ಮರುಕಳಿಸಿದ ಮಧುರ ಮೈತ್ರಿ
ಒಂದು ಕಾಲದಲ್ಲಿ ಚಿತ್ರ ಜಗತ್ತಿನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ ಈ ಅನುಪಮ ಸಂಗಾತಿಗಳನ್ನು ಕಳೆದ ೨೫ ವರ್ಷಗಳಿಂದ ಚಿತ್ರಪ್ರೇಮಿಗಳು ಜೊತೆಯಾಗಿ ನೋಡಿದ್ದೇ ಇಲ್ಲ. ಅದು ರೇಖಾ ಮತ್ತು ಅಮಿತಾಬ್ ಎಂಬ ರೋಮಾಂಚನ ಹುಟ್ಟಿಸಿದ ಸುಂದರ ಪ್ರೇಮಪಕ್ಷಿಗಳು. ಈಗ ಮತ್ತೆ ಈ ಜೋಡಿ ಕಾಜೋಲ್- ಕಮಲ್ ಹಾಸನ್ ಮುಖ್ಯ ಪಾತ್ರದಲ್ಲಿರುವ 'ವಾಲ್ಟ್ ಸಿಡ್ನಿ' ನಿರ್ಮಾಣದ 'ಮರ್ಮ ಯೋಗಿ' ಚಿತ್ರದಲ್ಲಿ ಅಭಿನಯಿಸುತ್ತಿದೆ. ೨೫ ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಪ್ರೇಕ್ಷಕ ಮಹಾಶಯನ ಕಣ್ಣು ತಂಪಾಗುತ್ತಿದೆ. ಧನ್ಯೋಸ್ಮಿ...
.
ಪೂಜಾ ಖುಷಿ

ತನ್ನ ಅಗತ್ಯವೇ ಕಾಣದಿದ್ದ 'ಆಕ್ಸಿಡೆಂಟ್' ಚಿತ್ರದ ಸಾಧಾರಣ ಯಶಸ್ಸು, 'ಹನಿ ಹನಿ' ತೋಪಾಗಿದ್ದು... ಇವ್ಯಾವುದಕ್ಕೂ ಈ 'ಮುಂಗಾರು ಮಳೆ' ಬೆಡಗಿ ತಲೆ ಕೆಡಿಸಿಕೊಂಡಿಲ್ಲ. ಒಂದು ಸಾಂಗ್‌ಗೆ ಕುಣಿದ ಚಿತ್ರವೆಲ್ಲ ಗೆದ್ದಿದ್ದೇ ಮಹಾ ಸಾಧನೆ ಎಂದು ಬೀಗುತ್ತಿದ್ದಾಳೆ ಈ ಸ್ಯಾಂಡಲ್‌ವುಡ್ ರಾಣಿ! ಅದೇ ಸಂಭ್ರಮದಲ್ಲಿ ಸಾಲು ಸಾಲು ಚಿತ್ರಗಳಿಗೆ ಸಹಿ ಹಾಕಿದ್ದೇ ಬಂತು. ಒಂದೊಂದಾಗಿ ಎಲ್ಲಾ ಬಿಡುಗಡೆಯಾದಾಗ್ಲೇ ಸತ್ಯ ಗೊತ್ತಾಗುತ್ತೆ ಬಿಡಿ ಅಂದ್ರಾ? ಅದೆಲ್ಲಾ ಹಾಗಿರ್‍ಲಿ ಸ್ವಾಮಿ... ಈಗೀಗಂತೂ ಪೂಜಾ ಗಾಂಧಿ ಹಿಂದಿಗಿಂತಲೂ ಖುಷಿ ಖುಷಿಯಾಗಿ ಓಡಾಡ್ಕೊಂಡಿದಾರೆ ಅಂತ ಸುದ್ದಿ. ಅಯ್ಯೋ, ಆಪಾಟಿ ಹಣ ಮಾಡಿದ್ದಕ್ಕಲ್ಲ, 'ತಾಜ್‌ಮಹಲ್' ಎರಡನೇ 'ಮುಂಗಾರು ಮಳೆ'ಯಾಗುತ್ತದೆ ಅನ್ನೋದು ಪೂಜಾಳ ಅದಮ್ಯ ವಿಶ್ವಾಸ!!
ಹುಡುಗರಿಗೆ ಬರವೇ?
ಹಾಲಿವುಡ್ ಲಲನೆಯರಿಗೆ ಮಾಡೋಕೆ ಬೇರೆ ಕೆಲಸವೇ ಇದ್ದಂತಿಲ್ಲ. ಏನಿಲ್ಲವೆಂದರೂ ಜೊತೆಗೊಂದು ಬಾಯ್‌ಫ್ರೆಂಡ್ ಅಂತೂ ಇರಲೇಬೇಕು. ಅದು ಓತಿಕ್ಯಾತವಾದರೂ ಅಡ್ಡಿಯಿಲ್ಲ! ಜೆನಿಫರ್ ಆನಿಸ್ಟನ್, ಕ್ಯಾಮರೂನ್ ಡಯಾಸ್‌ಳ ಮಾಜಿ ಪ್ರಿಯತಮ ಜಾನ್ ಮೇಯರ್ ಜೊತೆ ತಿರುಗಾಡುತ್ತಿದ್ದರೆ, ಡಯಾಸ್ ಜೆನ್‌ಳ ಹಳೇ ಗೆಳೆಯ ಪೌಲ್ ಸ್ಕೂಲ್ಫರ್ ಜೊತೆ ಹೊಟೇಲ್‌ನಲ್ಲಿ ಕಿಸಿಕಿಸಿ ಅನ್ನುತ್ತಿದ್ದಳು. ಕಮಾನ್ ಗರ್ಲ್ಸ್... ಹುಡುಗರಿಗಂತೂ ಈಗ ಬರವಿಲ್ಲ. ಸ್ಪರ್ಧೆ ನಡೀಲಿ.. ನಾವು ಜೈ ಅನ್ನೋಣ!
ಬರುತ್ತಿದ್ದಾನೆ 'ಡೆಡ್ಲಿ' ನಟ...

'ಡೆಡ್ಲಿ ಸೋಮ' ನಂತರ ಆಕ್ಷನ್ ಚಿತ್ರಾನೇ ಸಿಕ್ಕಿಲ್ಲ ಅಂತ ಅಲವತ್ತುಕೊಂಡಿದ್ದ ಆದಿತ್ಯ ಕಂಗಳು ಈಗ ಮಿಂಚಾಗಿವೆ. ಸಖತ್ ಚಿತ್ರಾನೇ ಹೊಡೆದಿದ್ದಾನೆ ಗುರೂ! ಸಿನಿಮಾ ಹೆಸ್ರು 'ರಕ್ತಾಕ್ಷ'. ಸೇನಾ ಹಗರಣಗಳನ್ನು ತನಿಖೆ ಮಾಡುವ ಗುಪ್ತಚರ ಇಲಾಖೆ ಅಧಿಕಾರಿ ಪಾತ್ರ. ಇದಕ್ಕಾಗಿ ಆದಿತ್ಯ 'ಧೋನಿ' ಸ್ಟೈಲ್ ಕೂದಲನ್ನೂ ಬೆಳೆಸಿದ್ದಾನೆ. 'ಆದಿ', 'ಲವ್', 'ಸ್ನೇಹಾನಾ ಪ್ರೀತೀನಾ' ಎನ್ನುತ್ತಾ ಸಾಲು ಸಾಲು ಠುಸ್ ಚಿತ್ರಗಳನ್ನು ನೀಡಿದ ನಂತರ ಆದಿತ್ಯ ಸ್ಯಾಂಡಲ್‌ವುಡ್‌ನಿಂದಲೇ ಮಾಯವಾಗಿದ್ದ. 'ರಕ್ತಾಕ್ಷ' ಓಡುತ್ತಾ? ಕುಂಟುತ್ತಾ? ಗೊತ್ತಿಲ್ಲ ಸ್ವಾಮಿ...
ಇಷ್ಟೆಲ್ಲಾ ಬ್ಯುಸಿಯಾದ್ರೆ...
ಸಿದ್ಧ ನಿಯಮಗಳನ್ನು ಮುರಿಯುವುದೇ ಪ್ರಿಯಾಂಕ ಚೋಪ್ರಾ ಅಭ್ಯಾಸವಿರಬೇಕು. 'ನಟಿಯರು ಸ್ನೇಹಿತೆಯರಾಗಲು ಸಾಧ್ಯವಿಲ್ಲ' ಎಂಬ ಮಾತೇ ಇರಬಹುದು ಅಥವಾ ನಟರು ವೃತ್ತಿಪರರಲ್ಲ ಎಂದದ್ದೇ ಇರಬಹುದು... ಒಟ್ಟು ಏನಾದರೊಂದು ಹೇಳುತ್ತಾ (ಆದ್ರೆ ಇದೆಲ್ಲಾ ಸತ್ಯ ಬಿಡಿ!) ಕಿರಿಕ್ ಮಾಡೋದೆ ಜಾಯಮಾನ. ಆದರೆ ಈ ಬಾರಿ ನಮ್ಮ ಮಿಸ್ ವರ್ಲ್ಡ್ ಸಮಸ್ಯೆ ಸ್ವಲ್ಪ ಡಿಫರೆಂಟ್ ಆಗಿತ್ತು. ಕರಣ್ ಜೋಹರ್ 'ದೋಸ್ತಾನ' ಚಿತ್ರದ ಚಿತ್ರೀಕರಣದಲ್ಲಿ ಯದ್ವಾತದ್ವಾ ಬ್ಯುಸಿಯಾಗಿದ್ದು, 'ಲವ್ ಸ್ಟೋರಿ ೨೦೫೦'ಯ ಪ್ರಚಾರ ಕಾರ್ಯದಲ್ಲೂ ತೊಡಗಿ ಸಖತ್ ಸುಸ್ತಾಗಿದ್ದರಿಂದ ಅಸ್ತಮಾ ಏರಿ ಉಸಿರುಗಟ್ಟಿ ಪ್ರಜ್ಞೆ ತಪ್ಪಿದ್ದಳು. ಆದರೆ ಚಿಕಿತ್ಸೆ ಪಡೆದು ಮಾರನೇ ದಿನವೇ ಈ ಕೋಮಲೆ ಪತ್ರಕರ್ತರೆದುರು ಸಂದರ್ಶನಕ್ಕೆ ಹಾಜರ್! ಇಷ್ಟೆಲ್ಲಾ ಆಗೋವಾಗ ಆಕೆಯ ಜೊತೆಗಿದ್ದು ಆರೋಗ್ಯ ನೋಡಿಕೊಂಡದ್ದು ಪ್ರಿಯತಮ ಹರ್ಮನ್ ಭವೇಜಾ. ನಲ್ಲನ ಆರೈಕೆ ಸಿಗುತ್ತೆ ಅಂದ್ರೆ ಎಲ್ಲರೂ ಬೀಳೋದೇ...
'ಎಂದ ರ್‍ಯಾಸ್ಕಲ್... ಮೈಂಡ್ ಇಟ್'
'ತೋಡಾ ಪ್ಯಾರ್ ತೋಡಾ ಮ್ಯಾಜಿಕ್' ಇನ್ನೇನು ತೆರೆ ಕಾಣಲಿದೆ ಎಂದು ರಾಣಿ ಮುಖರ್ಜಿ ಭಾಳ ಖುಷಿಯಾಗಿದ್ದಾಳೆ. ಹಾಗೆಯೇ ಕೊಂಚ ದುಃಖವೂ ಇದೆ. ಇತ್ತೀಚಿನ ಕೆಲ ಚಿತ್ರಗಳು ಫ್ಲಾಪ್ ಆಗಿರೋದಕ್ಕೆ ಮಾಧ್ಯಮಗಳು ರಾಣಿ ಮೇಲೆ ಟೀಕೆಗಳ ಮಳೆ ಸುರಿಸಿದ್ದವು. ಜೊತೆಯಲ್ಲೇ ಆದಿತ್ಯ ಚೋಪ್ರಾ ಜೊತೆಗಿನ ಪ್ರೇಮ ಸಲ್ಲಾಪದ ಬಗ್ಗೆ ಮಾಧ್ಯಮಗಳ ತುಂಬಾ ಗಾಸಿಪ್ ಹರಿದಾಡಿದ್ದವು. ಈ ಗಾಸಿಪ್‌ಗಳನ್ನೆಲ್ಲಾ ಸಾರಾ ಸಗಟಾಗಿ ತಿರಸ್ಕರಿಸಿರುವ ರಾಣಿ ಪ್ರೇಮದ ಕರೆ ಇನ್ನೂ ತನ್ನ ಬಾಗಿಲು ತಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದೇ ತಡ, ಚೋಪ್ರಾ ಕ್ಯಾಂಪ್‌ನ ಮುಂದಿನ ಎರಡು ಚಿತ್ರಗಳು 'ತೋಡಾ...'ದ ದ್ವಿತೀಯ ನಾಯಕಿ ಅಮೀಷಾ ಪಟೇಲ್ ಮಡಿಲಿಗೆ ಬಿದ್ದಿರುವ ಸುದ್ದಿ ಸಿಕ್ಕಿದೆ!!
ನವತಾರೆ ಜ್ಯೋತಿಕಾ
ಬಳುಕುವ ಬಳ್ಳಿ ಈ ಜ್ಯೋತಿಕಾ... ಅಚ್ಚ ಕನ್ನಡತಿ. 'ಗಂಡನ ಮನೆ' ಚಿತ್ರದಲ್ಲಿ ಶಿವರಾಜ್ ಕುಮಾರ್ ತಂಗಿಯಾಗಿದ್ದ ಈ ಬೆಡಗಿ ಈಗ ಶಿವರಾಜ್ ನಾಯಕರಾಗಿರೋ 'ನಂದ'ಕ್ಕೆ ನಾಯಕಿ. ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಲ ಕಳೆಯುತ್ತಿದ್ದ ಜ್ಯೋತಿಕಾ 'ನಂದ'ದಲ್ಲಿ ಬ್ರೇಕ್ ಪಡೆಯೋ ಆಸೆಯಲ್ಲಿದ್ದಾಳೆ. ಹಾಗೆಯೇ ಪ್ರೇಮ್ ತಾರಾಗಣದ 'ಜನುಮ ಜನುಮದಲ್ಲೂ'ಗೆ ಎರಡನೇ ನಾಯಕಿ. ಅಭಿನಯ ಕಲಿಸಿದ ಮತ್ತು ಬ್ರೇಕ್ ಪಡೆಯಲು ನೆರವಾದ ಶಿವರಾಜ್ ಬಗ್ಗೆ ತುಂಬು ಅಭಿಮಾನ ತೋರುತ್ತಾಳೆ. ಚಿತ್ರರಂಗದ ಬಗ್ಗೆ ಇದ್ದ ಪೂರ್ವಗ್ರಹಗಳೆಲ್ಲಾ ಹೊರಟು ಹೋಗಿದೆ ಎಂದು ಕೊರಳು ಕೊಂಕಿಸುತ್ತಾಳೆ ಈ ಚದುರೆ. ಗುಡ್‌ಲಕ್!
ಎನ್.ಕೆ. ಸುಪ್ರಭಾ, ಆಕೃತಿ ಭಾರದ್ವಾಜ್