ ನಲುಗುತ್ತಿರುವ ಕುರಿತಾದ ಅರಿಂದಮ್ ಚೌಧುರಿ ಅವರ ಸಂಪಾದಕೀಯ ಚಿಂತನೆಗೆ ಹಚ್ಚಿತು. ಭಾರತದ ಆಯಾ ರಾಜ್ಯಗಳಲ್ಲಿ ಏನೆಲ್ಲಾ ವಿವಾದಗಳು ಇಂದು ಭುಗಿಲೇಳುತ್ತಿವೆಯೋ ಅದಕ್ಕೆಲ್ಲಾ ನೇರ ಹೊಣೆ ನಮ್ಮ ರಾಜಕಾರಣಿಗಳೇ. ತರ್ಕಬದ್ಧ ಸಂಪಾದಕೀಯಕ್ಕೆ ಧನ್ಯವಾದಗಳು.

ಆರ್. ನಿತ್ಯಾನಂದ
ಮೈಸೂರು

ಸರ್ಕಾರದ ಬೇಜಾವಾಬ್ದಾರಿ

Letters- The Sunday Indian - Kannada'ಪದ್ಮಪ್ರಿಯ ಹುಟ್ಟುಹಾಕಿದ ಪ್ರಶ್ನೆಗಳಿಗೆ ಉತ್ತರ? (ಕೆ. ರಾಘವ ಶರ್ಮ) ವಿಶೇಷ ತನಿಖಾ ವರದಿ ಚೆನ್ನಾಗಿ ಮೂಡಿಬಂದಿದೆ. ಪ್ರಕರಣದ ಆರಂಭದಿಂದ ಹಿಡಿದು ಅಂತ್ಯದವರೆಗೆ ಪೊಲೀಸ್ ಇಲಾಖೆ ಮತ್ತು ಸ್ವತಃ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಗೃಹ ಸಚಿವರ ಬೇಜಾವಾಬ್ದಾರಿ ಹೇಳಿಕೆಗಳೇ ಪದ್ಮಪ್ರಿಯ ಬದುಕಿಗೆ ಮುಳುವಾಯಿತೆಂದರೆ ತಪ್ಪಾಗಲಾರದು. ವಿನಾಕಾರಣ ಮಾಲೂರು ಪ್ರಕರಣ ಹುಟ್ಟುಹಾಕಿದ ಗೃಹ ಸಚಿವರಿಗೆ ಏನು ಶಿಕ್ಷೆ ಕೊಡಬೇಕು? ಕೇವಲ ಅತುಲ್ ಒಬ್ಬನಿಂದ ಈ ಸಾವು ಸಂಭವಿಸಲು ಸಾಧ್ಯವೇ ಇಲ್ಲ. ಅಪಾರ್ಟ್‌ಮೆಂಟ್‌ನೊಳಗೆ ಹೋದ ಮೂರನೇ ವ್ಯಕ್ತಿ ಯಾರೆಂಬುದನ್ನು ಪತ್ತೆಹಚ್ಚಿದರೆ ಪ್ರಕರಣದ ಸಂಪೂರ್ಣ ಚಿತ್ರಣವೇ ಬಯಲಾಗಲಿದೆ. ಆದರೆ ಪ್ರಸ್ತುತ ಆಡಳಿತದಲ್ಲಿರುವ ಸರ್ಕಾರದ 'ಪ್ರೇರಣೆ'ಯಿಂದ ಆಮೆಗತಿಯಲ್ಲಿ ತನಿಖೆ ನಡೆಸುತ್ತಿರುವ ಪೊಲೀಸ್ ಇಲಾಖೆ ಪ್ರಕರಣದ ಗುಟ್ಟು ರಟ್ಟು ಮಾಡಬಹುದೇ?

ಎಂ. ಇರ್ಷಾದ್,
ವೇಣೂರು (ಇ-ಮೇಲ್ ಮೂಲಕ)

ಜೀವನದ ಕನಸು

ಹೊಸ ಜೀವನದ ಕನಸು ಹೊತ್ತು ದೆಹಲಿವರೆಗೆ ಬಂದ ಪದ್ಮಪ್ರಿಯಾ ಕೊನೆಗೂ ಸಾವಿಗೆ ಶರಣಾಗಿದ್ದು ದುರಂತ. ಈ ಬಗ್ಗೆ ನಡೆದ ತನಿಖೆಗಳೂ ನಿಖರವಾಗಿಲ್ಲ. ಶಾಸಕರ ಪತ್ನಿಯಾಗದೆ ಇದ್ದಿದ್ದರೆ? ಈ ಸುದ್ದಿ ರಾಜಕೀಯ ಮೆರುಗು ಪಡೆಯದೆ ಇದ್ದಿದ್ದರೆ? ಮಾಧ್ಯಮಗಳು ಅವರ ಖಾಸಗಿ ಬದುಕನ್ನು ಬೇಕಾದಂತೆ ಚಿತ್ರಿಸದೇ ಇದ್ದಿದ್ದರೆ? ಸಾಮಾನ್ಯ ಮಹಿಳೆಯಂತೆ ಎಲ್ಲೋ ದೂರದ ಊರಿಗೆ ಹೋಗಿ ಬದುಕು ಕಟ್ಟಿಕೊಂಡುಬಿಡುತ್ತಿದ್ದಳು ಪದ್ಮಪ್ರಿಯ. ದಾಂಪತ್ಯ ಸಹ್ಯವಾಗದೆ ಹೋದಾಗ ವಿಚ್ಚೇದನ ಪಡೆಯಬಹುದಿತ್ತು. ಬಲಿಯಾದ ಮಹಿಳೆಯ ಶೀಲದ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ. ಹಾಗೆ ಮಾಡಿದ್ದರೆ ಅಮಾನವೀಯವೆನಿಸುತ್ತದೆ. ಕಾನೂನಿನಲ್ಲಿ ಮದುವೆಗೆ ಅವಕಾಶವಿರುವಂತೆ ಮದುವೆಯೆಂಬ ಕಟ್ಟಳೆಯಿಂದ ಹೊರಬರಲು ಇಚ್ಚಿಸುವ ಮಹಿಳೆಗೆ ಹೊಸ ಬದುಕನ್ನು ಆರಂಭಿಸಲು ಅವಕಾಶವಿರಬೇಕು. ಪದ್ಮಪ್ರಿಯಾ ಸಾವು ಅನೇಕ ಸವಾಲುಗಳನ್ನು ನಮ್ಮ ಮುಂದಿಟ್ಟಿದೆ. ಪ್ರಜ್ಞಾವಂತರು ಈಗಿನ ಸಾಮಾಜಿಕ ಸಮಸ್ಯೆಗಳತ್ತ ಗಮನ ಹರಿಸಿ ಹೊಸ ಆರೋಗ್ಯಕರ ಸಮಾಜ ಕಟ್ಟುವಲ್ಲಿ ಆಸಕ್ತಿ ತೋರಬೇಕು. ಆಗ ಮಾತ್ರ ಪದ್ಮಪ್ರಿಯರಂತಹ ನೂರಾರು ಮಹಿಳೆಯರ ಹೊಸ ಜೀವನದ ಕನಸು ನನಸಾಗಬಲ್ಲದು.

ರೇಣುಕಾ ನಿಡಗುಂದಿ,
ನವದೆಹಲಿ (ಇ-ಮೇಲ್ ಮೂಲಕ)

ವಿಮರ್ಶಾತ್ಮಕ ಲೇಖನ

'ಮೂರು ಪ್ರಜಾಪ್ರಭುತ್ವಗಳ ದುರಂತಗಾಥೆ' (ಸುತನು ಗುರು) ಬುಷ್, ಮುಷರಫ್ ಮತ್ತು ಕರ್ಜಾಯಿ ಕುರಿತ ಸಮರ್ಥ ಮತ್ತು ವಿಮರ್ಶಾತ್ಮಕ ಲೇಖನ. ಉತ್ತಮ ಲೇಖನ ನೀಡಿರುವುದಕ್ಕೆ ವಂದನೆಗಳು.

099486******

ಬಹುಮಾನಿತ ಪತ್ರಗಳು

Letters- The Sunday Indian - Kannada

ಮಾಧ್ಯಮಗಳ ನಿರುತ್ಸಾಹ!

ನಿಜ ಹೇಳಬೇಕೆಂದರೆ ನಿರಂತರ ಸುದ್ದಿ ಪ್ರಸಾರ ಮಾಡುತ್ತೇವೆ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ವಾಹಿನಿಗಳು ರದ್ದಿಗೆ ಹಾಕಬಹುದಾದ ವರದಿಗಳನ್ನು ಪ್ರಸಾರ ಮಾಡುತ್ತವೆಯೇ ವಿನಾ ಗಂಭೀರ ಸುದ್ದಿಗಳನ್ನಲ್ಲ. 'ವಿಶೇಷ ಸುದ್ದಿ' ಅಥವಾ 'ಎಕ್ಸ್‌ಕ್ಲ್ಯೂಸಿವ್ ಸುದ್ದಿ' ಎಂಬ ಬಣ್ಣ ಬಳಿದು ಅರ್ಥಹೀನ ಸುದ್ದಿಗಳನ್ನು ಪ್ರಸಾರ ಮಾಡುತ್ತವೆ. ಆರುಶಿ ನಿಗೂಢ ಕೊಲೆ ಪ್ರಕರಣವೂ ಇದಕ್ಕೆ ಹೊರತಲ್ಲ. ಮಾಧ್ಯಮಗಳನ್ನು ರಾಷ್ಟ್ರದ ಮುಖವಾಣಿಯೆಂದು ಗುರುತಿಸಲಾಗುತ್ತದೆ. ಆದರೆ ಟಿಆರ್‌ಪಿ ಏರಿಸಲು ಆರುಶಿ ಕೊಲೆ ಪ್ರಕರಣವನ್ನು ಬಳಸಿಕೊಂಡ ಮಾಧ್ಯಮಗಳು ನಮ್ಮ ನಿರೀಕ್ಷೆಗಳನ್ನು ಹುಸಿ ಮಾಡಿವೆ. ಆರುಶಿ ಕೊಲೆ ಮಾಡಿರುವುದು ಯಾರು ಎಂದು ದೇಶಕ್ಕೆ ದೇಶವೇ ಅಚ್ಚರಿಯಿಂದ ಎದುರು ನೋಡುತ್ತಿದ್ದರೆ, ಉಳಿದ ವಾಹಿನಿಗಳ ಟಿಆರ್‌ಪಿ ಕುಸಿದಿದ್ದವು. ಪ್ರತಿ ನಿಮಿಷಗಳಿಗೂ ಅಗ್ಗದ ಪ್ರಚಾರ ಮತ್ತು ಟಿಆರ್‌ಪಿ ಬೆನ್ನುಹತ್ತಿರುವ ಸುದ್ದಿವಾಹಿನಿಗಳ ಬಗ್ಗೆ ಜನರೇ ಅಸಹ್ಯ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಸುದ್ದಿವಾಹಿನಿಯ ಅದಕ್ಷತೆ ಬಗ್ಗೆ ಹೇಳುತ್ತಿಲ್ಲ. ಆದರೆ ಈ ಬಗ್ಗೆ ಮಾಧ್ಯಮಗಳ ಅಸಾಮರ್ಥ್ಯ ಮತ್ತು ಕೊಲೆ ಪ್ರಕರಣದಲ್ಲಿ ಭಾವಶೂನ್ಯವಾಗಿ ನಡೆದುಕೊಂಡ ರೀತಿ ಗಮನಿಸಿದಲ್ಲಿ, ಪ್ರೇಕ್ಷಕರನ್ನು ಆಕರ್ಷಿಸಲು ಮತ್ತು ಜಾಹೀರಾತುಗಳಿಂದ ಆದಾಯಗಳಿಸುವ ಉದ್ದೇಶದಿಂದಲೇ ಆರುಶಿ ಕೊಲೆಪ್ರಕರಣ ಸುದ್ದಿವಾಹಿನಿಗಳಿಗೆ ಆಹಾರವಾಯಿತು ಎನ್ನುವುದರಲ್ಲಿ ಸಂಶಯವಿಲ್ಲ.

ಸೋನಲ್ ದತ್
ಇ-ಮೇಲ್ ಮೂಲಕ

ನಾಗರಿಕ ಸಮಾಜ ತಲುಪಲಿ

ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಪ್ರದೇಶಗಳಲ್ಲಿ ಹೆಚ್ಚುತ್ತಿರುವ ಹಿಂಸೆ, ಸರ್ಕಾರದ ವಿರುದ್ಧ ಇಸ್ಲಾಂ ಮೂಲಭೂತವಾದಿಗಳ ಸಾಮೂಹಿಕ ಪ್ರತಿಭಟನೆ, ಗಡಿಪಾರಾಗಿರುವ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಸ್ವದೇಶಕ್ಕೆ ಆಗಮಿಸಿದಾಗ ಮರುಬಂಧನ ಮತ್ತು ಅವರ ಅಕಾಲಿಕ ಹತ್ಯೆ ಎಲ್ಲವೂ ಪಾಕಿಸ್ತಾನ ಭವಿಷ್ಯದ ಗಂಡಾಂತರಗಳ ಸೂಚಕ. ಪರಮಾಣು-ಶಸ್ತ್ರಾಸ್ತ್ರಧಾರಿ ರಾಷ್ಟ್ರವೊಂದು ಇವುಗಳಿಗೆ ಪ್ರತಿಕ್ರಿಯಿಸುವ ಕುರಿತೇ ಕುತೂಹಲ ಮೂಡಿತ್ತು. 2007ರಲ್ಲಿ ನಡೆದ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆ ರಾಷ್ಟ್ರದ ಶಾಂತಿಭಂಗಕ್ಕೆ ಕಾರಣವಾಯಿತು. ಪಾಕಿಸ್ತಾನದ ಮೇಲಿನ ತಮ್ಮ ಪ್ರಭಾವ ಅಲುಗಾಡದಂತೆ ಇರುವತ್ತ ಮಾತ್ರ ಬುಷ್ ಕಾಳಜಿ. ಈಗ ಅಧಿಕಾರದಲ್ಲಿರುವವರು ಪಾಕಿಸ್ತಾನಕ್ಕೆ ಹೊಸ ಭಾಷ್ಯ ಬರೆಯಬೇಕಿದೆ. ಮುಷರಫ್ ಅವರು ಬುಷ್ ಆಡಳಿತ ಜೊತೆಗಿನ ಸ್ನೇಹ ಪಾಕಿಸ್ತಾನಕ್ಕೆ ಮಾರಕವಾಗಿದೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕಿದೆ. ಇದರ ಪರಿಣಾಮವಾಗಿ ಪಾಕಿಸ್ತಾನದಲ್ಲಿ ಅಮೆರಿಕ ವಿರೋಧಿ ನಿಲುವು ಜಾಗೃತವಾಗಿದೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಹಾಗೆಯೇ ನೂತನ ಕಾರ್ಯತಂತ್ರ ಪಾಕಿಸ್ತಾನ ಸೇನೆಗೆ ಸೌಲಭ್ಯ ಕಲ್ಪಿಸಬಾರದು ಮತ್ತು ಆರ್ಥಿಕ ಸಹಕಾರ, ಸಾಮಾಜಿಕ ಅಗತ್ಯಗಳಿಗೆ ನೆರವು ನೀಡಬೇಕು. ಅಷ್ಟೇ ಅಲ್ಲ, ಇದು ಪಾಕಿಸ್ತಾನದ ನಾಗರಿಕ ಸಮಾಜವನ್ನು ತಲುಪುವಂತಾಗಬೇಕು.

ಪ್ರಸನ್ ಪಗಾರಿಯಾ
ಇ-ಮೇಲ್ ಮೂಲಕ

ಸೇಡಿನ ರಾಜಕೀಯ

Letters- The Sunday Indian - Kannadaಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಬಾಳಾ ಠಾಕ್ರೆ ಮಹಾರಾಷ್ಟ್ರದ ಅನಭಿಷಕ್ತ ದೊರೆ ಎಂದರೆ ಉತ್ಪ್ರೇಕ್ಷೆಯಾಗಲಾರದು. ಮಹಾರಾಷ್ಟ್ರದಲ್ಲಿ ಧಾರ್ಮಿಕ ಮತ್ತು ಜನಾಂಗಿಯ ದುರಾಭಿಮಾನವನ್ನು ಅತಿರೇಕಕ್ಕೊಯ್ದ ಹೆಗ್ಗಳಿಕೆ ಬಾಳ ಠಾಕ್ರೆಯ 'ಶಿವಸೇನೆ'ಯದು. ಸ್ವತಃ ಚುನಾವಣೆಗೆ ನಿಲ್ಲದಿದ್ದರೂ ತಮ್ಮ ಸಶಕ್ತ ಸಂಘಟನೆಯಿಂದಾಗಿ ಠಾಕ್ರೆ ಮಹಾರಾಷ್ಟ್ರದ ರಾಜಕೀಯದ ಮೇಲೆ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ. ಶಿವಾಜಿ ಕುರಿತ ಆರಾಧನೆ ಮತ್ತು ಮಹಾರಾಷ್ಟ್ರ ರಾಜಕೀಯವಾಗಿ ಏಕೀಕರಣಗೊಂಡರೂ ಮರಾಠರು ಆರ್ಥಿಕವಾಗಿ ಹಿಂದುಳಿದಿರುವ ಬಗ್ಗೆ ಇದ್ದ ಅಸಹಾಯಕತೆ, ನೋವು ಮತ್ತು ಆಕ್ರೋಶವನ್ನು ರಾಜಕೀಯವಾಗಿ ಬಳಸಿಕೊಂಡು ಆ ಮೂಲಕವೇ ಮಹಾರಾಷ್ಟ್ರದಲ್ಲಿ ಬೆಳೆದ ಪಕ್ಷ ಠಾಕ್ರೆಯ

'ಶಿವಸೇನೆ'.

ಸೇವರಾಂ ಬಿ.
ಕೋಲ್ಕತ್ತಾ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .