ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

 

ಇತರ ವಿಭಾಗಗಳು
 
ವಿಶೇಷ ವರದಿ
ಸಾವಿನಮನೆಯಲ್ಲೂರಾಜಕೀಯ
 

ಮಾನಸಿಕ ಸ್ಥೈರ್ಯದ ಕೊರತೆಯಿಂದಾಗಿ ತನ್ನೆಲ್ಲ ಸಂಕಷ್ಟಗಳಿಗೆ ರಾಜ್ಯದ ರೈತರು ಆತ್ಮಹತ್ಯೆಯ ಮೂಲಕ ಪರಿಹಾರ ಕಂಡು ಕೊಳ್ಳಲಾರಂಭಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೊಳಕು ರಾಜಕೀಯವನ್ನು ಬದಿಗಿಟ್ಟು, ಎಲ್ಲರೂ ಒಂದಾಗಿ ರೈತ ಸಮುದಾಯದಲ್ಲಿ ಭರವಸೆಯನ್ನು ತುಂಬಬೇಕು ಎನ್ನುತ್ತಾರೆ ಟಿಎಸ್‌ಐನ ಶಶಿ ಸಂಪಳ್ಳಿ

ಕಳೆದ ಹತ್ತು ದಿನಗಳಲ್ಲಿ ರಾಜ್ಯದ 23ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅತ್ತ ಅನ್ನದಾತ, ಆತ್ಮಹತ್ಯೆಯನ್ನೇ ಬದುಕಿನ ಸಂಕಷ್ಟಗಳಿಗೆ ಪರಿಹಾರವಾಗಿ ಸ್ವೀಕರಿಸುತ್ತಿದ್ದಾನೆ. ಇತ್ತ ಆಡಳಿತ ಪಕ್ಷ, ವಿರೋಧ ಪಕ್ಷಗಳ ಜೊತೆಗೆ ಮಾಧ್ಯಮಗಳು ಸತ್ತ ರೈತರ ಮನೆ ಮುಂದೆ ಠಳಾಯಿಸತೊಡಗಿವೆ. ಮುಖ್ಯಮಂತ್ರಿಯೂ ಸೇರಿದಂತೆ ಆಡಳಿತ ಪಕ್ಷದ ನಾಯಕರು ಆತ್ಮಹತ್ಯೆಗೆ ರಸಗೊಬ್ಬರ ಸಮಸ್ಯೆ ಕಾರಣವಲ್ಲ ಎಂಬುದನ್ನು ಪ್ರಚುರಪಡಿಸಲು ಹೆಣಗುತ್ತಿದ್ದರೆ, ವಿರೋಧ ಪಕ್ಷಗಳು ರೈತನ ದುರವಸ್ಥೆಯನ್ನು ರಸಗೊಬ್ಬರ ಅಭಾವಕ್ಕೂ, ಆ ಮೂಲಕ ರಾಜ್ಯ ಸರ್ಕಾರದ ವೈಫಲ್ಯಕ್ಕೂ ತಳಕು ಹಾಕಿ ಆಡಳಿತಾರೂಢರನ್ನು ಇಕ್ಕಟ್ಟಿಗೆ ಸಿಲುಕಿಸಲು ಪರದಾಡುತ್ತಿವೆ. ಇನ್ನು ಮುಖ್ಯವಾಹಿನಿ ಮಾಧ್ಯಮಗಳು ಕೂಡ ಸ್ಪರ್ಧೆಯಿಂದ ಹಿಂದೆ ಬೀಳದೆ ರೈತರ ಸಾವು ಮತ್ತು ಕುಟುಂಬದ ನೋವನ್ನು 'ಲೈವ್'ಆಗಿಸಲು ಹರಸಾಹಸ ಮಾಡುತ್ತಿವೆ.

ರಸಗೊಬ್ಬರ ರಾಜಕಾರಣ ಇದೀಗ ಆತ್ಮಹತ್ಯೆ ರಾಜಕಾರಣವಾಗಿ ಬದಲಾಗುತ್ತಿದೆ. ಹತ್ತು ದಿನಗಳಲ್ಲಿ ಮೂರು ಆತ್ಮಹತ್ಯೆಗಳಿಗೆ ಸಾಕ್ಷಿಯಾದ ದಾವಣಗೆರೆ ಹಾಗೂ ಎರಡು ಆತ್ಮಹತ್ಯೆಗಳು ನಡೆದ ಮುಖ್ಯಮಂತ್ರಿಗಳ ಸ್ವಕ್ಷೇತ್ರ ಶಿಕಾರಿಪುರ ತಾಲ್ಲೂಕಿಗೆ ತೆರಳಿ ಮೃತ ರೈತರ ಕುಟುಂಬದವರನ್ನು ಭೇಟಿ ಮಾಡಿದ ಬಳಿಕ 'ಟಿಎಸ್‌ಐ'ತಂಡಕ್ಕೆ ಈ ರಾಜಕೀಯ ಮೇಲಾಟಗಳ ಬೇರೆ- ಬೇರೆ ಮಗ್ಗುಲುಗಳ ಪರಿಚಯವಾಗದೇ ಇರಲಿಲ್ಲ.

ಹಾವೇರಿ ಗೋಲಿಬಾರ್ ಘಟನೆಯ ಬಳಿಕ ರಸಗೊಬ್ಬರ ಎಂಬುದು ರಾಜ್ಯದ ರಾಜಕಾರಣಕ್ಕೆ ಪೊಗದಸ್ತು ಆಹಾರವಾಗಿದೆ. ಅದೇ ರಸಗೊಬ್ಬರದ ಅಭಾವ ಮತ್ತು ಆತಂಕಗಳು ಹೇಗೆ ಮುಗ್ಧ, ಹುಂಬ ರೈತರ ಜೀವಕ್ಕೆ ಶಾಪವಾಗಿವೆ ಎಂಬುದು ಜನರ ಮಾತಿನಿಂದಲೇ ತಿಳಿಯುತ್ತಿತ್ತು.

ಹೊನ್ನಾಳಿ ತಾಲ್ಲೂಕಿನ ಫಲವನಹಳ್ಳಿಯ ರಂಗಪ್ಪ (55) ಆತ್ಮಹತ್ಯೆ ಮಾಡಿಕೊಂಡ ಬಳಿಕ ಅವರ ಮನೆಗೆ ಅಲ್ಲಿನ ಶಾಸಕರು, ವಿರೋಧ ಪಕ್ಷದ ನಾಯಕರು ಹೋಗಿಬಂದಿದ್ದಾರೆ. ಶಾಸಕರು ಆಡಳಿತ ಪಕ್ಷದವರೇ ಆದ್ದರಿಂದ ಸಹಜವಾಗೇ ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿಯೂ, ದೇಹವನ್ನು ಇಟ್ಟುಕೊಂಡು ಪ್ರತಿಭಟನೆಗೆ ಹೋಗದೆ ಮಣ್ಣು ಮಾಡಿ ಎಂದೂ ಹೇಳಿ ಹೋಗಿದ್ದರೆ, ವಿರೋಧ ಪಕ್ಷದ ನಾಯಕರು ತಮ್ಮ ಪಕ್ಷದ ವತಿಯಿಂದ ಪರಿಹಾರ ಹಣ ನೀಡಿ ಸಾಂತ್ವನ ಹೇಳಿ, ಈ ಸಾವಿಗೆ ಆಡಳಿತಾರೂಢ ಸರ್ಕಾರವೇ ಕಾರಣ ಎಂದು ಬಂದಿದ್ದಾರೆ.

ಆದರೆ, ಮೃತ ರಂಗಪ್ಪನ ಪತ್ನಿ ಮಂಜಮ್ಮ ಮಾತ್ರ ಗಂಡನ ಸಾವಿನಿಂದ ಕಂಗೆಟ್ಟು ಕೂತಿದ್ದಾರೆ. ಗೊಬ್ಬರಕ್ಕಾಗಿ 15ದಿನದಿಂದ ತಿರುಗಾಡುತ್ತಿದ್ದರು. 4ಎಕರೆ ಸ್ವಂತ ಹೊಲದಲ್ಲಿ ಮೆಕ್ಕೆಜೋಳ ಬಿತ್ತಿದ್ದೆವು. ಮತ್ತೊಂದು ಕಡೆ ಹೊಲ ಗುತ್ತಿಗೆಗೆ ತಗೊಂಡಿದ್ದಕ್ಕೆ ಬಿತ್ತನೆಗೆ ಗೊಬ್ಬರ ಇರಲಿಲ್ಲ. ಅದಕ್ಕಾಗಿ ಎಷ್ಟು ಅಲೆದರೂ ಸಿಕ್ಕಿರಲಿಲ್ಲ. ಎಲ್ಲರೂ ಬಿತ್ತನೆ ಮುಗಿಸಿದರು, ನೀವು ಬರೀ ಪೇಟೆ ತಿರುಗೋದೇ ಆಯ್ತು ಎಂದು ಹೇಳಿದೆವು. ಅವತ್ತು ಬೆಳಿಗ್ಗೆ ನ್ಯಾಮತಿಗೆ ಹೋಗಿ ಗೊಬ್ಬರ ತರ್‍ತೀನಿ ಎಂದು ಹೋದವರು ಮೆಕ್ಕೆಜೋಳಕ್ಕೆ ಹಾಕುವ ಮಾತ್ರೆ (ಅಮೋನಿಯಂ ಸಲ್ಪೈಡ್) ತಿಂದು ಬಿಟ್ಟಿದ್ರು... ಎಂದು ಅಂದು ನಡೆದ ಘಟನೆ ವಿವರಿಸಿದರು.

ಅದಕ್ಕೆ ದನಿಗೂಡಿಸಿದ ಊರಿನ ಹಿರಿಯರಾದ ಮಾದಪ್ಪ ಮೇಷ್ಟ್ರು, ನಮ್ಮೂರಲ್ಲಿ ಇಲ್ಲೀವರೆಗೆ ಯಾರಿಗೂ ಬೇಕಾದಷ್ಟು ಗೊಬ್ಬರ ಸಿಕ್ಕಿಲ್ಲ. ನಾವು ಇಲ್ಲಿಂದ ಗೊಬ್ಬರಕ್ಕಾಗಿ ದಾವಣಗೆರೆ, ತರೀಕೆರೆ, ಸಾಗರದವರೆಗೂ ಹೋಗಿ ಬಂದಿದ್ದೇವೆ. 485ರೂ. ಬೆಲೆಯ ಮೂಟೆ ಗೊಬ್ಬರಕ್ಕೆ 800-850ರೂ.ವರೆಗೂ ಕೊಟ್ಟರೂ ಸಿಕ್ಕಿದ್ದು ಮಾತ್ರ ಒಂದೋ ಎರಡೋ ಮೂಟೆ. ಇವತ್ತು (ಜೂನ್ 23) ಒಂದು ಲೋಡು ಬಂದಿದೆಯಷ್ಟೇ. ಅದಕ್ಕೂ ಒಬ್ಬ ರೈತ ಜೀವ ಬಿಡಬೇಕಾಯಿತು ಎನ್ನುವಾಗ ಅವರ ಮಾತಲ್ಲಿ ವ್ಯವಸ್ಥೆಯ ಬಗ್ಗೆ ಕಟುವ್ಯಂಗ್ಯವಿರದೇ ಇರಲಿಲ್ಲ.

ಮುಖ್ಯಮಂತ್ರಿಗಳ ಸ್ವಕ್ಷೇತ್ರವಾದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಅಂಜನಾಪುರದ ರೈತರದ್ದು ಕೂಡ ಇದೇ ಸ್ಥಿತಿ. ಅಲ್ಲಿನ ರೈತ ನಾರಾಯಣಸ್ವಾಮಿ ಜೂನ್ 20ರಂದು ಆತ್ಮಹತ್ಯೆಗೆ ಶರಣಾದರು. ಅದಕ್ಕೂ ಮುನ್ನ ಒಂದು ವಾರದಿಂದ ರಸಗೊಬ್ಬರಕ್ಕಾಗಿ ಶಿಕಾರಿಪುರ, ಹಿತ್ತಲ, ಕಲ್ಮನೆಗಳಿಗೆ ಅಲೆದಿದ್ದರು. ಮೂರು ಎಕರೆ ಹೊಲದಲ್ಲಿ ಮೆಕ್ಕೆಜೋಳ ಬಿತ್ತನೆಗೆ ಸಿದ್ಧತೆ ಮಾಡಿಕೊಂಡು ಗೊಬ್ಬರಕ್ಕಾಗಿ ಅಲೆದರೂ ಸಿಕ್ಕಿರಲಿಲ್ಲ. ಅಕ್ಕಪಕ್ಕದ ಹೊಲದವರೆಲ್ಲಾ ಬಿತ್ತನೆ ಮುಗಿಸಿ ಸಸಿ ಎದ್ದರೂ ನೀವು ಇನ್ನೂ ಗೊಬ್ಬರ ತಂದಿಲ್ಲ, ಸುತ್ತಾಡಿ ಇದ್ದ ದುಡ್ಡನ್ನು ಖರ್ಚು ಮಾಡಿದಿರಿ ಎಂದು ಮನೆಯಲ್ಲಿ ಮಕ್ಕಳು ಜಗಳ ಮಾಡಿದ್ದರು. ಜೊತೆಗೆ ಒಂದು ತಾಡಪಾಲನ್ನು ವಾಪಸು ಕೊಡುವ ಬಗ್ಗೆಯೂ ಮಾತು ಬೆಳೆದಿತ್ತು. ಅದಕ್ಕೇ ಬೇಸರ ಮಾಡಿಕೊಂಡು ವಿಷ ತಗೊಂಡು ಕೊಟ್ಟಿಗೆಯಲ್ಲೇ ಜೀವಬಿಟ್ಟಿದ್ದರು ಎಂದು ಮೃತರ ಪತ್ನಿ ಸರೋಜಮ್ಮ ಟಿಎಸ್‌ಐ ಜೊತೆ ನೋವು ಹಂಚಿಕೊಂಡರು.

ಅವರಿಗೆ ಕೂಡ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ವೈಯಕ್ತಿಕವಾಗಿ 10ಸಾವಿರ ರೂ. ನೀಡಿದರು. ಆದರೆ, ಅದೇ ಯಡಿಯೂರಪ್ಪ, ಅಂಜನಾಪುರದಲ್ಲಿ ರಸಗೊಬ್ಬರ ಮತ್ತು ಬಿತ್ತನೆ ಬೀಜದ ಕೊರತೆಯಿಲ್ಲ. ಕೆಲವೊಂದು ಸಮಸ್ಯೆಗಳಿಂದ ರೈತರು ಇದುವರೆಗೂ ಬಿತ್ತನೆ ಕಾರ್ಯ ಕೈಗೊಂಡಿಲ್ಲ. ಇದಕ್ಕೆ ರಸಗೊಬ್ಬರ ಅಭಾವ ಕಾರಣ ಎನ್ನುವುದು ತಪ್ಪು ಎಂದು ಸಾವಿಗೆ ರಸಗೊಬ್ಬರ ಸಮಸ್ಯೆ ಕಾರಣವಲ್ಲ ಎಂದು ಹೇಳಿಕೆ ನೀಡಿದರು.

ಆದರೆ, ಸರೋಜಮ್ಮ ಅವರೇ ಹೇಳುವಂತೆ ಮನೆಯಲ್ಲಿ ಸಣ್ಣ ಜಗಳ ನಡೆದದ್ದು ನಿಜ. ಆದರೆ, ಆ ಜಗಳಕ್ಕೆ ಕಾರಣ ರಸಗೊಬ್ಬರಕ್ಕಾಗಿನ ಅಲೆದಾಟ, ಕೈಯಲ್ಲಿರುವ ನಾಲ್ಕು ಕಾಸನ್ನೂ ಕಳೆದುಕೊಂಡು ರಸಗೊಬ್ಬರವಿಲ್ಲದೆ ಬಿತ್ತನೆ ಮಾಡಲಾಗದೇ ಇದ್ದರೆ ದೊಡ್ಡ ಕುಟುಂಬದ ಭವಿಷ್ಯವೇನು ಎಂಬ ಆತಂಕವೇ ಕಾರಣ ಎನ್ನುವುದು ಗ್ರಾಮಸ್ಥರ ಮಾತು. ಊರಲ್ಲಿ ಯಾರಿಗೂ ರಸಗೊಬ್ಬರ ಸಿಕ್ಕಿರಲಿಲ್ಲ. ನಾವೆಲ್ಲಾ ಎಲ್ಲೆಲ್ಲೋ ಹೋಗಿ ಪೊಲೀಸರ ಲಾಠಿ ಏಟು ತಿಂದು ಒಂದೋ, ಎರಡೋ ಮೂಟೆ ಗೊಬ್ಬರ ತಂದಿದ್ದೆವು. ಕೆಲವರಿಗೆ ಮಾತ್ರ ಸಿಕ್ಕಿರಲಿಲ್ಲ. ನಾರಾಯಣಸ್ವಾಮಿ ಸಾವಿನ ಬಳಿಕ ಮಾರನೇ ದಿನ ನಮ್ಮೂರಿಗೆ ಎರಡು ಲಾರಿ ಗೊಬ್ಬರ ಕಳಿಸಿ ವಿತರಿಸಿದರು ಎನ್ನುವ ಅವರ ಮಾತು ವಾಸ್ತವಾಂಶಗಳಿಗೆ ಕನ್ನಡಿ.

ಇನ್ನು ಹಾರೋಗೊಪ್ಪದ ಕುಪ್ಪ ಗೌಂಡರ್ ಮನೆಯಲ್ಲೂ ಸ್ಮಶಾನ ಮೌನ. ಬೇಕಾದಷ್ಟು ಸಿಗದೆ, ಕಡಿಮೆ ಗೊಬ್ಬರ ಹಾಕಿ ಬಿತ್ತನೆ ಮಾಡಿದ್ದ ಜೋಳ ಹಳದಿಯಾಗಿ ಸಾಯುವ ಸ್ಥಿತಿಯಲ್ಲಿತ್ತು. ಬೆಳೆ ನಷ್ಟವಾದರೆ ಸಾಲ ತೀರಿಸುವುದು ಹೇಗೆ, ಮಗಳ ಮದುವೆ ಮಾಡುವುದು ಹೇಗೆ ಎಂಬ ಚಿಂತೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಎನ್ನುತ್ತಾರೆ ಮನೆಮಂದಿ. ಅವರ ಮನೆಗೆ ಭೇಟಿ ನೀಡಿದ ವಿರೋಧ ಪಕ್ಷದ ಮುಖಂಡ ಮಲ್ಲಿಕಾರ್ಜುನ ಖರ್ಗೆ ಪಕ್ಷದ ವತಿಯಿಂದ ಪರಿಹಾರ ನೀಡಿ ಹೋಗಿದ್ದಾರೆ.

ಹೀಗೆ ರಾಜ್ಯದಾದ್ಯಂತ ರೈತರು ಆತ್ಮಹತ್ಯೆಗೆ ಶರಣಾಗುತ್ತಲೇ ಇದ್ದಾರೆ. ಅದನ್ನೇ ಕಾದು ಕುಳಿತವರಂತೆ ಆಡಳಿತ ಪಕ್ಷದ ನಾಯಕರು ಮತ್ತು ವಿರೋಧ ಪಕ್ಷದ ಮುಖಂಡರು ಸ್ಪರ್ಧೆಗೆ ಇಳಿದಂತೆ ರೈತರ ಮನೆಗೆ ದೌಡಾಯಿಸುವುದು, ಪರಿಹಾರ (ಅಧಿಕೃತವಾಗಿ ಅಲ್ಲದಿದ್ದರೂ ಅನಧಿಕೃತವಾಗಿ, ಕೆಲವೊಮ್ಮೆ ಗುಟ್ಟಾಗಿ!) ನೀಡುವುದು, ಆಡಳಿತ ಪಕ್ಷದವರು ಗೊಬ್ಬರಕ್ಕೂ ಆತ್ಮಹತ್ಯೆಗೂ ಸಂಬಂಧವಿಲ್ಲ, ಹಾಗೊಂದು ವೇಳೆ ಮೇಲ್ನೋಟಕ್ಕೇ ರಸಗೊಬ್ಬರ ಕಾರಣವೆಂಬುದು ತಿಳಿದರೆ ಅದಕ್ಕೆ ಕೇಂದ್ರ ಸರ್ಕಾರವೇ ಕಾರಣವೆಂದು ಹೇಳುವುದು, ವಿರೋಧ ಪಕ್ಷ ರೈತ ಆತ್ಮಹತ್ಯೆಗಳನ್ನು ಗೊಬ್ಬರ ಸಮಸ್ಯೆಯೊಂದಿಗೆ ತಳಕುಹಾಕಿ ಅದಕ್ಕೆ ಆಡಳಿತಾರೂಢ ಪಕ್ಷವೇ ಕಾರಣವೆಂದು ಟೀಕಿಸುವುದು ನಡೆದೇ ಇದೆ.

ಸಾವಿನ ಮನೆಯ ಸೂತಕದ ಕಿಚ್ಚಿನಲ್ಲೇ ತಮ್ಮ- ತಮ್ಮ ಬೇಳೆ ಬೇಯಿಸಿಕೊಳ್ಳುವ ಮಹಾ ಸ್ಪರ್ಧೆಯಲ್ಲಿ ಯಾರೂ ಹಿಂದೆ ಬಿದ್ದಿಲ್ಲ. ರೈತ ಆತ್ಮಹತ್ಯೆಯ ವಿಷಯ ಬಂದಾಗ ಗೊಬ್ಬರದ ಅಭಾವವಿಲ್ಲ. ರೈತರು ಬೇರೆ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ರಾಜಕೀಯ ದುರುದ್ದೇಶದಿಂದ ಗೊಬ್ಬರ ಸಮಸ್ಯೆಗೆ ತಳಕು ಹಾಕಲಾಗುತ್ತಿದೆ ಎಂದು ಹೇಳಿಕೆ ನೀಡುವ ಮುಖ್ಯಮಂತ್ರಿಗಳು, ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುವಾಗ ಗೊಬ್ಬರ ಅಭಾವಕ್ಕೆ ಕೇಂದ್ರ ಸರ್ಕಾರವೇ ಕಾರಣ ಎನ್ನುವ ದ್ವಂದ್ವ ನೀತಿಯಷ್ಟೇ, ಗೊಬ್ಬರ ಸಮಸ್ಯೆಯನ್ನೇ ಮುಂದಿಟ್ಟುಕೊಂಡು ರೈತರ ಮೇಲೆ ಇನ್ನಿಲ್ಲದ ಕಾಳಜಿ ತೋರುವ ವಿರೋಧ ಪಕ್ಷಗಳ ಧೋರಣೆಯೂ ನಾಚಿಗೆಗೇಡಿನದ್ದೇ.

ರಾಜ್ಯ ಸರ್ಕಾರ ರಸಗೊಬ್ಬರ ಅಭಾವ ಪರಿಸ್ಥಿತಿಯ ಗಂಭೀರತೆ ಅರಿತು ಪರ್ಯಾಯ ವ್ಯವಸ್ಥೆಯ ಮೂಲಕ ಬೇಡಿಕೆ ಪೂರೈಕೆಗೆ ಕ್ರಮ ಕೈಗೊಳ್ಳುವ ಬದಲು ಇದೇ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರದ ವಿರುದ್ಧದ ಅಸ್ತ್ರವಾಗಿ ಬಳಸಿಕೊಳ್ಳಲು ಪ್ರಯತ್ನಿಸಿತು. ವಿರೋಧ ಪಕ್ಷಗಳು ರೈತರ ಅಸಮಾಧಾನವನ್ನು ರಾಜ್ಯ ಸರ್ಕಾರದ ವಿರುದ್ಧ ತಿರುಗಿಸುವತ್ತ ಆಸಕ್ತಿ ತೋರಿದವು. ರೈತರ ಆಕ್ರೋಶ, ಹತಾಶೆಗೆ ತಿರುಗದಂತೆ, ಹತಾಶೆ ಆತ್ಮಹತ್ಯೆಯಲ್ಲಿ ಅಂತ್ಯಗೊಳ್ಳದಂತೆ ನೋಡಿಕೊಳ್ಳುವತ್ತ ಮಾತ್ರ ಯಾರೂ ಕಾಳಜಿ ವಹಿಸಲೇ ಇಲ್ಲ.

ಈ ಎಲ್ಲಾ ಆತ್ಮಹತ್ಯೆಗಳಿಗೆ ರಸಗೊಬ್ಬರ ಸಮಸ್ಯೆಯೇ ಕಾರಣವೆನ್ನಲಾಗದು. ಕೆಲವು ಪ್ರಕರಣಗಳಲ್ಲಿ ಅಧಿಕ ಸಾಲದ ಒತ್ತಡವೂ ಕಾರಣವಾಗಿದೆ. ಸಾಲದ ಬಾಧೆಯಿಂದ ರೈತರು ಮುಂಗಾರು ಹಂಗಾಮಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದು ವಿರಳ. ಸಾಮಾನ್ಯವಾಗಿ ಸುಗ್ಗಿಯ ಆಚೀಚೆ ಅಂತಹ ಆತ್ಮಹತ್ಯೆಗಳು ಸಂಭವಿಸುತ್ತವೆ. ಜೊತೆಗೆ ಈ ಬಾರಿ ಉತ್ತಮವೆನ್ನಬಹುದಾದ ಮಳೆಯಾಗಿದೆ. ಉತ್ತಮ ಬೆಳೆಯ ಭರವಸೆ ಮೂಡಿದೆ. ಹಾಗಿದ್ದರೂ ಯಾಕೆ ರೈತರು ಈಗಲೇ ಆತ್ಮಹತ್ಯೆಗೆ ಮುಂದಾಗಿದ್ದಾರೆ ಎಂದರೆ; ಮಲೇಬೆನ್ನೂರು ಅಜ್ಜಪ್ಪ, ಮುಖ್ಯಮಂತ್ರಿಗಳ ತವರು ಜಿಲ್ಲೆ ಶಿವಮೊಗ್ಗದ ಶಿಕಾರಿಪುರ ತಾಲ್ಲೂಕಿನ ಅಂಜನಾಪುರದ ನಾರಾಯಣಸ್ವಾಮಿ ಮುಂತಾದವರಿಗೆ ಲಕ್ಷಾಂತರ ರೂಪಾಯಿ ಪರಿಹಾರ ನೀಡಿರುವ ವರದಿಗಳು ಖಿನ್ನತೆಗೊಳಗಾಗಿರುವ ರೈತರನ್ನು ಆತ್ಮಹತ್ಯೆಯತ್ತ ಮುಖಮಾಡಿಸಿರಬಹುದು. ಹಾಗಂತ ಪರಿಹಾರದ ಆಸೆಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಮೂರ್ಖತನವನ್ನು ಯಾರೂ ಮಾಡಲಾರರು ಎಂಬುದೂ ನಿಜವೇ. ಆದರೆ, ಸರ್ಕಾರಗಳ ಸಾಲ ಮನ್ನಾ ನೀತಿಯಿಂದಾಗಿ ಈ ಬಾರಿ ಸಾಲ ನೀಡಲು ಹಿಂದೇಟು ಹಾಕುತ್ತಿರುವ ಬ್ಯಾಂಕುಗಳಿಂದಾಗಿ ಕೈಯಲ್ಲಿ ಕಾಸಿಲ್ಲದ ಸ್ಥಿತಿ, ಹೊರೆಯಾಗಿರುವ ಸಾಲ ತೀರಿಸುವ ಭರವಸೆಯನ್ನು ಕರಗಿಸಿದ ಗೊಬ್ಬರ ಅಭಾವ ಕೂಡ ಆತ್ಮಹತ್ಯೆಯನ್ನು ಸಾಂಕ್ರಾಮಿಕವಾಗಿಸಿರಬಹುದು.

ಆದರೆ, ಖ್ಯಾತ ಮಾನಸಿಕ ತಜ್ಞ ಡಾ.ಸಿ.ಆರ್. ಚಂದ್ರಶೇಖರ್ ಅವರು ಈ ಸರಣಿ ಆತ್ಮಹತ್ಯೆಯನ್ನು ವಿಶ್ಲೇಷಿಸುತ್ತಾ, ಆತ್ಮಹತ್ಯೆ ಎಂಬುದು ಮಾನಸಿಕ ದೌರ್ಬಲ್ಯತೆಯ ಪರಿಣಾಮ. ಒಬ್ಬ ವ್ಯಕ್ತಿ ಇನ್ನೆಲ್ಲೋ ಆತ್ಮಹತ್ಯೆ ಮಾಡಿಕೊಂಡ ಎಂಬುದು ಕೇಳಿದ ಮತ್ತೊಬ್ಬ ಕೂಡ ತನ್ನ ಸಮಸ್ಯೆಗೇ ಸಾವೇ ಸುಲಭ ಪರಿಹಾರ ಎಂಬ ತೀರ್ಮಾನಕ್ಕೆ ಬಂದುಬಿಡುತ್ತಾನೆ. ಆತ್ಮಹತ್ಯೆಯ ಸುದ್ದಿಗಳ ಜೊತೆಗೆ ಸತ್ತ ರೈತರ ಕುಟುಂಬದವರಿಗೆ ನೀಡುತ್ತಿರುವ ಪರಿಹಾರವನ್ನು ಕೂಡ ಮಾಧ್ಯಮಗಳಲ್ಲಿ ವೈಭವೀಕರಿಸುತ್ತಿರುವುದರಿಂದ ಸಂಕಷ್ಟದಲ್ಲಿರುವ ದುರ್ಬಲ ಮನಸ್ಸಿನ ರೈತ ತಾನೂ ಅದೇ ಹಾದಿ ಹಿಡಿಯುತ್ತಾನೆ... ಎನ್ನುತ್ತಾರೆ.

ಟಿಎಸ್‌ಐ ಜೊತೆ ಮಾತನಾಡಿದ ಅವರು, ಇಂದು ರೈತರ ಆತ್ಮಹತ್ಯೆ ಕೇವಲ ಆತ್ಮಹತ್ಯೆಯಾಗಿ ಉಳಿದಿಲ್ಲ. ಅದಕ್ಕೊಂದು ಸಮೂಹ ಸನ್ನಿಯ ರೂಪು ಬಂದಿದೆ ಎನ್ನುತ್ತಾರೆ. ಇದೀಗ ಪ್ರತಿ ದಿನವೂ ರಾಜ್ಯದ ಉದ್ದಗಲಕ್ಕೆ ಒಂದಿಲ್ಲೊಂದು ರೈತ ಆತ್ಮಹತ್ಯೆ ಸುದ್ದಿ ಖಾಯಂ ಆಗಿರುವುದು ಅವರ ಮಾತನ್ನು ಸಮರ್ಥಿಸುತ್ತದೆ. ಒಂದೆಡೆ ರಸಗೊಬ್ಬರ, ಕೀಟನಾಶಕ, ಲೇವಾದೇವಿಗಾರರ ವಿಷವರ್ತುಲವಾದ ರಾಸಾಯನಿಕ ಕೃಷಿಯಲ್ಲಿ ಸಿಕ್ಕು ಹೊರಬರಲೂ ಆಗದೆ, ಅದರಲ್ಲೇ ಜೀವನ ಸಾಗಿಸಲೂ ಆಗದೆ ತ್ರಿಶಂಕು ಸ್ಥಿತಿಯಲ್ಲಿ ರೈತನಿದ್ದರೆ, ಆತನಲ್ಲಿ ಪರ್ಯಾಯ ಕೃಷಿಯ ಬಗ್ಗೆ, ಭರವಸೆಯ ಭವಿಷ್ಯದ ಬಗ್ಗೆ ವಿಶ್ವಾಸ ತುಂಬಬೇಕಾದ ಸರ್ಕಾರಗಳು, ರಾಜಕಾರಣಿಗಳು, ಸಂಘಟನೆಗಳು ಕೊಚ್ಚೆಯಲ್ಲಿ ಗಾಳ ಹಾಕುವ ಕಲಹಕ್ಕೆ ಇಳಿದಿವೆ. ಅವರ ಆಟಾಟೋಪಗಳಿಗೆ ಮುಖ್ಯವಾಹಿನಿ ಮಾಧ್ಯಮಗಳು ಕೂಡ ವೇದಿಕೆಯಾಗುತ್ತಿರುವುದು ಅನ್ನದಾತರ ದೌರ್ಭಾಗ್ಯವೇ ಸರಿ.

ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿಗಳು ತಾವೊಬ್ಬ ಜವಾಬ್ದಾರಿಯುತ ವ್ಯಕ್ತಿ ಎನ್ನುವುದನ್ನೇ ಮರೆತು ಮಾತೆತ್ತಿದರೆ ವಿರೋಧ ಪಕ್ಷಗಳ ಪಿತೂರಿ, ಹುನ್ನಾರ, ಕೇಂದ್ರದ ವಿರುದ್ಧ ಹೋರಾಟ ಅನಿವಾರ್ಯ ಎಂದು ಪ್ರತಿಪಕ್ಷದ ಸಾಲಿನಲ್ಲಿ ಕೂತವರಂತೆ ಹೇಳಿಕೆ ನೀಡುತ್ತಿದ್ದಾರೆ. ವಿರೋಧ ಪಕ್ಷಗಳಿಗೆ ಕೂಡ ರೈತನ ಸಮಸ್ಯೆಗೆ ಪರಿಹಾರಕ್ಕಿಂತ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವುದೇ ಮುಖ್ಯವಾಗಿದೆ. ಇನ್ನು ರೈತರ ಉದ್ಧಾರಕ್ಕಾಗೇ ಹುಟ್ಟಿಕೊಂಡ ಕಿಸಾನ್ ಸಭಾ, ರೈತ ಸಂಘದಂತಹ ಸಂಘಟನೆಗಳು ಕೂಡ ರೈತರಲ್ಲಿ ಬದುಕಿನ ಭರವಸೆ ತುಂಬುವ ನಿಟ್ಟಿನಲ್ಲಿ ರಚನಾತ್ಮಕ ಕಾರ್ಯಗಳಿಗೆ, ಜಾಗೃತಿ ಅಭಿಯಾನಗಳಿಗೆ ಮುಂದಾಗುವ ಬದಲು ರಾಜಕೀಯ ಪಕ್ಷಗಳ ದಾಳವಾಗುತ್ತಿರುವ ಅರಿವೂ ಇಲ್ಲದಂತೆ ವರ್ತಿಸುತ್ತಿವೆ. ಒಟ್ಟಾರೆ, ಇದು ಉರಿವ ಮನೆಯಲ್ಲಿ ಗಳ ಹಿರಿಯುವ ಪೈಪೋಟಿ. ಅದರಲ್ಲಿ ಯಾರೂ ಒಬ್ಬರಿಗೊಬ್ಬರು ಬಿಟ್ಟುಕೊಡುವ ಸ್ಥಿತಿಯಲ್ಲಿಲ್ಲ!

ಪ್ರಧಾನಮಂತ್ರಿಗಳ ವಿಧರ್ಭ ರೈತ ಪ್ಯಾಕೇಜ್ ಅನುಷ್ಠಾನಗೊಂಡ ಶಿವಮೊಗ್ಗ, ಹಾಸನ, ಚಿತ್ರದುರ್ಗ, ಬೆಳಗಾವಿಗಳಲ್ಲೂ ಆತ್ಮಹತ್ಯೆ ಸರಣಿ ಆರಂಭವಾಗಿದೆ. ರಾಜ್ಯ ಸರ್ಕಾರ ಕಳೆದ ವರ್ಷ 1700ಕೋಟಿ ರೂಪಾಯಿ ರೈತ ಸಾಲ ಮನ್ನಾ ಮಾಡಿದೆ. ಜೊತೆಗೆ ಶೇ.4ರ ಬಡ್ಡಿ ದರದಲ್ಲಿ ಕೃಷಿ ಸಾಲ ನೀಡಿದೆ. ಅದು ಸಾಲದು ಎಂಬಂತೆ ಕೇಂದ್ರ ಸರ್ಕಾರ ಕೂಡ ಕೃಷಿ ಸಾಲ ಮನ್ನಾ ಮಾಡಿದೆ. ಹಾಗಿದ್ದೂ ರೈತರ ಆತ್ಮಹತ್ಯೆ ತಡೆಯುವುದು ಸಾಧ್ಯವಾಗಿಲ್ಲ. ಅಂದರೆ ಅದರರ್ಥ ಏನು? ಎಂಬ ಪ್ರಶ್ನೆ ಎದುರಾಗದೇ ಇರದು.

ರೈತರ ಹೆಸರಲ್ಲಿ ನಡೆದ ಈ ಸಾರ್ವಜನಿಕ ತೆರಿಗೆ ಹಣದ ದಾಸೋಹದ ಲಾಭ ನಿಜವಾಗಿಯೂ ಅರ್ಹ ಮತ್ತು ಬಡ ರೈತರಿಗೆ ತಲುಪಿದ್ದರೆ ಆತ್ಮಹತ್ಯೆ ಜರೂರು ಅವರಿಗೇಕೆ ಬರುತ್ತಿತ್ತು ಎಂಬುದಕ್ಕೆ ಇದೇ ಯಡಿಯೂರಪ್ಪ ಮತ್ತು ಮಲ್ಲಿಕಾರ್ಜುನ ಖರ್ಗೆ ಉತ್ತರ ಹೇಳಬೇಕು. ಹಾಗೆ ನೋಡಿದರೆ, ಈ ಎಲ್ಲಾ ಸಾಲ ಮನ್ನಾ ಯೋಜನೆಗಳ ಬಗ್ಗೆ ಇದೀಗ ಸಮಗ್ರ ತನಿಖೆ ನಡೆಸಬೇಕಾದ ಜರೂರನ್ನು ಈ ಸಾಲು- ಸಾಲು ಆತ್ಮಹತ್ಯೆಗಳೇ ಸಾರಿ ಹೇಳುತ್ತಿವೆ. ಸೂತಕದ ಮನೆ ಮುಂದೆ ನಿಂತು ಮೊಸಳೆ ಕಣ್ಣೀರು ಸುರಿಸುವ ನೇತಾರರಿಂದ ಇಂತಹ ಮೂಲಭೂತ ಪ್ರಶ್ನೆಗಳಿಗೆ ಉತ್ತರ ಪಡೆಯುವ ಜವಾಬ್ದಾರಿ ರೈತ ಸಂಘಟನೆಗಳದ್ದು ಮತ್ತು ಮಾಧ್ಯಮಗಳದ್ದು. ಅದು ಬಿಟ್ಟು ಶವ ಇಟ್ಟುಕೊಂಡು ಹೋರಾಟದ ರಾಜಕಾರಣ ಮಾಡುವುದು, ಸತ್ತವನ ಮನೆಮಂದಿಯ ಗೋಳಾಟವನ್ನೇ ವೈಭವೀಕರಿಸಿ ಪ್ರಸರಣ, ಟಿಆರ್‌ಪಿ ಹೆಚ್ಚಿಸಿಕೊಳ್ಳುವುದಲ್ಲ ಎಂಬ ವಿವೇಕವನ್ನು ರೂಢಿಸಿಕೊಳ್ಳಬೇಕಿದೆ.

ಒಟ್ಟಾರೆ, ಸರಣಿ ರೈತ ಆತ್ಮಹತ್ಯೆಗಳು ಕೀಳು ರಾಜಕೀಯ ಆರೋಪ- ಪ್ರತ್ಯಾರೋಪಗಳ, ಪರಸ್ಪರ ಕಾಲೆಳೆಯುವ ನೀಚತನವನ್ನು ಮೀರಿದ ಗಂಭೀರ ಪ್ರಶ್ನೆಗಳನ್ನು ಎತ್ತಿವೆ. ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಕೊರತೆ ರೈತರನ್ನು ಬಲಿತೆಗೆದುಕೊಳ್ಳುವ ಮಟ್ಟಕ್ಕೆ ಬೆಳೆಯಲು ನಿಜವಾದ ಕಾರಣ ಯಾರು, ರಸಗೊಬ್ಬರವೊಂದೇ ಆತ್ಮಹತ್ಯೆಗಳಿಗೆ ಕಾರಣವಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡು ಇತರ ಕಾರಣಗಳಲ್ಲಿ ಪ್ರಮುಖವಾದ ಸಾಲ ಬಾಧೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಸಾಲ ಮನ್ನಾ, ಕಡಿಮೆ ಬಡ್ಡಿ ಸಾಲ ವಿತರಣೆಯ ಯೋಜನೆಗಳ ಜಾರಿಯ ಬಳಿಕವೂ ಸಾಲ ಸಾವು- ಬದುಕಿನ ಪ್ರಶ್ನೆಯಾಗಿರುವುದು ಏಕೆ? ನಿಜವಾಗಿಯೂ ಈ ಯೋಜನೆಗಳು ಸಂಕಷ್ಟದಲ್ಲಿರುವ ರೈತರಿಗೆ ತಲುಪಿವೆಯಾ? ತುಲುಪದೇ ಇದ್ದರೆ ಹೊಣೆ ಯಾರು...? ಹೀಗೆ ಸಾಲು- ಸಾಲು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಜರೂರು ಇದೆ. ಅದಕ್ಕೆ ರಾಜಕಾರಣಿಗಳ ಕೆಸರೆರಚಾಟದ ರಾಜಕೀಯ ಹೊರತುಪಡಿಸಿದ ಪ್ರಾಮಾಣಿಕ ಪ್ರಯತ್ನ ಬೇಕು. ಆ ಬಗ್ಗೆ ನಮ್ಮ ರೈತ ಮುಖಂಡರು, ಮಾಧ್ಯಮಗಳಿಗೆ ಆಸಕ್ತಿ ಇದೆಯೇ? ಮತ್ತೆ ಪ್ರಶ್ನೆಯೇ. ಪ್ರಾಮಾಣಿಕತೆ- ಕಾಳಜಿಯ ಮಾತು ಬಂದಾಗಲೆಲ್ಲಾ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ ಎಂಬುದು ಕೂಡ ಪರಿಸ್ಥಿತಿಯ ದುರಂತ.

ಟಿಎಸ್‌ಐ

ಪರಿಹಾರ ಪ್ರಹಸನ

 

ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಈಗ ನಾಯಕರು ಒಬ್ಬರ ಮೇಲೊಬ್ಬರು ಭೇಟಿ ನೀಡುತ್ತಿದ್ದಾರೆ. ಆಡಳಿತ ಪಕ್ಷದಿಂದ ಮುಖ್ಯಮಂತ್ರಿ ಭೇಟಿ ನೀಡಿ ತಾತ್ಕಾಲಿಕ ಪರಿಹಾರ, ವೈಯಕ್ತಿಕ ಪರಿಹಾರ ಎಂದು ನೀಡಿದರೆ, ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿ(ಎಸ್) ಕೂಡ ಹಿಂದೆ ಬಿದ್ದಿಲ್ಲ.

ಮಲ್ಲಿಕಾರ್ಜುನ ಖರ್ಗೆಯವರಂತೂ ಚುನಾವಣಾ ಪ್ರಚಾರಕ್ಕೂ ಅಷ್ಟು ಧಾವಂತಪಟ್ಟಿರಲಿಲ್ಲ! ಅಷ್ಟೊಂದು ಶ್ರಮವಹಿಸಿ ರೈತರ ಮನೆಗಳಿಗೆ ಸೂಟ್‌ಕೇಸ್ ಹಿಡಿದುಕೊಂಡೇ ದೌಡಾಯಿಸುತ್ತಿದ್ದಾರೆ. ಹಾಗೇ ದೇವೇಗೌಡರು ಕೂಡ ತಮ್ಮ 'ಮಣ್ಣಿನ ಮಗ'ಇಮೇಜ್ ಯಡಿಯೂರಪ್ಪ ಪಾಲಾಗದಂತೆ ನಡೆಸುತ್ತಿರುವ ಕಾರ್ಯಾಚರಣೆಯ ಭಾಗವಾಗಿ ಪರಿಹಾರ ನೀಡತೊಡಗಿದ್ದಾರೆ.

ಶಿಕಾರಿಪುರದ ಅಂಜನಾಪುರ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ನಾರಾಯಣಸ್ವಾಮಿ ಮನೆಗೆ ಭೇಟಿಯಿತ್ತ ಯಡಿಯೂರಪ್ಪ, ತಮ್ಮ ಪ್ರತಿಸ್ಪರ್ಧಿಗಳನ್ನು ಪರಿಹಾರ ರಾಜಕೀಯದಲ್ಲಿ ಹಿಮ್ಮೆಟ್ಟಿಸುವ ಪ್ರಯತ್ನಕ್ಕೆ ಮುಂದಾದರು. ಸರಿ, ಮನೆಯೊಳಗೆ ಗುಟ್ಟಾಗಿ ಸರ್ಕಾರದಿಂದ ಒಂದು ಲಕ್ಷ ರೂ. ಪರಿಹಾರದ ಚೆಕ್‌ನ್ನು ನಾರಾಯಣಸ್ವಾಮಿ ಪತ್ನಿಗೆ ನೀಡಿದರು. ಅದು ಮಾಧ್ಯಮಗಳ ಕಣ್ಣುತಪ್ಪಿಸಿ! ಹೊರಬಂದು, ಮಾಧ್ಯಮಗಳ ಜೊತೆ ಮಾತನಾಡುತ್ತಾ, ಇದು ಕೌಟುಂಬಿಕ ಜಗಳದಿಂದ ಆದ ಆತ್ಮಹತ್ಯೆ. ಸಾಲ ಬಾಧೆ ಅಥವಾ ರಸಗೊಬ್ಬರ ಸಮಸ್ಯೆ ಕಾರಣವಲ್ಲ. ಸರ್ಕಾರದಿಂದ ಪರಿಹಾರ ನೀಡಲು ಅಸಾಧ್ಯ ಎಂದರು!

ಆದರೆ, ಪರಿಹಾರ ಚೆಕ್ ನೀಡಿದ್ದನ್ನು ಕಣ್ಣಾರೆ ಕಂಡ ಮಾಧ್ಯಮದವರೊಬ್ಬರು ಆ ಬಗ್ಗೆ ಕೇಳಿದಾಗ ಇಲ್ಲವೇ ಇಲ್ಲ. ಚೆಕ್ ನೀಡಿಲ್ಲ ಎಂದು ನುಣುಚಿಕೊಂಡರು. ಅದರ ಹಿಂದಿನ ಉದ್ದೇಶವೇನೇ ಇದ್ದರೂ ಅವರು ಮಾಧ್ಯಮಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಬದಲು ದಾರಿತಪ್ಪಿಸುವ ಪ್ರಯತ್ನ ಮಾಡಿದರು. ಆದರೆ, ಚೆಕ್‌ಗೆ ಸಹಿ ಹಾಕಿದ ತಹಶೀಲ್ದಾರರು ಮಾಧ್ಯಮದವರ ಒತ್ತಡಕ್ಕೆ ಮಣಿದು ಸತ್ಯ ಬಾಯಿಬಿಟ್ಟರು. ಅದು ಸುದ್ದಿಯಾಗುತ್ತಲೇ, ಜಿಲ್ಲಾಧಿಕಾರಿ ಆ ಅಧಿಕಾರಿಗೆ ಶೋಕಾಸ್ ನೋಟಿಸ್ ನೀಡಿ ಪರಿಹಾರ ಚೆಕ್ಕನ್ನೂ ಹಿಂದಕ್ಕೆ ಪಡೆದರು! ಆ ಬಳಿಕ ಬಿಜೆಪಿ ಪಕ್ಷದಿಂದ ಗುಟ್ಟಾಗಿ ಪರಿಹಾರ ನೀಡಲಾಯಿತು!

ಒಟ್ಟಾರೆ, ಪರಿಹಾರ ರಾಜಕೀಯದಿಂದಾಗಿ ಅನಪೇಕ್ಷಿತ ಇರಿಸು-ಮುರಿಸು, ಗೊಂದಲದಲ್ಲಿ ಮುಖ್ಯಮಂತ್ರಿಗಳೂ ಸಿಲುಕಿದ್ದಲ್ಲದೇ ಮಾಧ್ಯಮದವರನ್ನೂ ದಿಕ್ಕುತಪ್ಪಿಸಿದರು!

ಜವಾಬ್ದಾರಿ ಮರೆತ ಕೃಷಿ ಸಚಿವ ರವೀಂದ್ರನಾಥ್

ಕರ್ನಾಟಕದಲ್ಲಿ ಒಬ್ಬ ಕೃಷಿ ಸಚಿವರು ಇದ್ದಾರೆಯೇ? ರೈತರ ಸಾಲು-ಸಾಲು ಆತ್ಮಹತ್ಯೆ ಪ್ರಕರಣಗಳನ್ನು ಕಂಡಾಗ ಈ ಪ್ರಶ್ನೆ ಉದ್ಭವಿಸದೇ ಇರುವುದಿಲ್ಲ. ಖಂಡಿತ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಒಬ್ಬ ಕೃಷಿ ಸಚಿವರು ಇದ್ದಾರೆ. ಆದರೆ, ಅವರು ಇದ್ದೂ ಇಲ್ಲದಂತೆ ಇದ್ದಾರೆ. ಆ ಸಚಿವರ ಜಿಲ್ಲೆಯಲ್ಲಿಯೇ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ ತಮ್ಮ ಜವಾಬ್ದಾರಿ ಏನು ಎನ್ನುವುದು ಈ ಸಚಿವ ಮಹಾಶಯರಿಗೆ ಅರ್ಥವಾಗಿಯೇ ಇಲ್ಲ.

ಈ ಮೊದಲು ಮಾಯಕೊಂಡ ಹಾಗೂ ದಾವಣಗೆರೆ ಉತ್ತರ ಕ್ಷೇತ್ರದಿಂದ ಆಯ್ಕೆಯಾಗಿರುವ ಕೃಷಿ ಸಚಿವರಿಗೆ ರಾಜಕೀಯ ಏನೂ ಹೊಸತಲ್ಲ. ಇವರು ಅನನುಭವಿ ಕೂಡ ಅಲ್ಲ. ಸ್ವತಃ ರೈತರಾಗಿ, ರೈತ ಹೋರಾಟದ ಟ್ರಂಪ್ ಕಾರ್ಡ್ ಇಟ್ಟುಕೊಂಡೇ ರಾಜಕೀಯವಾಗಿ ಮೇಲೆ ಬಂದ ಸಚಿವ ಎಸ್.ಎ. ರವೀಂದ್ರನಾಥ್ ಮಾತ್ರ ತಮಗೂ, ರೈತ ಆತ್ಮಹತ್ಯೆಗಳಿಗೂ ಸಂಬಂಧವೇ ಇಲ್ಲ ಎಂಬಂತಿದ್ದಾರೆ.

ಅಂತಹ ದಿವ್ಯ ನಿರ್ಲಕ್ಷ್ಯವನ್ನೇನೋ ಈ ನಾಡಿನ ಮಣ್ಣಿನ ಮಕ್ಕಳು ಸಹಿಸಿಕೊಳ್ಳಬಹುದಿತ್ತು. ಆದರೆ, ರೈತ ಆತ್ಮಹತ್ಯೆಗಳ ಬಗ್ಗೆ ಅವರು ನೀಡುವ ಪ್ರತಿಕ್ರಿಯೆಗಳನ್ನು ಕೇಳಿದ ಯಾವ ರೈತನೂ ಅವಡುಗಚ್ಚದೇ ಇರಲಾರ!

ಹೌದು, ಮಾಧ್ಯಮದವರು ಸರಣಿ ಆತ್ಮಹತ್ಯೆಗಳ ಬಗ್ಗೆ ಪ್ರತಿಕ್ರಿಯೆ ಕೇಳಿದರೆ, ರೈತರು ರಸಗೊಬ್ಬರ ಯಾಕೆ ಹಾಕಬೇಕು? ರಸಗೊಬ್ಬರ ಹಾಕೋದನ್ನೆಲ್ಲಾ ಬಿಡಬೇಕು ಎಂದಿದ್ದಾರೆ. ಮಲೇಬೆನ್ನೂರು ರೈತ ಆತ್ಮಹತ್ಯೆ ವೇಳೆ, ಆತ ರೈತನೇ ಅಲ್ಲ, ಆತನಿಗೆ ಸ್ವಂತ ಜಮೀನು ಇಲ್ಲ. ಸಂಬಂಧಿಕರ ಜಮೀನು ಗುತ್ತಿಗೆಗೆ ಪಡೆದು ಸಾಗುವಳಿ ಮಾಡುತ್ತಿದ್ದ. ಮನೆಯಲ್ಲಿ ಜಗಳವಾಡಿಕೊಂಡು ಬಂದಿದ್ದ ಆತ ಮೂರ್‍ನಾಲ್ಕು ದಿನಗಳ ಹಿಂದೆಯೇ ಮನೆಬಿಟ್ಟಿದ್ದ. ಆ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತೀರಾ ಹೊಣೆಗೇಡಿ ಹೇಳಿಕೆ ನೀಡಿದರು.

ಆದರೆ, ದಾವಣಗೆರೆ ಜಿಲ್ಲಾಧಿಕಾರಿ ಎಂ.ಬಿ. ದ್ಯಾಬೇರಿ, ಮೃತ ರೈತನ ಕುಟುಂಬಕ್ಕೆ ಒಂದು ಲಕ್ಷ ರೂ. ಪರಿಹಾರ ನೀಡಲಾಗುವುದು. ಆಶ್ರಯ ಮನೆ ಸೌಕರ್ಯ ಒದಗಿಸಲಾಗುವುದು. ಆತನ ಬಗರ್‌ಹುಕುಂ ಜಮೀನನ್ನು ಸಕ್ರಮ ಮಾಡಿಕೊಡಲಾಗುವುದು ಎಂದಿದ್ದಾರೆ.

ಇಂತಹ ಸಚಿವರನ್ನು ಸಂಪರ್ಕಿಸಲು ಟಿಎಸ್‌ಐ ಸತತ ಐದು ದಿನಗಳ ಕಾಲ ನಡೆಸಿದ ಪ್ರಯತ್ನಗಳೆಲ್ಲವೂ ವಿಫಲವಾದವು. ಏಕೆಂದರೆ, ಸಂಪರ್ಕಕ್ಕೆ ಪ್ರಯತ್ನಿಸಿದಾಗೆಲ್ಲಾ ಸಚಿವರು, ಮಲಗಿದ್ದರು, ಇಲ್ಲವೇ ಊಟ ಮಾಡುತ್ತಿದ್ದರು, ಇಲ್ಲವೇ ಸನ್ಮಾನ ಸಭೆಯಲ್ಲಿದ್ದರು! ರಾಜ್ಯದ ಬಹುದೊಡ್ಡ ಸಮುದಾಯವಾದ ರೈತರ ಹಿತ ಕಾಯಬೇಕಾದ ಹೊಣೆ ಹೊತ್ತಿರುವ ರವೀಂದ್ರನಾಥ್ ಅವರು ತಾವೀಗ ಮಾಯಕೊಂಡದ ಶಾಸಕರು ಮಾತ್ರವಲ್ಲ, ತಮ್ಮ ಅಧಿಕಾರವೀಗ ದಾವಣಗೆರೆಯ ಪ್ರವಾಸಿ ಮಂದಿರದ ವ್ಯಾಪ್ತಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ಅರಿತು ಕನಿಷ್ಠ ಜವಾಬ್ದಾರಿಯಿಂದ ವರ್ತಿಸಬೇಕಿದೆ.

ಬೆಳೆಯನ್ನೇ ಕಿತ್ತುಹಾಕಿದರು!

ಹತಾಶ ರೈತರು ರಸಗೊಬ್ಬರ ಸಿಗದೇ ರಾಜ್ಯದ ಹಲವು ಭಾಗಗಳಲ್ಲಿ ಮೆಕ್ಕಜೋಳ, ಹತ್ತಿ, ಸೂರ್ಯಕಾಂತಿ ಮುಂತಾದ ಬೆಳೆಗಳ ಬಿತ್ತನೆಯನ್ನು ಕೈಬಿಟ್ಟು ಕಂಗಾಲಾಗಿದ್ದಾರೆ. ಮತ್ತೊಂದು ಕಡೆ ನೀರಾವರಿ ಪ್ರದೇಶದಲ್ಲಿ ಬೆಳೆದ ಕಬ್ಬು ಮುಂತಾದ ಬೆಳೆಗೆ ಸಕಾಲಕ್ಕೆ ರಸಗೊಬ್ಬರ ನೀಡಲಾಗದೆ ನಾಲ್ಕಾರು ತಿಂಗಳ ಬೆಳೆಯನ್ನು ಕಿತ್ತುಹಾಕುತ್ತಿದ್ದಾರೆ ಎಂಬುದು ರಸಗೊಬ್ಬರ ಸಮಸ್ಯೆ ಎಷ್ಟೊಂದು ಭೀಕರವಾಗಿದೆ ಎಂಬುದಕ್ಕೆ ಮತ್ತೊಂದು ನಿದರ್ಶನ.

ರಾಜ್ಯದ ಮುಖ್ಯಮಂತ್ರಿಗಳ ತವರು ಜಿಲ್ಲೆ ಶಿವಮೊಗ್ಗ ತಾಲ್ಲೂಕಿನ ಗೊಂದಿಚಟ್ನಹಳ್ಳಿಯಲ್ಲಿ ಈಗಾಗಲೇ ಸುಮಾರು 50ಎಕರೆ ಕಬ್ಬನ್ನು ರೈತರು ನಾಶಪಡಿಸಿದ್ದಾರೆ. ಕಬ್ಬಿಗೆ ಎಕರೆಗೆ 10-15ಚೀಲ ರಸಗೊಬ್ಬರ ಹಾಕಬೇಕು. ಆದರೆ, ಈಗ ಪ್ರತಿ ರೈತರಿಗೆ ನೀಡುತ್ತಿರುವುದು ಕೇವಲ 2ಚೀಲ.

ಕಬ್ಬು ಬೆಳೆ ಹಾಕಿ ನಾಲ್ಕು ತಿಂಗಳಾದರೂ ಈವರೆಗೆ ರಸಗೊಬ್ಬರ ಹಾಕಲು ಆಗದೇ ಇರುವುದರಿಂದ ರೈತರು ಅನಿವಾರ್ಯವಾಗಿ ಬೆಳೆಯನ್ನೇ ತೆಗೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಮಲೆನಾಡಿನ ಭಾಗದಲ್ಲಿ ಇಂದಿಗೂ ರಸಗೊಬ್ಬರ ನಿರೀಕ್ಷಿತ ಪ್ರಮಾಣದಲ್ಲಿ ಲಭ್ಯವಿಲ್ಲ. ಇನ್ನು ಭತ್ತದ ನಾಟಿ ಪ್ರಾರಂಭವಾದರೆ ರೈತರ ಪ್ರತಿಭಟನೆ, ಲಾಠಿ ಚಾರ್ಜು, ಗೋಲಿಬಾರ್‌ಗಳು ಮತ್ತೆ ಮರುಕಳಿಸಿದರೂ ಅಚ್ಚರಿಯಿಲ್ಲ!

ಟಿಎಸ್‌ಐ

ಇದನ್ನೂ ಓದಿ

ಸಾವಿನ ಮನೆಯಲ್ಲೂ ರಾಜಕೀಯ

ಸಮೂಹ ಸನ್ನಿಗೆ ಬೇಕಿದೆ ಮದ್ದು : ಡಾ.ಸಿ.ಆರ್. ಚಂದ್ರಶೇಖರ್

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .