ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಆರ್ಥಿಕ ಬಿಕ್ಕಟ್ಟು
 
ದೇಶ ಕಟ್ಟುವ ಧೀರನ ನಿರೀಕ್ಷೆಯಲ್ಲಿ ಅಮೆರಿಕ
 

ಅಮೆರಿಕನ್ನರ ಆತಂಕದ ಪ್ರಮುಖ ವಿಚಾರ ದೇಶದ ಇಂದಿನ ಪರಿಸ್ಥಿತಿಯೇ ವಿನಾ ಅಲ್‌ಖೈದಾ ಅಥವಾ ಇರಾಕ್ ಅಲ್ಲ

ಥಾಮಸ್ ಫ್ರೀಡ್ಮನ್

ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ, 'ನ್ಯೂಯಾರ್ಕ್ ಟೈಮ್ಸ್' ಮಾಜಿ ಪತ್ರಕರ್ತ

ಬಾರಕ್ ಒಬಾಮ ಅವರಿಗೆ ವಿದೇಶಾಂಗ ನೀತಿ ಅನುಭವದ ಕೊರತೆ ಇರುವುದರಿಂದ ಅವರು ಅತಿ ಕಠಿಣ ರಾಷ್ಟ್ರೀಯ ಭದ್ರತಾ ನೀತಿ ಹೊಂದಿದ ಅಭ್ಯರ್ಥಿಯೊಬ್ಬರನ್ನು ಉಪಾಧ್ಯಕ್ಷ ಹುದ್ದೆಗೆ ಆಯ್ಕೆ ಮಾಡಿಕೊಳ್ಳಬೇಕು; ಹಾಗೂ ಜಾನ್ ಮೆಕೇನ್ ಅವರು ತಮ್ಮ ವೃದ್ಧಾಪ್ಯದ ಕಾರಣಕ್ಕಾಗಿ ಒಬ್ಬ ಉತ್ಸಾಹಿ ತರುಣ ಅಭ್ಯರ್ಥಿಯನ್ನು ಉಪಾಧ್ಯಕ್ಷ ಹುದ್ದೆಗೆ ಆಯ್ಕೆ ಮಾಡಬೇಕು ಎಂಬುದು ಕೆಲವು ತಿಂಗಳ ಹಿಂದಿನ ಅಭಿಪ್ರಾಯವಾಗಿತ್ತು.

ಆದರೆ ಮುಂದಿನ ಆಗಸ್ಟ್ ವೇಳೆಗೆ ಇವರಿಬ್ಬರೂ ತಮ್ಮ 'ಡೆಪ್ಯುಟಿ' (ಉಪಾಧ್ಯಕ್ಷ) ಸ್ಥಾನಕ್ಕೆ ಒಬ್ಬ ಆರ್ಥಿಕ ಮಾಂತ್ರಿಕನ ಹುಡುಕಾಟದಲ್ಲಿರುತ್ತಾರೆ ಎಂದು ನಾನು ಭವಿಷ್ಯ ನುಡಿಯುತ್ತೇನೆ. ಆ ಸಮಯದಲ್ಲಿ ತಲೆದೋರಬಹುದಾದ ಆರ್ಥಿಕ ಅವ್ಯವಸ್ಥೆಯ ಸುಳಿಯಿಂದ ಅಮೆರಿಕವನ್ನು ಪಾರುಮಾಡಲು ಆತ ನೆರವಾಗಬಹುದೆಂಬ ಭರವಸೆಯಿಂದ ಅವರು ಹೀಗೆ ಮಾಡಬಹುದು.ಇರಾಕ್‌ನಲ್ಲಿ ಪರಿಸ್ಥಿತಿ ಈಗಿನದ್ದಕ್ಕಿಂತ ಉತ್ತಮವಾಗಲಿ ಅಥವಾ ಇನ್ನಷ್ಟು ಹದಗೆಡಲಿ ಮುಂಬರುವ ನವೆಂಬರ್ ವೇಳೆಗೆ ಈ ಅಂಶ ಮುಖ್ಯವಾಗುವುದೇ ಇಲ್ಲ. ಇರಾಕ್‌ನಲ್ಲಿ ದೇಶ ನಿರ್ಮಾಣ ಕಾರ್ಯ ಅಷ್ಟೊಂದು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ ಎಂಬುದನ್ನು ನಾನು ನಂಬುವುದಿಲ್ಲ. ಒಂದು ವೇಳೆ ಇರಾಕ್ ಪರಿಸ್ಥಿತಿ ಸುಧಾರಿಸಿದರೆ ನಾವು ಆ ವಿಚಾರವನ್ನು ಮರೆಯುತ್ತೇವೆ; ಅಲ್ಲಿ ಮತ್ತಷ್ಟು ಬಿಕ್ಕಟ್ಟು ನಿರ್ಮಾಣವಾದರೆ, ಸಾಧ್ಯವಾದಷ್ಟು ಬೇಗ ಇರಾಕ್‌ನಿಂದ ಹೊರಬರಬೇಕಾದ ಒತ್ತಡಕ್ಕೆ ಅಮೆರಿಕದ ಅಧ್ಯಕ್ಷರು ಒಳಗಾಗಬೇಕಾಗುತ್ತದೆ. ಆದರೆ ನನ್ನ ಪ್ರಕಾರ ಇರಾಕ್‌ನಲ್ಲಲ್ಲ, ಬದಲಿಗೆ ಅಮೆರಿಕದಲ್ಲೇ ರಾಷ್ಟ್ರ ನಿರ್ಮಾಣ ಕಾರ್ಯದ ಅಗತ್ಯ ಅತ್ಯಂತ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ.

ಅಮೆರಿಕನ್ನರ ಆತಂಕದ ಪ್ರಮುಖ ವಿಚಾರವೆಂದರೆ ಇಂದಿನ ಅಮೆರಿಕದ ಪರಿಸ್ಥಿತಿಯೇ ವಿನಾ ಅಲ್‌ಖೈದಾ ಅಥವಾ ಇರಾಕ್ ಅಲ್ಲ. ಪ್ರಸಕ್ತ ಚುನಾವಣೆಯಲ್ಲಿ ಇರಾಕ್ ಅಥವಾ ಭಯೋತ್ಪಾದನೆ ವಿಚಾರವನ್ನೇ ಪ್ರಮುಖ ಅಸ್ತ್ರವನ್ನಾಗಿಟ್ಟುಕೊಂಡು ಗೆಲ್ಲುತ್ತೇವೆ ಎಂದು ಯಾರಾದರೂ ನಂಬಿಕೊಂಡಿದ್ದರೆ ಅದು ಮೂರ್ಖತನ ಅಷ್ಟೆ. ಈಗ ವಸ್ತುಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಇಲ್ಲಿಯವರೆಗೆ ಗ್ರಾಹಕರ ವೆಚ್ಚ, ಉತ್ಪಾದನೆ ಹಾಗೂ ರಫ್ತು ಸ್ಥಿರವಾಗಿದ್ದ ಸಂದರ್ಭದಲ್ಲಿ ಬಂಡವಾಳ ಮಾರುಕಟ್ಟೆಯ ಸಾಲ ಸಂಕಷ್ಟದಿಂದ ನಿರ್ಮಾಣವಾದ ಆರ್ಥಿಕ ಬಿಕ್ಕಟ್ಟನ್ನಷ್ಟೇ ನಾವು ಎದುರಿಸುತ್ತಿದ್ದೆವು. ಆದರೆ ಆರೋಗ್ಯಕರ ಉದ್ಯಮಗಳಿಗೆ ಸಾಲ ನೀಡಲು ಬ್ಯಾಂಕ್‌ಗಳು ನಿರಾಕರಿಸುತ್ತಿರುವುದು, ಇಂಧನ ಹಾಗೂ ಆಹಾರದ ಬೆಲೆ ಗಗನಕ್ಕೇರುತ್ತಿರುವುದು ಇವೇ ಮೊದಲಾದ ಕಾರಣಗಳಿಂದ ಇನ್ನು ಮುಂದೆ ಬಳಕೆದಾರರು ತಮ್ಮ ಖರ್ಚುಗಳಿಗೆ ಕಡಿವಾಣ ಹಾಕಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಈಗಿನ ಸನ್ನಿವೇಶದಲ್ಲಿ ಗಾಳಿಯಲ್ಲಿ ಹಾರಿಬರುತ್ತಿರುವ ಹುಲ್ಲನ್ನೂ ನಿರ್ಲಕ್ಷಿಸಲು ಸಾಧ್ಯವಿಲ್ಲ. ಇಂದು ಅಮೆರಿಕದ ಯಾವುದಾದರೂ ಕಾರು ಡೀಲರ್‌ಶಿಪ್ ತಾಣಕ್ಕೆ ನೀವು ಭೇಟಿ ನೀಡಿದರೆ ಮಾರಾಟವಾಗದೇ ಉಳಿದಿರುವ ಎಸ್‌ಯುವಿ (ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್)ಗಳ ದೊಡ್ಡ ಸಾಲುಗಳನ್ನೇ ಕಾಣಬಹುದು. ಒಂದು ವೇಳೆ ಈಗಾಗಲೇ ನೀವು ಗ್ಯಾಸ್ ಚಾಲಿತ ದೊಡ್ಡ ಕಾರನ್ನು ಹೊಂದಿದ್ದರೆ ಅಲ್ಲಿಗೆ ನಿಮ್ಮ ಕಥೆ ಮುಗಿದಂತೆಯೇ. ಗುರುವಾರದಂದು 'ಪಾಮ್ ಬೀಚ್ ಪೋಸ್ಟ್' ಎಸ್‌ಯುವಿ ಹಾಗೂ ಸದ್ಯದ ಪರಿಸ್ಥಿತಿಯಲ್ಲಿ ಅದರ ಬಳಕೆ ಕುರಿತಾಗಿ ಒಂದು ಲೇಖನ ಪ್ರಕಟಿಸಿತ್ತು. ಅದರಲ್ಲಿ 'ಒಂದೋ ಎಸ್‌ಯುವಿಗೆ ಒಂದು ಬಾರಿ ಗ್ಯಾಸ್ ತುಂಬಿಸಲು 100 ಡಾಲರ್ ನೀಡುವುದನ್ನು ಮುಂದುವರೆಸಿ. ಇಲ್ಲವೇ ಅಗ್ಗದ ಬೆಲೆಗೆ ಅದನ್ನು ಮಾರಾಟ ಮಾಡಿ; ಅಥವಾ ಮಾರುಕಟ್ಟೆ ಮುಂಚಿನ ಸ್ಥಿತಿಗೆ ಮರಳುತ್ತದೆ ಎಂಬ ವಿಶ್ವಾಸದಲ್ಲೇ ನಿಮ್ಮ ಮನೆ ಮುಂದೆ ವಾಹನ ನಿಲ್ಲಿಸಿಕೊಂಡು ಅಪರೂಪಕ್ಕೆ ಉಪಯೋಗಿಸಿ' ಎಂಬ ಸಲಹೆಗಳನ್ನು ನೀಡಲಾಗಿತ್ತು. ಮುಂದಿನ ವರ್ಷದಿಂದ ಬಸ್‌ನ ಇಂಧನ ಖರ್ಚು ಉಳಿಸುವುದಕ್ಕಾಗಿ ಹೆಚ್ಚಿನ ಮಕ್ಕಳು ನಡೆದೇ ಶಾಲೆಗಳಿಗೆ ಹೋಗಬೇಕಾಗುತ್ತದೆ ಎಂದು ನಾನು ವಾಸವಾಗಿರುವ ಮೇರಿಲ್ಯಾಂಡ್‌ನ ಮಾಂಟ್‌ಗೋಮರಿ ಕೌಂಟಿ ಘೋಷಿಸಿದೆ.

ಈ ಎಲ್ಲಾ ಬಿಕ್ಕಟ್ಟುಗಳಿಗೆ ಕಿರೀಟವಿಟ್ಟಂತೆ, ಬ್ಯಾಂಕ್‌ಗಳ ಸಂಕಷ್ಟ ತೀವ್ರವಾಗುತ್ತಲೇ ಇದೆ. ಎರಡು ವಾರಗಳ ಹಿಂದೆ, ಗೋಲ್ಡ್‌ಮನ್ ಸ್ಯಾಚ್‌ನ ವಿಮರ್ಶಕರೊಬ್ಬರು ಗ್ರಾಹಕ ಸಾಲಗಳು ಮುಳುಗಲಾರಂಭಿಸಿದರೆ, ಮಾರ್ಟ್‌ಗೇಜ್ ಹಾಗೂ ಇನ್ನಿತರ ನಷ್ಟಗಳಿಂದ ಪಾರಾಗಲು ಅಮೆರಿಕದ ಬ್ಯಾಂಕ್‌ಗಳಿಗೆ ಸುಮಾರು 65 ಬಿಲಿಯನ್ ಡಾಲರ್‌ಗಳ ನೆರವು ಬೇಕಾಗಬಹುದು ಎಂದು ಹೇಳಿದ್ದರು. ಬುಷ್ ಅವರು ಅಧಿಕಾರಕ್ಕೆ ಬಂದಾಗಿನಿಂದಲೂ ನಮ್ಮ ರಾಷ್ಟ್ರೀಯ ಉಳಿತಾಯ ದರ ಒಟ್ಟು ರಾಷ್ಟ್ರೀಯ ಉತ್ಪನ್ನದ ಶೇ. 6ರಿಂದ ಶೇ. 1ಕ್ಕೆ ಇಳಿದಿದೆ. ಅಲ್ಲದೆ ಗ್ರಾಹಕ ಸಾಲ 8 ಟ್ರಿಲಿಯನ್ ಡಾಲರ್‌ನಿಂದ 14 ಟ್ರಲಿಯನ್ ಡಾಲರ್‌ಗೆ ಏರಿಕೆಯಾಗಿದೆ.

ಅಮೆರಿಕನ್ ಬಂಧುಗಳೇ: ನಾವೀಗ ಸಾಲದಲ್ಲಿ ಮುಳುಗಿರುವ ಹಾಗೂ ಅವನತಿಯತ್ತ ಸಾಗುತ್ತಿರುವ ನಾಡಿನಲ್ಲಿದ್ದೇವೆ. ಅಂದರೆ ನಮ್ಮ ಸ್ಥಿತಿ ಪರಿಹಾರ ಕಾಣದ ಸಮಸ್ಯೆಗಳಿಂದ ಕೂಡಿದ ಅಥವಾ ಸರಿಪಡಿಸಲಾಗದ ಸ್ಥಿತಿಯಲ್ಲ, ಕೇವಲ ಅವನತಿಯತ್ತ ಸಾಗುತ್ತಿರುವ ಸ್ಥಿತಿ. ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುವ ಪ್ರಜಾಪ್ರಭುತ್ವ ಇರಾಕಿಗಳು ಮತ್ತು ಅಫ್ಫನ್ನರಿಗಿಂತ ಮಿಗಿಲಾಗಿ ಈಗ ಅಮೆರಿಕಕ್ಕೆ ಬೇಕಾಗಿದೆ. ನಮಗೀಗ ನಮ್ಮದೇ ರಾಷ್ಟ್ರ ನಿರ್ಮಿಸುವ ಅವಶ್ಯಕತೆಯಿದೆ. ಆದರೆ ಈ ನಿಟ್ಟಿನಲ್ಲಿ ನಮ್ಮ ರಾಜಕೀಯ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ವಿಪರ್ಯಾಸ. ವಾಲ್‌ಸ್ಟ್ರೀಟ್ ಜರ್ನಲ್‌ನ ಅಂಕಣಕಾರ ಗೆರಾಲ್ಡ್ ಸೀಬ್ ಅವರ ಪ್ರಕಾರ, 'ವೈಫಲ್ಯವನ್ನೇ ನಿರೀಕ್ಷಿಸುವ ರಾಜಕೀಯ ವ್ಯವಸ್ಥೆಯೊಂದು, ದೇಶ ಕಟ್ಟಲು ಯಾವುದೇ ಗಂಭೀರ ಯತ್ನಕ್ಕೆ ಕೈ ಹಾಕುವುದಿಲ್ಲ.'ಗೊಲ್ಡ್‌ಮನ್ ಸ್ಯಾಚ್‌ನ ಉಪಾಧ್ಯಕ್ಷ ರಾಬರ್ಟ್ ಹೋರ್ಮರ್ಟ್ಸ್ ಹೇಳುವಂತೆ, ನಾವು ಕಠಿಣ ಪರಿಶ್ರಮ ಪಡುತ್ತಿದ್ದೆವು. ಸ್ಪುಟ್ನಿಕ್ (ಉಪಗ್ರಹ) ಉಡಾವಣೆಯ ನಂತರ ನಾವು ಒಂದು ರಾಷ್ಟ್ರವಾಗಿ ತಂತ್ರಜ್ಞಾನ, ಮೂಲಸೌಕರ್ಯ ಮತ್ತು ಶೈಕ್ಷಣಿಕ ಕ್ರಾಂತಿಯಿಂದ ಸಾಧನೆಯತ್ತ ಹೆಜ್ಜೆ ಹಾಕಿದೆವು. 1973ರ ಇಂಧನ ಬಿಕ್ಕಟ್ಟಿನ ನಂತರ ನಾವು ಒಗ್ಗಟ್ಟಾಗಿ ಇಂಧನ ಸಾಮರ್ಥ್ಯದಲ್ಲಿ ನಾಟಕೀಯ ಬೆಳವಣಿಗೆಗಳನ್ನು ದಾಖಲಿಸಿದೆವು. ಆದರೆ ಇಂದು, ಯಾವುದೇ ರೀತಿಯ ದೀರ್ಘಕಾಲೀನ ಸುಧಾರಣೆಯನ್ನು ಬೆಂಬಲಿಸುವಂತಹ ಒಂದು ನಿರ್ಣಾಯಕ ಸಮೂಹವನ್ನು ಹುಟ್ಟುಹಾಕಲು ರಾಜಕೀಯ ವ್ಯವಸ್ಥೆ ವಿಫಲವಾಗಿದೆ' ಎನ್ನುತ್ತಾರೆ.

ಅಮೆರಿಕದ ಹಳೆಯ ಉಕ್ತಿ, 'ಜನರಲ್‌ನ ಮೋಟಾರ್‍ಸ್‌ನ ಶೇರುಗಳು ಗಗನಕ್ಕೆ ಚಿಮ್ಮಿದಂತೆ ಅಮೆರಿಕವೂ ಉನ್ನತಿಯತ್ತ ಸಾಗುತ್ತದೆ' ಎಂಬುದು ನಿಜವಾಗಿದ್ದರೆ, ನಾವೀಗ ನಿಜವಾಗಿಯೂ ಗಂಭೀರ ಸಮಸ್ಯೆಯಲ್ಲಿದ್ದೇವೆ. ಯಾಕೆಂದರೆ ಟೊಯೋಟಾದ 162.6 ಬಿಲಿಯನ್ ಡಾಲರ್ ಶೇರ್‌ಗೆ ಹೋಲಿಸಿದರೆ 'ಜನರಲ್ ಮೋಟಾರ್‍ಸ್'ನ ಶೇರು ಮೌಲ್ಯ ಕೇವಲ 6.47 ಬಿಲಿಯನ್ ಡಾಲರ್‌ಗೆ ಕುಸಿದಿದೆ. ಇದೂ ಸಾಲದೆಂಬಂತೆ, ಜನರಲ್ ಮೋಟಾರ್‍ಸ್‌ನ ಶೇರು 34 ವರ್ಷಗಳ ಇತಿಹಾಸದಲ್ಲಿಯೇ ಅತ್ಯಂತ ತಳಮಟ್ಟಕ್ಕೆ ಕುಸಿಯಿತು. ಸದ್ಯಕ್ಕೆ ಇದೇ ನಮ್ಮ ಪರಿಸ್ಥಿತಿ. ನಾವೀಗ 34 ವರ್ಷಗಳ ಇತಿಹಾಸದಲ್ಲೇ ಅತ್ಯಂತ ತಳಮಟ್ಟದಲ್ಲಿದ್ದೇವೆ. ಈ ತಳಮಟ್ಟದ ಕೂಪದಿಂದ ಹೊರಬರುವುದೇ ಮುಂದಿನ ಚುನಾವಣೆಯ ಧ್ಯೇಯವಾಗಿರಬೇಕು. ಮತ್ತೊಂದು ಭಯೋತ್ಪಾದಕ ದಾಳಿ ನಡೆದರೂ, ಇರಾಕ್‌ನಲ್ಲಿ ಯುದ್ಧ ಸ್ಫೋಟಿಸಿದರೂ ಅಥವಾ ಶಾಂತಿ ಕುಡಿಯೊಡೆದರೂ ಮುಂದಿನ ಚುನಾವಣೆಯ ಧ್ಯೇಯ ಬದಲಾಗಬಾರದು. ನಾವೀಗ ನಮ್ಮ ನಾಡಿನಲ್ಲೇ ದೇಶ ಕಟ್ಟುವ ಕಾಯಕ ಮಾಡಬೇಕಿದೆ. ಇದನ್ನು ಪ್ರಾರಂಭಿಸಲು ನಾವು ಮತ್ತೊಂದು ವರ್ಷಕ್ಕಾಗಿ ಕಾಯುವಂತಿಲ್ಲ. ಹಾಗಾಗಿ ಯಾವ ಅಭ್ಯರ್ಥಿ ಈ ಬದಲಾವಣೆಯನ್ನು ತರಲು ಸಮರ್ಥ ಎಂದು ನಿಮಗನ್ನಿಸುತ್ತದೆಯೋ ಅವರಿಗೇ ನಿಮ್ಮ ಮತ ಚಲಾಯಿಸಿ. ಉಳಿದೆಲ್ಲಾ ವಿಚಾರಗಳಿಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟುಬಿಡಿ.

ಟಿಎಸ್‌ಐ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .