ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 
ಸಂಪಾದಕೀಯ
ಮುಂದಿನ ಲೋಕಸಭಾ ಚುನಾವಣೆಯ ನಂತರ ಮಾತ್ರವಲ್ಲ, ರಾಷ್ಟ್ರದ ಭವಿಷ್ಯದಲ್ಲೂ ಪ್ರಾದೇಶಿಕ ಪಕ್ಷಗಳು ನಿರ್ಣಾಯಕ ಪಾತ್ರ ವಹಿಸಬಹುದಲ್ಲವೇ?
    
Arindam Choudhuri
ಅರಿಂದಮ್ ಚೌಧುರಿ,
ಪ್ರಧಾನ ಸಂಪಾದಕರು,
ದ ಸಂಡೆ ಇಂಡಿಯನ್

ಮುಂದಿನ ಕೆಲವು ವಾರಗಳ ಕಾಲ ಟಿವಿ ವಾಹಿನಿಗಳು ಮತ್ತು ವೃತ್ತಪತ್ರಿಕೆಗಳೆಲ್ಲಾ ಲೋಕಸಭಾ ಚುನಾವಣೆ ಎಂದಿಗೆ ನಡೆಯಲಿದೆ ಎಂಬ ವಿಷಯದ ಬಗ್ಗೆಯೇ ಚರ್ಚಿಸಲಿವೆ. ಇದರ ಜೊತೆಗೆ ಯುಪಿಎ, ಎನ್‌ಡಿಎ ಪಾಲಿಗೆ ನಿರ್ಣಾಯಕವಾಗಲಿರುವ ಜಾತಿ ಲೆಕ್ಕಾಚಾರ, ಅಲ್ಪಸಂಖ್ಯಾತ ವೋಟ್‌ಬ್ಯಾಂಕ್ ಮತ್ತು ಮೈತ್ರಿ ರಾಜಕೀಯದಂತಹ ಬೋರಿಂಗ್ ವಿಷಯಗಳೂ ಚರ್ಚೆಯಾಗಲಿವೆ. ಕಾಂಗ್ರೆಸ್, ಬಿಜೆಪಿ, ಮಾರ್ಕ್ಸಿಸ್ಟ್ ಪಕ್ಷದ ನಾಯಕರು ಮತ್ತು ವಕ್ತಾರರು ಟಿವಿ ಸಂವಾದದಲ್ಲಿ ಉದ್ರೇಕದಿಂದ ಮಾತನಾಡುವುದನ್ನು (ಆದರೆ ಯಾವುದೇ ವಿಚಾರ ಇರುವುದಿಲ್ಲ ಬಿಡಿ) ಕಾಣಲಿದ್ದೀರಿ. ಹಾಗೆಯೇ ಎನ್‌ಡಿಎ, ಯುಪಿಎ ಮತ್ತು ಯುಎನ್‌ಪಿಎ ಒಕ್ಕೂಟಗಳಿಗೆ ಎಕ್ಸ್ ಅಥವಾ ವೈ ಸಂಖ್ಯೆಯ ಸ್ಥಾನಗಳು ಬರಲಿವೆ ಎಂಬ ಲೆಕ್ಕಾಚಾರ ಹಾಕುವ ಸಮೀಕ್ಷಾ ವರದಿಗಳೂ ಮಿಂಚಲಿವೆ. ರಾಜಕೀಯ ಪಂಡಿತರೇನೂ ಅಲ್ಲ ಎಂದು ನಂಬಿಕೊಂಡಿರುವ ನಮ್ಮ-ನಿಮ್ಮಂಥವರು ಸಾಮಾನ್ಯಜ್ಞಾನದಿಂದಲೇ ಮುಂದಿನ ಲೋಕಸಭೆಯ ನಂತರ ಸರ್ಕಾರ ರಚನೆಯಲ್ಲೂ ಪ್ರಾದೇಶಿಕ ಪಕ್ಷಗಳೇ ನಿರ್ಣಾಯಕ ಪಾತ್ರ ವಹಿಸಲಿವೆ ಎಂದು ಖಚಿತವಾಗಿ ಹೇಳಬಲ್ಲೆವು. ಈಗ ಎಡಪಕ್ಷಗಳು ಯುಪಿಎ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸು ಪಡೆದುಕೊಂಡಾಗ ಕೂಡಾ ಮುಲಾಯಂ ಸಿಂಗ್ ಯಾದವ್ (ಸಮಾಜವಾದಿ ಪಕ್ಷ), ಅಜಿತ್ ಸಿಂಗ್ (ರಾಷ್ಟ್ರೀಯ ಲೋಕದಳ) ಮತ್ತು ಎಚ್.ಡಿ. ದೇವೇಗೌಡ (ಜೆಡಿಎಸ್) ಅಂಥವರೇ ಮುಂದಿನ ವರ್ಷದವರೆಗೆ ಸರ್ಕಾರ ಉಳಿಯುವಲ್ಲಿ ಪ್ರಮುಖ ಪಾತ್ರ ವಹಿಸುವಂಥವರು.

ಬಹಳಷ್ಟು ಭಾರತೀಯರು ಕೇಳಬೇಕಾದ ಪ್ರಶ್ನೆ ಎಂದರೆ: ಪ್ರಬಲ ಪ್ರಾದೇಶಿಕ ಪಕ್ಷಗಳು ಆರ್ಥಿಕ, ಸಾಮಾಜಿಕ ಮತ್ತು ವಿದೇಶಾಂಗ ನೀತಿಗಳಲ್ಲಿ ಭಾರತ ಜಾಗತಿಕ ಸೂಪರ್‌ಪವರ್ ರಾಷ್ಟ್ರವಾಗಲು ಪೂರಕವಾಗಲಿವೆಯೇ ಎಂಬುದು.

ಎಡಪಕ್ಷಗಳು ಅಣು ಒಪ್ಪಂದವನ್ನು ವಿರೋಧಿಸಿವೆ ಎಂಬ ಕಾರಣಕ್ಕೆ ಮಾತ್ರವಲ್ಲ, ಸರ್ಕಾರದ ಎಲ್ಲಾ ಬಗೆಯ ನೀತಿಯ ಮೇಲೂ ಪ್ರಾದೇಶಿಕ ಪಕ್ಷಗಳು ಅಪಾಯಕಾರಿಯಾಗಿ ಹಿಡಿತ ಸಾಧಿಸಿವೆ ಎಂಬ ಕಾರಣದಿಂದ ನಾವು ಈ ಪ್ರಶ್ನೆ ಕೇಳಬೇಕಿದೆ. ಈಗ ಭಾರತದಾದ್ಯಂತ ಪ್ರಾದೇಶಿಕ ಪಕ್ಷಗಳು ಮತ್ತು ಅವುಗಳ ನಾಯಕರದೇ ಕಾರುಬಾರು. ಮುಲಾಯಂ ಸಿಂಗ್ ಯಾದವ್, ಮಾಯಾವತಿ, ಲಾಲೂ ಪ್ರಸಾದ್ ಯಾದವ್, ಬಾಳ ಠಾಕ್ರೆ, ಚಂದ್ರಬಾಬು ನಾಯ್ಡು, ಜಯಲಲಿತಾ, ಎಂ. ಕರುಣಾನಿಧಿ, ನವೀನ್ ಪಾಟ್ನಾಯಕ್, ಮಮತಾ ಬ್ಯಾನರ್ಜಿ, ನಿತೀಶ್ ಕುಮಾರ್, ಓಂ ಪ್ರಕಾಶ್ ಚೌಟಾಲಾ, ಪ್ರಫುಲ್ಲ ಮಹಾಂತ, ಪ್ರಕಾಶ್ ಸಿಂಗ್ ಬಾದಲ್, ಮುಫ್ತಿ ಮಹಮದ್ ಸೈಯದ್... ಇವೆಲ್ಲಾ ಮುಂದಿನ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ಹೆಸರುಗಳಷ್ಟೇ. ಸರ್ಕಾರಕ್ಕೆ ಬೆಂಬಲ ನೀಡುವುದಕ್ಕೆ ಪ್ರತಿಯಾಗಿ ಇವರೆಲ್ಲಾ ತಮ್ಮ ತಮ್ಮ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದ ಅನುದಾನದ ಪಾಲು ನಿರೀಕ್ಷಿಸುತ್ತಾರೆಂಬುದು ಸುಳ್ಳಲ್ಲ. ತಮ್ಮ ತಮ್ಮ ವೋಟ್‌ಬ್ಯಾಂಕ್‌ಗಳಿಗೆ ನೆರವಾಗುವ ಯೋಜನೆಗಳು, ತಮ್ಮ ರಾಜ್ಯಗಳ ವ್ಯಾಪ್ತಿಗೆ ಹೆಚ್ಚಿನ ರೈಲುಗಳನ್ನು ಇವರೆಲ್ಲಾ ಕೇಳಿಯೇ ಕೇಳುತ್ತಾರೆ. ಆದರೆ ಭಾರತ ಮತ್ತು ಅದರ ಭವಿಷ್ಯದ ಕುರಿತು ಇವರಲ್ಲಿ ಯಾರಾದರೂ ಚಿಂತಿಸುತ್ತಾರೆಯೇ?

1967ರಲ್ಲಿ ರಾಷ್ಟ್ರದಲ್ಲಿ ಕಾಂಗ್ರೆಸ್‌ನ ಏಕಪಕ್ಷೀಯ ಆಡಳಿತ ಪತನವಾದಂದಿನಿಂದ ಭಾರತದ ಪ್ರಜಾಸತ್ತೆಯ ದುರದೃಷ್ಟದ ಸ್ಥಿತಿ ಇದೇ ಆಗಿದೆ. 1989ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆ ಸಾಧಿಸಿದಂದಿನಿಂದ ಈ ಪ್ರಕ್ರಿಯೆಗೆ ಇನ್ನಷ್ಟು ಚಾಲನೆ ಸಿಕ್ಕಿದೆ. ಆಗಿನಿಂದಲೂ ಮಿತ್ರ ಪಕ್ಷಗಳು ಸರ್ಕಾರದ ಮೇಲೆ ತಮ್ಮ 'ಬೇಡಿಕೆಗಳ ಸವಾರಿ'ಯನ್ನು ನಡೆಸುತ್ತಲೇ ಬಂದಿವೆ. ಪ್ರಾದೇಶಿಕ ಪಕ್ಷಗಳು ಹೀಗೆ ಪ್ರಾಬಲ್ಯ ಸಾಧಿಸಿದ್ದು ಸ್ಥಳೀಯ ಮತ್ತು ಪ್ರಾದೇಶಿಕ ಹಿತಾಸಕ್ತಿಯನ್ನು ಪೂರೈಸುವಲ್ಲಿ ರಾಷ್ಟ್ರೀಯ ಪಕ್ಷಗಳು ವಿಫಲವಾಗಿದ್ದರಿಂದ ಎಂಬುದು ನಿಜ. ಆಂಧ್ರದ ಜನರು ಅವಮಾನಿತರಾದ್ದರಿಂದಲೇ ಎನ್.ಟಿ. ರಾಮರಾವ್ ಅವರು ತೆಲುಗು ದೇಶಂ ಸ್ಥಾಪಿಸಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತಲ್ಲವೇ?

ಆದರೂ ಕಾಂಗ್ರೆಸ್ ಮತ್ತು ಬಿಜೆಪಿಯಂಥ ರಾಷ್ಟ್ರೀಯ ಪಕ್ಷಗಳು ದುರ್ಬಲವಾದ ಸಂದರ್ಭದಲ್ಲಿ ಎಲ್ಲಾ ಪ್ರಾದೇಶಿಕ ಪಕ್ಷಗಳೂ ತಮ್ಮ 'ಸಂಕುಚಿತ' ಅಜೆಂಡಾದತ್ತಲೇ ಗಮನ ಕೇಂದ್ರೀಕರಿಸಿದರೆ ಭಾರತದ ರಾಷ್ಟ್ರೀಯ ಹಿತಾಸಕ್ತಿಯತ್ತ ಗಮನ ಹರಿಸಲು ಯಾರೂ ಇರುವುದಿಲ್ಲ ಎಂಬ ಅಪಾಯವೂ ಉದ್ಭವಿಸುತ್ತದೆಯಲ್ಲವೇ? ಈ ಅಪಾಯ ಕಟ್ಟಿಟ್ಟ ಬುತ್ತಿ. ಉದಾಹರಣೆಗೆ ಅಕಾಲಿ ದಳವನ್ನೇ ಗಮನಿಸಿ: ವಿವಾದಾತ್ಮಕ ದೇರಾ ಸಚ್ಚಾ ಸೌದಾ ವಿಷಯದಲ್ಲಿ ಯಾವಾಗ ಬೇಕಾದರೂ ಅಕಾಲಿ ದಳ ಸರ್ಕಾರವನ್ನು ಉರುಳಿಸಬಹುದು. ಹಾಗೆಯೇ ಕಾಶ್ಮೀರದ ವಿಷಯದಲ್ಲಿ ಪಿಡಿಪಿ, ಮಹಾರಾಷ್ಟ್ರ ವಿಷಯದಲ್ಲಿ ಶಿವಸೇನಾ, ಪಶ್ಚಿಮ ಬಂಗಾಳ ವಿಷಯದಲ್ಲಿ ತೃಣಮೂಲ ಕಾಂಗ್ರೆಸ್, ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳು... ಈ ಪಟ್ಟಿ ಮುಂದುವರಿಯುತ್ತಲೇ ಇರುತ್ತದೆ.

ಹೊಣೆಗಾರಿಕೆ ಇಲ್ಲದ ಅಧಿಕಾರ ಅತ್ಯಂತ ಅಪಾಯಕಾರಿ ಎಂಬ ಸತ್ಯವನ್ನು ಪ್ರಾದೇಶಿಕ ಪಕ್ಷಗಳು ಮತ್ತು ಒಕ್ಕೂಟ ಅರಿಯಲು ಇದು ಸಕಾಲ ಎಂಬುದು ನನ್ನ ಅಭಿಪ್ರಾಯ. ಇಂದಿನ ರಾಜಕೀಯ ದುಸ್ಥಿತಿ ಹೇಗಿದೆ ಎಂದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಮಾಂತ್ರಿಕ ಬದಲಾವಣೆ ಅಥವಾ ಫಲಿತಾಂಶ ನಿರೀಕ್ಷಿಸಲೂ ಸಾಧ್ಯವಿಲ್ಲ. ಆದರೆ ಯಾವುದೇ ಸರ್ಕಾರ ಬಂದರೂ ತಾವು ಬೆಂಬಲಿಸುವಂತಹ ನೀತಿ-ನಿಯಮಗಳನ್ನು ಸ್ಪಷ್ಟಪಡಿಸುವಂತಹ 'ಸಾಮಾನ್ಯ ಕನಿಷ್ಠ ಕಾರ್ಯಕ್ರಮ'ವನ್ನು (ಸಿಎಂಪಿ) ಪ್ರಾದೇಶಿಕ ಪಕ್ಷಗಳು ಹೊಂದುವುದು ಭಾರತದ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು.

ರಾಷ್ಟ್ರೀಯ ಪಕ್ಷಗಳಿಗಿಂತ ಚೆನ್ನಾಗಿ ಮತದಾರರ ಬೇಡಿಕೆಗಳನ್ನು ತಾವು ಅರ್ಥೈಸಿಕೊಂಡಿರುವುದಾಗಿ ಹೇಗಿದ್ದರೂ ಪ್ರಾದೇಶಿಕ ಪಕ್ಷಗಳು ಹೇಳಿಕೊಳ್ಳುತ್ತವೆ. ಹೀಗಾಗಿ ಬಡವರು ಮತ್ತು ಶೋಷಿತರಿಗೆ ನೆರವಾಗುವಂತಹ ಯೋಜನೆಗಳು, ಶಿಕ್ಷಣ, ಆರೋಗ್ಯ, ನೈರ್ಮಲ್ಯ ಮತ್ತು ಉದ್ಯೋಗದಂತಹ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಸೃಷ್ಟಿಸಿಕೊಡುವ ಯೋಜನೆಗಳಿಗೆ ಬೆಂಬಲ ನೀಡುವುದಾಗಿ ಆ ಪಕ್ಷಗಳು ಘೋಷಿಸಲು ಸಾಧ್ಯವಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರಾಷ್ಟ್ರದ ಎಲ್ಲಾ ಭಾಗದಲ್ಲೂ ಜಾಗತೀಕರಣದ ಲಾಭ ಪಡೆಯುವ ಈ ಅಂಶಗಳೇ ಮತದಾರರ ಅಪೇಕ್ಷೆಯಾಗಿದೆ ಎಂಬುದು ಅಕ್ಷರಶಃ ಸತ್ಯ. ಅಭಿವೃದ್ಧಿಗೆ ಮತ್ತು ಎಲ್ಲಾ ಯೋಜನೆಗಳ ಯಶಸ್ಸಿಗೆ ಅಡ್ಡಿಯಾಗಿರುವುದು ಭ್ರಷ್ಟಾಚಾರ ಹಾಗೂ ಅದಕ್ಷ ಅಧಿಕಾರಶಾಹಿ ಎಂಬುದು ಪ್ರಾದೇಶಿಕ ಪಕ್ಷಗಳಿಗೂ ಗೊತ್ತಿದೆ. ಹೀಗಾಗಿ ಮುಂದಿನ ಲೋಕಸಭೆಯಲ್ಲಿ ನಾವು ನಿರ್ಬಂಧಿಸುವುದು ಈ ಎರಡು ಅಡೆತಡೆಗಳನ್ನೇ ಎಂದು ಪ್ರಾದೇಶಿಕ ಪಕ್ಷಗಳು ಒಗ್ಗೂಡಿ ಘೋಷಿಸಬಹುದಲ್ಲವೇ?

ಭಾರತ ಈಗ ಕವಲುದಾರಿಯಲ್ಲಿದೆ. ಪ್ರಜಾಪ್ರಭುತ್ವ ರಾಷ್ಟ್ರವಾದ್ದರಿಂದ ಚುನಾವಣೆಗಳು ಅನಿವಾರ್ಯ, ಜೊತೆಗೆ ರಾಜಕೀಯ ಅಭದ್ರತೆ ಕೂಡಾ. ಹಾಗೆಯೇ ಸದ್ಯಕ್ಕೆ ನಿರ್ಬಂಧಿಸಲು ಸಾಧ್ಯವಿಲ್ಲದ ಅಂಶವೆಂದರೆ ಪ್ರಾದೇಶಿಕ ಪಕ್ಷಗಳ ಏರುತ್ತಿರುವ ಪ್ರಾಬಲ್ಯ. ಪ್ರಾಯಶಃ ಇದೇ ಪ್ರಥಮ ಬಾರಿಗೆ ಭಾರತದ ಪ್ರಾದೇಶಿಕ ಪಕ್ಷಗಳ ಪಾಲಿಗೆ ಇತಿಹಾಸ ನಿರ್ಮಿಸುವ ಸುವರ್ಣಾವಕಾಶ ಒದಗಿಬಂದಿದೆ: ಅಂದರೆ ತೃತೀಯ ರಂಗ ನಿರ್ಮಿಸಿ 1996 ಮತ್ತು 1998ರ ನಡುವೆ ದೇವೇಗೌಡ ಮತ್ತು ಗುಜ್ರಾಲ್ ಸರ್ಕಾರವನ್ನು ಅಭದ್ರಗೊಳಿಸಿದಂತಹ ಅವಕಾಶ ಅಲ್ಲ. ಅಧಿಕಾರ ಮತ್ತು ನೀತಿ ರೂಪಿಸುವ ಅಂಶ ದೆಹಲಿಯಿಂದ ಸ್ಥಳೀಯ ಮಟ್ಟದ ಜಿಲ್ಲೆ ಮತ್ತು ಗ್ರಾಮಗಳತ್ತ ಸಾಗಿ ಬಂದಿದೆ ಎಂದು ತೋರಿಸಿಕೊಡುವ ಅವಕಾಶ.

ನನಗೆ ಗೊತ್ತಿದೆ; ನನ್ನ ವಿಚಾರ ತೀರಾ ಆಶಾವಾದಿ ಮತ್ತು ಆದರ್ಶವಾದಿ ಆಗಿರಬಹುದು. ಆದರೆ ಹೊಸ ಹೊಸ ಉತ್ತರಗಳನ್ನು ಕಂಡುಕೊಳ್ಳುವಲ್ಲಿನ ಭಾರತೀಯರ ಸಾಮರ್ಥ್ಯದ ಮೇಲೆ ನನಗಿರುವ ನಂಬಿಕೆಯಂತೂ ನಿರಂತರ.

 

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .