ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಮುಖಪುಟ ಲೇಖನ
ಯುಪಿಎಗೆ ಸಂಕಷ್ಟ; ಬಿಜೆಪಿಗೆ ಸದವಕಾಶ

ಯುಪಿಎ- ಎಡರಂಗದ ಕೆಸರೆರಚಾಟದ ನಡುವೆ ಬಿಜೆಪಿ ಚುನಾವಣೆಗೆ ಟೊಂಕಕಟ್ಟಿ ನಿಂತಿದೆ ಎನ್ನುತ್ತಾರೆ ರಂಜಿತ್ ಭೂಷಣ್

 

ಕಳೆದ ವಾರ ಕಾನ್ಪುರದಲ್ಲಿ ನಡೆದ ಚುನಾವಣಾ ಪೂರ್ವಭಾವಿ ಸಭೆಯನ್ನು 2009ರ ಸಾರ್ವತ್ರಿಕ ಚುನಾವಣಾ ಹೋರಾಟದ ನಿಟ್ಟಿನಲ್ಲಿ ಬಿಜೆಪಿಯ ಮೊದಲ ಹೆಜ್ಜೆ ಎಂದೇ ಪರಿಗಣಿಸಲಾಗಿದೆ. ಆ ಸಭೆ ದೇಶದುದ್ದಗಲಕ್ಕೆ ಅಷ್ಟೇ ಸ್ಪಷ್ಟವಾದ ಸಂದೇಶವನ್ನು ರವಾನಿಸುವಲ್ಲಿ ಕೂಡ ಯಶಸ್ವಿಯಾಯಿತು. ಸಭೆಯಲ್ಲಿ ಗಮನಸೆಳೆದದ್ದು ಪಕ್ಷದ ನಾಯಕ ಮತ್ತು ಪ್ರಧಾನಿ ಅಭ್ಯರ್ಥಿ ಎಲ್.ಕೆ. ಅಡ್ವಾಣಿಯವರು ಕಾಂಗ್ರೆಸ್ ಹೋಲುವ ರಾಕ್ಷಸನನ್ನು ಸಂಹಾರ ಮಾಡುತ್ತಿದ್ದ ಬೃಹತ್ ಬ್ಯಾನರ್! ಅದರ ಪಕ್ಕದಲ್ಲಿ ಕೂಡ ಅದೇ ಸಂದೇಶ ಹೊತ್ತ ಕಣ್ಣುಕುಕ್ಕುವ ಚಿತ್ರಗಳೇ. ಎಲ್ಲವೂ ದುಷ್ಟ ಶಕ್ತಿಯ ವಿರುದ್ಧ ಶಿಷ್ಟ ಶಕ್ತಿಯ ಜಯದ ಸಂದೇಶವನ್ನೇ ಹೊತ್ತಿದ್ದವು. ನವದೆಹಲಿಯ ಅಶೋಕರಸ್ತೆಯ ಪಕ್ಷದ ಹೈಕಮಾಂಡ್ ಕಚೇರಿ ಎದುರು ಕೂಡ ವಿಜಯೋತ್ಸಾಹದ ವರ್ಣರಂಜಿತ ವಾತಾವರಣವೇ ಮನೆಮಾಡಿತ್ತು.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನಗಳನ್ನು ಪಡೆಯುವ ಮೂಲಕ ದಕ್ಷಿಣ ಭಾರತದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಹಿನ್ನೆಲೆಯಲ್ಲಿ ಕೇಸರಿ ಪಡೆಯ ಮುಖಗಳು ಕಮಲದಂತಾಗಿದ್ದವು. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಹಜವಾದ ಏರಿಳಿತಗಳನ್ನು ಬಿಜೆಪಿಯೂ ಕಂಡಿದೆ. 2004ರ ಆಘಾತಕಾರಿ ಸೋಲಿನ ಬಳಿಕ ಸಂಪೂರ್ಣ ಕುಸಿದುಹೋಗಿದ್ದ ಪಕ್ಷದಲ್ಲಿ ಗುಜರಾತ್ ಮತ್ತು ಹಿಮಾಚಲಪ್ರದೇಶದ ಚುನಾವಣೆಗಳಲ್ಲಿ ಸಿಕ್ಕ ಅಭೂತಪೂರ್ವ ವಿಜಯದ ಬಳಿಕ ಹೊಸ ಹುಮ್ಮಸ್ಸು ಚಿಗುರೊಡೆದಿತ್ತು. ಹಾಗೇ ಹಿಂದೆಂದೂ ಕಾಣದ ಪ್ರಮಾಣದ ಒಗ್ಗಟ್ಟು ಮತ್ತು ಹೊಂದಾಣಿಕೆ ಕೂಡ ಮೇಲುಗೈ ಸಾಧಿಸಿತು.

ಪಕ್ಷದ ಚುನಾವಣಾ ನೀತಿ ತಂತ್ರಗಾರ ಅರುಣ್ ಜೇಟ್ಲಿ 'ಟಿಎಸ್‌ಐ'ಗೆ ಹೇಳಿದಂತೆ ಇದೀಗ ಪಕ್ಷದ ಚುನಾವಣಾ ಸಿದ್ಧತೆಗಳು ಭರದಿಂದ ಸಾಗಿವೆ('ಮುಖಾಮುಖಿ' ನೋಡಿ). ಬಿಜೆಪಿ ಪಡೆಗೆ ಇಂತಹ ಆತ್ಮವಿಶ್ವಾಸ ತಂದುಕೊಟ್ಟಿರುವುದು ವಿರೋಧ ಪಕ್ಷವಾದ ಕಾಂಗ್ರೆಸ್ಸೇ ಎಂಬುದು ಒಂದು ವಿಪರ್ಯಾಸ. ತನ್ನ ಪ್ರಮುಖ ಮಿತ್ರಪಕ್ಷ ಎಡರಂಗದೊಂದಿಗಿನ ವಿಶ್ವಾಸವನ್ನು ಉಳಿಸಿಕೊಳ್ಳಲಾಗದೆ ಅಣು ಒಪ್ಪಂದದ ವಿಷಯದಲ್ಲಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವುದು ದಿನದಿಂದ ದಿನಕ್ಕೆ ಆಕಾಶಕ್ಕೆ ನೆಗೆಯುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲಾಗದೇ ಸೋತದ್ದು ಮತ್ತು ಸತತ ನಾಲ್ಕು ವರ್ಷ ಅಧಿಕಾರದಲ್ಲಿದ್ದ ಪಕ್ಷದ ಬಗ್ಗೆ ಜನಸಾಮಾನ್ಯರಲ್ಲಿ ಮೂಡಿರುವ ಆಡಳಿತ ವಿರೋಧಿ ಅಲೆ ಮುಂತಾದ ತನ್ನ ಸ್ವಯಂಕೃತ ಅಪರಾಧಗಳ ಮೂಲಕ ಕಾಂಗ್ರೆಸ್ ಬಿಜೆಪಿಯ ಪಾಳೆಯದಲ್ಲಿ ಇನ್ನಿಲ್ಲದ ಹುಮ್ಮಸ್ಸನ್ನು ಚಿಮ್ಮಿಸಿದೆ. ದೊಡ್ಡ ಮಿತ್ರಪಕ್ಷ(ಎಡರಂಗ)ದಿಂದ ಅನುಭವಿಸುತ್ತಿರುವ ನಿರಂತರ ಮುಖಭಂಗ ಮುಜುಗರ ರಾಹುಲ್‌ಗಾಂಧಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲು ಪ್ರಯತ್ನಿಸಿ ಪಕ್ಷದ ಒಳಗಿಂದಲೇ ಸಾಕಷ್ಟು ಕುಹಕವನ್ನು ಎದುರಿಸಿದ್ದು ಸ್ವತಃ ಪ್ರಧಾನಿ ಮನಮೋಹನ್‌ಸಿಂಗ್ ಅವರನ್ನು ಸಾರ್ವಜನಿಕವಾಗಿ ತೀರಾ ಇಕ್ಕಟ್ಟಿಗೆ ಸಿಲುಕಿಸಿದವು. ಅವುಗಳೆಲ್ಲವೂ ಪರೋಕ್ಷವಾಗಿ ಬಿಜೆಪಿಗೆ ಪೂರಕ ವಾತಾವರಣವನ್ನೇ ನಿರ್ಮಾಣ ಮಾಡಿಕೊಟ್ಟವು.

ಬಿಜೆಪಿಯ ಚುನಾವಣಾ ರಣತಂತ್ರಗಾರರ ಪ್ರಕಾರ 2009ರ ಚುನಾವಣೆಗಳ ನಿರೀಕ್ಷೆಯಲ್ಲಿ ಪಕ್ಷ ಈಗ ಸಂಪೂರ್ಣ ಆತ್ಮವಿಶ್ವಾಸ ಮತ್ತು ಕಾರ್ಯತಂತ್ರಗಳ ಹೊಂದಾಣಿಕೆಯೊಂದಿಗೆ ಸರ್ವಸನ್ನದ್ಧವಾಗಿದೆ. ಈ ಬಾರಿ ನಾವು ಚುನಾವಣೆ ಎದುರಿಸಲು ತೀರಾ ಭಿನ್ನವಾದ ಕಾರ್ಯತಂತ್ರವನ್ನು ಸಿದ್ಧಪಡಿಸಿದ್ದೇವೆ. 2004ಕ್ಕಿಂತ ಭಿನ್ನವಾಗಿ ಈ ಬಾರಿ ಸಾಧ್ಯವಿರುವಷ್ಟು ಹೆಚ್ಚು ನಾಯಕರನ್ನು ಚುನಾವಣಾ ಕಾರ್ಯಗಳಿಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎನ್ನುವುದು ರಾಜ್ಯಸಭಾ ಸದಸ್ಯ ಹಾಗೂ ಮಾಜಿ ಕೇಂದ್ರ ಸಚಿವ ರಾಜೀವ್ ಪ್ರತಾಪ್ ರೂಡಿ ಅವರ ವಿವರಣೆ(ಸಂದರ್ಶನ ನೋಡಿ). ಪಕ್ಷದ ಕೇಂದ್ರ ಚುನಾವಣಾ ಸಮಿತಿ ಈಗಾಗಲೇ ಪ್ರತಿ ರಾಜ್ಯಕ್ಕೂ ಮಾರ್ಗದರ್ಶನ ಸೂತ್ರವಾಗಿ 30 ಅಂಶಗಳನ್ನೊಳಗೊಂಡ ಕ್ರಿಯಾಯೋಜನೆ ಸಿದ್ಧಪಡಿಸಿ ಕಳಿಸಿದೆ. 1996ರ ಸಾರ್ವತ್ರಿಕ ಚುನಾವಣೆಯ ನಂತರ ಒಂದಲ್ಲಾ ಒಂದು ಚುನಾವಣೆಯಲ್ಲಿ ತನ್ನ ಅಭ್ಯರ್ಥಿಗಳು ಜಯ ಗಳಿಸಿರುವ 297 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷದ ನೆಲೆಯನ್ನು ಭದ್ರಗೊಳಿಸಲು ಬಿಜೆಪಿ ಆದ್ಯತೆ ನೀಡಲಿದೆ. ಆ ಎಲ್ಲಾ ಕ್ಷೇತ್ರಗಳಲ್ಲಿ ಸಾರ್ವಜನಿಕ ರ್‍ಯಾಲಿಗಳನ್ನು ಆಯೋಜಿಸಲಾಗುವುದು ಪಕ್ಷದ ಪ್ರಮುಖ ರಾಷ್ಟ್ರೀಯ ನಾಯಕರು ಕ್ಷೇತ್ರಗಳಲ್ಲಿ ಪ್ರಚಾರ ಸಭೆಗಳನ್ನು ನಡೆಸಲಿದ್ದಾರೆ ಎಂದು ಟಿಎಸ್‌ಐ ಜೊತೆ ಮಾತನಾಡಿದ ರೂಡಿ ಹೇಳಿದರು. ನಾಲ್ಕು ವರ್ಷಗಳ ಅರ್ಥಹೀನ ಒಳಜಗಳ ಮತ್ತು ಗುಂಪುಗಾರಿಕೆಗಳು ಬಿಜೆಪಿಯಲ್ಲಿ ಮುಸುಕಿನ ಗುದ್ದಾಟದಲ್ಲೇ ಕುಸಿದುಬೀಳುವ ಬದಲು ತನ್ನ ವರ್ಚಸ್ಸನ್ನು ವೃದ್ಧಿಸಿಕೊಂಡು ಆತ್ಮವಿಶ್ವಾಸದೊಂದಿಗೆ ದೇಶದ ಮತದಾರ ಏನನ್ನು ಬಯಸುತ್ತಾನೆ ಎಂಬುದರತ್ತ ಗಮನಹರಿಸುವುದು ಮುಖ್ಯ ಎಂಬ ಅರಿವನ್ನು ಮೂಡಿಸಿವೆ.

ಪಕ್ಷದ ಚುನಾವಣಾ ಸಮರದ ಸಾರಥ್ಯ ವಹಿಸುವವರು ಈ ಬಾರಿ ಎಲ್.ಕೆ. ಅಡ್ವಾಣಿಯವರೇ. ಬಿಜೆಪಿಯೇ ಹೇಳುವ ಪ್ರಕಾರ ಅವರು ಸಾರ್ವಜನಿಕ ನಿರೀಕ್ಷೆಗಳನ್ನು ಗ್ರಹಿಸುವಲ್ಲಿ ಪಕ್ಷದ ಇತರರಿಗಿಂತ ಹೆಚ್ಚು ಸಮರ್ಥರು ಮತ್ತು ಅನುಭವಿ ಕೂಡ. ಕರ್ನಾಟಕದಲ್ಲಿ ಬಿಜೆಪಿಯ ಗೆಲುವಿನ ಬಳಿಕ ನಡೆದ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿಯ ಸಮಾರೋಪ ಭಾಷಣ ಮಾಡಿದ ಅಡ್ವಾಣಿ ಅವರ ಮಾತುಗಳಲ್ಲಿ ಚುನಾವಣಾ ರಣಕಹಳೆ ಮೊಳಗಿಸುವ ದಾಟಿ ಎದ್ದುಕಾಣುತ್ತಿತ್ತು. ಕೇಂದ್ರದಲ್ಲಿ ಮುಂದಿನ ಸರ್ಕಾರವನ್ನು ರಚಿಸುವುದು ಬಿಜೆಪಿಯೇ ಎಂಬುದು ಮುಖ್ಯವಲ್ಲ. ಅಗತ್ಯ ಸಂಖ್ಯಾಬಲದೊಂದಿಗೆ ನಮ್ಮದು ಸದೃಢ ಮತ್ತು ಪ್ರಭಾವಿ ಸರ್ಕಾರವಾಗಬೇಕು ಎಂಬುದು ಎಲ್ಲಕ್ಕಿಂತ ಮುಖ್ಯ. ಆಗ ಮಾತ್ರ ನಮಗೆ ನಮ್ಮ ಪಕ್ಷದ ನೀತಿ ಮತ್ತು ಉತ್ತಮ ಆಡಳಿತದ ಆಶಯವನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದು ಸಾಧ್ಯ. ಅಭಿವೃದ್ಧಿ ಮತ್ತು ಭದ್ರತೆಯ ವಿಷಯದಲ್ಲಿ ಸಾಧನೆ ಮಾಡುವುದಕ್ಕೆ ನಮಗೆ ಸ್ಪಷ್ಟ ಬಹುಮತದ ಅಗತ್ಯವಿದೆ. ಆ ನಿಟ್ಟಿನಲ್ಲಿ ಪಕ್ಷ ಮತ್ತು ನಮ್ಮ ಎನ್‌ಡಿಎ ಒಕ್ಕೂಟದ ಮುಂದಿರುವ ಸವಾಲು ಎಂದರೆ ಇದೀಗ ಮುಂಚೂಣಿಯಲ್ಲಿರುವ ನಮ್ಮ ಚುನಾವಣಾ ಪ್ರಯತ್ನವನ್ನು ಸ್ಪಷ್ಟ ಜಯದತ್ತ ಮುನ್ನಡೆಸುವುದು ಎಂದು ಅಡ್ವಾಣಿ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದ್ದಾರೆ. ಆ ಜಯದ ಅಂತಿಮ ಗುರಿ ಮುಟ್ಟಲು ಬೇಕಾದ ಎಲ್ಲಾ ತಯಾರಿಯನ್ನೂ ಬಿಜೆಪಿ ಈಗಾಗಲೇ ಮಾಡಿಕೊಂಡಿದೆ. ಹಾಗೇ ಅಡ್ವಾಣಿ ಅವರ ನೇತೃತ್ವದ ಪಕ್ಷದ ಉನ್ನತ ಮಟ್ಟದ ಸಮಿತಿ ಸುಷ್ಮಾ ಸ್ವರಾಜ್ ಮತ್ತು ವೆಂಕಯ್ಯನಾಯ್ಡು ಅವರೊಂದಿಗೆ ಪಕ್ಷದ ಸಂಸದರ ನಾಲ್ಕು ವರ್ಷಗಳ ಸಾಧನೆ ಮತ್ತು ವೈಫಲ್ಯಗಳ ಕುರಿತು ತೀರಾ ನಿರ್ದಾಕ್ಷಿಣ್ಯವಾಗಿ ಮೌಲ್ಯಮಾಪನ ಮಾಡಿದೆ. ಪಕ್ಷದ ನಂಬಲರ್ಹ ಮೂಲಗಳ ಪ್ರಕಾರ ಹೊಸ ಹುರುಪಿನ ಯುವ ನಾಯಕರಿಗೆ ಮುಂದಿನ ಚುನಾವಣೆಯಲ್ಲಿ ಆದ್ಯತೆ ನೀಡುವುದು ಶತಸಿದ್ಧವಾಗಿದ್ದು ಈಗಿನ ಸಾಕಷ್ಟು ಸಂಸದರನ್ನು ಟಿಕೆಟ್ ಹಂಚಿಕೆ ವೇಳೆ ಮನೆಗೆ ಕಳಿಸುವುದು ಬಹುತೇಕ ಖಚಿತ.

ಈ ನಿರ್ಧಾರದ ಹಿನ್ನೆಲೆಯಲ್ಲೇ ಪಕ್ಷ ಜೂನ್ ಕೊನೆಯ ವಾರದಲ್ಲಿ ಲೋಕಸಭಾ ಚುನಾವಣೆಗೆ ಪಕ್ಷದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯ ಮೊದಲ ಕಂತನ್ನು ಬಿಡುಗಡೆ ಮಾಡಿದೆ. ಅಡ್ವಾಣಿಯವರನ್ನು ಹೊರತುಪಡಿಸಿ ಪಕ್ಷ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಪ್ರಮುಖರೆಂದರೆ ಅಮೃತಸರದಿಂದ ನವಜೋತ್‌ಸಿಂಗ್ ಸಿಧು ಗುರುದಾಸ್‌ಪುರದಿಂದ ವಿನೋದ್ ಖನ್ನಾ ಪಣಜಿಯಿಂದ ಶ್ರೀಪಾದ್ ನಾಯಕ್ ಪುರಿಯಿಂದ ಲೆಫ್ಟಿನೆಂಟ್ ಜನರಲ್(ನಿವೃತ್ತ) ಟಿ.ಪಿ.ಎಸ್. ರಾವತ್ ಹಿಮಾಚಲಪ್ರದೇಶದ ಹಮೀರ್‌ಪುರದಿಂದ ಆ ರಾಜ್ಯದ ಮುಖ್ಯಮಂತ್ರಿ ಪ್ರೇಮ್‌ಕುಮಾರ್ ಧುಮಾಲ್ ಅವರ ಪುತ್ರ ಅನುರಾಗ್ ಠಾಕೂರ್ ಮತ್ತಿತರರು. ಕಾಂಗ್ರೆಸ್ ಮತ್ತು ಎಡರಂಗದ ನಡುವಿನ ಬೀದಿ ಕಾಳಗದ ನಡುವೆ ಬಿಜೆಪಿ ಲೋಕಸಭಾ ಚುನಾವಣೆಯ ತನ್ನ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ದಿಢೀರನೆ ಬಿಡುಗಡೆ ಮಾಡಿರುವುದು ಒಂದೆಡೆ ಆತ್ಮವಿಶ್ವಾಸದ ನಡೆಯಂತೆಯೂ ಮತ್ತೊಂದೆಡೆ ಅಧಿಕಾರರೂಢ ಪಕ್ಷಗಳಿಗೆ ಇರಿಸು-ಮುರುಸು ಉಂಟುಮಾಡುವಂತೆಯೂ ಹೆಣೆದ ಚತುರ ನಡೆ. ಪಟ್ಟಿ ಬಿಡುಗಡೆಯ ಮೂಲಕ ಚುನಾವಣೆಗೆ ತಾನೆಷ್ಟು ಸಜ್ಜಾಗಿದ್ದೇನೆ ಎಂಬ ಸಂದೇಶವನ್ನು ರಾಷ್ಟ್ರದಾದ್ಯಂತ ರವಾನಿಸುವಲ್ಲಿ ಬಿಜೆಪಿ ಯಶಸ್ವಿಯೂ ಆಗಿದೆ.

ಕಾಂಗ್ರೆಸ್ ಮತ್ತು ಯುಪಿಎ ಲೆಕ್ಕಾಚಾರಗಳನ್ನು ಬುಡಮೇಲು ಮಾಡುವ ನಿಟ್ಟಿನಲ್ಲಿ ಬಿಜೆಪಿ ಈಗಾಗಲೇ ಕಾರ್ಯತಂತ್ರಗಳ ದಾಳ ಉರುಳಿಸಲಾರಂಭಿಸಿದ್ದು ಮುಂದಿನ ಆಗಸ್ಟ್ ಅಂತ್ಯದೊಳಗೆ ಎಲ್ಲಾ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಪಕ್ಷದ ನಾಯಕರು ಹೇಳುತ್ತಿದ್ದಾರೆ. ಇದು ಭಾರತೀಯ ರಾಜಕೀಯದಲ್ಲಿ ಹೊಸ ಬೆಳವಣಿಗೆ. ಇಷ್ಟೊಂದು ಮುಂಚಿತವಾಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದರಿಂದ ಅಭ್ಯರ್ಥಿಗಳಿಗೆ ತಮ್ಮ- ತಮ್ಮ ಕ್ಷೇತ್ರಗಳಲ್ಲಿ ಚುನಾವಣಾ ಕೆಲಸಗಳನ್ನು ಮಾಡಲು ಸಾಕಷ್ಟು ಅವಕಾಶವಿರುತ್ತದೆ ಎಂದು ಮಾಜಿ ಕೇಂದ್ರ ಸಚಿವರೂ ಆದ ರವಿಶಂಕರ್ ಪ್ರಸಾದ್ 'ಟಿಎಸ್‌ಐ'ನೊಂದಿಗೆ ಮಾತನಾಡುತ್ತಾ ಪಕ್ಷದ ಕ್ರಮವನ್ನು ಸಮರ್ಥಿಸಿಕೊಂಡರು.

ಚುನಾವಣಾ ಕಾರ್ಯತಂತ್ರದ ವಿಷಯದಲ್ಲಿ ಬಿಜೆಪಿ ಈಗಾಗಲೇ ಎಲ್ಲವನ್ನೂ ಅಂತಿಮಗೊಳಿಸಿಕೊಂಡಂತಿದೆ. ಈಗಾಗಲೇ ಸಾಕಷ್ಟು ಬಾರಿ ಪರೀಕ್ಷೆಗೊಡ್ಡಿ ಸಾಬೀತುಮಾಡಿಕೊಂಡಿರುವ ಸೂತ್ರವನ್ನೇ ಈ ಬಾರಿ ಪ್ರಯೋಗಿಸಲು ನಿರ್ಧರಿಸಲಾಗಿದೆ. ಚುನಾವಣೆಗೆ ಮುನ್ನವೇ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸುವುದು ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಕೂಡ ಸಾಕಷ್ಟು ಕಾಲಾವಕಾಶವಿರುವಾಗಲೇ ಅಂತಿಮಗೊಳಿಸುವುದು ಚುನಾವಣಾ ಸಂಬಂಧಿ ಎಲ್ಲಾ ಸಮಿತಿಗಳನ್ನೂ ಕ್ರಿಯಾಶೀಲಗೊಳಿಸುವುದು ಪ್ರಣಾಳಿಕೆ ಸಿದ್ಧಪಡಿಸುವುದು ಮತ್ತು ಪ್ರಚಾರ ಕಾರ್ಯವನ್ನು ಕೂಡ ಆದಷ್ಟು ಮುಂಚೆಯೇ ಆರಂಭಿಸುವುದು ನಮ್ಮ ಆ ಸೂತ್ರ. ಆ ಪ್ರಕಾರ ನಾವು ಈಗಾಗಲೇ ನಮ್ಮ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಿದ್ದೇವೆ. ಇನ್ನು ಅಭ್ಯರ್ಥಿಗಳ ಆಯ್ಕೆ ಕೂಡ ಅಗಸ್ಟ್ ಅಂತ್ಯದ ಒಳಗೆ ಪೂರ್ಣಗೊಳ್ಳಲಿದೆ ಎಂದು ಬಿಜೆಪಿಯ ಹಿರಿಯ ನಾಯಕ ವೆಂಕಯ್ಯನಾಯ್ಡು ತಿಳಿಸಿದ್ದಾರೆ. ಯುಪಿಎಗೆ ಹೋಲಿಸಿದರೆ ಬಿಜೆಪಿ ಮತ್ತು ಎನ್‌ಡಿಎಗೆ ಈಗ ಹೊಸ- ಹೊಸ ಚುನಾವಣಾ ವಿಷಯಗಳು ಸಿಕ್ಕಿವೆ. ಇನ್ನು ಬಿಜೆಪಿಯ ಮೂಲಭೂತವಾದಿ ಸಿದ್ಧಾಂತ- ಅಥವಾ ತೀರಾ ಆದ್ಯತಾ ವಿಷಯಗಳು- ವನ್ನು ಬದಿಗೆ ಸರಿಸುವ ಸ್ಥಿತಿಯಂತೂ ಸದ್ಯಕ್ಕೆ ಇಲ್ಲ. ಇನ್ನು ಇದೀಗ ಕಾಶ್ಮೀರ ಕಣಿವೆಯಲ್ಲಿ ಭುಗಿಲೆದ್ದಿರುವ ದೇವಾಲಯ ಭೂಮಿ ವಿವಾದವನ್ನು ಕೈಗೆತ್ತಿಕೊಂಡು ದೇಶವ್ಯಾಪಿ ಹೋರಾಟಕ್ಕೆ ಬಿಜೆಪಿ ಮುಂದಾಗಿದೆ. ಅಮರನಾಥ ಮಂದಿರಕ್ಕೆ ನೀಡಲಾಗಿದ್ದ ಭೂಮಿ ಹಿಂದಕ್ಕೆ ಪಡೆಯುವ ಅಲ್ಲಿನ ರಾಜ್ಯ ಸರ್ಕಾರದ ನಿರ್ಧಾರ ಈಗ ಬಿಜೆಪಿಗೆ ಹೊಸ ಅಸ್ತ್ರವಾಗಿ ಪರಿಣಮಿಸಿದೆ. ಈಗಾಗಲೇ ರಾಮಸೇತು ವಿಷಯದಲ್ಲಿ ದೇಶದಾದ್ಯಂತ ಸಾಕಷ್ಟು ಹೋರಾಟಗಳ ಮೂಲಕ ಸಂಘಟನೆಗೆ ಚುರುಕು ಮುಟ್ಟಿಸಿದ್ದ ಬಿಜೆಪಿಗೆ ಭಯೋತ್ಪಾದನೆ ವಿಷಯದಲ್ಲಿ ಯುಪಿಎ ಮತ್ತು ಎಡರಂಗಗಳ ಮೃದು ಧೋರಣೆ ಕೂಡ ವರವಾಗಿ ಪರಿಣಮಿಸಿದೆ.

ಇವೆಲ್ಲವೂ ನಮ್ಮ ಸೈದ್ಧಾಂತಿಕ ವ್ಯಕ್ತಿತ್ವದ ಭಾಗವೇ ಎನ್ನುವ ಪಕ್ಷದ ಚುನಾವಣಾ ಚಾಣಕ್ಯ ಅರುಣ್ ಜೇಟ್ಲಿ ಆರ್ಥಿಕ ಅಭಿವೃದ್ಧಿಯ ಜೊತೆಯಲ್ಲಿ ಇಂತಹ ವಿಷಯಗಳು ಎಂದಿನಂತೆ ನಮ್ಮ ಪಕ್ಷದ ಸಿದ್ಧಾಂತಗಳಿಗೆ ಹತ್ತಿರವಾಗೇ ಇವೆ ಎಂದು ರಾಮಸೇತು ಕಾಶ್ಮೀರ ಮಂದಿರ ಭೂಮಿ ವಿಷಯಗಳನ್ನು ಸಮರ್ಥಿಸಿಕೊಳ್ಳುತ್ತಾರೆ. ಬಿಜೆಪಿ ಅಧ್ಯಕ್ಷ ರಾಜ್‌ನಾಥ್ ಸಿಂಗ್ ಅವರ ಭಾರತ ಸಂವಿಧಾನದಿಂದ 'ಜಾತ್ಯತೀತ' ಎಂಬ ಪದವನ್ನು ಕಿತ್ತುಹಾಕಿ ಎಂಬ ಹೇಳಿಕೆ 'ನೇಪಾಳದಲ್ಲಿ ಜಾತ್ಯತೀತ ಸರ್ಕಾರ ಇಲ್ಲ' ಎಂಬ ಜಸ್ವಂತ್‌ಸಿಂಗ್ ಅವರ ಹೇಳಿಕೆಗಳನ್ನು ಗಮನಿಸಿದರೆ ಕೆಲವರು ತಿಳಿದಂತೆ ಪಕ್ಷ ತನ್ನ ಬಣ್ಣವನ್ನು ಬದಲಾಯಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ರಾಜಕಾರಣದ ಅತ್ಯಂತ ಚತುರ ಸೂತ್ರಗಳ ರೂವಾರಿ ಚಾಣಕ್ಯನ 'ಅರ್ಥಶಾಸ್ತ್ರ' ಗುರುತಿಸುವ ಆಡಳಿತಗಾರರ ಕೆಲವು ಪ್ರಮುಖ ಲಕ್ಷಣಗಳಲ್ಲಿ ಸಮಯ ಸಂದರ್ಭಕ್ಕೆ ತಕ್ಕಂತೆ ಭಾಷೆಯನ್ನು ಬಳಸಿಕೊಳ್ಳುವುದು ಕೂಡ ಒಂದು. ಅದನ್ನು ಬಿಜೆಪಿ ಅಕ್ಷರಶಃ ಪಾಲಿಸುತ್ತಿರುವಂತಿದೆ. ಏಕೆಂದರೆ ಅಧಿಕಾರದಲ್ಲಿದ್ದಾಗ ಭಾವನಾತ್ಮಕ ವಿಷಯಗಳ ಬಗ್ಗೆ ಏರುದನಿಯಲ್ಲಿ ಮಾತನಾಡದೇ ಅಂತಹ ವಿಷಯಗಳ ಬಗ್ಗೆ ಜಾಣಕಿವುಡತನ ರೂಢಿಸಿಕೊಳ್ಳುವುದು ಆ ಮೂಲಕ ತಾರ್ಕಿಕವಾಗಿ ಸರಿ ಎನ್ನಬಹುದಾದ ಹಾದಿಯಲ್ಲಿರುವಂತೆ ತನ್ನನ್ನು ತಾನು ಬಿಂಬಿಸಿಕೊಳ್ಳುತ್ತಿದೆ. ಒಮ್ಮೆ ಅಧಿಕಾರದಿಂದ ದೂರ ಸರಿದರೆ ಅದೇ ವಿಷಯಗಳನ್ನು ಮುಂದಿಟ್ಟುಕೊಂಡು ದೊಡ್ಡ ಪ್ರಮಾಣದಲ್ಲಿ ಹುಯಿಲೆಬ್ಬಿಸುವುದು ಆ ಮೂಲಕ ತನ್ನ ಬೆಂಬಲಿಗರು ಮತ್ತು ವಿರೋಧಿಗಳಿಬ್ಬರನ್ನೂ ಗೊಂದಲಕ್ಕೆ ಸಿಲುಕಿಸುವುದು. ಇತ್ತೀಚಿನ ಚುನಾವಣಾ ಜಯಗಳು ಸ್ಪಷ್ಟ ಕಾರ್ಯಯೋಜನೆಗಳು ಮತ್ತು ಹೊಸ ಉತ್ಸಾಹಗಳನ್ನು ಹೊರತುಪಡಿಸಿದರೆ ಬಿಜೆಪಿಯ ಸಂಸತ್ ಭವನದ ಅಧಿಕಾರದ ಗದ್ದುಗೆಗೇರುವ ದಾರಿ ಅಂದುಕೊಂಡಷ್ಟು ಸರಳವೂ ಅಲ್ಲ ಸುಲಭವೂ ಅಲ್ಲ. ಆ ದಾರಿಯಲ್ಲಿ ಸಾಕಷ್ಟು ಅಡ್ಡಿಗಳು ಇದ್ದೇ ಇವೆ. ಅದರಲ್ಲಿ ಪ್ರಮುಖವಾದದ್ದೇ ಅದರ ಮಿತ್ರಪಕ್ಷಗಳು. 2004ರ ಚುನಾವಣೆಯ ಹೊತ್ತಿಗಾಗಲೇ ಶಿವಸೇನಾ ಅಕಾಲಿದಳ ಮತ್ತು ಬಿಜು ಜನತಾದಳ ಹೊರತುಪಡಿಸಿ ಉಳಿದ ಬಹುತೇಕ ಮಿತ್ರಪಕ್ಷಗಳು ಬಿಜೆಪಿಗೆ ಸಾಕಷ್ಟು ಕೈಕೊಟ್ಟಿದ್ದವು. ಆಂಧ್ರಪ್ರದೇಶದ ಟಿಡಿಪಿ ಈ ಬಾರಿ ಬಿಜೆಪಿ ಜೊತೆಯಲ್ಲಿ ಚುನಾವಣೆಗೆ ಹೋಗುವಂತೆ ತೋರುತ್ತಿಲ್ಲ. ಈ ಕ್ಷಣಕ್ಕೆ ತಮಿಳುನಾಡಿನಲ್ಲಿ ಬಿಜೆಪಿಯ ಮಿತ್ರರಾರು ವಿರೋಧಿಗಳಾರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಸ್ಸಾಂ ಸದ್ಯಕ್ಕೆ ಚಿತ್ರಣದಲ್ಲೇ ಇಲ್ಲ. ಇನ್ನು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಇನ್ನೂ ತಮ್ಮ ನಿಲುವನ್ನು ಬಹಿರಂಗಪಡಿಸಬೇಕಿದೆ.

ಪಕ್ಷದ ಮುಂದಿರುವ ಅತಿದೊಡ್ಡ ಸವಾಲು ಇದೀಗ ಉತ್ತರಪ್ರದೇಶ. ರಾಜ್ಯದಲ್ಲಿ ಇರುವ ತನ್ನ ಸಂಸದರ 10 ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವುದು ಸಂಸತ್‌ನಲ್ಲಿ ತನ್ನ ಸಂಖ್ಯಾಬಲ ವೃದ್ಧಿಸಿಕೊಳ್ಳುವಲ್ಲಿ ನಿರ್ಣಾಯಕವಾಗಲಿದೆ ಎಂಬುದು ಬಿಜೆಪಿಗೆ ತಿಳಿದಿದೆ. ಅಲ್ಲೀಗ ಮಾಯಾವತಿ ಎಂದಿನಂತೆ ಬಿಜೆಪಿ ಪಾಲಿಗೆ ಹೀಗೆ ಎಂದೂ ನಂಬಲಾಗದ ಆಯ್ಕೆ. ಇನ್ನು ಸಮಾಜವಾದಿ ಪಕ್ಷ ಈಗಾಗಲೇ ಕಾಂಗ್ರೆಸ್ ಜೊತೆ ತೆರೆಮರೆಯಲ್ಲಿ ಕೈಜೋಡಿಸಿಯಾಗಿದೆ. ಹಾಗಾಗಿ ಈಗ ಮಿತ್ರರೇ ಇಲ್ಲದೆ ಚುನಾವಣಾ ಸಮರ ಕಾಯಬೇಕಾದ ಸ್ಥಿತಿ ಬಿಜೆಪಿಯದ್ದು. ಕಲ್ಯಾಣಸಿಂಗ್ ಅವರು ಪಕ್ಷದಿಂದ ದೂರ ಸರಿದ ದಿನದಿಂದಲೇ ತನ್ನ ಮೂಲ ನೆಲೆಯಾದ ರಾಜ್ಯದಲ್ಲೇ ಬಿಜೆಪಿ ಭಾರಿ ಹಿನ್ನಡೆ ಅನುಭವಿಸುತ್ತಲೇ ಇದೆ. ಆ ವಾಸ್ತವವನ್ನು ಅರಿತಿರುವ ಪಕ್ಷದ ನಾಯಕರು ಉತ್ತರಪ್ರದೇಶವೊಂದೇ ಪಕ್ಷದ ಮುಂದಿರುವ ಮಹಾ ಸವಾಲು ಎಂದು ತಮ್ಮತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದಾರೆ ಕೂಡ. ಹಾಗಾಗಿಯೇ ಅರುಣ್ ಜೇಟ್ಲಿ ಅವರಿಗೆ ರಾಜ್ಯದ ಹೊಣೆ ವಹಿಸಲಾಗಿದೆ. ಕರ್ನಾಟಕ ಮತ್ತು ಗುಜರಾತ್‌ನಂತಹ ಮಧ್ಯಮ ಗಾತ್ರದ ರಾಜ್ಯಗಳಲ್ಲಿ ಜಯ ಸಾಧಿಸಿರುವ ಅವರು ಈ ವಿಸ್ತಾರವಾದ ರಾಜ್ಯದಲ್ಲಿ ಹೇಗೆ ತಾನೆ ತಮ್ಮ ಶಕ್ತಿಯನ್ನೆಲ್ಲಾ ಹಾಕಿ ತಂತ್ರಗಾರಿಕೆಯನ್ನು ಪ್ರಯೋಗಿಸಿ ಸ್ಥಾನ ಗಳಿಕೆಯನ್ನು ಹೆಚ್ಚಿಸಬಲ್ಲರು ಎಂಬುದು ಪರೀಕ್ಷೆಗೊಳಗಾಗಲಿದೆ. ಜೊತೆಗೆ ಉತ್ತರ ಪ್ರದೇಶದಲ್ಲಿ ಬಹುಪಕ್ಷಗಳ ಪೈಪೋಟಿ ಇರುವುದೂ ಜೇಟ್ಲಿ ಅವರ ಕಾರ್ಯತಂತ್ರವನ್ನು ಪಣಕ್ಕೊಡ್ಡಲಿದೆ.

ಇತರ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಇರುವಂತೆಯೇ ಈಗ ಬಿಜೆಪಿಯಲ್ಲೂ ಆಂತರಿಕ ಕಚ್ಚಾಟಗಳು ಇದ್ದು ಅವು ದೊಡ್ಡ ಸವಾಲಾಗಿ ಪರಿಣಮಿಸಿದರೂ ಅಚ್ಚರಿಯಿಲ್ಲ. ಬಿಹಾರದಲ್ಲಂತೂ ಅಲ್ಲಿನ ಉಪಮುಖ್ಯಮಂತ್ರಿ ಸುಶೀಲ್ ಮೋದಿಯ ವಿರುದ್ಧವೇ ಅವಿಶ್ವಾಸದ ಪ್ರಶ್ನೆ ಎದುರಾಗಿದೆ. ಅದೂ ಬಿಜೆಪಿಯ ಶಾಸಕರೇ ಅವರಿಗೆ 'ವಿಶ್ವಾಸ ಮತ'ವನ್ನು ನೀಡಬೇಕಾದ ಸ್ಥಿತಿ ಇದೆ. ಇದು ಬಿಜೆಪಿಯ ಈಗಿನ ಸ್ಥಿತಿಯಲ್ಲಿ ತೀರಾ ಅನಪೇಕ್ಷಣೀಯವಾದ ಬೆಳವಣಿಗೆ. ಇನ್ನು ಮಹಾರಾಷ್ಟ್ರದ ಗೋಪಿನಾಥ್ ಮುಂಡೆ ಮತ್ತು ರಾಜಸ್ತಾನದಲ್ಲಿ ಭಿನ್ನಮತೀಯರ ದೊಡ್ಡ ಪಡೆಯೇ ಸೃಷ್ಟಿಯಾಗಿರುವುದು ಕೂಡ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿವೆ. ಭಿನ್ನಮತೀಯ ಚಟುವಟಿಕೆ ಯಾವುದೇ ರಾಜಕೀಯ ಪಕ್ಷದಲ್ಲೂ ಇರುವ ಸಹಜ ಸ್ಥಿತಿ. ಪ್ರಶ್ನೆ ಇರುವುದು ಅದನ್ನು ನಾವು ಹೇಗೆ ನಿರ್ವಹಿಸುತ್ತೇವೆ ಎಂಬುದರಲ್ಲಿ ನಾವು ಅದಕ್ಕೆ ಉತ್ತರ ಕಂಡುಕೊಂಡಿದ್ದೇವೆ ಎನ್ನುವ ರವಿಶಂಕರ್ ಪ್ರಸಾದ್ ಅವರ ಮಾತಿನಲ್ಲಿ ವಿಶ್ವಾಸಕ್ಕಿಂತ ಮಾತಿನ ಚಾತುರ್ಯವೇ ಎದ್ದುಕಾಣುತ್ತದೆ.

ಪಕ್ಷದ ಬೆಂಬಲಿಗರಾದ ಐಟಿ ಪರಿಣಿತರ ಪಡೆ ದೇಶದಾದ್ಯಂತ ಸುಮಾರು 35 ಪ್ರಮುಖ ಕಚೇರಿಗಳಲ್ಲಿ ಕಾರ್ಯಮಗ್ನರಾಗಿದ್ದು ದೇಶದಾದ್ಯಂತ ಇರುವ ಪಕ್ಷದ ಸುಮಾರು 500ರಷ್ಟು ಸ್ಥಳೀಯ ಘಟಕಗಳನ್ನು ಅಂತರ್ಜಾಲದ ಮೂಲಕ ಬೆಸೆಯುವಲ್ಲಿ ಶ್ರಮಿಸುತ್ತಿದ್ದಾರೆ. ಆ ಮೂಲಕ ಬಿಜೆಪಿ ಚುನಾವಣಾ ಪ್ರಚಾರವನ್ನು ತಂತ್ರಜ್ಞಾನ ಯುಗಕ್ಕೆ ಸಜ್ಜುಗೊಳಿಸುತ್ತಿದೆ. ಗುಜರಾತ್‌ನಲ್ಲಿ ನರೇಂದ್ರ ಮೋದಿಯ ಪುನರಾಯ್ಕೆಗೆ ಕಾರಣವಾದ ಹಿಂದುತ್ವ ಮತ್ತು ಆರ್ಥಿಕ ಅಭಿವೃದ್ಧಿಯ ಬೆಸುಗೆಯ ಚುನಾವಣಾ ಮಾದರಿಯನ್ನೇ ಲೋಕಸಭಾ ಚುನಾವಣೆಯಲ್ಲಿ ಅನುಸರಿಸುವುದಾಗಿ ಪಕ್ಷದ ಮುಖಂಡರು ಖಾಸಗಿಯಾಗಿ ಹೇಳುತ್ತಿದ್ದಾರೆ. ಆದರೆ ಇಲ್ಲಿ ಉದ್ಭವಿಸುವ ಪ್ರಶ್ನೆಯೆಂದರೆ ಗುಜರಾತ್‌ಗೆ ಸಲ್ಲುವುದು ಇಡೀ ದೇಶಕ್ಕೂ ಸಲ್ಲುವುದೇ ಎನ್ನುವುದು!

 ಟಿಎಸ್‌ಐ

ರಾಜೀವ್ ಪ್ರತಾಪ್ ರೂಡಿ

'ಜಡ ಸಂಸದರಿಗೆ ಟಿಕೆಟ್ ಇಲ್ಲ'

ಬಿಜೆಪಿಯ ಕ್ರಿಯಾತ್ಮಕ ಯುವ ಪಡೆಯಲ್ಲಿ ರಾಜೀವ್ ಪ್ರತಾಪ್ ರೂಡಿ ಪ್ರಮುಖರು. ಟಿಎಸ್‌ಐ ಜೊತೆ ಮಾತನಾಡಿದ ಅವರು, ಮಾಯಾವತಿ ಬಗ್ಗೆ ಬಿಜೆಪಿ ಹೆದರಬೇಕಾದ ಅಗತ್ಯ ಇಲ್ಲ, ನಮ್ಮ ಸಾಮರ್ಥ್ಯ ಏನು ಎಂಬುದನ್ನು ಇತ್ತೀಚಿನ ವಿಧಾನಸಭಾ ಚುನಾವಣೆಗಳು ತೋರಿಸಿಕೊಟ್ಟಿವೆ ಎಂದು ಹೇಳಿದ್ದಾರೆ.

2004ಕ್ಕೆ ಹೋಲಿಸಿದರೆ 2009ರ ಬಿಜೆಪಿ ಚುನಾವಣಾ ಕಾರ್ಯತಂತ್ರದಲ್ಲಾಗಿರುವ ವ್ಯತ್ಯಾಸವೇನು?

ಗಮನಾರ್ಹ ಬದಲಾವಣೆ ಇದೆ. ಈ ಬಾರಿ ಹೆಚ್ಚು ಜನರು ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ನಾವು ಯೋಜಿಸಿದ್ದೇವೆ. 2004ರ ಚುನಾವಣೆಯ ಸಂದರ್ಭದಲ್ಲಿ ಹಾಗಿರಲಿಲ್ಲ. ಚುನಾವಣಾ ಪ್ರಚಾರ ಮತ್ತು ಆಖಾಡದಲ್ಲಿ ಹೆಚ್ಚು ಜನ ಪಾಲ್ಗೊಳ್ಳುವುದರಿಂದ ಜನರ ಸಹಭಾಗಿತ್ವ ಹೆಚ್ಚಾಗುತ್ತದೆ.

ನಿಮ್ಮ ಪಕ್ಷದ ಚುನಾವಣಾ ಸಮಿತಿಯ ಸಲಹೆಗಳೇನು?

ಈ ಕುರಿತು ಇನ್ನೂ ಚರ್ಚೆಗಳು ನಡೆಯುತ್ತಿವೆ. ಆದರೆ ನೀವು ಹೇಳುತ್ತಿರುವ ಸಮಿತಿಯಂತೂ ಅತ್ಯುತ್ತಮ ಸಲಹೆಗಳನ್ನೇ ನೀಡಲಿದೆ ಎಂಬ ಸಂಪೂರ್ಣ ವಿಶ್ವಾಸ ನಮ್ಮೆಲ್ಲರಲ್ಲಿದೆ. ಒಂದಂತೂ ಸತ್ಯ. ಕೆಲಸ ಮಾಡದ ಹಾಲಿ ಸಂಸದರಿಗಂತೂ ಪಕ್ಷ ಟಿಕೆಟ್ ನೀಡುವುದಿಲ್ಲ. ಜನರಿಗೆ ಸಾಧನೆ ಮಾಡಿದ ನಾಯಕರು ಇಲ್ಲವೇ ಹೊಸ ಮುಖಗಳು ಬೇಕು. ಆ ಮೂಲಕ ನಾವು ರಾಷ್ಟ್ರದಲ್ಲಿ ಹೊಸ ಸಂಚಲನ ಮೂಡಿಸಲಿದ್ದೇವೆ. ಈ ಮಧ್ಯೆ ಸಾಧನೆಯ ಅಂದಾಜು ಮಾಡಲು ಪಕ್ಷದ ಹಿರಿಯ ನಾಯಕರು ದೇಶದ ಮೂಲೆ ಮೂಲೆಗಳಿಗೆ ತೆರಳಿದ್ದಾರೆ. ನಾನೂ ಕೂಡಾ ಸುಲ್ತಾನಪುರ್, ಅಮೇಠಿ, ಮಚಲಿಶಹರ್ ಮುಂತಾದ ಕ್ಷೇತ್ರಗಳಿಗೆ ತೆರಳಿ ಪಕ್ಷದ ಗೆಲುವಿನ ಸಾಧ್ಯಾಸಾಧ್ಯತೆಯನ್ನು ವಿಶ್ಲೇಷಿಸಿದ್ದೇನೆ.

ಬಿಎಸ್‌ಪಿ ನಾಯಕಿ ಮಾಯಾವತಿಯವರಂತೂ ಕಾಂಗ್ರೆಸ್‌ನ ಮತಬ್ಯಾಂಕ್‌ಗೆ ಲಗ್ಗೆ ಹಾಕಿಬಿಟ್ಟಿದ್ದಾರೆ. ಬಿಜೆಪಿಗೂ ಆ ಭಯ ಇದೆಯೇ?

ಭಯದ ಪ್ರಶ್ನೆ ನಮಗೆ ಇಲ್ಲವೇ ಇಲ್ಲ. ಗುಜರಾತ್, ಹಿಮಾಚಲ ಪ್ರದೇಶ ಅಥವಾ ಕರ್ನಾಟಕದಲ್ಲಿ ಮಾಯಾವತಿ ಅವರ ಕುರುಹಾದರೂ ಇದೆಯೇ? ಯಾವುದೇ ಪಕ್ಷಕ್ಕಿಂತ ಹೆಚ್ಚಿನ ದಲಿತ ಶಾಸಕರು ನಮ್ಮ ಪಕ್ಷದಲ್ಲಿದ್ದಾರೆ. ಯಾವುದೇ ಸಂದರ್ಭದಲ್ಲೂ ನಾವು ಮಾಯಾವತಿ ಅವರೊಂದಿಗೆ ಕೈ ಜೋಡಿಸುವುದಿಲ್ಲ. ಆ ವಿಷಯದಲ್ಲಿ ಪಕ್ಷ ದೃಢ ನಿಲುವು ಹೊಂದಿದೆ.

ಪರಮಾಣು ಒಪ್ಪಂದ ವಿಫಲವಾಗುತ್ತಿರುವ ಬಗ್ಗೆ ಏನು ಹೇಳುತ್ತೀರಿ?

123 ಒಪ್ಪಂದದಲ್ಲಾಗಲೀ, ದೇಶದ ಸಾರ್ವಭೌಮತ್ವದ ವಿಷಯದಲ್ಲಾಗಲೀ ಯಾವುದೇ ರಾಜಿ ಇಲ್ಲ. ಇದನ್ನು ನಾವು ಮೊದಲಿನಿಂದಲೂ ಹೇಳುತ್ತಿದ್ದೇವೆ.

ಚುನಾವಣೆಯಲ್ಲಿ ಮುಖ್ಯ ಸಂಗತಿಗಳಾವುವು?

ಭಯೋತ್ಪಾದನೆ, ಹಣದುಬ್ಬರ, ರೈತರ ಸಂಕಷ್ಟ, ಓಲೈಕೆಯ ರಾಜಕಾರಣ ಜೊತೆಗೆ ಸಾಮಾಜಿಕ-ಧಾರ್ಮಿಕ ಸಂಗತಿಗಳಾದ ಅಮರನಾಥ ದೇವಾಲಯ, ರಾಮ ಸೇತು, ಅಯೋಧ್ಯ ಮತ್ತಿತರ ವಿಷಯಗಳ ಬಗ್ಗೆಯೂ ಪಕ್ಷ ದನಿ ಎತ್ತಲಿದೆ. ಇದಲ್ಲದೆ ಯುಪಿಎ ಸರ್ಕಾರದ ಜಡತ್ವ, ನಾಯಕರ ಅಸಮರ್ಥತೆ ಹಾಗೂ ಸಚಿವರ ನಡುವಿನ ಸಂಘರ್ಷಗಳನ್ನೂ ಜನರ ಮುಂದಿಡುತ್ತೇವೆ. ಒಟ್ಟಾರೆ ನಾವು ಸಮರ್ಪಕ ರಣತಂತ್ರಗಳ ಮೂಲಕವೇ ಚುನಾವಣೆಗೆ ಮುಂದಡಿಯಿಡಲಿದ್ದೇವೆ ಎಂಬುದು ಸ್ಪಷ್ಟ.

ಮಿತ್ರ ಪಕ್ಷಗಳ ಬಗ್ಗೆ ಏನು?

ನಮ್ಮ ಮಿತ್ರ ಪಕ್ಷಗಳೆಲ್ಲಾ ನಮ್ಮೊಂದಿಗೇ ಇದ್ದಾರೆ. ಇದೇ ಸಂದರ್ಭದಲ್ಲಿ ದೇಶಾದ್ಯಂತ ಬಿಜೆಪಿ ಏಕಪಕ್ಷೀಯವಾಗಿ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿದೆ ಎಂಬ ಅಂಶವನ್ನೂ ನಿಮ್ಮ ಗಮನಕ್ಕೆ ತರುತ್ತೇನೆ. ದಕ್ಷಿಣ ಭಾರತದಲ್ಲಿ ನಮ್ಮದೇ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಈಶಾನ್ಯದಲ್ಲಿ ಮಿತ್ರ ಪಕ್ಷಗಳೊಂದಿಗೆ ಆಡಳಿತ ನಡೆಸುತ್ತಿದ್ದೇವೆ. ಹೀಗಾಗಿ ಪಕ್ಷ ಬೃಹತ್ತಾಗಿ ವಿಸ್ತಾರವಾಗುತ್ತಿದೆ.

ಟಿಎಸ್‌ಐ

ರವಿಶಂಕರ್ ಪ್ರಸಾದ್

'ಬಿಜೆಪಿ ಕುಟುಂಬ ರಾಜಕಾರಣದ ಪಕ್ಷ ಅಲ್ಲ'

ಹಿಂದಿನ ಎನ್‌ಡಿಎ ಸರ್ಕಾರದಲ್ಲಿ ಸಚಿವರಾಗಿದ್ದ ರವಿಶಂಕರ್ ಪ್ರಸಾದ್ ಅವರು ಟಿಎಸ್‌ಐ ಜೊತೆ ಮಾತನಾಡಿ, ಮೈತ್ರಿ ಪಕ್ಷಗಳೊಂದಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಬಿಜೆಪಿಯಲ್ಲಿರುವ ಆಂತರಿಕ ಭಿನ್ನಾಭಿಪ್ರಾಯ ಸಹಜ ಎಂದು ಅಭಿಪ್ರಾಯಪಟ್ಟಿದ್ದಾರೆ.

ಚುನಾವಣೆಗೆ ಬಿಜೆಪಿ ಹೇಗೆ ಸಜ್ಜಾಗುತ್ತಿದೆ?

ಚೆನ್ನಾಗಿ ಆಗುತ್ತಿದೆ. ಕೇಂದ್ರದ ಈಗಿನ ಯುಪಿಎ ಒಕ್ಕೂಟ ಅವಕಾಶವಾದಿ ಪಕ್ಷಗಳ ಅಸಹಜ ಒಪ್ಪಂದ. ಬಿರುಕು ಹೆಚ್ಚಾಗಿ ಈಗ ಆ ಒಕ್ಕೂಟ ಛಿದ್ರವಾಗುತ್ತಿದೆ. ಅದರ ಪರಿಣಾಮವಾಗಿ ನಾವು ಚುನಾವಣೆಗೆ ತಯಾರಾಗುತ್ತಿದ್ದೇವೆ.

ಯುಪಿಎ ಸರ್ಕಾರ ಉರುಳಲಿದೆಯೇ?

ಇದರಲ್ಲಿ ಕೆಲವು ಅಂಶಗಳಿವೆ. ನನ್ನ ಪ್ರಕಾರ ಚುನಾವಣೆ ನಿಗದಿತವಾಗಿಯೇ ನಡೆಯಲಿದೆ. ಎಡಪಕ್ಷಗಳು ಬೆಂಬಲ ಹಿಂದಕ್ಕೆ ಪಡೆಯಬಹುದು. ಅತ್ತ ಸಮಾಜವಾದಿ ಪಕ್ಷ ತಾತ್ಕಾಲಿಕವಾಗಿ ಸರ್ಕಾರವನ್ನು ಬೆಂಬಲಿಸಬಹುದು. ಏಕೆಂದರೆ ಎನ್‌ಡಿಎ ಹೊರತುಪಡಿಸಿ ಇತರ ಪಕ್ಷಗಳಿಗೆಲ್ಲಾ ತಮ್ಮ ಅವಧಿ ಮುಗಿಯುತ್ತಾ ಬಂತು ಎಂಬ ಅರಿವಾಗಿದೆ. ಹೀಗಾಗಿ ಕೊನೆ ಕ್ಷಣದವರೆಗೆ ಅಧಿಕಾರಕ್ಕೆ ಅಂಟಿಕೊಳ್ಳಲು ಆ ಪಕ್ಷಗಳು ಹವಣಿಸುತ್ತಿವೆ.

ಮೈತ್ರಿ ಕೂಟ ಸರ್ಕಾರದ ಯುಗ ಮುಂದುವರಿಯಲಿದೆ ಎಂದು ನಿಮ್ಮ ಮಿತ್ರಪಕ್ಷಗಳು ನಂಬಿದ್ದಾವೆಯೇ?

ಎನ್‌ಡಿಎ ಈಗಾಗಲೇ ಬಲಿಷ್ಠವಾಗಿದೆ. ನಮ್ಮ ಸಾಂಪ್ರದಾಯಿಕ ಮಿತ್ರರು ನಮ್ಮ ಜೊತೆ ಇದ್ದಾರೆ. ಬಿಜೆಡಿ ಅಕಾಲಿ ಶಿವಸೇನಾ ಜೆಡಿಯು... ಈ ಎಲ್ಲಾ ಪಕ್ಷಗಳೂ ನಮ್ಮ ಜೊತೆ ಇವೆ; ಮತ್ತು ಅವರವರ ವ್ಯಾಪ್ತಿಯಲ್ಲಿ ನಮಗೆ ಭಾರಿ ಬೆಂಬಲ ನೀಡುತ್ತಿವೆ. ಇಂದು ರಾಷ್ಟ್ರದ 12 ಪ್ರಮುಖ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಇದೆ: 7 ರಾಜ್ಯಗಳಲ್ಲಿ ಬಿಜೆಪಿ ಏಕಪಕ್ಷೀಯ ಆಡಳಿತ ಇದ್ದರೆ ಇನ್ನುಳಿದ 5 ರಾಜ್ಯಗಳಲ್ಲಿ ಮೈತ್ರಿಕೂಟ ಸರ್ಕಾರದಲ್ಲಿ ಭಾಗಿಯಾಗಿದೆ. ಎಲ್ಲಕ್ಕಿಂತ ಮುಖ್ಯವಾದ ವಿಷಯ ಜನರ ಮನೋಭಾವ. ಯುಪಿಎ ದುರಾಡಳಿತದ ಬಗ್ಗೆ ಜನರು ರೋಸಿ ಹೋಗಿದ್ದಾರೆ. ಬಿಜೆಪಿ ಮತ್ತು ಎನ್‌ಡಿಎಗೆ ಸಂಪೂರ್ಣ ಬೆಂಬಲ ಇದೆ.

ವಿಧಾನ ಸಭಾ ಚುನಾವಣೆಯ ಬಗ್ಗೆ ಹೇಳುವುದಾದರೆ ಈ ವರ್ಷದ ಕೊನೆಗೆ ಚುನಾವಣೆ ಎದುರಿಸಲಿರುವ ರಾಜ್ಯಗಳಲ್ಲೂ ಬಿಜೆಪಿ ಆಡಳಿತ ವಿರೋಧಿ ಅಲೆ ಎದುರಿಸಬೇಕಿದೆಯಲ್ಲಾ?

ನಾನು ಛತ್ತೀಸ್‌ಗಡದ ಉಸ್ತುವಾರಿ ವಹಿಸಿದ್ದೇನೆ. ಈಗ ಅಲ್ಲಿಂದಲೇ ಬಂದೆ. ಅಲ್ಲಿ ರಾಮನ್ ಸಿಂಗ್ ಬಹುದೊಡ್ಡ ವಿಕಾಸ ಯಾತ್ರೆ ಆಯೋಜಿಸಿದ್ದರು. ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ನಮ್ಮ ನಾಯಕರು ಎಷ್ಟೊಂದು ಜನಪರ ಕಾರ್ಯ ಮಾಡಿದ್ದಾರೆಂದರೆ ಅಲ್ಲಿ ಆಡಳಿತ ವಿರೋಧಿ ಅಲೆ ಇಲ್ಲ. ಹಾಗೆಯೇ ಮಧ್ಯಪ್ರದೇಶದಲ್ಲೂ ಕಾಂಗ್ರೆಸ್‌ಗೆ ಹೋಲಿಸಿದರೆ ಬಿಜೆಪಿ ದಾಖಲೆ ಉತ್ತಮವಾಗೇ ಇದೆ. ರಾಜಸ್ಥಾನದಲ್ಲೂ ಇದೇ ಸ್ಥಿತಿ ಇದ್ದು ಬಿಜೆಪಿ ತನ್ನ ಪ್ರಭಾವವನ್ನು ವಿಸ್ತರಿಸಿಕೊಂಡಿದೆ.

ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವ್ಯತ್ಯಾಸ ಏನು?

ಎನ್‌ಡಿಎ ಸರ್ಕಾರ ಉತ್ತಮ ಆರ್ಥಿಕ ವ್ಯವಸ್ಥೆ ರೂಪಿಸಿತ್ತು. ಜನರು ಪಡಿತರ ಚೀಟಿಗಳನ್ನು ಮರೆತೇ ಹೋಗಿದ್ದರು. ಸುಲಭದಲ್ಲಿ ಸಾಲ ಲಭ್ಯವಿತ್ತು. ಜೀವನ ಮಟ್ಟ ಉತ್ತಮವಾಗಿತ್ತು. ಈಗಿನ ಸ್ಥಿತಿ ನೋಡಿ: ಜೀವನ ನಡೆಸಲು ನೀವು ಹೋರಾಡಬೇಕಿದೆ. ಏನನ್ನೂ ಪಡೆಯಬೇಕಾದರೂ ಉದ್ದನೆ ಸಾಲಿನಲ್ಲಿ ನಿಲ್ಲಬೇಕು. ಆರ್ಥಿಕ ಪ್ರಗತಿಯಂತೂ ಸ್ಥಗಿತವಾಗಿಬಿಟ್ಟಿದೆ.

ನಿಮ್ಮ ಪಕ್ಷದ ಬಂಡಾಯ ಬಗ್ಗೆ ಏನನ್ನುತ್ತೀರಿ?

ಭಿನ್ನಾಭಿಪ್ರಾಯಗಳು ಅಸಹಜವೇನೂ ಅಲ್ಲ. ನಮ್ಮದು ಆಂತರಿಕ ಪ್ರಜಾಸತ್ತೆಯ ಪಕ್ಷ; ಇಲ್ಲಿ ಕುಟುಂಬ ರಾಜಕಾರಣ ಇಲ್ಲ.

ಟಿಎಸ್‌ಐ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :