|

'ಚಿತ್ರಾ'
'ಹುಚ್ಚ'ದ
ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ನೀಡಿದರೂ ನಂತರ ತೆಲುಗು, ತಮಿಳಿನತ್ತ
ಹೊರಳಲು ಕಾರಣ?
ನನಗೆ ಅದೃಷ್ಟ ಮತ್ತು ದೇವರ ಮೇಲೆ ಬಹಳ ನಂಬುಗೆ
ಇದೆ. ನಾನೇನೂ ಉದ್ದೇಶಪೂರ್ವಕವಾಗಿ ಈ ನಿರ್ಧಾರ ಕೈಗೊಂಡದ್ದಲ್ಲ. ಅವಕಾಶ
ದೊರಕಿತು, ಹೋದೆ ಅಷ್ಟೆ. ಆದರೆ ಬೇರೆ ಭಾಷೆಯಲ್ಲಿ ನಟಿಸಿದ ಮಾತ್ರಕ್ಕೆ
ಮೂಲವನ್ನು ಮರೆತಳು ಎನ್ನುವುದು ಸರಿಯಲ್ಲ.
ಆದರೆ ನೀವು ಕನ್ನಡ ಚಿತ್ರರಂಗ ಪ್ರವೇಶಿಸಿದ ಸಂದರ್ಭ
ಪ್ರತಿಸ್ಪರ್ಧಿಗಳೂ ಇರಲಿಲ್ಲ. ಇಲ್ಲೇ ನೆಲೆ ನಿಲ್ಲುವ ಅವಕಾಶ ಹೇರಳವಾಗಿತ್ತು...
ಹೌದು. ನಾನು ಇಲ್ಲಿಗೆ ಬಂದ ಸಂದರ್ಭ
ಪ್ರತಿಸ್ಪರ್ಧಿಗಳಾರೂ ಇರಲಿಲ್ಲ. ಆದರೆ ಒಬ್ಬ ವ್ಯಕ್ತಿ ಬೆಳೆಯುವುದು ಸ್ಪರ್ಧೆ
ಇದ್ದಾಗಷ್ಟೇ. ನನ್ನ ಪ್ರಕಾರ ನೆಲೆ ನಿಲ್ಲುವುದು ಬಿಡುವುದೆಲ್ಲಾ ಅದೃಷ್ಟದಾಟ.
'ಹುಚ್ಚ'ದಲ್ಲಿ
ದಾವಣಿ ಹುಡುಗಿ ಪಾತ್ರದ ನಂತರ ಮಿನಿ ಸ್ಕರ್ಟ್‌ಗಳಲ್ಲಿ ಕಾಣಿಸಿಕೊಂಡಿದ್ದೇ
ಹೆಚ್ಚು. ಇತ್ತೀಚೆಗೆ ಮತ್ತೆ ಗೌರಮ್ಮನ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದೀರಾ...
ನಾನು ಗೌರಮ್ಮ ಎಂಬ ಪದದ ಬಳಕೆಯನ್ನೇ
ಒಪ್ಪುವುದಿಲ್ಲ. ಬದಲಿಗೆ ಸಾಂಪ್ರದಾಯಿಕ ಪಾತ್ರಗಳು ಎನ್ನಬಹುದು. ಅಭಿನೇತ್ರಿ
ಎಂದರೆ ಪಾತ್ರಗಳಲ್ಲಿ ವೈವಿಧ್ಯತೆ ಇರಬೇಕು. ಒಂದೇ ತೆರನಾದ ಪಾತ್ರಗಳನ್ನು
ಮಾಡುತ್ತಿದ್ದರೆ ಪ್ರೇಕ್ಷಕ ಎಷ್ಟು ದಿನ ನೋಡುತ್ತಾನೆ? ಹಾಗಾಗಿ ಎಂತಹ
ಪಾತ್ರಗಳಲ್ಲಿ ಅಭಿನಯಿಸಲೂ ನಾನು ರೆಡಿ.
ಹಿಂದೆ ಕೇವಲ ಅಭಿನಯ ಪ್ರತಿಭೆಯಿಂದಲೇ ಕನ್ನಡದಲ್ಲಿ
ನೆಲೆ ನಿಂತ ನಟಿಯರಿದ್ದರು. ಈಗಿನ ನಟಿಯರು ಗ್ಲಾಮರ್ ಇದ್ದರೂ ಒಂದೆಡೆ ನೆಲೆ
ನಿಲ್ಲಲು ಸೋಲುತ್ತಿರಲು ಕಾರಣ ಪ್ರತಿಭೆಯ ಕೊರತೆಯೇ?
ಆಗಿನ ಕಾಲಕ್ಕೂ ಇಂದಿನ ಪರಿಸ್ಥಿತಿಗೂ ಬಹಳ
ವ್ಯತ್ಯಾಸವಿದೆ. ಈಗ ಉದ್ಯಮದ ಶೈಲಿ ಬದಲಾಗುತ್ತಿದೆ. ಅಂದಿಗೆ ಹೋಲಿಸಿದರೆ
ಚಿತ್ರರಂಗ ಈಗ ಸಂಪೂರ್ಣ ಬದಲಾಗಿದೆ. ನಿರ್ದೇಶಕರು, ನಿರ್ಮಾಪಕರು ಬಯಸಿದಂತೆ
ನಟಿಯರಿರಬೇಕಾಗುತ್ತದೆ. ಹಾಗೆಂದು ಅವರೇ ಎಲ್ಲದಕ್ಕೂ ಹೊಣೆ ಎನ್ನಲಾರೆ. ಆದರೆ
ಬದಲಾಗುತ್ತಿರುವ ಕಾಲಮಾನಕ್ಕೆ ಸರಿಯಾಗಿ ಗ್ಲಾಮರ್ ಲೋಕ ಸೃಷ್ಟಿಯಾಗುತ್ತದೆ.
ಹಿಂದೆ ಮಹಿಳಾ ಪ್ರಧಾನ ಚಿತ್ರ ನಿರ್ಮಿಸುತ್ತಿದ್ದರು. ಆದರೀಗ ನಾಯಕನಿಗೇ
ಹೆಚ್ಚಿನ ಮಹತ್ವ. ಹಾಗಾಗಿ ಮಹಿಳೆ ಕೇವಲ ಗ್ಲಾಮರ್ ಗೊಂಬೆಯಾಗುತ್ತಿದ್ದಾಳೆ.
ಇನ್ನು ಒಂದೆಡೆ ನೆಲೆ ನಿಲ್ಲಲು ನಟಿಯರು ಸೋಲುತ್ತಿರುವುದಕ್ಕೆ ಕಾರಣ ಏನೆಂದು
ನನಗೂ ತಿಳಿಯುತ್ತಿಲ್ಲ.
ಕನ್ನಡದಲ್ಲಿ ನೆಲೆ ನಿಲ್ಲಲು ಸಾಧ್ಯವಾಗಿಲ್ಲ ಎಂದು
ರೇಖಾ ತೆಲುಗಿಗೆ ತೆರಳಿ ಗ್ಲಾಮರಸ್ ಪಾತ್ರಗಳಲ್ಲಿ ನಟಿಸಿದರು ಎಂಬ ಮಾತಿಗೆ
ಏನೆನ್ನುತ್ತೀರಿ?
ಇವೆಲ್ಲ ಪೂರ್ವಗ್ರಹಪೀಡಿತ ಹೇಳಿಕೆ.
'ನಿನ್ನ ನೇಡು
ರೇಪು'
ಚಿತ್ರದಲ್ಲಿ ನಿರ್ದೇಶಕರು ಹಾಡಿನ ದೃಶ್ಯವೊಂದನ್ನು ಮಾದಕವಾಗಿ
ಚಿತ್ರಿಸಿದ್ದರು. ಹಾಗೆ ನೋಡಹೋದರೆ 'ಚಿತ್ರಾ'ದಲ್ಲೂ
ನಾನು ಗ್ಲಾಮರಸ್ ಪಾತ್ರದಲ್ಲೇ ನಟಿಸಿದ್ದೆ. ಆದರೆ ತೆಲುಗಿನಲ್ಲಿ
ಅಭಿನಯಿಸಿದಾಗ ಮಾತ್ರ ದೊಡ್ಡ ಸುದ್ದಿಯಾಯಿತು. ಹಾಗೆ ಹೇಳುವವರ ಎದುರು ನನ್ನ
ಅಭಿನಯದ ಹಳೆಯ ಚಿತ್ರಗಳ ಹಾಡನ್ನು ಪ್ಲೇ ಮಾಡಿ ತೋರಿಸಬೇಕು. ಆಗ ಎಲ್ಲವೂ
ನೆನಪಾಗಬಹುದು!
ತೆಲುಗಿನಲ್ಲಿ ಅಕ್ಷರ ಎಂದು ಹೆಸರು ಬದಲಿಸಿಕೊಳ್ಳಲು
ಕಾರಣ?
ತೆಲುಗು ಟಿವಿ ಚಾನೆಲ್ ಒಂದು ಅಪಘಾತದಲ್ಲಿ
ರೇಖಾ ಮೃತಪಟ್ಟಿದ್ದಾಳೆ ಎಂಬ ಸುದ್ದಿ ಬಿತ್ತರಿಸಿತು. ಇದು ಅಶುಭದ ಸೂಚನೆ
ನೀಡಿದಂತಾಗಿದ್ದರಿಂದ ಅಕ್ಷರ ಎಂದು ಹೆಸರು ಬದಲಿಸಿಕೊಂಡೆ. ಆದರೆ ಬದಲಾದ
ಹೆಸರನ್ನು ತೆಲುಗು
ಚಿತ್ರರಂಗದಲ್ಲಿ ಮಾತ್ರ
ಬಳಸಿಕೊಳ್ಳುತ್ತಿದ್ದೇನೆ. ಅದೃಷ್ಟವಶಾತ್ ನಾನಿನ್ನೂ ಬದುಕಿಯೇ ಇದ್ದೇನೆ!
ಥ್ಯಾಂಕ್ ಗಾಡ್...
ನಾಯಕರು 40
ವರ್ಷ ಕಳೆದರೂ ಹೊಸ ನಾಯಕಿಗೆ ಹೀರೋ ಆಗುತ್ತಲೇ ಇರುತ್ತಾರೆ. ಆದರೆ ನಟಿ
ಮೂಲೆಗುಂಪಾಗಿ ಬಿಡುತ್ತಾಳೆ. ಏಕೆ ಹೀಗೆ?
ಇದು ನನ್ನನ್ನೂ ಬಹಳವಾಗಿ ಕಾಡಿದ ಪ್ರಶ್ನೆ.
ನಾನೂ ಉತ್ತರದ ಹುಡುಕಾಟದಲ್ಲಿದ್ದೇನೆ. ಭಾರತೀಯ ಚಿತ್ರ ಜಗತ್ತಿನಲ್ಲಿ ಮಾತ್ರ
ಹೀಗಾಗುತ್ತದೆ. ಆದರೆ ಹಾಲಿವುಡ್‌ನಲ್ಲಿ ಪರಿಸ್ಥಿತಿ ಹೀಗಿಲ್ಲ. ಅಲ್ಲಿ
40
ವರ್ಷದ ನಂತರವೂ ನಟಿ ಅಭಿನಯಿಸುತ್ತಲೇ ಇರುತ್ತಾಳೆ.
ಒಂದು ಪಾತ್ರಕ್ಕೆ ನಿಮ್ಮನ್ನು ಹೇಗೆ
ಸಿದ್ಧಪಡಿಸಿಕೊಳ್ಳುತ್ತೀರಿ?
ಚಿತ್ರದ ಆಯ್ಕೆ ಮಾಡಿಕೊಳ್ಳುವಾಗಲೇ ನನ್ನ
ಪಾತ್ರದ ಬಗ್ಗೆ ಸಂಪೂರ್ಣ ತಿಳಿದುಕೊಳ್ಳುತ್ತೇನೆ. ಕೆಲವರು ಹೋಂವರ್ಕ್
ಮಾಡುತ್ತಾರೆ. ಇನ್ನು ಕೆಲವರು ಶೂಟಿಂಗ್ ಸೆಟ್‌ನಲ್ಲೇ ಸನ್ನಿವೇಶ
ಅರ್ಥೈಸಿಕೊಂಡು ಅಭಿನಯಿಸುತ್ತಾರೆ. ನಾನು ಎರಡನೇ ವರ್ಗಕ್ಕೆ ಸೇರಿದವಳು.
ಹಾಗಾಗಿ ಪೂರ್ವಸಿದ್ಧತೆ ಎಂದೇನೂ ಮಾಡಿಕೊಳ್ಳುವುದಿಲ್ಲ.
ನೀವು ಕನ್ನಡ ಚಿತ್ರರಂಗ ಪ್ರವೇಶಿಸಿದಾಗ ಇದ್ದ
ಪರಿಸ್ಥಿತಿಗೂ ಈಗಲೂ ಆಗಿರುವ ವ್ಯತ್ಯಾಸ? ಮತ್ತು ನಿಮ್ಮಲ್ಲಾದ ವೈಯಕ್ತಿಕ
ಬೆಳವಣಿಗೆ?
ಹೆಚ್ಚಿನದೇನೂ ಆಗಿಲ್ಲ. ನಾನು ಪ್ರವೇಶಿಸುವ
ಹೊತ್ತಿಗಾಗಲೇ ಚಿತ್ರರಂಗದಲ್ಲಿ ಬಹಳಷ್ಟು ಬದಲಾವಣೆಗಳಾಗಿ ಬಿಟ್ಟಿದ್ದವು.
ಆಗಲೇ ನಿರ್ದೇಶಕರು ಹೊಸ ನಟರನ್ನು ತಮ್ಮ ಚಿತ್ರಗಳಲ್ಲಿ ಹಾಕಿಕೊಂಡು ಪ್ರಯೋಗ
ಮಾಡಲಾರಂಭಿಸಿದ್ದರು. ಇನ್ನು ವೈಯಕ್ತಿವಾಗಿ ನಾನು ಬಹಳಷ್ಟು ಬದಲಾಗಿದ್ದೇನೆ.
ಆಗ ನನಗಿನ್ನೂ ವೃತ್ತಿಯ ಆರಂಭ. ಅಲ್ಲಿಂದ ಇಲ್ಲಿಯವರೆಗೆ ಬಹಳಷ್ಟು ವಿಷಯವನ್ನು
ಚಿತ್ರರಂಗ ನನಗೆ ಕಲಿಸಿದೆ. ಇನ್ನೂ ಕಲಿಯುತ್ತಲೇ ಇದ್ದೇನೆ.
ರೇಖಾ ಎಂದಾಕ್ಷಣ 'ಜಿಂಕೆಮರಿ'
ಎಂದೇ ನೆನಪಾಗುತ್ತದೆಯೇ ಹೊರತು ಅದ್ಭುತ ಅಭಿನೇತ್ರಿ ಎಂದಲ್ಲ. ನಿಮ್ಮ ಅಭಿನಯ
ಸಾಮರ್ಥ್ಯದ ಬಗ್ಗೆ ವಿಮರ್ಶಕರು ಯಾವತ್ತೂ ಟೀಕಿಸುತ್ತಾರಲ್ಲ...
ಬಹುಶಃ ಅವರ ಅಭಿಪ್ರಾಯ ಸರಿ ಇರಬಹುದು. ನನಗೆ
ಎಲ್ಲಾ ಗೊತ್ತು, ನಾನು ಅದ್ಭುತವಾಗಿ ಅಭಿನಯಿಸಬಲ್ಲೆ ಎಂಬುದನ್ನು ನಾನು
ಒಪ್ಪಿಕೊಳ್ಳುವುದಿಲ್ಲ. ಆರೋಗ್ಯಕರ ವಿಮರ್ಶೆಯನ್ನು ನಾನು ಯಾವತ್ತೂ
ಒಪ್ಪಿಕೊಳ್ಳುತ್ತೇನೆ. ಒಬ್ಬ ವ್ಯಕ್ತಿ ಬೆಳೆಯಲು ಅದು ಪೂರಕ.
ಭಾವನಾತ್ಮಕ ಪಾತ್ರಗಳು ನಿಮಗೊಪ್ಪುವುದಿಲ್ಲ ಎಂಬ
ಗಾಂಧಿನಗರಿಯ ಮಾತಿಗೆ ಏನೆನ್ನುತ್ತೀರಿ?
ಇದು ಪ್ರೇಕ್ಷಕನ ಅಭಿಪ್ರಾಯಕ್ಕೆ ಬಿಟ್ಟದ್ದು.
'ಹೆತ್ತರೆ
ಹೆಣ್ಣನ್ನೇ ಹೆರಬೇಕು'
ಚಿತ್ರದಲ್ಲಿ ಸಾಯಿ ಪ್ರಕಾಶ್ ಅವರು ನನ್ನ ಮೇಲೆ ವಿಶ್ವಾಸವಿಲ್ಲದಿದ್ದರೆ
ಅಂತಹ ಪಾತ್ರ ನೀಡುತ್ತಲೇ ಇರಲಿಲ್ಲ ಅಲ್ಲವೇ? ಪ್ರೇಕ್ಷಕ ನನ್ನನ್ನು ಕೇವಲ
ಶಾರ್ಟ್
ಸ್ಕರ್ಟ್‌ನಲ್ಲೇ ಒಪ್ಪಿಕೊಳ್ಳುತ್ತಾನೆ ಎಂದು
ನಾನು ಅಂತಹ ಪಾತ್ರದಲ್ಲಷ್ಟೇ ನಟಿಸಲು ಸಾಧ್ಯವಿಲ್ಲ. ಇನ್ನು ಅವರು ನನ್ನನ್ನು
ಆ ರೀತಿ ಒಪ್ಪಿಕೊಂಡಿಲ್ಲ ಎಂದು ಕೈಕಾಲು ಕಟ್ಟಿ ಕುರ್ಚಿಯಲ್ಲಿ ಕೂರಿಸಿ
ಚಿತ್ರ ನೋಡು ಎಂದು ನಾನಂತೂ ಒತ್ತಾಯ ಮಾಡುವುದಿಲ್ಲ!
ಚಿತ್ರವೊಂದು ಮುಗಿದ ನಂತರ ಪತ್ರಿಕಾಗೋಷ್ಠಿಯಲ್ಲಾಗಲೀ,
ಸಾರ್ವಜನಿಕವಾಗಿ ನೀವು ಕಾಣಿಸಿಕೊಳ್ಳದೆ ದೂರವೇ ಉಳಿದುಬಿಡಲು ಕಾರಣ?
ನಾನು ಮೂಲತಃ ಏಕಾಂಗಿಯಾಗಿ ಇರಲು ಬಯಸುವವಳು.
ನಾನು ಕೆಲವೊಮ್ಮೆ ಚಿತ್ರೀಕರಣ ಎಂದು ಬೇರೆ ಸ್ಥಳದಲ್ಲೋ ಅಥವಾ ಪ್ರಯಾಣದಲ್ಲೋ
ಬ್ಯುಸಿಯಾಗಿರುತ್ತೇನೆ. ಆಗ ಪತ್ರಿಕಾಗೋಷ್ಠಿಗೆಂದೇ ಬರುವುದು ಕಷ್ಟ. ಆದರೆ
ಸ್ಥಳದಲ್ಲೇ ಇದ್ದಾಗ ಚಿತ್ರದ ಪ್ರಚಾರ ಕಾರ್ಯದಲ್ಲಿ ನಾನು ತೊಡಗಿಕೊಂಡಿದ್ದೇನೆ.
ಕನ್ನಡದ ನಟಿಯರು ವೃತ್ತಿಪರರಲ್ಲ ಎಂಬ ಅಭಿಪ್ರಾಯವಿದೆ...
ಬೇರೆಯವರ ಬಗ್ಗೆ ನಾನು ಹೇಳಲಾರೆ. ಆದರೆ
ನಾನಂತೂ ತುಂಬಾ ವೃತ್ತಿಪರಳು. ಇನ್ನು ಮಾಧ್ಯಮಗಳು ಸುದ್ದಿಯ ಒಂದು ಮುಖವಷ್ಟೇ
ಜನರಿಗೆ ತಿಳಿಯುವಂತೆ ಮಾಡುತ್ತದೆ. ಇನ್ನೊಂದು ಮುಖ ತಿಳಿಸುವುದೇ ಇಲ್ಲ. ಮಗು
ಅಳುತ್ತಿದ್ದರೆ, ಅದು ಬೊಬ್ಬಿಡುವುದಷ್ಟೇ ಸುದ್ದಿಯಾಗುತ್ತದೆ. ಆದರೆ ಯಾರೋ
ಚುಚ್ಚಿರುವುದೇ ಅದು ಅಳುತ್ತಿರಲು ಕಾರಣ ಎಂಬುದನ್ನು ಮರೆತು ಬಿಡುತ್ತೇವೆ.
ಹೊರಗಿನವರನ್ನು ಕರೆತಂದು ಅವರು ಹೇಳಿದಂತೆ ಕುಣಿಯುವ ಇಲ್ಲಿನ ಮಂದಿಗೆ
ಕನ್ನಡದವರು 'ಹಿತ್ತಲ
ಗಿಡ ಮದ್ದಲ್ಲ'
ಎಂಬಂತಾಗಿದೆ.
ಸದ್ಯ ಕೈಯಲ್ಲಿರುವ ಸಿನಿಮಾಗಳು?
ತೆಲುಗಿನ 'ನಿನ್ನ
ನೇಡು ರೇಪು'
ಬಿಡುಗಡೆಗೆ ಸಿದ್ಧವಾಗಿದೆ. ಕನ್ನಡದಲ್ಲಿ ಸಂಜಯ್ ನಿರ್ದೇಶನದಲ್ಲಿ ತರುಣ್
ಜೊತೆ 'ಪರಿಚಯ'
ಚಿತ್ರದಲ್ಲಿ ನಟಿಸುತ್ತಿದ್ದೇನೆ. ಇದರಲ್ಲಿ ಮಧ್ಯಮ ವರ್ಗದ ಹುಡುಗಿಯ ಪಾತ್ರ.
ಪರಿಚಯ ಎಂಬ ಪದದ ಸುತ್ತ ಕಥೆ ಹೆಣೆಯಲಾಗಿದೆ.
ಬಾಯ್‌ಫ್ರೆಂಡ್...
ಅಯ್ಯೋ, ಯಾರೂ ಇಲ್ಲ. ಯಾರಾದ್ರೂ ಇದ್ರೆ
ಖಂಡಿತ ತಿಳಿಸಿ. ಆದ್ರೆ ಸುಮ್ನೆ ಯಾರ್‍ಯಾರನ್ನೋ ಅಲ್ಲ. ಪಕ್ಕಾ ಎಲಿಜಿಬಲ್
ಬ್ಯಾಚುಲರ್ ಆಗಿರ್‍ಬೇಕು!
ಟಿಎಸ್‌ಐ
|