|

'ಫಾಸ್ಟ್
ಆಂಡ್ ಫ್ಯೂರಿಯಸ್'
ಚಿತ್ರದ ಒಂದು ಸನ್ನಿವೇಶ ಕಲ್ಪಿಸಿಕೊಳ್ಳಿ. ನೂರಾರು ಝಗಮಗಿಸುವ ಕ್ಸಿಯಾನ್
ಹೆಡ್‌ಲೈಟ್‌ಗಳಿಂದ ಸೂರ್ಯನೇ ಧರೆಗಿಳಿದು ಬಂದಂತಹ ರಾತ್ರಿ. ಆ ರಾತ್ರಿಯ
ಭೀಕರತೆಯನ್ನು ಭೇದಿಸುವ ಯಂತ್ರಗಳ ಅಬ್ಬರ, ಡಾಂಬರು ರಸ್ತೆಯ ಮೇಲೆ ಹಿಡಿತ
ಸಾಧಿಸುವ ಹತಾಶ ಯತ್ನದಲ್ಲಿ ಕಥಕ್ಕಳಿ ಆಡುತ್ತಿದ್ದ ಟಯರುಗಳಿಂದ ಹೊರಟ ಬಿಳಿ
ಹೊಗೆ ಆಕಾಶದೆತ್ತರಕ್ಕೆ ಚದುರಿದರೆ, ಮುಖಕ್ಕೆ ಹೊಡೆಯುವಂತಹ ಸುಟ್ಟ ರಬ್ಬರ್
ವಾಸನೆ. ಕಾರುಗಳ ಕರಾಮತ್ತೂ ಕಡಿಮೆ ಏನೂ ಇರಲಿಲ್ಲ. ಫೆರಾರಿ, ಪೋರ್‍ಶೆ,
ಮರ್ಸಿಡೆಸ್... ಹೀಗೆ ಹತ್ತು ಹಲವು ವೈಭವದ ಕಾರುಗಳೆಲ್ಲಾ ಪರಸ್ಪರ
ಪೈಪೋಟಿಗಿಳಿದಿದ್ದವು.
ಈ ವಿವರಣೆ ಕೇಳಿ ಪಾಶ್ಚಾತ್ಯ ದೇಶಗಳ ಯಾವುದೋ
ಅಂಡರ್‌ಗ್ರೌಂಡ್‌ನಲ್ಲಿ ನಡೆಯುವ 'ಡ್ರ್ಯಾಗ್
ರೇಸ್'
ನೆನಪಾಯಿತೆ? ಆದರೆ ಇದು ನಡೆದದ್ದು ಬೇರೆಲ್ಲೂ ಅಲ್ಲ. ನಮ್ಮ ರಾಷ್ಟ್ರದ
ರಾಜಧಾನಿಯಲ್ಲಿ! ಅದೂ ಎರಡು ತಿಂಗಳ ಹಿಂದೆಯಷ್ಟೇ ಇಂತಹುದೇ ಒಂದು ಬಲಾಬಲ
ಪ್ರದರ್ಶನ 'ಗ್ರೇಟರ್
ನೋಯ್ಡಾ ಎಕ್ಸ್‌ಪ್ರೆಸ್‌ವೇ'ನಲ್ಲಿ
ನಡೆದಿತ್ತು. ಆ ರೇಸ್‌ಗೆ ಪ್ರತ್ಯಕ್ಷದರ್ಶಿಯಾಗಿದ್ದ ವ್ಯಕ್ತಿ ವಿವರಿಸಿದ ಪರಿ
ಇದು. ವರ್ಷಕ್ಕೆ ಕನಿಷ್ಠ ಆರು ಸಲವಾದರೂ ನಡೆಯುವ ಈ
'ಡ್ರ್ಯಾಗ್
ರೇಸ್'ನಲ್ಲಿ
ಭಾಗವಹಿಸುವವರೂ ಅಸಾಮಾನ್ಯರೇ. ರಾಷ್ಟ್ರೀಯ ರಾಜಧಾನಿ ವಲಯದ (ಎನ್‌ಸಿಆರ್)
ಸುತ್ತಮುತ್ತಲ ಪ್ರಬಲ ಸ್ಪರ್ಧಿಗಳು ಇದರಲ್ಲಿ ಭಾಗವಹಿಸುತ್ತಾರೆ. ಈ
ಸ್ಪರ್ಧೆಗಳು ರಹಸ್ಯವಾಗಿ ನಡೆಯುತ್ತವೆ. ಹೊರಗಿನವರಿಗೆ ಆಹ್ವಾನ ಬಿಡಿ,
ಪುಟ್ಟ ಮಾಹಿತಿಯೂ ಸಿಗದು! ಎನ್‌ಸಿಆರ್‌ನಲ್ಲಿ ನಡೆದ ಸ್ಪರ್ಧೆಯನ್ನು
ಆಯೋಜಿಸಿದ್ದು ಮೈಕ್ ನೇತೃತ್ವದ ರಹಸ್ಯ ತಂಡ. ಪೊಲೀಸರ ಮಧ್ಯಪ್ರವೇಶವನ್ನು
ತಪ್ಪಿಸಲು ಈ ರೇಸ್‌ಗಳು ಬೆಳಗಿನ ಜಾವ 1
ಗಂಟೆಯಿಂದ 4
ಗಂಟೆ ಒಳಗೆ ನಡೆಯುತ್ತವೆ. ಆಹ್ವಾನವಿದ್ದಲ್ಲಿ ಮಾತ್ರ ಭಾಗವಹಿಸಬಹುದು.
'ವಿಶ್ವಾಸಾರ್ಹ
ಸಮೂಹ'ದ
ಒಳಗಿದ್ದಲ್ಲಿ ಮಾತ್ರ ರೇಸ್ ಜರುಗುವ ಕೆಲ ದಿನಗಳಿಗೆ ಮುನ್ನ ಈ ಬಗ್ಗೆ ಮಾಹಿತಿ
ನೀಡುವ ಎಸ್‌ಎಮ್‌ಎಸ್ ಸಂದೇಶವೊಂದು ನಿಮಗೆ ಬರುತ್ತದೆ. ಡ್ರ್ಯಾಗ್ ರೇಸ್
ಹುಚ್ಚು ತಲೆಗೇರಿಸಿಕೊಂಡಿದ್ದ ಸ್ನೇಹಿತನೊಬ್ಬ ನನಗೆ ಈ ಸ್ಪರ್ಧೆಯ ಪರಿಚಯ
ಮಾಡಿಕೊಟ್ಟದ್ದು. ಮೊದಲಿಗೆ ನಾನು ಹೆಚ್ಚು ಆಸಕ್ತಿ ವಹಿಸಿರಲಿಲ್ಲ. ಆದರೆ
ನಿಧಾನವಾಗಿ ನನಗೂ ಇದು ಇಷ್ಟವಾಗಲಾರಂಭಿಸಿತು.
200 ಕಿ.ಮೀ.ಗಳಿಗೂ ಮೀರಿದ
ವೇಗದಲ್ಲಿ ಕಾರನ್ನು ರೊಯ್ಯನೆ ಹಾರಿಸುತ್ತಾ ಚಲಾಯಿಸುವಾಗ ಸಿಗುವ
ರೋಮಾಂಚನಕ್ಕೆ ಹೋಲಿಕೆ ಇದೆಯೇ ಎಂದು ಉದ್ವೇಗದಿಂದ ಪ್ರಶ್ನಿಸುತ್ತಾರೆ ವಿಶಾಲ್
(ಹೆಸರು ಬದಲಿಸಲಾಗಿದೆ). ತಮ್ಮ ಅದ್ಭುತ ಅನುಭವವನ್ನು ನೆನಪಿಸಿಕೊಳ್ಳುವಾಗ
ಅವರ ಕಣ್ಣುಗಳು ಸಂಭ್ರಮದಿಂದ ಅರಳಿದ್ದವು. ಕಳೆದ ಮೂರು ವರ್ಷಗಳಲ್ಲಿ ಅರ್ಧ
ಡಜನ್ 'ಡ್ರ್ಯಾಗ್
ರೇಸ್'ಗಳಲ್ಲಿ
ಭಾಗವಹಿಸಿದ ಅನುಭವಿ ವಿಶಾಲ್. ದೇಶದ ಜನಪ್ರಿಯ ಪ್ರವೃತ್ತಿಯೊಂದಕ್ಕೆ
ಅತ್ಯುತ್ತಮ ಉದಾಹರಣೆ 22
ವರ್ಷದ ವಿಶಾಲ್.
ಎನ್‌ಸಿಆರ್ 'ಡ್ರ್ಯಾಗ್
ರೇಸ್'
ಕಳೆದೆರಡು ವರ್ಷಗಳಿಂದ ನಗರದ ಯುವಕರನ್ನು ಮತ್ತೇರಿಸುತ್ತಿರುವ ಟ್ರೆಂಡ್.
ಸುಸಜ್ಜಿತವಾಗಿ ವ್ಯವಸ್ಥೆಗೊಳಿಸಲಾಗು-ತ್ತದೆಯಾದರೂ ಪ್ರಾಣಕ್ಕೆ ಗ್ಯಾರಂಟಿ
ಇಲ್ಲ! ಯಾವುದೇ ನಿಯಂತ್ರಣವಿಲ್ಲದ, ಅತೀ ಅಪಾಯಕಾರಿ ಮತ್ತು ಕಾನೂನು ಬಾಹಿರ
'ರೋಡ್
ರೇಸ್'
ನಿಧಾನವಾಗಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ವಾಹನ ಚಲಾಯಿಸುವಲ್ಲಿ ಬಲಾಬಲ
ಪ್ರದರ್ಶನ ಉತ್ತೇಜಿಸುವ ಮತ್ತು ವೈಭವೀಕರಿಸಿರುವ
'ದ ಫಾಸ್ಟ್ ಆಂಡ್ ಫ್ಯೂರಿಯಸ್'
ಮತ್ತು 'ಧೂಮ್'ನಂತಹ
ಚಿತ್ರಗಳು ಇದಕ್ಕೆ ಪ್ರೇರಣೆ. ಇದಕ್ಕೆ ತಕ್ಕಂತೆ ಅಂತರ್ ರಾಷ್ಟ್ರೀಯ
ಗುಣಮಟ್ಟದ ಕಾರುಗಳಿಗೂ ನಮ್ಮಲ್ಲಿ ಬರವಿಲ್ಲ. ಹಾಗೆಯೇ ಸಮಾನಾಂತರ
ಮಾರುಕಟ್ಟೆಯಲ್ಲಿ ಇದಕ್ಕೆ ಅಗತ್ಯವಾಗಿರುವ ಪರಿಕರಗಳು (ಕಳ್ಳಸಾಗಣೆ)
ಸಿಗುತ್ತಿವೆಯಾದ್ದರಿಂದ ಈ ಅಪಾಯಕಾರೀ ಪ್ರವೃತ್ತಿ ಬೆಳೆಯುತ್ತಲೇ ಇದೆ.
ಹಾಗಿದ್ದರೂ ಈವರೆಗೆ ಕಾನೂನು ಕ್ರಮ ಕೈಗೊಂಡಿಲ್ಲ. ಇತ್ತೀಚಿನ ದಿನಗಳಲ್ಲಿ
'ಡ್ರ್ಯಾಗ್
ರೇಸಿಂಗ್'ಗಾಗಿಯೇ
ಸಜ್ಜುಗೊಂಡಂತಿರುವ ಎನ್‌ಸಿಆರ್ ರೋಡ್‌ಗಳಲ್ಲಿ ಸೂಪರ್‌ಸೈಜ್ ಸೈಲೆನ್ಸರ್‌ಗಳನ್ನೊಳಗೊಂಡ
ಕಾರುಗಳು ಗೋಚರಿಸುವುದು ಸಾಮಾನ್ಯವಾಗಿದೆ. ರಾತ್ರಿ ಹೊತ್ತಿನಲ್ಲಿ
ಇವುಗಳೆಲ್ಲ ಬಹುತೇಕ ನಗರದ ಹೊರವಲಯದಲ್ಲಿರುವ ರಸ್ತೆಯ ಕಡೆ ಹೊರಡುತ್ತವೆ.
ಕೆಲ ಬಾರಿ ವ್ಯವಸ್ಥಾಪಕರು ಈ ರಸ್ತೆಗಳಲ್ಲಿ ಸಾಮಾನ್ಯ ಪ್ರಯಾಣಿಕರನ್ನು
ತಡೆಯುತ್ತಾರೆ. ನಿರ್ಜನ ರಸ್ತೆಯಲ್ಲಿ ಸ್ಪರ್ಧಿಗಳು ಹಣ ಮತ್ತು
ಪ್ರಸಿದ್ಧಿಗಾಗಿ ಪೈಪೋಟಿಗಿಳಿಯುತ್ತಾರೆ. ಸ್ಪರ್ಧೆಗೆ ಪ್ರವೇಶ ಶುಲ್ಕ ರೂ.
5,000.
ಹಾಗೆಯೇ ಗೆದ್ದ ಹಣ ಸಂಪೂರ್ಣ ಸಿಗದು. ಸ್ವಲ್ಪ ಮೊತ್ತ ಕಡಿತವಾಗಿ
ವ್ಯವಸ್ಥಾಪಕರ ಜೇಬು ಸೇರುತ್ತದೆ. ಇಲ್ಲಿ ಏನಿದ್ದರೂ ಸ್ಪರ್ಧೆ ಆಯೋಜಿಸಿದವರ
ತೀರ್ಮಾನವೇ ಅಂತಿಮ, ಅದೇ ಕಾನೂನು. ಎಲ್ಲಾ ರೀತಿಯ ಕಾರುಗಳೂ ಸ್ಪರ್ಧೆಯಲ್ಲಿ
ಭಾಗವಹಿಸುತ್ತವೆ. ವಿದೇಶಿ ಚಾಲಕರೂ ಇರುತ್ತಾರೆ. ಮೈಕ್ (ಮುಖ್ಯ ಆಯೋಜಕ) ಬಳಿ
ಕೆಲವು ಬಲಿಷ್ಠ ವ್ಯಕ್ತಿಗಳಿದ್ದಾರೆ. ಪ್ರತಿ ಆಯಕಟ್ಟಿನ ಸ್ಥಳಗಳಲ್ಲೂ ಇವರು
ವಾಕಿ ಟಾಕಿ ಹಿಡಿದು ನಿಂತಿರುತ್ತಾರೆ. ಪೊಲೀಸರು ಸ್ಪರ್ಧಾ ಸ್ಥಳಕ್ಕೆ
ಪ್ರವೇಶಿಸಿದರೆ ಸೂಚನೆ ನೀಡುತ್ತಾರೆ. ಸ್ಪರ್ಧೆಯಲ್ಲಿ ಭಾಗವಹಿಸಿದ
ಕಾರುಗಳಲ್ಲೂ ಸಣ್ಣ ಇಂಟರ್‌ಕಾಮ್ ವ್ಯವಸ್ಥೆ ಇರುತ್ತದೆ. ಪೊಲೀಸರು ಕಂಡು
ಬಂದಲ್ಲಿ ಮೊದಲೇ ಎಚ್ಚರಿಕೆ ನೀಡಲಾಗುತ್ತದೆ ನೆನಪಿಸಿಕೊಂಡರು ವಿಶಾಲ್.
ಆದರೆ ಈ ಮುಂಜಾಗ್ರತೆಗಳೆಲ್ಲಾ ಇಲ್ಲಿಗೇ
ಕೊನೆಯಾಗುತ್ತವೆ. ಒಟ್ಟು ಸ್ಪರ್ಧೆಯೇ ಅನಿಯಂತ್ರಿತ. ಸ್ಪರ್ಧೆಯಲ್ಲಿ
ಭಾಗವಹಿಸಿದ ಚಾಲಕ ಮತ್ತೊಂದು ವಾಹನವನ್ನು ಸೋಲಿಸುವ ಆತುರದಲ್ಲಿ
ಅಡ್ಡಾದಿಡ್ಡಿಯಾಗಿ ಚಲಾಯಿಸುತ್ತಾನೆ. ಮತ್ತೊಂದು ವಾಹನಕ್ಕೆ ಗುದ್ದಿ ಅದನ್ನು
ದಾರಿಯಿಂದ ಹೊರ ತಳ್ಳಬಹುದು. ಇತರರು ತನ್ನ ಕಾರನ್ನು ದಾಟಿ ಮುಂದೆ ಹೋಗದಂತೆ
ತಡೆಯಲು ಅಪಾಯಕಾರಿ ವರಸೆಯಿಂದ ದಿಕ್ಕುದೆಸೆಯಿಲ್ಲದೆ ಕಾರು
ಓಡಿಸಿದರೂ ಕೇಳುವವರಿಲ್ಲ.
ಇದು ದುಬಾರಿ ಹಣದ ವ್ಯವಹಾರ. ಗೆದ್ದರೆ
ಲಕ್ಷಗಟ್ಟಲೆ ಹಣ ಜೇಬಿಗಿಳಿಸಬಹುದು. ಅಷ್ಟೇ ಪ್ರಸಿದ್ಧಿಯೂ ಸಿಗುತ್ತದೆ.
ಹೀಗಾಗಿ ಈ ರೇಸ್‌ಗಳು ಹತಾಶ ಪೈಪೋಟಿಯಾಗಿ ಪರಿಣಮಿಸುವ ಸಾಧ್ಯತೆಯನ್ನು
ಅಲ್ಲಗಳೆಯುವಂತಿಲ್ಲ. ನಾನು ಹಮ್ಮರ್ ವಿರುದ್ಧ ಒಂದು ಸ್ಪರ್ಧೆ
ಗೆಲ್ಲುವವನಿದ್ದೆ. ಆಗಲೇ ನಾಯಿಯೊಂದು ನನ್ನ ಕಾರಿಗೆ ಅಡ್ಡ ಬಂತು.
ಅನಿರೀಕ್ಷಿತವಾಗಿ ಬ್ರೇಕ್ ಹಾಕಬೇಕಾಯಿತು. ಇದರಿಂದ ಹಮ್ಮರ್‌ಗೆ ಅವಕಾಶ
ಸಿಕ್ಕಿತು. ಆತ ನನ್ನನ್ನು ಮತ್ತೊಂದು ಕಡೆಯಿಂದ ಗುದ್ದಿಕೊಂಡೇ ಹೋದ. ವಾಹನದ
ಒಂದು ಬದಿ ಸಂಪೂರ್ಣವಾಗಿ ನುಜ್ಜು ಗುಜ್ಜಾಗಿ ಹೋಯಿತು. ನಾನು ಬಹುತೇಕ
ನಿಯಂತ್ರಣ ಕಳೆದುಕೊಂಡುಬಿಟ್ಟಿದ್ದೆ ಕಂಪಿಸುತ್ತಾ ಭಯಾನಕ ಅನುಭವವನ್ನು
ವಿವರಿಸಿದರು ವಿಶಾಲ್. ಕೆಲ ಬಾರಿ ಈ ಉಗ್ರಸ್ವರೂಪ ತಾರಕಕ್ಕೇರುವುದೂ ಇದೆ.
ಒಂದು ಸಲ ಮರ್ಸಿಡೆಸ್ ಎಸ್‌ಎಲ್‌ಕೆ ಒಂದು ಎಸ್‌ಯುವಿಯಿಂದ ಸಂಪೂರ್ಣ
ನುಜ್ಜುಗುಜ್ಜಾದದ್ದನ್ನು ನೆನಪಿಸಿಕೊಂಡರು. ಮರ್ಸಿಡೆಸ್ ನಿಯಂತ್ರಣ
ಕಳೆದುಕೊಂಡು ತಿರು ತಿರುಗಿ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದಿತ್ತು!
ಚಾಲಕನಿಗೆ ಗಂಭೀರ ಗಾಯಗಳಾಗಿದ್ದವು. ಆಗಲೇ ಪೊಲೀಸರು ಬಂದ ಕಾರಣ ರಕ್ತ
ಸುರಿಯುತ್ತಿದ್ದರೂ, ಚಾಲಕನನ್ನು ಹಾಗೆಯೇ ಬಿಟ್ಟು ನಾವೆಲ್ಲಾ ಜಾಗ ಖಾಲಿ
ಮಾಡಬೇಕಾಯಿತು. ಆ ಭೀಕರ ಸನ್ನಿವೇಶ ಮರೆಯಲಸಾಧ್ಯ ಎನ್ನುತ್ತಾರೆ ವಿಶಾಲ್.
ಹೆದ್ದಾರಿಗಳಲ್ಲಿ ನಡೆಯುವ ಅಪಘಾತಗಳಲ್ಲಿ
ಪ್ರಾಣ ಕಳೆದುಕೊಳ್ಳುವ ಯುವಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮುಖ್ಯವಾಗಿ
ರಾತ್ರಿ ಸಮಯದಲ್ಲಿ. ಹೀಗಾಗಿ ಈ ರೇಸ್‌ಗಳ ಆಯೋಜಕರ ಬಗ್ಗೆ ಗಮನ ಹರಿಸುವ
ಅಗತ್ಯವಿದೆ. ಬಹುತೇಕ ಆಯೋಜಕರು ತಮ್ಮ ಸ್ವಾರ್ಥ ಸಾಧನೆಗಾಗಿಯೇ ಈ
ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಕಾರುಗಳನ್ನು ಆಧುನೀಕರಿಸುವ ಗ್ಯಾರೇಜ್‌ಗಳ ಮಾಲೀಕರು ರೇಸ್‌ಗಳನ್ನು
ಆಯೋಜಿಸುವಲ್ಲಿ ಸಿದ್ಧಹಸ್ತರು. ಈ ಬಗ್ಗೆ ಹೆಚ್ಚು ವಿವರ ತಿಳಿಯದ ಯುವಕರು ಬಲಿ
ಬೀಳುತ್ತಾರೆ. ರೇಸ್‌ನಲ್ಲಿ ಸೋತ ಬಳಿಕ ತಮ್ಮ ಕಾರನ್ನು ಇನ್ನೂ ಆಧುನೀಕರಿಸಲು
ಗ್ಯಾರೇಜ್ ಮಾಲೀಕರನ್ನು ಸಂಪರ್ಕಿಸುತ್ತಾರೆ. ಸಾಕಷ್ಟು ದುಡ್ಡೂ
ಸುರಿಯುತ್ತಾರೆ. ಗ್ಯಾರೇಜ್‌ನಲ್ಲಿ ರೇಸ್‌ಗೆ ತಕ್ಕಂತೆ ಕಾರನ್ನು ಸಿದ್ಧ
ಪಡಿಸಲಾಗುತ್ತದೆ ಎನ್ನುತ್ತಾರೆ ಸ್ಪರ್ಧೆ ಆಯೋಜಿಸಿ ಅನುಭವವಿರುವ ಗ್ಯಾರೇಜ್
ಮಾಲೀಕರೊಬ್ಬರು. ಆದರೆ ಈ ರೀತಿ ವಾಹನಗಳಲ್ಲಿ ಇತರ ವ್ಯವಸ್ಥೆಗಳನ್ನು
ಮಾಡಿಕೊಂಡು ಆಧುನೀಕರಿಸುವುದು ಕಾನೂನು ಬಾಹಿರ. (ಹೀಗೆ ವ್ಯವಸ್ಥೆ
ಮಾಡಿಕೊಂಡಿದ್ದ ಕಾರಿನ ಸಿಲಿಂಡರ್ ಸ್ಫೋಟವಾಗಿ ಚಂಡೀಗಢದಲ್ಲಿ ಇತ್ತೀಚೆಗೆ
ಒಬ್ಬ ಯುವಕ ಪ್ರಾಣಕಳೆದುಕೊಂಡಿದ್ದ.) ಕೆಲಬಾರಿ ಅಪಾಯಕಾರಿ ಟರ್ಬೋಚಾರ್ಜರ್‌ಗಳು
ಮತ್ತು ಎನ್‌ಒಎಸ್ ಕಿಟ್‌ಗಳನ್ನು (ರೇಸ್‌ನಲ್ಲಿ ಇವು ಅನಿರೀಕ್ಷಿತ ವೇಗ
ಪಡೆಯಲು ನೆರವಾಗುತ್ತವೆ) ಅಳವಡಿಸಲಾಗುತ್ತದೆ. ಇವುಗಳನ್ನು ಅಳವಡಿಸಿದಲ್ಲಿ
ಕಾರುಗಳು ನಿಗದಿತ ಮಾಲಿನ್ಯ ನಿಯಂತ್ರಣದ ನಿಯಮವನ್ನು ಪಾಲಿಸುವುದು ಸಾಧ್ಯವೇ
ಇಲ್ಲ. ಜೊತೆಗೆ ಈ ರೀತಿ ಅತ್ಯಾಧುನೀಕರಣಗೊಳಿಸಿರುವ ಮಾಹಿತಿಗಳನ್ನೆಲ್ಲಾ
ಅಧಿಕೃತವಾಗಿ ದಾಖಲಿಸಬೇಕಾಗುತ್ತದೆ ಮತ್ತು ಪರವಾನಗಿ ಪಡೆದುಕೊಳ್ಳಬೇಕು
ಎನ್ನುವ ನಿಯಮವಂತೂ ಖಂಡಿತವಾಗಿ ಪಾಲಿಸುವುದಿಲ್ಲ.
ನಮ್ಮ
ತನಿಖಾ ಪೊಲೀಸರು ಎಷ್ಟು ಅನನುಭವಿಗಳೆಂದರೆ, ಅವರಿಗೆ ಎನ್‌ಒಎಸ್ ಸಿಲಿಂಡರ್
ಮತ್ತು ಸಿಎನ್‌ಜಿ ನಡುವಿನ ವ್ಯತ್ಯಾಸವೂ ತಿಳಿದಿರುವುದಿಲ್ಲ. ಅಲ್ಲದೆ,
ಇವುಗಳನ್ನು ಆರಾಮವಾಗಿ ಖರೀದಿಸಬಹುದು. ನಾನು ಒಮ್ಮೆ ಗ್ರೇಟರ್ ನೋಯ್ಡಾದಲ್ಲಿ
ಒಂದು ರೇಸ್ ಆಯೋಜಿಸಿದ್ದೆ. ಸಾಮಾನ್ಯವಾಗಿ ನಾವು ಇನ್ನೂ ಸಾರ್ವಜನಿಕವಾಗಿ
ಉದ್ಘಾಟನೆಯಾಗದ, ಕಂಟ್ರಾಕ್ಟರ್ ವ್ಯಾಪ್ತಿಯಲ್ಲಿರುವ ರಸ್ತೆಗಳಲ್ಲೇ
'ಡ್ರ್ಯಾಗ್
ರೇಸ್'
ಆಯೋಜಿಸುತ್ತೇವೆ. ಒಂದು ಬಾರಿ ಪೊಲೀಸರು ಬಂದರು. ನಾನು ಅವರಿಗೆ ರೂ.
2000 ಕೊಟ್ಟೆ.
ಸರಿ, ಅವರೂ ಸ್ಪರ್ಧೆ ವೀಕ್ಷಿಸಲು ನಿಂತರು! ಎನ್ನುತ್ತಾರೆ ಕಳೆದ ಎರಡು
ವರ್ಷಗಳಿಂದ 'ಡ್ರ್ಯಾಗ್
ರೇಸ್'
ಆಯೋಜಿಸುತ್ತಿರುವ ಅಕ್ಷಯ್. ಲಜ್‌ಪತ್‌ನಗರ್‌ನಲ್ಲಿರುವ ಪುಟ್ಟ
'ಕಾರು
ಪರಿವರ್ತನಾ ಗ್ಯಾರೇಜ್'
ಮಾಲೀಕರೊಬ್ಬರು ಹೇಳುವ ಪ್ರಕಾರ, ಮುಖ್ಯವಾಗಿ ರೇಸಿಂಗ್‌ಗಾಗಿಯೇ ತಿಂಗಳಿಗೆ
ಕನಿಷ್ಠ 10
ಕಾರುಗಳ ಉಪಕರಣಗಳನ್ನು ಅವರು ಬದಲಾಯಿಸುತ್ತಾರೆ. ಇವರೆಲ್ಲಾ ಶ್ರೀಮಂತ
ಕುಟುಂಬದ ಮಕ್ಕಳು. ಹಣದ ವಿಷಯದಲ್ಲಿ ಹೆಚ್ಚು ಚೌಕಾಸಿ ಮಾಡುವುದಿಲ್ಲ
ಎನ್ನುತ್ತಾರೆ ಅವರು. ವ್ಯವಹಾರವೆಲ್ಲಾ ಆನ್‌ಲೈನ್‌ನಲ್ಲೇ ನಡೆಯುತ್ತವೆ.
ಹಾಗೆಯೇ 'ಡ್ರ್ಯಾಗ್
ರೇಸ್'ನ
ವೀಡಿಯೋಗಳೆಲ್ಲಾ ಯೂಟ್ಯೂಬ್ ಜಾಲದಲ್ಲಿ ಸಿಗುತ್ತವೆ. (ನೋಯ್ಡಾ ಡ್ರ್ಯಾಗ್
ಎಂದು ಹುಡುಕಾಟ ಆರಂಭಿಸಿದರೆ ಸಾಕು).
www.soulsofspeed.com
ನಂತಹ ವೆಬ್‌ಸೈಟ್‌ಗಳು ಮುಂದಿನ
ರೇಸ್‌ಗಳ ಯೋಜನೆ ಹಾಕುವಲ್ಲಿ ಅತ್ಯುತ್ತಮ ಅಂತರ್‌ಜಾಲ ತಾಣವಾಗಿವೆ. ಹಾಗೆಯೇ
ಆರ್ಕುಟ್ ಮತ್ತು ಫೇಸ್‌ಬುಕ್ ಮೊದಲಾದ ಸಮುದಾಯ ವೆಬ್‌ಗಳೂ ಸಮಾನ
ಆಸಕ್ತಿಯುಳ್ಳ ಸ್ಪರ್ಧಿಗಳನ್ನು ಒಂದೆಡೆ ಸೇರಿಸುತ್ತಿವೆ. ರೇಸಿಂಗ್‌ನಲ್ಲಿ
ಇನ್ನೂ ಎಳಸಾಗಿದ್ದರೂ ಒತ್ತಡ ಸಹಿಸಿಕೊಳ್ಳುವ ವ್ಯಕ್ತಿತ್ವ ಬೇಕೇ ಬೇಕು.
16ರ
ಆಚೀಚೆ ಇರುವವರು ಬಹುಬೇಗನೇ ಈ ರೇಸಿಂಗ್ ಹುಚ್ಚನ್ನು
ತಲೆಗೇರಿಸಿಕೊಳ್ಳುತ್ತಾರೆ. ಇವರೆಲ್ಲರೂ ಅಂತರ್‌ಜಾಲದಲ್ಲೇ ಈ ಬಗ್ಗೆ ಆಕರ್ಷಣೆ
ಬೆಳೆಸಿಕೊಳ್ಳುವುದು. 'ಡ್ರ್ಯಾಗ್
ರೇಸ್'
ಎಲ್ಲಿ, ಯಾವಾಗ ಮತ್ತು ಹೇಗೆ ನಡೆಯುತ್ತದೆ ಎನ್ನುವುದನ್ನು ಅದರಿಂದಲೇ
ವಿವರವಾಗಿ ತಿಳಿದುಕೊಳ್ಳುತ್ತಾರೆ. ಆದರೆ ರೇಸಿಂಗ್ ಕುರಿತ ಹುಚ್ಚು ಆತುರ
ಮತ್ತು ಕಾತುರತೆಯಿಂದಾಗಿ ಸ್ಪರ್ಧೆಯಲ್ಲಿ ಭಾಗವಹಿಸುವ ಮುನ್ನವೇ ವೇಗದ ಚಾಲನೆ
ಆರಂಭಿಸಿರುತ್ತಾರೆ. ಇದರಿಂದಾಗೇ ಕೆಲ ಮೂರ್ಖ ಅಪಘಾತಗಳಿಗೆ ಎರವಾಗುತ್ತಾರೆ
ಎನ್ನುತ್ತಾರೆ ಅಕ್ಷಯ್. ಹೌದು, ಈ 'ಡ್ರ್ಯಾಗ್
ರೇಸ್'ನಂತಹ
ಹುಚ್ಚನ್ನು ಈಗಲೇ ನಿಲ್ಲಿಸದಿದ್ದಲ್ಲಿ ಇಂತಹ ದುರಂತಗಳಿಗೆ ಬಲಿಯಾಗುವ ಯುವಕರ
ಸಂಖ್ಯೆ ಏರುತ್ತಲೇ ಇರುತ್ತದೆ.
ಟಿಎಸ್‌ಐ
|